ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಾಮಾನ್ಯ ಕ್ಷಮಾಗುಣ

Last Updated 28 ಜುಲೈ 2014, 19:41 IST
ಅಕ್ಷರ ಗಾತ್ರ

ಮನುಷ್ಯ ಮನಸ್ಸಿನ ಅತ್ಯದ್ಭುತ ವಿವರ­ಗಳನ್ನು, ವಿಶೇಷಗಳನ್ನು ಕಾಣಬೇಕಾದರೆ ಮಹಾಕಾವ್ಯಗಳನ್ನು, ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ಓದಬೇಕು. ಮನಸ್ಸಿನಲ್ಲಿಯ ಮಾತ್ಸರ್ಯ ಹೇಗೆ ಒಳ್ಳೆಯತನವನ್ನು ಕೆಡಿಸಿ ಇಲ್ಲದಿರುವುದನ್ನು ನಂಬುವಂತೆ ಕಣ್ಣುಗಳನ್ನು ಕುರುಡು ಮಾಡುತ್ತ­ದೆಂಬುದನ್ನೂ ಮತ್ತು ಸಿಟ್ಟು, ಜುಗುಪ್ಸೆ ತುಂಬಿದ ಮನಸ್ಸು ತಳಮಳಗಳನ್ನು ಕಳೆದುಕೊಂಡು ಪರಿಶುದ್ಧ ಹಿಮಬಿಂದು­ವಾ­ಗುವುದನ್ನು ಮಹಾನ್ ಸಾಹಿತ್ಯ ಕಣ್ಣ ಮುಂದೆ ಇಡುತ್ತದೆ.  ಲಾರ್ಡ ಟೆನಿಸನ್‌ನ ಒಂದು ಮಹಾಕಾವ್ಯ ಐಡಿಲ್ಸ್ ಆಫ್ ದಿ ಕಿಂಗ್. ಈ ಮಹಾಕಾವ್ಯದ ನಾಯಕ ಆರ್ಥರ್ ಎಂಬ ರಾಜ. ಆತ ಮಹಾಶೂರ, ಸಮರ್ಥನಾಯಕ. ಸಜ್ಜನರಿಗೆ ಮರ್ಯಾದೆ ನೀಡುವುದರಲ್ಲಿ, ದುಷ್ಟ­ರನ್ನು ಸದೆಬಡಿಯುವುದರಲ್ಲಿ ನಿಷ್ಣಾತ. ಎಲ್ಲರಲ್ಲಿಯೂ ಆತನ ಪ್ರೀತಿ ಸಲ್ಲುತ್ತದೆ.

ಆರ್ಥರ್ ತನ್ನಂತೆಯೇ ಶೂರರಾದ ಯೋಧರ ಬಲವಾದ ಪಡೆ ಕಟ್ಟಿ ದೇಶದಲ್ಲಿದ್ದ ರಾಕ್ಷಸಿ ಗುಣದವರನ್ನು ಮಟ್ಟಹಾಕಿ ಶಾಂತಿ ಸ್ಥಾಪನೆ ಮಾಡುತ್ತಾನೆ. ಅವನ ದೇಶದ ನಾಗರಿಕರು ಅವನನ್ನು ಮೆಚ್ಚುವುದು ಮಾತ್ರವಲ್ಲ, ದೇವಾಂಶ ಸಂಭೂತನೆಂದೇ ಭಾವಿಸುತ್ತಾರೆ. ಆರ್ಥರ್‌ನ ಬದುಕು ಹೀಗೆಯೇ ಸುಂದರವಾಗಿ ಉಳಿಯು­ವುದಿಲ್ಲ. ಅವನ ಧರ್ಮಪತ್ನಿ ಗನ್ನಿವರ ತುಂಬ ಸುಂದರಿ. ಆಕೆಯ ಸೌಂದರ್ಯದ ಬಗ್ಗೆ, ಗಂಭೀರವಾದ ನಡತೆಯ ಬಗ್ಗೆ ರಾಜನಿಗೆ ತುಂಬ ಹೆಮ್ಮೆ. ಅಂತಹ ಲೋಕಸುಂದರಿ ಹೆಂಡತಿ ಆರ್ಥರ್‌ನ ಆಯ್ದ ಯೋಧರ ಪಡೆಯ ವೀರನಾದ ಲಾನ್ಸಲಾಟ್ ಎಂಬವನಲ್ಲಿ ಮನ­ಸೋಲು­ತ್ತಾಳೆ. ಗಂಡನಿಲ್ಲದ ಕಾಲದಲ್ಲಿ ಅವನೊಂದಿಗೆ ಸೇರಿ ಪಾತಿವ್ರತ್ಯದಿಂದ ಜಾರುತ್ತಾಳೆ. ಇದರಿಂದಾಗಿ ವೀರರ ಪಡೆಯಲ್ಲಿ ಭಾಗಗಳಾಗಿ, ಮನಸ್ಸು ಒಡೆದು ಅದು ಛಿದ್ರವಾಗಿ ಹೋಗುತ್ತದೆ. ಹೆಂಡತಿಯ ನಡತೆಯಿಂದಾಗಿ, ವೀರರ ಪಡೆಯ ನಾಶದಿಂದಾಗಿ ಆರ್ಥರ್ ಅವಮಾನದಿಂದ ಕುದಿದು ಹೋಗು­ತ್ತಾನೆ. ಮುಂದೆ ಸಂಪೂರ್ಣ ಅವನತಿ­ಹೊಂದುತ್ತಾನೆ. ಪಶ್ಚಾತ್ತಾಪದಿಂದ ನರಳಿದ ಗನ್ನಿವರ ಅರಮನೆ ತೊರೆದು ಒಂದು ಸ್ತ್ರೀಮಠವನ್ನು ಸೇರುತ್ತಾಳೆ.

ಒಂದು ದೊಡ್ಡ ಯುದ್ಧವನ್ನು ಮಾಡಿ ಮರಳಿದ ಆರ್ಥರ್‌ನಿಗೆ ತನ್ನ ಮರಣ ಹತ್ತಿರವಾದದ್ದರ ಸೂಚನೆ ದೊರ­ಕುತ್ತದೆ. ಆಗ ಆತ ಮಾಡಿದ್ದು ಅದ್ಭುತವಾದದ್ದು. ಹಿಂದೊಮ್ಮೆ ತನ್ನ ಅತ್ಯಂತ ಪ್ರೀತಿಗೆ ಪಾತ್ರಳಾಗಿದ್ದ ಹೆಂಡತಿ­ಯನ್ನು ಕಾಣದೆ, ಏನನ್ನೂ ಹೇಳದೆ ತನ್ನ ಜೀವನ ಪ್ರಯಾಣವನ್ನು ಮುಗಿಸಲು ಮನಸ್ಸಾಗುವುದಿಲ್ಲ. ತನ್ನ ಬದುಕಿಗೆ ಕಳಂಕ ತಂದ, ಇಡೀ ರಾಜ್ಯವನ್ನೇ ಅವನತಿಯ ಪ್ರಪಾತಕ್ಕೆ ತಂದಾಕೆ ಆಕೆ ಎಂಬುದು ನೆನಪಿದ್ದೂ ಅವಳನ್ನು ಕಾಣಲು ಸ್ತ್ರೀಮಠಕ್ಕೆ ಹೋಗುತ್ತಾನೆ. ಇಲ್ಲಿ ನಡೆಯುವ ಕೊನೆಯ ದೃಶ್ಯ ಮನ ಕಲಕುತ್ತದೆ. ಆರ್ಥರ್ ಹೆಂಡತಿಯನ್ನು ಕ್ರೂರವಾದ ಮಾತುಗಳಿಂದ ಇರಿಯದೆ ಅವಳನ್ನು ಕ್ಷಮಿಸಲು ನೋಡುತ್ತಾನೆ. ಮನದಲ್ಲಿದ್ದ ದ್ವೇಷವನ್ನು, ಕೋಪವನ್ನು ಗೆದ್ದು ಬಿಡುತ್ತಾನೆ. ಇದು ನಿಜವಾ­ಗಿಯೂ ಆಶ್ಚರ್ಯವಲ್ಲವೇ? ಲೋಕದಲ್ಲಿ ಹೀಗೆ ನಡೆಯುವುದು ಅಸಾಧ್ಯವಲ್ಲವೇ?

ಹೆಂಡತಿ ನಡತೆಗೆಟ್ಟವಳೆಂದಾಗ ಗಂಡ ಅವಳನ್ನು ಕ್ಷಮಿಸುತ್ತಾನೆಯೇ ? ಅವಳ ಬಗ್ಗೆ ದ್ವೇಷ ಭಾವನೆ ಉಕ್ಕಿ, ಜುಗುಪ್ಸೆ ಬಂದು ನಿರಾಕರಿಸುವುದಿಲ್ಲವೇ? ಆದರೆ, ಆರ್ಥರ್ ನಿಜವಾಗಿಯೂ ದೇವಾಂಶ ಸಂಭೂತರಂತೆಯೇ ವರ್ತಿಸುತ್ತಾನೆ. ಅವನ ಮಾತುಗಳನ್ನು ಓದುವಾಗ ನಮಗರಿಯದಂತೆ ಕಣ್ಣು ಮಂಜಾ­ಗುತ್ತವೆ, ನಮ್ಮ ಮನಸ್ಸೂ ಅವನ ಮನಸ್ಸಿನಷ್ಟೇ ಎತ್ತರಕ್ಕೆ ಹೋಗುತ್ತದೆ. ಗನ್ನಿವರ ಕ್ಷಮೆಕೋರಿ ಗಂಡನ ಪಾದಗಳ ಮೇಲೆ ಬೀಳುತ್ತಾಳೆ. ಆಗ ಆರ್ಥರ್ ಹೇಳುತ್ತಾನೆ, ‘ತಪ್ಪು ಮಾಡಿಯಾದ ಮೇಲೂ ಅದನ್ನು ಕ್ಷಮಿಸುವುದಕ್ಕೆ ತಕ್ಕ ಕಾಲ ಬರುತ್ತದೆ. ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟು ನಿರ್ಮಲವಾದ ಬಾಳನ್ನು ಕೈಗೊಂಡರೆ ಅದಕ್ಕೆ ಕ್ಷಮೆ ದೊರೆಯುತ್ತದೆ. ನೀನು ನಿನ್ನಾತ್ಮವನ್ನು ಪರಿಶುದ್ಧಗೊಳಿಸಿಕೊಂಡರೆ, ಎಲ್ಲ ಶುದ್ಧಾತ್ಮರೇ ಇರುವ ಭಗವಂತನ ಸನ್ನಿಧಿಯಲ್ಲಿ, ಸ್ವರ್ಗದಲ್ಲಿ ನಾವಿಬ್ಬರೂ ಮತ್ತೆ ಭೆಟ್ಟಿಯಾಗೋಣ.

ಆ ದೇವರ ಸಮಕ್ಷಮದಲ್ಲಿ ಮತ್ತೆ ನೀನು ಹಾರಿ ಬಂದು ನನ್ನನ್ನು ಗಂಡನನ್ನಾಗಿ ಪಡೆಯುತ್ತೀ.’ ಈ ನಡವಳಿಕೆ ಅಸಾಮಾ­ನ್ಯವೆನಿಸಿದರೂ ಇಂಥ ಶ್ರೇಷ್ಠ ಪುರುಷ­ರನ್ನು ಮೆಲ್ಪಂಕ್ತಿಯಾಗಿ ಇಟ್ಟುಕೊಂಡು ನಮ್ಮ ವಿಷಯದಲ್ಲಿ ಅಪರಾಧ ಮಾಡಿದವರನ್ನು ಕ್ಷಮಿಸಿಬಿಟ್ಟರೆ, ಆ ಕ್ಷಣದಲ್ಲಿ ನಾವು ಮನುಷ್ಯರಾ­ಗಿರುವುದಿಲ್ಲ, ನಾವೂ ಶ್ರೇಷ್ಠ ದೈವಿಕ ನೆಲೆಯನ್ನು ಮುಟ್ಟುತ್ತೇವೆ. ನಮ್ಮನ್ನು ಈ ಎತ್ತರಕ್ಕೆ ಏರಿಸಲು ಸಾಧ್ಯವಾಗುವುದು ಸಾಹಿತ್ಯಕ್ಕೆ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT