ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶಿ ಕೊಲ್ಲಿಯ ಚಿಪ್ಪು

Last Updated 30 ಜನವರಿ 2013, 19:59 IST
ಅಕ್ಷರ ಗಾತ್ರ

ಇದೊಂದು ದೊಡ್ಡ ಸಂದೇಶವುಳ್ಳ ತೀರಾ ಪುಟ್ಟ ಕಥೆ. ಹದಿನಾರನೇ ಶತಮಾನದಲ್ಲಿ  ಜಪಾನನ್ನು ಶೋಗುನ್ ಮನೆತನದ ರಾಜರು ಆಳುತ್ತಿದ್ದರು. ಅವರೆಲ್ಲ ಖ್ಯಾತ ಯೋಧರು. ಸದಾ ಕಾಲ ಯುದ್ಧ, ಹೋರಾಟದಲ್ಲೇ ತೊಡಗಿದವರು. ಅವರಲ್ಲಿ  ಪ್ರಮುಖನಾಗಿದ್ದವನು ತಡಾವೋಕಿ ಹೊಸಾಕಾವ್. ಆತ ಅಸಾಮಾನ್ಯ ಯೋಧ, ಬಹಳ ಬಲಶಾಲಿ ಮತ್ತೆ ಯುದ್ಧ ತಂತ್ರದಲ್ಲಿ  ಬುದ್ಧಿವಂತ. ಅವನನ್ನು ರಣಾಂಗಣದಲ್ಲಿ ಸೋಲಿಸುವುದು ಅಸಾಧ್ಯ ಎನ್ನುವಂತಾಗಿತ್ತು.

ಅವನಿಗೆ ಅರವತ್ತು ವರ್ಷ ವಯಸ್ಸಾದರೂ ಇಪ್ಪತ್ತೈದು ವರ್ಷದ ತರುಣರು ಅವನೊಂದಿಗೆ ಯುದ್ಧಕ್ಕೆ ಇಳಿಯಲು ಹೆದರುತ್ತಿದ್ದರು. ರಾಜ ಹೊಸಕಾವ್ ತನ್ನ ಮಂತ್ರಿಗಳನ್ನು ಕರೆದು ಹೇಳಿದ,  ನನ್ನ ದೇಹದಲ್ಲಿ  ಶಕ್ತಿ ಇನ್ನೂ ಇದೆ. ಆದರೆ ಅದು ಯಾವಾಗಲೂ ಹೀಗೆಯೇ ಇರುವುದಿಲ್ಲ. ಆದ್ದರಿಂದ ಈಗಲೇ ನಾನು ನನ್ನ ಉತ್ತರಾಧಿಕಾರಿಯನ್ನು ಹುಡುಕಬೇಕು, ಅವನಿಗೆ ತರಬೇತಿ ನೀಡಬೇಕು. ಅಂದಾಗ ಮಾತ್ರ ದೇಶ ಸುರಕ್ಷಿತವಾಗಿರುತ್ತದೆ. ತಾವು ದೇಶದಲ್ಲೆಲ್ಲ ಜನರನ್ನು ಬಿಟ್ಟು ಸೂಕ್ತ ವ್ಯಕ್ತಿಯನ್ನು ಹುಡುಕಲು ಹೇಳಿ. ಅಂಥ ಆಯ್ದ ವ್ಯಕ್ತಿಗಳನ್ನು ಪರೀಕ್ಷೆ ಮಾಡಿ ಕೊನೆಗೊಬ್ಬನನ್ನು ಆರಿಸೋಣ. ಮಂತ್ರಿಗಳು ಸರಿ ಎಂದು ತಲೆದೂಗಿದರು.

ಒಬ್ಬ ಮಂತ್ರಿ ಕೇಳಿದ, `ಸಾಮ್ರೋಟರೇ ನಿಮ್ಮ ಉತ್ತರಾಧಿಕಾರಿ ಹೇಗಿರಬೇಕೆಂದು ನೀವು ಬಯಸುತ್ತೀರಿ. ಯಾವ ಗುಣಗಳನ್ನು ಅಪೇಕ್ಷಿಸುತ್ತೀರಿ. ನಿಮ್ಮ ಅಪೇಕ್ಷೆ ತಿಳಿದರೆ ಸಮರ್ಥ ವ್ಯಕ್ತಿಯನ್ನು ಆರಿಸುವುದಕ್ಕೆ ಅನುಕೂಲವಾಗುತ್ತದೆ'.  `ಸಮರ್ಥ ವ್ಯಕ್ತಿ ಯಾವಾಗಲೂ ಆಕಾಶಿ ಕೊಲ್ಲಿಯ ಚಿಪ್ಪಿನ ಹಾಗೆ ಇರುತ್ತಾನೆ'  ಎಂದು ಹೇಳಿ ಹುಬ್ಬುಗಂಟಿಕ್ಕಿದ ಚಕ್ರವರ್ತಿ. ಮುಖ್ಯಮಂತ್ರಿ ಬುದ್ಧಿವಂತ. ಅವನಿಗೆ ಚಕ್ರವರ್ತಿಯ ಮನಸ್ಸು ಅರ್ಥವಾಯಿತು. ಆದರೆ ಉಳಿದ ಮಂತ್ರಿಗಳಿಗೆ ಗೋಜಲಾಯಿತು.

ಇದೇನು ಮುಂದಿನ ಚಕ್ರವರ್ತಿ ಚಿಪ್ಪಿನ ಹಾಗೆ ಇರಬೇಕೆ. ಅದರಲ್ಲೂ ಆಕಾಶಿ ಕೊಲ್ಲಿಯ ಚಿಪ್ಪಿನದೇನು ವಿಶೇಷ. ಒಬ್ಬ ಕೇಳಿಯೇ ಬಿಟ್ಟ,  `ಸ್ವಾಮಿ, ನಮಗೆ ನಿಮ್ಮ ಅಭಿಪ್ರಾಯದ ಅರ್ಥವಾಗಲಿಲ್ಲ. ನಿಮ್ಮ ಉತ್ತರಾಧಿಕಾರಿ ಒಂದು ಚಿಪ್ಪಿನ ಹಾಗೆ ಇರುವುದೆಂದರೆ ಏನು. ದಯವಿಟ್ಟು ವಿವರಿಸಿ'.  ರಾಜ ಹೇಳಿದ, `ತಮಗೆಲ್ಲ ತಿಳಿದಿದೆ. ನಮ್ಮ ಆಕಾಶಿ ಕೊಲ್ಲಿ  ಯಾವಾಗಲೂ ರುದ್ರ ರಮಣೀಯವಾದದ್ದು.

ಅಲ್ಲಿ  ಯಾವಾಗಲೂ ಗಾಳಿಯ ರಭಸ ಹೆಚ್ಚು, ತೆರೆಗಳ ರೌದ್ರತೆ ಹೆದರಿಕೆ ಹುಟ್ಟಿಸುವಂಥದ್ದು. ಭಾರಿ  ಗಾತ್ರದ ತೆರೆಗಳು ಬಂದು ತೀರ  ಅಪ್ಪಳಿಸಿದಾಗ ಎಂಥ ಗಟ್ಟಿಗನ ಗುಂಡಿಗೆಯೂ ನಡುಗುತ್ತದೆ. ಆ ಪ್ರದೇಶದಲ್ಲಿದ್ದ ಚಿಪ್ಪುಗಳ ಗತಿ ಏನು. ತೆರೆಗಳು ಈ ಚಿಪ್ಪುಗಳನ್ನು ಎತ್ತಿ ಎತ್ತಿ ದಡಕ್ಕೆ, ದಡದ ಕಲ್ಲುಗಳಿಗೆ ಅಪ್ಪಳಿಸುತ್ತವೆ. ತೆರೆಗಳ ತಿಕ್ಕಾಟದಲ್ಲಿ, ತೀರದ ಕಲ್ಲುಗಳ ಜೊತೆ ಘರ್ಷಣೆಯಲ್ಲಿ  ಅಶಕ್ತವಾದ ಚಿಪ್ಪುಗಳು ಒಡೆದು ಪುಡಿಪುಡಿಯಾಗಿ ಹೋಗುತ್ತವೆ.

ಆದರೆ ಕೆಲವೊಂದು ಚಿಪ್ಪುಗಳು ಮಾತ್ರ ಒಡೆದು ಹೋಗದೇ ಮತ್ತಷ್ಟು ಗಟ್ಟಿಯಾಗಿ ನಿಲ್ಲುತ್ತವೆ. ಅದಕ್ಕೇ ಆಕಾಶಿ ಕೊಲ್ಲಿಯ ಚಿಪ್ಪುಗಳಿಗೆ ಬೇಡಿಕೆ ಹೆಚ್ಚು, ಏಕೆಂದರೆ ಅವು ಗಟ್ಟಿ ಮತ್ತು ಬಹುಕಾಲ ಬಾಳುತ್ತವೆ. ಅಂತೆಯೇ ನಮ್ಮ ಉತ್ತರಾಧಿಕಾರಿ ಕೂಡ ಎಂಥ ಕಷ್ಟ ಪರಿಸ್ಥಿತಿಯಲ್ಲೂ, ಆತಂಕದ ಸ್ಥಿತಿಯಲ್ಲೂ ಸ್ಥಿಮಿತತೆ ಕಳೆದುಕೊಳ್ಳದೇ ದೇಶವನ್ನು ಮುನ್ನಡೆಸುವ ಶಕ್ತಿ ಪಡೆದಿರಬೇಕು. ನಿಜ, ಕಷ್ಟಗಳು ನಮ್ಮನ್ನು ಅಲುಗಾಡಿಸುತ್ತವೆ.

ಅಷ್ಟೇ ಅಲ್ಲ ಅವು ನಮ್ಮನ್ನು ಮತ್ತಷ್ಟು ಗಟ್ಟಿಮಾಡುತ್ತವೆ. ಒಂದು ದೃಷ್ಟಿಯಲ್ಲಿ  ತೊಂದರೆಗಳು ನಮ್ಮನ್ನು ಕುಗ್ಗಿಸುತ್ತವೆ. ಆದರೆ ಸರಿಯಾದ ರೀತಿಯಲ್ಲಿ  ನೋಡಿದರೆ ಅವು ಮಾಡುವ ಉಪಕಾರ ದೊಡ್ಡದು. ಅವು ನಮ್ಮನ್ನು ಬಲಶಾಲಿಯನ್ನಾಗಿ ಮಾಡುತ್ತವೆ. ನಮ್ಮಲ್ಲಿಯ ಅಲಸ್ಯದ ತುಕ್ಕನ್ನು ಕರಗಿಸುತ್ತವೆ, ಅಶಕ್ತತೆ  ಎತ್ತಿ ತೋರಿಸಿ ಅವುಗಳನ್ನು ನಿವಾರಿಸುವ ಶಕ್ತಿ ನೀಡುತ್ತವೆ. ಆದ್ದರಿಂದ ತೊಂದರೆಗಳು ಅಡೆತಡೆಗಳಲ್ಲ, ನಮ್ಮ ರೆಕ್ಕೆಗಳನ್ನು ಬಲಪಡಿಸುವ ಅವಕಾಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT