ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ನೆಟ್ ಇಲ್ಲದ ಡಿಜಿಟಲ್ ಆರ್ಥಿಕತೆ!

Last Updated 7 ಡಿಸೆಂಬರ್ 2016, 3:20 IST
ಅಕ್ಷರ ಗಾತ್ರ

ಇನ್ನೊಂದು ದಿನ ಕಳೆದರೆ ನೋಟು ರದ್ದತಿಗೆ ಒಂದು ತಿಂಗಳು ತುಂಬುತ್ತದೆ. ನವೆಂಬರ್ 8ರ ರಾತ್ರಿ ಪ್ರಧಾನ ಮಂತ್ರಿ ದೇಶವನ್ನುದ್ದೇಶಿಸಿ ಮಾತನಾಡಿ 500 ಮತ್ತು 1000 ರೂಪಾಯಿ ನೋಟುಗಳ ಚಲಾವಣೆಯನ್ನು ರದ್ದು ಪಡಿಸಿದ ಘೋಷಣೆ ಮಾಡುವಾಗ ಇದು ಕಪ್ಪು ಹಣದ ನಿಯಂತ್ರಣಕ್ಕೆ ಅಗತ್ಯ ಎಂದಿದ್ದರು. ಅವರ ಮಾತುಗಳಲ್ಲಿ ಭಯೋತ್ಪಾದಕರಿಗೆ ದೊರೆಯುತ್ತಿರುವ ಸಂಪನ್ಮೂಲವನ್ನು ಕಡಿತಗೊಳಿಸುವುದು, ಖೋಟಾ ನೋಟುಗಳ ನಿಯಂತ್ರಣ ಇತ್ಯಾದಿಗಳೆಲ್ಲವೂ ಇದ್ದವು.

ಈಗ ವಾದ ಸರಣಿ ಬದಲಾಗಿದೆ. ಪ್ರಧಾನಿ ಮಂತ್ರಿಯಾದಿಯಾಗಿ ನೋಟು ರದ್ಧತಿಯ ನಿರ್ಧಾರವನ್ನು ಸಮರ್ಥಿಸುವವರೆಲ್ಲರೂ ಭಾರತವನ್ನು 'ನಗದು ರಹಿತ' ಆರ್ಥಿಕತೆಯನ್ನಾಗಿ ಬದಲಾಯಿಸುವುದರ ಬಗ್ಗೆ ಹೇಳುತ್ತಿದ್ದಾರೆ. ಒಂದು ತುಂಡು ಕಾಗದ ಒಂದು ರೂಪಾಯಿಯೋ ಅಥವಾ ಎರಡು ಸಾವಿರ ರೂಪಾಯಿಯೋ ಆಗುವುದು ಅದರ ಮೇಲಿರುವ ‘I promise to pay the bearer the sum of rupees…’ ಎಂಬ ಸಾಲುಗಳ ಅಡಿಯಲ್ಲಿರುವ ರಿಸರ್ವ್ ಬ್ಯಾಂಕ್ ಗವರ್ನರ್ ಅವರ ಸಹಿಯಿಂದ.ಈ ಭರವಸೆಯನ್ನು ಡಿಜಿಟಲ್ ಆಗಿ ಪರಿವರ್ತಿಸಿ ಬಳಸಲು  ಆರಂಭಿಸಿದರೆ ನಗದು ರಹಿತ ಆರ್ಥಿಕತೆ ನೆಲೆಗಳೊಳ್ಳುತ್ತದೆ.

ವಿನಿಮಯ ಮಾಧ್ಯಮವಾಗಿರುವ ‘ಹಣ’ವನ್ನು ಅದರ ಭೌತಿಕ ಸ್ವರೂಪದಿಂದ ಡಿಜಿಟಲ್ ಸ್ವರೂಪಕ್ಕೆ ಬದಲಾಯಿಸುವುದು ದೊಡ್ಡ ಸವಾಲಿನ ಕೆಲಸವೇನೂ ಅಲ್ಲ. ಮಧ್ಯಮ ವರ್ಗದವರ ಜೇಬಿನಲ್ಲಿರುವ ಡೆಬಿಟ್ ಮತ್ತು  ಕ್ರೆಡಿಟ್ ಕಾರ್ಡ್ ಗಳು ನಮ್ಮ ಆರ್ಥಿಕತೆ ಡಿಜಿಟಲ್ ಆಗುವ ಹಾದಿಯಲ್ಲಿ ಸಾಗುತ್ತಿರುವುದನ್ನು ಹೇಳುತ್ತಿದೆ. ಆದರೆ ಇದು ಭೌತಿಕವಾದ ಹಣಕ್ಕೆ ಪರ್ಯಾಯವಾಗುವ ಮಟ್ಟಕ್ಕಿದೆಯೇ?  ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೆಚ್ಚೇನೂ ಕಷ್ಟ ಪಡಬೇಕಾಗಿಲ್ಲ.

ಕಳೆದ ಒಂದು ತಿಂಗಳಿನಿಂದ 'ನೋ ಕ್ಯಾಶ್’ ಬೋರ್ಡ್ ತಗುಲಿಸಿಕೊಂಡಿರುವ ಎಟಿಎಂಗಳು, ತಮ್ಮದೇ ಬ್ಯಾಂಕ್ ಖಾತೆಯಲ್ಲಿರುವ ನಗದನ್ನು ಪಡೆಯುವುದಕ್ಕಾಗಿ ಬ್ಯಾಂಕ್ ಗಳಲ್ಲಿ ಸರದಿ ಸಾಲಿನಲ್ಲಿ ನಿಂತಿರುವ ಜನಗಳನ್ನು ನೋಡಿದರೆ ಸಾಕಾಗುತ್ತದೆ. ಭಾರತದಲ್ಲಿ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಒಂದು ಸಾಮಾನ್ಯ ತರ್ಕ ಬಳಕೆಯಾಗುತ್ತಿರುತ್ತದೆ.

ಎಲ್ಲರಿಗೂ ಶಿಕ್ಷಣ ಕೊಡಲು ಸಾಧ್ಯವಿಲ್ಲದೇ ಇರುವಾಗ 'ಅಸಾಂಪ್ರದಾಯಿಕ ಶಿಕ್ಷಣ’ವನ್ನು ಉತ್ತೇಜಿಸುವ ನೀತಿಯೊಂದನ್ನು ರೂಪಿಸುವುದು. ಜನರನ್ನು ಬಡತನ ರೇಖೆಯಿಂದ ಮೇಲಕ್ಕೆ ತರಲು ಸಾಧ್ಯವಿಲ್ಲದೇ ಇರುವಾಗ ಬಡತನ ರೇಖೆ ಎಂಬ ಪರಿಕಲ್ಪನೆಯನ್ನೇ ಪುನರ್ ನಿರ್ವಚಿಸುವುದು. ಇದೇ  ತರ್ಕದ ಭಾಗವಾಗಿ ಈಗ 'ನಗದು ಆರ್ಥಿಕತೆ’ ಎಂಬ ಪದಪುಂಜ ಬಳಕೆಯಾಗುತ್ತಿದೆ.

'ನಗದು ರಹಿತ ಆರ್ಥಿಕತೆ' ಎಂಬ ಆದರ್ಶವನ್ನು ಯಾರೂ ವಿರೋಧಿಸುವುದಿಲ್ಲ. ಮಾಹಿತಿ ಕ್ರಾಂತಿಯ ಆರಂಭದ ದಿನಗಳಿಂದಲೂ ಭಾರತವನ್ನು ಈ ಹಾದಿಯಲ್ಲಿ ಕೊಂಡೊಯ್ಯುವುದಕ್ಕಾಗಿ ಹಲವು ಕೆಲಸಗಳು ನಡೆದಿವೆ. ಎಲ್ಲದಕ್ಕಿಂತ ಮುಖ್ಯವಾದುದು ಬ್ಯಾಂಕಿಂಗ್ ವ್ಯವಸ್ಥೆಯ ಡಿಜಿಟಲೀಕರಣ.

ಕೋರ್ ಬ್ಯಾಂಕಿಂಗ್, ನಗದು ವರ್ಗಾವಣೆಗಾಗಿ ಐಎಂಪಿಎಸ್ ಮುಂತಾದವುಗಳನ್ನು ಈಗಾಗಲೇ ರೂಪಿಸಲಾಗಿದೆ. ಆದರೆ ಇವುಗಳ ಬಳಕೆ ಮಾತ್ರ ನಗರ ಮತ್ತು ಪಟ್ಟಣಗಳು ಮತ್ತು ಇಂಟರ್ನೆಟ್ ಬಳಸಬಹುದಾದವರಿಗೆ ಸೀಮಿತವಾಗಿ ಉಳಿದಿದೆ. ಇದೇಕೆ ವಿಸ್ತರಿಸಿಕೊಳ್ಳಲಿಲ್ಲ ಎಂಬ ಸರಳ ಪ್ರಶ್ನೆಯನ್ನು ಕೇಳಿಕೊಂಡರೆ ಭಾರತವನ್ನು 'ನಗದು ರಹಿತ ಆರ್ಥಿಕತೆ’ಯನ್ನಾಗಿ ಬದಲಾಯಿಸಲು ಇರುವ ಕಷ್ಟಗಳು ವೇದ್ಯವಾಗುತ್ತವೆ.

ಈ ವರ್ಷದ ಜುಲೈ ಅಂತ್ಯದ ವರೆಗಿನ ಅಂಕಿ ಅಂಶಗಳಂತೆ ನಮ್ಮ ಶೆಡ್ಯೂಲ್ಡ್ ಬ್ಯಾಂಕ್ ಗಳ ಶಾಖೆಗಳಲ್ಲಿ ಶೇಕಡಾ 38ರಷ್ಟು ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿವೆ. ಐದರಲ್ಲಿ ನಾಲ್ಕು ಹಳ್ಳಿಗಳಲ್ಲಿ ಯಾವುದೇ ಬ್ಯಾಂಕಿನ ಶಾಖೆಗಳಿಲ್ಲ. ಅರೆ ಗ್ರಾಮೀಣ ಪ್ರದೇಶಗಳು ಎಂದು ಹೇಳಬಹುದಾದ ಪ್ರದೇಶದಲ್ಲಿಯೂ ಈ ಸಮಸ್ಯೆ ಇದೆ. ಇಂಥ ಊರುಗಳ ಮೂರನೇ ಒಂದರಷ್ಟರಲ್ಲಿ ಬ್ಯಾಂಕ್ ಶಾಖೆಗಳಿಲ್ಲ.

ನಮ್ಮಲ್ಲಿರುವ ಒಟ್ಟು ಬ್ಯಾಂಕ್ ಖಾತೆಗಳ ಸಂಖ್ಯೆ 65 ಕೋಟಿ. ಕೆಲವರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದಾರೆ ಎಂಬುದನ್ನು ಪರಿಗಣಿಸದೆ ಲೆಕ್ಕ ಹಾಕಿದರೂ ಸುಮಾರು 30 ಕೋಟಿಗೂ ಹೆಚ್ಚು ಮಂದಿ ಬ್ಯಾಂಕಿಂಗ್ ಸೇವೆಗಳ ವ್ಯಾಪ್ತಿಯೊಳಕ್ಕೇ ಬಂದಿಲ್ಲ. ಆಧಾರ್ ಗುರುತು ಸಂಖ್ಯೆಗಳನ್ನು ನೀಡುವ ಕೆಲಸ ಶೇಕಡಾ 94ರಷ್ಟು ಮುಗಿದಿದೆ ಎಂಬ ಸರ್ಕಾರಿ ಲೆಕ್ಕಚಾರಗಳನ್ನು ನಂಬಿದರೂ 60 ಲಕ್ಷ ಮಂದಿಯ ಬಳಿ ಬ್ಯಾಂಕ್ ಖಾತೆಯನ್ನು ತೆರೆಯಲು ಅಗತ್ಯವಿರುವ ದಾಖಲೆಗಳೇ ಇಲ್ಲ.

ಈ ಸ್ಥಿತಿಯಲ್ಲಿ 'ನಗದು ರಹಿತ ಆರ್ಥಿಕತೆ' ಎಂದರೆ ಕುಡಿಯಲು ಗಂಜಿಯೂ ಇಲ್ಲ ಎಂದು ಅಳಲು ತೋಡಿಕೊಳ್ಳುವವರ ಬಳಿ ಪಾಯಸ ಕುಡಿಯಬಾರದೇಕೆ ಎಂದು ಕೇಳಿದಂತೆ ಇರುತ್ತದೆ. ನಗದು ರಹಿತ ಆರ್ಥಿಕತೆಯ ಬಗ್ಗೆ ಮಾತನಾಡುವ ಯೋಜನಾ ಆಯೋಗದ ಅಧ್ಯಕ್ಷರಾದಿಯಾಗಿ ಎಲ್ಲರೂ ಹೇಳುವುದು 'ಜಾಮ್’ ವ್ಯವಸ್ಥೆಯಲ್ಲಿ. ಜನಧನ್ ಖಾತೆ, ಆಧಾರ್ ಸಂಖ್ಯೆ ಮತ್ತು ಮೊಬೈಲ್ ಫೋನ್ ಈ ಮೂರನ್ನು ಬಳಸಿಕೊಂಡರೆ ನಗದು ರಹಿತ ಆರ್ಥಿಕತೆ ಬೆಳಕು ಹರಿಯುವುದರೊಳಗೆ ಸಾಧ್ಯವಾಗಿಬಿಡುತ್ತದೆ ಎಂಬುದು ಜಾಮ್ ಪ್ರತಿಪಾದಕರ ವಾದ.

ಸ್ಥೂಲದಲ್ಲಿ ಇದು ನಿಜವೆನಿಸಿಬಿಡುತ್ತದೆ.  ಸೂಕ್ಷ್ಮಕ್ಕೆ ಇಳಿದರೆ ಕಾಣಿಸುವುದು ಮತ್ತೊಂದು ಚಿತ್ರಣ. ಭಾರತದಲ್ಲಿರುವ ಒಟ್ಟು ಮೊಬೈಲ್ ಫೋನುಗಳ ಸಂಖ್ಯೆ 90 ಕೋಟಿ. ಮೊಬೈಲ್ ವ್ಯಾಲೆಟ್ ನಂಥ ಸೌಲಭ್ಯ ಬಳಸಲು ಸಾಧ್ಯವಿರುವ ಮೊಬೈಲ್ ಗಳ ಸಂಖ್ಯೆ 25 ಕೋಟಿ. ಒಟ್ಟು ಇರುವುದೇ 35 ಕೋಟಿ ಇಂಟರ್ನೆಟ್ ಸಂಪರ್ಕಗಳು. ಸರಳವಾಗಿ ಹೇಳುವುದಾದರೆ ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಗೆ 'ನಗದು ರಹಿತ ಆರ್ಥಿಕತೆ' ಅಪ್ರಸ್ತುತ.

ಇನ್ನು ಇಂಟರ್ನೆಟ್, ಮೊಬೈಲ್ ವ್ಯಾಲೆಟ್, ಡೆಬಿಟ್/ಕ್ರೆಡಿಟ್ ಕಾರ್ಡ್ ಇರುವವರ ಸ್ಥಿತಿಯಾದರೂ ಹೇಗಿದೆ. ನಮ್ಮಲ್ಲಿ ಪ್ರತೀ ಹತ್ತು ಲಕ್ಷ ಮಂದಿಗೆ ಕೇವಲ 693 ಕಾರ್ಡ್ ಸ್ವೀಕರಿಸಲು ಅಗತ್ಯವಿರುವ ಯಂತ್ರಗಳಿವೆ. ಅವುಗಳಲ್ಲಿ ಹೆಚ್ಚಿನವು ಇರುವುದು ನಗರ ಪ್ರದೇಶಗಳಲ್ಲಿ.

ಇಷ್ಟೆಲ್ಲಾ ತೊಂದರೆಗಳ ಮಧ್ಯೆಯೂ ನಗದು ರಹಿತ ಆರ್ಥಿಕತೆಯನ್ನು ಪಾಲಿಸಲು ಹೊರಟರೂ ಜಯವೇನೂ ಸಿಗುವುದಿಲ್ಲ. ಏಕೆಂದರೆ ಈ ಬಗೆಯ ವ್ಯವಹಾರಕ್ಕೆ ಮುಖ್ಯವಾಗಿ ಬೇಕಿರುವುದು ಸುಗಮ ಇಂಟರ್ನೆಟ್ ಸಂಪರ್ಕ. ಇದನ್ನು ಖಾತರಿ ಪಡಿಸುವಂಥ ಮೂಲ ಸೌಕರ್ಯ ನಮ್ಮಲ್ಲಿಲ್ಲ.

  ಯಾವುದಾದರೂ ಬ್ಯಾಂಕ್ ನ ಗ್ರಾಮೀಣ ಶಾಖೆಗೆ ಭೇಟಿ ನೀಡಿದರೆ ಈ ಸಮಸ್ಯೆಯ ಆಳ ಮತ್ತು ಅಗಲ ಅರ್ಥವಾಗುತ್ತದೆ. ತಿಂಗಳ ಬಹುತೇಕ ದಿನಗಳಂದು ಈ ಶಾಖೆಗಳಲ್ಲಿ ವ್ಯವಹಾರವೇ ನಡೆಯುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಇಂಟರ್ನೆಟ್ ಸಂಪರ್ಕದ ತೊಂದರೆಗಳು ಮತ್ತು ವಿದ್ಯುತ್ ಪೂರೈಕೆಯಲ್ಲಿ ಉಂಟಾಗುವ ವ್ಯತ್ಯಯಗಳು. ಇನ್ನು ಗ್ರಾಮೀಣ ಪ್ರದೇಶದ ಅಂಗಡಿಗಳಲ್ಲಿ ಪೇಟಿಎಂ ಮತ್ತು ಕಾರ್ಡ್ ಗಳ ಬಳಕೆಯ ಬಗ್ಗೆ ಏನು ಹೇಳಲು ಸಾಧ್ಯ?

ನಮ್ಮ ಎಲ್ಲಾ ಟೆಲಿಕಾಂ ಕಂಪೆನಿಗಳ ಮೇಲೆ ಒತ್ತಡ ಹೇರಿ ಮೊಬೈಲ್ ಇಂಟರ್ನೆಟ್ ಅನ್ನು ಭಾರತದ ಕಟ್ಟ ಕಡೆಯ ಹಳ್ಳಿಗೂ ಒದಗಿಸುವ ಕೆಲಸವಾದರೆ ಎಲ್ಲವೂ ಸರಿಯಾಗುತ್ತದೆಯೇ? ಆಗಲೂ ಸಮಸ್ಯೆ ಮುಗಿಯುವುದಿಲ್ಲ.  ಕಾಗದದ ತುಂಡು ನಿರ್ದಿಷ್ಟ ಮೌಲ್ಯದ ನೋಟಾಗಿ ಪರಿವರ್ತನೆಯಾಗುವುದಕ್ಕೆ  ರಿಸರ್ವ್ ಬ್ಯಾಂಕ್ ಗವರ್ನರ್ ವಾಗ್ದಾನವನ್ನು ಮುದ್ರಿಸಿದರೆ ಸಾಕು.

ಈ ವಾಗ್ದಾನವನ್ನು ಡಿಜಿಟಲೀಕರಣಕ್ಕೆ ಒಳಪಡಿಸುವುದು ಬಹಳ ಸಂಕೀರ್ಣ. ಕಾನೂನುಗಳೂ ನೋಟುಗಳ ಆಚೆಗೆ ಆಲೋಚಿಸಬೇಕಾಗುತ್ತದೆ.  ಸದ್ಯದ ಸ್ಥಿತಿಯಲ್ಲಿ ಕಾರ್ಡ್ ಮತ್ತು ಮೊಬೈಲ್ ವ್ಯಾಲೆಟ್ ಗಳ ಬಳಕೆಯಲ್ಲಿ ಉದ್ಭವಿಸಬಹುದಾದ ಯಾವುದೇ ವ್ಯಾಜ್ಯಗಳನ್ನು ಬಗೆಹರಿಸುವುದಕ್ಕೆ ಬೇಕಿರುವ ಕಾನೂನುಗಳೇ ನಮ್ಮಲ್ಲಿಲ್ಲ. ಕಾರ್ಡ್ ಅಥವಾ ಮೊಬೈಲ್ ವ್ಯಾಲೆಟ್ ಗೆ ಯಾರಾದರೂ ಕನ್ನ ಕೊರೆದರೆ ಅದನ್ನು ನಿರ್ವಹಿಸುವುದು ಹೇಗೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಯಮಗಳೇ ಇಲ್ಲ.

ನಗದು ರಹಿತ ವ್ಯವಹಾರ ಎಂದರೆ ನಮ್ಮ ವೈಯಕ್ತಿಕ ವಿವರಗಳನ್ನು ವ್ಯಾಪಾರಿಗಳೊಂದಿಗೆ ಹಂಚಿಕೊಳ್ಳುವುದು ಎಂದರ್ಥ. ಇದರ ರಕ್ಷಣೆಗೆ ಈ ತನಕ ಕಾನೂನು ರೂಪಿಸಲಾಗಿಲ್ಲ.

ಅಮೆಜಾನ್, ಫ್ಲಿಪ್ ಕಾರ್ಟ್ ನಂಥ ಆನ್ ಲೈನ್ ಅಂಗಡಿಗಳು ನಾವು ಕಾರ್ಡ್ ನಲ್ಲಿ ಪಾವತಿಸಿದರೆ ಕಾರ್ಡಿನ ವಿವರಗಳನ್ನು ತಮ್ಮಲ್ಲೇ ಸಂಗ್ರಹಿಸಿಟ್ಟುಕೊಳ್ಳುತ್ತವೆ.(ಗ್ರಾಹಕ ಪ್ರಜ್ಞಾಪೂರ್ವಕವಾಗಿ ಕಾರ್ಡಿನ ವಿವರಗಳನ್ನು ಸಂಗ್ರಹಿಸುವುದು ಬೇಡ ಎನ್ನಬೇಕೆಂದು ಅವು ಬಯಸುತ್ತವೆ) ಭಾರತದಲ್ಲಿ ಬಳಕೆಯಲ್ಲಿರುವ ಕಾರ್ಡ್ ಗಳನ್ನು ವಿದೇಶಿ ಕರೆನ್ಸಿಯಲ್ಲಿ ಪಾವತಿಸಲು ಬಳಕೆ ಮಾಡುವುದಾದರೆ ಅದಕ್ಕೆ ಎರಡು ಹಂತದ ಪರಿಶೀಲನೆ ಅಂದರೆ ಪಿನ್ ಅಥವಾ ಒನ್ ಟೈಂ ಪಾಸ್ ವರ್ಡ್ ನ ಅಗತ್ಯವೇ ಇಲ್ಲ.

ಅಮೆಜಾನ್ ಅಥವಾ ಫ್ಲಿಪ್ ಕಾರ್ಟ್ ನಂಥ ತಾಣಗಳ ದತ್ತ ಸಂಚಯಕ್ಕೆ ಯಾರಾದರೂ ಕನ್ನ ಕೊರೆದರೆ ಅಲ್ಲಿರುವ ಕಾರ್ಡುಗಳ  ಸಕಲ ವಿವರಗಳೂ ಅವರಿಗೆ ಲಭ್ಯವಾಗುತ್ತವೆ.ಅವರದನ್ನು ಬಳಸಿಕೊಂಡು ವಿದೇಶಿ ಕರೆನ್ಸಿಯಲ್ಲಿ ವ್ಯವಹಾರ ನಡೆಸಿದರೆ ನಮಗೆ ಏನೇನೂ ಮಾಡಲು ಸಾಧ್ಯವಾಗುವುದಿಲ್ಲ.

ನಗದು ರಹಿತ ಆರ್ಥಿಕತೆಯಿಂದ ಸರ್ಕಾರಕ್ಕೆ ಖಂಡಿತವಾಗಿಯೂ ಲಾಭವಿದೆ. ಆದರೆ ಈಗಿರುವ ಮೂಲಸೌಕರ್ಯ ಮತ್ತು ಕಾನೂನುಗಳನ್ನೇ ಬಳಸಿಕೊಂಡು ಅದನ್ನು ಜಾರಿಗೆ ತಂದರೆ ಸರ್ಕಾರಕ್ಕೆ ಎಷ್ಟು ಲಾಭವಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದರೆ ಗ್ರಾಹಕನಿಗೆ ನಷ್ಟವಾಗುವ ಸಾಧ್ಯತೆಗಳಂತೂ ಬಹಳ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT