ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬೋಲಾ ರುಂಡಮಾಲೆಯಲ್ಲಿ ಕಾಣದ ಕೊಂಡಿಗಳು

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಹಬ್ಬಗಳ ಸಾಲಿನಂತೆ ವಿಜ್ಞಾನ ಲೋಕದಲ್ಲೂ ಸಂಭ್ರಮದ ಸುದ್ದಿಗಳು ಸಾಲಾಗಿ ಬರುತ್ತಿವೆ. ಬಾನಲ್ಲಿನ ಚಂದಮಾಮ ಹೊಂಬ­ಣ್ಣದ ಹರಿವಾಣದಂತೆ ದಾಖಲೆ ಗಾತ್ರ­ದಲ್ಲಿ ಬೆಳಗಿದ್ದಾನೆ. ಸೂರ್ಯನ ಪ್ರದಕ್ಷಿಣೆ ಹಾಕು­ತ್ತಿರುವ ಭೂಗ್ರಹ ಇದೀಗ ಪರ್ಸೀಡ್ ಧೂಮ­ಕಣಗಳ ಮೂಲಕ  ಹಾದು ಹೋಗಿದೆ. ಸ್ವಿಫ್ಟ್–-ಟಟ್ಲ್ ಹೆಸರಿನ ಧೂಮಕೇತುವೊಂದು ಹಿಂದೆಂದೋ ಉದುರಿಸಿ ಹೋದ ಈ ಕಣಗಳು ನಿಮಿಷಕ್ಕೆ ಸಾವಿರ ಸಂಖ್ಯೆಯಲ್ಲಿ ವಾಯು­ಮಂಡ­ಲ­ವನ್ನು ಹೊಕ್ಕು ಉರಿದು ಉದುರುವುದನ್ನು ನೋಡು­ವುದೇ ಚೆಂದ.

ಆದರೆ ಮಳೆಗಾಲದ ಮಬ್ಬು ಮೋಡಗಳಿಂದಾಗಿ ಈ ಎರಡೂ ವಿಶೇಷ­ಗ­ಳಿಂದ ಕನ್ನಡನಾಡಿನ ಬಹುತೇಕ ಜನರು ವಂಚಿತ­ರಾಗಿದ್ದೇವೆ. ಅತ್ತ ‘ಚೂರಿ’ ಹೆಸರಿನ ಧೂಮ­ಕೇತು­ವನ್ನು ಬೆನ್ನಟ್ಟಲೆಂದು ಏಳು ವರ್ಷಗಳ ಹಿಂದೆ ಇಲ್ಲಿಂದ ಹೊರಟಿದ್ದ ರೊಸೆಟ್ಟಾ ನೌಕೆ ಮುಹೂರ್ತಕ್ಕೆ ಸರಿಯಾಗಿ ತನ್ನ ಗುರಿ ತಲುಪಿ ಚೂರಿಯ ಸುತ್ತ ಗಸ್ತು ತಿರುಗುತ್ತ ಫೊಟೊಗ್ರಫಿ ಮಾಡು­ತ್ತಿದೆ. ಇನ್ನು ಮೂರು ವಾರಗಳ ನಂತರ ಧೂಮ­ಕೇತುವಿನ ಬೆನ್ನ ಮೇಲೆ ಅದು ಪುಟ್ಟ ಫ್ರಿಜ್ ಗಾತ್ರದ ಡಬ್ಬಿಯನ್ನು ಇಳಿಸಲಿದೆ.

ಈಗೇನೋ ಒರಟು ಬಂಡೆಯಂತಿರುವ ಆ ಧೂಮ­ಕೇತು ಕ್ರಮೇಣ ತನ್ನ ತಲೆತುಂಬ ಹಿಮದ ಜೂಲು ಕೂದಲನ್ನೂ ಉದ್ದ ಬಿಳೀ ಬಾಲವನ್ನೂ ಬೆಳೆ­ಸಿಕೊಳ್ಳುವ ಸೋಜಿಗದ ದೃಶ್ಯಾವಳಿಗಳನ್ನು ಸಮೀ­ಪದಿಂದ ನೋಡುವ ಅದೃಷ್ಟ ನಮ್ಮದಾ­ಗಲಿದೆ. ಆ ಕೌತುಕಕ್ಕೆ ಕಾಯುತ್ತಿರುವಾಗಲೇ ನಮ್ಮ ಹೆಮ್ಮೆಯ ‘ಮಂಗಳಯಾನ’ ನೌಕೆ ಸೆಪ್ಟೆಂ­ಬರ್ ೨೪ರಂದು ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸುವ ಕ್ಷಣಗಣನೆಯೂ ಆರಂಭವಾಗಿದೆ.

ಸದ್ಯ ಅವನ್ನೆಲ್ಲ ಬದಿಗಿಟ್ಟು ಈ ಎಬೋಲಾ ಎಂಬ ಕರಾಳ ಕಾಯಿಲೆಯ ಗತಿಸ್ಥಿತಿ ಏನೆಂದು ನೋಡೋಣ. ಸೋಂಕು ತಗುಲಿದವರಿಗೆ ಅಷ್ಟೇ ಅಲ್ಲ, ದೂರದ ಸುರಕ್ಷಿತ ನಾಡಿನಲ್ಲಿರುವ ನಮಗೂ ಅದು ನಡುಕ ಹುಟ್ಟಿಸುತ್ತಿದೆ. ಎಂಟು ತಿಂಗಳು ಹಿಂದೆ ಆಫ್ರಿಕದಲ್ಲಿ ಅದು ಮೆಲ್ಲಗೆ ಹೆಡೆ­ಯೆತ್ತಿದ ವೈಖರಿಯನ್ನೇ ನೋಡಿ: (‘ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್’ ಎಂಬ ಪ್ರತಿಷ್ಠಿತ ವೈದ್ಯಕೀಯ ಪತ್ರಿಕೆಯ ವರದಿಯ ಸಾರಾಂಶ ಇದು):

೨೦೧೩ರ ಡಿಸೆಂಬರ್ ೬ರಂದು ಗಿನಿ ದೇಶದ ಮಿಲಿ­ಯಾಂಡು ಎಂಬ ಹಳ್ಳಿಯಲ್ಲಿ ಎರಡು ವರ್ಷದ ಮಗು ಸತ್ತಿತು. ಮುಂದಿನ ಒಂದು ತಿಂಗಳಲ್ಲಿ ಆ ಮಗುವಿನ ಅಕ್ಕ, ತಾಯಿ, ಅಜ್ಜಿ ಸತ್ತರು. ಅವರ ಆರೈಕೆಗೆಂದು ಹೋಗಿದ್ದ ಸೂಲ­ಗಿತ್ತಿ ಅಲ್ಲೇ ಸಮೀಪದ ಮೆಸೆಂಟಾ ಆಸ್ಪತ್ರೆಯಲ್ಲಿ ಸತ್ತಳು. ಆಕೆಯನ್ನು ಪರೀಕ್ಷಿಸಿದ ಆರೋಗ್ಯ ಕಾರ್ಯ­ಕರ್ತನಿಗೆ ಫೆಬ್ರುವರಿ ೧೦ರಂದು ಸಾವು ಬಂತು. ಇವನಿಗೆ ಶುಶ್ರೂಷೆ ನೀಡಿದ ವೈದ್ಯರು ಫೆ. ೨೪ರಂದು ಸತ್ತರು. ಐದು ದಿನಗಳ ನಂತರ ಇದೇ ವೈದ್ಯರ ಸಮೀಪ ಸಂಬಂಧಿಯೊಬ್ಬ ಸಾವಪ್ಪಿದ. ಹತ್ತು ದಿನಗಳ ನಂತರ ವೈದ್ಯರ ಇಬ್ಬರು ತಮ್ಮಂದಿರು ಅಸು ನೀಗಿದರು...

ಅಲ್ಲಿಂದ ಆರಂಭವಾದ ಸಾವಿನ ಸರಮಾಲೆ ನೆಂಟ­ರಿಂದ ನೆಂಟರಿಗೆ, ಆಸ್ಪತ್ರೆಯಿಂದ ಆಸ್ಪತ್ರೆಗೆ ದಾಟುತ್ತ, ಪಶ್ಚಿಮ ಆಫ್ರಿಕದ ನಾಲ್ಕು ದೇಶಗಳಲ್ಲಿ ರುಂಡ­ಮಾಲೆಯಾಗಿ ಬೆಳೆಯುತ್ತ ಅದಕ್ಕೆ ಬಲಿ­ಯಾ­ದವರ ಸಂಖ್ಯೆ ನಿನ್ನೆ ಸಾವಿರ ದಾಟಿದೆ. ಸುಮಾರು ಒಂದೂವರೆ ಸಾವಿರ ಜನರು ಆಸ್ಪತ್ರೆ­ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಅನ್ನೋದು ಹೆಸರಿಗಷ್ಟೆ. ರೋಗಿಯನ್ನು ಯಾರೂ ಸಮೀ­ಪಿಸುವ ಹಾಗಿಲ್ಲ. ಪಂಜರದ ಪ್ರಾಣಿಗಳ ಹಾಗೆ ದೂರದಿಂದಲೇ ಅವರನ್ನು ನೋಡಿ­ಕೊಳ್ಳ­ಬೇಕು.

ರೋಗಿಯ ಮಲಮೂತ್ರ ಶುಚಿ ಮಾಡು­ವ­ವರೂ ಗಗನಯಾತ್ರಿಯ ಹಾಗೆ ನಖಶಿಖಾಂತ ಕವಚ ಧರಿಸಬೇಕು. ಮಾತ್ರೆಗೀತ್ರೆ ಕೊಟ್ಟು ಹೊರಕ್ಕೆ ಬಂದ ಕೂಡಲೆ ತಾನು ತೊಟ್ಟ ಕವಚ­ವನ್ನು ಕಳಚಿ ತುರ್ತಾಗಿ ಹೂಳಬೇಕು ಇಲ್ಲವೆ ಸುಡ­ಬೇಕು. ಡಾಕ್ಟರ್‌ಗಳಿಗಂತೂ ಈ ಕಾಯಿಲೆಗೆ ಔಷಧ ಏನೆಂಬುದೇ ಗೊತ್ತಿಲ್ಲ. ಅತಿಸಾರ, ರಕ್ತ­ಭೇದಿ­ಯಂಥ ಲಕ್ಷಣಗಳು ತೀರಾ ಜಾಸ್ತಿಯಾಗದ ಹಾಗೆ ನೋಡಿಕೊಂಡರೆ ರೋಗಿ ಉಳಿಯ­ಬ­ಹುದು. ಇಲ್ಲವಾದಲ್ಲಿ ಶೇಕಡ ೯೦ ರೋಗಿಗಳು ಸಾಯು­ತ್ತಾರೆ. ಆ ಸಾವಾದರೋ ದಾರುಣ ಯಾತ­ನೆಯ ಸಾವು. ದೇಹದ ಸಕಲ ರಂಧ್ರ­ಗಳಿಂ­ದಲೂ ಬೆವರಿನ ಗ್ರಂಥಿಗಳಿಂದಲೂ ರಕ್ತದ್ರವ ಜಿನುಗುತ್ತದೆ.

ಸಹಜವಾಗಿ ಇಡೀ ಜಗತ್ತು ಕಂಗಾಲಾಗಿದೆ.  ಆದರೆ ಹಾಗೆ ಕಂಗಾಲಾಗಬೇಕಾಗಿಲ್ಲ. ಏಕೆಂದರೆ ಇದು ಗಾಳಿಯಿಂದ ಹಬ್ಬುವ ಕಾಯಿಲೆ ಅಲ್ಲ. ರೋಗಿಯ ಜೀವದ್ರವ -ಅಂದರೆ ರಕ್ತ, ಬೆವರು, ಜೊಲ್ಲು, ಮಲಮೂತ್ರ, ವೀರ್ಯ, ಕಣ್ಣೀರು ಇಂಥ­ದ್ದೇನಾದರೂ ನಮ್ಮ ಮೈಗೆ ಸೋಂಕಿದರೆ ಮಾತ್ರ ಎಬೋಲಾ ವೈರಾಣು ನಮ್ಮತ್ತ ದಾಟು­ತ್ತದೆ. ಹಾಗಾಗಿ ನೆಂಟರಿಂದ ನೆಂಟರಿಗೆ, ಆಸ್ಪತ್ರೆ­ಯಿಂದ ಆಸ್ಪತ್ರೆಗೆ ಹರಡುತ್ತಿದೆ ವಿನಾ ಸಾರ್ಸ್‌ನ ಹಾಗೆ ಜನಜಾತ್ರೆಯಿದ್ದಲ್ಲಿ ಎಲ್ಲರಿಗೂ ಹಬ್ಬುವು­ದಿಲ್ಲ.

ಸೊಳ್ಳೆಗಳಿಂದ, ಕೊಳಕು ನಾಯಿ-, ಹಂದಿ,- ಇಲಿ­ಗಳಿಂದ ಅಥವಾ ಕೋಳಿ ಹುಂಜಗಳಿಂದ ಈ ರೋಗ ಬರುವುದಿಲ್ಲ. ಬಸ್, ಟೆಂಪೊ, ರೈಲು, ಹಡಗು, ವಿಮಾನಗಳಲ್ಲೂ ಒಬ್ಬರಿಂದ ಹತ್ತು ಜನ­ರಿಗೆ ಹಬ್ಬುವ ಸಂಭವ ತೀರ ಕಡಿಮೆ. ಎಂಜಲು ಹಚ್ಚಿ ಹಚ್ಚಿ ಟಿಕೆಟ್ ಕೊಡುವ ಕಂಡ­ಕ್ಟರ್‌ಗೇ ಎಬೋಲಾ ಜ್ವರ ಬಂದಿದ್ದರೆ ಆ ಮಾತು ಬೇರೆ. ಟಿಕೆಟ್ ಒದ್ದೆ ಇದ್ದಷ್ಟು ಹೊತ್ತು ಮಾತ್ರ ಅಪಾ­ಯಕಾರಿ. ಈ ರೋಗದ ವಿಲಕ್ಷಣತೆ ಏನೆಂ­ದರೆ ಆಸ್ಪತ್ರೆಗಳೇ ಇದರ ಟ್ರಾವೆಲ್ ಏಜೆಂಟ್‌­ಗ­ಳಾಗುತ್ತವೆ. ಡಾಕ್ಟರ್‌ಗಳೇ ರೋಗಿಗಳಾಗುತ್ತಾರೆ. ರೋಗಿಗಳೇ ಡಾಕ್ಟರ್ ಆಗಿ ತಮಗೆ ತಾವೇ ಶುಶ್ರೂಷೆ ಮಾಡಿಕೊಳ್ಳಬೇಕಾದ ಸ್ಥಿತಿ ಬರುತ್ತದೆ.

ಧೂಮಕೇತುಗಳಿಗೂ ಎಬೋಲಾ ವೈರಾಣು­ವಿಗೂ ಎಷ್ಟೊಂದು ಹೋಲಿಕೆ ಇದೆ ನೋಡಿ. ಸೌರ­ಮಂಡಲದ ಅಂಚಿನ ಕ್ಯೂಪರ್ ಪಟ್ಟಿಯ   ಕತ್ತಲ ಕೂಪದಲ್ಲಿ ಕೋಟಿಗಟ್ಟಲೆ ಚಿಕ್ಕ ದೊಡ್ಡ ಬಂಡೆ­ಗಳ ನಡುವೆ ತಣ್ಣಗೆ ರೌಂಡ್ ಹೊಡೆ­ಯು­ತ್ತಿದ್ದ ಬಂಡೆಯೊಂದು ತನಗೆ ಯಾರೋ ಖೊಕ್ ಕೊಟ್ಟಂತೆ ಪುಳಕ್ಕನೆ ಎದ್ದು ಬಂದು ಧೂಮ­ಕೇತು­ವಾಗಿ ಎಂಟೂ ಗ್ರಹಗಳ ಕಕ್ಷೆಯೊಳಕ್ಕೆ ಹೊಕ್ಕು ಹೊರಟು ಸೂರ್ಯನಿಗೆ ಒಂದು ಪ್ರದಕ್ಷಿಣೆ ಹಾಕಿ ಮರಳಿ ಸ್ವಸ್ಥಾನಕ್ಕೆ ಹೋಗಿ ಕೂರುತ್ತದೆ. ಎಬೋ­ಲಾ­ನೂ ಹಾಗೇ. 

ಕತ್ತಲ ಖಂಡ ಎನಿಸಿದ ಆಫ್ರಿ­ಕಾದ ಪಶ್ಚಿಮ ಅಂಚಿನ ಕಾಂಗೊ (ಝಾಯಿರ್) ದೇಶದ ಮಳೆಕಾಡಿನಲ್ಲಿ ಬಾವಲಿಯಂಥ ಯಾವುದೋ ಪ್ರಾಣಿಯ ದೇಹದಲ್ಲಿ ನಂಜಾಣು ಅವಿ­ತಿರುತ್ತದೆ. ಹಾಗೆಂದು ಆ ಬಾವಲಿಗಳಿಗೆ ಎಂದೂ ಜ್ವರ ಬರುವುದಿಲ್ಲ. ಅವು ಕೇವಲ ವೈರಾ­ಣು­ಗಳ ಬ್ಯಾಂಕಿನಂತಿರುತ್ತವೆ. ಎಲ್ಲೋ ಹತ್ತು ಹನ್ನೆ­ರಡು ವರ್ಷಗಳಿಗೆ ಒಮ್ಮೆ ಅದು ಇನ್ಯಾ­ವುದೋ ಪ್ರಾಣಿಗೆ ಕಚ್ಚುತ್ತದೊ, ಮೃತ್ಯು ಚುಂಬನ ಕೊಟ್ಟು ಹೋಗುತ್ತದೊ ಗೊತ್ತಿಲ್ಲ. ಕ್ರಮೇಣ ವೈರಾಣುಗಳು ಇತರ ಪ್ರಾಣಿಗಳಿಗೆ ಹಬ್ಬು­ತ್ತವೆ. ದಟ್ಟ ಅರಣ್ಯಗಳಲ್ಲಿ ವಾಸಿಸುವ ಗೊರಿಲ್ಲಾ, ಚಿಂಪಾಂಜಿ, ಮುಳ್ಳುಹಂದಿ, ಜಿಂಕೆ­ಯಂಥ ಪ್ರಾಣಿಗಳ ಮಧ್ಯೆ ಎಬೋಲಾ ಪಸರಿ­ಸು­ತ್ತದೆ.

ಅಂಥ ವನ್ಯಜೀವಿಯನ್ನು ಮನುಷ್ಯರು ಮುಟ್ಟಿ­ದಾಗ ಅಥವಾ ಸತ್ತಿದ್ದನ್ನು ಹೊತ್ತು ಸಾಗಿ­ಸುವಾಗ ಇದು ಮನುಷ್ಯಲೋಕಕ್ಕೆ ಪ್ರವೇಶ ಪಡೆ­ಯು­ತ್ತದೆ. ೧೯೭೬ರಲ್ಲಿ ಎಬೋಲಾ ನದಿಯ ದಂಡೆ­ಯಲ್ಲಿ ಇದು ಪ್ರಕಟವಾಗಿತ್ತು. ನಂತರ ೧೯೯೫ರ ಸುಮಾರಿಗೆ ಮತ್ತೊಮ್ಮೆ ಅಲ್ಲೇ ಸುತ್ತ­ಮುತ್ತ ಹಾವಳಿ ಎಬ್ಬಿಸಿ ೨೦೦೭ರಲ್ಲಿ ಮತ್ತೆ ಉಗಾಂಡಾ­ದಲ್ಲಿ ಪ್ರತ್ಯಕ್ಷವಾಗಿತ್ತು. ಇದೀಗ ಅಲ್ಲೇ ಮೂರು ರಾಷ್ಟ್ರಗಳ ಗಡಿಯಲ್ಲಿ ಪ್ರಕಟ­ವಾಗಿ ನಾಲ್ಕು ದೇಶಗಳಿಗೆ ಹಬ್ಬಿದೆ. ಭಯ-–ದಿಗಿ­ಲನ್ನು ಜಗತ್ತಿಗೆಲ್ಲ ಹಬ್ಬಿಸಿದೆ.

ಮೊನ್ನೆ ನೈಜೀರಿ­ಯಾ­ದಿಂದ ವಿಮಾನದ ಮೂಲಕ ಬೆಂಗಳೂರಿಗೆ ಬಂದಿ­ಳಿದ ಮೂವರು ಪ್ರಯಾಣಿಕರಿಗೆ ತುಸು ಜ್ವರ ಇದೆ­ಯೆಂಬುದು ಗೊತ್ತಾಗಿ ದಿಗಿಲು ಬಿದ್ದ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಅವ­ರ­ನ್ನೆಲ್ಲ ಆಸ್ಪತ್ರೆಗೆ ಸಾಗಿಸಿ ತನಿಖೆ ಪನಿಖೆ ನಡೆಸಿ ಬಿಡು­ಗಡೆ ಮಾಡಿದ್ದೂ ಆಯಿತು. ಅವರಿಗೆ ತಗುಲಿದ್ದು ‘ಎಬೋಲಾ ಅಲ್ಲ’ ಅಂತ ಸಂಜಯ ಗಾಂಧಿ ಆಸ್ಪತ್ರೆ­ಯಲ್ಲಿ ಅಷ್ಟು ಬೇಗ ಹೇಗೆ ಕಂಡುಹಿಡಿದರೋ ಎಲ್ಲ ನಿಗೂಢ.

ಎಬೋಲಾಕ್ಕೆ ಔಷಧವನ್ನು ಉತ್ಪಾದಿಸಿದ ಪರಿಯೂ ನಿಗೂಢವಾಗಿದೆ. ಆಫ್ರಿಕದ ಈ ಬಡ­ದೇಶಗಳಿಂದ ಅಪಾರ ಪ್ರಮಾಣದಲ್ಲಿ ಖನಿಜ, ತೈಲ, ಮರಮುಟ್ಟುಗಳನ್ನು ಸಾಗಿಸಿಕೊಳ್ಳುವ ಧನಿಕ ರಾಷ್ಟ್ರಗಳು ಅಲ್ಲಿನ ಬಡಜನರ ಆರೋಗ್ಯ ರಕ್ಷ­ಣೆಗಾಗಿ ಎಂದೂ ಏನನ್ನೂ ಮಾಡಿರಲಿಲ್ಲ. ಎಬೋಲಾದ ದಾರುಣ ಲಕ್ಷಣಗಳು ೩೦ ವರ್ಷ­ಗಳ ಹಿಂದೆಯೇ ಗೊತ್ತಾಗಿದ್ದರೂ ಅದಕ್ಕೆ ಔಷಧ ಕಂಡು­ಹಿಡಿಯಬೇಕೆಂಬ ತುರ್ತು ಅವಕ್ಕೆ ಹಾಗಿ­ರಲಿ, ಅವುಗಳ ಮುಷ್ಟಿಯಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಗೂ ಇರಲಿಲ್ಲ.

ಈಗ ನೋಡಿದರೆ ಒಂದು ದಿಕ್ಕಿನಲ್ಲಿ ದಿಗಿಲು ಹಬ್ಬಿಸುವ ಕೆಲಸ ಹಾಗೂ ಇನ್ನೊಂದು ನಿಟ್ಟಿನಲ್ಲಿ ಔಷಧ ರೂಪಿ­ಸುವ ಕೆಲಸ ಎರಡೂ ತುರ್ತಾಗಿ ಸಾಗಿವೆ. ಅಮೆ­ರಿಕದ ವಿಜ್ಞಾನಿಗಳದ್ದೇ ಝೀಮ್ಯಾಪ್ ಹೆಸರಿನ ಕಂಪ­ನಿ­ಯೊಂದು ಔಷಧವನ್ನು ತಯಾರಿಸಿದೆ. ಮನು­ಷ್ಯರ ಮೇಲೆ ಅದನ್ನು ಪ್ರಯೋಗಿಸುವ ಮೊದಲು ಅನುಸರಿಸಬೇಕಾದ ಕಟ್ಟಳೆಗಳನ್ನೆಲ್ಲ ಬದಿ­ಗೊತ್ತಿ, ನೇರವಾಗಿ ರೋಗಿಗಳ ಮೇಲೆ ಪ್ರಯೋ­ಗಿಸಲು ವಿಶ್ವ ಆರೋಗ್ಯ ಸಂಸ್ಥೆ ಅವಸರ­ದಲ್ಲಿ ನಿರ್ಧರಿಸಿದೆ. ಆದರೆ ಆ ಔಷಧವನ್ನು ಸದ್ಯಕ್ಕೆ ಅಮೆರಿಕ, ಯೂರೋಪ್‌ನಿಂದ ಆಫ್ರಿಕಕ್ಕೆ ಹೋಗಿದ್ದ ಬಿಳಿ ಜನರಿಗೆ ಮಾತ್ರ ಕೊಡಲಾಗು­ತ್ತಿದೆ.

‘ಔಷಧ ತಯಾರಿಸಲು ಬೇಕಾದ ಪ್ರತಿ­ವಿಷ­ವನ್ನು ಆಫ್ರಿಕದ ಕರಿ ಯುವಕನೊಬ್ಬನಿಂದ ಪಡೆ­ದಿ­ದ್ದೀರಿ, ಆದರೆ ಕರಿಯರಿಗೆ ಏಕೆ ಔಷಧ ಕೊಡು­ತ್ತಿಲ್ಲ?’ ಎಂದು ಆಫ್ರಿಕದ ಜನರು ಕೇಳುತ್ತಿದ್ದಾರೆ. ಔಷ­ಧವನ್ನು ತಂಬಾಕು ಸಸ್ಯದಲ್ಲಿ ಬೆಳೆಸಲಾ­ಗು­ತ್ತಿದ್ದು ಅದರ ಉತ್ಪಾದನೆ ತೀರ ನಿಧಾನವಾಗಿದೆ ಎಂಬ ನಂಬಲರ್ಹ ಕಾರಣವನ್ನೇನೊ ಕಂಪನಿ ಕೊಡು­ತ್ತಿದೆ. ಏನೊ ಗೊತ್ತಿಲ್ಲ. ಎಬೋಲಾ ರೋಗಿಯ ಕಣ್ಣೀರಿನಲ್ಲೂ ನಂಜಾಣುಗಳಿರುವ ಹಾಗೆ ರೋಗಿಗಳ ಬಗ್ಗೆ ಅನುಕಂಪ ತೋರುವವರ ಕಣ್ಣೀರಿನಲ್ಲೂ ಸ್ವಾರ್ಥದ ನಂಜಾಣುಗಳಿದ್ದಾವು.

ಎಲ್ಲೋ ಕಾಡಿನಲ್ಲಿ ಅವಿತಿದ್ದ ರೋಗಾಣು ಈಚಿನ ವರ್ಷಗಳಲ್ಲಿ ದೂರ ದೂರ ಹಬ್ಬುತ್ತ ಹೆಚ್ಚು ಹೆಚ್ಚು ಜನರನ್ನು ಬಲಿ ಹಾಕುತ್ತಿದೆ ಹೇಗೆ? ಕ್ಯಾಸನೂರು ಜ್ವರ, ಪ್ಲೇಗ್, ಚಿಕೂನ್‌ಗುನ್ಯಗಳ ಹಾಗೆ ಇದೂ ಮಿಲಿಟರಿ ಲ್ಯಾಬಿನಲ್ಲಿ ಜೀವಾಣು ಅಸ್ತ್ರವಾಗಿ ರೂಪುಗೊಂಡು ಈಗ ನಿಯಂತ್ರಣ ತಪ್ಪಿ ವಿಸ್ತರಿಸುತ್ತಿದೆಯೆ? ಅಂಥ ಸಾಧ್ಯತೆಗಳು ಕಡಿಮೆ ಎಂದೇ ಹೇಳಬೇಕು. ಏಕೆಂದರೆ ಎಬೋ­ಲಾ­­ವನ್ನು ಹಬ್ಬಿಸುವುದೂ ಸುಲಭವಲ್ಲ; ನಿಯಂ­ತ್ರ­ಣದಲ್ಲಿ ಇಡುವುದೂ ದುಬಾರಿಯ ಸಂಗತಿ.

ಸಂಪರ್ಕ ಸಾಧನಗಳಿಂದಾಗಿ ಇಡೀ ವಿಶ್ವವೇ ಒಂದು ಹಳ್ಳಿಯಾಗಿದೆ ಎನ್ನುವಾಗ ಹಳ್ಳಿಯ ಸೋಂಕು ವಿಶ್ವಕ್ಕೆ ಹಬ್ಬದೇ ಇದ್ದೀತೆ? ಒಮ್ಮೆ ಎಬೋಲಾ ಹಬ್ಬಿದರೆ ಸರಿಯಾದ ಸಮಯದಲ್ಲಿ ಸರಳ ಶುಶ್ರೂಷೆ ಸಿಕ್ಕರೂ ರೋಗಿ ಬಚಾ­ವಾಗುತ್ತಾನೆ. ಹಿಂದುಳಿದ ದೇಶಗಳ ಹಳ್ಳಿಗಳಲ್ಲಿ ಅದೂ ಸಿಗುವುದಿಲ್ಲ. ನಗರಗಳ ಆಸ್ಪತ್ರೆಗಳೆಲ್ಲ ಹೈಟೆಕ್‌ಗಳಾಗಿ ಕೈಗೆಟುಕದಂತಾಗುತ್ತಿವೆ. 

ಹಾಗೆಂದು ಸರ್ಕಾರಗಳು ಕೈಕಟ್ಟಿ ಕೂರು­ವು­ದಿಲ್ಲ. ಭಾರತದಲ್ಲಂತೂ ಪ್ರತಿದಿನದ ೯೫೦ ಕ್ಷಯ­ರೋ­ಗಿಗಳ ಸಾವಿನ ಸದ್ದಿಗಿಂತ ಎಬೋಲಾ ಗದ್ದಲ ಜೋರಾ­ಗುವಂತಿದೆ. ಹಿಂದೆ ಹಂದಿಜ್ವರದ ದಿಗಿಲು ಮುಗಿಲು ಮುಟ್ಟಿದಾಗ ದೂರದಿಂದಲೇ ಜ್ವರ­ವನ್ನು ಗುರುತಿಸಬಲ್ಲ ದುಬಾರಿ ಯಂತ್ರಗಳನ್ನು ಕರ್ನಾ­ಟಕ ಸರ್ಕಾರ ಖರೀದಿಸಿತ್ತು. ಆ ಯಂತ್ರ­ಗಳೆಲ್ಲ ಈಗ ಯಾವ ಸ್ಥಿತಿಯಲ್ಲಿವೆಯೊ? ಇದೀಗ ಅಂಥ ಇನ್ನಷ್ಟು ಯಂತ್ರಗಳನ್ನು ಮಾರುವ ಏಜೆನ್ಸಿ­ಯೊಂದರ ಬಗ್ಗೆ ಹೀಗೆ ಕತೆ ಕಟ್ಟಬಹುದು: ನೈಜೀ­ರಿಯಾದಿಂದ ಹೊರಟ ಕೆಲವು ಪ್ರಯಾಣಿಕರು ಈ ಏಜೆನ್ಸಿಯಿಂದ ಹಣ ಪಡೆದು, ತಮಗೆ ಸಣ್ಣ ಜ್ವರ ಇದೆ­ಯೆಂದು ವಿಮಾನದಲ್ಲಿ ಘೋಷಿಸಬೇಕು.

ಎದ್ವೋ ಬಿದ್ವೋ ಎಂಬ ತರಾತುರಿಯಲ್ಲಿ ಅತ್ಯುಗ್ರ ಭದ್ರ­ತೆಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಿ ಮಾಧ್ಯ­ಮಗಳ ಮೂಲಕ ಸಮಾಜಕ್ಕೆ ನಡುಕ ಹುಟ್ಟಿಸ­ಬೇಕು. ಸರ್ಕಾರ ಅದೆಷ್ಟೊ ಕೋಟಿ ಹಣ ಸುರಿದು ಹೊಸ ಸಲಕರಣೆ, ಕೈಗವಸು, ಮೈಗವಚ, ಕನ್ನಡಕ, ಶಿರ­ಸ್ತ್ರಾಣಗಳ ಕಂತೆ ಕಂತೆಯನ್ನು ಖರೀದಿಸಿ ಇಡ­ಬೇಕು. ಬಳಸಿದ ತಕ್ಷಣ ಅವುಗಳನ್ನು ಸುಡಲೆಂದು ಇಲೆಕ್ಟ್ರಿಕ್ ಸುಡುಗೂಡುಗಳನ್ನೂ ಖರೀದಿಸಬೇಕು.  
ಅಂತೂ ಎಬೋಲಾ ಹಬ್ಬ ಬಂದಿದೆ. ಭಯದ ಮಾರುಕಟ್ಟೆಯಲ್ಲಿ ಈಗ ಸಂತೆಯ ಸಮಯ.

     ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT