ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಜಿ-ಎಂಸಿ2143ಸಿಬಿ ತೃಪ್ತಿ ನೀಡುವ ಓವನ್

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಮೈಕ್ರೋವೇವ್ ಓವನ್ ಈಗ ಎಲ್ಲರ ಮನೆಗಳಲ್ಲೂ ಸರ್ವೇಸಾಮಾನ್ಯವಾಗಿದೆ. ಮೈಕ್ರೋವೇವ್ ಓವನ್‌ಗಳಲ್ಲಿ ಪ್ರಮುಖವಾಗಿ ಮೂರು ವಿಧ. ಅವುಗಳೆಂದರೆ ಸೋಲೊ ಅಥವಾ ಸರಳ ಓವನ್, ಗ್ರಿಲ್ ಇರುವವು ಮತ್ತು ಕೊನೆಯದಾಗಿ ಕನ್ವೆಕ್ಷನ್ ಓವನ್‌ಗಳು. ಈ ಮೂರೂ ನಮೂನೆಯ ಓವನ್‌ಗಳ ಬಗ್ಗೆ ವಿವರವಾಗಿ ಇದೇ ಅಂಕಣದಲ್ಲಿ ಬರೆಯಲಾಗಿತ್ತು (ಜೂನ್ 12, 2014).

ತಮಗೆ ಅಗತ್ಯವಿರಲಿ, ಇಲ್ಲದಿರಲಿ ಬಹುಮಂದಿ ಕೊಂಡುಕೊಳ್ಳುತ್ತಿರುವುದು ಮೂರನೆಯ ನಮೂನೆಯವು ಅಂದರೆ  ಕನ್ವೆಕ್ಷನ್ ಓವನ್‌ಗಳು. ಯಾಕೆಂದರೆ ಈ ನಮೂನೆಯ ಓವನ್‌ಗಳಲ್ಲಿ ಇನ್ನುಳಿದ ಎರಡು ನಮೂನೆಗಳೂ ಅಡಕವಾಗಿವೆ. ಅಂದರೆ ಕನ್ವೆಕ್ಷನ್‌ನ ಸವಲತ್ತುಗಳು ಅಗತ್ಯವಿಲ್ಲದಿದ್ದಾಗ ಸಾಮಾನ್ಯ ಮೈಕ್ರೋವೇವ್ ಓವನ್ ರೀತಿಯಲ್ಲಿ ಇದನ್ನು ಬಳಸಬಹುದು. ಉದಾಹರಣೆಗೆ ಅಡುಗೆಯನ್ನು ಬಿಸಿ ಮಾಡುವುದು, ಹಪ್ಪಳ ಸುಟ್ಟುಹಾಕುವುದು, ಇತ್ಯಾದಿ. ಈ ಸಂಚಿಕೆಯಲ್ಲಿ ಒಂದು ಕನ್ವೆಕ್ಷನ್ ಓವನ್‌ನ ವಿಮರ್ಶೆ ಮಾಡಲಾಗುತ್ತಿದೆ. ಅದುವೇ ಎಲ್‌ಜಿ-ಎಂಸಿ2143ಸಿಬಿ ಓವನ್ (LG MC2143CB) .

ಗುಣವೈಶಿಷ್ಟ್ಯಗಳು
ಕನ್ವೆಕ್ಷನ್ ನಮೂನೆ, 21 ಲೀ. ಗಾತ್ರ, ತುಕ್ಕುರಹಿತ ಉಕ್ಕಿನಿಂದ ಮಾಡಿದ ಒಳಭಾಗ, ನಯವಾದ ಒತ್ತುಗುಂಡಿಗಳಿಂದ ಕೂಡಿದ ನಿಯಂತ್ರಕ, 76 ನಮೂನೆಯ ಅಡುಗೆಗಳ ಆಯ್ಕೆ, 48 ಭಾರತೀಯ ಅಡುಗೆಗಳ ಆಯ್ಕೆ, 2450 ಮೆಗಾಹರ್ಟ್ಸ್  ಸೂಕ್ಷ್ಮ (ಮೈಕ್ರೋವೇವ್) ತರಂಗಗಳು, ಗರಿಷ್ಠ 800 ವಾಟ್ಸ್ ಮೈಕ್ರೋವೇವ್ ಶಕ್ತಿ, 1150 ವಾಟ್ಸ್ ಗ್ರಿಲ್, 1860 ರಿಂದ 2400 ವಾಟ್ಸ್ ಕನ್ವೆಕ್ಷನ್, 5 ಹಂತಗಳ ಮೈಕ್ರೋವೇವ್ ಶಕ್ತಿ, 475x285x460 ಮಿ.ಮೀ. ಗಾತ್ರ, ಕಪ್ಪು ಬಣ್ಣ, ಇತ್ಯಾದಿ. ಮಾರುಕಟ್ಟೆ ಬೆಲೆ ಸುಮಾರು ₹10,300 ರಿಂದ 11,800. ನಿಗದಿತ ಬೆಲೆ ₹12,190.

ಕನ್ವೆಕ್ಷನ್ ನಮೂನೆಯ ಓವನ್ ಆಗಿರುವುದರಿಂದ ಬಿಸಿ ಮಾಡಲು ಬಳಸುವ ವಿದ್ಯುತ್ ಕಾಯಿಲ್ (ಗ್ರಿಲ್) ಜೊತೆ ಗಾಳಿಯನ್ನು ಬೀಸಲು ಫ್ಯಾನ್ ಇದೆ. ಈ ಫ್ಯಾನ್ ಬೀಸಿ ಬಿಸಿ ಗಾಳಿಯನ್ನು ಎಲ್ಲ ಕಡೆ ಸಮಾನವಾಗಿ ಪಸರಿಸಿ ಆಹಾರವು ಎಲ್ಲ ಬದಿಗಳಲ್ಲೂ ಸಮಾನವಾಗಿ ಬೇಯುವಂತೆ ಮಾಡುತ್ತದೆ. ಗ್ರಿಲ್ ನಮೂನೆಯಲ್ಲಿ ಆಹಾರದ ಮೇಲ್ಭಾಗ ಮಾತ್ರ ಸುಡುತ್ತದೆ. ಇದು ಕನ್ವೆಕ್ಷನ್ ನಮೂನೆ ಆಗಿರುವುದರಿಂದ ಆಹಾರವು ಎಲ್ಲ ಬದಿಗಳಲ್ಲೂ ಸುಡುತ್ತದೆ. ಇದು ಬೇಕಿಂಗ್‌ಗೆ ತುಂಬ ಸೂಕ್ತ.

ಇದರಲ್ಲಿ ತಾಪಮಾನವನ್ನು ನಿಯಂತ್ರಿಸಲು ಥರ್ಮೋಸ್ಟ್ಯಾಟ್ ಇದೆ. ಅದನ್ನು ಬಳಸಿ ಓವನ್ ಒಳಗಿನ ತಾಪಮಾನ ಇಂತಿಷ್ಟೇ ಇರಬೇಕು ಎಂದು ನಿಯಂತ್ರಿಸಬಹುದು. ಮೊದಲ ಇಂತಿಷ್ಟು ಸಮಯ ತಾಪಮಾನ ಇಷ್ಟಿರಬೇಕು, ನಂತರ ಇಂತಿಷ್ಟು ಸಮಯ ತಾಪಮಾನ ಇಂತಿಷ್ಟಿರಬೇಕು ಎಂದೆಲ್ಲ ನಿಯಂತ್ರಣ ಮಾಡಬಹುದು.

ಗ್ಯಾಸ್ ಬಳಸಿ ಅಡುಗೆ ಮಾಡುವಾಗ ಅಲ್ಲೇ ನಿಂತುಕೊಂಡು ತಾಪಮಾನ ನಿಯಂತ್ರಣ ಮಾಡುತ್ತಿರಬೇಕು, ಆಹಾರವನ್ನು ತೊಳಸುತ್ತಿರಬೇಕು- ಈ ಎಲ್ಲ ಸಮಸ್ಯೆಗಳು ಮೈಕ್ರೋವೇವ್ ಓವನ್ ಬಳಸಿ ಮಾಡುವ ಅಡುಗೆಯಲ್ಲಿಲ್ಲ. ಎಲ್ಲ ಆಯ್ಕೆಗಳನ್ನು ನಿಯಂತ್ರಣ ಫಲಕ ಬಳಸಿ ನಮೂದಿಸಿ ಪ್ರಾರಂಭದ ಬಟನ್ ಒತ್ತಿದರೆ ಮುಗಿಯಿತು. ಬೇಕಾದ ರೀತಿಯಲ್ಲಿ ತಾಪಮಾನವನ್ನು ನಿಯಂತ್ರಿಸಿ ಅದುವೇ ಅಡುಗೆ ಮಾಡುತ್ತದೆ. ಕೇಕ್ ಮಾಡಲು ಇಂತಹ ಆಯ್ಕೆಗಳ ಅಗತ್ಯವಿದೆ.

24.5 ಸೆ.ಮೀ ಗಾತ್ರದ ಗಾಜಿನ ತಿರುಗುವ ತಟ್ಟೆ ಇದೆ. ಅದನ್ನು ಇಡಲು ಅಂದರೆ ತಿರುಗಲು ಅನುವು ಮಾಡಿಕೊಡಲು ಚಕ್ರಗಳಿವೆ. ಇವು ಸಾಮಾನ್ಯವಾಗಿ ಎಲ್ಲ ಓವನ್‌ಗಳಲ್ಲೂ ಇರುವಂಥವು. ಸಾಮಾನ್ಯವಾಗಿ ಎಲ್ಲ ನಮೂನೆಯ ಅಡುಗೆಗಳಿಗೆ ಈ ಗಾಜಿನ ತಟ್ಟೆ ಬೇಕಾಗುತ್ತದೆ. ಅದರ ಮೇಲೆ ಇಟ್ಟು ಹಪ್ಪಳ ಸುಡಲು ಒಂದು ಜಾಲರಿ ಮಾದರಿಯ ಪ್ಲಾಸ್ಟಿಕ್‌ನ ಸಾಧನವನ್ನೂ ನೀಡಿದ್ದಾರೆ. ಸರಿಯಾದ ಸಮಯ ನಿಗದಿ ಮಾಡಿದರೆ ಹಪ್ಪಳವನ್ನು ಸೀದುಹೋಗದಂತೆ ಸುಂದರವಾಗಿ ಸುಡಬಹುದು.

ಇದರ ಮೈಕ್ರೋವೇವ್ ಶಕ್ತಿಯನ್ನು ಐದು ಹಂತಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ನೀರು ಕುದಿಸಬೇಕಾದರೆ ಪೂರ್ತಿ ಶಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾವ ಅಡುಗೆಗೆ ಯಾವ ಶಕ್ತಿಯ ಮಟ್ಟ ಸೂಕ್ತ ಎಂದು ಅವರು ನೀಡಿರುವ ಕೈಪಿಡಿಯಲ್ಲಿ ವಿವರಿಸಲಾಗಿದೆ. ಶಕ್ತಿಯ ಐದು ಹಂತಗಳು - 800, 640, 480, 320 ಮತ್ತು 160 ವಾಟ್‌ಗಳು.

ಕಡಿಮೆ ಎತ್ತರದ ಒಂದು ಮತ್ತು ಹೆಚ್ಚು ಎತ್ತರದ ಇನ್ನೊಂದು ರ್‍್ಯಾಕ್ ನೀಡಿದ್ದಾರೆ. ಇವನ್ನು ಮೈಕ್ರೋವೇವ್ ಜೊತೆ ಬಳಸಬಾರದು. ಯಾಕೆಂದರೆ ಅವನ್ನು ಉಕ್ಕಿನಿಂದ ತಯಾರಿಸಲಾಗಿದೆ. ಗ್ರಿಲ್ ಮತ್ತು ಕನ್ವೆಕ್ಷನ್ ಸಂದರ್ಭಗಳಲ್ಲಿ ಮಾತ್ರ ಇವನ್ನು ಬಳಸಬೇಕು. ಕೇಕ್ ಮಾಡಲು ಇವು ಅಗತ್ಯ. ಜೊತೆಗೆ ಮೈಕ್ರೋವೇವ್ ಓವನ್‌ ನಲ್ಲಿ ಇಡಬಹುದಾದ ಎರಡು ಪಾತ್ರೆಗಳು ಹಾಗೂ ಇಡ್ಲಿ ಸ್ಟ್ಯಾಂಡ್ ನೀಡಿದ್ದಾರೆ. ನಾವು ಇದುತನಕ ಅವುಗಳನ್ನು ಬಳಸಿಲ್ಲ.

ಮೈಕ್ರೋ ವೇವ್ ಓವನ್ ಅಡುಗೆಯ ತರಗತಿಗಳನ್ನು ಕಂಪೆನಿಯವರು ನಡೆಸುತ್ತಿರುತ್ತಾರೆ. ಅಂತಹ ಮೂರು ತರಗತಿಗಳಿಗೆ ಉಚಿತವಾಗಿ ಹಾಜರಾಗಲು ಕೂಪನ್ ನೀಡಿದ್ದಾರೆ. ಅವನ್ನೂ ಇನ್ನೂ ಬಳಸಿಲ್ಲ. ಇದುತನಕ ಚೆನ್ನಾಗಿ ಕೆಲಸ ಮಾಡುತ್ತಿದೆ. ನನ್ನ ಸ್ನೇಹಿತರೊಬ್ಬರ ಮನೆಯಲ್ಲಿ ಇದೇ ಮಾದರಿಯ ಓವನ್ ಸಮಾರು ಎರಡು ವರ್ಷಗಳಿಂದ ಯಾವುದೇ ತೊಂದರೆಯಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಮೋಸವಿಲ್ಲ ಎನ್ನಬಹುದಾದ ಓವನ್ ಇದು.

ಇದರ ಜೊತೆ ನೀಡಿರುವ ಕೈಪಿಡಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರವಿದೆ. ಕನ್ನಡದಲ್ಲಿ ಇಲ್ಲ. ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಪ್ರೆಸ್ಟೀಜ್ ಕುಕ್ಕರ್ ಜೊತೆ ನೀಡಿದ ಕೈಪಿಡಿ ಕನ್ನಡದಲ್ಲಿತ್ತು ಎಂದು ನನ್ನ ನೆನಪು. ಆದರೆ ಇತ್ತೀಚೆಗೆ ಬಹುತೇಕ ಕಂಪೆನಿಗಳು ತಮ್ಮ ಕೈಪಿಡಿಗಳನ್ನು ಇಂಗ್ಲಿಷಿನಲ್ಲಿ ಮಾತ್ರ ಅಥವಾ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ನೀಡುತ್ತಿದ್ದಾರೆ. ಕನ್ನಡದಲ್ಲೂ ನೀಡಿ ಎಂದು ದಬಾಯಿಸಿ ಕೇಳದ ಕನ್ನಡಿಗರೇ ಈ ದುರವಸ್ಥೆಗೆ ಕಾರಣ.

ಪದದ ಸರಿಯಾದ ಉಚ್ಚಾರ ‘ಓವನ್’ ಅಲ್ಲ, ಅದು ‘ಅವನ್’ ಆಗಬೇಕು. ಆದರೆ ಭಾರತದಲ್ಲಿ ಎಲ್ಲರೂ ಓವನ್ ಎಂದೇ ಹೇಳುವುದರಿಂದ, ಅಂಗಡಿಯಲ್ಲಿ ಹೋಗಿ ಅವನ್ ಎಂದು ಕೇಳಿದರೆ ಅಂಗಡಿಯಾತನಿಗೆ ಅರ್ಥವಾಗುವ ಸಾಧ್ಯತೆ ಇಲ್ಲದಿರುವುದರಿಂದ ಓವನ್ ಎಂದೇ ಬಳಸಿದ್ದೇನೆ.

ವಾರದ ಆಪ್
ವಿವೇಕ ವಾಣಿ

ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮ ದಿನ. ಸ್ವಾಮಿ ವಿವೇಕಾನಂದರ ಪ್ರವಚನಗಳು, ಪುಸ್ತಕಗಳು, ಬೋಧನೆಗಳು ಹಲವು ಉಪಯುಕ್ತ ಸಂದೇಶ ಗಳಿಂದ ಕೂಡಿವೆ. ದೈನಂದಿನ ಜೀವನಕ್ಕೆ ಅಗತ್ಯವಾದ, ದುಃಖಿತ ಮನಸ್ಸಿಗೆ ಉತ್ಸಾಹ ನೀಡುವ, ಹೋರಾಡಲು ಹುಮ್ಮಸ್ಸನ್ನು ನೀಡುವ ಅವರ ವಾಣಿಗಳು ಎಂದೆಂದಿಗೂ ಪ್ರಸ್ತುತ. ಅವರು ಹೊಸತೇನನ್ನೂ ಹೇಳಿರಲಿಲ್ಲ. ಉಪನಿಷತ್ತು, ಭಗವದ್ಗೀತೆಗಳಲ್ಲಿ ಹೇಳಿದುದನ್ನೇ ಮತ್ತೊಮ್ಮೆ ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಹೇಳಿದ್ದಾರೆ.

ಈ ವಿವೇಕ ವಾಣಿ ಕಿರುತಂತ್ರಾಂಶದಲ್ಲಿ (Viveka Vani) ಅವರ 155 ಸೂಕ್ತಿಗಳಿವೆ. ಜೊತೆಗೆ ಅವರು ಶಿಕಾಗೋ ನಗರದಲ್ಲಿ ಮಾಡಿದ ವಿಶ್ವವಿಖ್ಯಾತ ಭಾಷಣವಿದೆ. ಎಲ್ಲವೂ ಕನ್ನಡದಲ್ಲಿದೆ. ಆದರೆ ಬೇಸರದ ಸಂಗತಿಯೆಂದರೆ ಇದರಲ್ಲಿ ಬಳಸಿದ ಕನ್ನಡದಲ್ಲಿ ಬೆರಳಚ್ಚಿನ ತಪ್ಪುಗಳು ತುಂಬ ಇವೆ. ಈ ತಪ್ಪುಗಳನ್ನು ಸರಿಪಡಿಸಿದರೆ ಇದು ಒಳ್ಳೆಯ ಕಿರುತಂತ್ರಾಂಶ ಆಗಬಹುದು.

ಗ್ಯಾಜೆಟ್ ಸುದ್ದಿ
ಜಾದೂ ಯುಎಸ್‌ಬಿ ಡ್ರೈವ್
ಯುಎಸ್‌ಬಿ ಡ್ರೈವ್ ಯಾರಿಗೆ ಗೊತ್ತಿಲ್ಲ? ಒಂದು ಕಾಲದಲ್ಲಿ ನಾವು ಜೊತೆಯಲ್ಲಿ ಚೀಲ ಇಟ್ಟುಕೊಳ್ಳುತ್ತಿದ್ದ ಮಾದರಿಯಲ್ಲಿ ಈಗ ನಾವು ಯುಎಸ್‌ಬಿ ಡ್ರೈವ್ ಇಟ್ಟುಕೊಳ್ಳುತ್ತಿದ್ದೇವೆ. ಈ ಡ್ರೈವ್‌ಗಳಲ್ಲಿ ಹಲವು ನಮೂನೆಗಳಿವೆ. ಒಂದು ಬದಿಯಲ್ಲಿ ದೊಡ್ಡ ಗಾತ್ರದ ಸಾಮಾನ್ಯ ಯುಎಸ್‌ಬಿ ಕನೆಕ್ಟರ್ ಮತ್ತು ಇನ್ನೊಂದು ಬದಿಯಲ್ಲಿ ಚಿಕ್ಕದಾದ, ಮೊಬೈಲ್ ಫೋನ್‌ಗಳಿಗೆ ಜೋಡಿಸಬಲ್ಲ, ಮೈಕ್ರೊಯುಎಸ್‌ಬಿ ಕನೆಕ್ಟರ್ ಇರುವ ಯುಎಸ್‌ಬಿ ಡ್ರೈವ್‌ಗಳ ಬಗ್ಗೆ ಇದೇ ಅಂಕಣದಲ್ಲಿ ತಿಳಿಸಲಾಗಿತ್ತು.

ಮಾರ್ಚ್ ತಿಂಗಳ ಹೊತ್ತಿಗೆ ಇನ್ನೂ ಒಂದು ಹೊಸ ನಮೂನೆಯ ಯುಎಸ್‌ಬಿ ಡ್ರೈವ್ ಮಾರುಕಟ್ಟೆಗೆ ಬರಲಿದೆ. ಇದರ ಒಂದು ಬದಿಯಲ್ಲಿ ದೊಡ್ಡ ಮತ್ತು ಚಿಕ್ಕ ಎರಡೂ ನಮೂನೆಯ ಯುಎಸ್‌ಬಿ ಕನೆಕ್ಟರ್‌ಗಳಿರುತ್ತವೆ. ಅವು ಒಂದರ ಒಳಗೆ ಒಂದು ಅಡಗಿರುತ್ತವೆ. ಅಗತ್ಯಕ್ಕೆ ತಕ್ಕಂತೆ ದೊಡ್ಡ ಅಥವಾ ಚಿಕ್ಕ ಕನೆಕ್ಟರ್ ಬಳಸಬಹುದು. ಇನ್ನೊಂದು ಬದಿಯಲ್ಲಿ ಆಪಲ್ ಕಂಪೆನಿಯ ಐಓಎಸ್ ಬಳಸುವ ಸಾಧನಗಳಿಗೆ ಜೋಡಿಸಬಹುದಾದ ಲೈಟ್ನಿಂಗ್ ಕನೆಕ್ಟರ್ ಇರುತ್ತದೆ.

ಗ್ಯಾಜೆಟ್ ತರ್ಲೆ
ರಾಮಾಯಣ ಕಾಲದಲ್ಲಿ ಮೊಬೈಲ್ ಫೋನ್ ಇದ್ದಿದ್ದರೆ ಏನಾಗುತ್ತಿತ್ತು? ಲಕ್ಷ್ಮಣ ರಾಮನಿಗೆ ಮೊಬೈಲ್‌ನಲ್ಲಿ ಫೋನ್ ಮಾಡಿ ಕೇಳುತ್ತಿದ್ದ ‘ಅಣ್ಣ, ಅದೇನೋ ಬೊಬ್ಬೆ ಕೇಳಿತು. ಅಲ್ಲಿ ಏನಾಗುತ್ತಿದೆ?’ ಎಂದು.

ಗ್ಯಾಜೆಟ್ ಸಲಹೆ
ಶ್ರೀನಿವಾಸ ಮೂರ್ತಿಯವರ ಪ್ರಶ್ನೆ: ನನ್ನ ಬಜೆಟ್ `15 ರಿಂದ 25 ಸಾವಿರ. ಅದರಲ್ಲಿ ನನಗೆ ಚಿಕ್ಕ ಸಿನಿಮಾ ಮಾಡಬಹುದಾದ ಉತ್ತಮ ಪರಿಣತ (ಪ್ರೊಫೆಶನಲ್) ಗುಣಮಟ್ಟದ ಡಿಎಸ್ಎಲ್ಆರ್ ಕ್ಯಾಮೆರಾ ಕೊಳ್ಳಬೇಕು. ಅದು ಹೈಡೆಫಿನಿಶನ್ ಸಿನಿಮಾ ಶೂಟಿಂಗ್ ಮಾಡಬಲ್ಲುದಾಗಿರಬೇಕು. ಯಾವುದನ್ನು ಕೊಳ್ಳಬಹುದು?
ಉ: ನಿಮ್ಮ ಬಜೆಟ್‌ಗೆ ಉತ್ತಮ ಹೈಡೆಫಿನಿಶನ್ ಸಿನಿಮಾ ಚಿತ್ರೀಕರಣ ಮಾಡಬಲ್ಲ ಡಿಎಸ್ಎಲ್ಆರ್ ದೊರೆಯಲಾರದು. ನೀವು ನಿಕಾನ್ ಕೂಲ್‌ಪಿಕ್ಸ್ ಪಿ340 ಕೊಳ್ಳಬಹುದು. ಇದು ಡಿಎಸ್ಎಲ್ಆರ್ ಕ್ಯಾಮೆರಾ ಅಲ್ಲ. ಆದರೂ ಉತ್ತಮ ಹೈಡೆಫಿನಿಶನ್ ಸಿನಿಮಾ ಚಿತ್ರೀಕರಣ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT