ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಬ್ಯಾಟರಿ ಇದರ ಪ್ಲಸ್ ಪಾಯಿಂಟ್

Last Updated 10 ಫೆಬ್ರುವರಿ 2016, 19:48 IST
ಅಕ್ಷರ ಗಾತ್ರ

ಏಸುಸ್ ಕಂಪೆನಿ ಅತಿ ಕಡಿಮೆ ಬೆಲೆಯಿಂದ ಹಿಡಿದು ಸ್ವಲ್ಪ ದುಬಾರಿ ಎನ್ನಬಹುದಾದ ಬೆಲೆಯ ತನಕ ಎಲ್ಲ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿದೆ. ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಗಣನೀಯ ಭಾಗ ಅದರದ್ದಾಗಿದೆ. ಈ ಹಿಂದೆ ಇದೇ ಅಂಕಣದಲ್ಲಿ ಹಲವು ಮಾದರಿಯ ಏಸುಸ್ ಫೋನ್‌ಗಳ ವಿಮರ್ಶೆ ಪ್ರಕಟವಾಗಿತ್ತು. ಎಲ್ಲ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಗ್ಯಾಲಕ್ಸಿ ಎಂಬ ಹೆಸರಿನಿಂದ ಪ್ರಾರಂಭವಾಗುವ ಮಾದರಿಯಲ್ಲಿ ಏಸುಸ್‌ನವರ ಬಹುತೇಕ ಸ್ಮಾರ್ಟ್‌ಫೋನ್‌ಗಳು ಝೆನ್‌ಫೋನ್ ಹೆಸರಿನಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಈ ಸಲ ನಮ್ಮ ವಿಮರ್ಶಾನೋಟ ಏಸುಸ್ ಝೆನ್‌ಪೋನ್ ಮ್ಯಾಕ್ಸ್ (Asus Zenfone Max) ಕಡೆ.

ಗುಣವೈಶಿಷ್ಟ್ಯಗಳು : 1.2 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Snapdragon 410), 2+16 ಗಿಗಾಬೈಟ್ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಸೌಲಭ್ಯ, 720x1080 ಪಿಕ್ಸೆಲ್ ರೆಸೊಲೂಶನ್‌ನ 5.5 ಇಂಚು ಗಾತ್ರದ ಐಪಿಎಸ್ ಸ್ಪರ್ಶಸಂವೇದಿ ಪರದೆ, ಗೊರಿಲ್ಲ-4 ಗಾಜು, 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಸ್ವಂತೀ ಕ್ಯಾಮೆರಾ, ಪ್ರಾಥಮಿಕ ಕ್ಯಾಮೆರಾಕ್ಕೆ ಎಲ್‌ಇಡಿ ಫ್ಲಾಶ್‌, 3ಜಿ ಮತ್ತು 2ಜಿ/3ಜಿ/4ಜಿ ಎರಡು ಮೈಕ್ರೋಸಿಮ್, ಯುಎಸ್‌ಬಿ ಓಟಿಜಿ, 77.5 x 156 x 10.55 ಮಿ.ಮೀ. ಗಾತ್ರ, 202 ಗ್ರಾಂ ತೂಕ, ವೈಫೈ, ಬ್ಲೂಟೂತ್, ಜಿಪಿಎಸ್, ಎಫ್‌ಎಂ ರೇಡಿಯೊ, ಎನ್‌ಎಫ್‌ಸಿ, 5000 mAh ಶಕ್ತಿಯ ತೆಗೆಯಲಸಾಧ್ಯವಾದ ಬ್ಯಾಟರಿ, ಆಂಡ್ರಾಯ್ಡ್‌ 5.0.2, ಝೆನ್‌ಯುಐ, ಇತ್ಯಾದಿ. ನಿಗದಿತ ಬೆಲೆ ₹10 ಸಾವಿರ.

ಇದರ ರಚನೆ ಮತ್ತು ವಿನ್ಯಾಸ ಬಹುಮಟ್ಟಿಗೆ ಇತರೆ ಝೆನ್‌ಫೋನ್-2 ಫೋನ್‌ಗಳಂತೆಯೇ ಇದೆ. ಹಿಂಭಾಗ ಬದಿಗಳಲ್ಲಿ ತೆಳ್ಳಗಿದ್ದು ಮಧ್ಯದಲ್ಲಿ ದಪ್ಪಗಿದೆ. ಅಂದರೆ ಬಹುಮಟ್ಟಿಗೆ ತಲೆದಿಂಬಿನಂತೆ ಎನ್ನಬಹುದು. ಹಿಂಭಾಗದ ಪ್ಲಾಸ್ಟಿಕ್ ಕವಚ ತೆಗೆಯಬಹುದು. ಆಗ ಮೈಕ್ರೊಸಿಮ್ ಮತ್ತು ಮೈಕ್ರೊಎಸ್‌ಡಿ ಕಾರ್ಡ್‌ಗಳನ್ನು ಹಾಕುವ ಜಾಗ ಕಂಡುಬರುತ್ತದೆ. ಆದರೂ ಬ್ಯಾಟರಿ ಮಾತ್ರ ತೆಗೆಯಲು ಸಾಧ್ಯವಿಲ್ಲ. ಹಿಂದಿನ ಕವಚ ಸ್ವಲ್ಪ ಚರ್ಮದ ಮಾದರಿಯಲ್ಲಿದೆ. ಅಂದರೆ ದೊರಗಾಗಿದೆ. ಇದರಿಂದಾಗಿ ಇದರ ಗಾತ್ರ ದೊಡ್ಡದಿದ್ದರೂ ಕೈಯಿಂದ ಜಾರಿ ಬೀಳುವ ಭಯವಿಲ್ಲ.

ಬಲಭಾಗದಲ್ಲಿ ವಾಲ್ಯೂಮ್ ಮತ್ತು ಆನ್/ಆಫ್ ಬಟನ್‌ಗಳಿವೆ. ಮೇಲುಗಡೆ 3.5 ಮಿ.ಮೀ ಇಯರ್‌ಫೋನ್ ಕಿಂಡಿ ಇದೆ. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿಯಿದೆ. ಫೋನನ್ನು ನಿದ್ದೆಯಿಂದ ಎಬ್ಬಿಸಲು ಪರದೆಯ ಮೇಲೆ ಎರಡು ಸಲ ಕುಟ್ಟಿದರೆ ಸಾಕು. ಅಂದರೆ ಇದರ ಆನ್/ಆಫ್ ಬಟನ್‌ನ ಬಳಕೆ ಕಡಿಮೆ ಎಂದು ಹೇಳಬಹುದು. ಈ ಎಲ್ಲ ಝೆನ್‌ಫೋನ್‌ಗಳ ಒಂದು ಪ್ರಮುಖ ದೋಷವೆಂದರೆ ದೇಹದ ಗಾತ್ರಕ್ಕೂ ಪರದೆಯ ಗಾತ್ರಕ್ಕೂ ಇರುವ ಅನುಪಾತ.

ಫೋನಿನ ಮುಂಭಾಗದಲ್ಲಿ ಮೇಲೆ ಮತ್ತು ಕೆಳಗೆ ಒಟ್ಟು ಸೇರಿ ಸುಮಾರು 35 ಮಿ.ಮೀ.ಯಷ್ಟು ಜಾಗ ಪರದೆಗಿಂತ ಹೆಚ್ಚಿಗೆ ಇದೆ. ಇದನ್ನು ಸುಮಾರು 20 ಮಿ.ಮೀ.ಗೆ ಇಳಿಸಬಹುದು ಎಂಬುದು ನನ್ನ ಅಭಿಪ್ರಾಯ. ಹಾಗೆ ಮಾಡಿದರೆ ಫೋನಿನ ಗಾತ್ರ ಗಣನೀಯವಾಗಿ ಕಡಿಮೆಯಾಗುತ್ತದೆ. ಇದು ಮಧ್ಯಮ ಕಡಿಮೆ ಬೆಲೆಯ ಫೋನ್. ಅಂತಹ ಅದ್ಭುತ ಫೋನು ಅಲ್ಲ. ನಾವು ನೀಡುವ 10 ಸಾವಿರ ರೂಪಾಯಿಗೆ ಇದು ತಕ್ಕುದಾಗಿದೆಯೇ ಎಂಬುದನ್ನಷ್ಟೇ ನಾವು ಪರಿಶೀಲಿಸಬೇಕು.

ಕೆಲಸದ ವೇಗ ಮತ್ತು ಗುಣಮಟ್ಟ ಅಷ್ಟಕ್ಕಷ್ಟೇ. ಅತಿ ವೇಗದ ಆಟ, ಮೂರು ಆಯಾಮಗಳ ಆಟ ಮತ್ತು ಕಿರುತಂತ್ರಾಂಶಗಳ ಬಳಕೆಯ ಅನುಭವ ಪರವಾಗಿಲ್ಲ. ಅದ್ಭುತ ಎನ್ನುವಂತಿಲ್ಲ. ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೊಗಳು ಸರಿಯಾಗಿ ಪ್ಲೇ ಆಗುತ್ತವೆ. 4k ವಿಡಿಯೊ ಪ್ಲೇ ಆಗುವುದಿಲ್ಲ. ಹಲವು ಕಿರುತಂತ್ರಾಂಶಗಳನ್ನು ಏಕಕಾಲಕ್ಕೆ ತೆರೆದರೆ ಇದು ಕೆಲವೊಮ್ಮ ಸರಿಯಾಗಿ ಕೆಲಸ ಮಾಡಲು ಕಷ್ಟಪಡುತ್ತದೆ.

ಕ್ಯಾಮೆರಾ ಪರವಾಗಿಲ್ಲ. ಇತರೆ ಕೆಲವು ಏಸುಸ್ ಝೆನ್‌ಫೋನ್‌ಗಳಲ್ಲಿ ಇದೇ ಕ್ಯಾಮೆರಾ ಇದೆ. ಕ್ಯಾಮೆರಾದ ಕಿರುತಂತ್ರಾಂಶದಲ್ಲಿ ಹಲವು ನಮೂನೆಯ ಆಯ್ಕೆಗಳಿವೆ. ಮ್ಯಾನ್ಯುವಲ್ ವಿಧಾನ ಕೂಡ ಇದೆ.   ಅವುಗಳ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿದೆ. ಸ್ಥಿರ ಚಿತ್ರ, ವಿಡಿಯೊ ಚಿತ್ರೀಕರಣ, ಹಲವು ನಮೂನೆಯಲ್ಲಿ ಫೋಟೊಗ್ರಫಿ ಎಲ್ಲ ನೀಡುವ ಹಣಕ್ಕೆ ತೃಪ್ತಿದಾಯಕವಾಗಿವೆ. ಹಲವು ಫೋಟೊಗಳನ್ನು ಒಂದರ ನಂತರ ಒಂದರಂತೆ ಅತಿ ವೇಗವಾಗಿ ಫೋಟೊ ತೆಗೆಯಬೇಕಿದ್ದರೆ ಈ ಫೋನ್ ನಿಮಗಲ್ಲ. ಅಷ್ಟು ವೇಗವಾಗಿ ಕೆಲಸ ಮಾಡಲು ಇದರಿಂದ ಸಾಧ್ಯವಾಗುವುದಿಲ್ಲ.

ಇದರ ಆಡಿಯೊ ಇಂಜಿನ್ ಪರವಾಗಿಲ್ಲ. ತುಂಬ ಮೇಲ್ಮಟ್ಟದ್ದು ಎಂದು ಹೇಳುವಂತಿಲ್ಲದಿದ್ದರೂ ಒಂದು ಮಟ್ಟಿಗೆ ಚೆನ್ನಾಗಿದ್ದು, ತೃಪ್ತಿದಾಯಕವಾಗಿದೆ ಎನ್ನಬಹುದು. ಎಫ್‌ಎಂ ರೇಡಿಯೊ ಇದೆ. ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿರುವ ಯಾವುದಾದರೂ ಉತ್ತಮ ಇಯರ್‌ಫೋನ್ ಜೋಡಿಸಿದರೆ ತೃಪ್ತಿದಾಯಕ ಸಂಗೀತ ಆಲಿಸುವ ಅನುಭವ ನಿಮ್ಮದಾಗುವುದು.

ಈ ಫೋನಿನ ನಿಜವಾದ ಹೆಚ್ಚುಗಾರಿಕೆ ಇರುವುದು ಇದರ ಶಕ್ತಿಶಾಲಿಯಾದ ಬ್ಯಾಟರಿಯಲ್ಲಿ. ಅದು 5000 mAh ಶಕ್ತಿಯದು. ಆದರೆ ಬೇಸರದ ಸಂಗತಿಯೆಂದರೆ ಈ ಫೋನಿನ ಜೋತೆ ನೀಡಿರುವ ಚಾರ್ಜರ್ ಕೇವಲ 1A ಕರೆಂಟ್ ಮಾತ್ರ ನೀಡಬಲ್ಲುದು. ಅಂದರೆ ಚಾರ್ಜ್ ಮಾಡಲು ತುಂಬ ಸಮಯ ತೆಗೆದುಕೊಳ್ಳುತ್ತದೆ. ನಿಮ್ಮಲ್ಲಿ ಅಧಿಕ ಶಕ್ತಿಯ ಚಾರ್ಜರ್ ಇದ್ದರೆ ಅದನ್ನು ಬಳಸುವುದು ಸೂಕ್ತ.

ಆಂಡ್ರಾಯ್ಡ್‌ 5.0 ಆಧಾರಿತ ಫೋನ್ ಆಗಿರುವುದರಿಂದ ಕನ್ನಡದ ತೋರುವಿಕೆ (ರೆಂಡರಿಂಗ್) ಸರಿಯಾಗಿದೆ. ಅಷ್ಟು ಮಾತ್ರವಲ್ಲ. ಈ ಫೋನಿನಲ್ಲಿ ಕನ್ನಡದ ಸಂಪೂರ್ಣ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಜೊತೆಗೆ ಅವರದೇ ಕೀಲಿಮಣೆಯೂ ಇದೆ.  

ವಾರದ ಆ್ಯಪ್
ಪಾಸ್‌ಪೋರ್ಟ್‌ ಸೇವೆ : ಇತ್ತೀಚೆಗೆ ಪಾಸ್‌ಪೋರ್ಟ್ ಪಡೆಯುವುದನ್ನು ತುಂಬ ಕ್ರಮಬದ್ಧವಾಗಿಸಿದ್ದು ಯಾವುದೇ ಮಧ್ಯವರ್ತಿಯ ಅಗತ್ಯವಿಲ್ಲದೆ ಬೇಗನೆ ಪಡೆಯಬಹುದಾಗಿದೆ. ಪಾಸ್‌ಪೋರ್ಟ್ ಪಡೆಯುವ ಬಗ್ಗೆ ಎಲ್ಲ ವಿವರಗಳು, ಅರ್ಜಿಗಳು, ಆನ್‌ಲೈನ್‌ನಲ್ಲೇ ಅರ್ಜಿ ಹಾಕುವುದು, ನಿಮ್ಮ ಅರ್ಜಿಯ ಈಗಿನ ಸ್ಥಿತಿ, ಎಲ್ಲವನ್ನು ಅವರ ಜಾಲತಾಣದ (passportindia.gov.in) ಮೂಲಕ ಮಾಡಬಹುದು. ಈ ಜಾಲತಾಣಕ್ಕೆ ಒಂದು ಕಿರುತಂತ್ರಾಂಶವೂ ಇದೆ. ಅದು ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ mPassport Seva ಎಂದು ಹುಡುಕಬೇಕು.  

ಜಾಲತಾಣದ ಮೂಲಕ ಮಾಡಬಹುದಾದ ಹೆಚ್ಚಿನ ಕೆಲಸಗಳನ್ನು ಇದರ ಮೂಲಕವೂ ಮಾಡಬಹುದು. ಕೆಲವು ಆಯ್ಕೆಗಳಲ್ಲಿ ಮಾತ್ರ ವಾಪಸ್ಸು ಜಾಲತಾಣಕ್ಕೇ ನಿಮ್ಮನ್ನು ಇದು ಕರೆದೊಯ್ಯುತ್ತದೆ. ನಿಮ್ಮ ಅರ್ಜಿಯ ಈಗಿನ ಸ್ಥಿತಿಯನ್ನು ತಿಳಿಸಲು ಇದರಲ್ಲಿ ಆಯ್ಕೆಯಿದೆ. ಆದರೆ ಅದು ಕೆಲವೊಮ್ಮೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಅಂದ ಹಾಗೆ ಈ ಕಿರುತಂತ್ರಾಂಶವು ಆಪಲ್ ಐಫೋನ್, ಬ್ಲಾಕ್‌ಬೆರ್ರಿ ಮತ್ತು ವಿಂಡೋಸ್‌ಫೋನ್‌ಗಳಿಗೂ ಲಭ್ಯವಿದೆ.

ಗ್ಯಾಜೆಟ್ ಸುದ್ದಿ
ಮಡಚುವ ಹೆಲ್ಮೆಟ್ : ದ್ವಿಚಕ್ರ ವಾಹನದಲ್ಲಿ ಹಿಂದೆ ಕುಳಿತುಕೊಳ್ಳುವವರಿಗೂ ಹೆಲ್ಮೆಟ್ (ಶಿರಸ್ತ್ರಾಣ) ಕಡ್ಡಾಯ ಮಾಡಿದ್ದಾರೆ ತಾನೆ? ಇದು ಹಲವರಿಗೆ ತುಂಬ ತೊಂದರೆದಾಯಕವಾಗಿದೆ. ಹೆಂಡತಿ, ಮಗಳು, ತಂಗಿ, ತಮ್ಮ, ಇತ್ಯಾದಿ ಜನರನ್ನು ಒಂದು ಕಡೆ ಬಿಟ್ಟು ತಮ್ಮ ಕಚೇರಿಗೆ ಹೋಗುವವರಿಗೆ ಈ ಹೆಚ್ಚಿಗೆ ಹೆಲ್ಮೆಟ್ ಅನ್ನು ಎಲ್ಲಿ ಇಟ್ಟುಕೊಳ್ಳುವುದು ಎನ್ನುವ ಸಮಸ್ಯೆ. ಕೈಚೀಲದೊಳಗೆ ಹೆಲ್ಮೆಟ್ ಹಿಡಿಸುವಂತಿದ್ದರೆ ಒಳ್ಳೆಯದಲ್ಲವೇ? ಹಾಗಿದ್ದರೆ ಅದು ಮಡಚಬಲ್ಲ ಹೆಲ್ಮೆಟ್ ಆದರೆ ಸಾಧ್ಯ. ಹೌದು. ಮಡಚುವ ಹೆಲ್ಮೆಟ್ ಈಗ ಲಭ್ಯವಿದೆ.

ಅದನ್ನು ಮಡಚಿ ನೀವು ಕೈಚೀಲದೊಳಗೆ ಹಾಕಿಕೊಳ್ಳಬಹುದು. ಆದರೆ ಇದು ಸದ್ಯ ಭಾರತದಲ್ಲಿ ಲಭ್ಯವಿಲ್ಲ. ಭಾರತದಲ್ಲಿ ಇಂತಹ ಹೆಲ್ಮೆಟ್ ಯಾರಾದರೂ ತಯಾರಿಸುವ ತನಕ ಕಾಯಬೇಕು. ಈಗಲೇ ಬೇಕಿದ್ದರೆ ನೀವು ಇದನ್ನು ಆಮದು ಮಾಡಿಕೊಳ್ಳಬಹುದು. ಇದರ ಜಾಲತಾಣ www.overade.com.

ಗ್ಯಾಜೆಟ್ ಸಲಹೆ
ಪ್ರಶ್ನೆ: ನೀವು ಒನ್‌ಪ್ಲಸ್ ಎಕ್ಸ್ ಬಗ್ಗೆ ಬರೆಯುತ್ತ ಸೆರಾಮಿಕ್ ಮಾದರಿಯೂ ಇದೆ ಎಂದು ಬರೆದಿದ್ದಿರಿ. ಸೆರಾಮಿಕ್ ಮಾದರಿಯ ಫೋನ್ ಕೆಳಗೆ ಬಿದ್ದರೆ ಒಡೆಯುವುದಿಲ್ಲವೇ?

ಉ: ಸೆರಾಮಿಕ್ ಮಾದರಿಯೆಂದರೆ ಅದರ ಹಿಂಭಾಗದ ಕವಚಕ್ಕೆ ಸೆರಾಮಿಕ್ ಲೇಪನ ಇದೆ. ಅದು ವಿಶೇಷ ತಂತ್ರಜ್ಞಾನದ ಮೂಲಕ ತಯಾರಾದುದು. ಬಿದ್ದರೆ ಒಡೆಯುವುದಿಲ್ಲ.

ಗ್ಯಾಜೆಟ್ ತರ್ಲೆ
ಮಲಗಿಕೊಂಡು ಓದಲು ಕನ್ನಡಕ : ಮಲಗಿಕೊಂಡು ಓದುವ ಅಭ್ಯಾಸ ನಿಮಗಿದೆಯೇ? ಹಾಗೆ ಓದುವಾಗ ಕಣ್ಣಿನ ಮಟ್ಟಕ್ಕೆ, ಕಣ್ಣಿಗೆ ಶ್ರಮವಾಗದಂತೆ ಪುಸ್ತಕ ಹಿಡಿದು ಓದುವುದು ಕಷ್ಟ ತಾನೆ? ಮಲಗಿದಾಗ ಪುಸ್ತಕ ಹೊಟ್ಟೆಯ ಮೇಲಿರುತ್ತದೆ. ತಲೆ ದಿಂಬಿನ ಮೇಲಿರುತ್ತದೆ. ತಲೆಯನ್ನು ಎತ್ತದೇ, ಕಣ್ಣಿಗೆ ಶ್ರಮವಾಗದೆ ಓದಲು ಅನುವು ಮಾಡಿಕೊಡುವ ಕನ್ನಡಕ ತಯಾರಾಗಿದೆ. ಅದರಲ್ಲಿ ಪೆರಿಸ್ಕೋಪ್ ವಿಧಾನವನ್ನು ಅಳವಡಿಸಲಾಗಿದೆ. ಕನ್ನಡಕದಲ್ಲಿ ಗಾಜಿನ ಜಾಗದಲ್ಲಿ ಅಳವಡಿಸಲಾದ ಪಟ್ಟಕದ (ಪ್ರಿಸಂ) ಮೂಲಕ ಪುಸ್ತಕವನ್ನು ಕಣ್ಣಿಗೆ ಶ್ರಮವಿಲ್ಲದೆ ಓದಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT