ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯ ಜನ

Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನಾವು ನಮ್ಮ ಸುತ್ತಮುತ್ತಲಿನ ಪ್ರಪಂಚದಲ್ಲಿ ಆಗುವ ಅನ್ಯಾಯಗಳನ್ನು, ನೋಡಿ ನೋಡಿ ಒಳ್ಳೆಯದೂ ಇದೆ, ಒಳ್ಳೆಯವರೂ ಇದ್ದಾರೆ ಎನ್ನುವುದನ್ನು ನಂಬಲಾರದಂತಾಗಿದ್ದೇವೆ. ಗಮನಿಸಿ ನೋಡಿದರೆ ಇಂದೂ ಒಳ್ಳೆಯವರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಆದರೆ, ಕಡಿಮೆ ಸಂಖ್ಯೆಯ ದುಷ್ಟರ ಅಬ್ಬರದ ಕೋಲಾಹಲದಲ್ಲಿ ಒಳ್ಳೆಯವರ ಸಾತ್ವಿಕತೆ ಬೆಳಕಿಗೆ ಬರುವುದಿಲ್ಲ, ಎದ್ದು ತೋರುವುದಿಲ್ಲ. ಇದನ್ನು ಯೋಚಿಸು­ವಾಗ ನನಗೊಂದು ಘಟನೆ ನೆನಪಿಗೆ ಬಂದಿತು. ಕೆಲವರ್ಷಗಳ ಹಿಂದೆ ನಾನು ಬಾದಾಮಿಯಿಂದ ಬೆಳಗಾವಿಗೆ ಹೊರಟಿದ್ದೆ.

ಬಾದಾಮಿಯಿಂದ ಕಾರಿನಲ್ಲಿ ಹೊರಟ ನಾನು ಊರು ಮುಗಿಯುವಾಗ ಕಾರು ನಿಲ್ಲಿಸಿದೆ. ರಸ್ತೆಯ ಬದಿಯಲ್ಲಿದ್ದ ಹಣ್ಣಿನ ಅಂಗಡಿಯಿಂದ ಒಂದಿಷ್ಟು ಹಣ್ಣು ತೆಗೆದುಕೊಂಡೆ. ಹಣ ಕೊಟ್ಟು ಕಾರಿನ ಬಳಿಗೆ ಬರುವಾಗ ರಸ್ತೆಯ ಬದಿಯಲ್ಲಿ ನಾಲ್ಕಾರು ಜನರ ಗುಂಪು ನಿಂತದ್ದು ಕಂಡೆ. ಅವರೆಲ್ಲ ಚಿಂತೆಯಲ್ಲಿದ್ದಂತೆ ಕಂಡಿತು. ಅವರ ಮಧ್ಯೆ ಇದ್ದ ಹಿರಿಯರೊಬ್ಬರು ಅಳುತ್ತಿದ್ದರು. ಅಷ್ಟೇ ಅಲ್ಲ ಅವರು ಒಂದೇ ಸಮನೆ ನಡುಗುತ್ತಿದ್ದರು. ಅವರ ಕೈಗಳನ್ನು ಹಿಡಿದುಕೊಂಡು ಹೆಣ್ಣುಮಗಳೊಬ್ಬಳು ಸಮಾಧಾನ ಮಾಡುತ್ತಿದ್ದರು. ಅವರು ಯಾರಿಗೋ ಕಾಯುತ್ತಿದ್ದಂತೆ ತೋರಿತು. ನನ್ನಿಂದ ಏನಾದರೂ ಸಹಾಯವಾಗ­ಬಹುದೇ ಎಂದು ಕೇಳಿದೆ. ಅದಕ್ಕೇ ಆ ಹೆಣ್ಣುಮಗಳು, ‘ಹೌದ್ರಿ ಸರ್. ನಮ್ಮ ಮಾಮಾ ಕೊಲ್ಹಾರಕ್ಕೆ ಹೋಗಬೇಕು. ಅವರ ಮಗಳನ್ನು ವಿಜಾಪೂರ ಆಸ್ಪತ್ರೆಯಿಂದ ಮನೆಗೆ ಕರೆದು ತಂದಿದ್ದಾರೆ. ಆಕೆ ಸಂಜೆಯವರೆಗೂ ಬದುಕುವುದು ಅಸಾಧ್ಯವಂತೆ. ಈ ಸ್ಥಿತಿಯಲ್ಲಿ ಮಾಮಾ ಬಸ್ಸಿನಲ್ಲಿ ಹೋಗುವುದು ಸಾಧ್ಯವಿಲ್ಲ ಯಾವು­ದಾದರೂ ಟೆಂಪೊ ಗದ್ದನಕೇರಿಯವರೆಗೆ ಹೋಗಲು ಸಿಕ್ಕರೆ ಸಾಕು. ಅಲ್ಲಿಂದ ಮತ್ತೇನಾದರೂ ವಾಹನ ಹಿಡಿದು ಹೋಗುತ್ತೇವೆ ಎಂದು ಕಣ್ಣೀರು­ಗರೆದಳು.

ಹೇಗಿದ್ದರೂ ಕಾರಿನಲ್ಲಿ ನಾನೊಬ್ಬನೆ. ಆ ಮುದುಕರನ್ನು ಮತ್ತು ಹೆಣ್ಣುಮಗಳನ್ನು ಕಾರಿನಲ್ಲಿ ಹಿಂದೆ ಕೂಡ್ರಿಸಿ, ನಾನು ಮುಂದೆ ಕುಳಿತು ಹೊರಟೆ. ಗದ್ದನಕೇರಿ ಮುಟ್ಟುವವರೆಗೆ ಮುದುಕರು ತಮ್ಮ ಸ್ಥಿತಿಯನ್ನು ಹೇಳಿಕೊಂಡು ಅತ್ತರು. ಒಬ್ಬಳೇ ಮಗಳು ಅನಾರೋಗ್ಯದಿಂದ ವಿಜಾಪೂರ ಆಸ್ಪತ್ರೆ ಸೇರಿದ್ದಳು. ರೋಗ ಉಲ್ಬಣವಾಯಿತು. ಇನ್ನು ಚಿಕಿತ್ಸೆ ಪ್ರಯೋಜನವಿಲ್ಲವೆಂದು ಬೆಳಿಗ್ಗೆ ಅವಳನ್ನು ಆಸ್ಪತ್ರೆಯಿಂದ ಬಿಡಿಸಿಕೊಂಡು ಕೊಲ್ಹಾರದ ಮನೆಗೆ ಕರೆದು ತಂದಿದ್ದಾರೆ. ಸಾಯುವ ಮೊದಲು ಮಗಳ ಮುಖನೋಡುವ ಬಯಕೆ ಹಿರಿಯರಿಗೆ.

 ಗದ್ದನಕೇರಿ ಹತ್ತಿರ ಬಂತು. ನಾನು ಮುಂದೆ ನೇರ ರಸ್ತೆಯಲ್ಲಿ ಬೆಳಗಾವಿಗೆ ಹೋಗಬೇಕು. ಇವರು ಬಲಗಡೆಯ ದಾರಿಯಲ್ಲಿ ಮತ್ತೆ ಸುಮಾರು ಮೂವತ್ತು ಕಿಲೋಮೀಟರ್ ಹೋಗಬೇಕು. ಅವರಿಗೆ ಯಾವ ವಾಹನ ಸಿಕ್ಕೀತು ಎಂದು ಚಿಂತಿಸಿದೆ. ಅವರು ಟ್ಯಾಕ್ಸಿ ಮಾಡಿಕೊಂಡು ಹೋಗುವ ಸ್ಥಿತಿಯಲ್ಲಿಲ್ಲ. ಮುದುಕರ ನಡುಕ ಇನ್ನೂ ನಿಂತಿರಲಿಲ್ಲ. ಗದ್ದನಕೇರಿ ಕ್ರಾಸ್‌ನಲ್ಲಿ ಹೊಟೆಲ್ಲೊಂದರ ಪಕ್ಕ ಕಾರು ನಿಲ್ಲಿಸಿ. ಅವರಿಗೊಂದಿಷ್ಟು ಚಹಾ ತರಿಸಿದೆ.

ನನ್ನ ಕಾರಿನ ಮುಂದೆ ಮತ್ತೊಂದು ಕಾರು. ಅದರ ಪಕ್ಕ ತರುಣ ದಂಪತಿಗಳು ಹೊರಡಲು ಸಿದ್ಧವಾಗಿ ನಿಂತಿದ್ದರು. ನಾನು ಈ ಮುದುಕರನ್ನು, ಮಹಿಳೆ­ಯನ್ನು ಕೆಳಗಿಳಿಸಿ ಯಾವುದಾದರೂ ವಾಹನದ ವ್ಯವಸ್ಥೆ ಮಾಡಲೇ ಎಂದು ಕೇಳುತ್ತಿದ್ದೆ. ಈ ಮಾತುಗಳನ್ನು ಕೇಳಿಸಿಕೊಂಡಿದ್ದ ತರುಣ ಹತ್ತಿರ ಬಂದು ಏನು ವಿಷಯ ಎಂದು ಕೇಳಿದ. ನಾನು ವಿವರಿಸಿದ ಮೇಲೆ ಆತ, ಅದಕ್ಕೇಕೆ ಚಿಂತೆ? ನಾನು ವಿಜಾಪೂರಕ್ಕೆ ಹೋಗುತ್ತಿದ್ದೇನೆ. ಹೇಗಿದ್ದರೂ ಕೊಲ್ಹಾರದ ಮೇಲೆಯೇ ಹೋಗಬೇಕು. ಅವರಿಬ್ಬರನ್ನು ಮನೆಯವರೆಗೆ ತಲುಪಿಸಿ ಹೋಗುತ್ತೇನೆ ಎಂದು ಪ್ರೀತಿಯಿಂದ ಒಪ್ಪಿಕೊಂಡ. ಆ ಹಿರಿಯರು ಮತ್ತು ಮಹಿಳೆಯನ್ನು ತಮ್ಮ ಕಾರಿನಲ್ಲಿ ಕೂಡ್ರಿಸಿಕೊಂಡು, ನನಗೆ, ‘ಸರ್, ಯಾವ ಚಿಂತೆ ಮಾಡಬೇಡಿ’ ಎಂದು ಕೈ ಬೀಸಿ ಹೇಳಿ ಹೊರಟರು.

ನಾನು ಮರಳಿ ಬಂದು ಕಾರಿನಲ್ಲಿ ಕೂತಾಗ ಕಣ್ಣೀರು ಕೆನ್ನೆಗಿಳಿದದ್ದು ಗಮನಕ್ಕೆ ಬಂದಿತು. ಪ್ರಪಂಚದಾದ್ಯಂತ ಒಳ್ಳೆಯ ಜನ ಬಹಳಷ್ಟಿದ್ದಾರೆಂದು ನಾನು ಬಲವಾಗಿ ನಂಬುತ್ತೇನೆ. ಪ್ರೀತಿಯಿಂದ ಒಂದು ಸ್ಪರ್ಶ ನೀಡುವ, ಒಳ್ಳೆಯ ಮಾತನಾಡುವ, ಸಮಯ ನೀಡುವ, ನಿಮ್ಮ ದುಃಖಕ್ಕೆ ಕಿವಿ­ಯಾಗುವ, ಸಹಾಯಕ್ಕೆ ಹಾತೊರೆ­ಯುವ ಜನ ಸಾಕಷ್ಟಿದ್ದಾರೆ. ಅವಕಾಶ ದೊರೆತಾಗ ಮುಂದಕ್ಕೆ ಬರುತ್ತಾರೆ. ನಾವು ನಮ್ಮ ಜೀವನಯಾನದಲ್ಲಿ ಸುಸ್ತಾಗಿ ನಮ್ಮ ರೆಕ್ಕೆಗಳ ಶಕ್ತಿ ಕಳೆದು­ಕೊಂಡು ಕೆಳಗೆ ಬೀಳುವುದರಲ್ಲಿದ್ದಾಗ ನಮ್ಮನ್ನು ಎತ್ತಿ ಮೇಲಕ್ಕೊಯ್ಯುವ ದೇವತೆಗಳಂತೆ ಸಜ್ಜನರು ಬರುತ್ತಾರೆ. ನಾವು ಈ ನಂಬಿಕೆ ಕಳೆದುಕೊಳ್ಳು­ವುದು ಬೇಡ. ದಯವಿಟ್ಟು ನಿಮ್ಮ ಸುತ್ತಮುತ್ತ ತೆರೆದ ಕಣ್ಣುಗಳಿಂದ ನೋಡಿ, ಅಂತಹವರು ಕಾಣಬರುತ್ತಾರೆ. ಯಾಕೋ ಕಾಣುತ್ತಿಲ್ಲ ಎನ್ನಿಸಿದಾಗ ದಯವಿಟ್ಟು ಕನ್ನಡಿ ನೋಡಿ­ಕೊಳ್ಳಿ. ಅಲ್ಲೊಬ್ಬ ಸಜ್ಜನ ಖಂಡಿತವಾಗಿ ಕಾಣುತ್ತಾನೆ. ಅವನೊಬ್ಬನೇ ಸಾಕು ಜಗತ್ತನ್ನು ಆತ್ಮೀಯವಾಗಿಸಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT