ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳಿಹುಳಗಳ ಪ್ರಯಾಣ

Last Updated 14 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಜೀನ್ ಹೆನ್ರಿ ಫಾಬ್ರೆ ಫ್ರಾನ್ಸ್‌ ದೇಶದ ಬಹುದೊಡ್ಡ ಪರಿಸರವಾದಿ. ಆತ ಅನೇಕ ಪ್ರಯೋಗಗಳ ಮೂಲಕ ಪಶು, ಪಕ್ಷಿಗಳ ಜೀವನ ಚಕ್ರಗಳ ಬಗ್ಗೆ ಸಿದ್ಧಾಂತಗಳನ್ನು ಮಂಡಿಸಿದ್ದಾನೆ. ಅವನ ಒಂದು ಪ್ರಯೋಗ ನನ್ನ ಮನಸ್ಸನ್ನು ಸೆಳೆ­ದಿದೆ. ಫಾಬ್ರೆ ಒಂದೆರಡು ವರ್ಷ ಕಂಬಳಿ­ಹುಳಗಳ ಬಗ್ಗೆ ಸಂಶೋಧನೆ ಮಾಡಿದ. ಅವನೊಂದು ವಿಶೇಷವನ್ನು ಗಮನಿಸಿದ. ಅದೆಂದರೆ ಒಂದೆರಡು ಹುಳು ಸತ್ತರೆ ಪಟಪಟನೇ ನೂರಾರು ಹುಳಗಳು ಸತ್ತು ಹೋಗುತ್ತವೆ. ಹಾಗಾದರೆ ಅವುಗಳಿಗೆ ಸಾಂಕ್ರಾಮಿಕ ರೋಗವೇನಾದರೂ ಬಂದಿರಬಹುದೇ ಎಂದು ಪರೀಕ್ಷಿಸಿದ. ಹಾಗೆ ಇರಲಿಲ್ಲ. ಸತ್ತ ಬಹಳಷ್ಟು ಹುಳಗಳಿಗೆ ರೋಗ ಬಂದಿರಲಿಲ್ಲ. ಅವುಗಳ ಇನ್ನೊಂದು ಲಕ್ಷಣವನ್ನು ಆತ ನೋಡಿದ.
ಒಂದು ಹುಳು ಮುಂದೆ ಹೊರಟರೆ ಅದರ ಹಿಂಭಾ­ಗಕ್ಕೆ ಹೊಂದಿಕೊಂಡೇ ಮತ್ತೊಂದು ಹುಳು ಹೊರಡುತ್ತದೆ. ಅದರ ಹಿಂದೆ ಮತ್ತೊಂದು. ಹೀಗೆ ಹುಳುಗಳ ಒಂದು ಸರಪಳಿಯೇ ಆಗಿ ಹೋಗುತ್ತದೆ. ಒಂದು ರೀತಿ­­ಯಲ್ಲಿ ಅವು ಒಂದಕ್ಕೊಂದು ಅಂಟಿಕೊಂಡೇ ನಡೆಯುತ್ತವೆ.

ಒಂದು ಸಲ ಫಾಬ್ರೆ, ಅಗಲವಾದ ಅಂಚುಳ್ಳ ಮಣ್ಣಿನ ಬಟ್ಟಲೊಂದನ್ನು ತೆಗೆದು­ಕೊಂಡ. ಬಟ್ಟಲಿನ ಮಧ್ಯದಲ್ಲಿ ಸಾಕಷ್ಟು ಸಕ್ಕರೆ ಮತ್ತು ಹುಳುವಿನ ಆಹಾರ ಹಾಕಿದ. ನಂತರ ಹತ್ತಾರು ಹುಳಗಳನ್ನು ಕೂಡಿಹಾಕಿ ಅವುಗಳನ್ನು ಬಟ್ಟಲಿನ ಅಂಚಿನ ಮೇಲಿಟ್ಟ. ಅವುಗಳನ್ನು ಒಂದರ ಹಿಂದೆ ಒಂದರಂತೆ ಇಡುತ್ತ ಬಂದ. ಇದೇ ಸರ­ಪಳಿ­ಯನ್ನು ಬೆಳೆಸುತ್ತ ಕೊನೆಯ ಹುಳು ಮೊದಲನೆಯದರ ಮುಂದೆಯೇ ಇರು­ವಂತೆ ನೋಡಿಕೊಂಡ. ಅಂದರೆ ಹುಳಗಳ ಚಕ್ರ ಬಟ್ಟಲಿನ ಅಂಚಿನ ಮೇಲೆ ಪೂರ್ತಿ­ಯಾ­ಗಿತ್ತು. ಮೊದಲನೆಯ ಹುಳು ಯಾವುದು, ಕೊನೆಯದಾವುದು ಹೇಳು­ವುದು ಸಾಧ್ಯವಿರಲಿಲ್ಲ. ಹುಳಗಳು ನಡೆಯುತ್ತಲೇ ಇದ್ದವು. ಈ ಕಂಬಳಿ ಹುಳಗಳು ಕಣ್ಣುಗಳನ್ನು ಪೂರ್ತಿಯಾಗಿ ತೆರೆಯುವುದಿಲ್ಲ. ಅರೆತೆರೆದ ಕಣ್ಣು­ಗಳಿಂದ ಮುಂದಿನ ಹುಳದ ಹಿಂಭಾಗ­ವನ್ನೇ ನೋಡುತ್ತ ಮುಂದಿನ ಹುಳ ಹೇಗೆ ಹೋಗು­ತ್ತದೋ ಹಾಗೆಯೇ ಹಿಂದಿನ­ದೂ ಅನುಸರಿಸುತ್ತ ಹೋಗುತ್ತದೆ.

ಮಣ್ಣಿನ ಬಟ್ಟಲಿನ ಅಂಚಿನಲ್ಲಿದ್ದ ಹುಳುಗಳು ನಡೆಯುತ್ತಲೇ ಹೋದವು. ಎಲ್ಲಿಯೂ ನಿಲ್ಲದೇ ಸತತವಾಗಿ ಏಳು ದಿನ ನಡೆದವು. ಕೊನೆಗೆ ಅವುಗಳ ನಡೆ ನಿಂತಿತು. ಒಂದು ಹುಳ ಠಪ್ಪನೇ ಉದುರಿ ಕೆಳಗೆ ಬಿದ್ದಿತು. ಅದು ಸತ್ತೇ ಹೋಗಿತ್ತು. ಮುಂದೆ ಹತ್ತು ನಿಮಿಷಗಳಲ್ಲಿ ಒಂದರ ಹಿಂದೆ ಒಂದರಂತೆ ಎಲ್ಲ ಹುಳಗಳೂ ಸತ್ತು ಹೋದವು. ಅವೆಲ್ಲ ಸತ್ತದ್ದು ಹೊಟ್ಟೆಗೆ ಆಹಾರವಿಲ್ಲದೇ, ನಿಶ್ಯಕ್ತಿಯಿಂದ, ಆಯಾ­ಸದಿಂದ. ಅತ್ಯಂತ ವಿಚಿತ್ರವೆಂದರೆ ಅವುಗಳಿಗೆ ಅತ್ಯಂತ ಪ್ರಿಯವಾದ ಆಹಾರ ಪಕ್ಕದಲ್ಲೇ ಇತ್ತು. ಒಂದಾದರೂ ಹುಳ ತನ್ನ ಚಲನೆಯನ್ನು ನಿಲ್ಲಿಸಿ ಮಧ್ಯಕ್ಕೆ ಸಾಗಿ ಆಹಾರವನ್ನು ತಿಂದಿದ್ದರೆ ಬಹುಶಃ ಉಳಿದವುಗಳೂ ಅದನ್ನೇ ಹಿಂಬಾಲಿಸು­ತ್ತಿದ್ದವೇನೋ. ಆದರೆ, ಪ್ರತಿಯೊಂದು ಹುಳವೂ ತನ್ನ ಕಣ್ಣನ್ನು ತೆರೆದುಕೊಳ್ಳದೇ, ಆ ಕಡೆಗೆ ಈ ಕಡೆಗೆ ನೋಡದೇ, ಬರೀ ಮುಂದಿನ ಹುಳವನ್ನೇ ನೋಡುತ್ತ ಚಕ್ರಾಕಾರವಾಗಿ ಸುತ್ತಿ, ಸುಸ್ತಾಗಿ ಸತ್ತಿತ್ತು. ಅವಕ್ಕೆ ನೋಡುವ ಶಕ್ತಿ ಇರಲಿಲ್ಲ­ವೆಂದಲ್ಲ, ಆದರೆ ನೋಡುವ ಮನಸ್ಸಿರಲಿಲ್ಲ. ಅವುಗಳಲ್ಲಿ ಒಂದಾ­ದರೂ ಹುಳ ನಿರ್ಧಾರಿತವಾದ ನಡಾವಳಿಯನ್ನು ತೊರೆದು ವಿಭಿನ್ನವಾಗಿ ಚಿಂತಿಸುವ ಧೈರ್ಯ ಮಾಡಲಿಲ್ಲ. ಮಾಡಿದ್ದರೆ ಅದು ತನ್ನ ಪ್ರಾಣವನ್ನು ಮಾತ್ರವಲ್ಲ, ಉಳಿದ ಹುಳಗಳ ಪ್ರಾಣ­ವನ್ನು ಉಳಿಸಬಹುದಿತ್ತು. 

ನಮ್ಮಲ್ಲಿ ಅನೇಕರ ಬದುಕುಗಳೂ ಹಾಗೆಯೇ ನಡೆದುಹೋಗುತ್ತಿವೆ. ಸಂಪ್ರದಾ­ಯಗಳ ನಿಜವಾದ ಅರ್ಥವನ್ನು ತಿಳಿಯದೆ ಅರೆ­ಗಣ್ಣು ತೆರೆದುಕೊಂಡು ಉಳಿದವರು ಮಾಡಿದಂತೆಯೇ ಮಾಡುತ್ತ ಸುತ್ತಿ, ಸುತ್ತಿ ಆಯಸ್ಸು ಕಳೆದುಕೊಳ್ಳುತ್ತೇವೆ. ನಮ್ಮ ಮನಸ್ಸು­ಗಳೂ ಪ್ಯಾರಾಶೂಟ್ ಇದ್ದ ಹಾಗೆ. ಅವುಗಳು ತೆರೆದುಕೊಂಡಾಗಲೇ ನಮ್ಮನ್ನು ರಕ್ಷಿಸುತ್ತವೆ. ಹೊಸ ಚಿಂತನೆ­ಗಳೆಡೆಗೆ, ಹೊಸ ದಿಕ್ಕುಗಳೆಡೆಗೆ ಮನಸ್ಸು ತೆರೆದುಕೊಂಡಾಗ ಆವಿಷ್ಕಾರ­ಗಳು ಸಿದ್ಧಿಸುತ್ತವೆ, ಅವುಗಳಿಂದ ಪ್ರಪಂಚಕ್ಕೆ ಒಳಿತಾಗುತ್ತದೆ. ಕಂಬಳಿ­ಹುಳುಗಳ ಹಾಗೆ ಸುತ್ತಿದ್ದು ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT