ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೆ ‘ಮೈಲಿಗೆ’ ತೊಳೆಯುವರೇ ಮೋದಿ?

Last Updated 16 ಜೂನ್ 2018, 9:12 IST
ಅಕ್ಷರ ಗಾತ್ರ

ದೇಶದ ಜನ ಕುತೂಹಲದಿಂದ ಎದುರು ನೋಡು­ತ್ತಿದ್ದ ನರೇಂದ್ರ ಮೋದಿ ನೇತೃ­ತ್ವದ ಸರ್ಕಾರದ ಚೊಚ್ಚಲ ಬಜೆಟ್‌ ಕಳೆದ ವಾರ ಮಂಡನೆ ಆಗಿದೆ. ಅರ್ಥ ಸಚಿವ ಅರುಣ್‌ ಜೇಟ್ಲಿ ಅತೀ ಜಾಣ್ಮೆಯಿಂದ ಎಲ್ಲರನ್ನೂ ಸಮಾಧಾನಪ­ಡಿ­­ಸಲು ಪ್ರಯತ್ನಿಸಿದ್ದಾರೆ. ತಮ್ಮಲ್ಲಿರುವ ಒಂದು ರೊಟ್ಟಿ­ಯನ್ನು ಕಿತ್ತು ಎಲ್ಲರಿಗೂ ಒಂದೊಂದು ಮುರುಕು ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆ ಪ್ರಚಾರದ ವೇಳೆ ನೀಡಿರುವ ಭರವಸೆಗಳನ್ನೇ ಹೆಚ್ಚುಕಡಿಮೆ ಎನ್‌ಡಿಎ ಬಜೆಟ್‌ ಒಳಗೊಂಡಿದೆ. ನದಿ ಜೋಡಣೆ ಮತ್ತು ಗಂಗಾ ನದಿ ಸ್ವಚ್ಛತೆ ಯೋಜನೆಗಳೂ ಪ್ರಕಟವಾಗಿವೆ.

ವಾರಾಣಸಿ ಜನರಿಗೆ ಮೋದಿ, ಗಂಗೆ ‘ಮೈಲಿಗೆ’ ತೊಳೆಯುವ ಮಾತು ಕೊಟ್ಟಿದ್ದಾರೆ. ಈ ಉದ್ದೇ­ಶ­ಕ್ಕಾಗಿ ಜಲ ಸಂಪನ್ಮೂಲ ಖಾತೆ ಸಚಿ­ವಾ­ಲಯದ ಅಧೀನ­ದಲ್ಲಿ ಪ್ರತ್ಯೇಕ ಇಲಾಖೆ­ಯನ್ನೇ ತೆರೆದಿ­ದ್ದಾರೆ. ಬಜೆಟ್‌ನಲ್ಲಿ ಎರಡು ಸಾವಿರ ಕೋಟಿ ರೂಪಾಯಿ ಇಟ್ಟಿದ್ದಾರೆ. ಇದು ಮೆಚ್ಚುವಂಥ ಕೆಲಸ. ಕೊಳೆತು ನಾರುತ್ತಿರುವ ಗಂಗೆ ಶುದ್ಧವಾಗ­ಬೇಕು. ಗಂಗಾ ನದಿ ಅಷ್ಟೇ ಅಲ್ಲ, ಎಲ್ಲ ನದಿಗ­ಳನ್ನೂ ಶುಚಿಗೊಳಿ­ಸುವ ಕಾರ್ಯಕ್ರಮ ರೂಪು­ಗೊ­ಳ್ಳ­ಬೇಕು. ಈ ಕೆಲ­ಸಕ್ಕೆ ಹೆಚ್ಚು ಹಣ ಬೇಕು. ಹಣ ಹೊಂದಿ­ಸು­ವುದೇ ದೊಡ್ಡ ಸವಾಲು.

ಗಂಗಾ ನದಿ ಶುಚಿಗೊಳಿಸುವ ಮಾತು ಮೊದಲ ಸಲ ಕೇಳುತ್ತಿಲ್ಲ. ಸರ್ಕಾರ ಹಿಂದೆಯೂ ಗಂಗೆ ಒಡಲು ತೊಳೆಯುವ ಕೆಲಸ ಮಾಡಿದೆ. ಸಾವಿ­­ರಾರು ಕೋಟಿ ಹಣವನ್ನು ಸುರಿದಿದೆ. ಅದ­ರಿಂದ ಹಣ ಪೋಲಾಗಿರುವುದು ಬಿಟ್ಟರೆ, ಯಾವುದೇ ಉಪಯೋಗ ಆಗಿಲ್ಲ. ‘ಗಂಗಾ ನದಿ ಪುನ­ಶ್ಚೇತ­ನಕ್ಕೆ ಗಣನೀಯ ಪ್ರಮಾಣದಲ್ಲಿ ಹಣ ಖರ್ಚಾ­ದರೂ ನಿರೀಕ್ಷಿತ ಫಲ ಸಿಕ್ಕಿಲ್ಲ’ ಎನ್ನುವ  ಮಾತನ್ನು ಅರುಣ್‌ ಜೇಟ್ಲಿ ಅವರೇ ಬಜೆಟ್‌ ಭಾಷಣ­ದಲ್ಲಿ ಹೇಳಿದ್ದಾರೆ. ಸರ್ಕಾರಕ್ಕಿದು ಎಚ್ಚ­ರಿಕೆ ಗಂಟೆ. ಇದನ್ನು ನೆನಪಿನಲ್ಲಿಟ್ಟುಕೊಂಡು  ಮುನ್ನ­ಡೆ­ಯಬೇಕಿದೆ. ಹಳೇ ಅನುಭವದಿಂದ ಪಾಠ ಕಲಿಯಬೇಕಿದೆ.

ಕೇವಲ ಹಣ ಖರ್ಚು ಮಾಡುವುದರಿಂದ ಅಥವಾ ಧಾರ್ಮಿಕ– ಆಧ್ಯಾತ್ಮಿಕ ಭಾವನೆ ಕೆರಳಿ­ಸುವುದರಿಂದ ಗಂಗೆ ಮಾಲಿನ್ಯ ತೊಳೆಯಲು ಸಾಧ್ಯವಿಲ್ಲ. ಅದಕ್ಕೆ ಬೇಕಾಗಿರುವುದು ಪರಿಸರ ಪ್ರಜ್ಞೆ ಮತ್ತು ವೈಜ್ಞಾನಿಕ ದೃಷ್ಟಿಕೋನ. ‘ನದಿ ನಮ್ಮದು; ಅದು ಉಳಿದರೆ ನಾವು ಉಳಿಯು­ತ್ತೇವೆ’ ಎನ್ನುವ ಸಾಮೂಹಿಕ ಪ್ರಜ್ಞೆ.

ಕಾಡುಮೇಡು, ಗಿರಿಕಂದರಗಳು, ನದಿಗಳ ಸಂರ­ಕ್ಷಣೆ ಬಗೆಗೆ ಆದಿವಾಸಿಗಳಿಗಿರುವಂಥ ಕನಿಷ್ಠ ಬದ್ಧತೆ ನಮಗಿದ್ದರೆ ಸಾಕಿತ್ತು!
ಗಂಗೆ ಸಂರಕ್ಷಣೆ ಕುರಿತು ಕೇಂದ್ರ ಸರ್ಕಾರ ಜುಲೈ 7ರಂದು ದೆಹಲಿಯಲ್ಲಿ ಮಂಥನ ಸಭೆ ನಡೆಸಿತು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ­ವರು ಸಾಧು– ಸಂತರು.

ಗಂಗಾ ನದಿಯನ್ನು ನಿಜವಾದ ಅರ್ಥದಲ್ಲಿ ಮಲಿನ­ಗೊಳಿಸುತ್ತಿರುವವರೇ ಈ ಸಾಧು– ಸಂತರು. ಮತ್ತೆ ಅವರನ್ನೇ ಕರೆದು ಸಲಹೆ ಪಡೆ­ದರೆ ಕೇಂದ್ರ ಸರ್ಕಾರದ ಉದ್ದೇಶದ ಬಗ್ಗೆಯೇ ಅನುಮಾನ ಹುಟ್ಟುತ್ತದೆ.

ಬಿಜೆಪಿ ಸರ್ಕಾರಕ್ಕೆ ನಿಜವಾಗಿ ಗಂಗಾ ನದಿ ಶುಚಿ­ಗೊಳಿಸುವ ಕಾಳಜಿ ಇದ್ದರೆ ಪರಿಸರ ಮತ್ತು ಜಲ ಸಂಪನ್ಮೂಲ ತಜ್ಞರು, ನದಿ ಮಾಲಿನ್ಯದ ವಿರುದ್ಧ ದನಿ ಎತ್ತಿರುವ ಜನರನ್ನು ಕರೆಯಬೇ­ಕಿತ್ತು. ಈ ಬಗ್ಗೆ  ಕಾಂಗ್ರೆಸ್‌ ಹಿರಿಯ ಮುಖಂಡ, ಪರಿಸರ ಖಾತೆ ಹೊಣೆ ನಿರ್ವಹಿಸಿದ ಅನುಭವ ಹೊಂದಿರುವ ಜೈರಾಂ ರಮೇಶ್‌ ಸರಿಯಾ­ಗಿಯೇ ಮಾತನಾಡಿದ್ದಾರೆ. ‘ಗಂಗಾ ಪುನಶ್ಚೇತನ ಹಿಂದು­ತ್ವದ ಯೋಜನೆ ಆಗದೆ, ರಾಷ್ಟ್ರೀಯ ಕಾರ್ಯ­ಕ್ರಮ ಆಗಬೇಕು. ಇಡೀ ಸಮಾಜವನ್ನು ಒಳಗೊ­ಳ್ಳ­ಬೇಕು’ ಎಂದು ಕಿವಿಮಾತು ಹೇಳಿದ್ದಾರೆ.

ಪಶ್ಚಿಮ ಹಿಮಾಲಯದ ತಪ್ಪಲಿನ ಉತ್ತರಾ­ಖಂಡದ ಗಂಗೋತ್ರಿಯಲ್ಲಿ ಹುಟ್ಟಿ, ಬಂಗಾಳ ಕೊಲ್ಲಿ­ಯಲ್ಲಿ ಸಮುದ್ರ ಸೇರುವವರೆಗೆ ಸುಮಾರು 2,525 ಕಿ.ಮೀ. ದೂರ ಹರಿಯುವ ಗಂಗೆ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳದ ಜೀವನದಿ. ಸುಮಾರು 42 ಕೋಟಿ ಜನರಿಗೆ ಪ್ರತ್ಯಕ್ಷವಾಗಿ, ಪರೋಕ್ಷ­ವಾಗಿ ಆಸರೆಯಾಗಿದೆ. ಹಿಂದೂಗಳ ಧಾರ್ಮಿಕ– ಆಧ್ಯಾತ್ಮಿಕ ಜೀವನದ ಭಾಗವಾಗಿದೆ. ಲಕ್ಷಾಂತರ ರೈತರ ಬೆನ್ನೆಲುಬಾಗಿದೆ. ಈ ನದಿ ಒಡ­ಲನ್ನು ತೊಳೆಯುವುದು ಸುಲಭದ ಮಾತಲ್ಲ. ಇದುವರೆಗೆ ಆಗಿರುವಂತೆ ಕೇವಲ ಕಣ್ಣೊ­ರೆ­ಸುವ ಕಾರ್ಯಕ್ರಮವಾಗದೆ, ಪ್ರಾಯೋ­ಗಿಕ ತಳಹದಿ ಮೇಲೆ ಯೋಜನೆ ರೂಪಿಸಬೇಕು.

ಗಂಗೆ ದೇಶದ ಅತ್ಯಂತ ದೊಡ್ಡ ನದಿ. ಹರಿವಿನ ಪ್ರಮಾಣವೂ ದೊಡ್ಡದು. ಮಾಲಿನ್ಯ ಸಮ­ಸ್ಯೆಯೂ ಅತ್ಯಂತ ದೊಡ್ಡದು. ಹರಿದ್ವಾರ, ಹೃಷಿ­ಕೇಶ­ದಿಂದ ಬಾಂಗ್ಲಾವರೆಗೆ ನದಿ ದಂಡೆಯಲ್ಲಿ ಬೃಹತ್ತಾಗಿ ಬೆಳೆದಿರುವ ನಗರ, ಪಟ್ಟಣಗಳು ಹೊರ­ಗೆಸೆಯುವಂಥ ಬೇಡವಾದ ಪದಾರ್ಥ­ಗಳು ಗಂಗೆ ಒಡಲನ್ನು ಸೇರುತ್ತಿವೆ. ಕಾನ್ಪುರದಲ್ಲಿ ಈ ನದಿ ಆತಂಕ ಹುಟ್ಟಿಸುವ  ಪ್ರಮಾಣದಲ್ಲಿ ಕಲು­ಷಿತ­ವಾಗುತ್ತಿದೆ. ತೊಗಲಿನ ಉದ್ಯಮಕ್ಕೆ ಹೆಸ­ರಾದ ಕಾನ್ಪುರದ ನೂರಾರು ಉದ್ಯಮಗಳು ಬಿಡು­ತ್ತಿ­ರುವ ವಿಷಕಾರಿ ವಸ್ತುಗಳು ನದಿ ಸೇರಿ­ಕೊಳ್ಳುತ್ತಿವೆ. ಬೇರೆ ಬೇರೆ ಕಾರ್ಖಾನೆಗಳ ತ್ಯಾಜ್ಯವೂ ನದಿ ಪಾಲಾಗುತ್ತಿದೆ. ಜನ ವಸತಿಗಳ ಚರಂಡಿ ನೀರೂ ಸೇರುತ್ತಿದೆ.

ಪ್ರತಿದಿನ ಕಾನ್ಪುರವೊಂದರಲ್ಲೇ ಸುಮಾರು ಒಂದು ಶತಕೋಟಿ ಲೀಟರ್ ಕಲುಷಿತ ನೀರನ್ನು ಗಂಗಾ ನದಿಗೆ ಬಿಡಲಾಗುತ್ತಿದೆ. ಮುಂದಿನ ಹತ್ತಿ­ಪ್ಪತ್ತು ವರ್ಷಗಳಲ್ಲಿ ಇದು ದ್ವಿಗುಣವಾಗಲಿದೆ ಎಂದು ಅಂದಾಜಿಸಲಾಗಿದೆ. ಕಾರ್ಖಾನೆ ತ್ಯಾಜ್ಯ­ವನ್ನು ಸಂಸ್ಕರಣೆ ಮಾಡಿದ ಬಳಿಕ ನದಿಗೆ ಬಿಡ­ಬೇಕು ಎನ್ನುವ ನಿಯಮವನ್ನು ಯಾರೂ ಪಾಲಿ­ಸು­ತ್ತಿಲ್ಲ. ಗಂಗಾ ನದಿ ಮಾಲಿನ್ಯ ತೊಳೆಯುವ ಮಾತು ಆಡುತ್ತಿರುವ ಬಿಜೆಪಿ ಸರ್ಕಾರ ಈ ಸಮಸ್ಯೆ­ಯನ್ನು ಹೇಗೆ ನಿಭಾಯಿಸುತ್ತದೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.

ನದಿ ಪಾತ್ರದ ವಾತಾವರಣದ ಏರಿಳಿತ, ಪ್ರವಾಹ– ಬರಗಾಲದ ಪರಿಣಾಮ ಗಂಗಾ ನದಿ ಮೇಲಾ­ಗು­ತ್ತಿದೆ. ವಾರಾಣಸಿಯಲ್ಲಿ ಅರೆಬರೆ ಸುಟ್ಟಿ­ರುವ ಶವಗಳನ್ನು ನದಿಗೆ ಎಸೆಯ­ಲಾಗು­ತ್ತಿದೆ. ಅನೇಕರು ಶವಗಳನ್ನು ಸಂಸ್ಕಾರ ಮಾಡದೆ ನದಿ­ಯಲ್ಲಿ ಬಿಟ್ಟು ಹೋಗುವ ಪ್ರಸಂಗಗಳು ಸಾಮಾನ್ಯ­ವಾಗಿವೆ. ವಿವಿಧ ಭಾಗಗಳಲ್ಲಿ ಸುಟ್ಟ ದೇಹ­ಗಳ ಬೂದಿ ತಂದು ಮೋಕ್ಷದ ನೆಪದಲ್ಲಿ ಗಂಗೆಗೆ ಬಿಡಲಾಗುತ್ತಿದೆ. ಅಂದಾಜಿನ ಪ್ರಕಾರ ಪ್ರತಿ­ದಿನ ಸುಮಾರು ಎರಡು ಕೋಟಿ ಜನ ಗಂಗಾ ಸ್ನಾನ ಮಾಡುತ್ತಾರೆ. ಕುಂಭಮೇಳ ಸಮಯ­ದಲ್ಲಿ ಗಂಗಾ– ಯಮುನಾ ಮತ್ತು ಸರಸ್ವತಿ ನದಿ ಕೂಡುವ ಅಲಹಾಬಾದಿನಲ್ಲಿ ‘ಪುಣ್ಯ ಸ್ನಾನ’ ಮಾಡು­ವವರ ಸಂಖ್ಯೆ ಲೆಕ್ಕಕ್ಕಿಲ್ಲ. ಗಂಗೆಯಲ್ಲಿ ಮಿಂದು ಪುಣ್ಯ ಹೊತ್ತುಕೊಂಡು ಹೋಗುವ ಜನ, ತಮ್ಮ ಪಾಪವನ್ನೆಲ್ಲ ನದಿಯೊಳಗೇ ಬಿಟ್ಟು ಹೋಗುತ್ತಾರೆ.

ಗಂಗಾ ಮಾಲಿನ್ಯ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಬ್ಯಾಂಕ್ ಪದೇ ಪದೇ ಕಳವಳ ವ್ಯಕ್ತಪಡಿಸುತ್ತಲೇ ಇವೆ. ವಿಶ್ವ ಆರೋಗ್ಯ ಸಂಸ್ಥೆ, ಸುರಕ್ಷಿತ ಎಂದು ನಿಗದಿಪಡಿ­ಸಿದ ಪ್ರಮಾಣಕ್ಕಿಂತ ಮೂರು ಸಾವಿರ ಪಟ್ಟು ಹೆಚ್ಚು ವಿಷಕಾರಿ, ರಾಸಾಯನಿಕ ವಸ್ತುಗಳು, ಬ್ಯಾಕ್ಟಿರಿ­ಯಗಳು ಗಂಗಾ ನದಿ ಸೇರುತ್ತಿವೆ ಎಂದು ವೈಜ್ಞಾನಿಕ ಅಧ್ಯಯನಗಳು ಖಚಿತಪಡಿಸಿವೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ 1986­ರಲ್ಲಿ ‘ಗಂಗಾ ನದಿ ಶುದ್ಧೀಕರಣ ಯೋಜನೆ’ ಆರಂಭಿ­ಸಿ­ದರು. ಆಗ ₨ 1500 ಕೋಟಿ  ಬಿಡು­ಗಡೆ ಮಾಡಿದ್ದರು. ಈ ಹಣ ಕಡಿಮೆಯೇನಲ್ಲ. ಆದರೆ, ಅದು ಸರಿಯಾಗಿ ಬಳಕೆ ಆಗಲಿಲ್ಲ. ಗಂಗೆ ಹೆಸರಿನಲ್ಲಿ ಅನೇಕರು ನುಂಗಿ ನೀರು ಕುಡಿದರು. ಅನಂತರದ ಎನ್‌ಡಿಎ ಸರ್ಕಾರವೂ ಸ್ವಲ್ಪ ಹಣ ನೀಡಿತು. ಜಪಾನ್, ₨ 2,600 ಕೋಟಿ ನೆರವು ಕೊಟ್ಟಿದೆ. ವಿಶ್ವಬ್ಯಾಂಕ್ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಿದೆ. ಗಂಗಾ ಒಂದು ಮತ್ತು ಎರಡನೇ ಹಂತದ ಯೋಜನೆ ವಿಫಲವಾಗಿವೆ ಎಂದು ವಿಶ್ವಬ್ಯಾಂಕ್‌ ವರದಿಯೇ ಹೇಳಿದೆ.

ಗಂಗಾ ನದಿ ಮಾಲಿನ್ಯ ನಾಲ್ಕು ದಶಕದ ಸಮಸ್ಯೆ. ಎರಡು ದಶಕದಿಂದ ಈ ಸಮಸ್ಯೆ ತೀವ್ರ­ವಾಗಿದೆ. ಮಾಲಿನ್ಯ ತಡೆಗೆ ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿ­ದ್ದರೂ ಪ್ರಯೋಜನವಾಗಿಲ್ಲ. ನದಿ ಮಾಲಿನ್ಯದಲ್ಲಿ ಶೇಕಡ 80ರಷ್ಟು ಕೊಡುಗೆ ಒಳಚರಂಡಿ ನೀರಿ­ನದು. ಅನಂತರದ ಪಾಲು ಕಾರ್ಖಾನೆ ಮತ್ತು ಕೃಷಿ ವಲಯದ್ದು ಎನ್ನುವುದು ಯುಪಿಎ ಸರ್ಕಾರ­ದಲ್ಲಿದ್ದ ‘ರಾಷ್ಟ್ರೀಯ ಗಂಗಾ ನದಿ ಪ್ರಾಧಿ­ಕಾರ’ದ ಸದಸ್ಯ ಡಾ.ಬಿ.ಡಿ.ತ್ರಿಪಾಠಿ ಅವರ ಅಭಿಪ್ರಾಯ.

‘ನದಿಯಲ್ಲಿ ನೀರಿನ ಹರಿವು ಇಳಿಮುಖ­ವಾಗಿದೆ. ಅಂದಾಜು ಶೇ 20ರಷ್ಟು ನೀರು ಕಡಿಮೆ­ಯಾಗಿದೆ. ನದಿ ಹೂಳು ದೊಡ್ಡ ತಲೆನೋವು.  ನದಿಯಲ್ಲಿ ಸಮರ್ಪಕ ಪ್ರಮಾಣದಲ್ಲಿ ನೀರು ಹರಿಯುವಂತೆ ನೋಡಿಕೊಳ್ಳುವುದೊಂದೇ ಮಾಲಿನ್ಯ ತಡೆಗೆ ಇರುವ ದಾರಿ’ ಎನ್ನುವುದು ತ್ರಿಪಾಠಿ ಕಿವಿಮಾತು. ಗಂಗಾ ಮಂಥನ ಸಭೆಯಲ್ಲಿ ಸಚಿವ ನಿತಿನ್‌ ಗಡ್ಕರಿ ಸರ್ಕಾರದ ಯೋಜನೆಯನ್ನು ವಿವರಿಸಿ­ದ್ದಾರೆ. ವಿಶ್ವಬ್ಯಾಂಕಿನಿಂದ ₨ 4000 ಕೋಟಿ  ತಂದು ಜಲ ಸಾರಿಗೆ, ಪ್ರವಾಸೋದ್ಯಮ ಅಭಿ­ವೃದ್ಧಿ ಮಾಡುವುದಾಗಿ ಹೇಳಿದ್ದಾರೆ.

ಪ್ರತಿ ನೂರು ಕಿ.ಮೀ.ಗೆ ಒಂದರಂತೆ ಅಣೆಕಟ್ಟೆ ಅಥವಾ ಬ್ಯಾರೇಜ್‌ ನಿರ್ಮಿಸುವುದಾಗಿ ತಿಳಿಸಿದ್ದಾರೆ. ಈ ಯೋಜನೆಗೆ ಅದೇ ಸಭೆಯಲ್ಲಿ ವಿರೋಧ ವ್ಯಕ್ತ­ವಾ­ಗಿದೆ. ಕೆಲವು ತಜ್ಞರು ಇದರಿಂದ ಮಾಲಿನ್ಯ ಹೆಚ್ಚಾಗಲಿದೆ. ಅಲ್ಲದೆ, ಜಲಚರಗಳಿಗೆ ಅಪಾಯ­ವಾಗಲಿದೆ ಎಂದು ಎಚ್ಚರಿಸಿದ್ದಾರೆ. ನಿಜಕ್ಕೂ ಇದೊಂದು ಸೂಕ್ಷ್ಮ ಸಲಹೆ. ಸರ್ಕಾರಕ್ಕೆ ಗಂಗಾ ನದಿ ರಕ್ಷಣೆ ಮಾಡುವ ಕಾಳಜಿ ಇದ್ದರೆ ಈ ಸಲಹೆ­ಯನ್ನು ಒಪ್ಪಬೇಕು. ಆದರೆ, ಅದಕ್ಕೆ ಒಪ್ಪಿಗೆಯಾ­ದಂತೆ ಕಾಣುವುದಿಲ್ಲ.

ಉತ್ತರ ಭಾರತಕ್ಕೆ ವರದಾನವಾಗಿರುವ ಗಂಗಾ ನದಿ ಉಳಿಯಬೇಕು. ನದಿ ಸಂರಕ್ಷಣೆ ವಿಚಾರ­ದಲ್ಲಿ ರಾಜಕಾರಣ ಮಾಡಬಾರದು. ವೈಜ್ಞಾನಿಕ ಕ್ರಮಗಳ ಮೂಲಕ ನದಿ ಸಂರಕ್ಷಣೆ ಸಾಧ್ಯ. ಈ ನಿಟ್ಟಿನಲ್ಲಿ ಹಲವು ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ನದಿ ಯಾರೊಬ್ಬರ ಸ್ವತ್ತಲ್ಲ. ಸಮಾಜದ ಸಂಪತ್ತು. ಪರಿಸರ ಕಾಳಜಿ ಇರುವ ಎಲ್ಲ ಪಕ್ಷಗಳು, ಸಂಘಟನೆಗಳು ಹಾಗೂ ಚಳವಳಿಗಾರರನ್ನು ಒಳಗೊಂಡೇ ಈ ಕೆಲಸ ಮಾಡಬೇಕು. ಸಾಧು– ಸಂತರನ್ನು ಕಟ್ಟಿಕೊಂಡು ಸಭೆ ಮಾಡುವುದರಿಂದ ಪ್ರಯೋಜನವಿಲ್ಲ. ಈ ವಾಸ್ತವ ಅರ್ಥ ಮಾಡಿಕೊಂಡೇ ಸರ್ಕಾರ ಮುನ್ನಡೆಯಬೇಕು. ಇದುವರೆಗೆ ಆಗಿರುವಂತೆ ಕೇವಲ ಇನ್ನಷ್ಟು ಹಣ ಸುರಿಯುವುದರಿಂದ ಗಂಗೆ ಉಳಿಯುವುದಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT