ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರವಾನ್ವಿತ ಪ್ರಧಾನಿಗೆ ಆತ್ಮೀಯ ಪತ್ರ

Last Updated 15 ಮೇ 2016, 19:54 IST
ಅಕ್ಷರ ಗಾತ್ರ

ಸನ್ಮಾನ್ಯ ನರೇಂದ್ರ ಮೋದಿಜಿ,
ನಿಮಗೆ ಹೃದಯಪೂರ್ವಕ ಅಭಿನಂದನೆಗಳು. ನೀವು ದೇಶದ ಚುಕ್ಕಾಣಿ ಹಿಡಿದು ಮೇ 26ಕ್ಕೆ ಎರಡು ವರ್ಷ ತುಂಬುತ್ತಿದೆ. ನಿಮ್ಮ ಸರ್ಕಾರದ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲೂ ಚೊಚ್ಚಲ ಪತ್ರ ಬರೆದಿದ್ದೆ. ನಾನು ನಿಮಗೆ ಬರೆಯುತ್ತಿರುವ ಎರಡನೇ ಪತ್ರ ಇದು. ಎನ್‌ಡಿಎ ಮಂತ್ರಿಗಳು, ಅಧಿಕಾರಿಗಳೀಗ ವಾರ್ಷಿಕೋತ್ಸವ ಸಂಭ್ರಮಾಚರಣೆ ಸಿದ್ಧತೆಯಲ್ಲಿ ಮುಳುಗಿರಬಹುದು. ಸರ್ಕಾರದ ಸಾಧನೆಗಳನ್ನು ಅನಾವರಣಗೊಳಿಸಲು ತಯಾರಿ ನಡೆಸಿರಬಹುದು. ಲೋಕಸಭೆ ಚುನಾವಣೆಗೆ ಮೊದಲು ನೀವು ಬಿಡುವಿಲ್ಲದೆ ಎಲ್ಲೆಡೆ ಓಡಾಡಿದಿರಿ. ಬೇಕಾದಷ್ಟು ಭರವಸೆಗಳನ್ನು ಕೊಟ್ಟಿರಿ. ಒಂದು ದಶಕದ ಯುಪಿಎ ಸರ್ಕಾರದ ಆಡಳಿತದಿಂದ ರೋಸಿದ್ದ ಮತದಾರರೂ ನಿಮ್ಮನ್ನು ಬೆಂಬಲಿಸಿದರು. ಈಗ ಸರ್ಕಾರದ ಮಧುಚಂದ್ರದ ಅವಧಿ ಮುಗಿದಿದೆ. ಎರಡು ವರ್ಷದಲ್ಲಿ ಏನೇನು ಕೆಲಸಗಳಾಗಿವೆ. ಎಷ್ಟು ಭರವಸೆಗಳು ಈಡೇರಿವೆ ಎಂದು ಮೌಲ್ಯಮಾಪನ ಮಾಡುವ ಕೆಲಸ ಆರಂಭವಾಗಿದೆ. 

ಯಾವುದೇ ವ್ಯಕ್ತಿಯನ್ನು ಅವರ ಮಾತುಗಳಿಂದ ಅಳೆಯುವ ಬದಲು ಕೆಲಸದಿಂದ ಅಳೆಯಬೇಕೆಂಬ ಗಾದೆಯೊಂದಿದೆ. ಮಾಜಿ ಪ್ರಧಾನಿ  ಮನಮೋಹನ್‌ ಸಿಂಗ್‌ ಅಧಿಕಾರ ಬಿಡುವ ಮೊದಲು ನಡೆಸಿದ ಕೊನೆಯ ಪತ್ರಿಕಾ ಗೋಷ್ಠಿಯಲ್ಲಿ ಪ್ರಶ್ನೆಯೊಂದು ಎದುರಾಯಿತು. ಪತ್ರಕರ್ತರೊಬ್ಬರು, ನಿಮ್ಮನ್ನು ದುರ್ಬಲ ಪ್ರಧಾನಿ ಎಂದು ವಿಶ್ಲೇಷಿಸಲಾಗುತ್ತಿದೆ ಎಂದು ಕೇಳಿದರು. ಅದಕ್ಕವರು, ‘ನಾನು ಪ್ರಬಲನೊ ಇಲ್ಲವೆ ದುರ್ಬಲನೊ ಎನ್ನುವುದನ್ನು ಇತಿಹಾಸ ನಿರ್ಧರಿಸುತ್ತದೆ’ ಎಂದಿದ್ದರು. ಇತಿಹಾಸ ಅವರನ್ನು ಮಾತ್ರವೇ ಒರೆಗೆ ಹಚ್ಚುವುದಿಲ್ಲ. ಮುಂದೊಂದು ದಿನ ನಿಮ್ಮನ್ನೂ ವಿಮರ್ಶೆಗೊಳಪಡಿಸಲಿದೆ. ಆರು ದಶಕಗಳಲ್ಲಿ ಬಂದು ಹೋದ ಪ್ರಧಾನಿಗಳು ಮಾಡಿರುವ ಕೆಲಸ, ಕೈಗೊಂಡಿರುವ ತೀರ್ಮಾನಗಳ ಬಗ್ಗೆ ಈಗಲೂ ವ್ಯಾಖ್ಯಾನಗಳು ನಡೆಯುತ್ತಿರುವುದನ್ನು ನೀವೂ ಗಮನಿಸಿರಬಹುದು.

ಮೊದಲ ವರ್ಷ ನಿಮಗೆ ಹೆಚ್ಚು ಕೆಲಸ ಮಾಡಲು ಆಗಲಿಲ್ಲ. ಗುಜರಾತಿನ ಮುಖ್ಯಮಂತ್ರಿ ಸ್ಥಾನದಿಂದ ಪ್ರಧಾನಿ ಪದವಿಗೆ ಬಡ್ತಿ ಪಡೆದಿದ್ದರಿಂದ ಹೊಸ ವ್ಯವಸ್ಥೆ ಅರ್ಥ ಮಾಡಿಕೊಳ್ಳಲು ಕೊಂಚ ಸಮಯ ಹಿಡಿಯಿತು. ಯುಪಿಎ ಸರ್ಕಾರ ಹಾಳುಗೆಡವಿದ್ದ ಆಡಳಿತವನ್ನು ಸಂಪೂರ್ಣ ಸುಧಾರಿಸುವ ಕೆಲಸ ಮಾಡಿದಿರಿ. ವಿವಿಧ ಸಚಿವಾಲಯಗಳಲ್ಲಿದ್ದ ಅಧಿಕಾರಿಗಳನ್ನು ಬದಲಾಯಿಸಿ, ಹೊರಗಿನಿಂದ ಹೊಸಬರನ್ನು ತಂದಿರಿ. ಅಧಿಕಾರಿಗಳ ನೇಮಕಾತಿ– ವರ್ಗಾವರ್ಗಿಗೆ ಸಂಪುಟ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದಿರಿ. ಸರ್ಕಾರವನ್ನು ಸುತ್ತುವರಿದಿದ್ದ ದಲ್ಲಾಳಿಗಳನ್ನು ಹೊರದಬ್ಬಿದಿರಿ. ಈ ನಿಮ್ಮ  ಪ್ರಯತ್ನಗಳನ್ನು ಮೆಚ್ಚಬೇಕು. ಎರಡನೇ ವರ್ಷದಲ್ಲಿ ಜನರು ನಿರೀಕ್ಷಿಸಿದಷ್ಟು ಕೆಲಸಗಳು ಆಗಿಲ್ಲ. ಅದಕ್ಕೆ ಯಾವುದೇ ಕಾರಣ ಅಥವಾ ನೆಪ ಹೇಳುವಂತಿಲ್ಲ.

ಮೋದಿ ಅವರೇ, ನೀವು ಕೆಲಸ ಮಾಡುತ್ತಿರುವುದಕ್ಕಿಂತ ಮಾತನಾಡುತ್ತಿರುವುದೇ ಹೆಚ್ಚು. ಮೊದಲ ಪತ್ರದಲ್ಲೂ ಈ ಮಾತು ಹೇಳಿದ್ದೆ. ಲೋಕಸಭೆ ಚುನಾವಣೆ ವೇಳೆ ಮಾಡುತ್ತಿದ್ದ ಭಾಷಣಕ್ಕೂ, ಪ್ರಧಾನಿಯಾದ ಮೇಲೆ ಮಾಡುತ್ತಿರುವ ಭಾಷಣಗಳಿಗೂ  ಏನೂ ವ್ಯತ್ಯಾಸ ಇದ್ದಂತಿಲ್ಲ. ದನಿ, ಆಂಗಿಕ ಹಾವಭಾವಗಳು ಬದಲಾಗಿಲ್ಲ. ನಿಮ್ಮ ಪ್ರತಿಯೊಂದು ಸಾರ್ವಜನಿಕ ಸಭೆಯಲ್ಲಿ ಕೆಲವರು ಮೋದಿ... ಮೋದಿ... ಎಂದು ಕೂಗುವುದು ಒಂದು ರೀತಿ ವ್ಯವಸ್ಥಿತವಾದ ಏರ್ಪಾಡಿನಂತೆ ಕಂಡುಬರುತ್ತದೆ. ಇಂಥ ಸಣ್ಣಸಣ್ಣ ವಿಷಯಗಳಲ್ಲಿ ಸ್ವಲ್‍ಪ ಜಾಗ್ರತೆ ವಹಿಸಿದರೆ ನಿಮ್ಮ ಜನಪ್ರಿಯತೆ ಇನ್ನೂ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಪ್ರಧಾನ ಮಂತ್ರಿಗಳೇ,ಈಗಲೂ ನೀವು ಅತ್ಯಂತ ಜನಪ್ರಿಯ ನಾಯಕರು. ಎರಡು ವರ್ಷದಲ್ಲಿ ನಿಮ್ಮ ವರ್ಚಸ್ಸು ಎಳ್ಳಷ್ಟೂ ತಗ್ಗಿಲ್ಲ. ಆದರೆ, ಜನ ನಿಮ್ಮಿಂದ ಬಹಳಷ್ಟು ನಿರೀಕ್ಷಿಸಿದ್ದಾರೆ.

ಎನ್‌ಡಿಎ ಬಂದ ಮೇಲೆ ಸಾಮಾನ್ಯರ ಬದುಕಿನಲ್ಲಿ ಬದಲಾವಣೆಗಳಾಗಿಲ್ಲ ಎನ್ನುವ ಕೊರಗು ಬಹುತೇಕರಿಗಿದೆ. ಉಳಿದ ಮೂರು ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ಆಗಬಹುದೆಂದು ಭರವಸೆ ಇಟ್ಟಿದ್ದಾರೆ. ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌  ನಡೆಸಿರುವ ಸಮೀಕ್ಷೆಯಂತೆ ಶೇ 49ರಷ್ಟು ಜನ ತಮ್ಮ ಜೀವನ ಮಟ್ಟದಲ್ಲಿ ಏನೇನೂ ವ್ಯತ್ಯಾಸವಾಗಿಲ್ಲ ಎಂದಿದ್ದಾರೆ. ಶೇ 15ರಷ್ಟು ಜನ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ ಎಂದು ಅಭಿಪ್ರಾಯಪಟ್್ಟಿದ್ದಾರೆ. ಶೇ 62ರಷ್ಟು ಜನ ನಿಮ್ಮನ್ನು ಇಷ್ಟಪಡುತ್ತಿದ್ದಾರೆ.  ಶೇ 70ರಷ್ಟು ಜನ 2019ರ ಬಳಿಕವೂ ನೀವೇ ಪ್ರಧಾನಿಯಾಗಿ ಮುಂದುವರಿಯಬೇಕೆಂದು ಅಪೇಕ್ಷೆಪಟ್ಟಿದ್ದಾರೆ. ಇದರ ಒಟ್ಟಾರೆ ಉದ್ದೇಶ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಲಿ ಎನ್ನುವುದೇ ಆಗಿದೆ ವಿನಾ ಮತ್ತೇನಲ್ಲ. ಲೋಕಸಭೆ ಚುನಾವಣೆ ವೇಳೆಯಲ್ಲಿ ಬೆಲೆ ಏರಿಕೆಗೆ ಕಡಿವಾಣ;

ಯುವಕರಿಗೆ ಒಂದು ಕೋಟಿ ಉದ್ಯೋಗಾವಕಾಶ; ಭ್ರಷ್ಟಾಚಾರರಹಿತ ಪಾರದರ್ಶಕ ಆಡಳಿತದ ಆಶ್ವಾಸನೆಗಳನ್ನು ಕೊಟ್ಟಿರಿ. ಕೇಂದ್ರದ ಕಾರ್ಮಿಕ ಬ್ಯೂರೊ ಹೊಸ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿರುವ ಸಮೀಕ್ಷೆಯಂತೆ ಹೊಸ ಉದ್ಯೋಗಗಳು ಸಿಗುವುದಿರಲಿ, ಇರುವ ಉದ್ಯೋಗಗಳೂ ಕಡಿಮೆಯಾಗುತ್ತಿವೆ. ಆಟೊಮೊಬೈಲ್‌, ಚರ್ಮ, ಜವಳಿ, ಮಾಹಿತಿ– ತಂತ್ರಜ್ಞಾನ, ಕೈಮಗ್ಗ ಸೇರಿದಂತೆ ಅನೇಕ ಉದ್ಯಮಗಳಲ್ಲಿ 2015ರಲ್ಲಿ ಉದ್ಯೋಗಾವಕಾಶಗಳು ಇಳಿಮುಖವಾಗಿವೆ. ಪ್ರಧಾನಿಗಳೇ ನೀವೂ ನೋಡಿರಬಹುದು. ರಾಜ್ಯಸಭೆ ಮಾಜಿ ಸದಸ್ಯೆ ಸಿಪಿಎಂ ನಾಯಕಿ ಬೃಂದಾ ಕಾರಟ್‌, ಪ್ರಮುಖ ಇಂಗ್ಲಿಷ್‌ ಪತ್ರಿಕೆಯಲ್ಲಿ ಕೆಲವು ತಿಂಗಳ ಹಿಂದೆ ಬರೆದಿರುವ ಲೇಖನದಲ್ಲಿ ಗೋಹತ್ಯೆ ನಿಷೇಧದಿಂದ ಚರ್ಮ ಉದ್ಯಮದ ಮೇಲೆ ಏನು ಪರಿಣಾಮ ಆಗಿದೆ.

ಅದನ್ನೇ ನಂಬಿರುವ ಕಾರ್ಮಿಕರು ಹೇಗೆ ಬೀದಿ ಪಾಲಾಗಿದ್ದಾರೆಂದು ವಿವರಿಸಿದ್ದಾರೆ. ಉದ್ಯಮಿ ಆದಿ ಗೋದ್ರೆಜ್‌ ಗೋಮಾಂಸ ನಿಷೇಧ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಗೋ ಹತ್ಯೆ ನಿಷೇಧದ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಚರ್ಚೆ ನಡೆದಿರುವುದರಿಂದ ಮತ್ತೊಮ್ಮೆ ಅದರ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಒಂದು ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕೇವಲ ಮುಸ್ಲಿಮರು ಮಾತ್ರ ಗೋಮಾಂಸ ಸೇವಿಸುವುದಿಲ್ಲ. ದಕ್ಷಿಣದ ರಾಜ್ಯಗಳಲ್ಲಿ ಕೆಲವು ಪರಿಶಿಷ್ಟ ಜಾತಿ ಬಡವರೂ ತಿನ್ನುತ್ತಾರೆ. ಅದರಲ್ಲಿ ಯಾವ ತಪ್ಪೂ ಕಾಣುವುದಿಲ್ಲ.  ವಿವಿಧ ಜಾತಿ–ಧರ್ಮಗಳ ಆಹಾರ ಪದ್ಧತಿ ಗೌರವಿಸಿದರೆ ನಿಮ್ಮ ಖ್ಯಾತಿ ಇನ್ನೂ ಹೆಚ್ಚುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆತಂಕ ಹುಟ್ಟಿಸಿದೆ. ಮುಗಿಲು ಮುಟ್ಟಿರುವ ತೊಗರಿ ಬೇಳೆ ಮತ್ತಿತರ ಕಾಳುಗಳ ಬೆಲೆ ಕೆಳಕ್ಕಿಳಿದಿಲ್ಲ. ನಿಮ್ಮ ಅದೃಷ್ಟ ಚೆನ್ನಾಗಿದೆ.

ಬೆಲೆ ಏರಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಂತಿಲ್ಲ. ದೊಡ್ಡ ಪ್ರಮಾಣದಲ್ಲಿ ಈ ಚರ್ಚೆ ಆರಂಭವಾದರೆ ನೀವು ಅಪ್ರಿಯವಾಗುತ್ತೀರಿ. ಸರ್ಕಾರ ಹಣದುಬ್ಬರ ತಡೆಗೆ ಪ್ರಯತ್ನ ಮಾಡುತ್ತಿಲ್ಲ ಎಂದು ಹೇಳುತ್ತಿಲ್ಲ. ಪ್ರಯತ್ನಗಳು ನಡೆಯುತ್ತಿವೆ. ಅದರಿಂದ ಪ್ರಯೋಜನವಾಗುತ್ತಿಲ್ಲ. ಹಣದುಬ್ಬರ ನಿರೀಕ್ಷಿತ ಮಟ್ಟಕ್ಕಿಂತ ಸ್ವಲ್ಪ ಹೆಚ್ಚಿದೆ. ಅದು ಏರಿಳಿತವಿಲ್ಲದೆ ಒಂದೇ ಗತಿಯಲ್ಲಿ ಸಾಗುತ್ತಿರುವುದು ಕಳವಳ ಹುಟ್ಟಿಸಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಉತ್ತಮ ಮಳೆಯಾದರೆ ತ್ವರಿತ ಗತಿಯಲ್ಲಿ ಚೇತರಿಕೆ ಆಗಬಹುದು ಎಂದು ರಿಸರ್ವ್‌ ಬ್ಯಾಂಕ್‌ ಗವರ್ನರ್‌ ರಘುರಾಂ ರಾಜನ್‌ ಅವರೇ ಲಂಡನ್‌ನಲ್ಲಿ ಮೊನ್ನೆ ಹೇಳಿದ್ದಾರೆ. ಆದರೆ, ಅವರ ಬಗ್ಗೆಯೂ ನಿಮ್ಮ ಪಕ್ಷದ ನಾಯಕರು ಟೀಕೆ ಮಾಡುತ್ತಿದ್ದಾರೆ.

ರಾಜ್ಯಸಭೆ ಸದಸ್ಯ  ಸುಬ್ರಮಣಿಯನ್‌ ಸ್ವಾಮಿ, ‘ಆರ್‌ಬಿಐ ಗವರ್ನರ್‌ ಸ್ಥಾನಕ್ಕೆ ರಾಜನ್‌ ಅನರ್ಹ. ಅವರನ್ನು ಕಿತ್ತೆಸೆಯಬೇಕು’ ಎಂದಿದ್ದಾರೆ. ಸ್ವಾಮಿ ಅವರೊಬ್ಬರೇ ಅಲ್ಲ, ನಿಮ್ಮ ಪಕ್ಷದ ಸಾಧ್ವಿಗಳು, ಸಂತರು ಬೇರೆ ಬೇರೆ ವಿಷಯಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. ನೀವು ಕೇಳಿಸಿಕೊಂಡು ಸುಮ್ಮನಿರುವುದನ್ನು ಕಂಡರೆ, ಇವು ನಿಮ್ಮ ಪಕ್ಷ ಮತ್ತು ಸರ್ಕಾರದ ಒಳಸಂಚುಗಳೇ ಎಂಬ ಅನುಮಾನ ಮೂಡುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಕುಸಿದಿದೆ. ಅದರ ಲಾಭವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ. ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ತೈಲ ದರ ಮೂರು ಪಟ್ಟು ಹೆಚ್ಚಿತ್ತು. ಬಹುತೇಕ ಗ್ರಾಹಕರಿಗೆ ತೈಲ ಬೆಲೆಯ ಏರಿಳಿತದ ಬಗ್ಗೆ ಸರಿಯಾದ ಮಾಹಿತಿ ಇದ್ದಂತಿಲ್ಲ.

ತಿಳಿವಳಿಕೆ ಇದ್ದಿದ್ದರೆ ನಿಮ್ಮನ್ನು ಪ್ರಶ್ನಿಸುತ್ತಿದ್ದರು. ಸದ್ಯದ ಸ್ಥಿತಿಯಲ್ಲಿ ಡೀಸೆಲ್‌, ಪೆಟ್ರೋಲ್‌ ಮೂರು ಪಟ್ಟು ಕಡಿಮೆ ಬೆಲೆಗೆ ಪೂರೈಸಬಹುದು. ಜನರ ಕಣ್ಣೊರೆಸಲು ಚೂರುಪಾರು ದರ ಕಡಿಮೆ ಮಾಡಿದ್ದೀರಿ. ಉಳಿದ ಹಣವನ್ನು ಖಜಾನೆಯಲ್ಲಿ ಕೂಡಿಡುತ್ತಿದ್ದೀರಿ. ಜನರಿಗೆ ಸೇರಬೇಕಾದ ಹಣವನ್ನು ಹೀಗೆ ಇಟ್ಟುಕೊಳ್ಳಬಹುದೇ? ಮೋದಿ ಅವರೇ, ವಿದೇಶಾಂಗ ನೀತಿಯೂ ನಿಮ್ಮ ಕೈ ಹಿಡಿಯುತ್ತಿಲ್ಲ. ನೆರೆಹೊರೆಯವರ ಜತೆ ಉತ್ತಮ ಸಂಬಂಧ ಹೊಂದುವ ಬಯಕೆ ಫಲಿಸುತ್ತಿಲ್ಲ. ನಿತ್ಯ ಪಾಕಿಸ್ತಾನದೊಂದಿಗೆ ಕಣ್ಣಾಮುಚ್ಚಾಲೆ ಮುಂದುವರಿದಿದೆ. ಚೀನಾ ಹೆಜ್ಜೆಹೆಜ್ಜೆಗೂ ತೊಡರುಗಾಲು ಹಾಕುತ್ತಿದೆ.  ಉತ್ತಮ ಸ್ನೇಹ ಸಂಬಂಧ ಹೊಂದಿದ್ದ ನೇಪಾಳ ಮುನಿಸಿಕೊಂಡಿದೆ. ನೀವು ಎಷ್ಟು ರಾಷ್ಟ್ರ ಸುತ್ತಿದ್ದೀರಿ, ಎಷ್ಟು ಸಂಸತ್ತುಗಳಲ್ಲಿ ಮಾತನಾಡಿದ್ದೀರಿ ಅನ್ನುವುದರ ಮೇಲೆ ನಿಮ್ಮ ವಿದೇಶಾಂಗ ನೀತಿ ಯಶಸ್ಸು ನಿಂತಿರುವುದಿಲ್ಲ.

ಕೇಂದ್ರ ಸರ್ಕಾರ ಹನ್ನೊಂದು ರಾಜ್ಯಗಳ ಬರಗಾಲ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ಈಚಿನ ವರ್ಷಗಳಲ್ಲಿ ಕಂಡರಿಯದ ದೊಡ್ಡ ಬರಗಾಲ ಇದು. ಕೆಲವು ಪ್ರದೇಶಗಳಿಗೆ ರೈಲಿನಲ್ಲಿ ಕುಡಿಯುವ ನೀರು ಕಳುಹಿಸಿ ಒಳ್ಳೆ ಕೆಲಸ ಮಾಡಿದ್ದೀರಿ. ಅಷ್ಟರಿಂದಲೇ ಸಮಸ್ಯೆ ಬಗೆಹರಿಯುವುದಿಲ್ಲ. ಸಮಗ್ರ ಪರಿಹಾರ ಕಾರ್ಯ ಕೈಗೊಳ್ಳಬೇಕು. ಕೂಳಿಗಾಗಿ ಪರದಾಡುವ ಕೈಗಳಿಗೆ ಉದ್ಯೋಗ ಕೊಡಬೇಕು. ಅದೇ ಕಾರಣಕ್ಕೆ ಸುಪ್ರೀಂ ಕೋರ್ಟ್‌ ನರೇಗಾಕ್ಕೆ ಹಣ ಬಿಡುಗಡೆ ಮಾಡಿ ಎಂದು ಪದೇ ಪದೇ ಹೇಳುತ್ತಿದೆ. ಕೋರ್ಟ್‌ಗೆ ಅರ್ಥವಾಗುವ ಸಂಕಟ ನೇತಾರರಿಗೆ ಏಕೆ ಅರ್ಥವಾಗುವುದಿಲ್ಲ. ನೀವು ಕಾರ್ಪೊರೇಟ್‌ ವಲಯದ ಮೇಲೆ ಪ್ರೀತಿ ತೋರಿದಷ್ಟು ಕೃಷಿ ಹಾಗೂ ಕೃಷಿಕರ ಬಗ್ಗೆ ಕಾಳಜಿ ತೋರುವುದಿಲ್ಲ ಎಂಬ ಆರೋಪ ಇದೆ.

ಗೌರವಾನ್ವಿತ ಪ್ರಧಾನ ಮಂತ್ರಿಗಳೇ ನಿಮ್ಮ ಪಕ್ಷ ಹಾಗೂ ಸರ್ಕಾರದ ಬಗ್ಗೆ ಕೆಲವು ಮಾತುಗಳನ್ನು ಹೇಳಲೇಬೇಕು. ಬಿಜೆಪಿ ಸಂಸತ್‌ ಸದಸ್ಯರು ಕೆಲವೊಂದು ಸಂದರ್ಭದಲ್ಲಿ ಹದ್ದು ಮೀರಿ ವರ್ತಿಸುತ್ತಿದ್ದಾರೆ. ಮಾತಿನ ಮೇಲೆ ನಿಗಾ ಇರಬೇಕೆಂದು ನೀವು ಅನೇಕ ಸಲ ಹೇಳಿದ್ದೀರಿ. ನಿಮ್ಮ ಸಲಹೆ–ಸೂಚನೆಗಳನ್ನು ಸಂಸದರು ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ. ಆದರೂ ಅವರ ಮೇಲೆ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಇದು ಕಣ್ಣೊರೆಸುವ  ತಂತ್ರ ಇರಬಹುದೆಂದು ಅನುಮಾನ ಬರುತ್ತದೆ. ಸರ್ಕಾರದಲ್ಲಿ ನೀವು ಸಚಿವರಿಗಿಂತ ಅಧಿಕಾರಿಗಳನ್ನೇ ಹೆಚ್ಚು ಅವಲಂಬಿಸುತ್ತಿದ್ದೀರಿ. ಬೆರಳೆಣಿಕೆಯಷ್ಟು ಸಚಿವರಿಗೆ ಮಾತ್ರ ನಿಮ್ಮ ಸುತ್ತಮುತ್ತ ಸುಳಿದಾಡಲು ಅವಕಾಶವಿದೆ.  ಸಚಿವರು ನಿಮ್ಮನ್ನು ಭೇಟಿ ಮಾಡಲು ಬಯಸಿದರೆ ಸಮಯಾವಕಾಶ ಕೊಡುವುದಿಲ್ಲ. 

ನಿಮ್ಮ ಸಚಿವರು ನಿಮ್ಮನ್ನು ಕಂಡರೆ ಭಯದಿಂದ ನಡಗುತ್ತಾರೆ. ನೀವು ನಿಮ್ಮ ಕಚೇರಿಯಲ್ಲಿ ಪ್ರತಿಯೊಂದು ಸಚಿವಾಲಯದ ಮೇಲೆ ನಿಗಾ ಇಡಲು ಪ್ರತ್ಯೇಕ ಅಧಿಕಾರಿಗಳ ತಂಡವನ್ನೇ ಇಟ್ಟುಕೊಂಡಿದ್ದೀರಿ. ಯಾವುದೇ ಸಚಿವಾಲಯಕ್ಕೆ ಸಂಬಂಧಪಟ್ಟ ತೀರ್ಮಾನಗಳು ನಿಮ್ಮ ಕಚೇರಿಯೊಳಗೆ ಆಗುತ್ತವೆ. ಆನಂತರ ಅವು ಸಚಿವರಿಗೆ ರವಾನೆಯಾಗುತ್ತವೆ. ಔಪಚಾರಿಕ ಪ್ರಕ್ರಿಯೆಗಳಷ್ಟೇ ಸಚಿವಾಲಯಗಳಲ್ಲಿ ನಡೆಯುತ್ತವೆ. ಬಹುಶಃ ಇದೇ ಕಾರಣಕ್ಕೆ ಮಾಜಿ ಸಚಿವ ಅರುಣ್‌ ಶೌರಿ, ನಿಮ್ಮದು ಏಕ ವ್ಯಕ್ತಿ ಸರ್ಕಾರವೆಂದು ಟೀಕಿಸಿರುವುದು. ಶೌರಿ ಅವರನ್ನು ಬಿಟ್ಟು ಬೇರೆ ಬಿಜೆಪಿ ನಾಯಕರು ಟೀಕೆ ಮಾಡಿದ್ದರೆ ಅದಕ್ಕೆ ಮಹತ್ವ ಬರುತ್ತಿತ್ತು.

ಯಾವುದೇ ಸ್ಥಾನಮಾನ ದೊರೆಯದೆ ಅವರು ಅತೃಪ್ತರಾಗಿರುವುದರಿಂದ ಯಾರೂ ಅದನ್ನು ತಲೆಗೆ ಹಾಕಿಕೊಳ್ಳುತ್ತಿಲ್ಲವೆಂದು ಪಕ್ಷದೊಳಗೆ ವ್ಯಾಖ್ಯಾನಿಸಲಾಗುತ್ತಿದೆ. ಮೋದಿಜಿ, ಇನ್ನುಳಿದಂತೆ ಜೆಎನ್‌ಯು ಪ್ರಕರಣ, ಹೈದರಾಬಾದ್‌ ವಿ.ವಿ. ವಿದ್ಯಾರ್ಥಿ ವೇಮುಲ ಪ್ರಕರಣ, ಉತ್ತರಾಖಂಡದ ರಾಜಕಾರಣ ಕುರಿತು ಪ್ರಸ್ತಾಪಿಸುವ ಗೋಜಿಗೆ ಹೋಗುವುದಿಲ್ಲ. ಕೇರಳ, ಬಿಹಾರದಲ್ಲಿ ನಿಮ್ಮ ಹೇಳಿಕೆ ಸೃಷ್ಟಿಸಿದ ಅವಾಂತರಗಳನ್ನು ಜನರೇ ನೋಡಿದ್ದಾರೆ. ಕೊನೆಯದಾಗಿ, ದೆಹಲಿ ಮತ್ತು ಬಿಹಾರದಲ್ಲಿ  ಸೋತು ಹೈರಾಣ ಆಗಿರುವ ನೀವು ಅಸ್ಸಾಂನಲ್ಲಿ ಗೆಲ್ಲದೆ ಹೋದರೆ ಪಕ್ಷದೊಳಗೆ ಕಷ್ಟವಾಗಬಹುದು, ಅಪಸ್ವರ ಹೆಚ್ಚಬಹುದು.

ವಂದನೆಗಳೊಂದಿಗೆ ನಿಮ್ಮ ವಿಶ್ವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT