ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಗೂಲಿ ನೌಕರರ ಪಾಲಿನ ‘ದೇವರು’ ಪ್ರೊ. ಶರ್ಮಾ

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ದುರ್ಬಲ ವರ್ಗದ, ಅಶಕ್ತ ಜನರ ಕೈಹಿಡಿದು ಮೇಲೆತ್ತಬೇಕಾದ ಸರ್ಕಾರ ಅತ್ತ ಗಮನ­ಹರಿಸದೆ ಮೈಮರೆತಾಗ, ಅದನ್ನು ಕಾನೂನಾತ್ಮಕವಾಗಿ ಚುಚ್ಚಿ ಎಬ್ಬಿಸಿ, ಆ ಜನರ ಪರವಾಗಿ ಕೆಲಸ ಮಾಡಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ವ್ಯಕ್ತಿ ಪ್ರೊ. ಕೆ.ಎಸ್‌.ಶರ್ಮಾ. ಇದಕ್ಕೆ ನಿದರ್ಶನ ದಿನಗೂಲಿ ನೌಕ­ರರ ಪರವಾಗಿ ಅವರು ನಡೆಸಿದ ಹೋರಾಟ. ಸ್ವಾತಂತ್ರ್ಯ ಸಂಗ್ರಾಮದ ನಂತರ ಬಹುಶಃ 32 ವರ್ಷಗಳಷ್ಟು (1982–2014) ಸುದೀರ್ಘ ಕಾಲ ನಡೆದ ಹೋರಾಟ ಇದೇ ಇರಬಹುದೇನೋ.

ಆ ಚಳವಳಿ ಮೊದಲಿಗೆ ಆರಂಭವಾದುದು ಉತ್ತರ ಕರ್ನಾಟಕ ಭಾಗದಲ್ಲಿ. ಮಲಪ್ರಭಾ ಅಣೆಕಟ್ಟೆ ನಿರ್ಮಾಣ­ವಾದ ನಂತರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಕಾಲುವೆಗಳ ರಕ್ಷಣೆಗೆ, ನೀರು ನಿರ್ವಹಣೆ ಕಾಯಕಕ್ಕೆ ನೇಮಿಸಿಕೊಂಡ ಸ್ಥಳೀಯ ಜನರನ್ನು ಸರ್ಕಾರ ಬಹಳ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿತ್ತು. ಸರ್ಕಾರವೇ ಕೆಲಸಕ್ಕೆ ತೆಗೆದುಕೊಂಡರೂ ಅವರಿಗೆ ದಿನಗೂಲಿ ಲೆಕ್ಕದಲ್ಲಿ ಹಣ ನೀಡಲಾಗುತ್ತಿತ್ತು. ಸರ್ಕಾರದ ಕೆಲಸ ಮಾಡುತ್ತಿದ್ದರೂ ಯಾವುದೇ ಭತ್ಯೆ, ಸೌಲಭ್ಯವಿರಲಿಲ್ಲ. ಬೇಡವೆಂದಾಗ ನಿರ್ದಾಕ್ಷಿಣ್ಯವಾಗಿ ಅವರನ್ನು ಕೆಲಸದಿಂದ ಕಿತ್ತುಹಾಕಲಾಗುತ್ತಿತ್ತು. ಮೇಲಾಗಿ ಈ ನೌಕರರು ಇಲ್ಲಿ ಕಾರ್ಯನಿರ್ವಹಿಸು­ತ್ತಿ­ದ್ದಾರೆ ಎಂಬುದಕ್ಕೆ ಎಲ್ಲೂ ಯಾವ ದಾಖಲೆಗಳೂ ಇರಲಿಲ್ಲ. ಬಡತನ, ಹಸಿವು ಈ ಜನರನ್ನು ಹಲ್ಲು ಕಚ್ಚಿ­ಕೊಂಡು ದುಡಿಯುವಂತೆ ಮಾಡುತ್ತಿತ್ತು. ತಮ್ಮನ್ನು ನೆಚ್ಚಿಕೊಂಡಿರುವವರ ಹೊಟ್ಟೆ ಹೊರೆಯಲು ಎಷ್ಟೇ ದೌರ್ಜನ್ಯ, ದಬ್ಬಾಳಿಕೆ ನಡೆದರೂ ಸಹಿಸಿಕೊಂಡಿತ್ತು ಈ ವರ್ಗ. ಈ ವರ್ಗಕ್ಕೆ ಶಕ್ತಿ ತುಂಬಿದವರು ಪ್ರೊ. ಶರ್ಮಾ.

ಹಾಗಾಗಿಯೇ, ಮೊದಲ ಹಂತದಲ್ಲಿ ಎಂಟು ವರ್ಷ (1982–1990) ನಡೆಸಿದ ಹೋರಾಟದ ಫಲವಾಗಿ 66,000 ದಿನಗೂಲಿಗಳ ಮನೆಗಳಲ್ಲಿ ನೆಮ್ಮದಿ ಕಾಣಿಸಿತು. ಅಂತಹ ಅನೇಕ ಕುಟುಂಬಗಳ ದೇವರ ಮನೆ ಅಥವಾ ದೇವರ ಚಿತ್ರಗಳ ಸಾಲಿನಲ್ಲಿ ಪ್ರೊ. ಶರ್ಮಾ ಅವರ ಚಿತ್ರವೂ ಸ್ಥಾನ ಪಡೆದುಕೊಂಡಿದೆ. ಈ ಮನೆಗಳಲ್ಲಿನ ಜ್ಯೋತಿ ಬೆಳಗಲು ಪ್ರೊ. ಶರ್ಮಾ ನಡೆಸಿದ ಹೋರಾಟ ಅಂತಿಂಥದ್ದಲ್ಲ. 1989ರಲ್ಲಿ ಪ್ರೊ. ಶರ್ಮಾ ಮುಂದಾಳತ್ವದಲ್ಲಿ 40 ಸಾವಿರ ದಿನಗೂಲಿ ಕಾರ್ಮಿಕರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದು. ಇದು ಕಾರ್ಮಿಕ ಚಳವಳಿಯ ಇತಿಹಾಸದಲ್ಲಿಯೇ ಮರೆಯಲಾಗದ ಅಧ್ಯಾಯ. ನಂತರ ಸರ್ಕಾರ ವಿಧಾನ­ಸೌಧಕ್ಕೆ ರಕ್ಷಣೆಯ ಬೇಲಿ ಹಾಕಿಕೊಂಡು ಒಂದು ರೀತಿಯಲ್ಲಿ ಕೋಟೆ ಮಾಡಿಕೊಂಡಿತು.

ಕೆಲಸ ಕಳೆದುಕೊಂಡರೆ ಎಂಬ ಭೀತಿಯಿಂದಲೇ ಚಳವಳಿಗೆ ಬರಲು ಹಿಂದೇಟು ಹಾಕಿದ್ದ ನೌಕರರ ಮನ­ವೊಲಿಸಿ,  ಸಂಘಟಿಸಿ, ಹೋರಾಡಿದ ಪರಿಣಾಮವಾಗಿ 2014ರ ಸೆಪ್ಟೆಂಬರ್‌ 19 ರಂದು 23,000 ದಿನಗೂಲಿ ನೌಕರರ ಸೇವೆಯನ್ನು ಕಾಯಂ ಮಾಡುವ ಸಂಬಂಧ ಸರ್ಕಾರದ ಆದೇಶ ಹೊರಬಿತ್ತು. ಹಿಡಿದ ಕೆಲಸವನ್ನು ಸಾಧಿಸಬೇಕು ಎಂಬ ಹಠಯೋಗಿ ಪ್ರೊ. ಶರ್ಮಾ ಯಾವುದಕ್ಕೂ ಜಗ್ಗಲಿಲ್ಲ. ಹೈಕೋರ್ಟ್‌, ಸುಪ್ರೀಂ ಕೋರ್ಟ್‌ಗಳಲ್ಲಿ ವ್ಯಾಜ್ಯ ಹೂಡಿ, ಅವರು ಗೆಲುವು ಸಾಧಿಸಿದರು. ನ್ಯಾಯಾಲಯಗಳ ಆದೇಶ­ವನ್ನು ಜಾರಿಗೊಳಿಸಲು ಅಡ್ಡಿಯಾದಾಗಲೆಲ್ಲಾ ಸರ್ಕಾರಕ್ಕೆ ಕಿವಿ ಹಿಂಡಿ ಎಚ್ಚರಿಕೆ ನೀಡಿದರು. ಜತೆಗೆ ಮನವೊಲಿಸುವ ಕಾರ್ಯವನ್ನೂ ಮಾಡಿದರು.  

ದುಡಿಯುವ ವರ್ಗದ ಪರವಾಗಿ ಕೆಲಸ ಮಾಡ­ಬೇಕು ಎಂದು ಸರ್ಕಾರ ಬಯಸಿದರೂ ಅದನ್ನು ಕಾರ್ಯಗತ ಮಾಡಲಾಗದಂತಹ ವ್ಯವಸ್ಥೆ ನಿರ್ಮಿಸುವ ಅಧಿಕಾರಿಶಾಹಿ ವರ್ಗವೂ ಇದೆ. ಆದರೂ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಚೌಕಟ್ಟಿನಲ್ಲಿ ಎಷ್ಟು ಪಡೆಯಲು ಸಾಧ್ಯವೋ ಅಷ್ಟನ್ನು ಪಡೆದು­ಕೊಳ್ಳಬೇಕು. ನಿರೀಕ್ಷೆ ಬೆಟ್ಟದಷ್ಟಿದ್ದರೂ ಎಲ್ಲವೂ ಈಡೇ­ರು­ವುದಿಲ್ಲ ಎಂಬುದನ್ನು ಪ್ರತಿಯೊಬ್ಬ ಹೋರಾಟ­ಗಾರನೂ ಅರ್ಥಮಾಡಿಕೊಳ್ಳಬೇಕು.

ಈ ಗುಣವನ್ನು ಪ್ರೊ. ಶರ್ಮಾ ರೂಢಿಸಿಕೊಂಡಿದ್ದರಿಂದಲೇ ಯಾವ್ಯಾವ ಹಂತದಲ್ಲಿ ಯಾವ್ಯಾವ ವಿಧಾನದಿಂದ ಸಾಧ್ಯವಾಗುತ್ತ­ದೆಯೋ ಅವೆಲ್ಲವನ್ನೂ ದಿನಗೂಲಿ ನೌಕರರಿಗೆ ಕಲ್ಪಿಸಿ­ಕೊಡು­ವಲ್ಲಿ ತಮ್ಮ ಬುದ್ಧಿವಂತಿಕೆಯನ್ನು ಬಳಸಿ­ಕೊಂಡರು. ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕ­ರಾಗಿ, ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ ಅವರ ಅನುಭವ ಕೂಡ ಇಲ್ಲಿ ಬಹಳ ಉಪಯೋಗಕ್ಕೆ ಬಂತು.

ಈ ಚಳವಳಿಗೆ ಜೀವ ಬಂದುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನೀಡಿದ ತಡೆಯಾಜ್ಞೆಯಿಂದ. ಈ ಪ್ರಕರಣ ಇತ್ಯರ್ಥವಾಗುವವರೆಗೆ ದಿನಗೂಲಿ ನೌಕರ­ರನ್ನು ಕೆಲಸದಿಂದ ತೆಗೆಯಬಾರದು ಎಂದು ಸುಪ್ರೀಂ ಕೋರ್ಟ್‌ ನೀಡಿದ ಆದೇಶ, ಈ ಅಶಕ್ತ ನೌಕರರಲ್ಲಿ ಒಗ್ಗಟ್ಟು ಮೂಡಿಸಿತು.

ಕುಟುಂಬಕ್ಕೊಂದು ಉದ್ಯೋಗದ ಭರವಸೆ ನೀಡಿ 1983ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ, ಸುಪ್ರೀಂ ಕೋರ್ಟ್‌ ತಡೆ­ಯಾಜ್ಞೆ ಇದ್ದರೂ ಒಂದೇ ಆದೇಶದಲ್ಲಿ 10,000 ದಿನಗೂಲಿ ನೌಕರರನ್ನು ವಜಾ ಮಾಡಿತು. ಈ ಆದೇಶ ಹೊರಬಿದ್ದ ಕೂಡಲೇ ಪ್ರೊ. ಶರ್ಮಾ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದರು. ಪರಿಣಾಮವಾಗಿ ಕರ್ನಾಟ­ಕದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮುಖ್ಯ ಕಾರ್ಯದರ್ಶಿಯೊಬ್ಬರು ಸುಪ್ರೀಂ ಕೋರ್ಟ್‌ ಮುಂದೆ ಕ್ಷಮೆಯಾಚಿಸುವಂತಾಯಿತು.

ಅಲ್ಲದೇ, ಅಕ್ರಮವಾಗಿ ಯಾರನ್ನೂ ಕೆಲಸದಿಂದ ತೆಗೆದು ಹಾಕುವುದಿಲ್ಲ ಎಂದು ಹೇಳಿ, ವಜಾವಾಗಿದ್ದ ಎಲ್ಲರೂ ತಕ್ಷಣ ಕೆಲಸಕ್ಕೆ ವರದಿ ಮಾಡಿಕೊಳ್ಳಬೇಕು ಎಂಬುದನ್ನು ಪತ್ರಿಕೆಗಳು, ರೇಡಿಯೋ ಮೂಲಕ ಜಾಹೀರಾತು ರೂಪದಲ್ಲಿ ಮೂರು ಬಾರಿ ಪ್ರಕಟಿಸಬೇಕು ಎಂಬ ಮಹತ್ವದ ನಿರ್ದೇಶನವನ್ನು ಸುಪ್ರೀಂ ಕೋರ್ಟ್‌ ನೀಡಿ ಈ ವರ್ಗದ ರಕ್ಷಣೆಗೆ ನಿಂತುಕೊಂಡಿತು. ಇದು, ಕೇವಲ ಹದಿ­ಮೂರು ಮಂದಿ ಸಾಕ್ಷರತಾ ಲೋಕೋಪಯೋಗಿ ಇಲಾಖಾ ದಿನಗೂಲಿ ನೌಕರರು ಆರಂಭಿಸಿದ ಹೋರಾ­ಟದ ದಿಕ್ಕನ್ನೇ ಬದಲಿಸಿತು. ಸಂಘಟನೆ ಮತ್ತಷ್ಟು ಬಲಿಷ್ಠವಾಯಿತು. 10,000 ಮಂದಿ ಪುನಃ ಕೆಲಸಕ್ಕೆ ಸೇರಿದ್ದು ದೇಶದಲ್ಲೇ ಪ್ರಥಮ ಎನಿಸಿಕೊಂಡಿತು. ಆದರೆ, ಅಷ್ಟರೊಳಗೆ ಕೆಲವೆಡೆ ಕಾಯಂ ನೌಕರರನ್ನು ಆ ಹುದ್ದೆಗಳಿಗೆ ಸರ್ಕಾರ ನಿಯೋಜಿಸಿಬಿಟ್ಟಿತ್ತು. ಮತ್ತೊಮ್ಮೆ ಹೆಚ್ಚುವರಿಯಾಗಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಪರಿಣಾಮ, ವಜಾಗೊಂಡಿದ್ದ ಎಲ್ಲ ದಿನ­ಗೂಲಿ ನೌಕರರು ಆ ಮೊದಲು ಕಾರ್ಯನಿರ್ವಹಿ­ಸು­ತ್ತಿದ್ದ ಸ್ಥಳಗಳಲ್ಲೇ ವರದಿ ಮಾಡಿಕೊಳ್ಳಲು ಅನುವು ಮಾಡಿಕೊಡುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಬೇಕಾಯಿತು.

ದಿನಗೂಲಿಗಳಾಗಿ 10 ವರ್ಷ ಸೇವೆ ಸಲ್ಲಿಸಿರುವ ಎಲ್ಲರನ್ನು ಕಾಯಂಗೊಳಿಸುವಂತೆ ಸುಪ್ರೀಂ ಕೋರ್ಟ್‌ ವಿಭಾಗೀಯ ಪೀಠ 1990 ಫೆಬ್ರುವರಿ 23 ರಂದು ಐತಿಹಾಸಿಕ ತೀರ್ಪು ನೀಡಿತು. ಅಲ್ಲದೇ ಹುದ್ದೆ ಖಾಲಿ ಇಲ್ಲದಿದ್ದರೂ ಸೂಪರ್‌ನ್ಯೂಮರಿ ಹುದ್ದೆ ಸೃಷ್ಟಿಸಲೂ ಆದೇಶಿಸಿತು. ದಿನಗೂಲಿ ನೌಕರರಿಗೆ ನ್ಯಾಯಾಲಯಗಳ ಆದೇಶಗಳು ವರವಾದವು. ಸರ್ಕಾರ ತಪ್ಪು ಮಾಡಿ­ದ್ದರೂ ಶಾಸನ ರೂಪಿಸುವ ಮೂಲಕ ಅದನ್ನು ಸರಿ­ಪಡಿಸಿ­ಕೊಳ್ಳಬಹುದು ಎಂಬ ನ್ಯಾಯಾಲಯದ ಸಲಹೆ ಆಧರಿಸಿ ಹೋರಾಟ ಮುಂದುವರಿಯಿತು. 

ಆರ್‌.ಗುಂಡೂ­ರಾವ್‌ ಮುಖ್ಯಮಂತ್ರಿಯಾಗಿದ್ದಾಗ ಆರಂಭಗೊಂಡ ಚಳವಳಿ ಸಿದ್ದರಾಮಯ್ಯ ಮುಖ್ಯ­ಮಂತ್ರಿ­ಯಾಗಿರುವಾಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈ ಅವಧಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನೇತೃತ್ವದ ಸರ್ಕಾರಗಳು ಆಗಾಗ್ಗೆ ಅನೇಕ ಆದೇಶ­ಗಳನ್ನು ಹೊರಡಿಸಿದ್ದವು. ಎಷ್ಟೋ ಸಮಯ ಆದೇಶ ಹೊರಡಿಸಿದರೂ ನಿಯಮ ರೂಪಿಸಲಿಲ್ಲ. ಸರ್ಕಾರ ಕಳೆದ ತಿಂಗಳು ರೂಪಿಸಿದ ನಿಯಮದಲ್ಲೂ ತಾರತಮ್ಯ ಮಾಡಲಾಗಿದೆ. ಕಾಯಂಗೊಂಡ ದಿನಗೂಲಿ ನೌಕರರಿಗೆ ಇತರೆ ನೌಕರರಂತೆ ಪೂರ್ಣ ಪ್ರಮಾಣದ ತುಟ್ಟಿಭತ್ಯೆ ಮತ್ತು ಬಾಡಿಗೆ ಭತ್ಯೆಯನ್ನು ನೀಡದೇ, ಶೇ 75 ರಷ್ಟನ್ನು ಕೊಡುವುದಾಗಿ ಹೇಳಿರುವುದು ಸರಿಯಲ್ಲ. ಈಗಲೂ ಸರ್ಕಾರದಲ್ಲಿ ಸುಮಾರು 1.5 ಲಕ್ಷ ಹುದ್ದೆಗಳು ಖಾಲಿ ಇವೆ. ಈ 23,000 ಮಂದಿಯನ್ನು ಆ ಖಾಲಿ ಹುದ್ದೆಗಳಿಗೆ ಭರ್ತಿ ಮಾಡಿ­ಕೊಳ್ಳ­ಬಹುದು. ಸರ್ಕಾರಕ್ಕೂ ಹೊರೆ ಕಡಿಮೆ­ಯಾಗು­ತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು.

ನ್ಯಾಯಾಲಯಗಳ ತೀರ್ಪುಗಳು, ರಾಜ್ಯ ಸರ್ಕಾರದ ಆದೇಶಗಳಿಂದ ಕರ್ನಾಟಕದಲ್ಲಿ ಸುಮಾರು 1.50 ಲಕ್ಷ ಜನರಿಗೆ ಅನುಕೂಲವಾಗಿದ್ದರೆ, ಇಂತಹದ್ದೇ ಸ್ಥಿತಿಯಲ್ಲಿದ್ದ ದೇಶದ ಸುಮಾರು 24 ಲಕ್ಷ ಮಂದಿಗೆ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಲಾಭವಾಗಿದೆ.

ಇದಕ್ಕೆ ಪ್ರೊ. ಶರ್ಮಾ ಅವರಿಗೆ ಧನ್ಯವಾದ ಅರ್ಪಿ­ಸಲು ಹಾಗೂ ವಿಜಯೋತ್ಸವಕ್ಕಾಗಿ ಹುಬ್ಬಳ್ಳಿಯಲ್ಲಿ ಇತ್ತೀ­ಚೆಗೆ ಬೃಹತ್‌ ಸಮಾವೇಶ ಏರ್ಪಡಿಸಲಾಗಿತ್ತು. ಜತೆಗೆ ಪ್ರೊ. ಶರ್ಮಾ ಅವರಿಗೆ 81ನೇ ಹುಟ್ಟುಹಬ್ಬ­ವನ್ನೂ ಇದೇ ಸಮಾರಂಭದಲ್ಲಿ ಆಚರಿಸಲಾಯಿತು. ಸಮಾರಂಭದಲ್ಲಿ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಒಟ್ಟಾಗಿ ಪಾಲ್ಗೊಂಡಿದ್ದುದು ವಿಶೇಷ. ಆದರೆ ತಾರತಮ್ಯ ನಿವಾರಣೆಗಾಗಿ ಹೋರಾಡಲು ಇದು ದಿನಗೂಲಿ ನೌಕರರ ಸಂಘಟನೆಗೆ ಸಿದ್ಧತಾ ಸಭೆಯಾಗಿದೆ ಎಂದು ಪ್ರೊ. ಶರ್ಮಾ ಘೋಷಿಸಿದ್ದು ಮಾತ್ರ ಸರ್ಕಾರಕ್ಕೆ  ಎಚ್ಚರಿಕೆಯ ಸಂದೇಶವೇ ಆಗಿದೆ. ಮತ್ತೆ ಚಳವಳಿಗೆ ಆಸ್ಪದ ನೀಡದೆ ತಾರತಮ್ಯ ನಿವಾರಿಸಲು ಸರ್ಕಾರ ತಕ್ಷಣ ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT