ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಬದಲಾವಣೆಗಾಗಿ ‘ಸುಧಾರಣೆ’

Last Updated 16 ಜೂನ್ 2018, 9:14 IST
ಅಕ್ಷರ ಗಾತ್ರ

ಜಾಗತಿಕ ಶಕ್ತಿಯಾಗಿ ಬೆಳೆಯಲು ಭಾರತಕ್ಕೆ ಬೇಕಿರುವುದೇನು? ದೊಡ್ಡ ಶಕ್ತಿಯಾಗಿ ಪರಿವರ್ತನೆ ಕಾಣಲು ಭಾರತ ಏನು ಮಾಡಬೇಕು? ಅಂತರರಾಷ್ಟ್ರೀಯ ವ್ಯವಹಾರಗಳ ನೆಲೆಯಲ್ಲಿ, ತನ್ನ ಪ್ರಭಾವವನ್ನು ಜಗತ್ತಿನ ಎಲ್ಲೆಡೆ ಬೀರುವ ತಾಕತ್ತಿರುವ ಸಾರ್ವಭೌಮ ರಾಷ್ಟ್ರವನ್ನು ಮಹಾನ್ ಶಕ್ತಿ ಎನ್ನಲಾಗುತ್ತದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ –ಇಂಥ ಮಹಾನ್ ಶಕ್ತಿಗಳು ಎಂದು ನಾವು ಎಣಿಸಿ ಹೇಳಬಹುದು.

ಭದ್ರತಾ ಮಂಡಳಿಯಲ್ಲಿ ಈ ರಾಷ್ಟ್ರಗಳು ಹೊಂದಿರುವ ವಿಟೊ ಅಧಿಕಾರ, ಆ ರಾಷ್ಟ್ರಗಳ ಬಳಿ ಇರುವ ಸಂಪತ್ತು ಮತ್ತು ಮಿಲಿಟರಿ ಶಕ್ತಿಯ ಕಾರಣ ಅವು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುವ ತಾಕತ್ತು ಹೊಂದಿವೆ. ಈ ಪೈಕಿ ಕೆಲವು ರಾಷ್ಟ್ರಗಳು ತಮ್ಮ ಮಿಲಿಟರಿ ಶಕ್ತಿ ಕಡಿಮೆಯಾಗುವಂತೆ ಉದ್ದೇಶಪೂರ್ವಕವಾಗಿ ಮಾಡುತ್ತಿವೆ. ಉದಾಹರಣೆಗೆ: ದೇಶಗಳ ನಡುವೆ ಯುದ್ಧ ಸಾಧ್ಯತೆ ಇಂದಿನ ಕಾಲದಲ್ಲಿ ತೀರಾ ಕಡಿಮೆ ಎಂಬ ಕಾರಣಕ್ಕೆ ಬ್ರಿಟನ್ ಮತ್ತು ಫ್ರಾನ್ಸ್ ತಮ್ಮ ಮಿಲಿಟರಿ ಪ್ರಾಬಲ್ಯ ಕಡಿಮೆ ಮಾಡಿಕೊಳ್ಳುತ್ತಿವೆ.

ಈ ಐದು ರಾಷ್ಟ್ರಗಳ ನಂತರದ ಸಾಲಿನಲ್ಲಿ ಜರ್ಮನಿ ಮತ್ತು ಜಪಾನ್ ಕಾಣಿಸಿಕೊಳ್ಳುತ್ತವೆ. ಆರ್ಥಿಕ ಶಕ್ತಿಯ ಕಾರಣ ಈ ಎರಡು ರಾಷ್ಟ್ರಗಳು ಜಾಗತಿಕ ಮಟ್ಟದಲ್ಲಿ ಪ್ರಭಾವಶಾಲಿಗಳು, ಮಿಲಿಟರಿ ಶಕ್ತಿಯ ದೃಷ್ಟಿಯಿಂದ ಅಲ್ಲ. ಇವೆರಡು ರಾಷ್ಟ್ರಗಳ ನಂತರದ ಸಾಲಿನಲ್ಲಿ ಸಣ್ಣ ರಾಷ್ಟ್ರಗಳಾದ ಸ್ಪೇನ್, ಸೌದಿ ಅರೇಬಿಯಾ, ಸಿಂಗಪುರ, ತೈವಾನ್, ಇಟಲಿ, ಚಿಲಿ, ಆಸ್ಟ್ರೇಲಿಯಾ, ಉತ್ತರ ಯುರೋಪ್ ಮತ್ತು ಉತ್ತರ ಅಟ್ಲಾಂಟಿಕ್ ರಾಷ್ಟ್ರಗಳು ಸ್ಥಾನ ಪಡೆದಿವೆ. ಇವು ಶ್ರೀಮಂತ ರಾಷ್ಟ್ರಗಳಾದರೂ ಅಷ್ಟೊಂದು ಪ್ರಭಾವಿ ಅಲ್ಲ.

ಈ ರಾಷ್ಟ್ರಗಳ ನಂತರದ ಸಾಲಿನಲ್ಲಿ ಭಾರತ ಮತ್ತು ಇತರ ಕೆಲವು ರಾಷ್ಟ್ರಗಳನ್ನು ಸೇರಿಸಬಹುದು. ಇವು ಅಷ್ಟೊಂದು ಶ್ರೀಮಂತ ರಾಷ್ಟ್ರಗಳಲ್ಲ. ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ಬ್ರೆಝಿಲ್ ಮತ್ತು ನೈಜೀರಿಯಾ ಕೂಡ ಈ ಸಾಲಿಗೆ ಸೇರುತ್ತವೆ. ನಾನು ಭಾರತವನ್ನು ನೈಜೀರಿಯಾ ಜೊತೆ ಹೋಲಿಸಿದ್ದು ಓದುಗರಿಗೆ ಆಶ್ಚರ್ಯ ತರಿಸಬಹುದು. ಆದರೆ ಭಾರತ ಮತ್ತು ನೈಜೀರಿಯಾ ದೇಶಗಳ ತಲಾ ಆದಾಯ ಒಂದೇ ಆಗಿದೆ. ಭಾರತ ಹೆಚ್ಚು ಪ್ರಸ್ತುತವಾಗಿ ಕಾಣಲು ಕಾರಣ ಇಲ್ಲಿನ ಬೃಹತ್ ಜನಸಂಖ್ಯೆ.

ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಡಾಲರ್ ಲೆಕ್ಕದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನಕ್ಕಿಂತ (ಜಿಡಿಪಿ) ಇಟಲಿಯ ಜಿಡಿಪಿ ಸಾಕಷ್ಟು ಹೆಚ್ಚಿದೆ. ಇಟಲಿಯ ಜನಸಂಖ್ಯೆ ಆರು ಕೋಟಿ ಮಾತ್ರ. ಅಂದರೆ, ಭಾರತದ ಜನಸಂಖ್ಯೆಗಿಂತ 20 ಪಟ್ಟು ಕಡಿಮೆ. ಹಾಗಾಗಿ, ಇಟಲಿಗೆ ಹೋಲಿಸಿದರೆ ನಮ್ಮ ತಲಾ ಉತ್ಪನ್ನ ಶೇಕಡ 5ರಷ್ಟಕ್ಕಿಂತ ಕಡಿಮೆ. ಇದು ಬದಲಾಗುತ್ತಿದೆ. ಆದರೆ ತೀರಾ ನಿಧಾನ ಗತಿಯಲ್ಲಿ.

ಹಾಗಾದರೆ, ಭಾರತವನ್ನು ಮಹಾನ್ ಶಕ್ತಿಯನ್ನಾಗಿ ಪರಿವರ್ತಿಸಲು ನಾವೇನು ಮಾಡಬೇಕು? ಈ ಕಾರ್ಯದಲ್ಲಿ ಸರ್ಕಾರದ ಪಾತ್ರ ಇರುವುದು ತೀರಾ ಕಡಿಮೆ ಎಂಬುದು ನನ್ನ ಅನಿಸಿಕೆ. ಹಣಕಾಸಿಗೆ ಸಂಬಂಧಿಸಿದ ದಿನಪತ್ರಿಕೆಗಳನ್ನು ನೋಡಿದರೆ, ‘ಸುಧಾರಣೆ’ ಎಂಬ ವಿಚಾರ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುತ್ತಿದೆ. ಭಾರತ ಯಶಸ್ಸು ಕಾಣಬೇಕು ಎಂದಾದರೆ ಸರ್ಕಾರ ಸುಧಾರಣೆ ತರಬೇಕು ಎಂದು ಒತ್ತಡ ತರಲಾಗುತ್ತಿದೆ. ಸುಧಾರಣೆಗಳು ಸಾಮಾನ್ಯವಾಗಿ ಮುಕ್ತ ಮಾರುಕಟ್ಟೆ ಮತ್ತು ವಾಣಿಜ್ಯ ಚಟುವಟಿಕೆ ನಡೆಸುವುದನ್ನು ಸುಲಭವಾಗಿಸುವ ಬಗ್ಗೆ ಇರುತ್ತವೆ. 

ಆದರೆ, ಹಲವಾರು ರಾಷ್ಟ್ರಗಳು ಸುಧಾರಣೆ ತಂದೂ ಮಹಾನ್ ಶಕ್ತಿಗಳಾಗಿ ಪರಿವರ್ತನೆ ಹೊಂದಿಲ್ಲ ಎಂಬುದು ವಾಸ್ತವ. ಸುಧಾರಣೆಗಳನ್ನು ತಾರದೆಯೂ ಮಹಾನ್ ಶಕ್ತಿ ಆಗಿರುವ ರಾಷ್ಟ್ರಗಳಿವೆ. ಹಿಂದಿನ ಸೋವಿಯತ್ ಒಕ್ಕೂಟದಲ್ಲಿ ಯೋಜಿತ ಅರ್ಥ ವ್ಯವಸ್ಥೆ ಇತ್ತು. ಅಲ್ಲಿನ ಆರ್ಥಿಕತೆಯಲ್ಲಿ ಎಲ್ಲವನ್ನೂ ಸರ್ಕಾರವೇ ನಿಯಂತ್ರಿಸುತ್ತಿತ್ತು. ಅಲ್ಲಿ ಸುಧಾರಣೆ ಎಂಬುದು ಇರಲಿಲ್ಲ.

ಆದರೂ 1947ರಿಂದ 1975ರ ನಡುವಿನ ಅವಧಿಯಲ್ಲಿ ಸೋವಿಯತ್ ಒಕ್ಕೂಟ ಎರಡಂಕಿಯ ಬೆಳವಣಿಗೆ ದರ ಸಾಧಿಸಿತು, ಭಾರತಕ್ಕಿಂತ ಹೆಚ್ಚಿನ ತಲಾವಾರು ಆದಾಯ ಅಲ್ಲಿತ್ತು. ಕ್ಯೂಬಾದಲ್ಲಿ ಕೂಡ ಮುಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಆದರೆ ಅಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕ (ಆರೋಗ್ಯ ಮತ್ತು ಶಿಕ್ಷಣದಲ್ಲಿ) ಜಗತ್ತಿನಲ್ಲೇ ಅತ್ಯುನ್ನತ ಮಟ್ಟದಲ್ಲಿದೆ. ಹಾಗಾಗಿ, ನಮಗೆ ಬೇಕಿರುವುದು ‘ಸುಧಾರಣೆ’ ಮಾತ್ರವೇ ಅಲ್ಲ.

ಯಶಸ್ಸು ಕಂಡ ಎಲ್ಲ ದೇಶಗಳೂ ಎರಡು ವಿಷಯಗಳಲ್ಲಿ ಮಹತ್ವದ್ದನ್ನು ಸಾಧಿಸಿವೆ. ಮೊದಲನೆಯದು: ರಾಷ್ಟ್ರದ ಪ್ರಭುತ್ವ ಎಲ್ಲಿಯತನಕ ವ್ಯಾಪಿಸಿದೆ ಎಂಬುದು. ಇದನ್ನು ನಾನು ಹಿಂಸೆಯನ್ನು ನಿಯಂತ್ರಿಸುವುದು, ತೆರಿಗೆ ವ್ಯವಸ್ಥೆಗೆ ಜನ ಸ್ವಯಂಪ್ರೇರಣೆಯಿಂದ ಒಗ್ಗಿಕೊಳ್ಳುವಂತೆ ಮಾಡುವುದು, ವಿವಿಧ ಸೇವೆಗಳನ್ನು ಮತ್ತು ನ್ಯಾಯದಾನ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ನಡೆಸುವುದು ಎಂದು ನಾನು ವ್ಯಾಖ್ಯಾನಿಸುತ್ತೇನೆ. ಪ್ರಭುತ್ವವು ಬಂಡವಾಳಶಾಹಿಯೋ, ಸಮಾಜವಾದಿಯೋ, ನಿರಂಕುಶವಾದಿಯೋ ಅಥವಾ ಪ್ರಜಾತಂತ್ರದಲ್ಲಿ ನಂಬಿಕೆ ಇರಿಸಿರುವುದೋ ಎಂಬುದು ಇಲ್ಲಿ ಮುಖ್ಯವಲ್ಲ. ಆದರೆ ಪ್ರಭುತ್ವವು ವ್ಯವಸ್ಥೆಯ ಎಲ್ಲ ರಂಗಗಳಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಬೇಕು.

ಈ ಎಲ್ಲ ವಿಚಾರಗಳಲ್ಲಿ ಭಾರತದ ಪ್ರಭುತ್ವ ಯಾವತ್ತೂ ಸೋಲುತ್ತ ಬಂದಿದೆ. ಇದಕ್ಕೆ ಗುಜರಾತ್ ಕೂಡ ಹೊರತಲ್ಲ. ಎರಡನೆಯ ವಿಚಾರವೆಂದರೆ: ಸಮಾಜದ ಗಟ್ಟಿತನ ಮತ್ತು ಚಲನಶೀಲತೆ. ಹೊಸತನ್ನು ಕಂಡುಕೊಳ್ಳುವ ಹಂಬಲ, ಮಾನವೀಯ ಕಾರ್ಯಗಳನ್ನು ನಡೆಸುವ ಆಸೆ ಪ್ರಗತಿಪರ ಸಮಾಜದ ಲಕ್ಷಣಗಳು. ಇದು ಸಂಕೀರ್ಣ ವಿಚಾರ. ಇದರ ಬಗ್ಗೆ ನಾನು ಇನ್ನೊಮ್ಮೆ ಬರೆಯುತ್ತೇನೆ.

ಸರಳವಾಗಿ ಹೇಳಬೇಕೆಂದರೆ, ಮೊದಲು ಉಲ್ಲೇಖಿಸಿದ ಕೆಲಸ ಮಾಡಲು ಕಾನೂನು ಬದಲಾಯಿಸಬೇಕಿಲ್ಲ. ಇನ್ನೂ ಚಿಕ್ಕದಾಗಿ, ಚೊಕ್ಕವಾಗಿ ಹೇಳಬೇಕೆಂದರೆ ಇದು ‘ಸುಧಾರಣೆ’ಗಳಿಗೆ ಸಂಬಂಧಿಸಿದ ಸಂಗತಿಯೇ ಅಲ್ಲ. ಇದು ಆಡಳಿತಕ್ಕೆ ಸಂಬಂಧಿಸಿದ ವಿಚಾರ. ಕೆಲಸಗಳನ್ನು ಅನುಷ್ಠಾನಕ್ಕೆ ತರಲು ಪ್ರಭುತ್ವಕ್ಕೆ ಎಷ್ಟು ಸಾಮರ್ಥ್ಯವಿದೆ ಎಂಬುದರ ಮೇಲೆ ಇದು ನಿರ್ಧಾರವಾಗುತ್ತದೆ. ಅನುಷ್ಠಾನಕ್ಕೆ ತರಲು ಪ್ರಭುತ್ವಕ್ಕೆ ಸಾಮರ್ಥ್ಯ ಇಲ್ಲವಾದರೆ, ಕಾನೂನಿನಲ್ಲಿ ಯಾವ ಬದಲಾವಣೆ ತಂದರೂ ಪ್ರಯೋಜನ ಇಲ್ಲ. ಈ ಕಾರಣಕ್ಕೇ ಮಲೇಷ್ಯಾದಲ್ಲಿ ಪ್ರಧಾನಿ ಮಾಡಿದ ಭಾಷಣ ನನಗೆ ಇಷ್ಟವಾಯಿತು. ಅವರ ಭಾಷಣದಲ್ಲಿ ಇವು ಮುಖ್ಯ ಅಂಶಗಳು.

‘ಸುಧಾರಣೆಯೇ ಅಂತಿಮವಲ್ಲ. ಗುರಿ ತಲುಪಲು ಕ್ರಮಿಸಬೇಕಿರುವ ಸುದೀರ್ಘ ಹಾದಿಯಲ್ಲಿ ಸುಧಾರಣೆ ಎಂಬುದು ಒಂದು ನಿಲ್ದಾಣ ಮಾತ್ರ. ಭಾರತವನ್ನು ಬದಲಾಯಿಸುವುದೇ ಗುರಿ.’ 2014ರಲ್ಲಿ ತಾವು ಪ್ರಧಾನಿಯಾಗಿ ಆಯ್ಕೆಯಾದಾಗ ದೇಶದ ಆರ್ಥಿಕ ವ್ಯವಸ್ಥೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿತ್ತು. ಚಾಲ್ತಿ ಖಾತೆ ಕೊರತೆ ಹೆಚ್ಚಿತ್ತು, ಮೂಲಸೌಕರ್ಯ ಯೋಜನೆಗಳು ನಿಂತುಹೋಗಿದ್ದವು ಮತ್ತು ಹಣದುಬ್ಬರ ಏರುಗತಿಯಲ್ಲೇ ಇತ್ತು ಎಂದು ಅವರು ಹೇಳಿದರು.

‘ಸುಧಾರಣೆಗಳನ್ನು ತರಲೇಬೇಕಿತ್ತು. ನಾವು ನಮ್ಮಲ್ಲೇ ಒಂದು ಪ್ರಶ್ನೆ ಕೇಳಿಕೊಂಡೆವು – ಯಾವ ಸುಧಾರಣೆಗಳು? ಸುಧಾರಣೆಗಳ ಗುರಿ ಏನು? ಜಿಡಿಪಿ ಬೆಳವಣಿಗೆ ದರ ಹೆಚ್ಚಿಸಲು ಮಾತ್ರ ಸುಧಾರಣೆಯೇ? ಅಥವಾ ಸಮಾಜದಲ್ಲಿ ಬದಲಾವಣೆ ತರಲು ಈ ಸುಧಾರಣೆಯೇ? ನನ್ನ ಉತ್ತರ ಸ್ಪಷ್ಟವಾಗಿತ್ತು: ಬದಲಾವಣೆಗಾಗಿ ಸುಧಾರಣೆ’ ಎಂದು ಪ್ರಧಾನಿ ಹೇಳಿದರು.

ಅವರು ವಿಚಾರವನ್ನು ಸರಿಯಾದ ರೀತಿಯಲ್ಲಿ ಕಂಡಿದ್ದಾರೆ ಎಂದು ನನಗೆ ಅನಿಸುತ್ತಿದೆ. ಸಮಾಜವನ್ನು ಸರ್ಕಾರಗಳು ಹೊರಗಿನಿಂದ ಬದಲಾಯಿಸಲು ಆಗದು, ಬದಲಾವಣೆ ಒಳಗಿನಿಂದ ಸಾಂಸ್ಕೃತಿಕವಾಗಿ ಬರಬೇಕು ಎಂಬುದು ನನ್ನ ಅಭಿಪ್ರಾಯ. ಏನೇ ಇರಲಿ, ಪ್ರಧಾನಿಯವರ ಭಾಷಣದಲ್ಲಿ ತೋರುವಷ್ಟೇ ಸ್ಪಷ್ಟತೆಯನ್ನು ಅನುಷ್ಠಾನದಲ್ಲೂ ತೋರುತ್ತಾರಾ ಎಂಬುದನ್ನು ನೋಡಬೇಕು.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT