ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಏನೂ ಅಲ್ಲ

Last Updated 14 ಜನವರಿ 2013, 19:59 IST
ಅಕ್ಷರ ಗಾತ್ರ

ಇದು ಸುಮಾರು ಹತ್ತು ವರ್ಷಗಳ ಹಿಂದೆ ನಡೆದ ಘಟನೆ. ನಾನು ಯಾವುದೋ ತರಬೇತಿಗೆಂದೋ, ಭಾಷಣಕ್ಕೆಂದೋ ವಿಜಾಪುರಕ್ಕೆ ಹೋಗಿದ್ದೆ. ಸುಮಾರು ಸಾವಿರ ಸಂಖ್ಯೆಯ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಬಂದಿದ್ದರು. ವೇದಿಕೆಯ ಮೇಲೂ ನಾಲ್ಕಾರು ಜನ ಪ್ರಮುಖರಿದ್ದರು. ಕಾರ್ಯಕ್ರಮ ಚೆನ್ನಾಗಿಯೇ ಆಯಿತು. ವಿದ್ಯಾರ್ಥಿಗಳ ಪ್ರತಿಕ್ರಿಯೆ ಅದ್ಭುತವಾಗಿತ್ತು. 

ಕಾರ್ಯಕ್ರಮ ಮುಗಿದ ಮೇಲೆ ಹತ್ತಾರು ಜನ ಸುತ್ತ ಮುತ್ತಿಕೊಂಡು ಏನೇನೋ ಪ್ರಶ್ನೆಗಳನ್ನು ಕೇಳುತ್ತಿದ್ದರು. ಸ್ವಲ್ಪ ದೂರದಲ್ಲಿ  ಒಬ್ಬ ಹುಡುಗಿ ನಿಂತದ್ದು ಕಣ್ಣಿಗೆ ಬಿತ್ತು. ಆಕೆ ತುಂಬ ನಾಚಿಕೆಯ ಸ್ವಭಾವದವಳಾಗಿರಬೇಕು ಎನ್ನಿಸಿತು. ಆಕೆ ತನ್ನೆರಡೂ ಕೈಗಳನ್ನು ಎದೆಗವುಚಿಕೊಂಡು ಒಂದು ಕೈಯಲ್ಲಿ  ಪೆನ್ನನ್ನು ತುಟಿಗೆ ಒತ್ತಿಕೊಂಡು, ಕಣ್ಣರಳಿಸಿ ಸುತ್ತಲೂ ನೋಡುತ್ತ ನಿಂತಿದ್ದಳು. ನನ್ನ ಸುತ್ತಮುತ್ತ ಇದ್ದ ಜನ ಸ್ವಲ್ಪ ಕರಗಿದಂತೆ ಆಕೆ ಹತ್ತಿರಕ್ಕೆ ಬಂದು,  `ಸರ್, ನಾನು ನಿಮ್ಮ ಕೈ ಕುಲುಕಬಹುದೇ'  ಎಂದು ಕೇಳಿದಳು. ನಾನು,  `ಅದಕ್ಕೇನು ಚಿಂತೆ'  ಎಂದು ಕೈ ಚಾಚಿದೆ. ಆಗ ಆಕೆ,  `ಸರ್, ವೇದಿಕೆಯ ಮೇಲೆ, ಸುತ್ತಮುತ್ತ ಇಷ್ಟು ದೊಡ್ಡ ದೊಡ್ಡ ಜನರಿದ್ದಾರೆ. ಅವರ ಮುಂದೆ ನಾನು ಏನೂ ಅಲ್ಲ. ಅದಕ್ಕೇ ಕೇಳಿದೆ' ಎಂದಳು.

ಅಷ್ಟರಲ್ಲಿ  ಇನ್ನಾರೋ ಹತ್ತಿರ ಬಂದು ನನ್ನನ್ನು ಮಾತನಾಡಿಸಿದಾಗ ಆಕೆ ಹಿಂದೆ ಸರಿದಳು. ವೇದಿಕೆಯ ಮೇಲಿನ ಸ್ನೇಹಿತರು ಹತ್ತಿರದಲ್ಲಿದ್ದಾಗ ನಾನು ಆಕೆಯನ್ನು ಕರೆದೆ. ಆಕೆ ಹತ್ತಿರಕ್ಕೆ ಬಂದಾಗ ಉಳಿದವರಿಗೆ ಹೇಳಿದೆ,  ಈಕೆಯ ಹೆಸರು  `ನಾನು ಏನೂ ಅಲ್ಲ', ಆಕೆ ತಕ್ಷಣ  `ಅದು ನನ್ನ ಹೆಸರಲ್ಲ ಸರ್' ಎಂದಳು.  `ಇದೇ ತಾನೇ ನೀನೇ ಹೇಳಿದೆಯಲ್ಲಮ್ಮ, ನಾನು ಏನೂ ಅಲ್ಲ ಅಂತ' ಎಂದು ಕೇಳಿದೆ.

ಆಕೆ,  `ಹಾಗಲ್ಲ ಸರ್'  ಎಂದು ಮತ್ತೇನೋ ಹೇಳಹೊರಟಾಗ ಆಕೆಯನ್ನು ಪಕ್ಕದಲ್ಲಿ  ಕುಳ್ಳಿರಿಸಿಕೊಂಡು ಹೇಳಿದೆ,  `ಮಗೂ, ದಯವಿಟ್ಟು ಎಂದಿಗೂ ನಾನು ಏನೂ ಅಲ್ಲ ಎಂದು ಹೇಳಬೇಡ. ನಮ್ಮೆಲ್ಲರಂತೆ ನೀನೂ ಕೂಡ ಭಗವಂತನ ಆ ಶಕ್ತಿಯ ಒಂದಂಶ. ಪ್ರತಿದಿನ ನೀನೇ ಹೇಳಿಕೋ ನಾನು ಭಗವಂತನ ಮಗು ಎಂದು. ಮನುಷ್ಯ ಜನ್ಮ ಭಗವಂತನ ಸೃಷ್ಟಿಶೈಲದ ಶಿಖರ. ಅದು ಹೇಗೆ ಅಪ್ರಯೋಜಕವಾಗಿದ್ದೀತು. ನಿನ್ನ ಆತ್ಮವಿಶ್ವಾಸ ಕಳೆದುಕೊಳ್ಳಬೇಡ'  ಎಂದು ಒಂದೆರಡು ಪ್ರೋತ್ಸಾಹದಾಯಕ ಮಾತುಗಳನ್ನು ಹೇಳಿ ಬಂದೆ. ಮುಂದೆ ನನಗೆ ಅದು ಮರೆತೇ ಹೋಯಿತು.

ಈಗ ಒಂದೆರಡು ತಿಂಗಳುಗಳ ಹಿಂದೆ ದೆಹಲಿಗೆ ಹೋಗಿದ್ದಾಗ ಒಂದು ಸಂಜೆ ನಡೆದು ಹೋಗುತ್ತಿದ್ದೆ. ಯಾರೋ ನನ್ನನ್ನು ಅವಸರವಸರವಾಗಿ ಬೆನ್ನತ್ತಿ ಬಂದರು. ತಿರುಗಿ ನೋಡಿದರೆ ಒಬ್ಬ ಮಹಿಳೆ ಹಾಗೂ ಒಬ್ಬ ಗಂಡಸು. ಆಕೆ ನನ್ನನ್ನು ನೋಡಿ,  `ನಮಸ್ಕಾರ ಸಾರ್'. ಎಂದು ಕೈ ಚಾಚಿದಳು. ನಾನು ಕೈ ಕುಲುಕಿದಾಗ  `ಗುರುತು ಸಿಕ್ಕಿತೇ'  ಎಂದು ಕೇಳಿದಳು. ನಾನು ಸ್ವಲ್ಪ ತಬ್ಬಿಬ್ಬಾಗಿ  `ಇಲ್ಲ, ಗೊತ್ತಾಗಲಿಲ್ಲ'  ಎಂದಾಗ  `ನಾನೇ ಸಾರ್,  ನಾನು ಏನೂ ಅಲ್ಲ  ಹುಡುಗಿ'  ಎಂದು  ನಕ್ಕಳು. ಪಕ್ಕದಲ್ಲಿದ್ದವರು ತನ್ನ ಗಂಡ ಎಂದು ಪರಿಚಯಿಸಿದಳು. ಆಕೆ ಈಗ ದೆಹಲಿಯ ಅತ್ಯಂತ ಶ್ರೇಷ್ಠ ಮೆಡಿಕಲ್ ಕಾಲೇಜಿನಲ್ಲಿ  ಪ್ರೊಫೆಸರ್ ಆಗಿದ್ದಾಳೆ. ಒಳ್ಳೆಯ ಶಸ್ತ್ರತಜ್ಞೆ ಎನ್ನಿಸಿಕೊಂಡಿದ್ದಾಳೆ. ವೈದ್ಯ ಗಂಡನಿಗೂ ಅಲ್ಲಿಯೇ ಕೆಲಸ. `ಸರ್ ನಿಮ್ಮ ಅಂದಿನ ಮಾತು  ನಾನು ಏನೂ ಅಲ್ಲ ಎನ್ನುವವಳನ್ನು  ನಾನು ಎಲ್ಲವೂ ಆಗಿದ್ದೇನೆ  ಎಂಬ ಮಟ್ಟಕ್ಕೆ ತಂದಿದೆ'  ಎಂದು ಮತ್ತೆ ನಕ್ಕಳು. ಅವಳ ಕಣ್ಣಿನ ಮಿಂಚು ನನ್ನ ಹೃದಯದಲ್ಲಿ  ತೃಪ್ತಿಯ ಹೊಳೆ ಹರಿಯಿಸಿತು. ತುಂಬ ಹೊತ್ತು ಮಾತನಾಡಿದೆವು.

`ನಾನು ಏನೂ ಅಲ್ಲ, ನನ್ನಿಂದ ಏನೂ ಸಾಧ್ಯವಿಲ್ಲ, ನನಗೆ ಭವಿಷ್ಯವಿಲ್ಲ ಎಂದು ತರುಣ, ತರುಣಿಯರು ಯಾಕೆ ಕೊರಗುತ್ತಾರೋ ತಿಳಿಯದು. ಮಹಾನ್ ಸಾಧಕರ ದೇಹದಲ್ಲಿ ಇರುವುದೇ ಇವರಲ್ಲಿ ಯೂ ಇರುವುದು. ವ್ಯತ್ಯಾಸ ಇಷ್ಟೇ. ಸಾಧಕರು ಸಣ್ಣ ಸೋಲುಗಳನ್ನು ಜೀವನದ ಕೊನೆ ಎಂದುಕೊಳ್ಳುವುದಿಲ್ಲ, ಮತ್ತೊಂದು ಪ್ರಯತ್ನಕ್ಕೆ ಇನ್ನಷ್ಟು ಉತ್ಸಾಹ ತೋರುತ್ತಾರೆ.  ನಾನು ಏನೂ ಅಲ್ಲ  ಮತ್ತು  ನಾನು ಎಲ್ಲವೂ ಆಗಿದ್ದೇನೆ  ಇವುಗಳ ನಡುವಿನ ವ್ಯತ್ಯಾಸ ಜಗ್ಗದ ಆತ್ಮವಿಶ್ವಾಸ, ಸತತ ಪ್ರಯತ್ನ. ಇವೆರಡನ್ನೂ ನಾವು ಬಿಡದೆ ಉಳಿಸಿಕೊಂಡರೆ ಯಾವ ಸಾಧನೆಯೂ ಅಸಾಧ್ಯವಲ್ಲ'..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT