ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಕಾನ್ ಕೂಲ್‌ಪಿಕ್ಸ್ ಪಿ340 ಶಕ್ತಿವಂತ ಪುಟಾಣಿ ಕ್ಯಾಮೆರಾ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುವ ಬಹುತೇಕ ಕಂಪೆನಿಗಳಂತೆ ನಿಕಾನ್ ಕೂಡ ತನ್ನ ಜನಪ್ರಿಯ ಮಾದರಿಗಳನ್ನು ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಹೊಸ ಮಾದರಿ ಎಂದು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ನಿಕಾನ್ ಕೂಲ್‌ಪಿಕ್ಸ್ ಪಿ330 ಒಂದು ಜನಪ್ರಿಯ ಕ್ಯಾಮೆರಾ ಆಗಿದೆ. ಏಮ್-ಆಂಡ್-ಶೂಟ್ ಮಾದರಿಯ ಕ್ಯಾಮೆರಾ ಆಗಿದ್ದೂ ಇದರಲ್ಲಿ ಎಸ್ಎಲ್ಆರ್ ಕ್ಯಾಮೆರಾಗಳ ಹಲವು ಸವಲತ್ತುಗಳಿವೆ. ಅಷ್ಟು ಮಾತ್ರವಲ್ಲ ಇದರ ಫಲಿತಾಂಶವೂ ಅಂತೆಯೇ ಉತ್ತಮವಾಗಿದೆ.

ಈ ಕ್ಯಾಮೆರಾ ಬಗ್ಗೆ ಇದೇ ಅಂಕಣದಲ್ಲಿ ವಿಮರ್ಶೆ ಬರೆಯಲಾಗಿತ್ತು (ಜೂನ್ 13, 2013). ಇತ್ತೀಚೆಗೆ ನಿಕಾನ್ ಕಂಪೆನಿಯ ಈ ಕ್ಯಾಮೆರಾದ ಬದಲಿಗೆ ಕೂಲ್‌ಪಿಕ್ಸ್ ಪಿ340 (Nikon Coolpix P340) ಎಂಬ ಹೊಸ ಕ್ಯಾಮೆರಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ನಮ್ಮ ಈ ವಾರದ ಅತಿಥಿ.

ಗುಣವೈಶಿಷ್ಟ್ಯಗಳು
ಏಮ್-ಆಂಡ್-ಶೂಟ್ ನಮೂನೆ, 5x ಆಪ್ಟಿಕಲ್ ಝೂಮ್, 4x ಡಿಜಿಟಲ್ ಝೂಮ್, 35 ಮಿ.ಮೀ. ಕ್ಯಾಮೆರಾಕ್ಕೆ ಹೋಲಿಸುವುದಾದರೆ 24 ಮಿ.ಮೀ. ಯಿಂದ 120 ಮಿ.ಮೀ. ಫೋಕಲ್ ಲೆಂತ್, 12.2 ಮೆಗಾಪಿಕ್ಸೆಲ್ ರೆಸೊಲೂಶನ್, ಪೂರ್ತಿ ಹೈಡೆಫಿನಿಶನ್ ವಿಡಿಯೊ ರೆಕಾರ್ಡಿಂಗ್ ಸೌಲಭ್ಯ, ಸ್ಟೀರಿಯೊ ಆಡಿಯೊ ರೆಕಾರ್ಡಿಂಗ್, 75 ಮಿ.ಮೀ. ಎಲ್‌ಸಿಡಿ ಪರದೆ, ಸಿಎಂಓಎಸ್ ತಂತ್ರಜ್ಞಾನ, F/1.8 - F/5.6, 1 ಸೆಕೆಂಡಿನಿಂದ 1/2000 ಸೆಕೆಂಡು ಷಟರ್ ವೇಗ, 80 ರಿಂದ 6400 ಐಎಸ್ಓ ಆಯ್ಕೆ, 56 ಮೆಗಾಬೈಟ್ ಮೆಮೊರಿ, ಹೆಚ್ಚಿಗೆ ಮೆಮೊರಿಗೋಸ್ಕರ ಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, ಗಣಕಕ್ಕೆ ಯುಎಸ್‌ಬಿ ಮೂಲಕ ಜೋಡಣೆ, ವಿಡಿಯೊಗಾಗಿ ಚಿಕ್ಕ ಎಚ್‌ಡಿಎಂಐ ಕಿಂಡಿ, ಹಲವು ನಮೂನೆಯ ದೃಶ್ಯಗಳ ಆಯ್ಕೆ, ಷಟರ್ ಪ್ರಯಾರಿಟಿ, ಅಪೆರ್ಚರ್ ಪ್ರಯಾರಿಟಿ, ಸಂಪೂರ್ಣ ಮ್ಯಾನ್ಯುವಲ್, ಸಂಪೂರ್ಣ ಆಟೋಮ್ಯಾಟಿಕ್, ವೈಫೈ, 103x58.3x32 ಮಿ.ಮೀ. ಗಾತ್ರ, 194 ಗ್ರಾಂ ತೂಕ, ಇತ್ಯಾದಿ.

ಮೇಲ್ನೋಟಕ್ಕೆ ಕಾಣಿಸುವುದೇನೆಂದರೆ ಒಂದು ಮಟ್ಟಿನ ಉತ್ತಮ ಕ್ಯಾಮೆರಾದ ಗುಣವೈಶಿಷ್ಟ್ಯಗಳೆಲ್ಲ ಇದರಲ್ಲಿವೆ. ಇದರ ಮಾರುಕಟ್ಟೆ ಬೆಲೆ ಸುಮಾರು ₹18,000. ಈ ಕ್ಯಾಮೆರಾದ ವಿಮರ್ಶೆ ಓದುವ ಮೊದಲು ಈ ಹಿಂದೆ ಇದೇ ಅಂಕಣದಲ್ಲಿ ಪ್ರಕಟವಾದ ನಿಕಾನ್ ಪಿ330 ಕ್ಯಾಮೆರಾದ ವಿಮರ್ಶೆಯನ್ನು ಓದಿಕೊಂಡರೆ ಒಳ್ಳೆಯದು. ಯಾಕೆಂದರೆ ಈ ಕ್ಯಾಮೆರಾ ಬಹುತೇಕ ವಿಭಾಗಗಳಲ್ಲಿ ಅದನ್ನೇ ಹೋಲುತ್ತದೆ ಮತ್ತು ಗುಣಮಟ್ಟದಲ್ಲೂ ಅದೇ ಮಟ್ಟದಲ್ಲಿದೆ. ಆ ವಿಮರ್ಶೆ ಪ್ರಕಟವಾಗಿ ತುಂಬ ಸಮಯವಾಗಿರುವುದರಿಂದ ಕೆಲವು ವಿಷಯಗಳನ್ನು ಇಲ್ಲಿ ಮತ್ತೊಮ್ಮೆ ಬರೆಯಬೇಕಾಗಿದೆ.

ಈ ಕ್ಯಾಮೆರಾ ಚಿಕ್ಕದಾಗಿದ್ದು ಕಿಸೆಯಲ್ಲಿ ಹಿಡಿಸುತ್ತದೆ. ಕ್ಯಾಮೆರಾದ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಎಲ್ಲ ಆಯ್ಕೆಗಳು ಸುಲಭವಾಗಿ ದೊರೆಯುವಂತಿವೆ. ಲೆನಸ್‌ನ ಸುತ್ತ ಒಂದು ಬಳೆ (ರಿಂಗ್) ಇದೆ. ಇದು ಸಂದರ್ಭಕ್ಕನುಗುಣವಾಗಿ ಹಲವು ಕೆಲಸಗಳನ್ನು ಮಾಡುತ್ತದೆ. ಉದಾಹರಣೆಗೆ ನೀವು ಷಟರ್ ಪ್ರಯಾರಿಟಿಯನ್ನು ಆಯ್ಕೆ ಮಾಡಿಕೊಂಡು ಷಟರ್ ವೇಗವನ್ನು ಅದಕ್ಕಾಗಿಯೇ ನೀಡಿರುವ ನಿಯಂತ್ರಕದ ಮೂಲಕ ಬದಲಿಸುವಾಗ ಈ ರಿಂಗ್ ಐಎಸ್ಓ ವೇಗವನ್ನು ಬದಲಿಸುತ್ತದೆ.

ಈ ಕ್ಯಾಮೆರಾದಲ್ಲಿ ಇರುವುದು ವಿಆರ್ (VR = Vibration Reduction) ಲೆನ್ಸ್ ಅಂದರೆ ಫೋಟೊ ತೆಗೆಯುವಾಗ, ಅದರಲ್ಲೂ ಕಡಿಮೆ ಷಟರ್ ವೇಗದಲ್ಲಿ, ಕೈ ಅಲ್ಪಸ್ವಲ್ಪ ಅಲುಗಾಡಿದರೂ ಫೋಟೊ ಸ್ಫುಟವಾಗಿ ಮೂಡಿಬರುತ್ತದೆ. ಈ ಕ್ಯಾಮೆರಾದ ಲೆನ್ಸ್‌ನ ಆಪ್ಟಿಕಲ್ ಝೂಮ್ ಮಾತ್ರ 5x ಇದೆ. ಆದರೆ ಇದರಿಂದಾಗಿ ಹಲವು ಲಾಭಗಳೂ ಇವೆ. ಮುಖ್ಯವಾಗಿ ಕ್ಯಾಮೆರಾದ ಗಾತ್ರ ಚಿಕ್ಕದಾಗಿದೆ. ಲೆನ್ಸ್‌ನಲ್ಲಿ ಉಳಿಸಿದ ಹಣವನ್ನು ನಿಕಾನ್ ಕಂಪೆನಿಯವರು ನಿಮಗೆ ಡಿಎಸ್ಎಲ್ಆರ್ ಕ್ಯಾಮೆರಾಗಳಲ್ಲಿ ನೀಡುವ ಹಲವು ಸವಲತ್ತುಗಳನ್ನು ನೀಡಲು ವ್ಯಯಿಸಿದ್ದಾರೆ. 

ನಿಕಾನ್ ಕೂಲ್‌ಪಿಕ್ಸ್ ಪಿ340 ಕ್ಯಾಮೆರಾದಲ್ಲಿ ಪೂರ್ತಿ ಹೈಡೆಫಿನಿಶನ್ ವಿಡಿಯೊ ಚಿತ್ರೀಕರಣ ಮಾಡುವ ಸೌಲಭ್ಯ ಇದೆ. ಕಡಿಮೆ ಗುಣಮಟ್ಟದ ವಿಡಿಯೊ ಕೂಡ ಮಾಡಬಹುದು. ನಾನು ಚಿತ್ರೀಕರಿಸಿದ ವಿಡಿಯೊಗಳ ಗುಣಮಟ್ಟ ಚೆನ್ನಾಗಿಯೇ ಇದೆ. ಒಂದು ತೊಡಕೆಂದರೆ ಎಷ್ಟೇ ಮೆಮೊರಿಯ ಕಾರ್ಡ್‌ ಹಾಕಿದ್ದರೂ ಒಂದು ಸಲಕ್ಕೆ 30 ನಿಮಿಷಗಳಷ್ಟು ವಿಡಿಯೊ ಮಾತ್ರ ಚಿತ್ರೀಕರಿಸಬಹುದು. ಇದರಲ್ಲಿ ಇನ್ನೊಂದು ವಿಶಿಷ್ಟ ಸೌಲಭ್ಯ ಇದೆ. ವಿಡಿಯೊ ರೆಕಾರ್ಡಿಂಗ್ ಆಗುತ್ತಿರುವಂತೆಯೇ ಮಧ್ಯ ಮಧ್ಯ ಸ್ಥಿರಚಿತ್ರಗಳನ್ನೂ ತೆಗೆಯಬಹುದು. ಇದೊಂದು ಉತ್ತಮ ಸೌಲಭ್ಯ ಎನ್ನಬಹುದು. 

ಈ ಕ್ಯಾಮೆರಾದಲ್ಲಿ ವೈಫೈ ಸೌಲಭ್ಯ ಇದೆ. ಅಂತರಜಾಲದಲ್ಲಿ ಉಚಿತವಾಗಿ ದೊರೆಯುವ ಸೂಕ್ತ ಕಿರುತಂತ್ರಾಂಶ (ಆಪ್) ಬಳಸಿ ವೈಫೈ ಮೂಲಕ ಸ್ಮಾರ್ಟ್‌ಫೋನ್‌ಗೆ ಫೋಟೊ ಮತ್ತು ವಿಡಿಯೊಗಳನ್ನು ವರ್ಗಾಯಿಸಬಹುದು. ಜಿಪಿಎಸ್ ಸೌಲಭ್ಯ ಮಾತ್ರ ಇಲ್ಲ. ನಿಕಾನ್ ಪಿ330ರಲ್ಲಿ ಆ ಸೌಲಭ್ಯ ಇದೆ. ಹಳೆಯ ಮಾದರಿಯಲ್ಲಿ ನೀಡಿದ ಉತ್ತಮ ಸೌಲಭ್ಯವನ್ನು ಹೊಸ ಮಾದರಿಯಲ್ಲಿ ಕಿತ್ತುಹಾಕಿದ್ದು ಯಾಕೆ ಎಂದು ಮಾತ್ರ ಅರ್ಥವಾಗುವುದಿಲ್ಲ. ಈ ಒಂದು ವಿಷಯದಲ್ಲಿ ನಿಕಾನ್ ಕಂಪೆನಿಯವರು ಬಹುದೊಡ್ಡ ತಪ್ಪು ಮಾಡಿದ್ದಾರೆ ಎನ್ನಬಹುದು.

ಫೋಟೊಗಳ ಗುಣಮಟ್ಟದಲ್ಲಿ, ಅದರಲ್ಲೂ ಪ್ರಮುಖವಾಗಿ ಫೋಟೊಗಳ ಬಣ್ಣವು ನಿಜ ಬಣ್ಣಕ್ಕೆ ಸಾಮ್ಯದಲ್ಲಿ, ಅಧಿಕ ಐಎಸ್ಓ ಆಯ್ಕೆಯಲ್ಲಿ ಫೋಟೊ ತೆಗೆದಾಗ ದೊರೆಯುವ ಫಲಿತಾಂಶದಲ್ಲಿ, ಹೀಗೆ ಎಲ್ಲ ವಿಭಾಗಗಳಲ್ಲಿ ಈ ಕ್ಯಾಮೆರಾವು ಪಿ330ಕ್ಕಿಂತ ಸ್ವಲ್ಪ ಮಟ್ಟಿಗೆ ಸುಧಾರಿತ ಕ್ಯಾಮೆರಾ ಎನ್ನಬಹುದು. ಆದರೆ ಪಿ340ರ ಬೆಲೆ (₹18,000) ಪಿ330ರ ಬೆಲೆಗಿಂತ (₹15500) ಜಾಸ್ತಿ. ಅಧಿಕವಾಗಿ ನೀಡುವ ಬೆಲೆಗೆ ಹೋಲಿಸಿದರೆ ಅಧಿಕವಾಗಿ ದೊರೆಯುವ ಸವಲತ್ತು ಸ್ವಲ್ಪ ಕಡಿಮೆಯಾಯಿತು ಎನ್ನಬಹುದು. ಈಗ ಪಿ330 ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ. ಆದುದರಿಂದ ಅದರ ಬದಲಿಗೆ ಇದನ್ನೇ ಕೊಳ್ಳಬೇಕಾಗಿದೆ. ದೊಡ್ಡ ಡಿಎಸ್ಎಲ್ಆರ್ ಹೊತ್ತುಕೊಂಡು ತಿರುಗಾಡುವುದು ಕಷ್ಟವಾದ ಸಂದರ್ಭಗಳಲ್ಲಿ ಇದನ್ನು ಬಳಸಬಹುದು.  

ವಾರದ ಆಪ್ (app)
ಕಾಮ್‌ಸ್ಕ್ಯಾನರ್  
ನಿಮಗೆ ಕೆಲವು ರಶೀದಿ, ಇನ್‌ವಾಯಿಸ್, ನೋಟೀಸ್, ಪತ್ರಿಕೆಯಲ್ಲಿ ಬಂದ ವರದಿ, ಇತ್ಯಾದಿಗಳನ್ನು ನಿಮ್ಮ ಸ್ಮಾರ್ಟ್‌ಫೋನಿನ ಕ್ಯಾಮೆರಾ ಬಳಸಿ ಸ್ಕ್ಯಾನ್ ಮಾಡಿ ಅನ್ನು ಪಿಡಿಎಫ್ ಕಡತವಾಗಿ ಪರಿವರ್ತಿಸಿ ನಿಮ್ಮ ಸ್ನೇಹಿತರಿಗೆ ಕಳುಹಿಸಬೇಕಾಗಿದೆಯೇ? ಹಾಗಿದ್ದರೆ ನಿಮಗೆ ಈ ಕಾಮ್‌ಸ್ಕ್ಯಾನರ್ (CamScanner -Phone PDF Creator)ಎಂಬ ಕಿರುತಂತ್ರಾಂಶ ಬೇಕು.

ಇದು ಆಂಡ್ರಾಯಿಡ್‌ಗೆ ಮಾತ್ರವಲ್ಲ, ವಿಂಡೋಸ್ ಫೋನ್ ಮತ್ತು ಐಫೋನ್‌ಗೂ ಲಭ್ಯವಿದೆ. ಸ್ಕ್ಯಾನ್ ಮಾಡಿದ ಚಿತ್ರದ ಮೇಲೆ ಟಿಪ್ಪಣಿ ಹಾಕುವ ಸೌಲಭ್ಯವೂ ಇದೆ. ಇದರ ಜಾಲತಾಣದಲ್ಲಿ ಹೆಸರು  ನೋಂದಾಯಿಸುವ ಮೂಲಕ ಇನ್ನೂ ಹಲವು ಸವಲತ್ತುಗಳನ್ನು ಪಡೆದುಕೊಳ್ಳಬಹುದು. ಇದರ ವಾಣಿಜ್ಯಕ ಆವೃತ್ತಿಯಲ್ಲಿ ಓಸಿಆರ್ ಕೂಡ ಇದೆ. ಅಂದರೆ ಸ್ಕ್ಯಾನ್ ಮಾಡಿದ ಚಿತ್ರದಿಂದ ಪಠ್ಯವನ್ನಾಗಿ ಪರಿವರ್ತಿಸಬಹುದು.

ಗ್ಯಾಜೆಟ್ ಸುದ್ದಿ
ವಾಟ್ಸ್ಆಪ್ ಚಿತ್ರ ಬಳಸಿ ಆರೋಪಿಗಳ ಸೆರೆ
ಇತ್ತೀಚೆಗೆ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ರಾತ್ರಿ ಹೊತ್ತಿನಲ್ಲಿ ಗಂಡಸರು ಅಂಗಡಿಗೆ ಹೋಗಿದ್ದ ಸಮಯದಲ್ಲಿ ಕಾರಿನಲ್ಲಿ ಕುಳಿತಿದ್ದ ಮಹಿಳೆಯರನ್ನು ಕೆಲವು ಪೋಲಿ ಹುಡುಗರು ಪೀಡಿಸಿದ ಬಗ್ಗೆ ನೀವೆಲ್ಲ ಕೇಳಿರಬಹುದು. ಅವರನ್ನು ಕೆಲವೇ ದಿನಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಅದಕ್ಕಾಗಿ ಅವರು ಆಧುನಿಕ ಶೆರ್ಲಾಕ್ ಹೋಮ್ಸ್ ಆಗಿದ್ದಾರೆ.

ಹುಡುಗರು ಪೀಡಿಸುತ್ತಿದ್ದಾಗ ಕಾರಿನ ಒಳಗೆ ಗಾಜು ಮೇಲೆ ಮಾಡಿ ಕುಳಿತಿದ್ದವರಲ್ಲಿದ್ದ ಹುಡುಗಿಯೊಬ್ಬಳು ತನ್ನ ಕ್ಯಾಮೆರಾ ಬಳಸಿ ಕಿಡಿಗೇಡಿಗಳ ವಿಡಿಯೊ ಚಿತ್ರೀಕರಣ ಮಾಡಿದ್ದಳು. ಆ ವಿಡಿಯೊವನ್ನು ಪೊಲೀಸರು ಪರಿಶೀಲಿಸಿದಾಗ ಆ ಹುಡುಗರಲ್ಲೊಬ್ಬ ತನ್ನ ಫೋನಿನಲ್ಲಿ ಮಾತನಾಡುತ್ತಿದ್ದುದನ್ನು ಗಮನಿಸಿದರು. ಆ ಹೊತ್ತಿನಲ್ಲಿ ಎಂ.ಜಿ. ರಸ್ತೆಯ ಮೊಬೈಲ್ ಗೋಪುರದ ಮೂಲಕ ಮಾತನಾಡಿದ ಎಲ್ಲ 60 ಫೋನ್ ಸಂಖ್ಯೆಗಳನ್ನು ವಾಟ್ಸ್ಆಪ್‌ನಲ್ಲಿ ಹಾಕಿ ಹುಡುಕಿ ಆರೋಪಿ ಯನ್ನು ಪ್ರೊಫೈಲ್ ಚಿತ್ರದ ಮೂಲಕ ಪೊಲೀಸರು ಪತ್ತೆ ಹಚ್ಚಿ ಆತನನ್ನೂ ಆತನ ಜೊತೆಗಿದ್ದವರನ್ನೂ ಬಂಧಿಸಿದರು!

ಗ್ಯಾಜೆಟ್ ತರ್ಲೆ
ಮನುಷ್ಯರ ಮಲದಿಂದ ಓಡುವ ಬಸ್ಸು!
ಇಂಗ್ಲೆಂಡಿನಲ್ಲಿ ಎರಡು ನಗರಗಳ ಮಧ್ಯೆ ಸಂಚರಿಸುವ ಬಸ್ಸು ಮನುಷ್ಯರ ಮಲದಿಂದ ಉತ್ಪಾದಿಸಿದ ಬಯೋಗ್ಯಾಸ್ ಮೂಲಕ ಚಲಿಸುತ್ತದೆ! ಅದನ್ನು ಮಲಭಾರ ಎಕ್ಸ್‌ಪ್ರೆಸ್‌ ಎನ್ನಬಹುದೇ?!

ಗ್ಯಾಜೆಟ್ ಸಲಹೆ
ಶಿವಶಂಕರರ ಪ್ರಶ್ನೆ: ನನ್ನಲ್ಲಿ ಲುಮಿಯಾ 510 ಫೋನ್ ಇದೆ. ಅದರಲ್ಲಿ ಕನ್ನಡ ಬರುವುದಿಲ್ಲ. ಕನ್ನಡ ಬರಲು ಏನು ಮಾಡಬೇಕು?
ಉ: ಲುಮಿಯಾ 510 ಅನ್ನು ಗರಿಷ್ಠ ಎಂದರೆ ವಿಂಡೋಸ್ ಫೋನ್ 7.8 ಕ್ಕೆ ಮಾತ್ರ ಉನ್ನತೀಕರಿಸಿಕೊಳ್ಳಬಹುದು. ಕನ್ನಡದ ಬೆಂಬಲ (ಕನ್ನಡ ಪಠ್ಯದ ತೋರುವಿಕೆ ಮಾತ್ರ) ಪ್ರಾರಂಭವಾದುದು ವಿಂಡೋಸ್ ಫೋನ್ 8.0 ರಲ್ಲಿ. ಅಂದರೆ. ನಿಮ್ಮ ಫೋನಿನಲ್ಲಿ ಕನ್ನಡದ ಬೆಂಬಲ ಪಡೆಯಲು ಸಾಧ್ಯವಿಲ್ಲ. ಹೊಸ ಫೋನ್ ಕೊಳ್ಳುವುದೊಂದೇ ಪರಿಹಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT