ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಕಾನ್ ಡಿ3300 ಪ್ರವೇಶಮಟ್ಟದ ಡಿಎಸ್ಎಲ್ಆರ್

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಒಂದು ಕಾಲದಲ್ಲಿ ದುಬಾರಿಯಾಗಿದ್ದ ಡಿಜಿಟಲ್ ಎಸ್‌ಎಲ್‌ಆರ್ ಕ್ಯಾಮೆರಾಗಳು ಕೈಗೆಟುಕುವ ಬೆಲೆಗೆ ದೊರೆಯುವಂತಾಗಿ ಎರಡು ಮೂರು ವರ್ಷಗಳೇ ಆಗಿವೆ. ಕ್ಯಾಮೆರಾ ತಯಾರಕರು ಪೈಪೋಟಿಯಲ್ಲಿ ತಮ್ಮ ತಮ್ಮ ಕ್ಯಾಮೆರಾಗಳಲ್ಲಿ ಹಲವು ಸವಲತ್ತುಗಳನ್ನು ನೀಡತೊಡಗಿದ್ದಾರೆ. ನಿಕಾನ್ ಕಂಪೆನಿ ಪ್ರವೇಶಮಟ್ಟದಲ್ಲಿ ಕೆಲವು ಡಿಎಸ್‌ಎಲ್‌ಆರ್ ಕ್ಯಾಮೆರಾಗಳನ್ನು ತಯಾರಿಸಿದೆ. ಅಂತಹ ಒಂದು ಕ್ಯಾಮೆರಾ ಡಿ3300 (Nikon D3300). ಇದು ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
ಡಿಜಿಟಲ್ ಎಸ್‌ಎಲ್‌ಆರ್ ಕ್ಯಾಮೆರಾ, 24.2 ಮೆಗಾಪಿಕ್ಸೆಲ್ ರೆಸೊಲೂಶನ್, 23.5 x 15.6 ಮಿ.ಮೀ. ಗಾತ್ರದ ಸಿಮೋಸ್ ಸಂವೇದಕ (CMOS sensor), 1/4000 - 30 ಸೆಕೆಂಡ್ ಷಟ್ಟರ್ ವೇಗ, 100 – 12800 ಐಎಸ್‌ಓ ಆಯ್ಕೆ, -5 - +5 EV ಎಕ್ಸ್‌ಪೋಷರ್ ಕಾಂಪನ್ಸೇಶನ್, ಆಯ್ಕೆ ಮಾಡಿಕೊಳ್ಳಬಹುದಾದ 11 ಫೋಕಸ್ ಬಿಂದುಗಳು, ಎಲ್ಲ ಡಿಎಸ್‌ಎಲ್‌ಆರ್ ಕ್ಯಾಮೆರಾ ಗಳಲ್ಲಿರುವಂತೆ ಪ್ರೋಗ್ರಾಮ್, ಷಟ್ಟರ್ ಪ್ರಿಯಾರಿಟಿ, ಅಪೆರ್ಚರ್ ಪ್ರಿಯಾರಿಟಿ, ಮ್ಯಾನ್ಯುವಲ್ ಆಯ್ಕೆಗಳು, 7.5 ಸೆ.ಮೀ. ಗಾತ್ರದ ಎಲ್‌ಸಿಡಿ ಪರದೆ, ಹೈಡೆಫಿನಿಶನ್ ವಿಡಿಯೊ (1920 x 1080, 50fps), ಹಲವು ದೃಶ್ಯಗಳ ಆಯ್ಕೆ, ಮಾರ್ಗದರ್ಶಕ ಆಯ್ಕೆ (guide mode), ಸುಮಾರು 460 ಗ್ರಾಂ ತೂಕ (ಲೆನ್ಸ್ ರಹಿತ), 18-55 ವಿಆರ್ ಲೆನ್ಸ್ ಸಹಿತ ಮಾರುಕಟ್ಟೆ ಬೆಲೆ ಸುಮಾರು ₹33,000. 
ಇದೊಂದು ಪ್ರವೇಶಮಟ್ಟದ ಡಿಎಸ್‌ಎಲ್‌ಆರ್. ಡಿಎಸ್ಎಲ್‌ಆರ್ ಫೋಟೊಗ್ರಫಿ ಪ್ರಾರಂಭಿಸುತ್ತೇನೆ ಎನ್ನುವವರಿಗೆ ಇದು ಸೂಕ್ತ. ರಚನೆ ಮತ್ತು ವಿನ್ಯಾಸ ಹಾಗೂ ಕೈಯಲ್ಲಿ ಹಿಡಿಯುವ ಅನುಭವ ಪರವಾಗಿಲ್ಲ. ಗಡಸು ಲೋಹದ ದೇಹವಲ್ಲದ ಕಾರಣ ಕ್ಯಾಮೆರಾ ಹಗುರವಾಗಿದೆ.

ನಿಕಾನ್ ಪ್ರವೇಶಮಟ್ಟದಲ್ಲಿ ಡಿ3100, ಡಿ3200 ಎಂಬ ಇನ್ನೂ ಎರಡು ಕ್ಯಾಮೆರಾಗಳನ್ನು ತಂದಿದೆ. ಅವೆರಡಕ್ಕಿಂತ ಈ ಕ್ಯಾಮೆರಾದಲ್ಲಿ ಬಳಸಿದ ಪ್ರೊಸೆಸರ್ ಎಂಜಿನ್ ಸುಧಾರಿತ ಆವೃತ್ತಿಯದಾಗಿದೆ. ಆದುದರಿಂದ ಅವೆರಡಕ್ಕಿಂತ ಈ ಕ್ಯಾಮೆರಾ ಉತ್ತಮ ಎನ್ನಬಹುದು. ಈ ಸುಧಾರಿತ ಪ್ರೊಸೆಸರ್ ಚೆನ್ನಾಗಿದೆ. ಫೋಟೊಗಳು ಚೆನ್ನಾಗಿ ಮೂಡಿಬರುತ್ತವೆ. ಈ ಸುಧಾರಣೆಯಿಂದಾಗಿ ಇನ್ನೂ ಒಂದು ಲಾಭವಿದೆ. ಈ ಕ್ಯಾಮೆರಾದಲ್ಲಿ ಅತಿ ವೇಗವಾಗಿ ಒಂದರ ನಂತರ ಇನ್ನೊಂದು ಫೋಟೊ ತೆಗೆಯಬಹುದು. ಈ ವೇಗ ಸೆಕೆಂಡಿಗೆ ಸುಮಾರು 5 ಫೋಟೊಗಳ ತನಕ ಹೋಗಬಲ್ಲುದು. ಅಂತೆಯೇ ವಿಡಿಯೊ ಚಿತ್ರೀಕರಣದಲ್ಲೂ ಈ ಸುಧಾರಣೆ ಗೋಚರವಾಗುತ್ತದೆ.

ಈ ಕ್ಯಾಮೆರಾದಲ್ಲಿ ಪನೋರಮ ಚಿತ್ರೀಕರಣ ಸೌಲಭ್ಯವಿದೆ. ಪ್ರವೇಶಮಟ್ಟದ ಡಿಎಸ್‌ಎಲ್‌ಆರ್‌ಗಳಲ್ಲಿ ಈ ಸೌಲಭ್ಯ ಎಲ್ಲ ಕ್ಯಾಮೆರಾಗಳಲ್ಲಿರುವುದಿಲ್ಲ. ವಿಧಾನಸೌಧದ ಮುಂದೆ ನಿಂತಾಗ ಅದನ್ನು ಒಂದೇ ಚಿತ್ರದಲ್ಲಿ ಚಿತ್ರೀಕರಿಸಲು ಆಗುವುದಿಲ್ಲ. ಆಗ ಪನೋರಮ ಚಿತ್ರೀಕರಣ ಸೌಲಭ್ಯ ಸಹಾಯಕ್ಕೆ ಬರುತ್ತದೆ. ದೃಶ್ಯದ ಒಂದು ಬದಿಯಿಂದ ಪ್ರಾರಂಭಿಸಿ ಇನ್ನೊಂದು ಬದಿಗೆ ತಿರುಗಿಸುತ್ತ ಚಿತ್ರೀಕರಣ ಮಾಡಿದರೆ ತುಂಬ ಅಗಲವಾದ ಫೋಟೊ ದೊರೆಯುತ್ತದೆ. ಪಶ್ಚಿಮ ಘಟ್ಟ ಮಾದರಿಯ ದೃಶ್ಯಗಳ ಚಿತ್ರೀಕರಣ ಮಾಡಲೂ ಇಂತಹ ಸೌಲಭ್ಯ ಉಪಯುಕ್ತ.

ಹಲವು ನಿಕಾನ್‌ ಕ್ಯಾಮೆರಾಗಳಲ್ಲಿರುವಂತೆ ಇದರಲ್ಲೂ ಹಲವು ದೃಶ್ಯಗಳ ಆಯ್ಕೆಗಳಿವೆ. ವ್ಯಕ್ತಿ ಚಿತ್ರ ತೆಗೆಯಲು ಪೋರ್ಟ್ರೈಟ್, ಕ್ರೀಡೆಯ ಚಿತ್ರಕ್ಕೆ ಸ್ಪೋರ್ಟ್ಸ್ ಇತ್ಯಾದಿ ಆಯ್ಕೆಗಳಿವೆ. ಇವೇನೂ ಈ ಕ್ಯಾಮೆರಾದಲ್ಲಿ ಮಾತ್ರ ಇರುವ ಹೊಸ ಸೌಲಭ್ಯಗಳಲ್ಲ.
ನಿಕಾನ್ ಡಿ3300 ಕ್ಯಾಮೆರಾದಲ್ಲಿ ಒಂದು ಹೊಸ ಸೌಲಭ್ಯವಿದೆ. ನೀವು ಕ್ಯಾಮೆರಾ ಬಳಸಲು ಹೊಸಬರಾಗಿದ್ದರೆ ಅದು ನಿಮಗೆ ಮಾರ್ಗದರ್ಶನ ನೀಡಬಲ್ಲುದು.

ಈ ಸೌಲಭ್ಯಕ್ಕೆ Guide mode ಎಂಬ ಹೆಸರಿದೆ. ಇದನ್ನು ಆಯ್ಕೆ ಮಾಡಿಕೊಂಡರೆ ಮತ್ತೆ ನಾಲ್ಕು ಆಯ್ಕೆಗಳಿವೆ. ಇವು ಫೋಟೊ ತೆಗೆಯಲು, ತೆಗೆದ ಫೋಟೊವನ್ನು ಅಳಿಸಲು ಮತ್ತು ತಿದ್ದಲು, ಕ್ಯಾಮೆರಾದ ಹಲವು ಆಯ್ಕೆಗಳನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಗಣಕ ಬಳಸುವವರಿಗೆ ಟ್ಯುಟೋರಿಯಲ್‌ಗಳನ್ನು ಬಳಸಿ ಅನುಭವ ಇರಬಹುದು. ಇದೂ ಸುಮಾರಾಗಿ ಅದೇ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಫೋಟೊ ತೆಗೆಯಲು ಸಹಾಯ ಎಂದು ಆಯ್ಕೆ ಮಾಡಿಕೊಂಡರೆ ಹಲವು ನಮೂನೆಯ ಫೋಟೊಗಳನ್ನು ತೆಗೆಯಲು ಹಂತ ಹಂತವಾಗಿ ಸಹಾಯ ಮಾಡುತ್ತದೆ. ಪ್ರಥಮ ಬಾರಿ ಫೋಟೊಗ್ರಫಿ ಮಾಡುವವರಾದರೆ ಇದು ನಿಜಕ್ಕೂ ಉತ್ತಮ ಸೌಲಭ್ಯ.

ನಿಕಾನ್ ಕ್ಯಾಮೆರಾಗಳ ಬಗ್ಗೆ ನನ್ನ ಒಂದು ದೂರು ಎಂದರೆ ಅದರಲ್ಲಿ ಐಎಸ್‌ಓ ಮತ್ತು ಇತರೆ ಕೆಲವು ಅತೀ ಅಗತ್ಯದ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಲು ಹಲವು ಕಡೆ ಒತ್ತಬೇಕಾಗುತ್ತದೆ, ಸ್ವಲ್ಪ ತಡಕಾಡಬೇಕಾಗುತ್ತದೆ ಎಂಬುದು. ಈ ಕ್ಯಾಮೆರಾದಲ್ಲಿ ಇಂತಹ ಆಯ್ಕೆಗಳನ್ನು ಮಾಡಿಕೊಳ್ಳಲು ಪ್ರತ್ಯೇಕ ಬಟನ್ ಮತ್ತು ಪರದೆಯ ಮೂಲಕ ಆಯ್ಕೆ ಮಾಡಿಕೊಳ್ಳುವ ಸೌಲಭ್ಯ ನೀಡಿದ್ದಾರೆ. ಇದು ಮತ್ತು ಮಾರ್ಗದರ್ಶಕ ವಿಧಾನಗಳನ್ನು ಗಮನಿಸಿದರೆ ಕೊನೆಗೂ ನಿಕಾನ್ ಬಳಕೆದಾರಸ್ನೇಹಿ ಆಗುತ್ತಿದೆ ಎನ್ನಬಹುದು.

ವಿಡಿಯೊ ಚಿತ್ರೀಕರಣ ಪರವಾಗಿಲ್ಲ. ಕ್ಯಾಮೆರಾವನ್ನು ಒಂದೇ ಕಡೆ ಸ್ಥಾಪಿಸಿ, ಹೆಚ್ಚು ಚಲನೆಗಳಿಲ್ಲದ ವಸ್ತುವಿನ ಚಿತ್ರೀಕರಣ ಮಾಡಲು ಇದು ಸೂಕ್ತ. ಉದಾಹರಣೆಗೆ ವೇದಿಕೆ ಮೇಲೆ ಒಂದೇ ಕಡೆ ನಿಂತು ಮಾಡುವ ಭಾಷಣ. ಆದರೆ ಕ್ಯಾಮೆರಾವನ್ನು ವೇಗವಾಗಿ ತಿರುಗಿಸಿದರೆ ಮತ್ತು ಅಥವಾ ಲೆನ್ಸ್ ಅನ್ನು ಝೂಮ್ ಮಾಡಿದರೆ ವಿಡಿಯೊ ಸ್ವಲ್ಪ ಮಸುಕಾಗುತ್ತದೆ. ದೃಶ್ಯದ ದೂರ ಬದಲಾದಂತೆ ಅದಕ್ಕೆ ಫೋಕಸ್ ಮಾಡಲು ಅದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅಂದರೆ ವೃತ್ತಿಪರಿಣತ ಗುಣಮಟ್ಟದ ವಿಡಿಯೊ ತಯಾರಿಸಲು ಇದು ಸೂಕ್ತವಲ್ಲ.

ಮ್ಯಾನ್ಯುವಲ್ ಫೋಕಸ್ ಅಷ್ಟೇನು ಚೆನ್ನಾಗಿ ಆಗುವುದಿಲ್ಲ ಎಂದು ಕೆಲವರು ದೂರಿದ್ದಾರೆ. ಆದರೆ ನನಗೆ ಹಾಗೆ ಅನ್ನಿಸಲಿಲ್ಲ. ಅತಿ ಹೆಚ್ಚಿನ ಅಂದರೆ 12800 ಐಎಸ್‌ಓ ಅಯ್ಕೆಯಲ್ಲಿ ಚಿತ್ರ ಕಾಳುಕಾಳಾಗಿ ಮೂಡಿಬರುತ್ತದೆ (grainy). ಐಎಸ್‌ಓ 800, 1600 ಆಯ್ಕೆಗಳಲ್ಲಿ ಪರವಾಗಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಇದು ನಿಜಕ್ಕೂ ನೀಡುವ ಹಣಕ್ಕೆ ಮೋಸವಿಲ್ಲ ಎನ್ನಬಹುದಾದ ಕ್ಯಾಮೆರಾ. ಡಿಎಸ್‌ಎಲ್‌ಆರ್ ಕ್ಷೇತ್ರಕ್ಕೆ ಕಾಲಿಡುವವರಿಗೆ ಇದು ಸೂಕ್ತ. 

ವಾರದ ಆಪ್ (app)
ಎಂಪಿ3 ಮ್ಯೂಸಿಕ್ ಡೌನ್‌ಲೋಡ್ 

ಇದು ಆಂಡ್ರಾಯಿಡ್‌ನಲ್ಲಿ ಕೆಲಸ ಮಾಡುವ ಕಿರುತಂತ್ರಾಂಶ MP3 music download. ಅಂತರಜಾಲದಲ್ಲಿ ಹಲವು ಎಂಪಿ3 ಸಂಗೀತ ಫೈಲುಗಳಿವೆ. ಅವುಗಳನ್ನು ಹುಡುಕಿ ನಿಮ್ಮ ಅಂಡ್ರಾಯಿಡ್ ಮೊಬೈಲ್ ಫೋನಿಗೆ ಡೌನ್‌ಲೋಡ್‌ ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಈ ಮಾದರಿಯ ಹಲವು ಆಪ್‌ಗಳು ಆಂಡ್ರಾಯಿಡ್ ಸ್ಟೋರ್‌ನಲ್ಲಿವೆ. ಆದರೆ ಯಾವುದೂ ನನಗೆ ತೃಪ್ತಿ ನೀಡಲಿಲ್ಲ. ಈ ಆಪ್ ಕೂಡ ಅದೇ ಪಟ್ಟಿಗೆ ಸೇರುತ್ತದೆ. ಸಂಗೀತವನ್ನು ವರ್ಗ ಪ್ರಕಾರ, ಗಾಯಕ, ಆಲ್ಬಂ, ಭಾಷೆ, ಇತ್ಯಾದಿ ವರ್ಗಗಳಲ್ಲಿ ಹುಡುಕುವ ಸವಲತ್ತು ಇದರಲ್ಲಿಲ್ಲ. ಹಾಗಿದ್ದೂ ಹಾಡಿನ ಶೀರ್ಷಿಕೆ ಅಥವಾ ಗಾಯಕನ ಹೆಸರು ಗೊತ್ತಿದ್ದರೆ ಹಾಡು ಹುಡುಕಿ ಡೌನ್‌ ಲೋಡ್ ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಗ್ಯಾಜೆಟ್ ಸುದ್ದಿ
ಆತ್ಮವಿಶ್ವಾಸ ಹೆಚ್ಚಿಸುವ ಗ್ಯಾಜೆಟ್

ಕೆಲಸ ಮಾಡುವಲ್ಲಿ ಅತ್ಯಾಧುನಿಕ ಗ್ಯಾಜೆಟ್‌ಗಳನ್ನು ಸಾಮಾನ್ಯವಾಗಿ ಬಳಸುವವರು ಯಾರು? ಬಾಸ್ ಅಂತೂ ಅಲ್ಲ ಎನ್ನುತ್ತೀರಾ? ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಕಂಡುಬಂದುದು ಏನೆಂದರೆ ಈ ರೀತಿ ಅತ್ಯಾಧುನಿಕ ಗ್ಯಾಜೆಟ್ ಬಳಸುವುದು ಬಳಸುವವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು. ಅದರಂತೆ ಈಗೀಗ ಬಾಸ್‌ಗಳ ಮೇಜಿನ ಮೇಲೆ ಹೊಚ್ಚ ಹೊಸ ಗ್ಯಾಜೆಟ್ ವಿರಾಜಮಾನವಾಗಿರುವುದನ್ನು ಕಾಣಬಹುದು. ಆದರೆ ಅವರಲ್ಲಿ ಎಷ್ಟು ಜನರಿಗೆ ಅದನ್ನು ಪೂರ್ತಿಯಾಗಿ ಬಳಸಲು ಬರುತ್ತದೆ ಎಂದು ಮಾತ್ರ  ಕೇಳಬೇಡಿ.


ಗ್ಯಾಜೆಟ್ ತರ್ಲೆ
ಒಂದು ಮನೆ. ಅದರಲ್ಲಿ ಎಲ್ಲರೂ ಗ್ಯಾಜೆಟ್ ಹುಚ್ಚರೇ. ಪ್ರತಿಯೊಬ್ಬರೂ ಲ್ಯಾಪ್‌ಟಾಪ್, ಐಪ್ಯಾಡ್, ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್ ಇತ್ಯಾದಿಗಳ ಮೂಲಕ ಅಂತರಜಾಲಕ್ಕೆ ಯಾವಾಗಲೂ ಸಂಪರ್ಕದಲ್ಲಿರುವವರೇ. ಅವರ ಮನೆಯಲ್ಲಿ ಕುಟುಂಬದ ಎಲ್ಲ ಸದಸ್ಯರನ್ನೂ ಒಂದೆಡೆ ಸೇರಿಸಬೇಕಾದರೆ ಮನೆಯ ಯಜಮಾನ ಮಾಡುವ ಉಪಾಯ ಏನು ಗೊತ್ತೆ? ಅಂತರಜಾಲಕ್ಕೆ ಸಂಪರ್ಕಿಸುವ ವೈಫೈ ಮೋಡೆಮ್ ಅನ್ನು ಆಫ್ ಮಾಡಿ ಅದು ಇರುವ ಕೋಣೆಯಲ್ಲಿ ಎಲ್ಲರಿಗಾಗಿ ಕಾಯುವುದು!

ಗ್ಯಾಜೆಟ್ ಸಲಹೆ
ಚೇತನ್ ಅವರ ಪ್ರಶ್ನೆ: ನನ್ನಲ್ಲಿ ನೋಕಿಯಾ ಲುಮಿಯಾ 720 ಫೋನ್ ಇದೆ. ನಾನು ಇದರ ಜೊತೆ ಕೋವೋನ್ EM1 ಇಯರ್‌ಫೋನ್ ಬಳಸಬಹುದೇ? ಅದು ಈ ಫೋನ್ ಜೊತೆ ಕೆಲಸ ಮಾಡಬಲ್ಲುದೇ?

ಉ:  ಧಾರಾಳವಾಗಿ ಬಳಸಬಹುದು. ಕೆಲಸ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT