ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬರಹದಿಂದ ಯುನಿಕೋಡ್‌ಗೆ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಮೊಟ್ಟಮೊದಲನೆಯದಾಗಿ ಒಂದು ಸ್ಪಷ್ಟೀಕರಣ -ಇದು ಗ್ಯಾಜೆಟ್‌ಗಳಿಗೆ ನೇರವಾಗಿ ಸಂಬಂಧಿಸಿದ ಲೇಖನವಲ್ಲ. ಯಾವುದೇ ಗ್ಯಾಜೆಟ್‌ ವಿಮರ್ಶೆಯೂ ಅಲ್ಲ. ಆದರೂ ಇದಕ್ಕೂ ಗ್ಯಾಜೆಟ್‌ಗಳಿಗೂ ಒಂದು ಪರೋಕ್ಷ ಸಂಬಂಧವಿದೆ. ಗ್ಯಾಜೆಟ್‌ಗಳಲ್ಲಿ, ಅಂದರೆ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಜಾಲತಾಣಗಳಲ್ಲಿ, ಫೇಸ್‌ಬುಕ್, ಟ್ವಿಟ್ಟರ್, ಇತ್ಯಾದಿಗಳಲ್ಲಿ ಕನ್ನಡದ ಬಳಕೆಯಾಗುತ್ತಿರುವುದು ಯುನಿಕೋಡ್ ಮುಖಾಂತರ.

ನಿಮಗೆ ಒಬ್ಬರು ನುಡಿ, ಬರಹ, ಶ್ರೀಲಿಪಿ, ಆಕೃತಿ ಇತ್ಯಾದಿ ಯಾವುದಾದರೂ ಹಳೆಯ ಫಾಂಟ್ ಆಧಾರಿತ ತಂತ್ರಾಂಶವನ್ನು ಬಳಸಿ ತಯಾರಿಸಿದ ಕಡತವನ್ನು ಕಳುಹಿಸಿದರೆ ಅದನ್ನು ನಿಮಗೆ ಈಗಿನ ಆಧುನಿಕ ಮೊಬೈಲ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಓದಲು ಸಾಧ್ಯವಿಲ್ಲ. ಅಷ್ಟೇ ಏಕೆ, ಲಿನಕ್ಸ್ ಅಥವಾ ಆಪಲ್ ಮ್ಯಾಕ್ ಗಣಕದಲ್ಲೂ ಓದಲು ಆಗುವುದಿಲ್ಲ. ಅಂತಹ ಕಡತಗಳನ್ನು ಕನ್ನಡ ಯುನಿಕೋಡ್‌ಗೆ ಪರಿವರ್ತಿಸುವುದು ಹೇಗೆ ಎಂಬುದನ್ನು ಈ ಟ್ಯುಟೋರಿಯಲ್‌ನಲ್ಲಿ ವಿವರಿಸಲಾಗಿದೆ.

ಮೊದಲಿಗೆ ಗಣಕಗಳಲ್ಲಿ ಕನ್ನಡದ ಬಳಕೆಯ ಇತಿಹಾಸದ ಕಡೆಗೆ ಗಮನ ಹರಿಸೋಣ. ಸುಮಾರು ಮೂರು ದಶಕಗಳಿಂದ ಗಣಕಗಳಲ್ಲಿ ಕನ್ನಡದ ಬಳಕೆ ಆಗುತ್ತಿದೆ. ಪ್ರಾರಂಭದ ಕಾಲದಲ್ಲಿ ಕೇವಲ ಮುದ್ರಣ ಮತ್ತು ಪ್ರಕಾಶನಕ್ಕಾಗಿ (ಡಿ.ಟಿ.ಪಿ.) ಈ ಬಳಕೆ ಆಗುತ್ತಿತ್ತು.

ಬಹುತೇಕ ಜನರು ಬಳಸುತ್ತಿದ್ದುದು ಹಾಗು ಈಗಲೂ ಬಳಸುತ್ತಿರುವುದು ಅಡೋಬಿಯವರ ಪೇಜ್‌ಮೇಕರ್ (ಆವೃತ್ತಿ 6.5 ಅಥವಾ 7.0) ತಂತ್ರಾಂಶ. ಯುನಿಕೋಡ್ ಅಲ್ಲದ ಹಳೆಯ ವಿಧಾನದಲ್ಲಿ ಬೆರಳಚ್ಚು ಮಾಡಿ ಸಂಗ್ರಹಿಸಿದ ಪಠ್ಯ (ಪೇಜ್‌ಮೇಕರ್, ಮೈಕ್ರೋಸಾಫ್ಟ್ ವರ್ಡ್, ಇನ್‌ಡಿಸೈನ್, ಇತ್ಯಾದಿಗಳಲ್ಲಿ) ಗಣಕಗಳಿಗೆ ಕನ್ನಡ ಎಂದು ಅರ್ಥವಾಗುವುದಿಲ್ಲ. ಏಕೆಂದರೆ ಇವುಗಳು ಮಾಹಿತಿಯನ್ನು ಫಾಂಟ್‌ನ ಗ್ಲಿಫ್‌ಗಳಾಗಿ ಸಂಗ್ರಹಿಸುತ್ತವೆ. ಗ್ಲಿಫ್ ಎಂದರೆ ಅಕ್ಷರದ ತೋರಿಕೆಯ ಒಂದು ಭಾಗ. ಗ್ಲಿಫ್‌ಗಳು ಸೇರಿ ಫಾಂಟ್ ಆಗುತ್ತದೆ. ಈ ಅಕ್ಷರದ ತುಂಡುಗಳನ್ನು ಗಣಕವು ಕನ್ನಡ ಭಾಷೆ ಎಂದು ಅರ್ಥಮಾಡಿಕೊಳ್ಳುವುದಿಲ್ಲ. ಯುನಿಕೋಡ್‌ನಲ್ಲಿ ಈ ಸಮಸ್ಯೆ ಇಲ್ಲ. ಗಣಕಕ್ಕೆ ಮತ್ತು ಜಾಲತಾಣಗಳಿಗೆ ಅದು ಕನ್ನಡ ಎಂದು ಅರ್ಥವಾಗುವುದರಿಂದ ಮಾಹಿತಿಯನ್ನು ಹುಡುಕುವುದು, ಅಕಾರಾದಿ ವಿಂಗಡಣೆ ಮಾಡುವುದು, ಪಠ್ಯದಿಂದ ಧ್ವನಿಗೆ ಪರಿವರ್ತಿಸುವುದು ಎಲ್ಲ ಮಾಡಬಹುದು.

ಈಗ ಪೇಜ್‌ಮೇಕರ್ ತಂತ್ರಾಂಶದಲ್ಲಿ ಸಂಗ್ರಹಿಸಿದ ಹಳೆಯ ಕನ್ನಡ ಪಠ್ಯವನ್ನು ಯುನಿಕೋಡ್‌ಗೆ ಪರಿವರ್ತಿಸುವುದು ಹೇಗೆ ಎಂದು ನೋಡೋಣ. ಕರ್ನಾಟಕ ಸರಕಾರವು ಕನ್ನಡಕ್ಕೆ ಹಲವು ಯುನಿಕೋಡ್ ಬೆಂಬಲಿತ ಓಪನ್‌ಟೈಪ್ ಫಾಂಟ್‌ಗಳನ್ನು ಹಾಗೂ ಪರಿವರ್ತಕ ತಂತ್ರಾಂಶವನ್ನು ಬಿಡುಗಡೆ ಮಾಡಿದೆ. ಇವುಗಳನ್ನು bitly.com/goksoftware ಜಾಲತಾಣದಿಂದ ಉಚಿತವಾಗಿ ಪಡೆದುಕೊಳ್ಳಬಹುದು. ಇದೇ ಜಾಲತಾಣದಲ್ಲಿರುವ ಆಸ್ಕಿಯಿಂದ ಯುನಿಕೋಡ್‌ಗೆ ಪರಿವರ್ತಕ ತಂತ್ರಾಂಶವನ್ನು bitly.com/KanConv ಕೊಂಡಿಯ ಮೂಲಕ ಪಡೆಯಬಹುದು. ಈ ತಂತ್ರಾಂಶ ಸುಮಾರು 58 ಮೆಗಾಬೈಟ್‌ನಷ್ಟಿದೆ. ಅದನ್ನು ನಿಮ್ಮ ಗಣಕಕ್ಕೆ ಪ್ರತಿ ಮಾಡಿಕೊಂಡು (ಡೌನ್‌ಲೋಡ್‌) ಅದನ್ನು ಅನುಸ್ಥಾಪನೆ (ಇನ್‌ಸ್ಟಾಲ್) ಮಾಡಿಕೊಳ್ಳಿ.  
  

ಪೇಜ್‌ಮೇಕರ್‌ ಕಡತವನ್ನು ತೆರೆಯಿರಿ. ಪಠ್ಯವನ್ನು ಆಯ್ಕೆ ಮಾಡುವ ಸಾಧನವನ್ನು ಆಯ್ಕೆ ಮಾಡಿಕೊಳ್ಳಿ. ಇದಕ್ಕಾಗಿ ನೀವು ಟೂಲ್ಸ್‌ನಲ್ಲಿರುವ ದೊಡ್ಡ T ಆಕಾರದ ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ಪಠ್ಯದಲ್ಲಿ ಎಲ್ಲಿ ಬೇಕಾದರೂ ಕ್ಲಿಕ್ ಮಾಡಿ. ಎಲ್ಲ ಪಠ್ಯವನ್ನು ಆಯ್ಕೆ ಮಾಡಿಕೊಳ್ಳಿ (Ctrl-A ಮತ್ತು Ctrl-C). ಈಗ ನೋಟ್‌ಪ್ಯಾಡ್ ತೆರೆದು ಅದರಲ್ಲಿ ಈ ಪಠ್ಯವನ್ನು ಅಂಟಿಸಿ
(Ctrl-V). ನೋಟ್‌ಪ್ಯಾಡ್‌ನಲ್ಲಿ ನಿಮಗೆ ಅದು ಗಜಿಬಿಜಿಯಾಗಿ ಅರ್ಥಹೀನ ಪಠ್ಯವಾಗಿ ಕಂಡುಬರುವುದು. ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಈ ಪಠ್ಯವನ್ನು .TXT ಕಡತವಾಗಿ (plain text) ಉಳಿಸಿ. ಕಡತವನ್ನು ಎಲ್ಲಿ ಉಳಿಸಿದ್ದೀರಿ ಎಂಬುದನ್ನು ನೆನಪಿಟ್ಟುಕೊಳ್ಳಿ.

ಈಗ ಕರ್ನಾಟಕ ಸರಕಾರದ ಪರಿವರ್ತಕವನ್ನು (Kannada ASCII Unicode Converter v1.2) ಚಾಲನೆ ಮಾಡಿ. ಅದರಲ್ಲಿ ಕಂಡುಬರುವ ಮೂಲ ಕಡತ ಎಂಬಲ್ಲಿ ನೀವು ನೋಟ್‌ಪ್ಯಾಡ್‌ನಿಂದ .TXT ಫೈಲ್ ಆಗಿ ಉಳಿಸಿದ ಕಡತವನ್ನು ಆಯ್ಕೆ ಮಾಡಿ. ಪರಿವರ್ತಿತ ಕಡತ ಎಂಬಲ್ಲಿ ನೀವು ನಿಮಗೆ ಪರಿವರ್ತಿತ ಕಡತ ಯಾವ ಹೆಸರಿನಿಂದ ಇರಬೇಕು ಮತ್ತು ಎಲ್ಲಿರಬೇಕು ಎಂಬುದನ್ನು ನಮೂದಿಸಿ. ದತ್ತ ನಿರ್ಮಾಣ ಎಂಬುದರ ಮುಂದೆ ಹಲವು ಆಯ್ಕೆಗಳಿವೆ. ಅವುಗಳಲ್ಲಿ ನಿಮಗೆ ನುಡಿ, ಬರಹ, ಕುವೆಂಪು, ಶ್ರೀಲಿಪಿ, ಪ್ರಕಾಶಕ್ ಇತ್ಯಾದಿಗಳಿವೆ. ನಿಮ್ಮ ಪೇಜ್‌ಮೇಕರ್ ಕಡತ ಯಾವ ಫಾಂಟ್‌ನಲ್ಲಿತ್ತೋ ಅದನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪರಿವರ್ತಿಸಿ ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಪರಿವರ್ತನೆ ಪೂರ್ತಿಯಾದಾಗ ಪರಿವರ್ತನೆ ಯಶಸ್ವಿಯಾಗಿ ಪೂರ್ಣಗೊಂಡಿತು ಎಂಬ ಸಂದೇಶ ಬರುತ್ತದೆ. ಪರಿವರ್ತಿತ ಪಠ್ಯವು ಯುನಿಕೋಡ್‌ನಲ್ಲಿರುತ್ತದೆ.

ಈ ಪರಿವರ್ತಕವು ಕೇವಲ ಪಠ್ಯ, ಮೈಕ್ರೋಸಾಫ್ಟ್‌ ವರ್ಡ್ ಅಥವಾ ಎಕ್ಸೆಲ್‌ ಫೈಲ್‌ಗಳನ್ನು ನೇರವಾಗಿ ಪರಿವರ್ತಿಸಬಲ್ಲುದು. ಪೇಜ್‌ಮೇಕರ್ ಫೈಲ್ ಆಗಿದ್ದರೆ ಅದರಲ್ಲಿರುವ ಪಠ್ಯವನ್ನು ಮೇಲೆ ವಿವರಿಸಿದ ರೀತಿಯಲ್ಲಿ ಹೊರತೆಗೆದು ಪರಿವರ್ತಿಸಬೇಕು. ವರ್ಡ್ ಫೈಲ್ ಆಗಿದ್ದಲ್ಲಿ ಪರಿವರ್ತನೆಯಾಗಿ ಬಂದಾಗ ಮೂಲ ಕಡತದಲ್ಲಿದ್ದ ಫಾರ್ಮ್ಯಾಟಿಂಗ್‌ಗಳು (ದಪ್ಪ, ಓರೆ ಅಕ್ಷರ, ಇತ್ಯಾದಿ) ಅಳಿಸಿಹೋಗಿ ಕೇವಲ ಪಠ್ಯವು ಯುನಿಕೋಡ್ ಆಗಿ ಪರಿವರ್ತಿತವಾಗಿರುತ್ತವೆ. ಈ ಪಠ್ಯವನ್ನು ನೀವು ವಿಕಿಪೀಡಿಯ, ಫೇಸ್‌ಬುಕ್, ಇತ್ಯಾದಿಗಳಲ್ಲಿ ಬಳಸಬಹುದು. ಪರಿವರ್ತಿಸಬೇಕಾದ ಕನ್ನಡ ಪಠ್ಯದ ಮಧ್ಯದಲ್ಲಿ ಇಂಗ್ಲಿಶ್ ಪಠ್ಯವಿರಬಾರದು.

ನುಡಿ, ಬರಹ ಮತ್ತು ಕುವೆಂಪು ತಂತ್ರಾಂಶಗಳು ಬಳಸುವುದು ಒಂದೇ ಸಂಕೇತೀಕರಣ. ಇವುಗಳಿಂದ ಯುನಿಕೋಡ್‌ಗೆ ಪರಿವರ್ತಿಸಲು ಒಂದು ಜಾಲತಾಣವೂ ಇದೆ. ಅದರ ವಿಳಾಸ - aravindavk.in/ascii2unicode. ಇದು ಕೇವಲ ಪಠ್ಯವನ್ನು ಮಾತ್ರ ಪರಿವರ್ತಿಸುತ್ತದೆ. ಬರಹ ತಂತ್ರಾಂಶವನ್ನು ನೀವು ಬಳಸುವವರಾದರೆ ಅದರಲ್ಲಿರುವ Baraha Direct ಬಳಸಿಯೂ ಯುನಿಕೋಡ್‌ಗೆ ಪರಿವರ್ತಿಸಬಹುದು. 

ವಾರದ ಆಪ್ (app)
ಆಂಡ್ರಾಯಿಡ್ ಡಿವೈಸ್ ಮ್ಯಾನೇಜರ್ನಿ

ನಿಮ್ಮ ಆಂಡ್ರಾಯಿಡ್ ಫೋನ್ ಕಳೆದು ಹೋದರೆ? ಆಂಡ್ರಾಯಿಡ್ ಡಿವೈಸ್ ಮ್ಯಾನೇಜರ್ (Android Device Manager) ಎಂಬ ಕಿರುತಂತ್ರಾಂಶವನ್ನು ನಿಮ್ಮ ಫೋನಿನಲ್ಲಿ ಹಾಕಿಕೊಂಡಿದ್ದರೆ ಅದು ನಿಮ್ಮ ಸಹಾಯಕ್ಕೆ ಬರುತ್ತದೆ. ಇದನ್ನು ಬಳಸಬೇಕಾದರೆ ನಿಮ್ಮ ಫೋನಿನಲ್ಲಿ ಗೂಗ್ಲ್ ಖಾತೆಯನ್ನು ಬಳಸುತ್ತಿರುವವರು ನೀವಾಗಿರಬೇಕು. ಫೋನ್ ಕಳೆದುಹೋದಾಗ www.google.com/ android/devicemanager ಜಾಲತಾಣಕ್ಕೆ ಭೇಟಿ ನೀಡಬೇಕು. ಅಲ್ಲಿ ನಿಮಗೆ ಫೋನನ್ನು ಲಾಕ್ ಮಾಡುವ ಮತ್ತು ಫೋನಿನಲ್ಲಿರುವ ಎಲ್ಲ ಮಾಹಿತಿಯನ್ನು ಅಳಿಸುವ ಆಯ್ಕೆಗಳನ್ನು ಕಾಣಬಹುದು.

ಗ್ಯಾಜೆಟ್ ಸುದ್ದಿ
ಚೀನಾದ ಶಿಯೋಮಿ ಕಂಪೆನಿಯ ಫೋನ್‌ಗಳು ಕೆಲವು ಮಾಹಿತಿಗಳನ್ನು ರಹಸ್ಯವಾಗಿ ಚೀನಾ ದೇಶಕ್ಕೆ ಕಳುಹಿಸುತ್ತಿವೆ ಎಂದು ಹಿಂದೊಮ್ಮೆ ಸುದ್ದಿಯಾಗಿತ್ತು ತಾನೆ? ಭಾರತೀಯ ಕಂಪೆನಿ ಮೈಕ್ರೋಮ್ಯಾಕ್ಸ್ ಅದೇ ಮಾದರಿಯಲ್ಲಿ ರಹಸ್ಯವಾಗಿ ಮಾಹಿತಿ ಕದಿಯುತ್ತಿರುವುದು ಈಗ ಪತ್ತೆಯಾಗಿದೆ. ಮೈಕ್ರೋಮ್ಯಾಕ್ಸ್ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಅವುಗಳನ್ನು ಕೊಂಡ ನಂತರ ಬಳಸುತ್ತಿರುವಾಗ ರಹಸ್ಯವಾಗಿ, ಬಳಕೆದಾರನ ಅನುಮತಿಯಿಲ್ಲದೆಯೇ ಕೆಲವು ಕಿರುತಂತ್ರಾಂಶಗಳನ್ನು ಸೇರಿಸುತ್ತಿರುವುದು ಪತ್ತೆಯಾಗಿದೆ. ಅದರಲ್ಲಿ ಒಂದು ಕಿರುತಂತ್ರಾಂಶವು ಮಾಹಿತಿಗಳನ್ನು ಕಲೆಹಾಕಿ ಎಲ್ಲಿಗೋ ಕಳುಹಿಸುತ್ತಿರುವುದೂ ಪತ್ತೆಯಾಗಿದೆ. ಯಾವೆಲ್ಲ ಮಾಹಿತಿಗಳನ್ನು ಅದು ಕಲೆಹಾಕುತ್ತಿದೆ, ಎಲ್ಲಿಗೆ ಕಳುಹಿಸುತ್ತಿದೆ ಎಂದು ತಿಳಿದುಬಂದಿಲ್ಲ. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗಳಿಗೆ ಕಂಪೆನಿಯಿಂದ ಸರಿಯಾದ ಉತ್ತರ ಬಂದಿಲ್ಲ.

ಗ್ಯಾಜೆಟ್ ತರ್ಲೆ
ನಿಮ್ಮ ಮೊಬೈಲ್ ಫೋನ್ ಕೆಟ್ಟರೆ ನಿಮ್ಮ ಮಗುವನ್ನು ಬೈಯುತ್ತೀರಿ. ನಿಮ್ಮ ಮಗು ಕೆಟ್ಟರೆ ಮೊಬೈಲ್‌ ಅನ್ನು ಬೈಯುತ್ತೀರಿ.

ಗ್ಯಾಜೆಟ್ ಸಲಹೆ
ಕಾರ್ತಿಕ್ ಅವರ ಪ್ರಶ್ನೆ:
ನನಗೆ ಸುಮಾರು ₹20,000ದಲ್ಲಿ ಒಂದು ಡಿಎಸ್‌ಎಲ್‌ಆರ್ ಕ್ಯಾಮೆರಾ ಕೊಳ್ಳಬೇಕು. ಯಾವುದನ್ನು ಕೊಳ್ಳಬಹುದು?
ಉ: ನಿಕಾನ್ ಡಿ3100 ಅಥವಾ ಕ್ಯಾನನ್ 1100ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT