ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಕಿಯಾ ಲುಮಿಯಾ 830: ರಂಗುರಂಗಿನ ವಿನ್ಯಾಸದ ಜೊತೆ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಮಧ್ಯಮ ಬೆಲೆಗೆ ಉತ್ತಮ ವಿನ್ಯಾಸದ ಲುಮಿಯಾ ವಿಂಡೋಸ್ ಫೋನ್

ನೋಕಿಯಾ ಕಂಪೆನಿಯನ್ನು ಮೈಕ್ರೋಸಾಫ್ಟ್ ಕೊಂಡುಕೊಂಡ ನಂತರವೂ ಹಲವು ಫೋನ್‌ಗಳು ನೋಕಿಯಾ ಲುಮಿಯಾ ಎಂಬ ಹೆಸರನ್ನೇ ಹೊತ್ತು ಬರುತ್ತಿದ್ದವು. ಆ ಮಾಲಿಕೆಯಲ್ಲಿ ಬಹುಶಃ ಕೊನೆಯ ಫೋನ್ ನೋಕಿಯಾ ಲುಮಿಯಾ 830 (Nokia Lumia 830). ಇದು ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
1.2 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Quad core Snapdragon 400), ಆಡ್ರಿನೊ ಗ್ರಾಫಿಕ್‌ ಪ್ರೊಸೆಸರ್, 1 + 16 ಗಿಗಾಬೈಟ್ ಮೆಮೊರಿ, 128 ಗಿಗಾಬೈಟ್ ತನಕ ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್‌ ಹಾಕಿಕೊಳ್ಳುವ ಸೌಲಭ್ಯ, 1280 x 720 ಪಿಕ್ಸೆಲ್ ರೆಸೊಲೂಶನ್‌ನ 5 ಇಂಚು ಗಾತ್ರದ ಐಪಿಎಸ್ ಪರದೆ, ಗೊರಿಲ್ಲ ಗಾಜು, 10 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಪ್ರಾಥಮಿಕ ಮತ್ತು 0.9 ಮೆಗಾಪಿಕ್ಸೆಲ್‌ನ ಇನ್ನೊಂದು ಎದುರುಗಡೆ ಕ್ಯಾಮೆರಾ, ಎಲ್ಇಡಿ ಫ್ಲಾಶ್, ನ್ಯಾನೊಸಿಮ್, 2ಜಿ ಮತ್ತು 3ಜಿ, ಎಫ್ಎಂ ರೇಡಿಯೊ, ವೈಫೈ, ಬ್ಲೂಟೂತ್, ಜಿಪಿಎಸ್, ಎಕ್ಸೆಲರೋಮೀಟರ್, ಎನ್ಎಫ್ಸಿ, 139.4 x 70.7 x 8.5 ಮಿ.ಮೀ. ಗಾತ್ರ, 150 ಗ್ರಾಂ ತೂಕ, 2200 mAh ಶಕ್ತಿಯ ಬ್ಯಾಟರಿ, ಇತ್ಯಾದಿ. ಮಾರುಕಟ್ಟೆ ಬೆಲೆ ಸುಮಾರು ₹27,000.

ಇದು ಕೂಡ ಎಲ್ಲ ಲುಮಿಯಾ ಫೋನ್‌ಗಳಂತೆ ಉತ್ತಮವಾದ ರಚನೆ ಮತ್ತು ವಿನ್ಯಾಸದಿಂದ ಮಾಡಲ್ಪಟ್ಟಿದೆ. ಇದರ ಬದಿಗಳು ಲೋಹದಿಂದ ಮಾಡಲ್ಪಟ್ಟಿವೆ. ಅಂದರೆ ಇದರ ಬದಿಗಳಲ್ಲಿ ಒಂದು ಲೋಹದ ಫ್ರೇಮ್ ಇದೆ. ಇದು ಬಹುಮಟ್ಟಿಗೆ ಉತ್ತಮ ಮತ್ತು ದುಬಾರಿ ಫೋನ್‌ಗಳಲ್ಲಿ ಮಾತ್ರ ಕಂಡುಬರುವ ರಚನೆ. ಹಿಂಭಾಗದ ಕವಚ ತೆಗೆಯಬಹುದು ಮತ್ತು ಬದಲಿಸಬಹುದು. ಈ ಕವಚ ಹಲವು ಬಣ್ಣಗಳಲ್ಲಿ ಲಭ್ಯವಿದೆ. ನಿಮಗೆ ಬೇಕಾದಾಗ ಬೇರೆ ಬೇರೆ ಬಣ್ಣದ ಕವಚ ಹಾಕಿಕೊಳ್ಳಬಹುದು. ಕವಚ ತೆಗೆದಾಗ ಸಿಮ್ ಮತ್ತು ಮೈಕ್ರೋಎಸ್‌ಡಿಗಳನ್ನು ಹಾಕುವ ಜಾಗ ಕಂಡುಬರುತ್ತದೆ. ಬ್ಯಾಟರಿ ತೆಗೆಯಬಹುದು ಮತ್ತು ಬದಲಾಯಿಸಬಹುದು. ಸಿಮ್ ಬದಲಿಸಲು ಬ್ಯಾಟರಿ ತೆಗೆಯುವ ಅಗತ್ಯವಿದೆ. ಬಲಭಾಗದಲ್ಲಿ ವಾಲ್ಯೂಮ್, ಆನ್/ಆಫ್ ಮತ್ತು ಕ್ಯಾಮೆರಾ ಬಟನ್‌ಗಳಿವೆ. ಕ್ಯಾಮೆರಾಗೆ ಪ್ರತ್ಯೇಕ ಬಟನ್ ಇರುವುದು ಲುಮಿಯಾ ಫೋನ್‌ಗಳ ವೈಶಿಷ್ಟ್ಯ. ಗೊರಿಲ್ಲ ಗಾಜು ಇರುವುದರಿಂದ ಪರದೆಗೆ ಗೀರುಗಳಾಗಲಾರದು. 5 ಇಂಚು ಗಾತ್ರದ ಫೋನ್ ಇದಾಗಿದೆ. ಒಂದು ಕೈ ಬಳಕೆ ಮಾಡಬೇಕಾದರೆ ನಿಮಗೆ ಸ್ವಲ್ಪ ದೊಡ್ಡ ಕೈ ಬೇಕು. 8.5 ಮಿ.ಮೀ. ದಪ್ಪ ಇದೆ. ಅಂದರೆ ಅತಿ ತೆಳ್ಳಗೆ ಅಥವಾ ದಪ್ಪವೂ ಅಲ್ಲದ ಫೋನ್.

ಬಳಕೆಯ ವೇಗ ಚೆನ್ನಾಗಿದೆ. ಪರದೆಯಲ್ಲಿ ಟೈಲ್‌ಗಳ (ಲುಮಿಯಾದಲ್ಲಿ ಐಕಾನ್‌ಗಳ ಬದಲಿಗೆ ಟೈಲ್‌ಗಳಿರುತ್ತವೆ) ಸರಿಸುವಿಕೆಯ ಅನುಭವ ಚೆನ್ನಾಗಿದೆ. ವಿಡಿಯೊ ವೀಕ್ಷಣೆ, ಆಟ ಆಡುವ ಅನುಭವ ಎಲ್ಲ ಚೆನ್ನಾಗಿಯೇ ಇದೆ. ಪರದೆಯ ರೆಸೊಲೂಶನ್ ಮಾತ್ರ ಪೂರ್ತಿ ಹೈಡೆಫಿನಿಶನ್ ಅಲ್ಲ. ಅದು ಅರ್ಧ ಹೈಡೆಫಿನಿಶನ್. ಶುದ್ಧ ಕಪ್ಪು ಪರದೆ ಇದೆ. ಇದರಿಂದಾಗಿ ವಿಡಿಯೊ ವೀಕ್ಷಣೆಯ ಅನುಭವ ಚೆನ್ನಾಗಿದೆ.

ತುಂಬ ಬಿಸಿಲಿನಲ್ಲೂ ಪರದೆ ಸ್ವಯಂಚಾಲಿತವಾಗಿ ಬಿಸಿಲಿನಲ್ಲಿ ಸ್ಫುಟವಾಗಿ ಕಾಣಿಸಲು ಎಷ್ಟು ಪ್ರಖರತೆ ಬೇಕೋ ಅದನ್ನು ತಾನೇ ಮಾಡಿಕೊಳ್ಳುತ್ತದೆ. ಪ್ರಖರ ಬಿಸಿಲಿನಲ್ಲೂ ಸಿನಿಮಾ ವೀಕ್ಷಣೆ ಮಾಡಬಹುದು! ಇದರ ಪರದೆಯ ಸಂವೇದನೆ ಎಷ್ಟು ನಾಜೂಕೆಂದರೆ ಕೈಯಲ್ಲಿ ಗ್ಲೌಸ್ ಹಾಕಿಕೊಂಡೂ ಇದನ್ನು ಬಳಕೆ ಮಾಡಬಹುದು.

ಅರ್ಧ ಹೈಡೆಫಿನಿಶನ್ ಆದರೂ ಪೂರ್ತಿ ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು. ಆದರೆ 4K ರೆಸೊಲೂಶನ್‌ನ ವಿಡಿಯೊ ಪ್ಲೇ ಆಗುವುದಿಲ್ಲ. ಆಡಿಯೊ ಇಂಜಿನ್ ಚೆನ್ನಾಗಿದೆ. ಜೊತೆಗೆ ನೀಡಿದ ಇಯರ್‌ಫೋನ್‌ ಪರವಾಗಿಲ್ಲ. ಉತ್ತಮ ಇಯರ್‌ಫೋನ್‌ ಜೋಡಿಸಿ ಉತ್ತಮ ಸಂಗೀತ ಆಲಿಸಬಹುದು. ವಿಚಿತ್ರ ಎಂದರೆ ಇದರಲ್ಲಿರುವ ಗ್ರಾಫಿಕ್ ಇಕ್ವಲೈಸರ್ ಅನ್ನು ಮ್ಯೂಸಿಕ್ ಪ್ಲೇಯರ್ ಒಳಗಿನಿಂದ ಬಳಸಲು ಆಗುವುದಿಲ್ಲ. ಎಫ್ಎಂ ರೇಡಿಯೊ ಇದೆ. ಅದನ್ನು ಬಳಸಬೇಕಾದರೆ ಬಹುಪಾಲು ಫೋನ್‌ಗಳಂತೆ ಇಯರ್‌ಫೋನ್‌ ಜೋಡಿಸಲೇಬೇಕು. ಏಕೆಂದರೆ ಆಗ ಇಯರ್‌ಫೋನ್‌ ಆಂಟೆನಾ ಆಗಿ ಕೆಲಸ ಮಾಡುತ್ತದೆ.

ಲುಮಿಯಾ 830ರಲ್ಲಿ ಇರುವುದು 10 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಕ್ಯಾಮೆರಾ. ಇದಕ್ಕೆ ಕಾರ್ಲ್ ಝೀಸ್ ಲೆನ್ಸ್ ಅಳವಡಿಸಿದ್ದಾರೆ. ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇದೆ. ಅಂದರೆ ಫೋಟೊ ತೆಗೆಯುವಾಗ ಕೈ ಅಲ್ಪಸ್ವಲ್ಪ ಅಲುಗಾಡಿದರೂ ಫೋಟೊ ಸ್ಫುಟವಾಗಿ ಮೂಡಿಬರುತ್ತದೆ. f/2.2 ಲೆನ್ಸ್ ಇರುವುದರಿಂದ ಅತಿ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೊ ತೆಗೆಯಬಹುದು. ಲುಮಿಯಾ ಕ್ಯಾಮೆರಾಗಳಲ್ಲಿರುವ ವಿಶೇಷ ಕ್ಯಾಮೆರಾ ಆಪ್ ಹಲವು ನಿಯಂತ್ರಣಗಳನ್ನು ನಿಮಗೆ ನೀಡುತ್ತದೆ. ಇದರಲ್ಲಿ ಎಕ್ಸ್‌ಪೋಷರ್, ಷಟರ್ ವೇಗ, ಐಎಸ್ಓ ಆಯ್ಕೆ ಎಲ್ಲ ಸೇರಿವೆ.

ಈ ಒಂದು ವಿಷಯದಲ್ಲಿ ಲುಮಿಯಾ ಕ್ಯಾಮೆರಾಗಳನ್ನು ಯಾವ ಆಂಡ್ರಾಯಿಡ್ ಫೋನ್ ಸರಿಗಟ್ಟಲಾರದು. ಈ ಫೋನ್ ನಿಮ್ಮಲ್ಲಿದ್ದರೆ ನಿಮಗೆ ಯಾವುದೇ ಏಮ್-ಆಂಡ್-ಶೂಟ್ ಕ್ಯಾಮೆರಾ ಬೇಕಾಗಿಲ್ಲ. ನಿಮ್ಮಲ್ಲಿ ಈ ಫೋನ್ ಕೊಳ್ಳುವಷ್ಟು ಹಣವಿದ್ದಲ್ಲಿ, ನಿಮಗೆ ಉತ್ತಮ ಕ್ಯಾಮೆರಾ ಫೋನ್ ಬೇಕಾಗಿದ್ದಲ್ಲಿ ಇದು ಖಂಡಿತ ಉತ್ತಮ ಆಯ್ಕೆ. 

ಬ್ಯಾಟರಿ ಬಳಕೆ ಚೆನ್ನಾಗಿದೆ. ಸುಮಾರು ಒಂದೂವರೆ ದಿನ ಬಾಳಿಕೆ ಬರುತ್ತದೆ. ಬ್ಯಾಟರಿಯನ್ನು ಎಚ್ಚರಿಕೆಯಿಂದ ಬಳಸುವ ಆಯ್ಕೆಯೂ ಇದೆ. ‌

ಈ ಫೋನ್ ಬಳಸುವುದು ವಿಂಡೋಸ್ ಫೋನ್ 8.1. ಆದ್ದರಿಂದ ಇದರಲ್ಲಿ ಕನ್ನಡ ಪಠ್ಯದ ತೋರುವಿಕೆ (ರೆಂಡರಿಂಗ್) ಇದೆ. ಆದರೆ ಕನ್ನಡದ ಪಠ್ಯವನ್ನು ಊಡಿಸಲು (ಇನ್‌ಪುಟ್) ಯಾವುದೇ ಕೀಲಿಮಣೆ (ಕೀಬೋರ್ಡ್) ತಂತ್ರಾಂಶ ಇಲ್ಲ. ಕನ್ನಡದ ಯೂಸರ್ ಇಂಟರ್‌ಫೇಸ್‌್ ಕೂಡ ಇಲ್ಲ. ಮೈಕ್ರೋಸಾಫ್ಟ್‌ನವರು ಈ ವಿಷಯದಲ್ಲಿ ಯಾಕೆ ಕನ್ನಡದ ಬಗ್ಗೆ ತಾತ್ಸಾರ ತೋರಿಸುತ್ತಿದ್ದಾರೆಯೋ ಗೊತ್ತಾಗುತ್ತಿಲ್ಲ.

ಪ್ರತಿ ಸಲ ಕೇಳಿದಾಗಲೂ ಸದ್ಯದಲ್ಲೇ ಬರಲಿದೆ ಎಂಬ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. TypeKannada ಎಂಬ ಆಪ್ ಹಾಕಿಕೊಂಡು ಅದರಲ್ಲಿ ಕನ್ನಡ ಟೈಪ್ ಮಾಡಿ ಅದನ್ನು ನಕಲು ಮಾಡಿ ನಿಮಗೆ ಬೇಕಾದ ಕಡೆ (ಉದಾ ಫೇಸ್‌ಬುಕ್) ಅಂಟಿಸಬೇಕು (copy and paste). ಇದು ಸದ್ಯಕ್ಕೆ ಎಲ್ಲ ವಿಂಡೋಸ್ ಫೋನ್‌ಗಳ ಹಣೆಬರಹ. ಕನ್ನಡ ನಮಗೆ ಬೇಕೇ ಬೇಕು ಎಂದು ಒತ್ತಾಯಪೂರ್ವಕ ಕೇಳದ ನಿರಭಿಮಾನಿ ಕನ್ನಡಿಗರೇ ಈ ದುರವಸ್ತೆಗೆ ಕಾರಣ.

ವಾರದ ಆಪ್ (app)
ಆಟೋಮ್ಯಾತ್ ಫೋಟೊ ಕ್ಯಾಲ್ಕುಲೇಟರ್

ಸುಮಾರು ಒಂದು ತಿಂಗಳ ಹಿಂದೆ ಇದೇ ಅಂಕಣದಲ್ಲಿ ಫೋಟೋಮ್ಯಾತ್ ಎಂಬ ವಿಂಡೋಸ್ ಫೋನ್‌ನಲ್ಲಿ ಕೆಲಸ ಮಾಡುವ ಆಪ್ ಬಗ್ಗೆ ತಿಳಿಸಲಾಗಿತ್ತು. ಈಗ ಅಂತಹುದೇ ಕಿರುತಂತ್ರಾಂಶ (ಆಪ್) ಆಟೋಮ್ಯಾತ್ ಫೋಟೊ ಕ್ಯಾಲ್ಕುಲೇಟರ್ (AutoMath Photo Calculator) ಆಂಡ್ರಾಯಿಡ್ ಫೋನ್‌ಗಳಿಗೆ ಬಂದಿದೆ. ಗಣಿತದ ಸಮಸ್ಯೆಗಳನ್ನು ಫೋನಿನ ಕ್ಯಾಮೆರಾದ ಮುಂದೆ ಹಿಡಿದರೆ ಈ ಆಪ್ ಅದನ್ನು ಬಿಡಿಸಿ ಉತ್ತರ ನೀಡುತ್ತದೆ! ಹಾಗೆಂದು ಹೇಳಿ ಅತಿ ಕ್ಲಿಷ್ಟವಾದ ಸಮಸ್ಯೆಗಳನ್ನು ಇದು ಪರಿಹರಿಸುವುದಿಲ್ಲ. ಸರಳವಾದ ಬೀಜಗಣಿತದ ಸಮಸ್ಯೆಗಳನ್ನು ಪರಿಹರಿಸುತ್ತದೆ. ಮುದ್ರಿಸಿದ ಪಠ್ಯವನ್ನು ಮಾತ್ರ ಇದು ಅರ್ಥ ಮಾಡಿಕೊಳ್ಳುತ್ತದೆ.

ಗ್ಯಾಜೆಟ್ ಸುದ್ದಿ
ಇದೆಯಾ ಇಲ್ಲವಾ?

ಘಟಾನುಘಟಿಗಳನ್ನು ಮಣ್ಣುಮುಕ್ಕಿಸಬಲ್ಲ ಫೋನ್ ಎಂದು ಇದೇ ಅಂಕಣದಲ್ಲಿ ಬರೆದಿದ್ದ ಒನ್‌ ಪ್ಲಸ್ ಒನ್ ಫೋನ್ ಭಾರತಕ್ಕೆ ಅಡಿಯಿಟ್ಟಿದೆ. ಅದು ಬಳಸುವುದು ಸಯನೋಜನ್ ಆಂಡ್ರಾಯಿಡ್. ಅದು ಭಾರತದಲ್ಲಿ ಡಿಸೆಂಬರ್ 2 ರಿಂದ ಅಮೆಝಾನ್ ಮೂಲಕ ಮಾತ್ರ ಲಭ್ಯ. ಅದೂ ಆಹ್ವಾನದ ಮೂಲಕ ಮಾತ್ರ. ಇಷ್ಟೆಲ್ಲ ಆದಾಗ ಸಯನೋಜನ್ ಭಾರತದ ಮೈಕ್ರೋಮ್ಯಾಕ್ಸ್ ಜೊತೆ ಒಪ್ಪಂದ ಮಾಡಿಕೊಂಡಿತು. ಆ ಒಪ್ಪಂದದ ಪ್ರಕಾರ ಭಾರತದಲ್ಲಿ ಬೇರೆ ಯಾವ ಫೋನಿಗೂ ಸಯನೋಜನ್ ಆಂಡ್ರಾಯಿಡ್ ನೀಡಲಾಗುವುದಿಲ್ಲ.

ಹಾಗಾದರೆ ಈಗ ಭಾರತದಲ್ಲಿ ಒನ್‌ ಪ್ಲಸ್‌ ಫೋನ್ ತೆಗೆದುಕೊಂಡವರ ಗತಿ ಏನು? ಅವರ ಫೋನ್‌ಗಳಿಗೆ ಸಯನೋಜನ್ನ ಹೊಸ ಆವೃತ್ತಿ ದೊರೆಯುತ್ತದೆಯೇ ಇಲ್ಲವೇ? ಹೊಸ ಆವೃತ್ತಿ ನೀಡುತ್ತೇವೆ ಎಂದು ಒನ್‌ ಪ್ಲಸ್ ಘೋಷಿಸಿತು. ಅದಾದ ಮರುದಿನ ಸಯನೋಜನ್ ಒಂದು ಘೋಷಣೆ ಹೊರಡಿಸಿ ಭಾರತದಲ್ಲಿ ಮೈಕ್ರೋಮ್ಯಾಕ್ಸ್‌ ಫೋನ್‌ಗಳಿಗೆ ಮಾತ್ರವೇ ಇನ್ನು ಮುಂದಕ್ಕೆ ಸಯನೋಜನ್ ಲಭ್ಯ ಎಂದಿತು.

ಭಾರತದಿಂದ ಹೊರಗಡೆ ಒನ್‌ ಪ್ಲಸ್ ಫೋನ್ ಕೊಂಡವರಿಗೆ, ಅವರು ಭಾರತದಲ್ಲಿದ್ದರೂ ಸಯನೋಜನ್‌ನ ಮುಂದಿನ ಆವೃತ್ತಿಗಳು ಲಭ್ಯವಾಗಲಿವೆ ಎಂದೂ ಜೊತೆಯಲ್ಲಿ ಹೇಳಿತು. ಈಗ ಭಾರತದಲ್ಲಿ ಒನ್‌ ಪ್ಲಸ್‌ ಫೋನ್ ಕೊಂಡವರಿಗೆ ಫೆಬ್ರುವರಿಯ ಅಂದಾಜಿಗೆ ಆಂಡ್ರಾಯಿಡ್‌ನ ಹೊಸ ಆವೃತ್ತಿಯನ್ನು  (ಲಾಲಿಪಾಪ್) ತಾನೇ ಸುಧಾರಿಸಿ ನೀಡುವುದಾಗಿ ಒನ್‌ ಪ್ಲಸ್ ಘೋಷಿಸಿದೆ.

ಗ್ಯಾಜೆಟ್ ತರ್ಲೆ
ವೈದ್ಯ: ಉತ್ತಮ ಆರೋಗ್ಯದಿಂದಿರಬೇಕಾದರೆ ನೀವು ದಿನಾ ಸ್ವಲ್ಪ ಓಡಬೇಕು.
ಈತ: ನಾನು ದಿನಾ ತುಂಬ ಓಡುತ್ತೇನೆ. ನನ್ನ ಸ್ಮಾರ್ಟ್‌ಫೋನಿನ ಬ್ಯಾಟರಿ ಖಾಲಿಯಾಗುವವರೆಗೂ ಟೆಂಪಲ್ ರನ್ ಮೂಲಕ ಓಡುತ್ತೇನೆ.

ಗ್ಯಾಜೆಟ್ ಸಲಹೆ
ದಾವಣಗೆರೆಯ ಶ್ರೀನಿವಾಸರ ಪ್ರಶ್ನೆ: ನೀವು ನೋಕಿಯಾ ಹಿಯರ್ ಮ್ಯಾಪ್ ಬಗ್ಗೆ ಬರೆದಿದ್ದು ಓದಿದೆ. ಆ ಜಾಲತಾಣಕ್ಕೆ ಭೇಟಿ ನೀಡಿ ಆಪ್ ಹುಡುಕಿ ಇನ್‌ಸ್ಟಾಲ್ ಮಾಡಿಕೊಳ್ಳಲು ಆಗಲಿಲ್ಲ. ಏನು ಮಾಡಬೇಕು?

ಉ: ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಗತಿಗಳು ಎಷ್ಟು ವೇಗವಾಗಿ ಬದಲಾಗುತ್ತಿವೆ ಎಂಬುದಕ್ಕೆ ಇದು ಉತ್ತಮ ನಿದರ್ಶನ. ನಾನು HERE Map ಬಗ್ಗೆ ಬರೆದು ಅದು ಮುದ್ರಣವಾಗುವಷ್ಟರಲ್ಲಿ ಅದು here.com ಜಾಲತಾಣದಿಂದ ಗೂಗ್ಲ್ ಪ್ಲೇ ಸ್ಟೋರ್‌ಗೆ ಅಧಿಕೃತವಾಗಿ ಬಂದಿತ್ತು. ಈಗ ಎಲ್ಲರೂ ಗೂಗ್ಲ್ ಪ್ಲೇ ಸ್ಟೋರ್‌ನಿಂದ ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT