ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪ್ಪ ಮತ್ತು ತಳವರ್ಗಗಳ ರಾಜಕಾರಣ

Last Updated 28 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಈ ಅಂಕಣ ಬರೆಯುವ ದಿನ (ಅ.26) ಕರ್ನಾ­ಟ­ಕದ ವಿಶಿಷ್ಟ ನಾಯಕರಾದ ಬಂಗಾರಪ್ಪ­ನವರ ಹುಟ್ಟುಹಬ್ಬ. ಬಂಗಾರಪ್ಪನ­ವರು ಇದ್ದಿ­ದ್ದರೆ ಇವತ್ತು ಅವರಿಗೆ ಎಂಬತ್ತೆರಡು ವರ್ಷವಾಗಿ­ರುತ್ತಿತ್ತು. ಬಂಗಾರಪ್ಪನವರಂಥ ರಾಜ­ಕಾರಣಿ­ಗಳ ಬಗ್ಗೆ ಯೋಚಿಸುತ್ತಿದ್ದರೆ ಒಬ್ಬ ವ್ಯಕ್ತಿಯ ಏಳುಬೀಳುಗಳಿಗಿಂತ ಅವರು ಪ್ರತಿನಿಧಿ­ಸಿದ ಹಿಂದು­ಳಿದ ಜಾತಿಗಳ ರಾಜಕಾರಣದ ಚರಿ­ತ್ರೆಯೇ ಕಣ್ಣಿಗೆ ಬರುತ್ತಿರುತ್ತವೆ. ಈ ಹಿನ್ನೆಲೆ­ಯಲ್ಲಿ ಬಂಗಾರಪ್ಪನವರ ನೆನಪಿನ ಜೊತೆ­ಜೊತೆಗೇ ಕರ್ನಾಟಕದ ಹಿಂದುಳಿದ ಜಾತಿಗಳ ರಾಜಕಾರಣದತ್ತ ಒಂದು ನೋಟ...

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸಾರೇಕೊಪ್ಪ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಬಂಗಾರಪ್ಪ ನವರಿಗೆ ವಿದ್ಯಾರ್ಥಿಯಾಗಿದ್ದಾಗ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲ­ಗೌಡರ ಸ್ಪರ್ಶವಾಗುತ್ತದೆ; ಗಣಪತಿಯಪ್ಪನ­ವರು ಆರಂಭಿಸಿದ್ದ ಕಾಗೋಡು ಸತ್ಯಾಗ್ರಹದ ಮೂಲಕ ಎಚ್ಚೆತ್ತಿದ್ದ ತನ್ನ ದೀವರ ಜಾತಿಯ ಗೇಣಿದಾರರ ಹಕ್ಕಿನ ಪ್ರಜ್ಞೆ ಕೂಡ ಈ ಹುಡುಗ­ನನ್ನು ರೂಪಿ­ಸುತ್ತದೆ. ಗೋಪಾಲಗೌಡ, ರಾಮ­ಮ­ನೋ­ಹರ ಲೋಹಿಯಾ ಅವರ ‘ಚಳವಳಿ ರಾಜಕಾರಣ’ ವನ್ನು ಹತ್ತಿರದಿಂದ ಕಂಡ ಹುಡುಗನ ನೋಟವೇ ಬದಲಾಗುತ್ತದೆ.

ಆನಂತರ ಲಾಯರ್ ಆಗಿ ಸಾವಿರಾರು ಗೇಣಿದಾರರ ಭೂಮಿಯ ಹಕ್ಕುಗಳಿಗಾಗಿ ತಾವೇ ಕೋರ್ಟ್ ಫೀಸು ಕಟ್ಟಿ ನ್ಯಾಯಾಲಯದಲ್ಲಿ ಹೋರಾಡ ತೊಡಗಿದ ಬಂಗಾರಪ್ಪನವರನ್ನು ಕಾಗೋಡು ತಿಮ್ಮಪ್ಪ ಹಾಗೂ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಿಸಿದರು. ಬಂಗಾರಪ್ಪ ಗೆದ್ದು ಶಾಸಕರಾದರು. ಮುಂದೊಮ್ಮೆ ರಾಜ್ಯದ ಮುಖ್ಯಮಂತ್ರಿಯೂ ಆದರು. ಸಾಹಿತ್ಯ, ಸಂಗೀತದ ಜೊತೆ ಜೀವಂತ ಒಡನಾಟ ಇಟ್ಟುಕೊಂಡಿದ್ದ ಬಂಗಾರಪ್ಪ ನವರ ಬದುಕಿನ ಈ ಎಲ್ಲ ಘಟ್ಟಗಳನ್ನು ಕವಿ ಎಲ್.ಎನ್. ಮುಕುಂದರಾಜ್ ‘ಸಾರೆಕೊಪ್ಪದ ಬಂಗಾರ’ ಪುಸ್ತಕದಲ್ಲಿ ಪ್ರೀತಿಯಿಂದ ದಾಖಲಿಸಿದ್ದಾರೆ.

ಬಂಗಾರಪ್ಪನವರನ್ನು ಹರಯದಲ್ಲೇ ಸ್ಪರ್ಶಿ­ಸಿದ ಸಮಾಜವಾದ ಒಂದು ಮಟ್ಟದಲ್ಲಾ­ದರೂ ಬಹುಕಾಲ ಅವರೊಳಗಿತ್ತು. ಬಂಗಾರಪ್ಪ ತಮ್ಮ ರಾಜಕೀಯ ಬದುಕಿನ ಒಂದು ಘಟ್ಟದವರೆ­ಗಾದರೂ ಜನರ ಅಜ್ಞಾನಗಳನ್ನು ತಿದ್ದುವ ನಾಯಕರಾಗಿದ್ದರು. ಸಾರ್ವಜನಿಕ ಸಭೆಯೊಂದ­ರಲ್ಲಿ ಯಾರೋ ಒಬ್ಬ ದೇವಸ್ಥಾನ ಕಟ್ಟಿಸುವ ಬಗ್ಗೆ ಕೇಳಿದರೆ, ‘ಮೊದಲು ನಿನ್ನ ಮನೆಗೆ ಸುಣ್ಣ ಹೊಡೆದಿದೀಯ ನೋಡ್ಕೋ. ದೇವರಿಗೆ ಯಾವ ದೇವಸ್ಥಾನ ದಲ್ಲಾದರೂ ಕೈ ಮುಗಿಯಬ­ಹುದು’ ಎಂದು ಛೇಡಿಸಬಲ್ಲ ಸ್ವಾತಂತ್ರ್ಯವನ್ನು ಬಂಗಾರಪ್ಪ ಒಂದು ಕಾಲಕ್ಕೆ ಉಳಿಸಿಕೊಂಡಿದ್ದರು. ಆದರೆ ಮುಂದೆ ದಲಿತ ಚಳವಳಿಯ ನಾಯಕ­ರಾದ ಬಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಕರ್ನಾಟ­ಕದ ಪ್ರಗತಿಪರರು ಚಂದ್ರಗುತ್ತಿಯ ಬೆತ್ತಲೆ­ಪೂಜೆಯ ವಿರುದ್ಧ ಪ್ರತಿಭಟಿಸುತ್ತಿದ್ದಾಗ, ಬಂಗಾರಪ್ಪ ಆ ಬಗ್ಗೆ ಮಾತೇ ಆಡದೆ ವೋಟಿನ ಮೇಲೆ ಕಣ್ಣು ನೆಟ್ಟ ವೃತ್ತಿ ರಾಜಕಾರಣಿಯ ವರಸೆ ತೋರಿಸಿಬಿಟ್ಟರು. ಈ ಘಟ್ಟದ ನಂತರ ಬಂಗಾರಪ್ಪ ತಮ್ಮ ಹಳೆಯ ಸಮಾಜ ವಾದಿ ಒಗರನ್ನು ಕಳೆದುಕೊಂಡರು.

ಇಷ್ಟಾಗಿಯೂ ಸ್ವತಂತ್ರವಾಗಿ ಪಕ್ಷಗಳನ್ನು ಕಟ್ಟಿ­ದಾಗಲೂ ರಾಜ್ಯದುದ್ದಕ್ಕೂ ಬೆಂಬಲಗಳಿಸುವ ಶಕ್ತಿ ಒಂದು ಕಾಲಕ್ಕೆ ಬಂಗಾರಪ್ಪನ­ವರಲ್ಲಿತ್ತು. ಕ್ರಾಂತಿ­ರಂಗ ಎಂಬ ಪಕ್ಷ ಕಟ್ಟಿದ ಬಂಗಾರಪ್ಪ ಇಡೀ ರಾಜ್ಯ ಸುತ್ತಿ ಹಲವರನ್ನು ಗೆಲ್ಲಿಸಿ, ತಮ್ಮ ಚುನಾ­ವಣಾ ಕ್ಷೇತ್ರವನ್ನೇ ಪ್ರವೇಶಿಸದೆ ಚುನಾವಣೆ ಗೆದ್ದರು. ಅವರಲ್ಲಿದ್ದ ಈ ಶಕ್ತಿ ಕಾಂಗ್ರೆಸ್ಸಿನ ಬೆಂಬಲ ಕಳೆದುಕೊಂಡ ದೇವರಾಜ ಅರಸರಲ್ಲಾಗಲೀ ಅಥವಾ ಈಚೆಗೆ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ ಯಡಿಯೂರಪ್ಪನವರಲ್ಲಾಗಲೀ ಇರಲಿಲ್ಲ. ಈ ಅಂಶ, ಬಂಗಾರಪ್ಪನವರ ವ್ಯಕ್ತಿತ್ವ ಕರ್ನಾಟಕದ ವಿವಿಧ ಭಾಗಗಳ ಹಲವು ಜಾತಿಗಳ ಜನರಲ್ಲಿ ಹುಟ್ಟಿಸುತ್ತಿದ್ದ ವಿಶಿಷ್ಟ ನಿಷ್ಠೆಯನ್ನೂ ಸೂಚಿಸು­ವಂತಿದೆ. ಇದೆಲ್ಲ ಆದ ನಂತರ ಮುಂದೆ ಅವರು ಸಿಟ್ಟಿನಿಂದ ದುಡುಕಿ ಬಿಜೆಪಿಗೆ ಹೋಗಿ ಗೆದ್ದರೂ ಸೋತಂತಾಗಿದ್ದರು; ತಮ್ಮ ಅಸಲಿ ನೆಲೆ ಕಳೆದು­ಕೊಂಡಿದ್ದರು.

ತಮ್ಮ ಜೀವನದ ಕೊನೆಗೆ, ಬಂಗಾ­ರಪ್ಪ­ನವರು ಹೆಸರಿನಲ್ಲಾದರೂ ಸಮಾಜ­ವಾದ­ವನ್ನು ಉಳಿಸಿಕೊಂಡ ಮುಲಾಯಂಸಿಂಗ್‌ರ ಸಮಾ­ಜವಾದಿ ಪಕ್ಷದಲ್ಲಿದ್ದದ್ದು ಕೂಡ ಸಾಂಕೇತಿ­ಕ­ವಾಗಿತ್ತು. ಅಷ್ಟು ಹೊತ್ತಿಗಾಗಲೇ ಅವರ ವಿದ್ಯಾರ್ಥಿ ದೆಸೆಯ ಸಮಾಜವಾದ ದಾರಿ ತಪ್ಪಿ ಹತ್ತಾರು ವರ್ಷವಾಗಿತ್ತು. ಆದರೆ ಅವರಲ್ಲಿ ಸಮಾಜವಾದದ ಎಳೆ ಇನ್ನೂ ಉಳಿದಿ­ತ್ತೆಂಬು­ದನ್ನು ಅವರು ಮುಖ್ಯಮಂತ್ರಿಯಾಗಿದ್ದ ಕಾಲ­ದಲ್ಲಿ ಜಾರಿಗೆ ತಂದ ಆಶ್ರಯ, ವಿಶ್ವ, ಆರಾ­ಧನಾದಂತಹ ಯೋಜನೆಗಳು ಸೂಚಿಸುತ್ತವೆ. ಅವರು ಜಾರಿಗೆ ತಂದ ಗ್ರಾಮೀಣ ಕೃಪಾಂಕ­ದಿಂದ ಕರ್ನಾಟಕದ ಸಾವಿರಾರು ಹಳ್ಳಿ ಹುಡುಗ, ಹುಡುಗಿಯರ ಮನೆ ಬಾಗಿಲಿಗೆ ಸರ್ಕಾರಿ ಉದ್ಯೋಗಗಳ ಆರ್ಡರುಗಳು ಬಂದದ್ದು ಇವ­ತ್ತಿಗೂ ಪವಾಡದಂತೆ ಕಾಣುತ್ತದೆ. ಆ ಹುಡುಗ ಹುಡುಗಿಯರಾದರೂ ಇವತ್ತು ಬಂಗಾರಪ್ಪನ­ವರನ್ನು ನೆನೆಸುತ್ತಾರೋ ಇಲ್ಲವೋ ಗೊತ್ತಿಲ್ಲ.

ಹಲಬಗೆಯ ರಾಜಿಗಳು, ದಿಟ್ಟ ನಡೆಗಳು ಎಲ್ಲವೂ ಇದ್ದ ಬಂಗಾರಪ್ಪ ಹಲವು ದಶಕಗಳ ಕಾಲ ಕರ್ನಾಟಕದ ಹಿಂದುಳಿದ ಜಾತಿಗಳ ಪ್ರೀತಿಯ ನಾಯಕನಾಗಿ ಬೆಳೆದ ರೀತಿ ಕೂಡ ಕುತೂಹಲಕರ. ಹಿಂದುಳಿದ ಜಾತಿಯಿಂದ ಬಂದ ನಾಯಕನೊಬ್ಬ ತನ್ನ ಜಾತಿಯಿಂದಾಚೆಗೆ, ಇನ್ನಿತರ ಹಿಂದುಳಿದ ಜಾತಿಗಳು ಒಟ್ಟಾಗಿ ಒಪ್ಪಿ­ಕೊಳ್ಳುವ ನಾಯಕನಾಗಿ ರೂಪುಗೊಳ್ಳು­ವುದು ಎಷ್ಟು ಕಷ್ಟ ಎಂಬುದು ಆಧುನಿಕ ಕರ್ನಾಟಕದ ರಾಜಕೀಯ ಚರಿತ್ರೆ ಬಲ್ಲವರಿಗೆಲ್ಲ ಗೊತ್ತಿರುತ್ತದೆ. ತಮಗೆ ದೀರ್ಘ ಕಾಲ ನೆರವಾಗಬಲ್ಲ ಕಾರ್ಯ­ಕ್ರಮಗಳನ್ನು, ಯೋಜನೆಗಳನ್ನು ರೂಪಿಸಿದ ನಾಯ­ಕರ ಬಗ್ಗೆ ಹಿಂದುಳಿದ ಜಾತಿಗಳ ಮತದಾ­ರರು ತೋರಿರುವ ಕ್ರೂರ ಉಪೇಕ್ಷೆ ದಿಗ್ಭ್ರಮೆ ಹುಟ್ಟಿಸುತ್ತದೆ. ತಮ್ಮನ್ನು ಪೊರೆದ ನಾಯಕರನ್ನು ಕುರಿತಂತೆ ಹಿಂದುಳಿದ ಜಾತಿಗಳಷ್ಟು ಅಭಿಮಾನ­ಶೂನ್ಯರು ಪ್ರಾಯಶಃ ಕರ್ನಾಟಕದ ಇತರೆ ಜಾತಿಗಳಲ್ಲಿ ಇರಲಿಕ್ಕಿಲ್ಲ.

ಈ ಜಾತಿಗಳ ದಿಕ್ಕನ್ನೇ ಬದಲಿಸಿದ ದೇವರಾಜ ಅರಸರನ್ನಾಗಲೀ, ಭೂ ಹೋರಾಟಕ್ಕೆ ಹೊಸ ಚಲನೆ ಕೊಟ್ಟ ಶಾಂತವೇರಿ ಗೋಪಾಲಗೌಡರ­ನ್ನಾಗಲೀ, ಹಿಂದುಳಿದ ವರ್ಗ­ಗಳ ಹಲವು ಶತ­ಮಾನಗಳ ಸ್ಥಗಿತತೆಯನ್ನು ಒಡೆ­ಯುವಂಥ ಚಾರಿತ್ರಿಕ ವರದಿ ನೀಡಿದ ಎಲ್‌.ಜಿ. ಹಾವನೂ­ರರನ್ನಾ­ಗಲೀ ಹಿಂದುಳಿದ ಜಾತಿ­ಗಳು ನೆನೆಯು­ವುದು ಕಡಿಮೆ. ಇದಕ್ಕೆ ಈ ವರ್ಗಗಳ ರಾಜಕೀಯ ಅಪ್ರಬುದ್ಧತೆ ಹಾಗೂ ತಮ್ಮ ಜಾತಿಯ ನಾಯಕನೇ ಅಂತಿಮ ಎಂದು­ಕೊಳ್ಳುವ ಸಂಕುಚಿತ ಜಾತಿಪ್ರಜ್ಞೆ ಕೂಡ ಕಾರಣ. ಈ ಸಂಕುಚಿತತೆಗೆ ನೀರೆರೆಯುತ್ತಾ, ಈ ಜಾತಿ­ಗಳಿಗೆ ಜಾತ್ಯತೀತ ತತ್ವಗಳು ತಲುಪದಂತೆ ನೋಡಿ­ಕೊಳ್ಳುವ ಹಿಂದು­ಳಿದ ಜಾತಿಗಳ ರಾಜಕಾರಣಿ­ಗಳೂ ಇದ್ದಾರೆ.

ಒಬ್ಬರ ಕಾಲನ್ನು ಒಬ್ಬರು ಎಳೆದು ನಾಶವಾ­ಗುವ ಆತ್ಮಹತ್ಯೆಯ ಗೀಳೂ ಈ ಜಾತಿಗಳ ನಾಯಕರಲ್ಲಿದೆ. ಬಂಗಾರಪ್ಪನವರು ಕೊನೆಯ ಸಲ ಕಾಂಗ್ರೆಸ್ಸಿನಿಂದ ಹೊರ ಹೋಗುವ ಸಂದರ್ಭ ಬಂದಾಗ ಕಾಂಗ್ರೆಸ್ ನಾಯಕರಾದ ವಿಶ್ವನಾಥ್ ಅವರು ‘ಇವತ್ತು ಬಹು ದೊಡ್ಡ ಮಾಸ್ ಲೀಡರ್ ನಮ್ಮ ಪಕ್ಷದಿಂದ ಹೊರ­ಹೋಗು­­ತ್ತಿದ್ದಾರೆ; ಏನಾದರೂ ಮಾಡಿ ಅವ­ರನ್ನು ಇಲ್ಲೇ ಉಳಿಸಿಕೊಳ್ಳಬೇಕು’ ಎಂದಿದ್ದರು; ಆದರೆ ಈ ಮಾತನ್ನು ಕಾಂಗ್ರೆಸ್ ಪಕ್ಷದ ಪ್ರಬಲ ಜಾತಿಗಳ ನಾಯಕರಿರಲಿ, ಹಿಂದುಳಿದ ಜಾತಿಗಳ ನಾಯ­ಕರು ಕೂಡ ಕೇಳಿಸಿಕೊಳ್ಳಲಿಲ್ಲ. ‘ಹೊಟ್ಟೆ­ಕಿಚ್ಚಿನ ಪ್ರವೃತ್ತಿ ಹಿಂದುಳಿದ ಜಾತಿಗಳ ರಾಜ­ಕಾರಣಿ­ಗಳಲ್ಲಿ ಎದ್ದು ಕಾಣುತ್ತದೆ’ ಎಂದು ಲೋಹಿಯಾ ಬಹು ಹಿಂದೆಯೇ ಹೇಳಿದ್ದು ನೆನಪಾಗುತ್ತದೆ. ಈ ಬಗೆಯ ಹೊಟ್ಟೆಕಿಚ್ಚುಗಳಿಂದ ಹಿಂದುಳಿದ ಜಾತಿಗಳ ಚಲನೆಗೆ ಊಹಿಸಲಾರ­ದಷ್ಟು ನಷ್ಟವಾಗಿರುವುದು ಎಲ್ಲರಿಗೂ ಗೊತ್ತಿದೆ.

ಅದರ ಜೊತೆಗೇ, ತಕ್ಷಣದ ರಾಜಕೀಯ ಲಾಭಗಳ ಮೇಲೆ ಕಣ್ಣಿಡುವ ಹಿಂದುಳಿದ ಜಾತಿ­ಗಳ ನಾಯಕರು ತಮ್ಮ ಸಮುದಾಯಗಳಿಗೆ ಹೊಸ ಬಗೆಯ ಸಾಂಸ್ಕೃತಿಕ, ಸಾಮಾಜಿಕ ತಿಳಿವ­ಳಿಕೆ ಕೊಡುವುದು ಕೂಡ ಕಡಿಮೆ. ಸಮಾಜವನ್ನು ತಿದ್ದಲೆತ್ನಿಸಿದ ತಮ್ಮ ಸಾಂಸ್ಕೃತಿಕ ನಾಯಕರ ಚಿಂತ­ನೆ­ಗಳನ್ನು ಹೊಸ ಕಾಲಕ್ಕೆ ತಕ್ಕಂತೆ ವಿವರಿಸಿಕೊ­ಳ್ಳುವ ಬೌದ್ಧಿಕ ಕಾಳಜಿ ಕೂಡ ಇಲ್ಲಿ ಕಡಿಮೆ.

ದೇವರ ದಾಸಿಮಯ್ಯ, ಕನಕದಾಸ, ಮಾಚಿ­ದೇವ, ಕೈವಾರ ತಾತಯ್ಯ ಮೊದಲಾದ ಕವಿಗ­ಳನ್ನು ತಂತಮ್ಮ ಜಾತಿಗಳ ಹೆಮ್ಮೆಯ ಸಾಂಸ್ಕೃತಿಕ ನಾಯಕರೆಂಬಂತೆ ಮೆರೆಸುವ ಈ ನಾಯಕರು ಈ ಕವಿಗಳ ವೈಚಾರಿಕ ನೋಟಗಳನ್ನು ತಮ್ಮ ಜನ­ಗಳಿಗೆ ತಲುಪಿಸುವುದಿಲ್ಲ; ಈ ಜಾತಿಗಳ ಬುದ್ಧಿ­ಜೀವಿಗಳು ಈ ಬಗೆಯ ಕೆಲಸ ಮಾಡಲೆತ್ನಿಸಿದರೆ ಅವರಿಗೆ ಸಿಕ್ಕುವ ಬೆಂಬಲ ಕೂಡ ಅಷ್ಟರಲ್ಲೇ ಇದೆ. ಹೀಗಾಗಿ, ಹಿಂದುಳಿದ ಜಾತಿಗಳನ್ನು ಬೌದ್ಧಿಕ ಪ್ರಗತಿಯೆಡೆಗೆ ನಡೆಸುವ ತಾತ್ವಿಕ ಚೌಕಟ್ಟುಗಳು ಈ ಜಾತಿಗಳಲ್ಲಿ ರೂಪುಗೊಳ್ಳು­ತ್ತಿಲ್ಲ. ಕಾನ್ಶಿರಾಮ್ ಅವರು ಕಟ್ಟಿದ ‘ಬಹು­ಜನ ಸಮಾಜ ಪಕ್ಷ’ ದಲಿತರ ಜೊತೆಜೊತೆಗೇ ಹಿಂದು­ಳಿದ ಜಾತಿ, ವರ್ಗಗಳ ಪರವಾದ ರಾಜಕೀಯ, ತಾತ್ವಿಕತೆ ಹಾಗೂ ಸಾಮಾಜಿಕ ಚಿಂತನೆ­ಗಳನ್ನು ರೂಪಿಸುತ್ತಿದ್ದ ಮುಖ್ಯ ಘಟ್ಟದಲ್ಲಿ ಈ ಪಕ್ಷದ ಆಶಯಗಳನ್ನು ಕರ್ನಾಟಕದ ಹಿಂದು­ಳಿದ ಜಾತಿ­ಗಳ ರಾಜಕಾರಣಿಗಳಿರಲಿ, ಈ ಜಾತಿ­ಗಳ ಚಿಂತಕ, ಚಿಂತಕಿಯರು ಕೂಡ ಚರ್ಚಿಸುವ ಉತ್ಸಾಹ ತೋರಲಿಲ್ಲ.

ಇದೆಲ್ಲದರ ಪರಿಣಾಮ­ವಾಗಿ ಹಿಂದುಳಿದ ಜಾತಿಗಳ ಅನೇಕ ತರುಣರು, ದೇವನೂರ ಮಹಾದೇವರ ಮಾತಿನಲ್ಲೇ ಹೇಳುವುದಾದರೆ, ‘ಕೋಮುವಾದಿ ರಾಜಕಾರಣದ ಸೇವಕವರ್ಗ­ವಾಗಿ’ ಮಾರ್ಪಟ್ಟರು. ಕೋಮುಹಿಂಸೆಯನ್ನು ವ್ಯಾಪಾರಿ ವರ್ಗಗಳು ಹಾಗೂ ಇನ್ನುಳಿದ ಮೇಲುಜಾತಿಗಳ ಕಾಣದ ಕೈಗಳು ರೂಪಿಸುತ್ತಿ­ದ್ದರೆ, ಅವಕ್ಕೆಲ್ಲ ದಾಳವಾಗಿ ಇತರ ಧರ್ಮಗಳ ಜನರನ್ನು ಕೊಲ್ಲುವವರು ಹಾಗೂ ಜೈಲಿಗೆ ಹೋಗುವವರು ಹಿಂದುಳಿದ ಜಾತಿಗಳ ತರುಣ­ರಾಗಿದ್ದಾರೆ. ಹೀಗೆ ದಿಕ್ಕು ತಪ್ಪಿ ನಾಶವಾಗುತ್ತಿ­ರುವ ಹಿಂದುಳಿದ ಜಾತಿಗಳ ತರುಣರನ್ನು ಹಾಗೂ ರಾಜಕೀಯ ಹಾಗೂ ವೈಚಾರಿಕ ನೋಟಗಳೇ ಇಲ್ಲದ ಹಿಂದುಳಿದ ಜಾತಿಗಳ ತರುಣಿಯರನ್ನು ತಾತ್ವಿಕವಾಗಿ ಸಜ್ಜುಗೊಳಿಸುವ ಮೂಲಕವೇ ಹಿಂದುಳಿದ ಜಾತಿಗಳ ಆರೋಗ್ಯಕರ ಚಲನೆ ಶುರುವಾಗಬೇಕಾಗುತ್ತದೆ.

ಬಾಬಾಸಾಹೇಬ ಅಂಬೇಡ್ಕರ್ ಅವರು ಹಿಂದು­ಳಿದ ಜಾತಿಗಳನ್ನು ‘ಜಾತಿ’ಗಳೆಂದು ಕರೆ­ಯದೆ ‘ಇತರೆ ಹಿಂದುಳಿದ ವರ್ಗ­ಗಳು’(ಅದರ್ ಬ್ಯಾಕ್ ವರ್ಡ್ ಕ್ಲಾಸಸ್) ಎಂದು ಯಾಕೆ ಕರೆದರು ಎಂಬ ಬಗ್ಗೆ ನಾವು ಆಳವಾಗಿ ಯೋಚಿ­ಸಿಲ್ಲ. ಚರಿತ್ರೆಯುದ್ದಕ್ಕೂ ಸಮಾನ ಕಷ್ಟಗಳನ್ನು ಎದುರಿಸುತ್ತಾ ಬಂದಿರುವ ಈ ಹಿಂದುಳಿದ ಜಾತಿಗಳು ಮುಂದೊಮ್ಮೆ ವರ್ಗ ಗುಣಗಳನ್ನು ಪಡೆದು ವಿಶಾಲ ವರ್ಗವಾಗಿ ರೂಪುಗೊಂಡು ಸಂಘಟಿತವಾಗಲಿ ಎಂಬುದು ಅಂಬೇಡ್ಕರ್ ಅವರ ಆಶಯವಾಗಿದ್ದಿರಬೇಕು ಎಂದು ಊಹಿ­ಸಲು ಸಾಧ್ಯವಿದೆ. ಅಂಬೇಡ್ಕರ್ ಅವರು ‘ರಿಪಬ್ಲಿ­ಕನ್ ಪಾರ್ಟಿ ಆಫ್ ಇಂಡಿಯಾ’ ಪಕ್ಷ­ವನ್ನು ಕಟ್ಟಿದಾಗ ಈ ಬಗೆಯ ಸಮೀಕರಣದ ಬಗ್ಗೆ ಯೋಚಿಸಿದ್ದರು. ದಲಿತರ ಬಿಡುಗಡೆಯ ಜೊತೆಗೆ ಒಟ್ಟು ಹಿಂದುಳಿದ ವರ್ಗಗಳ ಬಿಡುಗಡೆಯ ಬಗೆಗೂ ಅಂಬೇಡ್ಕರ್ ನಿಖರವಾಗಿ ಯೋಚಿಸಿ­ದ್ದರು. ಇವತ್ತು ಅಂಬೇಡ್ಕರ್ ಮಾರ್ಗವನ್ನು ಹಿಂದುಳಿದ ಜಾತಿಗಳಿಗೆ ಆಳವಾಗಿ ತಿಳಿಸಿಕೊಡುವ ಕೆಲಸ ಕೂಡ ಹೆಚ್ಚು ಆಗುತ್ತಿಲ್ಲ. ಹಿಂದುಳಿದ ಜಾತಿಗಳು ಹಾಗೂ ಹಿಂದುಳಿದ ವರ್ಗಗಳ ಬಿಡುಗಡೆ ಅಂಬೇಡ್ಕರ್‌ವಾದ ಹಾಗೂ ಲೋಹಿ­ಯಾ­ವಾದದಂಥ ಭವಿಷ್ಯಮುಖಿ ಚಿಂತನೆಗ­ಳಿಂದಲೇ ಆಗಬೇಕು ಎಂಬ ಸತ್ಯ ಹಿಂದುಳಿದ ಜಾತಿಗಳಿಗೆ ಅರ್ಥವಾಗದಿದ್ದರೆ ಅವರ ಸಾಮಾ­ಜಿಕ ಹಾಗೂ ಆರ್ಥಿಕ ಚಲನೆಗಳೆರಡೂ ಸ್ಥಗಿತವಾಗುತ್ತವೆ.

ತಮ್ಮ ಬದುಕಿನ ಒಂದು ಘಟ್ಟದಲ್ಲಿ ಬಂಗಾರಪ್ಪ­ನವರು ಅಥವಾ ಈಗ ಇರುವ ಹಿಂದುಳಿದ ಜಾತಿಗಳ ನಾಯಕರು ತಮ್ಮ ಅಧಿಕಾರ ರಾಜಕಾರಣಕ್ಕೆ ಈ ಬಗೆಯ ಸಿದ್ಧಾಂತ­ಗಳು ಬೇಕಾಗಿಲ್ಲ ಎಂದುಕೊಂಡಿರಬಹುದು. ಆದರೆ ಈ ಬಗೆಯ ಸೈದ್ಧಾಂತಿಕ ರಾಜಕಾರಣ ತಮ್ಮ ಅಧಿಕಾರ ರಾಜಕಾರಣಕ್ಕೆ ಕೂಡ ಪೂರಕ ಎಂಬ ಬಗ್ಗೆ ಈ ವರ್ಗದ ರಾಜಕಾರಣಿಗಳು ಇನ್ನಷ್ಟು ಗಮನ ಕೊಡಬೇಕಾಗಿದೆ. ಅದಕ್ಕಿಂತ ಮುಖ್ಯವಾಗಿ ಜಾತಿಯ ಏಣಿಯಲ್ಲಿ ತಮಗಿಂತ ಕೆಳಗಿರುವ ಜಾತಿಗಳ ಜೊತೆಗೆ ಸಾಮಾಜಿಕ ಹಾಗೂ ರಾಜಕೀಯ ಅಧಿಕಾರ ಹಂಚಿಕೊಳ್ಳುವ ಸಾಮಾಜಿಕ ನ್ಯಾಯದ ಹೊಸ ಬಗೆಯನ್ನು ಕುರಿತೂ ಹಿಂದುಳಿದ ಜಾತಿಗಳ ನಾಯಕರು ಚಿಂತಿಸಬೇಕಾಗಿದೆ.

ಹಿಂದುಳಿದ ಜಾತಿಗಳ ನಾಯ­ಕರು ಕರ್ನಾಟಕದ ಮುಖ್ಯಮಂತ್ರಿ ಸ್ಥಾನದವ­ರೆಗೂ ಏರಲು ನಿರ್ಣಾಯಕ ಬೆಂಬಲ ನೀಡಿರುವ ದಲಿತ ಹಾಗೂ ಅಲ್ಪಸಂಖ್ಯಾತ ಜಾತಿಗಳ ನಾಯಕರಿಗೆ ಮುಖ್ಯಮಂತ್ರಿ ಪದವಿಯೂ ಸೇರಿ­ದಂತೆ ಬಗೆಬಗೆಯ ಮುಂಚೂಣಿ ನಾಯಕತ್ವ­ಗಳನ್ನು ಹೊಂದಲು ಹಿಂದುಳಿದ ಜಾತಿಗಳು ಹೊಸ ಏಣಿಗಳಾಗಬೇಕಾಗುತ್ತದೆ. ಆ ಮೂಲಕ ಹಿಂದುಳಿದ ಜಾತಿಗಳು ಹೊಸ ವರ್ಗವಾಗಿ ರೂಪುಗೊಂಡು, ಹೊಸ ರಾಜಕೀಯ ಹಾಗೂ ಹೊಸ ಆರ್ಥಿಕ ಚಿಂತನೆ ರೂಪಿಸುವುದು ಸಾಧ್ಯವಿದೆ. ಜಾತಿ ಠೇಂಕಾರ ತೋರದೆ, ನೊಂದ ವರ್ಗಗಳೊಡನೆ ಸಮಾನ ನೆಲೆಗಟ್ಟಿನ ತಾತ್ವಿಕ ಒಪ್ಪಂದ ಮಾಡಿಕೊಳ್ಳುವುದರ ಮೂಲಕ ಮಾತ್ರ ಹಿಂದುಳಿದ ಜಾತಿಗಳು ತಮ್ಮ ಪ್ರಗತಿಯ ನೆಲೆಗ­ಳನ್ನು ವಿಸ್ತರಿಸಿಕೊಳ್ಳಬಹುದು. ಇವತ್ತು ಬಂಗಾರ­ಪ್ಪ­ನವರ ರಾಜಕಾರಣದ ಬಗ್ಗೆ ಯೋಚಿಸುತ್ತಲೇ, ಅವರು ತಮ್ಮ ಬದುಕಿನುದ್ದಕ್ಕೂ ಪ್ರಯತ್ನಿಸಿದ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಜಾತಿಗಳ ರಾಜ­ಕೀಯ ಒಗ್ಗೂಡುವಿಕೆ ಜತೆಗೇ ಸಾಮಾಜಿಕ ಏಕತೆಯ ಸಾಧ್ಯತೆಗಳ ಬಗೆಗೂ ಇನ್ನಷ್ಟು ಮುಕ್ತ­ವಾಗಿ, ಆಳವಾಗಿ ಯೋಚಿಸಬೇಕೆನ್ನಿಸುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT