ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಂತನಿಗೆ ಕಾಣಿಕೆ

Last Updated 12 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಇದೊಂದು ಸುಂದರವಾದ ಕಾಲ್ಪನಿಕ ಸಂವಾದ. ಗುಂಡಣ್ಣನಿಗೆ ಜೀವನದಲ್ಲಿ  ಬೇಸರ ಮೂಡಿತು, ಬದುಕು ಸಾಕೆನಿಸಿತು. ತಕ್ಷಣ ಕೆಲಸಕ್ಕೆ ರಾಜೀನಾಮೆ ಕೊಟ್ಟ. ಮನೆ ಬಿಟ್ಟು ಹೊರನಡೆದ. ಅವನಿಗೊಂದು ಆಸೆ. ಜೀವನ  ತೊರೆಯುವ ಮೊದಲು ತನಗೆ ಜೀವ ನೀಡಿದ ಭಗವಂತನ ಜೊತೆಗೆ ಕೊನೆಯ ಸಂವಾದ ನಡೆಸಿ ತನ್ನನ್ನು ಇಂಥ ಜಗತ್ತಿಗೆ ಕಳಿಸಿದ್ದಾದರೂ ಏಕೆ ಎಂದು ಕೇಳಬೇಕೆಂದು ತೀರ್ಮಾನಿಸಿದ.

ಭಗವಂತ ನಗರದಲ್ಲಿ ಇರುವುದು ಸಾಧ್ಯವಿಲ್ಲ ಎಂದು ಯೋಚಿಸಿ ಕಾಡಿಗೆ ಹೋದ.  ಅವನೇನು ಬಹಳ ಕಾಲ ತಪಸ್ಸು ಮಾಡಬೇಕಾಗಲಿಲ್ಲ. ಸಂಜೆಯ ಹೊತ್ತಿಗೇ ಭಗವಂತ ಪ್ರತ್ಯಕ್ಷನಾದ. ಗುಂಡಣ್ಣ ತನ್ನ ಕಷ್ಟಪರಂಪರೆ  ಹೇಳಿಕೊಂಡು, `ದೇವಾ, ಇಷ್ಟನ್ನೆಲ್ಲ ಕೇಳಿದ ಮೇಲೆ ನನಗೆ ಭೂಮಿಯ ಮೇಲೆ ಬದುಕಲು ಒಂದಾದರೂ ಒಳ್ಳೆಯ ಕಾರಣ ಉಳಿದಿದೆಯಾ'  ಎಂದು ಕೇಳಿದ. 

`ಗುಂಡಣ್ಣ ಕಾಡಿನಲ್ಲಿ  ನಿನ್ನ ಸುತ್ತಮುತ್ತ ಬೆಳೆದಿರುವ ಪಾಚಿ ಮತ್ತು ಬಿದಿರನ್ನು ನೋಡಿದ್ದೀಯಾ'  ಎಂದು ಕೇಳಿದ ಭಗವಂತ. ಈ ಉತ್ತರ ಗುಂಡಣ್ಣನಿಗೆ ಆಶ್ಚರ್ಯವನ್ನುಂಟುಮಾಡಿತು. `ಹ್ಞಾ, ಕಣ್ಣಿಗೆ ಕಾಣುತ್ತಿದೆಯಲ್ಲ'. ಭಗವಂತ ಹೇಳಿದ,  `ಗುಂಡಣ್ಣ ಮೊದಲ ಬಾರಿಗೆ ನಾನು ಭೂಮಿಯಲ್ಲಿ  ಪಾಚಿಯ ಮತ್ತು ಬಿದಿರಿನ ಬೀಜಗಳನ್ನು ಏಕಕಾಲಕ್ಕೆ ನೆಟ್ಟೆ. ಅವುಗಳಿಗೆ ಸಮಾನವಾದ ನೀರು, ಬೆಳಕು, ಗೊಬ್ಬರಗಳನ್ನು ನೀಡಿದೆ. ಪಾಚಿ ಮರು ತಿಂಗಳವೇ ನೆಲದಿಂದೆದ್ದಿತು. ಸರಸರನೇ ಹರಡತೊಡಗಿತು. ಬಿದಿರು ಮೊಳೆಯುವ ಲಕ್ಷಣವೇ ಇರಲಿಲ್ಲ. ಆದರೆ ನಾನು ಪ್ರಯತ್ನ ಬಿಡಲಿಲ್ಲ. ಮರುವರ್ಷವೂ ನೀರು, ಬೆಳಕುಗಳನ್ನು ಧಾರಾಳವಾಗಿ ನೀಡಿದೆ. ಪಾಚಿ ಸಮೃದ್ಧವಾಗಿ ಬೆಳೆಯಿತು, ನೆಲವನ್ನೆಲ್ಲ ಹಸಿರು ಹಸಿರಾಗಿಸಿತು. ಆದರೆ ಬಿದಿರು ಬದುಕಿರುವ ಚಿಹ್ನೆಯೂ ಕಾಣಲಿಲ್ಲ'. `ಮುಂದೇನಾಯಿತು'  ಕುತೂಹಲದಿಂದ ಕೇಳಿದ ಗುಂಡಣ್ಣ.


`ಮುಂದೇನು. ನಾನು ಭರವಸೆ  ಕಳೆದುಕೊಳ್ಳಲಿಲ್ಲ. ಪ್ರತಿವರ್ಷವೂ ಸಹಾಯ ನೀಡುತ್ತಲೇ ಹೋದೆ. ಐದನೇ ವರ್ಷ ಬಿದಿರು ಮೊಳೆತು ಚಿಗುರು ಕಾಣಿಸಿತು. ಆರು ತಿಂಗಳಲ್ಲಿ  ಹತ್ತು ಅಡಿ ಬೆಳೆಯಿತು. ಮುಂದೆ ಒಂದೇ ವರ್ಷದಲ್ಲಿ  ನೂರು ಅಡಿ ಬೆಳೆದು ಆಕಾಶ  ತಲುಪುವಂತೆ ಕಂಡಿತು'  `ಅದು ಸರಿ. ಆದರೆ ಅದರಿಂದ ನನಗೇನು ಪ್ರಯೋಜನ'  ಕೇಳಿದ ಗುಂಡಣ್ಣ. 

ಬಿದಿರು ಐದು ವರ್ಷ ಹೊರಗೆ ಬೆಳೆಯದಿದ್ದರೂ ಅದು ನೆಲದಲ್ಲಿದ್ದು ತನ್ನ ಬೇರುಗಳನ್ನು ಆಳಕ್ಕಿಳಿಸಿ, ಭದ್ರವಾಗಲು ಪ್ರಯತ್ನಿಸುತ್ತಿತ್ತು. ಒಂದು ಬಾರಿ ಬೇರುಗಳು ಭದ್ರವಾದವೋ, ನೆಲಬಿಟ್ಟು ಆಕಾಶದೆಡೆಗೆ ಹಾರಿತು. ನೀನೂ ಹಾಗೆಯೇ ಮಗೂ. ನೀನೂ ಇಷ್ಟು ದಿನ ವಿಫಲನಾಗಿದ್ದೇನೆ, ಯಾವ ಸಾಧನೆಯೂ ಸಾಧ್ಯವಾಗುತ್ತಿಲ್ಲ ಎಂದು ಕೊರಗುತ್ತಿದ್ದೀಯಲ್ಲ, ಇದು ನೀನು ನಿನ್ನ ನಂಬಿಕೆಯ ಬೇರುಗಳನ್ನು ಭದ್ರಪಡಿಸಿಕೊಳ್ಳುವ ಕಾಲ.

ನಾನು ಹೇಗೆ ಬಿದಿರನ್ನು ಬಿಡಲಿಲ್ಲವೋ, ನಿನ್ನನ್ನೂ ಬಿಡುವುದಿಲ್ಲ. ನಿನ್ನ ಹಿಂದೆಯೇ ಇರುತ್ತೇನೆ. ಪ್ರಯತ್ನ ಬಿಡಬೇಡ. ಬೇರು ಭದ್ರವಾದೊಡನೆ ನೀನೂ ಬಿದಿರಿನ ಹಾಗೆಯೇ ಸಾಧನೆಯತ್ತ ಹಾರುತ್ತೀ'  ಎಂದ ಭಗವಂತ.

`ಹಾಗಾದರೆ ನಾನು ಎಷ್ಟು ಎತ್ತರಕ್ಕೆ ಬೆಳೆಯಬೇಕು ಎಂದ. `ಅದು ತನಗೆಷ್ಟು ಸಾಧ್ಯವೋ ಅಷ್ಟು ಬೆಳೆದಿದೆ. ನೀನೂ ಅಷ್ಟೇ. ನಿನ್ನ ಶಕ್ತಿ ಇದ್ದಷ್ಟು ಬೆಳೆಯಬೇಕು. ನೀನು ಈಗ ಏನಾಗಿದ್ದೀಯೋ ಅದು ನನ್ನ ಕಾಣಿಕೆ. ನೀನು ಎಷ್ಟು ಎತ್ತರಕ್ಕೆ ಬೆಳೆಯುತ್ತೀಯೋ ಅದು ನೀನು ನನಗೆ ನೀಡುವ ಕಾಣಿಕೆ.

ನಿನ್ನ ಸಾಧನೆ ಹೆಚ್ಚಾದಷ್ಟು ನನಗೆ ಕೊಡುವ ಕಾಣಿಕೆ ದೊಡ್ಡದಾಗುತ್ತದೆ. ನಾನು ನಿನಗೆ ಜೀವನಕೊಟ್ಟದ್ದಕ್ಕೆ ಪ್ರತಿಯಾಗಿ ಎಷ್ಟು ದೊಡ್ಡ ಕಾಣಿಕೆ ಕೊಡುತ್ತೀಯೋ ಅದು ನಿನಗೇ ಸೇರಿದ್ದು. ಅದು ನಿನ್ನನ್ನು ಎತ್ತರಕ್ಕೂ ಬೆಳೆಸುತ್ತದೆ' ಎಂದು ಭಗವಂತ ನುಡಿದ.

ಗುಂಡಣ್ಣ ಮನೆಗೆ ಮರಳಿದ. ಜೀವ ತೊರೆಯುವ ಆಸೆಯನ್ನೇ ತೊರೆದ. ಸಾಧನೆಗೆ ಮುಖ ಮಾಡಿದ. ಭೂಮಿಗೆ ಬಂದು ಸಾಧನೆ ಮಾಡದೇ ತೆರಳಿದರೆ ಭಗವಂತನಿಗೆ ಯಾವ ಕಾಣಿಕೆಯನ್ನೂ ನೀಡದೆ ಹೋದಂತಾಗುತ್ತದೆ, ನಮ್ಮ ಬದುಕಿಗೆ ಅರ್ಥವೂ ಉಳಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT