ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನಾತ್ಮಕ ತೀರ್ಮಾನ

Last Updated 23 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಆತ ದೊಡ್ಡ ಉದ್ದಿಮೆದಾರ. ಅವನು ಸಣ್ಣದಾಗಿ ಸ್ಥಾಪಿಸಿದ ಉದ್ಯಮ ಇಂದು ದೊಡ್ಡದಾಗಿ ಬೆಳೆದಿದೆ. ಆತ ಇಡೀ ಉದ್ದಿಮೆಯ ವ್ಯವಸ್ಥೆಯನ್ನು ತನ್ನ ಬಿಗಿ ಮುಷ್ಟಿಯಲ್ಲಿ ಹಿಡಿದು ಇಟ್ಟಿದ್ದ. ಆತನ ಕೋಪವೂ ಅವನಷ್ಟೇ ಖ್ಯಾತಿಯನ್ನು ಪಡೆದಿತ್ತು. ಅವನ ಕೋಪದ ಬೆಂಕಿ ಯಾರ ಮೇಲೆ ಸುರಿದೀತೋ ಎಂದು ಹೆದರಿ ತಾವಾಗಿಯೇ ಅವನ ಬಳಿ ಯಾರೂ ಹೋಗುತ್ತಿರಲಿಲ್ಲ.

ಒಂದು ದಿನ ಬೆಳಿಗ್ಗೆ ಹತ್ತೂವರೆಗೆ ಊರಹೊರಗಿದ್ದ ತನ್ನ ಉದ್ದಿಮೆಯ ಕಟ್ಟಡದ ಬಳಿಗೆ ಹೋದ. ಆಡಳಿತದ ಕಟ್ಟಡದ ಹತ್ತಿರ ಹೋಗುವಾಗ ಮುಂದೆ ಮೆಟ್ಟಿಲುಗಳ ಮೇಲೆ ಒಬ್ಬ ತರುಣ ತೂಕಡಿಸುತ್ತಾ ಕುಳಿತಿದ್ದು ಕಂಡಿತು. ಬೆಳಿಗ್ಗೆ ಕೆಲಸ ಮಾಡುವ ಸಮಯದಲ್ಲಿ ತೂಕಡಿಸುತ್ತ ಕುಳಿತಿದ್ದಾನಲ್ಲ ಆಲಸಿ ಎಂದು ಕೋಪ ಬಂದಿತು ಉದ್ದಿಮೆದಾರನಿಗೆ.

ತನ್ನ ಕಾರು ನಿಲ್ಲಿಸಿ ಕೆಳಗಿಳಿದು ಹತ್ತಿರ ಬಂದು, ‘ಏನು ಮಾಡುತ್ತಿದ್ದೀಯಾ?’ ಎಂದು ಗದರಿದ. ತೂಕಡಿಸುತ್ತಿದ್ದವನು ತಲೆ ಅಲ್ಲಾ­ಡಿಸಿ, ಗೋಣು ಎತ್ತಿ ನೋಡಿ ನಿರ್ವಿಕಾರವಾಗಿ ಹೇಳಿದ, ‘ನಿದ್ರೆ ಮಾಡುತ್ತಿದ್ದೆ’. ಈ ಉತ್ತರ ಇವನ ಕೋಪವನ್ನು ಇನ್ನಷ್ಟು ಎತ್ತರಿಸಿತು.‘ನಾಚಿಕೆ ಯಾಗುವುದಿಲ್ಲವೇ? ಕೆಲಸ ಮಾಡುವ ಸಮಯದಲ್ಲಿ ಕಟ್ಟೆಯ ಮೇಲೆ ಕುಳಿತು ನಿದ್ರೆ ಮಾಡುತ್ತೀಯಲ್ಲ ಆಲಸಿ’ ಎಂದು ಜೋರಾಗಿ ಕಿರುಚಿದ.

‘ಯಾಕೆ, ಇಲ್ಲಿ ಮೆಟ್ಟಿಲುಗಳ ಮೇಲೆ ಕುಳಿತು ನಿದ್ರೆ ಮಾಡಬಾರದೇ?’ ತರುಣ ಕೇಳಿದ. ಮಾಲಿಕನಿಗೆ ಸಿಟ್ಟಿನಿಂದ ಎಚ್ಚರ ತಪ್ಪುವಂತಾಯಿತು. ಇದುವರೆಗೂ ಯಾರೂ ಅವನ ಮುಂದೆ ನಿಂತು ಮಾತನಾಡುವ ಧೈರ್ಯ ತೋರಿರಲಿಲ್ಲ. ಆದರೆ ಈ ಯಃಕಶ್ಚಿತ್ ತರುಣ ತನ್ನನ್ನೇ ಪ್ರಶ್ನಿಸುತ್ತಾನಲ್ಲ. ಹೊತ್ತಿಲ್ಲದ ಹೊತ್ತಿನಲ್ಲಿ ನಿದ್ರೆ ಮಾಡುವುದಲ್ಲದೆ ಏನು ತಪ್ಪು ಎಂದು ವಾದಿಸುತ್ತಾನೆ! ಎಂದು ಕೋಪ ಬಂತು.

ಯಜಮಾನ ತರುಣನ ಹತ್ತಿರ ಹೋಗಿ ಜೋರಾಗಿ ಕೇಳಿದ, ‘ಎಷ್ಟು ನಿನ್ನ ಸಂಬಳ?’. ‘ಮೂರು ಸಾವಿರ ರೂಪಾಯಿ’ ಎಂದು ಅಷ್ಟೇ ತಣ್ಣಗೆ ಉತ್ತರಿಸಿದ ತರುಣ. ಯಜಮಾನ ತನ್ನ ಜೇಬಿನಿಂದ ಪರ್ಸ್‌ ತೆಗೆದ. ಅದರಲ್ಲಿಂದ ಆರು ಸಾವಿರ ರೂಪಾಯಿಗಳನ್ನು ತೆಗೆದ.
‘ತೆಗೆದುಕೋ ಎರಡು ತಿಂಗಳು ಸಂಬಳದ ಹಣ. ಇಂದಿಗೆ ನಿನ್ನ ಕೆಲಸ ಮುಗಿಯಿತು. ಇನ್ನು ಮೇಲೆ ನೀನು ಈ ಫ್ಯಾಕ್ಟರಿಯ ಕಡೆಗೆ ಕಾಲಿಡಬೇಡ’ ಎಂದು ಹಣ ಕೊಟ್ಟ. ತರುಣನಿಗೆ ಬೇಜಾರೇನೂ ಆದಂತೆ ತೋರಲಿಲ್ಲ. ಹಣವನ್ನು ಇಸಿದುಕೊಂಡು ಜೇಬಿನಲ್ಲಿ ಹಾಕಿಕೊಂಡ.

ಅಷ್ಟರಲ್ಲಿ ಈ ಕೂಗಾಟವನ್ನು ಕೇಳಿ ಮೇಲ್ವಿಚಾರಕ ಓಡಿ ಬಂದ. ಕೋಪದಲ್ಲಿ ಕುದಿಯುತ್ತಿದ್ದ ಯಜಮಾನರನ್ನು ಕಂಡ. ಏನೋ ಹೇಳಲು ಹೊರಟ ಅವನನ್ನು ಕೈ ಮಾಡಿ ಯಜಮಾನ ನಿಲ್ಲಿಸಿದ. ಮತ್ತೆ ಕೂಗಿದ, ‘ಏನು ಆಡಳಿತ ನಡೆಸುತ್ತೀರಿ ನೀವೆಲ್ಲ? ನಮ್ಮ ಕೆಲಸಗಾರರು ಬೆಳಿಗ್ಗೆ ಕೆಲಸ ಮಾಡುವ ಸಮಯದಲ್ಲಿ ಮೆಟ್ಟಿಲು ಮೇಲೆ ಕುಳಿತು ನಿದ್ರೆ ಮಾಡುತ್ತಾರೆ. ನೀವು ಏನು ಮೇಲ್ವಿಚಾರಣೆ ಮಾಡುತ್ತೀರಿ?’. ಮೇಲ್ವಿಚಾರಕ ಉತ್ತರ ಕೊಡಬೇಕೆನ್ನುವಷ್ಟರಲ್ಲಿ ಯಜಮಾನ ಗರ್ಜಿಸಿದ, ‘ಈ ಬಾರಿ ಅವನನ್ನು ಎರಡು ತಿಂಗಳು ಸಂಬಳ ಕೊಟ್ಟು ನೌಕರಿ ತೆಗೆದು ಕಳುಹಿಸಿದ್ದೇನೆ. ಇನ್ನೊಮ್ಮೆ ಇಂಥ ಘಟನೆ ನನ್ನ ಗಮನಕ್ಕೆ ಬಂದರೆ ನಿಮ್ಮನ್ನು ಮನೆಗೆ ಕಳುಹಿಸಿಬಿಡುತ್ತೇನೆ. ಹುಷಾರ್’.
ಅಷ್ಟು ಹೊತ್ತಿಗೆ ತರುಣ ಅಲ್ಲಿಂದ ಹೊರಟು ಹೋಗಿದ್ದ.

ಆಗ ಮೇಲ್ವಿಚಾರಕ ತೊದಲುತ್ತ ನುಡಿದ, ‘ಸರ್, ಆ ಹುಡುಗ ನಮ್ಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡು­ವ­ವನಲ್ಲ. ಫ್ಯಾಕ್ಟರಿಗೆ ಕಚ್ಚಾಸಾಮಗ್ರಿ ತಂದು ಹಾಕುವ ಲಾರಿ ಚಾಲಕ’. ಸಾಮಾನು ಇಳಿಸಿ ಮತ್ತೊಬ್ಬ ಹುಡುಗ ರಸೀದಿ ತರುವವರೆಗೆ ಆತನು ಇಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ. ಕೋಪದ ಭರದಲ್ಲಿ ತಮ್ಮ ಫ್ಯಾಕ್ಟರಿಯ ನೌಕರನಲ್ಲದವನಿಗೆ ಆರು ಸಾವಿರ ರೂಪಾಯಿ ಬಹುಮಾನ ಕೊಟ್ಟು ಕಳಿಸಿದ್ದರು ಯಜಮಾನರು!

ನಾವು ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವಾಗ ನಮ್ಮ ಮನಃಸ್ಥಿತಿಯ ಬಗ್ಗೆ ಕ್ಷಣಕಾಲ ಚಿಂತಿಸುವುದು ವಾಸಿ. ಭಾವನೆಗಳ ಪೂರದಲ್ಲಿದ್ದಾಗ ತೆಗೆದುಕೊಂಡ ತೀರ್ಮಾನ ಎಂದಿಗೂ ಸರಿಯಾಗಿರುವುದಿಲ್ಲ. ಆಗ ಒಂದು ಕ್ಷಣ ತಡೆದು ಮನಸ್ಸು ಹದಕ್ಕೆ ಬಂದ ಮೇಲೆ ತೀರ್ಮಾನ ತೆಗೆದುಕೊಂಡಾಗ ಅದು ಬುದ್ಧಿವಂತಿಕೆಯ ಮತ್ತು ತರ್ಕಬದ್ಧವಾದ ನಿರ್ಣಯವಾಗಿರುತ್ತದೆ. ಅಂಥ ನಿರ್ಧಾರಗಳು ನಮ್ಮನ್ನು ಮುಂದೆ ಪಶ್ಚಾತ್ತಾಪಪಡುವಂತೆ ಮಾಡಲಾರವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT