ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಜಲಸಂಕಟದೆಡೆಗೆ ಕರ್ನಾಟಕ...

Last Updated 6 ಆಗಸ್ಟ್ 2017, 4:29 IST
ಅಕ್ಷರ ಗಾತ್ರ

ಆಕಾಶದಲ್ಲಿ ಮತ್ತೆ ‘ಕಾರ್ಮೋಡ’ಗಳು ಕವಿಯತೊಡಗಿವೆ. ಅವು ಮಳೆ ಸುರಿಸಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಏಕೋ ಅವು ನಮ್ಮ ಜೊತೆಗೆ ಮುನಿಸಿಕೊಂಡಿವೆ. ಕೆಲವು ಸಾರಿ ಮುಗಿಲಲ್ಲಿ ಕಾಣಿಸಿಕೊಳ್ಳುತ್ತವೆ, ಇನ್ನು ಕೆಲವು ಸಾರಿ ಕಾಣಿಸಿಕೊಂಡಂತೆ ಮಾಡುತ್ತವೆ, ಹಾಗೆಯೇ ಚೆದರಿ ಹೋಗುತ್ತವೆ. ಹೋಗುವಾಗ ನಾಲ್ಕು ಹನಿ ತಲೆ ಮೇಲೆ ಹನಿಸಿ ಹೋಗುತ್ತವೆ. ಮಳೆ ಬಂದ ಹಾಗೂ ಅಲ್ಲ; ಬಾರದ ಹಾಗೂ ಅಲ್ಲ. ಇನ್ನೇನು ಮುಂಗಾರು ಮುಗಿಯುತ್ತ ಬಂತು. ಆಗಬೇಕಾದಷ್ಟು ಮಳೆ ಆಗಲಿಲ್ಲ. ಎಂದಿನಂತೆ ಹವಾಮಾನ ಇಲಾಖೆಯವರು ಯಾವ ಜ್ಯೋತಿಷಿಯನ್ನು ಕೇಳಿಕೊಂಡು ಬಂದಿದ್ದರೋ, ‘ಈ ಸಾರಿ ವಾಡಿಕೆಗಿಂತ ಹೆಚ್ಚು ಮಳೆ ಬೀಳುತ್ತದೆ’ ಎಂದು ಭರವಸೆ ಕೊಟ್ಟರು. ಜನರಿಗೆ ಬದುಕಲು ಒಂದು ಭರವಸೆ ಬೇಕು. ಹವಾಮಾನ ಇಲಾಖೆಯವರನ್ನು ನಂಬಿದರು. ಹೊಲಕ್ಕೆ ಹೋಗಿ ಬಿತ್ತಿ ಬಂದರು. ಆಕಾಶದ ಕಡೆಗೆ ಮುಖ ಮಾಡಿ ಕುಳಿತರು. ಈಗ ನೋಡಿ, ‘ಕಳೆದ 43 ವರ್ಷಗಳಿಗಿಂತ ಈ ಸಾರಿ ಕಡಿಮೆ ಮಳೆ ಆಗಿದೆ’ ಎಂದು ಸರ್ಕಾರ ಹೇಳುತ್ತಿದೆ. ಅಣೆಕಟ್ಟೆಗಳಲ್ಲಿ ನಿಂತ ನೀರನ್ನು ಕಾಲುವೆಗಳಿಗೆ ಬಿಡಬಹುದು ಎಂದು ಕೆಲವರು ಬಿತ್ತನೆ ಮಾಡಿದ್ದರು. ಈಗ ಅದೂ ಆಗಲಿಕ್ಕಿಲ್ಲ ಎಂದು ಅನಿಸತೊಡಗಿದೆ.

ರಾಜ್ಯದಲ್ಲಿ ಪೂರ್ತಿ ಒಂದು ಡಜನ್‌ ಅಣೆಕಟ್ಟುಗಳು ಇವೆ. ಅದರಲ್ಲಿ ಎರಡೇ ತುಂಬಿವೆ. ಒಂದು ಹಾರಂಗಿ, ಇನ್ನೊಂದು ಆಲಮಟ್ಟಿ. ಆಲಮಟ್ಟಿ ತುಂಬಿದ್ದು ಕರ್ನಾಟಕದಲ್ಲಿ ಮಳೆ ಬಿದ್ದುದರಿಂದ ಅಲ್ಲ! ಕೃಷ್ಣೆಗೆ ಇರುವ ಅದೃಷ್ಟ ಘಟಪ್ರಭೆ, ಮಲಪ್ರಭೆಯರಿಗೆ ಇಲ್ಲ! ಈ ವರ್ಷವೂ ಅವು ತುಂಬುವ ಲಕ್ಷಣ ಇಲ್ಲ. ಮುಂಗಾರು ಅವಧಿಯಲ್ಲಿಯೇ ಮೂರು ಸಾರಿ ತುಂಬಿ ಹರಿಯುತ್ತಿದ್ದ ಹಾರಂಗಿ ಈ ಸಾರಿ ಒಂದು ಸಾರಿ ತುಂಬುವುದಕ್ಕೇ ಏದುಸಿರು ಬಿಡುತ್ತಿದೆ. ಈ ವೇಳೆಗೆ ಕಬಿನಿ ತುಂಬಬೇಕಿತ್ತು. ಅದೇನು ದೊಡ್ಡ ಅಣೆಕಟ್ಟೆಯಲ್ಲ. ಆದರೂ ತುಂಬಲು ಇನ್ನೂ 13 ಅಡಿ ನೀರು ಹರಿದು ಬರಬೇಕು. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಈಗ ಒಟ್ಟು ಸಂಗ್ರಹವಾಗಿರುವ ನೀರಿನ ಪ್ರಮಾಣ 43 ಟಿಎಂಸಿ ಅಡಿ ಮಾತ್ರ. ಕಳೆದ ವರ್ಷ ಇದೇ ದಿನ ಅದು 52 ಟಿಎಂಸಿ ಅಡಿ ನೀರು ಇತ್ತು. ವಾಸ್ತವದಲ್ಲಿ ಸಂಗ್ರಹ ಇರಬೇಕಿದ್ದ ನೀರಿನ ಪ್ರಮಾಣ 122 ಟಿಎಂಸಿ ಅಡಿ! ಇಂಥ ಕಷ್ಟ ಕಾಲದಲ್ಲಿಯೇ ಹಾರಂಗಿ, ಕಬಿನಿ ಮತ್ತು ಕೃಷ್ಣರಾಜಸಾಗರದಿಂದ ನಿತ್ಯವೂ ಸುಮಾರು 1.2 ಟಿಎಂಸಿ ಅಡಿಯಷ್ಟು ನೀರನ್ನು ಹೊರಗೆ ಬಿಡಲಾಗುತ್ತಿದೆ.

ಸುಪ್ರೀಂ ಕೋರ್ಟಿನಲ್ಲಿ ಕಾವೇರಿ ನದಿ ನೀರು ಹಂಚಿಕೆ ನ್ಯಾಯಮಂಡಳಿ ಐತೀರ್ಪಿನ ವಿಚಾರಣೆ ಈಗ ಅಂತಿಮ ಹಂತದಲ್ಲಿ ಇದೆ. ಕಳೆದ ವರ್ಷ ಸೆಪ್ಟೆಂಬರ್‌–ಅಕ್ಟೋಬರ್ ಸಮಯದಲ್ಲಿ ಕರ್ನಾಟಕಕ್ಕೆ ಕಠೋರ ಅನಿಸುವಂಥ ಆದೇಶಗಳನ್ನು ಕೊಟ್ಟಿದ್ದ, ದ್ವಿಸದಸ್ಯ ಪೀಠದಲ್ಲಿ ಒಬ್ಬರಾಗಿದ್ದ, ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಈಗ ವಿಚಾರಣೆ ನಡೆಸುತ್ತಿರುವ ತ್ರಿಸದಸ್ಯ ಪೀಠದಲ್ಲಿಯೂ ಇದ್ದಾರೆ. ತಮಿಳುನಾಡಿನ ಪರ ವಕೀಲ ಶೇಖರ್‌ ನಾಫಡೆಯವರು ಅದೇ ಆಕ್ರಮಣಕಾರಿ ಶೈಲಿಯಲ್ಲಿ ವಾದ ಮಂಡಿಸುತ್ತಿದ್ದಾರೆ. ಸ್ವಾತಂತ್ರ್ಯೋತ್ತರದ ಅವಧಿಯಲ್ಲಿ ನಾವು ಕಟ್ಟಿರುವ ಹಾರಂಗಿ, ಕಬಿನಿ ಹಾಗೂ ಹೇಮಾವತಿ ಜಲಾಶಯಗಳು ಅಕ್ರಮ ಎಂದು ಅವರು ವಾದಿಸುತ್ತಿದ್ದಾರೆ. ನದಿಯ ಮೇಲು ಹರಿವಿನ ಜಾಗದಲ್ಲಿ ಇರುವ ರಾಜ್ಯ ನಮ್ಮದು. ನಮಗೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಅದೇ ಕಾರಣಕ್ಕಾಗಿ ನಮ್ಮ ಕಡೆಗೆ ಎಲ್ಲರೂ ಕೆಂಗಣ್ಣು ಬೀರಲು ಅವಕಾಶ ಇದೆ. ನಾಫಡೆಯವರು ಅದನ್ನೇ ಮಾಡುತ್ತಿದ್ದಾರೆ. ಅವರು ಮೊನ್ನೆ ಮಂಡಿಸಿದ ವಾದದಲ್ಲಿ ಕೇಂದ್ರವನ್ನೂ ಎಳೆದು ತಂದರು.

‘ಅದು ಪಕ್ಷಪಾತ ಮಾಡುತ್ತಿದೆ. ತಮಿಳುನಾಡಿಗೆ ನ್ಯಾಯ ಒದಗಿಸಲು ಕೇಂದ್ರಕ್ಕೆ ಆಸಕ್ತಿ ಇಲ್ಲ’ ಎಂದು ಅವರು ದೂರಿದರು. ಇವೆಲ್ಲ ಒತ್ತಡ ತಂತ್ರಗಳು. ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸಲು ವಕೀಲರು ಬಳಸುವ ತಂತ್ರಗಳು ಒಂದೇ ಎರಡೇ! ಈ ವರ್ಷ ತಮಿಳುನಾಡಿಗೆ ನಾವು ಬಿಡಬೇಕಿದ್ದ ನೀರು ಬಿಡಲು ನಮಗೆ ಸಾಧ್ಯವಾಗಿಲ್ಲ. ಏಕೆಂದರೆ ಎಲ್ಲ ಮೂರೂ ಅಣೆಕಟ್ಟುಗಳನ್ನು ಖಾಲಿ ಮಾಡಿದರೂ ಆ ಪ್ರಮಾಣವನ್ನು ತಲುಪಲು ಸಾಧ್ಯವಿಲ್ಲ! ಹಾಗೆಂದು ನ್ಯಾಯಾಲಯದ ಮುಂದೆ ಹೇಳಲು ಆಗುವುದಿಲ್ಲ. ಯಾವಾಗಲೋ ಓಬೀರಾಯನ ಕಾಲದಲ್ಲಿ ಬೀಳುತ್ತಿದ್ದ ಮಳೆ ಪ್ರಮಾಣವನ್ನು ಲೆಕ್ಕ ಹಾಕಿ ಪ್ರತಿ ತಿಂಗಳು ಇಂತಿಷ್ಟು ನೀರು ಬಿಡಬೇಕು ಎಂದು ನ್ಯಾಯಮಂಡಳಿ ಆದೇಶಿಸಿದೆ. ಅದನ್ನೇ ಬೈಬಲ್‌ನಂತೆ ಹಿಡಿದುಕೊಂಡು, ‘ನೀರು ಬಿಡಬೇಕು’ ಎಂದು ತಮಿಳುನಾಡು ಕೇಳುತ್ತದೆ. ಮಳೆ ಕೈಕೊಟ್ಟ ಈಗಿನಂಥ ಕಾಲದಲ್ಲಿ ಏನು ಮಾಡಬೇಕು ಎಂಬ ಸಂಕಷ್ಟ ಸೂತ್ರವನ್ನು ನ್ಯಾಯಮಂಡಳಿ ಕೊಟ್ಟಿಲ್ಲ. ಯಾರಿಗೂ ಸಂಧಾನ ಅಥವಾ ಮಾತುಕತೆಯಲ್ಲಿ ನಂಬಿಕೆಯಿಲ್ಲವಾದ್ದರಿಂದ ಎಲ್ಲರೂ ಸುಪ್ರೀಂ ಕೋರ್ಟಿನ ಬಾಗಿಲು ತಟ್ಟುತ್ತಾರೆ. ಸುಪ್ರೀಂ ಕೋರ್ಟು ಕೊಡುವ ಆದೇಶಗಳು ಪಾಲಿಸಲು ಕಠಿಣ ಎಂದೇ ನಮಗೆ ಅನಿಸುತ್ತದೆ. ಇದು ಕಳೆದ 27 ವರ್ಷಗಳಿಂದ ಪ್ರತಿವರ್ಷದ ವಿಧಿಯಂತೆ ನಡೆದುಕೊಂಡು ಬಂದಿದೆ. ದೇವಕಾರುಣ್ಯದ ಹಾಗೆ ಯಾವಾಗಲೋ ಒಮ್ಮೆ ಮಳೆ ಬಿದ್ದರೆ ನೆರೆ ರಾಜ್ಯಗಳು ಕೇಳದೇ ಇದ್ದರೂ ನಾವು ನೀರು ಬಿಟ್ಟು ದಾನಶೂರರು ಎಂದು ಹೇಳಿಕೊಂಡಿದ್ದೇವೆ. ಈಗ ನಮ್ಮ ಆಲಮಟ್ಟಿ ಜಲಾಶಯ ತುಂಬಿದೆಯಲ್ಲ ಹಾಗೆ! ಅಂಥ ವರುಣಕೃಪೆಯ ವರ್ಷಗಳು ಈಗ ಮರೆತೇ ಹೋಗಿವೆ.

ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ನೀರು ಬಿಡುವ ತೀರ್ಮಾನವನ್ನು ಸರ್ಕಾರ ಇನ್ನೂ ತೆಗೆದುಕೊಂಡಿಲ್ಲ. ನಮ್ಮ ರೈತರ ಬೆಳೆಗೆ ನೀರು ಬಿಟ್ಟರೆ ತಮ್ಮ ರೈತರಿಗೂ ನೀರು ಬಿಡಬೇಕು ಎಂದು ತಮಿಳುನಾಡು ಕೇಳಲು ಅವಕಾಶ ನಿರ್ಮಾಣವಾಗುತ್ತದೆ. ಅಣೆಕಟ್ಟೆಗಳಲ್ಲಿ ಸಂಗ್ರಹವಾದ ನೀರನ್ನು ನಾವು ಕೇವಲ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸುತ್ತೇವೆ ಎಂದು ಸರ್ಕಾರ ಹೇಳುತ್ತಿರುವುದು ಇದೇ ಭೀತಿಯಿಂದ. ಆದರೆ, ಯಾವುದು ಮುಖ್ಯ? ಜಲಾನಯನ ಪ್ರದೇಶದಲ್ಲಿನ ರೈತರು ನ್ಯಾಯವಾಗಿಯೇ ತಮ್ಮ ಕೃಷಿ ಕುರಿತು ಯೋಚನೆ ಮಾಡುತ್ತಾರೆ. ಅವರಿಗೆ ಬೆಂಗಳೂರಿನ ಜನರ ಕುಡಿಯುವ ನೀರಿನ ಅಗತ್ಯದ ಬಗ್ಗೆ ಯಾಕೆ ಚಿಂತೆ ಇರಬೇಕು? ‘ನಮ್ಮನ್ನು ಕೇಳಿ ಬೆಂಗಳೂರನ್ನು ಕಟ್ಟಿದರೇ’ ಎಂದು ಅವರು ಕೇಳಿದರೆ ಅದರಲ್ಲಿ ಏನು ತಪ್ಪು?

‘ಬೆಂಗಳೂರಿನ ಮತ್ತು ಮೈಸೂರಿನ ಕುಡಿಯುವ ನೀರಿನ ಅಗತ್ಯಕ್ಕಾಗಿ ಅಣೆಕಟ್ಟೆಗಳಲ್ಲಿ ನೀರು ಸಂಗ್ರಹಿಸಿ ಇಡಲಾಗಿದೆ’ ಎಂಬ ರಾಜ್ಯದ ವಾದ ಕೂಡ ನ್ಯಾಯಾಲಯದಲ್ಲಿ ಗೆಲ್ಲುವುದು ಕಷ್ಟ. ‘ಅಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಿಸಿ ಇಡಲು ನೀವು ಏನು ಕ್ರಮ ತೆಗೆದುಕೊಂಡಿದ್ದೀರಿ? ಜನರಿಗೆ ಅದನ್ನು ಕಡ್ಡಾಯ ಮಾಡಿದ್ದೀರಾ’ ಎಂದು ನ್ಯಾಯಾಲಯ ಕೇಳಿದರೆ ಸರ್ಕಾರದ ಬಳಿ ಸಮರ್ಪಕ ಉತ್ತರ ಎಲ್ಲಿ ಇದೆ?

ಕಳೆದ ಸಾರಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ನೀರಿನ ಜಗಳ ತಾರಕಕ್ಕೆ ಹೋಗಿದ್ದಾಗ ಎರಡೂ ರಾಜ್ಯಗಳಿಗೆ ಕೇಂದ್ರ ತಂಡ ಭೇಟಿ ನೀಡಿ ‘ಕರ್ನಾಟಕದಲ್ಲಿ ಈಗಲೂ ಹಳೆಯ ಬೆಳೆ ಪದ್ಧತಿಯನ್ನೇ ಅನುಸರಿಸಲಾಗುತ್ತಿದೆ. ಅದು ಹೆಚ್ಚು ನೀರನ್ನು ಬಯಸುತ್ತದೆ’ ಎಂಬ ಆಕ್ಷೇಪದ ಧಾಟಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈಗಲೂ ಆ ವರದಿ ನ್ಯಾಯಾಲಯದ ಮುಂದೆ ಇದ್ದೀತು.

ನಾವು ಅನುಸರಿಸುತ್ತಿರುವ ಬೆಳೆ ಪದ್ಧತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಅದೇ ಭತ್ತ ಮತ್ತು ಅದೇ ಕಬ್ಬನ್ನೇ ರೈತರು ಬೆಳೆಯುತ್ತಾರೆ. ಅದಕ್ಕೇ ನೀರು ಕೇಳುತ್ತಾರೆ. ಅವರದು ತಪ್ಪು ಎಂದು ಹೇಳಲು ಆಗುವುದಿಲ್ಲ. ಆದರೆ, ಜಲಾಶಯದಲ್ಲಿ ನೀರೇ ಇಲ್ಲದೇ ಇದ್ದಾಗಲೂ ನಾವು ಅಪಾರವಾಗಿ ನೀರು ಬಯಸುವ ಹಳೆಯ ಕೃಷಿ ಪದ್ಧತಿಯನ್ನೇ ಅನುಸರಿಸಿಕೊಂಡು ಹೋಗುತ್ತೇವೆ ಎನ್ನುವುದು ಹಟಮಾರಿತನವಾಗುತ್ತದೆಯೇ ಹೊರತು ಅದರಿಂದ ಯಾವ ಪ್ರಯೋಜನವೂ ಆಗದು. ಮುಂದಿನ ಬುಧವಾರ ಮುಖ್ಯಮಂತ್ರಿಯವರು ಮಂಡ್ಯದಲ್ಲಿ ರೈತರ ಜೊತೆಗೆ ಮಾತನಾಡುವಾಗ ಈ ಭಾಗದಲ್ಲಿ ಈಗಿನ ಹಾಗೆ ಏಕ ಬೆಳೆ ಪದ್ಧತಿಯನ್ನು ಕೈ ಬಿಟ್ಟು ಕಡಿಮೆ ನೀರು ಸಾಕೆನ್ನುವ ಬಹು ಬೆಳೆ ಪದ್ಧತಿಯನ್ನು ಅನುಸರಿಸುವ ವಿಚಾರವೂ ಚರ್ಚೆಗೆ ಬರಬಹುದು. ಕರ್ನಾಟಕವು ಒಂದು ರಾಜ್ಯವಾಗಿ ಹಾಗೆ ಯೋಚನೆ ಮಾಡದೇ ಇದ್ದರೆ ಮುಂದಿನ ದಿನಗಳು ಇನ್ನೂ ಕಷ್ಟಕರವಾಗಿ ಇರಬಹುದು. ಈಗಾಗಲೇ ರಾಜ್ಯದ 30 ಜಿಲ್ಲೆಗಳ ಪೈಕಿ 16 ಜಿಲ್ಲೆಗಳು ಕಾಯಂ ಬರಪೀಡಿತ ಎನ್ನುವ ಹಣೆಪಟ್ಟಿ ಹಚ್ಚಿಕೊಂಡಿವೆ. ರಾಜಸ್ಥಾನ ಬಿಟ್ಟರೆ ಅತಿ ಹೆಚ್ಚು ಬಂಜರು ಭೂಮಿ ಇರುವ ರಾಜ್ಯ ನಮ್ಮದೇ ಆಗಿರುವುದೂ ನಮ್ಮ ನೆನಪಿನಲ್ಲಿ ಇರಬೇಕು.

ನಾವು ಇದನ್ನು ನೆನಪು ಇಟ್ಟುಕೊಳ್ಳದೇ ಇದ್ದರೆ ಪಕ್ಕದ ಪುಟ್ಟ ರಾಜ್ಯ ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‌ ನಮಗೆ ನೆನಪು ಮಾಡುತ್ತಾರೆ. ಚಿಕ್ಕವರೇ ಅಲ್ಲವೇ ಯಾವಾಗಲೂ ದೊಡ್ಡವರಿಗೆ ಬುದ್ಧಿ ಹೇಳುವುದು? ‘ನದಿ ನೀರನ್ನು ಗರಿಷ್ಠ ಮಟ್ಟದಲ್ಲಿ ಹೇಗೆ ಬಳಸಿಕೊಳ್ಳಬೇಕು ಎಂಬ ಬಗೆಗೆ ಕರ್ನಾಟಕಕ್ಕೆ ಆಸಕ್ತಿಯಿಲ್ಲ’ ಎಂದು ಅವರು ಮೊನ್ನೆ ಮೊನ್ನೆಯಷ್ಟೇ ಟೀಕಿಸಿದ್ದಾರೆ. ಅವರು ಅಲ್ಲಿಗೇ ನಿಂತಿಲ್ಲ. ‘ಕರ್ನಾಟಕಕ್ಕೆ ಗೋವಾ ಜೊತೆಗೆ ಮಾತ್ರವಲ್ಲ, ಇತರ ಅನೇಕ ನೆರೆಯ ರಾಜ್ಯಗಳ ಜೊತೆಗೂ ನದಿ ನೀರು ಹಂಚಿಕೆಯ ವಿವಾದ ಇದೆ’ ಎಂದು ಸೇರಿಸಿದ್ದಾರೆ. ಅಂದರೆ ಅವರು, ‘ಕರ್ನಾಟಕ ಜಗಳಗಂಟಿ ರಾಜ್ಯ, ನೀರನ್ನು ಪೋಲು ಮಾಡುವ ರಾಜ್ಯ’ ಎಂದು ದೇಶದ ಮಟ್ಟದಲ್ಲಿ ಬಿಂಬಿಸುತ್ತಿದ್ದಾರೆ. ಅವರಿಗೆ ತಮ್ಮ ಮಹದಾಯಿ ನದಿಯನ್ನು ರಕ್ಷಿಸಿಕೊಳ್ಳಬೇಕಾಗಿದೆ. ‘ಅಲ್ಲಿ ಅಣೆಕಟ್ಟೆ ಕಟ್ಟಿ ಕರ್ನಾಟಕವು ಪರಿಸರಕ್ಕೇ ಬಾಂಬ್‌ ಇಡುತ್ತಿದೆ’ ಎಂದೂ ಪರಿಕ್ಕರ್‌ ಬಾಂಬ್‌ ಸಿಡಿಸಿದ್ದಾರೆ! ನವಲಗುಂದದಲ್ಲಿ ಮಹದಾಯಿ ನದಿಯ ನೀರಿಗಾಗಿ ನಡೆದಿರುವ ಹೋರಾಟ ಕಳೆದ ವಾರವಷ್ಟೇ ಎರಡನೇ ವರ್ಷಕ್ಕೆ ಕಾಲು ಇಟ್ಟಿದೆ! ಅವರು ಇನ್ನೂ ಎಷ್ಟು ದಿನ ಹೀಗೆಯೇ ಹೋರಾಟ ಮಾಡುತ್ತಾರೆ ಗೊತ್ತಿಲ್ಲ. ಆದರೆ, ಅವರ ಹೋರಾಟಕ್ಕೆ ಸದ್ಯೋಭವಿಷ್ಯದಲ್ಲಿ ಜಯ ಸಿಗುತ್ತದೆ ಎಂದು ಅನಿಸುವುದಿಲ್ಲ. ಏಕೆಂದರೆ ಗೋವಾ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಸಂಧಾನದ ಬಾಗಿಲು ತೆರೆಯುವ ಯಾವ ಲಕ್ಷಣವೂ ಇಲ್ಲ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಸಿದ್ಧವಿಲ್ಲ. ಮುಂದಿನ ವರ್ಷ ರಾಜ್ಯದಲ್ಲಿ ಚುನಾವಣೆ ನಡೆಯಲಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಲಿದೆ.

ಹೀಗೆ ನದಿ ನೀರಿನ ಹಂಚಿಕೆಗಾಗಿ ಒಂದು ಕಡೆ ವ್ಯಾಜ್ಯಗಳು ನಡೆಯುತ್ತಲೇ ಇರುವಾಗಲೇ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆ ಆಗುತ್ತಿರುವುದು ನಮಗೆ ಯಾವ ಪಾಠವನ್ನೂ ಕಲಿಸುತ್ತಿಲ್ಲ. ಲಭ್ಯ ಇರುವ ನೀರನ್ನು ಮಿತವಾಗಿ ಬಳಸಿ ಗರಿಷ್ಠ ಲಾಭ ಮಾಡಿಕೊಳ್ಳುವುದು ಹೇಗೆ ಎಂಬ ಕುರಿತು ಒಂದು ರಾಜ್ಯವಾಗಿ ನಾವು ಯೋಚನೆ ಮಾಡುತ್ತಿಲ್ಲ. ಅಲ್ಲಲ್ಲಿ ನಡೆಯುತ್ತಿರುವ ಬಿಡಿ ಪ್ರಯೋಗಗಳು ಕೇವಲ ಪ್ರಯೋಗದ ಮಟ್ಟದಲ್ಲಿ ಉಳಿದಿವೆ.

ಮಳೆ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು, ನದಿಯ ನೀರನ್ನು ಕೆರೆಗಳಿಗೆ ಹರಿಸುವುದು, ಹಳೆಯ ಬಾವಿಗಳ ಕೊಳೆಯನ್ನೆಲ್ಲ ತೆಗೆದು ಮತ್ತೆ ಹೊಸ ನೀರು ಬರುವಂತೆ ಮಾಡುವುದು, ಹನಿ ನೀರಾವರಿಯನ್ನು ಕಟ್ಟು ನಿಟ್ಟಾಗಿ ಅನುಸರಿಸುವುದು, ಕಡಿಮೆ ನೀರು ಬಯಸುವ ಬೆಳೆಯನ್ನು ಬೆಳೆಯುವುದು... ದಾರಿ ಹುಡುಕಬೇಕು ಎಂದರೆ ಬೇಕಾದಷ್ಟು ದಾರಿಗಳು ತೆರೆದುಕೊಳ್ಳುತ್ತವೆ.

ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಇರುವಷ್ಟು ಜಲಸಾಕ್ಷರತೆ ನಮ್ಮಲ್ಲಿ ಇಲ್ಲ. ಅಲ್ಲಿ ಹುಟ್ಟುವ ಕೃಷ್ಣಾ ನದಿ ಹಾಗೂ ಅದಕ್ಕೆ ಬಂದು ಸೇರಿಕೊಳ್ಳುವ ಉಪನದಿಗಳ ಹರಿವಿನ ಉದ್ದಕ್ಕೂ ಅವರು ಅಲ್ಲಲ್ಲಿ 35 ಸಣ್ಣ ಪುಟ್ಟ ಬ್ಯಾರೇಜು ಹಾಗೂ ಅಣೆಕಟ್ಟೆಗಳನ್ನು ಕಟ್ಟಿ ಅದರ ಪಾತ್ರ ಬತ್ತದಂತೆ ನೋಡಿಕೊಂಡಿದ್ದಾರೆ. ಅಲ್ಲಿ ತನ್ನ ಪಯಣ ಮುಗಿಸಿ ಕರ್ನಾಟಕವನ್ನು ಸೇರಿಕೊಳ್ಳುವ ಕೃಷ್ಣಾ ನದಿ (ಆಲಮಟ್ಟಿವರೆಗೆ ಹರಿದು ಬರುವ ದಾರಿಯಲ್ಲಿ) ಪಾತ್ರದಲ್ಲಿ ಇಂಥ ಎರಡೇ ಬ್ಯಾರೇಜುಗಳನ್ನು ನಾವು ಕಟ್ಟಿದ್ದೇವೆ. ಅವುಗಳ ಎತ್ತರವೂ ಈಗ ಸಾಲದಾಗಿದೆ. ಬಹುಶಃ ಇದೇ ಕಾರಣಕ್ಕಾಗಿ ನಾವು ಇನ್ನೂ ಬೇಸಿಗೆ ಆರಂಭವಾಗುವುದಕ್ಕಿಂತ ಮುಂಚೆಯೇ ಭಿಕ್ಷಾಪಾತ್ರೆ ಹಿಡಿದುಕೊಂಡು ‘ಎರಡು ಟಿಎಂಸಿ, ಮೂರು ಟಿಎಂಸಿ ಅಡಿ ನೀರು ಬೇಕು’ ಎಂದು ಮಹಾರಾಷ್ಟ್ರದ ಮುಂದೆ ಹೋಗಿ ನಿಲ್ಲುತ್ತೇವೆ. ಅದಕ್ಕೆ ಅವರು ಕೋಟಿಗಟ್ಟಲೆ ಶುಲ್ಕ ವಿಧಿಸುತ್ತಾರೆ. ಕಳೆದ ವರ್ಷದಿಂದ ಅವರು ಬೇರೆ ಲೆಕ್ಕ ಶುರು ಮಾಡಿದ್ದಾರೆ. ‘ನೀವು ಕೇಳಿದಾಗ ನಿಮಗೆ ನೀರು ಕೊಡುತ್ತೇವೆ. ನಮಗೆ ಬೇಕಾದಾಗ ನೀವು ಅಷ್ಟೇ ನೀರು ಕೊಡಬೇಕು’ ಎಂದು ಅವರು ಹೇಳಿದ್ದಾರೆ. ಹಾಗೆ ಕಳೆದ ವರ್ಷ ಸೊಲ್ಲಾಪುರ ಭಾಗಕ್ಕೆ ನಮ್ಮಿಂದ ನೀರು ಬಿಡಿಸಿಕೊಂಡಿದ್ದಾರೆ. ಕೃಷ್ಣಾ ಕೊಳ್ಳದಲ್ಲಿ ಅವರಿಗೆ ಇದುವರೆಗೆ ಮುಂಗಾರು ಕೈ ಕೊಟ್ಟಿಲ್ಲ. ಮುಂಗಾರಿನ ಮಹಾಪೂರದಲ್ಲಿಯೇ ನದಿ ಆಸುಪಾಸಿನ ಕಾರ್ಖಾನೆಗಳಿಗೂ ಅವರು ನೀರು ಬಿಡುತ್ತಾರೆ. ತಮ್ಮ ಕಾರ್ಖಾನೆ ಆವರಣದಲ್ಲಿ ಕೆರೆ ಕಟ್ಟಿಕೊಂಡೋ, ಬಾವಿ ಕಟ್ಟಿಕೊಂಡೋ ತಮಗೆ ಬೇಕಾಗುವಷ್ಟು ನೀರನ್ನು ಅವರು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಆಲಮಟ್ಟಿ ನದಿ ಕೆಳಗಿನ ಬೃಹತ್‌ ಕಾರ್ಖಾನೆಗಳಿಗೆ ನಾವು ಹೀಗೆ ಹೇಳಿಲ್ಲ!

ಈಗ್ಗೆ ಎರಡು ಮೂರು ವರ್ಷಗಳ ಹಿಂದೆ ಇದೇ ರೀತಿ ರಾಜ್ಯದ ನೀರಾವರಿ ಅಧಿಕಾರಿಗಳ ನಿಯೋಗ ಮುಂಬೈಗೆ ನೀರು ಕೇಳಲು ಹೋಗಿತ್ತು. ಅಲ್ಲಿ ಮಾಲಿನಿ ಶಂಕರ್‌ ಎಂಬ ಐಎಎಸ್‌ ಅಧಿಕಾರಿ ಅದೇ ಇಲಾಖೆಯ ಉಸ್ತುವಾರಿಯಲ್ಲಿದ್ದರು. ನಮ್ಮ ಅಧಿಕಾರಿಗಳು ಅಲ್ಲಿಗೆ ಹೋಗುವುದಕ್ಕಿಂತ ಮುಂಚೆಯೇ ಕೃಷ್ಣಾ ನದಿ ಕೊಳ್ಳದ ನಮ್ಮ ಬೆಳೆ ವಿಧಾನವನ್ನೆಲ್ಲ ಅವರು ಅಭ್ಯಾಸ ಮಾಡಿ ಕುಳಿತಿದ್ದರು. ನಮ್ಮ ಅಧಿಕಾರಿಗಳು ಹೋದ ಕೂಡಲೇ ಅವರು ಕೇಳಿದ್ದು ಅದನ್ನೇ, ‘ನಮ್ಮ ಕೊಯ್ನಾ ಅಣೆಕಟ್ಟೆಗಿಂತ ನಿಮ್ಮ ಆಲಮಟ್ಟಿ ಅಣೆಕಟ್ಟೆಯಲ್ಲಿ 18 ಟಿಎಂಸಿ ಅಡಿ ನೀರು ಹೆಚ್ಚು ಸಂಗ್ರಹವಾಗುತ್ತದೆ. ಆದರೂ ಪ್ರತಿವರ್ಷ ನೀವು ಭಿಕ್ಷಾಪಾತ್ರೆ ಹಿಡಿದುಕೊಂಡು ಏಕೆ ಬರುತ್ತೀರಿ? ನಿಮ್ಮ ಬೆಳೆ ವಿಧಾನ ಬದಲಿಸಲು ನಿಮಗೆ ಏಕೆ ಸಾಧ್ಯವಿಲ್ಲ?’

ಆ ಪ್ರಶ್ನೆಗೆ ಇದುವರೆಗೆ ನಾವು ಕೃಷ್ಣಾ ಕೊಳ್ಳದಲ್ಲಿಯೂ ಉತ್ತರ ಹುಡುಕಿಲ್ಲ. ಕಾವೇರಿ ಕೊಳ್ಳದಲ್ಲಿಯೂ ಹುಡುಕಿಲ್ಲ. ವರ್ತಮಾನದ ಕಷ್ಟಗಳಿಗೆ ಭೂತಕಾಲದಲ್ಲಿ ಏನಾದರೂ ಪರಿಹಾರಗಳು ಇವೆಯೇ ಎಂದು ನೋಡಬೇಕು. 500 ವರ್ಷಗಳ ಹಿಂದೆ ಬಿಜಾಪುರವನ್ನು ತಮ್ಮ ರಾಜಧಾನಿ ಮಾಡಿಕೊಂಡು ಆಡಳಿತ ಮಾಡಿದ್ದ ಆದಿಲ್‌ಶಾಹಿ ಅರಸರು ನೀರು ನಿರ್ವಹಣೆಗೆ ಬಳಸಿದ ತಂತ್ರಜ್ಞಾನ ಇಡೀ ದೇಶದಲ್ಲಿಯೇ ಬೆರಗು ಮೂಡಿಸಿತ್ತು. ಆಗ ಅವರು ಕಟ್ಟಿಸಿದ ಚಿಕ್ಕ ದೊಡ್ಡ ಬಾವಿಗಳು, ಕೆರೆಗಳು ಮತ್ತು ಅವುಗಳ ನಡುವೆ ಅವರು ನಿರ್ಮಿಸಿದ ನೀರ ಹರಿವಿನ ಸರಪಣಿಯ ಖ್ಯಾತಿ ದೆಹಲಿ ವರೆಗೆ ತಲುಪಿತ್ತು. ಕಾಲಾಂತರದಲ್ಲಿ ಆ ಎಲ್ಲ ಕೆರೆಗಳು ಬತ್ತಿ ಹೋಗಿದ್ದುವು. ಬಾವಿಗಳು ವಿಸರ್ಜಿತ ಗಣಪತಿಗಳಿಂದ ತುಂಬಿದ್ದುವು! ಈಗ ವಿಜಯಪುರದಲ್ಲಿ ಮತ್ತೆ ಅದೇ ಬಾವಿಗಳು ಜೀವ ಪಡೆಯುತ್ತಿವೆ. ನಗರದ ನಡುವಿನ ತಾಜ್‌ ಬಾವಡಿಯಲ್ಲಿ ಎಲ್ಲೆಂದರಲ್ಲಿ ಸೆಲೆಗಳು ಒಡೆದಿವೆ. ಊರ ಹೊರಗೆ ತುಂಬಿ ನಿಂತಿರುವ ಬೇಗಂ ತಾಲಾಬ್‌ನ ನೀರು ಸೆಲೆಯಾಗಿ ಹರಿದು ಊರೊಳಗಿನ ಬಾವಡಿಗಳಿಗೆ ಬರುತ್ತಿದೆ. ಬೇಗಂ ತಾಲಾಬ್‌ ಸುತ್ತಮುತ್ತ ಹಿಂಡು ಹಿಂಡು ಪಕ್ಷಿಗಳು ಹಾರಾಡುತ್ತಿವೆ. ಇಡೀ ಪರಿಸರ, ‘ಒಂದು ಸಾರಿ ಹೋಗಿ ನೋಡಿ ಬರಬೇಕು’ ಎನಿಸುವಷ್ಟು ರಮ್ಯವಾಗಿದೆ. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರು ಇದನ್ನೆಲ್ಲ ಮಾಡುವಾಗ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಹೊರೆಯಾಗದಂತೆ ನೋಡಿಕೊಂಡಿದ್ದಾರೆ.

ನೀರಿನ ಸದ್ಬಳಕೆ ಕುರಿತು ದೇಶದಲ್ಲಿ ಆಂದೋಲನ ಹಮ್ಮಿಕೊಂಡಿರುವ ರಾಜೇಂದ್ರ ಸಿಂಗ್‌ ಮೊನ್ನೆ ವಿಜಯಪುರಕ್ಕೆ ಬಂದಿದ್ದರು. ಇಲ್ಲಿ ನಡೆದಿರುವ ‘ಬದಲಾವಣೆ’ ನೋಡಿ ಅವರಿಗೆ ಎಷ್ಟು ಸಂತೋಷವಾಯಿತು ಎಂದರೆ ತಾವು ಪ್ರತಿವರ್ಷ ಹಮ್ಮಿಕೊಳ್ಳುವ ‘ಭಾರತ ಜಲ ಸಮಾವೇಶ’ವನ್ನು ಈ ಸಾರಿ ವಿಜಯಪುರದಲ್ಲಿಯೇ ಮಾಡೋಣ ಎಂದರು. ಇದೇ ತಿಂಗಳು 16ರಿಂದ ಮೂರು ದಿನ ಆ ಸಮಾವೇಶ ನಡೆಯಲಿದೆ. ಅಲ್ಲಿ ನಮ್ಮ ಮುಖ್ಯಮಂತ್ರಿ ಸೇರಿ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುತ್ತಾರೆ.

ನಾವು ಎದುರಿಸುವ ಜಲಸಂಕಟಗಳಿಗೆ ಅಲ್ಲಿಯಾದರೂ ಪರಿಹಾರಗಳು ಸಿಗಬಹುದೇ? ನೀರು ನಿರ್ವಹಣೆಯ ಹೊಸ ಹೊಳಹುಗಳು ಕಾಣಬಹುದೇ? ಕಾಣಬಹುದು ಎಂದು ಆಶಿಸೋಣ. ಕವಿದ ಕಾರ್ಮೋಡಗಳ ನಡುವೆಯೇ ಸೂರ್ಯ ಇಣುಕುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT