ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಥ್ಯಾವಾಸ್ತವ ಪ್ರವಾಸ ಕಾಮನ್‌ಫ್ಲೋರ್ ರೆಟಿನಾ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಎಂಬುದು ತುಂಬ ಹಳೆಯ ಗಾದೆ. ಬೆಂಗಳೂರಿನಲ್ಲಿ ಮನೆ ಕಟ್ಟುವುದು ಅಥವಾ ಕಟ್ಟಿಸುವುದು ತುಂಬ ಕಷ್ಟದ ಮಾತೇ ಆಗಿದೆ. ಬಿಡಿಎ ನಿವೇಶನಗಳ ಬೆಲೆ ಗಗನಕ್ಕೇರಿದೆ. ಅಂತೆಯೇ ಬಿಡಿಎಗೆ ಬಡವರಿಗೆ ದಕ್ಕದ ಆಸ್ತಿ ಎಂದು ಕೆಲವರು ಅನ್ವರ್ಥನಾಮ ಇಟ್ಟಿದ್ದಾರೆ.

ಹಾಗಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಿವೇಶನ ಕೊಂಡು ಮನೆ ಕಟ್ಟಿಸುವ ಬದಲಿಗೆ ಅಪಾರ್ಟ್‌ಮೆಂಟ್‌ಗಳು ಜಾಸ್ತಿಯಾಗುತ್ತಿವೆ. ಬೆಂಗಳೂರು ತುಂಬಾ ಬೆಳೆದಿದೆ. ಜೊತೆಗೆ ವಾಹನದಟ್ಟಣೆಯೂ. ಬೆಂಗಳೂರಿನ ಪಶ್ಚಿಮ ತುದಿಯಿಂದ ಪೂರ್ವ ತುದಿಗೆ ಹೋಗಿ ತಲುಪುವ ಸಮಯದಲ್ಲಿ ನೀವು ಮೈಸೂರಿಗೆ ಹೋಗಿ ತಲುಪಬಹುದು. ನಾನು ಚಿಕ್ಕವನಾಗಿದ್ದಾಗ ಶಾಲೆಗೆ ಹೋಗಲು ಗಂಟೆಗೆ ಐದು ಕಿ.ಮೀ ನಡೆದುಕೊಂಡು ಹೋಗುತ್ತಿದ್ದೆ.

ಈಗ ಬೆಂಗಳೂರಿನಲ್ಲಿ ಗಂಟೆಗೆ ಐದು ಕಿ.ಮೀ ಕ್ರಮಿಸುತ್ತೇನೆ, ಆದರೆ ಕಾರಿನಲ್ಲಿ. ಪರಿಸ್ಥಿತಿ ಹೀಗಿರುವಾಗ ಶ್ರೀಗಂಧದಕಾವಲಿನ ಗಿಡದಕೊನೇನಹಳ್ಳಿಯಲ್ಲಿರುವ ಒಬ್ಬ ವ್ಯಕ್ತಿ ಕಾಡುಬೀಸನಹಳ್ಳಿಯಲ್ಲಿ ನಿರ್ಮಾಣದ ಹಂತದಲ್ಲಿರುವ ಕಟ್ಟಡ ಮತ್ತು ಅದರಲ್ಲಿ ಇರುವ ಒಂದು ಮಾದರಿ ಅಪಾರ್ಟ್‌ಮೆಂಟ್ ನೋಡಲು ಹೋಗುವುದು ಎಂದರೆ ಒಂದು ದಿನ ಪೂರ್ತಿ ಹೋದಂತೆ.

ಕಾಡುಬೀಸನಹಳ್ಳಿಯಲ್ಲಿ ಒಂದು ಅಪಾರ್ಟ್‌ಮೆಂಟ್, ದೇವನಹಳ್ಳಿಯಲ್ಲಿ ಇನ್ನೊಂದು, ದೊಡ್ಡ ಆಲದ ಮರದ ಹತ್ತಿರ ಇನ್ನೊಂದು ಹೀಗೆ ಎಲ್ಲ ಅಪಾರ್ಟ್‌ಮೆಂಟ್‌ಗಳನ್ನು ನೋಡಿ ಯಾವುದನ್ನು ಕೊಳ್ಳುವುದು ಎಂದು ತೀರ್ಮಾನಿಸಬೇಕಾದರೆ ಮೂರರಿಂದ ಆರು ತಿಂಗಳುಗಳ ಕಾಲ ಬೇಕು. ಮನೆಯಲ್ಲೇ ಕುಳಿತು, ಆಧುನಿಕ ತಂತ್ರಜ್ಞಾನದ ಸಹಾಯದಿಂದ, ಕೊಳ್ಳಬೇಕೆಂದುಕೊಂಡಿರುವ ಕಟ್ಟಡಗಳ ಒಳಗೆ ಮಿಥ್ಯಾವಾಸ್ತವ (virtual reality) ಪ್ರವಾಸ ಮಾಡಿದರೆ ಒಳ್ಳೆಯದಲ್ಲವೇ? ಇದರಿಂದ ಪ್ರವಾಸದ ಪ್ರಯಾಸ, ಸಮಯ, ಇಂಧನ ಎಲ್ಲ ಉಳಿತಾಯವಾಗುತ್ತದೆ. ಹೀಗೆ ಮಿಥ್ಯಾವಾಸ್ತವ ತಂತ್ರಜ್ಞಾನದ ಮೂಲಕ ಮನೆ ಕೊಳ್ಳಲು ಸಹಾಯ ಮಾಡುವ ಒಂದು ಸಾಧನ ಕಾಮನ್‌ಫ್ಲೋರ್‌ನವರ ರೆಟಿನಾ (Commonfloor Retina).

ಇದು ವಾಸ್ತವವಾಗಿ ನೋಡಿದರೆ ಗೂಗಲ್‌ ಕಾರ್ಡ್‌ಬೋರ್ಡ್ ಸಾಧನವೇ. ಗೂಗಲ್‌ ಕಾರ್ಡ್ಬೋರ್ಡ್ ಒಂದು ಮಿಥ್ಯಾವಾಸ್ತವ ಸಾಧನ. ಇದರ ವಿನ್ಯಾಸ ಅಂತರಜಾಲದಲ್ಲಿ ಲಭ್ಯ (google.com/cardboard).  ಈ ವಿನ್ಯಾಸವನ್ನು ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ನೀಡಿರುವ ವಿನ್ಯಾಸದ ಪ್ರಕಾರ ಒಂದು ರಟ್ಟಿನಲ್ಲಿ ಈ ಮಿಥ್ಯಾವಾಸ್ತವ ವೀಕ್ಷಣೆಯ ಸಾಧನವನ್ನು ಯಾರು ಬೇಕಾದರೂ ಮನೆಯಲ್ಲೇ ತಯಾರಿಸಬಹುದು.

ಈ ರಗಳೆಗಳೆಲ್ಲ ಬೇಡ. ನನಗೆ ಸಿದ್ಧ ಸಾಧನವೇ ಬೇಕು ಎನ್ನುತ್ತೀರಾದರೆ ಇಂತಹ ಹಲವು ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯ. ಅಮೆಝಾನ್ ಅಥವಾ ಇನ್ಯಾವುದಾದರೂ ಜಾಲಮಳಿಗೆಯಲ್ಲಿ cardboard ಎಂದು ಹುಡುಕಿದರೆ ನಿಮಗೆ ಅವುಗಳು ದೊರೆಯುತ್ತವೆ. ಅತಿ ಕಡಿಮೆ ಎಂದರೆ ₹370ಕ್ಕೂ ಒಂದು ಮಾದರಿ ಲಭ್ಯವಿದೆ. ಇಂತಹ ಒಂದು ಸಾಧನ Boxight ಬಗ್ಗೆ ಇದೇ ಅಂಕಣದಲ್ಲಿ ವಿಮರ್ಶೆ ಪ್ರಕಟವಾಗಿತ್ತು (bitly.com/gadgetloka168). ಇಂತಹ ಒಂದು ಮಿಥ್ಯಾವಾಸ್ತವ ಸಾಧನ ಕಾಮನ್‌ಫ್ಲೋರ್‌ನವರ ರೆಟಿನಾ. ಇದು ಅಂತಹ ಅದ್ಭುತ ಸಾಧನವೇನಲ್ಲ. ಇನ್ನೊಂದು ಗೂಗಲ್ ಕಾರ್ಡ್‌ಬೋರ್ಡ್‌ ಅಷ್ಟೆ. ಇದರ ಬೆಲೆ ₨₹699. ಎಲ್ಲ ಕಾರ್ಡ್‌ಬೋರ್ಡ್‌ ಸಾಧನಗಳಂತೆ ಇದರಲ್ಲೂ ಆಂಡ್ರಾಯ್ಡ್‌ ಫೋನ್ ಇಡಲು ಸ್ಥಳವಿದೆ.

5 ಇಂಚು ಗಾತ್ರದ ಪರದೆಯ ಫೋನ್ ಆದರೆ ಚೆನ್ನಾಗಿ ಕುಳಿತುಕೊಳ್ಳುತ್ತದೆ. 5.5 ಅಥವಾ 6 ಇಂಚು ಗಾತ್ರದ ಪರದೆಯ ಫೋನ್ ಇದಕ್ಕೆ ಅಷ್ಟು ಹೊಂದುವುದಿಲ್ಲ. ಫೋನಿಗೆ ನೀವು ಹೆಚ್ಚಿಗೆ ಕವಚ ಹಾಕಿದ್ದರೆ ಆಗ ಇದನ್ನು ಸರಿಯಾಗಿ ಇಡಲು ಕಷ್ಟಪಡಬೇಕಾಗುತ್ತದೆ. ಫೋನಿನಲ್ಲಿ ಎನ್‌ಎಫ್‌ಸಿ ಸೌಲಭ್ಯ ಇದ್ದರೆ ಒಳ್ಳೆಯದು. ಮ್ಯಾಗ್ನೆಟೋಮೀಟರ್ ಮತ್ತು ಎಕ್ಸೆಲೆರೋಮೀಟರ್ ಇರತಕ್ಕದ್ದು.

ಸಾಮಾನ್ಯವಾಗಿ ಬಹುತೇಕ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಇವು ಇದ್ದೇ ಇರುತ್ತವೆ. ಈ ವೀಕ್ಷಕದ ಜೊತೆ ಒಂದು ಅಯಸ್ಕಾಂತ ಮತ್ತು ಅದಕ್ಕೆ ಸರಿಹೊಂದುವ ಕಬ್ಬಿಣದ ಬಿಲ್ಲೆ ನೀಡಿದ್ದಾರೆ. ಅಯಸ್ಕಾಂತವನ್ನು ಒಳಗೆ ಮತ್ತು ಕಬ್ಬಿಣದ ಬಿಲ್ಲೆಯನ್ನು ಹೊರಗೆ ಅದಕ್ಕೆಂದೇ ನೀಡಿರುವ ಸ್ಥಳದಲ್ಲಿ ಜೋಡಿಸಬೇಕು.

ಕಬ್ಬಿಣದ ಬಿಲ್ಲೆಯನ್ನು ಸರಿಸಿ ಕೈಬಿಟ್ಟರೆ ಅದು ವಾಪಾಸು ತನ್ನ ಸ್ಥಾನಕ್ಕೆ ಚಕ್ಕನೆ ಮರಳುತ್ತದೆ. ಈ ಕ್ರಿಯೆಯು ಕಿರುತಂತ್ರಾಂಶದಲ್ಲಿ ಕ್ಲಿಕ್ ಬದಲಿಗೆ ಬಳಕೆಯಾಗುತ್ತದೆ.  ಇದನ್ನು ಬಳಸಲು ಗೂಗಲ್ ಪ್ಲೇ ಸ್ಟೋರಿನಲ್ಲಿ ಅವರದೇ ಕಿರುತಂತ್ರಾಂಶ Commonfloor Retina ಲಭ್ಯವಿದೆ. ಅದನ್ನು ಗೂಗಲ್‌ ಪ್ಲೇ ಸ್ಟೋರಿನಿಂದ ನಿಮ್ಮ ಆಂಡ್ರಾಯ್ಡ್‌ ಫೋನಿಗೆ ಹಾಕಿಕೊಂಡು ಈ ಸಾಧನವನ್ನು ಬಳಸಬಹುದು. ಈ ಕಿರುತಂತ್ರಾಂಶವು ಈ ಕಾಮನ್‌ಫ್ಲೋರ್ ರೆಟಿನಾ ಮಾತ್ರವಲ್ಲ ಯಾವುದೇ ಗೂಗಲ್‌ ಕಾರ್ಡ್‌ಬೋರ್ಡ್ ಸಾಧನದ ಜೊತೆ ಕೆಲಸ ಮಾಡುತ್ತದೆ.  ಕಿರುತಂತ್ರಾಂಶದಲ್ಲಿ ಬೆಂಗಳೂರು ಮಾತ್ರವಲ್ಲ ಇನ್ನೂ ಹಲವಾರು ನಗರಗಳ ಹಲವು ಕಟ್ಟಡಗಳು ಮಿಥ್ಯಾವಾಸ್ತವ ವೀಕ್ಷಣೆಗೆ ಲಭ್ಯವಿವೆ.

ನೀವು ಕಟ್ಟಡ ತಯಾರಕರಾದರೆ ನಿಮ್ಮ ಕಟ್ಟಡವನ್ನೂ ಇವುಗಳ ಪಟ್ಟಿಗೆ ಸೇರಿಸಬಹುದು. ಹಾಗೆ ಮಾಡಬೇಕಾದರೆ ನೀವು ಕಾಮನ್‌ಫ್ಲೋರ್ ಕಂಪೆನಿಗೆ ಹಣ ನೀಡಬೇಕಾಗುತ್ತದೆ. ನೀವು ಕೊಳ್ಳಬೇಕೆಂದುಕೊಂಡಿರುವ ಕಟ್ಟಡ ಈ ಕಿರುತಂತ್ರಾಂಶದಲ್ಲಿ ಲಭ್ಯವಿದ್ದಲ್ಲಿ ಆ ಕಟ್ಟಡದ ಒಳಗೆ, ಎಲ್ಲ ಕೋಣೆಗಳ ಒಳಗೆ, ಅಡುಗೆ ಮನೆ, ಹಾಲ್ ಎಲ್ಲ ಸ್ಥಳಗಳಲ್ಲಿ ನೀವು ‘ಸುತ್ತಾಡಬಹುದು’. ಅಂದರೆ ನೀವು ಅಲ್ಲೆಲ್ಲ ಸುತ್ತಾಡಿದಂತೆ ನಿಮಗೆ ಭಾವನೆ ಬರುತ್ತದೆ.

ಯಾವ ಮನೆ ಕೊಳ್ಳಬಹುದು ಎಂದು ಕುಳಿತಲ್ಲೇ ನೀವು ತೀರ್ಮಾನಿಸಬಹುದು. ಆದರೆ ಈ ಕಿರುತಂತ್ರಾಂಶದಲ್ಲಿ ಕೆಲವು ಸಣ್ಣಪುಟ್ಟ ದೋಷಗಳು (bugs) ಉಳಿದುಕೊಂಡಿವೆ. ಇದರಿಂದ ಹೊರಗೆ ಬರಲು ಸ್ವಲ್ಪ ಒದ್ದಾಡಬೇಕಾಗುತ್ತದೆ. ಸಾಧನದ ಜೊತೆ ಯಾವುದೇ ಕೈಪಿಡಿ ನೀಡಿಲ್ಲ.

ಗೂಗಲ್‌ ಕಾರ್ಡ್‌ಬೋರ್ಡ್‌ ಸಾಧನವನ್ನು ಇನ್ನೂ ಹಲವಾರು ರೀತಿಯಲ್ಲಿ ಮಿಥ್ಯಾವಾಸ್ತವ ಕೆಲಸಗಳಿಗೆ ಬಳಸಬಹುದು. ಇತ್ತೀಚೆಗೆ ಒನ್‌ಪ್ಲಸ್ ಕಂಪೆನಿ ತನ್ನ ಹೊಸ ಒನ್‌ಪ್ಲಸ್ ಟು ಫೋನ್ ಅನ್ನು ಈ ಸಾಧನದ ಮೂಲಕ ಮಿಥ್ಯಾವಾಸ್ತವ ರೀತಿಯಲ್ಲಿ ಬಿಡುಗಡೆ ಮಾಡಿತ್ತು. ಅಂದರೆ ಬಿಡುಗಡೆ ಕಾರ್ಯಕ್ರಮವನ್ನು ಈ ಸಾಧನದ ಮೂಲಕ ವೀಕ್ಷಿಸಬಹುದಿತ್ತು. ಪ್ರೊ ಕಬಡ್ಡಿಯ ಕಿರುತಂತ್ರಾಂಶ ಕೂಡ ಲಭ್ಯವಿದೆ. ಅದನ್ನು ಹಾಕಿಕೊಂಡು ಕಬಡ್ಡಿ ಆಟವನ್ನು ಮೂರು ಆಯಾಮಗಳಲ್ಲಿ ವೀಕ್ಷಿಸಬಹುದು. ಸೌರವ್ಯೂಹದ ಯಾತ್ರೆಯನ್ನು ಮಾಡಲೂ ಈ ಸಾಧನದ ಜೊತೆ ಕೆಲಸ ಮಾಡುವ ಕಿರುತಂತ್ರಾಂಶ ಲಭ್ಯವಿದೆ. ಹಲವು ಆಟಗಳೂ ಲಭ್ಯವಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT