ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯವಾಹಿನಿಯಲ್ಲಿ ಬೆರೆಯಲಿರುವ ಅಂಧಾಭಿಮಾನಿ ಗುಂಪುಗಳು

Last Updated 16 ಜೂನ್ 2018, 9:29 IST
ಅಕ್ಷರ ಗಾತ್ರ

ಬಿಜೆಪಿ ನಮ್ಮ ಪ್ರಮುಖ ರಾಷ್ಟ್ರೀಯ ಪಕ್ಷವಾಗಿ ಬೆಳೆದ ಬಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ನಂತರವೂ ‘ಅಂಧಾಭಿಮಾನಿ ಗುಂಪು’ ಎಂಬ ಪದಪುಂಜ ಯಾವಾಗ ಮತ್ತು ಹೇಗೆ ಹುಟ್ಟಿತು ಎಂಬುದನ್ನು ನಾನು ಖಚಿತವಾಗಿ ಹೇಳಲಾರೆ. ಬಹುಶಃ 1992ರ ಚಳಿಗಾಲದಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಕ್ಕೂ ಮುನ್ನ ಈ ಪದ ಹುಟ್ಟಿರಬೇಕು. ಯಾವುದೇ ಪಕ್ಷ ಅಥವಾ ಸಂಘಟನೆಯಲ್ಲಿ ಆಯಾ ಸಿದ್ಧಾಂತದ ಬಗ್ಗೆ  ಮೃದುವಾದ ಧೋರಣೆ ಹೊಂದಿರುವ ನಾಯಕರು ‘ಅಂಧಾಭಿಮಾನಿ ಗುಂಪು’ಗಳನ್ನು ಹತ್ತಿಕ್ಕದೇ ಇದ್ದಲ್ಲಿ ಆ ಗುಂಪುಗಳು ರೂಪ ಬದಲಿಸಿಕೊಂಡು, ವಿಸ್ತರಿಸಿಕೊಂಡು, ಗೊತ್ತೇ ಆಗದಂತೆ ಮುಖ್ಯವಾಹಿನಿಯಲ್ಲಿ ಬೆರೆತುಹೋಗುತ್ತವೆ.

ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳಗಳು ಹಿಂದೊಮ್ಮೆ ‘ಅಂಧಾಭಿಮಾನಿ ಗುಂಪು’ಗಳಾಗಿದ್ದವು. ಈಗ ಅವುಗಳನ್ನು ಸಹೋದರ ಸಂಘಟನೆಗಳೆಂದು ಕರೆಯಲಾಗುತ್ತದೆ. ಸನಾತನ ಸಂಸ್ಥಾ, ಸಮಾಧಾನ್‌ ಸೇನಾ ಹಾಗೂ ಅಭಿನವ್‌ ಭಾರತ್‌ ಸದ್ಯಕ್ಕೆ ‘ಅಂಧಾಭಿಮಾನಿ ಗುಂಪು’ಗಳು.

ದಾದ್ರಿ ಘಟನೆ ನಮ್ಮ ರಾಜಕೀಯದಲ್ಲಿ ನಡುಕ ಹುಟ್ಟಿಸುವ ತಿರುವಾಗಿದೆ. ಹಿಂದೂ ಶ್ರೇಷ್ಠತಾವಾದವನ್ನು ಎತ್ತಿಹಿಡಿಯುವ ಉಗ್ರವಾದ ತಲೆಎತ್ತಿರುವುದಕ್ಕೆ ಅದು ಸಾಕ್ಷಿಯಾಗಿದೆ. ಬಿಜೆಪಿ ಈ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸುತ್ತಿಲ್ಲ ಅಥವಾ ಆ ಗುಂಪಿಗೂ ತನಗೂ ಸಂಬಂಧವಿಲ್ಲ ಎಂದೂ ಹೇಳುತ್ತಿಲ್ಲ. ಅದು ಕೊಲೆಯನ್ನು ಖಂಡಿಸುತ್ತದೆ. ಆದರೆ, ಅರ್ಧ ಡಜನ್‌ ವಾದಗಳನ್ನು ಮುಂದಿಟ್ಟು ಅದನ್ನು ಸಮರ್ಥಿಸಿಕೊಳ್ಳುತ್ತದೆ.

ಅದು ಹೇಗೆ ಎಂದು ನೋಡಬೇಕಾದರೆ ನನ್ನ ಗೆಳೆಯ, ಬಿಜೆಪಿ ಸಂಸದ ಹಾಗೂ ಆರ್‌ಎಸ್ಎಸ್‌ ಬುದ್ಧಿಜೀವಿ ತರುಣ್‌ ವಿಜಯ್‌ ಅವರು ಶುಕ್ರವಾರದ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಯಲ್ಲಿ ಬರೆದಿರುವ ಲೇಖನವನ್ನು ಓದಿ ನೋಡಿ.

‘ಕೇವಲ ಅನುಮಾನದ’ ಮೇಲೆ ಮೊಹಮ್ಮದ್‌ ಅಖ್ಲಾನ್‌ ಅವರನ್ನು ಕೊಂದಿರುವುದು ಹಿಂದುತ್ವ ಹಾಗೂ ಭಾರತದ ಪರಿಕಲ್ಪನೆಗೆ ವಿರುದ್ಧವಾದದ್ದು ಎಂದು ಅವರು ಹೇಳುತ್ತಾರೆ. ಅಲ್ಲದೇ ಅಖ್ಲಾನ್‌ ಅವರು ಗೋಮಾಂಸ ತಿಂದಿಲ್ಲ ಎಂಬುದು ಸಾಬೀತಾದಲ್ಲಿ ಯಾರಾದರೂ ಅವರನ್ನು ಮರಳಿ ಕರೆತರಲು ಆಗುತ್ತದೆಯೇ ಎಂದು ಅಖ್ಲಾನ್‌ ಪುತ್ರಿ ಕೇಳುವ ಪ್ರಶ್ನೆಯೂ ಅತಿ ಸೂಕ್ತವಾಗಿದೆ ಎಂದು ತರುಣ್‌ ವಿಜಯ್‌ ಬರೆಯುತ್ತಾರೆ. ಇದು, ಅಖ್ಲಾನ್‌ ಗೋಮಾಂಸ ತಿಂದಿದ್ದು ನಿಜವಾದಲ್ಲಿ, ಅಲ್ಲದೇ ಗುಂಪಿಗೆ ಆ ಬಗ್ಗೆ  ಸ್ಪಷ್ಟ ಸಾಕ್ಷಿ ಇದ್ದಲ್ಲಿ ಪ್ರತೀಕಾರದ ಕ್ರಮ ನ್ಯಾಯಯುತವಾಗಿರುತ್ತಿತ್ತು ಎಂದು ಹೇಳಿದಂತೆ.

ಆತ ಗೋಮಾಂಸ ತಿಂದಲ್ಲಿ ಏನಾಗುತ್ತಿತ್ತು? ಇದು ಉತ್ತರ ಪ್ರದೇಶದಲ್ಲಿ ಅಕ್ರಮ ಅಲ್ಲವೇ ಅಲ್ಲ. ಎಲ್ಲಿ ಅದು ಅಕ್ರಮವೋ ಅದನ್ನು ಉಲ್ಲಂಘಿಸಿದವರ ಮೇಲೆ ಕ್ರಮ ಜರುಗಿಸಲು ಕಠಿಣ ಕಾನೂನುಗಳಿವೆ ಎಂಬ ಅಂಶವನ್ನು ಅವರು ಚರ್ಚೆಗೆ ಎತ್ತಿಕೊಳ್ಳಬಹುದಾಗಿತ್ತು.

ಈಗ ಬಿಂದುಗಳನ್ನೆಲ್ಲ ಜೋಡಿಸೋಣ. ದೇವಸ್ಥಾನದ ಧ್ವನಿವರ್ಧಕದ ಮೂಲಕ ಪೂಜಾರಿಯೊಬ್ಬ ಪ್ರತೀಕಾರದ ಕ್ರಮ ತೆಗೆದುಕೊಳ್ಳುವಂತೆ ನಿಷ್ಠಾವಂತರಿಗೆ (ಹಿಂದೂ) ಕರೆ ನೀಡುತ್ತಾನೆ. ಸ್ಥಳೀಯ ಸಂಸದ ಹಾಗೂ ಸಂಸ್ಕೃತಿ ಸಚಿವರು ಘಟನೆಯನ್ನು ಖಂಡಿಸುವಾಗ ತರುಣ್‌ ವಿಜಯ್‌ ಹಾಗೂ ಇತರ ಬಿಜೆಪಿ ನಾಯಕರಂತೆ ಅದನ್ನು ಪರೋಕ್ಷವಾಗಿ ಸಮರ್ಥಿಸಿಕೊಳ್ಳುತ್ತಾರೆ.

ಮಂಗಳೂರಿನಲ್ಲಿ ಜೋಡಿಗಳ ಮೇಲೆ ನಡೆಯುವ ಹಲ್ಲೆಯೇ ಆಗಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ನಡೆಯುವ ಪ್ರಗತಿಪರರ ಹತ್ಯೆಯೇ ಆಗಲಿ, ‘ರಾಮ್‌ಜಾದೆ ವರ್ಸಸ್‌ ಹರಾಮಜಾದೆ’ ಯಿಂದ ಹಿಡಿದು ‘ಮುಸ್ಲಿಂ ಆಗಿದ್ದರೂ’ ಮತ್ತು ‘ಪಾಕಿಸ್ತಾನಕ್ಕೆ  ತೊಲಗಿ’ ಎಂಬಂತಹ ಶಬ್ದಗಳ ಬಳಕೆಯೇ ಆಗಲಿ, ಸ್ಪಷ್ಟವಾದ ಹಾಗೂ ಯೋಚಿಸಿ ಸಿದ್ಧಪಡಿಸಿದ ಪ್ರತಿಕ್ರಿಯೆ ನೀಡಲಾಗುತ್ತದೆ. ಉಗ್ರ ಹಿಂದೂ ಕಾರ್ಯಕರ್ತರು ಭಾಗಿಯಾದ ಭಯೋತ್ಪಾದನಾ ಪ್ರಕರಣಗಳಲ್ಲಿ ವಿಳಂಬ ನೀತಿ ಅನುಸರಿಸಿ ಎಂಬ ಸೂಚನೆಯ ಬಗ್ಗೆಯೂ ಇಲ್ಲಿ ಓದಿಕೊಳ್ಳಿ. ಅಭಿನವ್‌ ಭಾರತ್‌ ಅಮುಖ್ಯವಾದ ಅಂಧಾಭಿಮಾನಿ ಗುಂಪಾದರೆ ‘ಸಂತ್ರಸ್ತ’ ಎಂಬಂತೆ ಅದನ್ನು ಏಕೆ ರಕ್ಷಿಸಲಾಗುತ್ತಿದೆ?

ದೇಶ ವಿಭಜನೆಯ ನಂತರದ ಕಾಲಘಟ್ಟದಲ್ಲಿ ಇದೇ ಮೊದಲ ಬಾರಿ ಗುಂಪನ್ನು ಕೆರಳಿಸಲು ದೇವಸ್ಥಾನದ ಧ್ವನಿವರ್ಧಕ ಬಳಸಲಾಯಿತು ಎಂಬ ಕಾರಣಕ್ಕೆ ದಾದ್ರಿ ಘಟನೆಯನ್ನು ನಮ್ಮ ರಾಜಕೀಯದ ಮಹತ್ವದ ತಿರುವು ಎಂದು ನಾನು ಹೇಳುತ್ತಿಲ್ಲ. ಸ್ವಘೋಷಿತ ಜಾತ್ಯತೀತ ಶಕ್ತಿಗಳ ತಣ್ಣಗಿನ ಪ್ರತಿಕ್ರಿಯೆ ಇದಕ್ಕಿಂತ ಹೆಚ್ಚಿಗೆ ಮಹತ್ವದ್ದಾಗಿದೆ.

ದೆಹಲಿಯಿಂದ ಕೇವಲ 40 ನಿಮಿಷಗಳಲ್ಲಿ ಕ್ರಮಿಸಬಹುದಾದ ದಾದ್ರಿಗೆ ಕಾಂಗ್ರೆಸ್‌ ನಾಯಕರು ಕನಿಷ್ಠ ಪಾದಯಾತ್ರೆ ನಡೆಸಿಲ್ಲ.
ಸತ್ಯಶೋಧಕ ಸಮಿತಿ ಕಳುಹಿಸಿಲ್ಲ. ಜಾತ್ಯತೀತ ಮತಗಳನ್ನು ಪಡೆಯುತ್ತೇವೆ ಎಂದು ಹೇಳುವ  ಲಾಲು, ನಿತೀಶ್‌, ಮಮತಾ ಅವರೆಲ್ಲ ಗೋವಿಗೆ ಸಂಬಂಧಿಸಿದ ವಿಚಾರದಲ್ಲಿ ಕೈಹಾಕಲು ಹಿಂಜರಿಯುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧದ ದ್ವೇಷದಂತೆಯೇ ಗೋವಿನ ಪಾವಿತ್ರ್ಯವೂ ಈಗ ಹಲವು ಪಕ್ಷಗಳಿಗೆ ಬೇಕಾದ ವಿಚಾರವಾಗಿದೆ.

ಈ ವರ್ಷದ ಮಾರ್ಚ್‌ನಲ್ಲಿ, ಗೋವಧೆಯ ಇತಿಹಾಸವನ್ನೇ ಹೊಂದಿರದ ಹಿಂದೂ ಪ್ರಾಬಲ್ಯದ ಹರಿಯಾಣಾದಲ್ಲಿ ಗೋ ಸಂರಕ್ಷಣಾ ಕಾಯ್ದೆ ಇದ್ದಾಗಲೂ, ಭಾರಿ ಪದಗಳುಳ್ಳ ‘ಗೋವಂಶ  ಸಂರಕ್ಷಣ ಹಾಗೂ ಗೋಸಂವರ್ಧನ’ (ಆಕಳ ಸಂತತಿ ವೃದ್ಧಿಸುವುದು) ಕಾಯ್ದೆಯನ್ನು ಹೊಸದಾಗಿ ಅಂಗೀಕರಿಸಲಾಯಿತು.

ಮುಖ್ಯವಾಗಿ ಇದು ಗುರಿಯನ್ನು ಗೋವಧೆ ನಿಷೇಧದಿಂದ  ಗೋ ಸಂತತಿ ವೃದ್ಧಿಯತ್ತ ಬದಲಾಯಿಸಿತು. ತನ್ಮೂಲಕ ಪ್ರಾಣಿಯೊಂದಕ್ಕೆ ಪಾವಿತ್ರ್ಯವಷ್ಟೇ ಅಲ್ಲ ನಮ್ಮ ಆಡಳಿತದಲ್ಲಿ ಶಾಸನಬದ್ಧ ಸ್ಥಾನವೊಂದನ್ನು ಕಲ್ಪಿಸಿತು. ಎರಡನೆಯದಾಗಿ ಈ ಕಾಯ್ದೆ, ಆಮದಾದ, ಡಬ್ಬಿಯಲ್ಲಿ ತುಂಬಿರುವ ಗೋಮಾಂಸ ಭಕ್ಷಣೆಯ ಮೇಲೂ ನಿಷೇಧ ಹೇರಿತು. ‘ಆಕಳನ್ನು ವಧಿಸುವ ಉದ್ದೇಶಕ್ಕಾಗಿ’ (ಅದನ್ನು ಯಾರು ಹೇಳಬೇಕು) ರಾಜ್ಯದ ಹೊರಗೆ ಅದನ್ನು ಮಾರುವಂತಿಲ್ಲ ಎಂದೂ ಕಾಯ್ದೆಯಲ್ಲಿ ಹೇಳಲಾಯಿತು. ಗೋವಧೆ ಮಾಡಿದ್ದಕ್ಕಾಗಿ ಜೈಲು ಶಿಕ್ಷೆಯ ಅವಧಿಯನ್ನು 10 ವರ್ಷಗಳಿಗೆ ಏರಿಸಲಾಯಿತು.

ಹೊಸ ಕರಾಳ ಅತ್ಯಾಚಾರ ಕಾಯ್ದೆಯಿಂದ ಎರವಲು ಪಡೆದಂತೆ ತನ್ನ ಮುಗ್ಧತೆಯನ್ನು ಆರೋಪಿಯೇ ಸಾಬೀತುಪಡಿಸಬೇಕು ಎಂಬ ಅಂಶವನ್ನು ಸೇರಿಸಲಾಯಿತು. ಸದ್ಯಕ್ಕೆ ಈ ಪ್ರಕ್ರಿಯೆಯಲ್ಲಿ ಗೋವಿನ ಹೇಳಿಕೆಯನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ದಯೆಗೆ ಅರ್ಹವಾದ ವಿಚಾರ. ಜಪ್ತು ಮಾಡಲಾದ ಮಾಂಸದ ಪರೀಕ್ಷೆಗಾಗಿ ಪ್ರಯೋಗಾಲಯಗಳನ್ನು ಸರ್ಕಾರ ಸ್ಥಾಪಿಸಲಿದೆ ಎಂಬುದು ಮತ್ತಷ್ಟು ಅಸಂಗತ ವಿಚಾರ. ನಾನು ಉತ್ಪ್ರೇಕ್ಷೆ ಮಾಡುತ್ತಿದ್ದೇನೆ ಎನ್ನಿಸಿದಲ್ಲಿ ಕಾಯ್ದೆಯ ಪೂರ್ಣಪಾಠವನ್ನು ಓದಿ.

ಗುಡಗಾಂವ್‌ನಲ್ಲಿ ನೆಲೆಸಿರುವ ಜಪಾನಿ ಅಥವಾ ಕೊರಿಯಾದ ಬಹುರಾಷ್ಟ್ರೀಯ ಕಂಪೆನಿಯ ಅಧಿಕಾರಿಯ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ಆತನ ಫ್ರಿಡ್ಜ್‌ನಿಂದ ಜಪ್ತು ಮಾಡಿದ ಮಾಂಸವನ್ನು ಪ್ರಯೋಗಾಲಯಕ್ಕೆ ಕಳುಹಿಸುವುದನ್ನು ನಾನು ಎದುರುನೋಡುತ್ತಿದ್ದೇನೆ. ದಯವಿಟ್ಟು ನಗಬೇಡಿ. ಅಂತಹ ಸಂಗತಿಗಳೂ ನಡೆಯುತ್ತವೆ.

ಹಾಗೇನಾದರೂ ಆದಲ್ಲಿ ದೊಡ್ಡ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿ, ಜಾಗತಿಕ ಮಾಧ್ಯಮಗಳಲ್ಲಿ ಮೋದಿಯವರಿಗೆ ಇಷ್ಟವಾಗದ ಹೆಡ್‌ಲೈನ್‌ಗಳು ಕಾಣುತ್ತವೆ. ಇಲ್ಲಿ ಮತ್ತೂ ಮುಖ್ಯವಾದ ವಿಚಾರವೆಂದರೆ, ಇಷ್ಟೊಂದು ಅಸಂಗತ ಅಂಶಗಳಿದ್ದರೂ ಈ ಮಸೂದೆ ಅವಿರೋಧವಾಗಿ ಅಂಗೀಕಾರಗೊಂಡಿತು. ಕಾಂಗ್ರೆಸ್‌ ಶಾಸಕರು ಮಸೂದೆ ಪರವಾಗಿ ಮತ ಚಲಾಯಿಸಿದರು. ಅವರ ನಾಯಕ ಭೂಪಿಂದರ್‌ ಸಿಂಗ್‌ ಹೂಡಾ ಖುದ್ದಾಗಿ ಹೋಗಿ ಮುಖ್ಯಮಂತ್ರಿಯನ್ನು ಅಭಿನಂದಿಸಿದರು. ಗೋವಿನ ಕುರಿತಾದ ರಾಜಕೀಯವನ್ನು ಯಾರೂ ವಿರೋಧಿಸುವುದಿಲ್ಲ ಎಂಬುದನ್ನು ಹಿಂದುತ್ವ ಗುಂಪುಗಳು ಕಂಡುಕೊಂಡಿವೆ.

ಎಲ್ಲಕ್ಕಿಂತ ದಿಗ್ಭ್ರಮೆ ಹುಟ್ಟಿಸುವ ವಿಚಾರ ಮುಲಾಯಂ–ಅಖಿಲೇಶ್‌ ಸರ್ಕಾರದ್ದು. ಅವರ  ಪೊಲೀಸರು ಮಾಂಸವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಪಕ್ಕದ ಹರಿಯಾಣಾದಲ್ಲಿ ಪ್ರಯೋಗಾಲಯಗಳು ಇನ್ನೂ ಆರಂಭವಾಗದ ಕಾರಣ ಎಲ್ಲಿ ಕಳುಹಿಸಲಾಗಿದೆ ಎಂಬುದು ನನಗೆ ತಿಳಿದಿಲ್ಲ. ಈ ದೇಶದಲ್ಲಿ ವಿಧಿವಿಜ್ಞಾನ ಪ್ರಕ್ರಿಯೆ ಎಷ್ಟು ಶೈಶವಾವಸ್ಥೆಯಲ್ಲಿದೆ ಅಂದರೆ,  ಸುನಂದಾ ಪುಷ್ಕರ್‌ ಮೃತರಾದ ಎರಡು ವರ್ಷಗಳ ಬಳಿಕ ಅವರ ಒಳಾಂಗಗಳನ್ನು ಪರೀಕ್ಷೆಗಾಗಿ ಅಮೆರಿಕಕ್ಕೆ ಕಳುಹಿಸಬೇಕಾಯಿತು. ಅಂಥಲ್ಲಿ ಪ್ರಾಣಿ ಮಾಂಸವನ್ನು ಪರೀಕ್ಷೆಗೆ ಒಳಪಡಿಸಿ ಅದರ ಪ್ರಭೇದವನ್ನು ಕಂಡುಹಿಡಿಯಲು ನೀವು ಹೊರಟಿದ್ದೀರಿ.

ಇದು ನನಗೆ ಉತ್ತರ ಪ್ರದೇಶದ ಬಿಜ್ನೂರ್‌ನ ಹೊರವಲಯದ ಧಂಪುರ ಗ್ರಾಮದಲ್ಲಿ  2007ರ ಏಪ್ರಿಲ್‌ನಲ್ಲಿ ಕಳೆದ ಕಡುಬೇಸಿಗೆಯ ಮಧ್ಯಾಹ್ನವೊಂದನ್ನು ನೆನಪಿಸುತ್ತದೆ. ದಾದ್ರಿ ಹಾಗೂ ಮುಜಪ್ಫರ್‌ ನಗರವೂ ಸೇರಿದ ಕೋಮು ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಆ ಹಳ್ಳಿ ಬರುತ್ತದೆ. ಆಗ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಕಾಲವಾಗಿತ್ತು.

ಬಿಜೆಪಿ ಯುವ ಮೋರ್ಚಾದ ಕಿರಿಯ ಕಾರ್ಯಕರ್ತ ಅಶೋಕ್‌ ಕಟಾರಿಯಾ ಪಕ್ಷದ ಹಿರಿಯ ನಾಯಕರು ಬರುವುದಕ್ಕಿಂತ ಮೊದಲು ಜನರನ್ನು ಸೇರಿಸಲು ಭಾಷಣ ಮಾಡುತ್ತಿದ್ದರು. ಹಿಂದೂ ಮಹಿಳೆಯರ  ಅಭದ್ರತೆ, ಐಎಸ್‌ಐ ಘಟಕಗಳು ಸಕ್ರಿಯವಾಗಿರುವುದು, ಜಿಲ್ಲೆಯಲ್ಲಿ ಮುಸ್ಲಿಮರ ಸಂಖ್ಯೆ ಶೇ 41ರಷ್ಟು ಇರುವುದರಿಂದ ರಾಷ್ಟ್ರೀಯ ಭದ್ರತೆಗೆ ಆಪತ್ತು ಎದುರಾಗಿರುವುದು ಇತ್ಯಾದಿಗಳ ಕುರಿತು ಮಾತನಾಡುತ್ತಿದ್ದರು.  ಆನಂತರ ಅವರ ಮಾತು ಮಾಂಸ ಭಕ್ಷಣೆಯತ್ತ ಹೊರಳಿತು.

‘ಈಗ ಅವರು ನಾಯಿಗಳನ್ನು, ಬೆಕ್ಕುಗಳನ್ನು, ಕುದುರೆ, ಒಂಟೆ, ಆನೆ, ಹಾವು ಹಾಗೂ ದೇವರು ಮತ್ತು ನಿಸರ್ಗ ಸೃಷ್ಟಿಸಿರುವ ಎಲ್ಲವನ್ನೂ ತಿನ್ನಬಹುದು’ ಎಂದು ಹೇಳುತ್ತಿದ್ದರು. ಬೆಂಕಿಗೆ ತುಪ್ಪ ಸುರಿಯುವಂತೆ, ‘ಆದರೆ ಅವರು ಗೋಮಾಂಸ ತಿನ್ನುವುದರಿಂದ ದೂರ ಇರಬೇಕು. ಏಕೆಂದರೆ ಗೋವು ನಮ್ಮ ತಾಯಿ. ಯಾರಾದರೂ ಗೋವು ವಧಿಸಿದಲ್ಲಿ ನಾವು ಆ ...ಮಗನನ್ನು ವಧಿಸುತ್ತೇವೆ’
ಅಷ್ಟರಲ್ಲಿ ಅಲ್ಲಿಗೆ ಬಂದ ಬಿಜೆಪಿ ನಾಯಕ ರಾಜನಾಥ್‌ ಸಿಂಗ್‌ ಅವರು,  ಕಟಾರಿಯಾ ಮಾತು ರುಚಿಸಿಲ್ಲ ಎಂಬಂತೆ ಮುಖ ಮಾಡಿದರು.

ಆನಂತರ ನಮ್ಮ ಬಳಿ ಮಾತನಾಡುತ್ತ ‘ಜವಾನ್‌ ಖೂನ್‌ ಹೈ, ಗರಂ ಹೋಜಾತಾ ಹೈ’ (ಯುವ ರಕ್ತ ಕೆಲವೊಮ್ಮೆ ಕುದಿಯುತ್ತದೆ) ಎಂದು ಸಮಜಾಯಿಷಿ ನೀಡಿದರು. ಈ ವಾರ ಆಗಿದ್ದನ್ನು ಸಹ ರಾಜನಾಥ್‌ ಒಪ್ಪಿಕೊಳ್ಳುವುದಿಲ್ಲ ಎಂದುಕೊಂಡಿದ್ದೇನೆ. ಸಾಧ್ವಿ ನಿರಂಜನ್‌ ಜ್ಯೋತಿ ಜತೆಗೆ ಅಶೋಕ್‌ ಕಟಾರಿಯಾ ಈಗ ಉತ್ತರ ಪ್ರದೇಶ ಬಿಜೆಪಿಯ ಉಪಾಧ್ಯಕ್ಷರಲ್ಲಿ ಒಬ್ಬರಾಗಿದ್ದಾರೆ.

ಶುಕ್ರವಾರ ಬೆಳಿಗ್ಗೆ ನಾನು ಈ ಅಂಕಣ ಬರೆಯುತ್ತಿರುವಾಗ, ಅಮೆರಿಕ ಅಧ್ಯಕ್ಷ  ಒಬಾಮ ಅವರು ಒರೆಗಾನ್‌ ಗುಂಡಿನ ದಾಳಿಯ ಬಗ್ಗೆ ಮಾತನಾಡುತ್ತಿದ್ದಾರೆ. ಅಮೆರಿಕವು ಜಗತ್ತಿನಲ್ಲಿ ಬಲವಾದ ಗಣತಂತ್ರ ವ್ಯವಸ್ಥೆ ಹೊಂದಿರುವ ದೇಶ. ಕಾನೂನು ಸುವ್ಯವಸ್ಥೆಯಲ್ಲಿ ಆ ದೇಶದ ಅಧ್ಯಕ್ಷರಿಗೆ ಯಾವುದೇ ನಿಯಂತ್ರಣವಿಲ್ಲ. ಆದರೆ, ಗುಂಡಿನ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಅವರು ಅದರ ವಿರುದ್ಧ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಗಡಿಯಾರ ತಯಾರಿಸಿದ ಶಾಲಾ ಬಾಲಕ ಅಹ್ಮದ್‌ನನ್ನು ಬಂಧಿಸಿದ್ದ ವಿಚಾರದಲ್ಲೂ ಅವರು ಮಧ್ಯಪ್ರವೇಶಿಸಿದ್ದರು. ಅವರು ಯಾರನ್ನೂ ಓಲೈಸಲಿಲ್ಲ. ಆದರೆ, ತಮ್ಮ ರಾಜಧರ್ಮ ಪೂರೈಸಿದರು. ಭಾರತಕ್ಕಿಂತ ಹೆಚ್ಚು ಅನುಮಾನದಿಂದ ನೋಡಲಾಗುವ, ಇಲ್ಲಿಗಿಂತ ಸಣ್ಣ ಸಂಖ್ಯೆಯಲ್ಲಿರುವ ಮುಸ್ಲಿಂ ಸಮುದಾಯದಲ್ಲಿ ಭರವಸೆ ತುಂಬಿದರು. ಪ್ರಧಾನಿ ಮೋದಿ ಅವರಿಗೆ ಮಾಧ್ಯಮದಿಂದ ಸಲಹೆ ಪಡೆಯುವುದು ಇಷ್ಟವಿಲ್ಲ ಎಂಬುದು ನಮಗೆಲ್ಲ ಗೊತ್ತು. ಅವರು ಈ ವಿಚಾರದಲ್ಲಿ ತಮ್ಮ ಸ್ನೇಹಿತ ಬರಾಕ್‌ ಅವರಿಂದ ಪ್ರೇರಣೆ ಪಡೆಯಬೇಕು.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT