ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಕ್ಸ್ ಎಎಕ್ಸ್411 ಡುಯೊ: ಬೆಲೆ ಕಡಿಮೆ ಗುಣ ಮೇಲು

Last Updated 30 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅತಿ ಕಡಿಮೆ ಬೆಲೆಯ ಆಂಡ್ರಾಯಿಡ್ ಫೋನ್‌ಗಳು ಸಾಮಾನ್ಯವಾಗಿ ಚೆನ್ನಾಗಿರುವುದಿಲ್ಲ ಎಂಬ ಒಂದು ನಂಬಿಕೆ ಇದೆ. ಇದು ಬಹುಮಟ್ಟಿಗೆ ನಿಜವು ಕೂಡ. ಆದರೂ ಒಮ್ಮೊಮ್ಮೆ ಅತಿ ಕಡಿಮೆ ಬೆಲೆಗೂ ನೀಡುವ ಹಣಕ್ಕೆ ಮೋಸವಿಲ್ಲ ಎಂದು ಹೇಳಬಲ್ಲ ಫೋನ್‌ಗಳು ಕಣ್ಣಿಗೆ ಬೀಳುತ್ತವೆ. ಮ್ಯಾಕ್ಸ್ ಎಎಕ್ಸ್411ಡುಯೊ (Maxx AX411 Duo) ಅಂತಹ ಒಂದು ಫೋನ್. ಇದು ನಮ್ಮ ಈ ವಾರದ ಅತಿಥಿ. ಈ ಫೋನಿನ ಒಂದು ವೈಶಿಷ್ಟ್ಯ ಎಂದರೆ ಇದು ಬಹುತೇಕ ಭಾರತೀಯ ಫೋನ್. ಮುಂಬಯಿಯಲ್ಲಿ ನೋಂದಾಯಿತ ಮುಖ್ಯ ಕಚೇರಿ ಇರುವ ಈ ಕಂಪೆನಿಯ ತಯಾರಿಕಾ ಘಟಕ ಹರಿದ್ವಾರದಲ್ಲಿದೆ.

ಗುಣವೈಶಿಷ್ಟ್ಯಗಳು
1.2 ಗಿಗಾಹರ್ಟ್ಸ್ ವೇಗದ ಎರಡು ಹೃದಯಗಳ ಪ್ರೊಸೆಸರ್, 512 ಮೆಗಾಬೈಟ್ ಮತ್ತು 4 ಗಿಗಾಬೈಟ್ ಮೆಮೊರಿ, 10.16 ಸೆ.ಮೀ. (4 ಇಂಚು) ಗಾತ್ರದ 480X800 ಪಿಕ್ಸೆಲ್ ರೆಸೊಲೂಶನ್‌ನ ಸ್ಪರ್ಶಸಂವೇದಿ ಐಪಿಎಸ್ ಪರದೆ, 2 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 0.3 ಮೆಗಾಪಿಕ್ಸೆಲ್‌ನ ಇನ್ನೊಂದು (ಎದುರುಗಡೆಯ) ಕ್ಯಾಮೆರಾ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, ಎರಡು ಜಿಎಸ್‌ಎಂ (ದೊಡ್ಡ) ಸಿಮ್, 2ಜಿ ಸಂಪರ್ಕ (3ಜಿ ಇಲ್ಲ), ಬ್ಲೂಟೂತ್ ಮತ್ತು ವೈಫೈ ಸಂಪರ್ಕ, ಎಕ್ಸೆಲೆರೋಮೀಟರ್, ಎ-ಜಿಪಿಎಸ್, ಎಫ್‌ಎಂ ರೇಡಿಯೊ, ಆಂಡ್ರಾಯಿಡ್ 4.2.2, 1200 mAh  ಬ್ಯಾಟರಿ, 3.5 ಮಿ.ಮೀ ಇಯರ್‌ಫೋನ್ ಕಿಂಡಿ, ಮೈಕ್ರೋ ಯುಎಸ್‌ಬಿ ಕಿಂಡಿ, ಇತ್ಯಾದಿ.

ಬೆಲೆ ರೂ. 3,999. 
ಈ ಫೋನ್‌ನ ವಿಮರ್ಶೆ ಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವುದು ಇದರ ಬೆಲೆ. ಅತಿ ಕಡಿಮೆ ಬೆಲೆಗೆ ಎರಡು ಹೃದಯಗಳ ಪ್ರೊಸೆಸರ್ ಇರುವ ಮತ್ತು ಬಹುತೇಕ ಎಲ್ಲ ಸೌಲಭ್ಯಗಳಿರುವ ಫೋನ್ ಇದಾಗಿದೆ. ಇದರ ಪ್ರಮುಖ ಕೊರತೆ ಎಂದರೆ 3ಜಿ ಸೌಲಭ್ಯ ಇಲ್ಲದಿರುವುದು. ಈ ವಿಮರ್ಶೆಯಲ್ಲಿ ಯಾವುದೇ ಗುಣವೈಶಿಷ್ಟ್ಯ ಮತ್ತು ಇದರ ನಡವಳಿಕೆ ಬಗ್ಗೆ ಚೆನ್ನಾಗಿದೆ ಎಂದು ಬರೆದಿದ್ದರೆ ಅದು ನಿಜವಾಗಿಯೂ ಅತ್ಯದ್ಭುತವಾಗಿದೆ ಎಂದು ತಿಳಿಯಬೇಕಾಗಿಲ್ಲ. ಆದರೆ ನೀಡುವ ಹಣಕ್ಕೆ ಹೋಲಿಸಿದರೆ ಈ ನಡವಳಿಕೆ ಚೆನ್ನಾಗಿದೆ ಎಂದು ಅರ್ಥೈಸಿಕೊಳ್ಳಬೇಕು. ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಕೈಯಲ್ಲಿ ಹಿಡಿಯುವ ಅನುಭವ ಚೆನ್ನಾಗಿದೆ. ದೇಹವು ಪ್ಲಾಸ್ಟಿಕ್‌ನದ್ದಾಗಿದ್ದರೂ ಸ್ವಲ್ಪ ಮಟ್ಟಿಗೆ ಗಟ್ಟಿಮುಟ್ಟಾಗಿಯೇ ಇದೆ.

ಎಲ್ಲ ಫೋನ್ ತಯಾರಕರಂತೆ ಇವರೂ ಕೆಲವು ಕಿರುತಂತ್ರಾಂಶಗಳನ್ನು (ಆಪ್) ಫ್ಯಾಕ್ಟರಿಯಲ್ಲೇ ಸೇರಿಸಿದ್ದಾರೆ. ಟ್ವಿಟ್ಟರ್, ಫೇಸ್‌ಬುಕ್ ಈ ಪಟ್ಟಿಯಲ್ಲಿವೆ. ಮ್ಯಾಕ್ಸ್ ಲೈಫ್‌ಭಾಕ್ಸ್ ಮತ್ತು ಮ್ಯಾಕ್ಸ್ ವರ್ಲ್ಡ್ ಎಂಬೆರಡು ತಮ್ಮದೇ ಕಿರುತಂತ್ರಾಂಶ ಗಳನ್ನೂ ಸೇರಿಸಿದ್ದಾರೆ. ಮ್ಯಾಕ್ಸ್‌ವರ್ಲ್ಡ್ ಅಂತಹ ಅದ್ಭುತವಾದ ಕಿರುತಂತ್ರಾಂಶವಲ್ಲ. ಗೂಗ್ಲ್ ಆಂಡ್ರಾಯಿಡ್ ಪ್ಲೇ ಸ್ಟೋರ್‌ನಿಂದ ಕೆಲವು ಕಿರುತಂತ್ರಾಂಶಗಳನ್ನು ಇಲ್ಲಿ ಸೇರಿಸಿದ್ದಾರೆ ಅಷ್ಟೆ.

ಇದರ ಪರದೆಯ ಗುಣಮಟ್ಟ ಪರವಾಗಿಲ್ಲ. ಐಕಾನ್‌ಗಳನ್ನು ಸರಿಸುವ ಅನುಭವ ಕೆಟ್ಟದಾಗಿಯೇನೂ ಇಲ್ಲ. ಆಟಗಳನ್ನು ಆಡುವ ಅನುಭವವೂ ಕೆಟ್ಟದಾಗಿಲ್ಲ. ವಿಡಿಯೊ, ಸಿನಿಮಾ ವೀಕ್ಷಿಸುವಾಗ ಅಡೆತಡೆ ಅನ್ನಿಸಲಿಲ್ಲ. ಕ್ಯಾಮೆರಾ ಹೇಳಿಕೊಳ್ಳುವಂತಹದಲ್ಲ. ಚೆನ್ನಾಗಿಲ್ಲದ ಕ್ಯಾಮೆರಾಗೂ ಹಲವು ಸವಲತ್ತುಗಳನ್ನು ನೀಡಿದ್ದಾರೆ. ಉದಾಹರಣೆಗೆ ಹಲವು ನಮೂನೆಯ ದೃಶ್ಯಗಳ ಆಯ್ಕೆ, ಪನೋರಮ ಚಿತ್ರೀಕರಣ, ಇಷ್ಟು ಮಾತ್ರವಲ್ಲ, ವಿಡಿಯೊ ಚಿತ್ರೀಕರಣ ಸೌಲಭ್ಯವೂ ಇದೆ. ಇದರ ಆಡಿಯೊ ಗುಣಮಟ್ಟ ಚೆನ್ನಾಗಿದೆ. ಜೊತೆಗೆ ನೀಡಿದ ಇಯರ್‌ಫೋನ್ ಮಾತ್ರ ಚೆನ್ನಾಗಿಲ್ಲ. ನಿಮ್ಮಲ್ಲಿ ಉತ್ತಮ ಗುಣಮಟ್ಟದ ಇಯರ್‌ಫೋನ್ ಅಥವಾ ಹೆಡ್‌ಫೋನ್ ಇದ್ದರೆ ಉತ್ತಮ ಸಂಗೀತ ಆಲಿಸಬಹುದು. ಎಫ್‌ಎಂ ರೇಡಿಯೊದ ಗುಣಮಟ್ಟವೂ ಚೆನ್ನಾಗಿದೆ ಎಂದೇ ಹೇಳಬಹುದು.

ಈ ಫೋನ್ ಭಾರತವನ್ನು ಗಮನದಲ್ಲಿಟ್ಟುಕೊಂಡು ತಯಾರಾದ ಫೋನ್. ಇದರಲ್ಲಿ ಹಿಂದಿ ಮತ್ತು ಬಂಗಾಳಿ ಭಾಷೆಗಳಿಗೆ ಪೂರ್ತಿ ಬೆಂಬಲ ಇದೆ. ಅಂದರೆ ಈ ಭಾಷೆಗಳಲ್ಲಿ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಬಹುಪಾಲು ಕಂಪೆನಿಗಳಂತೆ ಇವರೂ ಭಾರತೀಯ ಭಾಷೆ ಎಂದರೆ ಕೇವಲ ಹಿಂದಿ ಎಂದು ತಿಳಿದುಕೊಂಡಂತಿದೆ. ಆಂಡ್ರಾಯಿಡ್ 4.2.2 ಆಗಿರುವುದರಿಂದ ಕನ್ನಡ ಪಠ್ಯದ ತೋರುವಿಕೆ (ರೆಂಡರಿಂಗ್) ಸರಿಯಿದೆ. ಅಂದರೆ ಸಂದೇಶ (ಎಸ್‌ಎಂಎಸ್), ಟಿಪ್ಪಣಿ (ನೋಟ್), ಬ್ರೌಸರ್, ಫೇಸ್‌ಬುಕ್, ಇತ್ಯಾದಿಗಳಲ್ಲಿ ಕನ್ನಡದ ಪಠ್ಯವನ್ನು ಸರಿಯಾಗಿ ಓದಬಹುದು. ಕನ್ನಡ ಕೀಲಿಮಣೆ ಹಾಕಿಕೊಂಡರೆ ಕನ್ನಡದಲ್ಲಿ ಪಠ್ಯವನ್ನು ಊಡಿಸಬಹುದು.

ಈ ಕಂಪೆನಿಯ ಗ್ರಾಹಕ ಸೇವೆ ಹೇಗಿದೆ ಎಂಬುದರ ಬಗ್ಗೆ ತಿಳಿದುಬಂದಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಇದು ಖಂಡಿತವಾಗಿಯೂ ನೀಡುವ ಹಣಕ್ಕೆ ಮೋಸವಿಲ್ಲ (value for money) ಎನ್ನಬಹುದಾದ ಫೋನ್. 

ವಾರದ ಆಪ್ (app)
ಕ್ಲೀನ್ ಮಾಸ್ಟರ್

ಗಣಕಗಳಲ್ಲಿ ಆಗುವಂತೆ ಆಂಡ್ರಾಯಿಡ್ ಫೋನ್‌ಗಳಲ್ಲೂ ಕಾಲಕಳೆದಂತೆ ಹಲವು ನಿರುಪಯುಕ್ತ ಮಾಹಿತಿ, ಕಸ, ತುಂಬಿಕೊಂಡು ಫೋನ್ ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಇದಕ್ಕೆ ಹಲವು ಕಾರಣಗಳು. ಕೆಲವು ಕಿರುತಂತ್ರಾಂಶಗಳನ್ನು ನೀವು ತೆಗೆದುಹಾಕಿದರೂ ಅದು ಸೃಷ್ಟಿಮಾಡಿದ ಮಾಹಿತಿಗಳು ಅಳಿಸಿಹೋಗಿರುವುದಿಲ್ಲ. ಅದೇ ರೀತಿ ಕಿರುತಂತ್ರಾಂಶಗಳನ್ನು ಒಂದರ ನಂತರ ಒಂದರಂತೆ ಬಳಸುತ್ತ ಹೋದಾಗ ಅವುಗಳಲ್ಲಿ ಕೆಲವು ಮೆಮೊರಿಯಿಂದ ಪೂರ್ತಿಯಾಗಿ ಅಳಿಸಿ ಹೋಗದೆ ಅಲ್ಲೇ ಬೀಡುಬಿಟ್ಟುಕೊಂಡಿರುತ್ತವೆ. ಇನ್ನು ಕೆಲವು ಸವಲತ್ತುಗಳು ನಿಮಗೆ ಬೇಡದಿದ್ದರೂ ಮೆಮೊರಿಯಲ್ಲಿ ಹಟಹಿಡಿದು ಝಂಡಾ ಹಾಕಿರುತ್ತವೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದರೆ ಒಂದು ಉತ್ತಮ ಪೊರಕೆ. ಈ ಕೆಲಸವನ್ನು ಸಮರ್ಥವಾಗಿ ಮಾಡುವ ಕಿರುತಂತ್ರಾಂಶ ಕ್ಲೀನ್ ಮಾಸ್ಟರ್ (clean master). ಇದನ್ನು ಆಗಾಗ ಬಳಸುತ್ತ ಇದ್ದರೆ ನಿಮ್ಮ ಆಂಡ್ರಾಯಿಡ್ ಫೋನ್‌ನಿಂದ ಬೇಡದ ಮಾಹಿತಿಯನ್ನು ಅಳಿಸಿ ಅದು ಮತ್ತೆ ವೇಗವಾಗಿ ಕೆಲಸ ಮಾಡುವಂತೆ ಮಾಡಬಹುದು.

ಗ್ಯಾಜೆಟ್ ಸುದ್ದಿ

ಕೇಬಲ್‌ನಲ್ಲೇ ರೆಕಾರ್ಡಿಂಗ್
ನೀವು ಗಿಟಾರ್ ಬಾರಿಸುವವರು ಎಂದಿಟ್ಟುಕೊಳ್ಳಿ. ಅದನ್ನು ಕೇಬಲ್ ಮೂಲಕ ಆಂಪ್ಲಿಫೈಯರ್‌ಗೆ ಜೋಡಿಸಿ ಅದರ ಔಟ್‌ಪುಟ್ ಅನ್ನು ರೆಕಾರ್ಡಿಂಗ್‌ಗೆ ಬಳಸಿಕೊಳ್ಳುವುದು ಗೊತ್ತು ತಾನೆ? ಇದರ ಬದಲಿಗೆ ಗಿಟಾರ್‌ಗೆ ಜೋಡಿಸುವ ಕೇಬಲ್‌ನಲ್ಲೇ ರೆಕಾರ್ಡಿಂಗ್ ಸವಲತ್ತನ್ನು ಅಳವಡಿಸಿಕೊಂಡರೆ ಹೇಗೆ? ಇದನ್ನೇ ಒಂದು ಕಂಪನಿ ಈಗ ಮಾಡಿದೆ. ಕೇಬಲ್‌ನಲ್ಲೇ ಮೈಕ್ರೋಎಸ್‌ಡಿ ಕಾರ್ಡ್ ಸೇರಿಸಿ ರೆಕಾರ್ಡಿಂಗ್ ಮಾಡಬಹುದು. ಕೇಬಲ್ ಅನ್ನು ಗಿಟಾರ್ ಅಥವಾ ಯಾವುದೇ ಧ್ವನಿಯ ಆಕರದಿಂದ ಆಂಪ್ಲಿಫೈಯರ್‌ಗೆ ಜೋಡಿಸುವಾಗ ಕೇಬಲ್ ಮೂಲಕ ಸಾಗಿ ಬರುವ ಎಲ್ಲ ಧ್ವನಿಯನ್ನು ಅದು ರೆಕಾರ್ಡ್ ಮಾಡಿಕೊಳ್ಳುತ್ತದೆ. 4 ಗಿಗಾಬೈಟ್ ಮೆಮೊರಿಯ ಕಾರ್ಡ್‌ನಲ್ಲಿ ಸುಮಾರು 13 ಗಂಟೆಗಳ ಕಾಲ ರೆಕಾರ್ಡ್ ಮಾಡಬಹುದು. ಇದು ಸದ್ಯ ಅಮೆರಿಕದಲ್ಲಿ ಮಾತ್ರ ಲಭ್ಯವಿದೆ.

ಗ್ಯಾಜೆಟ್ ತರ್ಲೆ
ಅತಿ ಸೋಮಾರಿಗಳಿಗೆ ಐಸ್‌ಕ್ರೀಂ ತಿನ್ನಿಸಲು ಬಂದಿದೆ ಒಂದು ಸಾಧನ. ಐಸ್‌ಕ್ರೀಂನ ಶಂಕುವಿನ ಮಾದರಿಯಲ್ಲೇ ಈ ಸಾಧನ ಇದೆ. ಇದರ ಮುಚ್ಚಳದ ಭಾಗದಲ್ಲಿ ನೀವು ಐಸ್‌ಕ್ರೀಂ ಇಟ್ಟು ಅದನ್ನು ನಾಲಿಗೆಗೆ ತಗುಲಿಸಿ ನಂತರ ಒಂದು ಗುಂಡಿ ಅದುಮಿದರೆ ಐಸ್‌ಕ್ರೀಂನ ಶಂಕು ನಿಧಾನವಾಗಿ ತಿರುಗುತ್ತ ನಿಮಗೆ ಐಸ್‌ಕ್ರೀಂ ತಿನ್ನಿಸುತ್ತದೆ. ಚಾರ್ಲಿ ಚಾಪ್ಲಿನ್ ಅವರ ಮಾಡರ್ನ್ ಟೈಮ್ಸ್‌ ಸಿನಿಮಾದಲ್ಲಿ ಕೆಲಸಗಾರರಿಗೆ ತಿನ್ನಿಸುವ ಯಂತ್ರವೊಂದನ್ನು ನೋಡಿದ ನೆನಪಾಯಿತೇ? ಆದರೆ ಈ ಐಸ್‌ಕ್ರೀಂ ಯಂತ್ರ ನಿಜವಾಗಿಯೂ ಅಮೆಝಾನ್‌ನಲ್ಲಿ ಮಾರಾಟಕ್ಕಿದೆ. ಅದನ್ನು ಕೊಳ್ಳಬೇಕಾದರೆ ನೀವು ನಿಮ್ಮ ಸೋಮಾರಿತನವನ್ನು ಗೆದ್ದು ಪರ್ಸ್‌ನಿಂದ ಕ್ರೆಡಿಟ್ ಕಾರ್ಡ್‌ಹೊರತೆಗೆಯಬೇಕು!

ಗ್ಯಾಜೆಟ್ ಸಲಹೆ
ತೇಜಸ್ ಶ್ರೀಧರ್ ಅವರ ಪ್ರಶ್ನೆ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ಫೋನ್‌ನಲ್ಲಿ ಯುಎಸ್‌ಬಿ ಓಟಿಜಿ ಬಳಸುವುದು ಹೇಗೆ?
ಊ:  ಯುಎಸ್‌ಬಿ ಓಟಿಜಿ (USB OTG = USB on-the-go) ಅಂದರೆ ಸೂಕ್ತ ಕೇಬಲ್ ಮೂಲಕ ಯುಎಸ್‌ಬಿ ಕಿಂಡಿಗೆ ಹೊರಗಡೆಯಿಂದ ಪೆನ್‌ಡ್ರೈವ್ (ಯುಎಸ್‌ಬಿ ಡ್ರೈವ್/ಫ್ಲಾಶ್ ಡ್ರೈವ್) ಜೋಡಿಸಿ ಅದರಲ್ಲಿರುವ ಫೈಲ್‌ಗಳನ್ನು ಬಳಸುವುದು ಅಥವಾ ಅದಕ್ಕೆ ಫೈಲ್‌ಗಳನ್ನು ಪ್ರತಿ ಮಾಡುವುದು. ಸರಳವಾಗಿ ಹೇಳುವುದಾದರೆ ಯುಎಸ್‌ಬಿ ಡ್ರೈವ್ ಅನ್ನು ಹೆಚ್ಚಿಗೆ ಮೆಮೊರಿಯಾಗಿ ಬಳಸುವುದು. ಈ ಸೌಲಭ್ಯ ಎಲ್ಲ ಫೋನ್‌ಗಳಲ್ಲಿಲ್ಲ. ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್, ಎಲ್‌ಜಿ ಜಿ2, ಇತ್ಯಾದಿ ಕೆಲವು ಫೋನ್‌ಗಳಲ್ಲಿ ಈ ಸೌಲಭ್ಯವಿದೆ. ಜಾಲತಾಣಗಳಲ್ಲಿ ಲಭ್ಯವಾದ ಮಾಹಿತಿ ಪ್ರಕಾರ ಗ್ರ್ಯಾಂಡ್‌ನಲ್ಲಿ ಈ ಸೌಲಭ್ಯವಿಲ್ಲ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT