ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ ಕೆಲಸ ಏನು ಎಂದು ತಿಳಿಯಲು ಅರುವತ್ತು ವರ್ಷ ಸಾಲದೇ?

Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಇದೆಲ್ಲ ಗೊಂದಲ ಅವರೇ ಮಾಡಿಕೊಂಡುದೇ? ಜನರೇ ತಪ್ಪು ತಿಳಿದುಕೊಂಡಿದ್ದಾರೆಯೇ? ಮಾಧ್ಯಮಗಳು ಈ ಅವಾಂತರ ಸೃಷ್ಟಿ ಮಾಡಿವೆಯೇ? ಸಂವಿಧಾನವೇ ಮಗುಂ ಆಗಿದೆಯೇ? ಇದರಲ್ಲಿ ಯಾವುದಾದರೂ ಒಂದು ನಿಜ ಇರಬಹುದು ಅಥವಾ ಎಲ್ಲವೂ ನಿಜ ಇರಬಹುದು.

ಲೋಕಸಭಾ ಚುನಾವಣೆಯ ಅಭ್ಯರ್ಥಿಗಳಿಗೆ ಜನರು ಕೇಳುತ್ತಿರುವ ಪ್ರಶ್ನೆ ನೋಡಿದರೆ, ಕಣದಲ್ಲಿ ಇರುವ ಅವರು ಕೊಡುತ್ತಿರುವ ಆಶ್ವಾಸನೆ ನೋಡಿದರೆ ಜನರೂ ಹಾಗೆಯೇ ಮಾತನಾಡುತ್ತಿದ್ದಾರೆ, ಅಭ್ಯರ್ಥಿಗಳೂ ಅದೇ ಧಾಟಿಯಲ್ಲಿ ಭರವಸೆ ಕೊಡುತ್ತಿದ್ದಾರೆ ಎಂದು ಅನಿಸುತ್ತದೆ. ಮಾಧ್ಯಮಗಳು ಎತ್ತುತ್ತಿರುವ ಸಮಸ್ಯೆಗಳೂ ಗೊಂದಲಕಾರಿಯಾಗಿಯೇ ಇವೆ.

ಮಂಡ್ಯ ಜಿಲ್ಲೆಯ ಮದ್ದೂರಿನ ಯಾವುದೋ ಹಳ್ಳಿಯಲ್ಲಿ ಚಿರತೆ ದಾಳಿಯ ಭಯ ಇದೆ. ಆ ಭಯ ನಿವಾರಿಸದೇ ಇದ್ದರೆ ಅಲ್ಲಿನ ಜನರು ಮತದಾನ ಮಾಡುವುದಿಲ್ಲವಂತೆ. ಹುಣಸೂರು ತಾಲ್ಲೂಕಿನ ಯಾವುದೋ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯಂತೆ. ಅದಕ್ಕೆ ಹಾಲಿ ಸಂಸದ ವಿಶ್ವನಾಥ್‌ ಅವರು ಆ ಹಳ್ಳಿಗೆ ಪ್ರವೇಶಿಸದಂತೆ ಗ್ರಾಮಸ್ಥರು ತಡೆ ಮಾಡಿದರಂತೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಯಾವುದೋ ಉದ್ಯಾನದ ನಿರ್ವಹಣೆ ಸರಿಯಿಲ್ಲವಂತೆ. ಅದನ್ನೇ ಸರಿ ಮಾಡದ ಹಾಲಿ ಸಂಸದ ಅನಂತಕುಮಾರ್‌ ಇನ್ನೇನು ಮಾಡಲು ಸಾಧ್ಯವಂತೆ. ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಸಿಗದೇ ಇರಲು ಹಾಲಿ ಸಂಸದ ರಮೇಶ ಕತ್ತಿ ಅವರೇ ಕಾರಣವಂತೆ. ಇಂಥ ಅಂತೆ ಕಂತೆಗಳಿಗೆ ಲೆಕ್ಕವೇ ಇಲ್ಲ. ಜನರು ತಾವು ಎದುರಿಸುತ್ತಿರುವ ಇಂಥ ಎಲ್ಲ ಸಮಸ್ಯೆಗಳು ಮಾತ್ರವಲ್ಲ ತಮ್ಮ ರಸ್ತೆಯ ದೂಳು, ಕಸ ಎಲ್ಲದಕ್ಕೂ ಸಂಸದರೇ ಕಾರಣ ಎಂದು ಅಂದುಕೊಂಡಂತೆ ಕಾಣುತ್ತದೆ!

ಒಬ್ಬ ಲೋಕಸಭಾ ಸದಸ್ಯನ ಕೆಲಸ ಏನು? ಆತ ನಮ್ಮ ಓಣಿಯ ಕಸಕ್ಕೆ ಹೊಣೆಯೇ? ನಮ್ಮ ಊರಿಗೆ ಕುಡಿಯುವ ನೀರು ತರಿಸಲು ಜವಾಬ್ದಾರನೇ? ಹಾಗಾದರೆ ನಮ್ಮ ಊರಿನ ಪುರಸಭೆಯ, ಗ್ರಾಮ ಪಂಚಾಯ್ತಿಯ ಹೊಣೆ ಏನು? ಕಬ್ಬು ಬೆಳೆಗೆ ಬೆಂಬಲ ಬೆಲೆ ಪಾವತಿ ಆಗದೇ ಇರುವುದಕ್ಕೆ ಸಂಸದರು ಹೇಗೆ ಹೊಣೆಯಾಗುತ್ತಾರೆ? ಇಂಥ ಗೊಂದಲಗಳಿಗೆ ಕೇವಲ ಜನರೇ ಹೊಣೆ ಆಗಿರಲಾರರು. ಒಂದು ಸಾರಿ ಆರಿಸಿ ಹೋದ ಜನಪ್ರತಿನಿಧಿಗಳು ಕೈಗೆ ಸಿಗುವುದೇ ಇಲ್ಲ. ಮತ್ತೆ ಮತ ಕೇಳುವಾಗಲೇ ಅವರನ್ನು ನಾವು ನಮ್ಮ ಓಣಿಯಲ್ಲಿ, ಬಡಾವಣೆಯಲ್ಲಿ ಕಾಣುತ್ತೇವೆ. ಮತ ಕೇಳಲು ಬಂದ ಅಭ್ಯರ್ಥಿಗಳು ನಾವು ಏನು ಹೇಳಿದರೂ ಕೇಳಿಸಿಕೊಳ್ಳುತ್ತಾರೆ ಮತ್ತು ಎದುರು ಉತ್ತರ ಕೊಡುವುದಿಲ್ಲ. ಅದು ತನ್ನ ಕೆಲಸ ಅಲ್ಲ ಎಂದು ಹೇಳುವುದಿಲ್ಲ!

ಒಂದು ಸಾರಿ ಆರಿಸಿ ಹೋದ ಮೇಲೆ ಅವರಿಗೆ ನಾವು ನಮ್ಮ ಅಹವಾಲು ಹೇಳಿಕೊಳ್ಳಲು ಅವರು ಸಿಗುವುದೇ ಇಲ್ಲವಾದ್ದರಿಂದ ಅವರು ಉತ್ತರ ಕೊಡುವ ಅಥವಾ ಅದನ್ನು ಪರಿಹರಿಸುವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಇದು ಒಂದು ಮುಖ. ಇನ್ನೊಂದು ಮುಖ: ಒಂದು ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ 14ರಿಂದ 15 ಲಕ್ಷ ಮತದಾರರು ಇರುತ್ತಾರೆ. ಜನಪ್ರತಿನಿಧಿ ಕೈಗೆ ಸಿಗುವುದಿಲ್ಲ ಎಂದರೆ 15 ಲಕ್ಷ ಮತದಾರರಲ್ಲಿ ಆತ ಯಾರ ಕೈಗೆ ಸಿಗಬೇಕು? ಯಾರ ಕೈಗೆ ಎಷ್ಟು ಸಾರಿ ಸಿಗಬೇಕು? ಐದು ವರ್ಷಗಳಲ್ಲಿ ಎಷ್ಟು ಸಾರಿ ಒಬ್ಬರನ್ನು ಭೇಟಿ ಮಾಡಲು ಸಾಧ್ಯ? ಪ್ರಜಾತಂತ್ರದ ವಿವಿಧ ಹಂತಗಳ ಆಡಳಿತದಲ್ಲಿ ಯಾರ ಪಾತ್ರ ಏನು ಎಂದು ತೀರ್ಮಾನ ಆಗದೇ ಇದ್ದಾಗ ಅಥವಾ ಬೇಕೆಂದೇ ಗೊಂದಲ ಸೃಷ್ಟಿಸಿದಾಗ ಇಂಥ ಸಮಸ್ಯೆಗಳು ಉದ್ಭವಿಸುತ್ತವೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ಥಳೀಯ ಆಡಳಿತ ನೋಡಿಕೊಳ್ಳಲು ಪ್ರತ್ಯೇಕ ವ್ಯವಸ್ಥೆಯೇ ಇದೆ. ಗ್ರಾಮೀಣ ಪ್ರದೇಶದಲ್ಲಿ ಪಂಚಾಯತ್‌ ಸಂಸ್ಥೆಗಳು ಈ ಕೆಲಸ ಮಾಡಿದರೆ ಪಟ್ಟಣ, ನಗರ ಪ್ರದೇಶಗಳಲ್ಲಿ ಪೌರ ಸಂಸ್ಥೆಗಳು ಈ ಕಾರ್ಯ ನಿರ್ವಹಿಸುತ್ತವೆ. ರಾಜ್ಯ ಮಟ್ಟದಲ್ಲಿ ವಿಧಾನ ಮಂಡಲ ಇದ್ದರೆ ದೇಶದ ಮಟ್ಟದಲ್ಲಿ ಸಂಸತ್ತು ಇದೆ. ಎಲ್ಲರಿಗೂ ಬೇರೆ ಬೇರೆ ಕರ್ತವ್ಯಗಳು ಇವೆ; ಹಕ್ಕುಗಳೂ ಇವೆ. ಅವರು ಮಾಡುವುದನ್ನು ಇವರು ಮಾಡಲು ಆಗದು, ಇವರು ಮಾಡುವುದನ್ನು ಅವರು ಮಾಡಲು ಆಗದು.

ಸಾಮಾನ್ಯವಾಗಿ ಜನರ ಬೇಕು ಬೇಡಗಳು ತಳಮಟ್ಟದ ಆಡಳಿತ ವ್ಯವಸ್ಥೆಯ ಜತೆಗೇ ಹೆಚ್ಚು ತಳಕು ಹಾಕಿಕೊಂಡಿರುತ್ತವೆ. ತಳಮಟ್ಟದ ಸಂಸ್ಥೆಗಳನ್ನು ಹುಟ್ಟು ಹಾಕಿದ ಉದ್ದೇಶವೂ ಅದೇ ಆಗಿದೆ. ತಳಮಟ್ಟದ ಈ ಆಡಳಿತ ಸಂಸ್ಥೆಗಳು ಸರಿಯಾಗಿ ಕೆಲಸ ಮಾಡುವಂತೆ ಮತ್ತು ಅವುಗಳು ಆರ್ಥಿಕವಾಗಿ ಸಶಕ್ತವಾಗಿರುವಂತೆ ನೋಡಿಕೊಳ್ಳಬೇಕಾದುದು ವಿಧಾನ ಮಂಡಲದ ಸದಸ್ಯರ ಹಾಗೂ ಸಂಸದರ ಹೊಣೆಗಾರಿಕೆ. ತಳ ಮಟ್ಟದ ಆಡಳಿತ ಸಂಸ್ಥೆಗಳನ್ನು ಸಶಕ್ತಗೊಳಿಸಿ ಅವು ತಮ್ಮಷ್ಟಕ್ಕೆ ತಾವೇ ಸ್ವತಂತ್ರವಾಗಿ ಕೆಲಸ ಮಾಡಲು ಬಿಡುವ ಬದಲು ಅವುಗಳ ನಿತ್ಯದ ಕೆಲಸ ಕಾರ್ಯಗಳಲ್ಲಿ ವಿಧಾನ ಮಂಡಲದ ಮತ್ತು ಸಂಸತ್ತಿನ ಸದಸ್ಯರು ಕೈ ಹಾಕುತ್ತಿರುವುದರಿಂದ ಅಥವಾ ಅದರಲ್ಲಿ ತನ್ನ ಪಾಲೂ ಇದೆ ಎಂದು ತೋರಿಸಿಕೊಳ್ಳಲು ಮೇಲು ಹಂತದ ಈ ಜನಪ್ರತಿನಿಧಿಗಳು ಉದ್ದೇಶಪೂರ್ವಕ ವಾಗಿಯೇ ಬಯಸುತ್ತಿರುವುದರಿಂದ ಜನರು ಗೊಂದಲಗೊಳ್ಳುತ್ತಿರಬಹುದು.

ಸ್ವಲ್ಪ ಬಿಡಿಸಿ ಹೇಳುವುದಾದರೆ ಬೆಂಗಳೂರಿನ ಮೇಯರ್‌ ಯಾರಾಗಬೇಕು ಎಂಬುದನ್ನು ಕಾರ್ಪೊರೇಟರ್‌ಗಳು ಮಾತ್ರ ತೀರ್ಮಾನ ಮಾಡಬೇಕು. ಆದರೆ, ಹಾಗೆ ಆಗುವುದಿಲ್ಲ. ಅದರಲ್ಲಿ ಲೋಕಸಭಾ ಸದಸ್ಯರು, ಸಚಿವರು, ಶಾಸಕರು ಮೂಗು ತೂರಿಸುತ್ತಾರೆ. ಅವರಿಗೆ ಅದರಲ್ಲಿ ಏನೋ ಹಿತಾಸಕ್ತಿ ಇರುತ್ತದೆ. ಇದು ಬರೀ ಬೆಂಗಳೂರಿನ ಮೇಯರ್‌ ಆಯ್ಕೆ ವಿಷಯ ಮಾತ್ರವಲ್ಲ. ಒಂದು ಚಿಕ್ಕ ಪಟ್ಟಣದ ಪುರಸಭೆ ಅಧ್ಯಕ್ಷ ಯಾರು ಆಗಬೇಕು ಎಂಬುದನ್ನೂ ಆ ಕ್ಷೇತ್ರದ ಶಾಸಕ ತೀರ್ಮಾನ ಮಾಡುತ್ತಾನೆ. ಸಂಸದನೂ ಮೂಗು ತೂರಿಸಿದರೆ ಅಚ್ಚರಿಯೇನೂ ಇಲ್ಲ. ಎಲ್ಲರೂ ಎಲ್ಲದರಲ್ಲಿಯೂ ಕೈ ಹಾಕುವುದರಿಂದ ಜನರಿಗೆ ಯಾರು ಏನು ಕೆಲಸ ಮಾಡುತ್ತಾರೆ, ಯಾರ ಹೊಣೆಗಾರಿಕೆ ಏನು ಎಂದು ತಿಳಿಯುವುದಿಲ್ಲ.

ನಂದನ್‌ ನಿಲೇಕಣಿ ಅವರು ವಾರ್ಡಿಗೆ ಬಂದು ಮತ ಕೇಳಿದರೆ ಹಾಳು ಬಿದ್ದ ರಸ್ತೆಗಳು, ಕಟ್ಟಿಕೊಂಡ ಚರಂಡಿಗಳು, ನಿರ್ವಹಣೆಯಿಲ್ಲದ ಉದ್ಯಾನಗಳನ್ನು ತೋರಿಸುತ್ತೇವೆ. ಅದು ನಮ್ಮ ವಾರ್ಡಿನ ಕಾರ್ಪೊರೇಟರ್‌ ಮಾಡಬೇಕಾದ ಕೆಲಸ ಎಂಬುದನ್ನು ನಾವು ಮರೆತು ಬಿಡುತ್ತೇವೆ. ನಾವು ನಿಲೇಕಣಿ ಅವರಿಗೆ ಹೀಗೆಲ್ಲ ಕೇಳುವುದು ಎಷ್ಟು ಹಾಸ್ಯಾಸ್ಪದವಾಗಿದೆಯೋ ನಂದಿನಿ ಆಳ್ವ ಅವರಂಥ ಒಬ್ಬ ತಿಳಿವಳಿಕೆಯುಳ್ಳ ಅಭ್ಯರ್ಥಿ, ‘ಈಗ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ, ನಾನು ಆಯ್ಕೆಯಾದರೆ ಅವರಿಗೆ ರಕ್ಷಣೆ ಕೊಡಿಸುತ್ತೇನೆ’ ಎಂದು ಹೇಳುವುದೂ ಅಷ್ಟೇ ಹಾಸ್ಯಾಸ್ಪದವಾಗಿದೆ. ಒಬ್ಬ ಸಂಸದೆ ಅದು ಹೇಗೆ ಎಲ್ಲ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಿಸಲು ಸಾಧ್ಯ? ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಹೊಣೆಗಾರಿಕೆ ಅಲ್ಲವೇ?

ಶಾಸನಸಭೆಗಳ ಮುಖ್ಯ ಕೆಲಸ ಶಾಸನಗಳನ್ನು ಮಾಡುವುದು. ಅಂದರೆ ಶಾಸಕರು ಮತ್ತು ಸಂಸದರು ಮುಖ್ಯವಾಗಿ ಈ ರಾಜ್ಯಕ್ಕೆ ಬೇಕಾದ, ದೇಶಕ್ಕೆ ಬೇಕಾದ ಕಾಯ್ದೆಗಳನ್ನು ರೂಪಿಸಬೇಕಾದವರು. ನೀತಿಗಳನ್ನು ನಿರೂಪಿಸಬೇಕಾದವರು. ಇಡೀ ರಾಜ್ಯಕ್ಕೆ ಮತ್ತು ದೇಶಕ್ಕೆ ಅನ್ವಯಿಸುವಂಥ ಯೋಜನೆಗಳನ್ನು ರೂಪಿಸಬೇಕಾದವರು. ಅದಕ್ಕೆ ಬೇಕಾದ ಹಣಕಾಸಿನ ನೆರವನ್ನು ಒದಗಿಸಬೇಕಾದವರು. ಲೋಕಸಭೆಯ ಸದಸ್ಯರು ಒಂದು ಕ್ಷೇತ್ರವನ್ನು ಮಾತ್ರ ಪ್ರತಿನಿಧಿಸುತ್ತ ಇರಬಹುದು. ಆದರೆ, ಅವರು ಇಡೀ ಊರಿಗೆ ಕೇಂದ್ರ ಸರ್ಕಾರದಿಂದ ಏನು ಆಗಬೇಕು ಎಂದು ತಿಳಿದು ಅದನ್ನು ಮಾಡಿಸಿಕೊಡಲು ಇಡೀ ರಾಜ್ಯದ ಪ್ರತಿನಿಧಿಯಾಗಿ ಕೆಲಸ ಮಾಡುವಂಥ ಅಧಿಕಾರ ಉಳ್ಳವರು. ಬೆಂಗಳೂರಿನ ಮೆಟ್ರೊ ರೈಲಿಗೆ, ಇನ್ನಾವುದೋ ಊರಿನ ತ್ವರಿತ ನೀರಾವರಿ ಯೋಜನೆಗೆ, ಮತ್ತಾವುದೋ ಊರಿನ ರೈಲು ಸಂಪರ್ಕಕ್ಕೆ, ಶಿಕ್ಷಣಕ್ಕೆ, ಆರೋಗ್ಯಕ್ಕೆ, ನೀರಿನ ಹಂಚಿಕೆಗೆ ಕೇಂದ್ರದಿಂದ ಬರಬೇಕಾದ ನೆರವನ್ನು ದೊರಕಿಸಬೇಕಾದವರು. ಇದೆಲ್ಲ ಒಂದು ರೀತಿ ಅಮೂರ್ತವಾದುದು. ಯಾವ ಕೆಲಸವನ್ನು ಯಾರು ಮಾಡಿದರು ಎಂದು ಹೇಳುವುದು ಕಷ್ಟ.

ಒಂದೇ ಕೆಲಸಕ್ಕೆ ಎಲ್ಲರೂ ಹೊಣೆ ಹೊತ್ತುಕೊಳ್ಳಲೂಬಹುದು. ಈಗ ಬೆಂಗಳೂರಿನ ಮೆಟ್ರೊಕ್ಕೆ ಅಪ್ಪಂದಿರು ಬಹಳ ಮಂದಿ. ಎಲ್ಲರೂ ಅದು ತಮ್ಮ ಕೊಡುಗೆಯೇ ಎಂದು ಹೇಳುತ್ತಾರೆ. ಆದರೆ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದಿಂದ ತಮ್ಮ ಊರಿಗೆ, ತಮ್ಮ ಕ್ಷೇತ್ರಕ್ಕೆ, ತಮ್ಮ ಜಿಲ್ಲೆಗೆ ಮತ್ತು ತಮ್ಮ ಭಾಗಕ್ಕೆ ಏನೆಲ್ಲ ಮಾಡಿಸಬಹುದು ಎಂಬುದಕ್ಕೆ ಬಹುದೊಡ್ಡ ನಿದರ್ಶನವಾಗಿದ್ದಾರೆ.

ಹಿಂದೆ ಸಿ.ಕೆ.ಜಾಫರ್‌ ಷರೀಫ್‌ ಅವರು ರೈಲ್ವೆ ಸಚಿವರಾಗಿದ್ದಾಗಲೂ ಕರ್ನಾಟಕಕ್ಕೆ ಹೀಗೆಯೇ ಬಹುದೊಡ್ಡ ಕೊಡುಗೆಗಳನ್ನು ತಂದಿದ್ದರು. ಅಂದರೆ ಒಬ್ಬರೆ ಕ್ರಿಯಾಶೀಲ ಸಂಸದ, ಸಚಿವ ಏನು ಮಾಡಬಹುದು ಎಂಬುದಕ್ಕೆ ಸದ್ಯದ ವರ್ತಮಾನದಲ್ಲಿಯೇ ಉದಾಹರಣೆಗಳು ಇವೆ. ಎಲ್ಲಿ ಹೀಗೆ ಕಾಣುವ ಹಾಗೆ ಕೆಲಸಗಳು ಆಗಿಲ್ಲವೋ ಅಲ್ಲಿ ಗೊಂದಲ ಇರುವಂತೆಯೂ ಕಾಣುತ್ತದೆ. ಅದನ್ನು ಆಯಾ ಲೋಕಸಭಾ ಸದಸ್ಯರು ತಮ್ಮ ರಕ್ಷಣೆಗಾಗಿಯೂ ಸೃಷ್ಟಿ ಮಾಡಿಕೊಂಡಿರಬಹುದು.

ಇಲ್ಲಿ ಇನ್ನೂ ಒಂದು ಸಮಸ್ಯೆ ಇದ್ದಂತೆ ಕಾಣುತ್ತದೆ. ಯೋಜನೆಗಳನ್ನು ತರುವುದು, ಅದಕ್ಕೆ ಹಣಕಾಸು ಒದಗಿಸುವುದು ಸಂಸತ್ತಿನ ಮತ್ತು ವಿಧಾನ ಮಂಡಲದ ಹೊಣೆ. ಅದನ್ನು ಜಾರಿಗೆ ತರುವುದಕ್ಕೆ ಕಾರ್ಯಾಂಗ ಎಂಬ ಒಂದು ಪ್ರತ್ಯೇಕ ಸಂವಿಧಾನಬದ್ಧ ವ್ಯವಸ್ಥೆಯೇ ಇದೆ. ಅದು ವಿಫಲವಾಗಿದೆಯೇ? ಅದು ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದೆಯೇ? ನಮ್ಮ ಓಣಿಯಲ್ಲಿ ಕಸ ಕೊಳೆಯುತ್ತ ಬಿದ್ದಿದ್ದರೆ, ಚರಂಡಿ ಕಟ್ಟಿಕೊಂಡಿದ್ದರೆ,  ನಲ್ಲಿಯಲ್ಲಿ ನೀರು ಬರದೇ ಇದ್ದರೆ ನಾವು ಯಾರನ್ನು ಹೊಣೆ ಮಾಡಬೇಕು? ಜನಪ್ರತಿನಿಧಿಗಳನ್ನು ನೇರವಾಗಿ ಹೊಣೆ ಮಾಡಬೇಕೇ? ಅಥವಾ ಇದೇ ಕೆಲಸ ಮಾಡಲು ವೇತನ ಪಡೆಯುವ ಕಾರ್ಯಾಂಗವನ್ನು ಹೊಣೆ ಮಾಡಬೇಕೇ? ಜನಪ್ರತಿನಿಧಿಗಳು ತಾವು ಎಲ್ಲದಕ್ಕೂ ಹೊಣೆ ಎಂದು ಹೇಳಿಕೊಳ್ಳುವಲ್ಲಿ ಅಥವಾ ತೋರಿಸಿಕೊಳ್ಳುವಲ್ಲಿ ಅವರಿಗೆ ಹಿತಾಸಕ್ತಿ ಇದೆಯೇ? ಅದಕ್ಕೇ ಕಾರ್ಯಾಂಗ ತನಗೆ ಏಕೆ ಬೇಕು ಇಲ್ಲದ ಉಸಾಬರಿ ಎಂದು ತೆರೆಯ ಹಿಂದೆ ಸರಿಯುತ್ತಿದೆಯೇ?

ಜನಪ್ರತಿನಿಧಿಗಳು ಎಲ್ಲದಕ್ಕೂ ತಾವು ಮುಂದೆ ಇರಬೇಕು ಎಂದು ಬಯಸುವಂತೆ ಕಾಣುತ್ತದೆ. ಈ ದೇಶವನ್ನು ಆಳಿದ ರಾಜ ಮಹಾರಾಜರುಗಳ ಕಾಲ ಮುಗಿದು ಹೋದರೂ ಆಧುನಿಕ ಕಾಲದ ಕೊಡುಗೈ ದೊರೆಗಳು ತಾವು ಎಂದು ತೋರಿಸಿಕೊಳ್ಳಲು ಬಯಸುವಂತೆ ಭಾಸವಾಗುತ್ತದೆ. ಇಲ್ಲವಾದರೆ ಸಂಸದರ, ಶಾಸಕರ ಕ್ಷೇತ್ರಾಭಿವೃದ್ಧಿಯಂಥ ಯೋಜನೆಗಳು ಚಾಲ್ತಿಗೆ ಬರುತ್ತಿರಲಿಲ್ಲ.

ಈ ಎರಡೂ ಯೋಜನೆಗಳಲ್ಲಿ ಸಂಸದರಿಗೆ ಮತ್ತು ಶಾಸಕರಿಗೇ ಹಣ ಬಿಡುಗಡೆ ಮಾಡುವ ಅಧಿಕಾರ ಇದೆ. ಒಂದು ಪ್ರದೇಶಕ್ಕೆ ಏನು ಕೆಲಸ ಆಗಬೇಕು ಎಂಬುದನ್ನು ಆಯಾ ಹಂತದ ಆಡಳಿತಗಳು ಮಂಡಿಸುವ ಬಜೆಟ್ಟಿನಲ್ಲಿಯೇ ಸೇರಿಸಬಹುದಲ್ಲ? ಸೇರಿಸಿ ಜಾರಿ ಮಾಡಬಹುದಲ್ಲ? ಯೋಜನೆಗಳ ಪ್ರಕಟಣೆಯಲ್ಲಿ, ಅವುಗಳ ಕೊಡುಗೆಯಲ್ಲಿ, ಮಂಜೂರಿಯಲ್ಲಿ, ಜಾರಿಯಲ್ಲಿ ಬಹುಹಂತಗಳು ಮತ್ತು ಗೊಂದಲಗಳು ಇರಬೇಕು ಎಂದು ಜನಪ್ರತಿನಿಧಿಗಳು ಬಯಸುತ್ತಾರೆ ಎಂದು ಅನಿಸುತ್ತದೆ. ಎಲ್ಲವೂ ಸರಳ ಮತ್ತು ಪಾರದರ್ಶಕವಾಗಿ ಇದ್ದರೆ ಅಲ್ಲಿ ಜನಪ್ರತಿನಿಧಿಗಳಿಗೆ ಏನು ಕೆಲಸ?

ಸ್ವಾತಂತ್ರ್ಯ ಬಂದು ಆರೂವರೆ ದಶಕಗಳು ಕಳೆದು ಹೋಗಿವೆ. ಹದಿನೈದು ಲೋಕಸಭೆಗಳು ಅಸ್ತಿತ್ವ ಮುಗಿಸಿ ಇದೀಗ ಹದಿನಾರನೇ ಲೋಕಸಭೆಗೆ ಚುನಾವಣೆ ನಡೆಯುತ್ತಿದೆ. ಒಂದು ಪ್ರಜಾತಂತ್ರ ವ್ಯವಸ್ಥೆಗೆ ಪ್ರಬುದ್ಧತೆ ಗಳಿಸಲು, ಯಾರ ಕೆಲಸ ಏನು ಎಂದು ತಿಳಿಯಪಡಿಸಲು ಇಷ್ಟು ಕಾಲ ಸಾಲದೇ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT