ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಸ್‌ಬಿ ಆನ್-ದ-ಗೋ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ನೀವು ಹೊಚ್ಚ ಹೊಸ ಆಂಡ್ರಾಯಿಡ್ ಫೋನ್ ಕೊಂಡುಕೊಂಡಿದ್ದೀರಿ. ಅತ್ಯಾಧುನಿಕ ಪ್ರೊಸೆಸರ್, ಉತ್ತಮ ಪರದೆ, ಉತ್ತಮ ರೆಸೊಲೂಶನ್, ಕ್ಯಾಮೆರಾ ಎಲ್ಲಾ ಇವೆ. ಪ್ರಪಂಚದಲ್ಲಿ ಯಾವಾಗಲೂ ಎಲ್ಲವೂ ದೊರೆಯುವುದು ಕಠಿಣ ತಾನೆ? ಹಾಗೆಯೇ ಇಲ್ಲೂ ಒಂದು ಕೊರತೆ ಇರಬಹುದು. ಅದುವೇ ಹೆಚ್ಚಿಗೆ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ ಇಲ್ಲದಿರುವುದು.

ಈ ಸೌಲಭ್ಯ ಇದ್ದರೆ ಬೇಕಾದಂತೆ ಮೈಕ್ರೋಎಸ್‌ಡಿ  ಕಾರ್ಡ್‌ಗಳನ್ನು ಹಾಕಿಕೊಂಡು ಹೆಚ್ಚಿಗೆ ಫೋಟೊ ತೆಗೆಯುವುದು, ಸಿನಿಮಾ ಹಾಕಿಕೊಂಡು ವೀಕ್ಷಿಸುವುದು, ಸಂಗೀತ ಹಾಕಿಕೊಂಡು ಆಲಿಸುವುದು, ಇತ್ಯಾದಿ ಕೆಲಸಗಳನ್ನು ಮಾಡಬಹುದು. ಹೌದು, ಮೈಕ್ರೋಎಸ್‌ಡಿ ಕಾರ್ಡ್ ಸೌಲಭ್ಯ ಇಲ್ಲ ಎಂದು ಹೇಳಿದ ಮೇಲೆ ಅವೆಲ್ಲ ಮಾಡಬಹುದು ಎಂದು ಹೇಳಿ ಯಾಕೆ ಹೊಟ್ಟೆ ಉರಿಸುತ್ತೀರಿ ಎಂದು ಕೇಳುತ್ತಿದ್ದೀರಾ? ಪೂರ್ತಿ ನಿರಾಶರಾಗಬೇಕಾಗಿಲ್ಲ.

ನಿಮ್ಮ ಆಂಡ್ರಾಯಿಡ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಯುಎಸ್‌ಬಿ ಆನ್-ದ-ಗೋ (USB On-The-Go) ಸೌಲಭ್ಯ ಇದ್ದರೆ ಇವೆಲ್ಲವನ್ನು ಇನ್ನೊಂದು ರೀತಿಯಲ್ಲಿ ಮಾಡಬಹುದು. ಏನಿದು ಯುಎಸ್‌ಬಿ ಆನ್-ದ-ಗೋ? ಈ ಯುಎಸ್‌ಬಿ ಆನ್-ದ-ಗೋ (USB On-The-Go) ವನ್ನು ಹೆಚ್ಚಿನ ಸಂದರ್ಭಗಳಲ್ಲಿ ಚುಟುಕಾಗಿ OTG ಎಂದು ಬಳಸುತ್ತಾರೆ. ಎಲ್ಲ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿರುವ ಚಿಕ್ಕ ಯುಎಸ್‌ಬಿ ಕಿಂಡಿಗೆ ಸಾಮಾನ್ಯವಾಗಿ ಎಲ್ಲರೂ ಚಾರ್ಜರ್‌ಗಳನ್ನು ಜೋಡಿಸುತ್ತಾರೆ.

ಯುಎಸ್‌ಬಿ ಫ್ಲಾಶ್ ಡ್ರೈವ್‌ಗಳನ್ನು ಎಲ್ಲ ನೋಡಿಯೇ ಇರುತ್ತೀರಾ. ಅವುಗಳನ್ನು ಗಣಕ ಅಥವಾ ಲ್ಯಾಪ್‌ಟಾಪ್‌ನಲ್ಲಿರುವ ಯುಎಸ್‌ಬಿ ಕಿಂಡಿಗೆ ಜೋಡಿಸಿ ಫೈಲ್ ವರ್ಗಾವಣೆ ಮಾಡಬಹುದು. ಅವುಗಳ ಯುಎಸ್‌ಬಿ ಜೋಡಣೆ (ಕನೆಕ್ಟರ್) ಸ್ವಲ್ಪ ದೊಡ್ಡದಾಗಿರುತ್ತದೆ. ಅವುಗಳನ್ನು ಫೋನ್‌ಗಳಲ್ಲಿರುವ ಚಿಕ್ಕ ಯುಎಸ್‌ಬಿ ಕಿಂಡಿಗೆ ಜೋಡಿಸಲು ಸಾಧ್ಯವಿಲ್ಲ. ಈ ರೀತಿ ಚಿಕ್ಕ ಯುಎಸ್‌ಬಿ ಕಿಂಡಿಗೆ ಸಾಮಾನ್ಯ ಯುಎಸ್‌ಬಿ ಪೆನ್ ಡ್ರೈವ್ ಅಥವಾ ಇತರೇ ಯುಎಸ್‌ಬಿ ಸಾಧನಗಳನ್ನು ಜೋಡಿಸಲು ಅನುವು ಮಾಡಿಕೊಡುವ ಒಂದು ಕೇಬಲ್ ಮಾರುಕಟ್ಟೆಯಲ್ಲಿ ದೊರೆಯುತ್ತದೆ.

ಅದಕ್ಕೆ ಸರಳವಾಗಿ ಓಟಿಜಿ (OTG) ಕೇಬಲ್ ಎಂದು ಕರೆಯುತ್ತಾರೆ. ಅದರ ಒಂದು ಬದಿಯಲ್ಲಿ ಫೋನ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಕಂಡುಬರುವ ಚಿಕ್ಕ ಯುಎಸ್‌ಬಿ ಕಿಂಡಿಗೆ ಜೋಡಿಸಬಹುದಾದ ಕನೆಕ್ಟರ್ ಇರುತ್ತದೆ. ಇನ್ನೊಂದು ಬದಿಯಲ್ಲಿ ಸಾಮಾನ್ಯ ಯುಎಸ್‌ಬಿ ಡ್ರೈವ್ ಅಥವಾ ಸಾಧನ ಜೋಡಿಸಬಹುದಾದ ಕಿಂಡಿ ಇರುತ್ತದೆ. ಇಂತಹ ಕೇಬಲ್‌ಗಳು ಮಾರುಕಟ್ಟೆಯಲ್ಲಿ ಸುಮಾರು ₹50ಕ್ಕೆ ದೊರೆಯುತ್ತದೆ. ಈ ಕೇಬಲ್ ಬಳಸಿ ಏನೆಲ್ಲಾ ಮಾಡಬಹುದು ಎಂಬುದನ್ನು ತಿಳಿಯೋಣ.

ಈ ಕೇಬಲ್‌ಗೆ ಯಾವುದೇ ಯುಎಸ್‌ಬಿ ಡ್ರೈವ್ ಜೋಡಿಸಬಹುದು ಎಂದು ಹೇಳಿದೆ ತಾನೆ? ಹೌದು. ಇದನ್ನು ಬಳಸಿ ನೀವು ಹೆಚ್ಚಿಗೆ ಮೆಮೊರಿಗೆ ಸಾಮಾನ್ಯ ಯುಎಸ್‌ಬಿ ಫ್ಲಾಶ್ ಡ್ರೈವ್ (ಪೆನ್ ಡ್ರೈವ್ ಅಥವಾ ಥಂಬ್ ಡ್ರೈವ್) ಜೋಡಿಸಬಹುದು. ನಿಮ್ಮ ಗಣಕ ಅಥವಾ ಲ್ಯಾಪ್‌ಟಾಪ್‌ನಿಂದ ಯುಎಸ್‌ಬಿ ಡ್ರೈವ್‌ಗೆ ಸಿನಿಮಾ, ಫೋಟೊ, ವಿಡಿಯೊ, ಸಂಗೀತ ಇತ್ಯಾದಿಗಳನ್ನು ಪ್ರತಿ ಮಾಡಿಕೊಂಡು ನಂತರ ಅದನ್ನು ಈ ಕೇಬಲ್ ಮೂಲಕ ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ಗೆ ಜೋಡಿಸಿ ಅವುಗಳನ್ನು ಬಳಸಬಹುದು. ನಿಮ್ಮ ಫೋನಿನಲ್ಲಿ ಅಧಿಕ

ಮೆಮೊರಿ ಇಲ್ಲ ಎಂಬ ಸಮಸ್ಯೆ ಇದರಿಂದ ಪರಿಹಾರವಾಗುತ್ತದೆ.

ಇಷ್ಟು ಸರಳ ಉಪಾಯ ಇದೆ ಎಂದು ನಮಗೆ ಯಾಕೆ ತಿಳಿದಿರಲಿಲ್ಲ? ನೀವು ಯಾಕೆ ಮೊದಲೇ ತಿಳಿಸಲಿಲ್ಲ? ಎಂದು ಕೇಳುತ್ತಿದ್ದೀರಾ? ನಿಲ್ಲಿ. ಅಷ್ಟು ಬೇಗನೆ ಯಾವುದೇ ತಿರ್ಮಾನಕ್ಕೆ ಬರುವುದು ಬೇಡ. ಸರಳ ಉಪಾಯ ಇದೆ ಎಂದು ಸಂತೋಷ ಪಡುವುದೂ ಬೇಡ. ಈಗ ನಿಮ್ಮ ಸಂತೋಷಕ್ಕೆ ಚಿಕ್ಕ ಕಡಿವಾಣ ಹಾಕೋಣ. ಅದೇನಪ್ಪಾ ಎಂದರೆ ಎಲ್ಲ ಆಂಡ್ರಾಯಿಡ್ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಈ ಓಟಿಜಿಗೆ ಬೆಂಬಲ ಇರುವುದಿಲ್ಲ ಎಂಬುದು.

ಅಂದರೆ ನೀವು ಓಟಿಜಿ ಕೇಬಲ್ ಕೊಂಡುಕೊಂಡು ಫೋನಿಗೆ ಜೋಡಿಸಿದ ತಕ್ಷಣ ಅದು ಕೆಲಸ ಮಾಡಬೇಕಾಗಿಲ್ಲ. ನಿಮ್ಮ ಫೋನಿನಲ್ಲಿ (ಅಥವಾ ಟ್ಯಾಬ್ಲೆಟ್‌ನಲ್ಲಿ) ಓಟಿಜಿ ಬೆಂಬಲ ಇದ್ದರೆ ಮಾತ್ರ ಇವೆಲ್ಲ ಸಾಧ್ಯ. ಈ ಬೆಂಬಲ ಇದೆಯೇ ಎಂಬುದನ್ನು ಪತ್ತೆ ಮಾಡಲು ಸಹಾಯ ಮಾಡುವ ಹಲವು ಆಪ್‌ಗಳು ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿವೆ. ಅವುಗಳಲ್ಲಿ ಯಾವುದನ್ನಾದರೂ ಬಳಸಿ ನಿಮ್ಮ ಫೋನಿನಲ್ಲಿ ಈ ಸೌಲಭ್ಯ ಇದೆಯೇ ಎಂದು ಪತ್ತೆ ಹಚ್ಚಬಹುದು. ಅಥವಾ ಕೇವಲ ₹50 ಖರ್ಚು ಮಾಡಿ ಒಂದು ಓಟಿಜಿ ಕೇಬಲ್ ಕೊಂಡುಕೊಂಡು ಪರೀಕ್ಷಿಸಿ ನೊಡಬಹುದು.

ಓಟಿಜಿ ಕೇಬಲ್ ಏನು ಮಾಡುತ್ತದೆಯೆಂದರೆ ಯಾವುದೇ ಸಾಮಾನ್ಯ ದೊಡ್ಡ ಗಾತ್ರದ ಯುಎಸ್‌ಬಿ ಕನೆಕ್ಟರ್ ಇರುವ ಸಾಧನವನ್ನು ಫೋನಿಗೆ ಅಥವಾ ಟ್ಯಾಬ್ಲೆಟ್‌ಗೆ ಜೋಡಿಸಲು ಅನುವು ಮಾಡಿಕೊಡುತ್ತದೆ. ಅಂದರೆ ಮಾರುಕಟ್ಟೆಯಲ್ಲಿ ಕಂಡುಬರುವ ನೂರಾರು ನಮೂನೆಯ ಯುಎಸ್‌ಬಿ ಸಾಧನಗಳನ್ನು ಜೋಡಿಸಬಹುದೇ? ಎಲ್ಲವನ್ನೂ ಅಲ್ಲ. ಆದರೆ ಕೆಲವನ್ನು ಜೋಡಿಸಿ ಬಳಸಬಹುದು. ಹೆಚ್ಚಿನ ಮೆಮೊರಿಗೆ ಪೆನ್ ಡ್ರೈವ್ ಜೋಡಿಸಬಹುದು ಎಂದು ಈಗಾಗಲೇ ತಿಳಿಸಿಯಾಗಿದೆ. ಇತರೆ ಸಾಧನಗಳನ್ನು ಗಮನಿಸೋಣ.  

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಒಂದು ಹೊಸ ನಮೂನೆಯ ಫ್ಲಾಶ್ ಡ್ರೈವ್ (ಥಂಬ್ ಡ್ರೈವ್, ಪೆನ್ ಡ್ರೈವ್)ಗಳು ದೊರೆಯುತ್ತಿವೆ. ಅವುಗಳ ಒಂದು ಬದಿಯಲ್ಲಿ ದೊಡ್ಡ ಯುಎಸ್‌ಬಿ ಕನೆಕ್ಟರ್ ಮತ್ತು ಇನ್ನೊಂದು ಬದಿಯಲ್ಲಿ ಚಿಕ್ಕ ಯುಎಸ್‌ಬಿ ಕನೆಕ್ಟರ್ ಇವೆ. ಇವುಗಳಿಗೆ ಓಟಿಜಿ ಫ್ಲಾಶ್ ಡ್ರೈವ್ ಎಂಬ ಹೆಸರಿದೆ. ಇವುಗಳನ್ನು ಬಳಸಿ ಗಣಕದಿಂದ ಫೈಲ್‌ಗಳನ್ನು ಪ್ರತಿ ಮಾಡಿಕೊಂಡು ಅವುಗಳನ್ನು ಫೋನಿನಲ್ಲಿ ಬಳಸಬಹುದು.

ತುಂಬ ಉಪಯೋಗಕ್ಕೆ ಬರುವ ಒಂದು ಸಾಧನವೆಂದರೆ ಯುಎಸ್‌ಬಿ ಕೀಬೋರ್ಡ್. ನಿಮ್ಮಲ್ಲಿ ಯುಎಸ್‌ಬಿ ಕೀಬೋರ್ಡ್ ಇದ್ದರೆ ಅದನ್ನು ಈ ಓಟಿಜಿ ಮೂಲಕ ಫೋನ್ ಅಥವಾ ಟ್ಯಾಬ್ಲೆಟ್‌ಗೆ ಜೋಡಿಸಿ ಬಳಸಬಹುದು. ಅದೇ ಮಾದರಿಯಲ್ಲಿ ಯುಎಸ್‌ಬಿ ಮೌಸ್ ಕೂಡ ಬಳಸಬಹುದು. ಇವೆರಡೂ ಬೇಕಿದ್ದರೆ? ಮಾರುಕಟ್ಟೆಯಲ್ಲಿ ವಯರ್‌ಲೆಸ್‌ ಡೆಸ್ಕ್‌ಟಾಪ್ ಎಂಬ ಹೆಸರಿನಲ್ಲಿ ಕೀಬೋರ್ಡ್ ಮತ್ತು ಮೌಸ್‌ಗಳು ಜೊತೆಯಾಗಿ ದೊರೆಯುತ್ತವೆ. ಇವುಗಳನ್ನು ನಿಮ್ಮ ಗಣಕಕ್ಕೆ ನಿಸ್ತಂತು (ವಯರ್‌ಲೆಸ್) ವಿಧಾನದಲ್ಲಿ ಜೋಡಿಸಲು ಗಣಕದ ಯುಎಸ್‌ಬಿ ಕಿಂಡಿಗೆ ಜೋಡಣೆಯಾಗುವ ಒಂದು ಡಾಂಗಲ್ ಕೂಡ ಜೊತೆಯಲ್ಲಿ ದೊರೆಯುತ್ತದೆ.

ಇವನ್ನು ನೀವು ಕೊಂಡುಕೊಂಡರೆ ಅಥವಾ ಅವು ನಿಮ್ಮಲ್ಲಿ ಈಗಾಗಲೇ ಇದ್ದರೆ ಆ ಡಾಂಗಲ್ ಅನ್ನು ಓಟಿಜಿ ಮೂಲಕ ಫೋನ್ ಅಥವಾ ಟ್ಯಾಬ್ಲೆಟ್‌ಗೆ ಜೋಡಿಸಿ ದೊಡ್ಡ ಗಾತ್ರದ ಕೀಬೋರ್ಡ್ ಮತ್ತು ಮೌಸ್ ಬಳಸಿ ಆನಂದಿಸಬಹುದು. ಅಂದರೆ ನೀವು ಓಟಿಜಿ ಸೌಲಭ್ಯ ಇರುವ ಒಂದು ಟ್ಯಾಬ್ಲೆಟ್ ಮತ್ತು ಈ ವಯರ್‌ಲೆಸ್‌ ಡೆಸ್ಕ್‌ಟಾಪ್‌ ಕೊಂಡುಕೊಂಡರೆ ಒಂದು ಮಟ್ಟಿಗೆ ಲ್ಯಾಪ್‌ಟಾಪ್‌ ಬದಲಿಗೆ ಅಂದರೆ ಪಠ್ಯ ತಯಾರಿಯ ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಲೇಖಕರುಗಳೇ, ಗಮನಿಸುತ್ತಿದ್ದೀರಾ?

ನಿಮ್ಮಲ್ಲಿ ಯುಎಸ್‌ಬಿ ಮೂಲಕ ಜೋಡಣೆಯಾಗುವ ಪ್ರಿಂಟರ್ ಇದ್ದಲ್ಲಿ ಅದನ್ನೂ ನೀವು ಓಟಿಜಿ ಮೂಲಕ ಜೋಡಿಸ ಬಳಬಹುದು. ಆದರೆ ಅದಕ್ಕಾಗಿ ಅಗತ್ಯ ಆಪ್ ಮತ್ತು ಡ್ರೈವರ್ ತಂತ್ರಾಂಶಗಳನ್ನು ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ಗೆ ಹಾಕಿಕೊಳ್ಳಬೇಕು. ನಾನು ಹುಡುಕಾಡಿದಾಗ ನನಗೆ ಉಚಿತ ಆಪ್ ಯಾವುದೂ ಕಂಡುಬರಲಿಲ್ಲ. ಅದೃಷ್ಟಕ್ಕೆ ಹೆಚ್ಚಿನವುಗಳು ಹಣ ನೀಡದೆ ಪರೀಕ್ಷಿಸಲು ಅನುವು ಮಾಡಿಕೊಡುತ್ತವೆ. ಅವು ಕೆಲಸ ಮಾಡುತ್ತವೆ ಎಂದು ಖಾತ್ರಿಯಾದಾಗ ಹಣ ನೀಡಿ ಕೊಂಡುಕೊಳ್ಳಬಹುದು.

ಇನ್ನೂ ಒಂದು ಅತ್ಯುತ್ತಮ ಸೌಕರ್ಯ ಬೇಕೇ? ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ಓಟಿಜಿ ಬಳಸಿ ಇನ್ನೊಂದು ಫೋನ್ ಅಥವಾ ಯುಎಸ್‌ಬಿ ಮೂಲಕ ಚಾರ್ಜ್ ಆಗುವ ಯಾವುದೇ ಸಾಧನವನ್ನು ಚಾರ್ಜ್ ಮಾಡಬಹುದು! ಆದರೆ ಹೀಗೆ ಮಾಡುವಾಗ ಎಚ್ಚರವಿರಲಿ. ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನ ಬ್ಯಾಟರಿ ಶಕ್ತಿ ಎಷ್ಟು, ಚಾರ್ಜ್ ಮಾಡಬೇಕಾಗಿರುವ ಸಾಧನದ ಬ್ಯಾಟರಿ ಶಕ್ತಿ ಎಷ್ಟು ಎಂಬುದನ್ನೆಲ್ಲ ಗಮನದಲ್ಲಿಟ್ಟುಕೊಳ್ಳಬೇಕು. ನಿಜವಾದ ತುರ್ತು ಸಂದರ್ಭಗಳಲ್ಲಿ ಮಾತ್ರ ಹೀಗೆ ಮಾಡುವುದು ಒಳಿತು.

ವಾರದ ಆಪ್ (app)
ಸ್ವಚ್ಛ ಭಾರತ ಸ್ವಚ್ಛ ಬೆಂಗಳೂರು

ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿಸಲು ನಿಮಗೆ  Swachh Bharat Swachh Bengaluru ಕಿರುತಂತ್ರಾಂಶ ಅನುವು ಮಾಡಿಕೊಡುತ್ತದೆ. ಇದನ್ನು ನಿಮ್ಮ ಆಂಡ್ರಾಯಿಡ್ ಫೋನಿನಲ್ಲಿ ಹಾಕಿಕೊಂಡು ಬೆಂಗಳೂರಿನ ಯಾವುದೇ ಸ್ಥಳದಲ್ಲಿ ಕಸ ಕಂಡುಬಂದಲ್ಲಿ ಅದರ ಫೋಟೊ ತೆಗೆದು ಅಂತರಜಾಲಕ್ಕೆ ಸೇರಿಸಬಹುದು. ನಂತರ ನಗರಪಾಲಿಕೆಯವರು ಕಸ ಇರುವ ಸ್ಥಳವನ್ನು ಜಿಪಿಎಸ್ ನೀಡುವ ಅಕ್ಷಾಂಶ ರೇಖಾಂಶಗಳನ್ನು ಬಳಸಿ ವಿಳಾಸ ಪತ್ತೆ ಹಚ್ಚಿ ಅಲ್ಲಿಗೆ ಬಂದು ಕಸವನ್ನು ಖಾಲಿ ಮಾಡುತ್ತಾರೆ ಅಥವಾ ಹಾಗೆಂದು ನಂಬಲಾಗಿದೆ!

ಗ್ಯಾಜೆಟ್ ಸುದ್ದಿ
ವಿಕಿಪೀಡಿಯಕ್ಕೊಂದು ಸ್ಮಾರಕ

ತುಂಬ ಜನಪ್ರಿಯವಾಗಿರುವ ಸ್ವತಂತ್ರ ಮತ್ತು ಮುಕ್ತ ವಿಶ್ವಕೋಶ ವಿಕಿಪೀಡಿಯ ಗೊತ್ತು ತಾನೆ? ಇದು ಜನರಿಂದ ಜನರಿಗಾಗಿ ಜನರೇ ನಡೆಸುವ, ಎಲ್ಲರೂ ಸಂಪಾದಿಸಬಹುದಾದ ವಿಶ್ವಕೋಶ. ಇದರಿಂದ ಪ್ರಯೋಜನ ಪಡೆಯದವರೇ ಇಲ್ಲವೆನ್ನಬಹುದು. ಈ ವಿಕಿಪೀಡಿಯಕ್ಕೊಂದು ಸ್ಮಾರಕ ಮಾಡಿದರೆ ಒಳ್ಳೆಯದು ಎಂದು ಕೆಲವರಿಗೆ ಅನ್ನಿಸಿತು. ಅದರಂತೆ ಪೋಲಾಂಡ್ ದೇಶದ ನಗರವೊಂದರಲ್ಲಿ ವಿಕಿಪೀಡಿಯದ ಲಾಂಛನವಾದ ಗೋಳವನ್ನು ನಾಲ್ಕು ಜನ ಎತ್ತಿ ಹಿಡಿದಿರುವ ರೂಪದ ಸ್ಮಾರಕವೊಂದನ್ನು ತಯಾರಿಸಲಾಗಿದೆ. ಅಕ್ಟೋಬರ್ 22ಕ್ಕೆ ಇದನ್ನು ಲೋಕಾರ್ಪಣೆ ಮಾಡಲಾಗುವುದು.

ಗ್ಯಾಜೆಟ್ ತರ್ಲೆ
ಶೌಚಾಲಯದಲ್ಲಿ ಕುಳಿತುಕೊಂಡು ಪುಸ್ತಕ ಓದುವ ಅಭ್ಯಾಸ ಹಳೆಯದಾಯಿತು. ಈಗಿನ ಹವ್ಯಾಸವೆಂದರೆ ಅಲ್ಲಿಗೆ ಸ್ಮಾರ್ಟ್‌ಫೋನ್ ತೆಗೆದುಕೊಂಡು ಹೋಗುವುದು. ಅಂತಹವರ ಬಳಕೆಗಾಗಿ ಸ್ಮಾರ್ಟ್‌ಫೋನನ್ನು ಚಾರ್ಜ್ ಮಾಡಲು ಪ್ಲಗ್ ಪಾಯಿಂಟ್ ಇರುವಂತಹ ಕಮೋಡ್ ಕೂಡ ಬರಲಿದೆ!

ಗ್ಯಾಜೆಟ್ ಸಲಹೆ
ಸಾಯಿ ಲೀಲಾ ಅವರ ಪ್ರಶ್ನೆ: ಶಿಯೋಮಿ ಎಂಐ3 ಫೋನ್ ಬಗ್ಗೆ ನೀವು ಬರೆದಿದ್ದು ಓದಿದೆ. ಅದೇ ಕಂಪೆನಿಯ ರೆಡ್ಮಿ ವನ್ ಎಸ್ (Redmi 1S) ಫೋನ್ ಕೊಳ್ಳಬಹುದೇ?
ಉ: ಈತನಕ ಬಂದ ವಿಮರ್ಶೆಗಳ ಪ್ರಕಾರ ಅದು ಚೆನ್ನಾಗಿದೆ. ನನ್ನ ಕೆಲವು ಸ್ನೇಹಿತರಲ್ಲಿದೆ. ಎಲ್ಲರೂ ಒಳ್ಳೆಯ ಅಭಿಪ್ರಾಯ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT