ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲ 2 ಎಕ್ಸ್ 526 ತೃಪ್ತಿದಾಯಕ ಫೋನ್ ಇದು

Last Updated 6 ಜುಲೈ 2016, 19:30 IST
ಅಕ್ಷರ ಗಾತ್ರ

ಲಟಿವಿ (LeTV) ಎಂದು ಹೆಸರಿದ್ದು, ಇತ್ತೀಚೆಗೆ ಅದನ್ನು ಲ ಇಕೋ (LeEco) ಎಂದು ಬದಲಿಸಿಕೊಂಡ ಚೀನಾದ ಎಲೆಕ್ಟ್ರಾನಿಕ್ಸ್ ಕಂಪೆನಿ ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಕಾಲಿಟ್ಟಿದೆ. ಈ ಕಂಪೆನಿ ತನ್ನ ಹಲವು ಉತ್ಪನ್ನಗಳನ್ನು, ಅದರಲ್ಲೂ ಪ್ರಮುಖವಾಗಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಕಂಪೆನಿ ಕೂಡ ಇತರೆ ಕೆಲವು ಕಂಪೆನಿಗಳಂತೆ ಜಾಲಮಳಿಗೆಗಳ ಮೂಲಕ ತನ್ನ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿದೆ. ಈ ಕಂಪೆನಿಯ ಲ 1ಎಸ್ ಇಕೊ (Le 1S Eco) ಎಂಬ ಸ್ಮಾರ್ಟ್‌ಫೋನಿನ ವಿಮರ್ಶೆ ಇದೇ ಅಂಕಣದಲ್ಲಿ ಪ್ರಕಟವಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಲ2 ಎಕ್ಸ್ 526, Le 2 X526) ಎಂಬ ಸ್ಮಾರ್ಟ್‌ಫೋನನ್ನು.

ಗುಣವೈಶಿಷ್ಟ್ಯಗಳು
1.4 ಗಿಗಾಹರ್ಟ್ಸ್ ವೇಗದ 8 ಹೃದಯಗಳ ಪ್ರೊಸೆಸರ್ (Qualcomm Snapdragon 652), 3+32 ಗಿಗಾಬೈಟ್ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ ಇಲ್ಲ, ಎರಡು ನ್ಯಾನೊ ಸಿಮ್, 5.5 ಇಂಚು ಗಾತ್ರದ 1920x1080 ಪಿಕ್ಸೆಲ್ ರೆಸೊಲೂಶನ್‌ನ ಐಪಿಎಸ್ ಪರದೆ,

16 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 8 ಸ್ವಂತೀ ಕ್ಯಾಮೆರಾ, ಪ್ರಾಥಮಿಕ ಕ್ಯಾಮೆರಾಕ್ಕೆ ಫ್ಲಾಶ್, ಅವಕೆಂಪು (infrared) ದೂರನಿಯಂತ್ರಕ, ಬೆರಳಚ್ಚು ಸ್ಕ್ಯಾನರ್, ಆಂಡ್ರಾಯ್ಡ್‌ 6.0.1, 3000mAH ಬ್ಯಾಟರಿ, ಯುಎಸ್‌ಬಿ-ಸಿ ಟೈಪ್ ಕನೆಕ್ಟರ್, 151.1×74.2 ×7.5 ಮಿ.ಮೀ. ಗಾತ್ರ, 153 ಗ್ರಾಂ ತೂಕ, ಇತ್ಯಾದಿ. ಬೆಲೆ ₹11,999. ಸದ್ಯಕ್ಕೆ ಅಂತರಜಾಲದ ಮೂಲಕ ಮಾತ್ರ ಲಭ್ಯ.

ಇತ್ತೀಚೆಗೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಬಹುತೇಕ ಫೋನ್‌ಗಳು ಲೋಹದ ದೇಹವನ್ನು ಹೊಂದಿವೆ. ಈ ಫೋನೂ ಅದಕ್ಕೆ ಅಪವಾದವಲ್ಲ. ಇದರ ರಚನೆ ಮತ್ತು ವಿನ್ಯಾಸ ತುಂಬ ಚೆನ್ನಾಗಿದೆ. ಬಹುಮಟ್ಟಿಗೆ ಲ1ಎಸ್ ಫೋನಿನ ರಚನೆ ಮತ್ತು ವಿನ್ಯಾಸವನ್ನೇ ಹೋಲುತ್ತದೆ. ಹಿಂದುಗಡೆಯ ಕವಚ ತೆಗೆಯಲು ಸಾಧ್ಯವಿಲ್ಲ. ಅಂದರೆ ಬ್ಯಾಟರಿ ಬದಲಿಸಲು ಸಾಧ್ಯವಿಲ್ಲ. ಬಲಗಡೆ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಎಡಗಡೆ ಸಿಮ್ ಹಾಕಲು ಟ್ರೇ ಇದೆ. ಕೆಳಗಡೆ ಯುಎಸ್‌ಬಿ-ಸಿ ನಮೂನೆಯ ಕಿಂಡಿ ಇದೆ.

ಮುಂಭಾಗದಲ್ಲಿ ಕೆಳಗಡೆ ಮೂರು ಸಾಫ್ಟ್ ಬಟನ್‌ಗಳಿವೆ. ಅವು ಇವೆ ಎಂದು ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಅವುಗಳನ್ನು ಸವರಿದರೆ ಅವುಗಳ ಹಿಂಭಾಗದಿಂದ ಬೆಳಕು ಮೂಡಿ ಬಂದು ಬಟನ್‌ಗಳು ಇರುವುದು ಗೊತ್ತಾಗುತ್ತದೆ. ಇದರಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇಲ್ಲ. ಮೇಲ್ಭಾಗದಲ್ಲಿ ಅವಕೆಂಪು ದೂರನಿಯಂತ್ರಕದ ಕಿಟಕಿ ಇದೆ.

ಹಿಂಭಾಗದಲ್ಲಿ ಸ್ವಲ್ಪ ಮೇಲ್ಗಡೆ ಮಧ್ಯ ಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಹಿಂಭಾಗದ ಮಧ್ಯದಲ್ಲಿ ಬೆರಳಚ್ಚು ಸ್ಕ್ಯಾನರಿಗಿಂತ ಸ್ವಲ್ಪ ಮೇಲೆ ಕ್ಯಾಮೆರಾ ಇದೆ. ಕವಚ ತುಂಬ ನಯವಾಗಿಲ್ಲ. ಆದ್ದರಿಂದ ಕೈಯಿಂದ ಜಾರಿ ಬೀಳುವ ಭಯ ಅಷ್ಟಿಲ್ಲ. ಕೈಯಲ್ಲಿ ಹಿಡಿದಾಗ ಒಂದು ಮೇಲ್ದರ್ಜೆಯ ಫೋನನ್ನು ಹಿಡಿದ ಭಾವನೆ ಬರುತ್ತದೆ.

ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸಕ್ಕೆ ಪೂರ್ತಿ ಮಾರ್ಕು ನೀಡಬಹುದು. ಕೇವಲ ರಚನೆ ಮತ್ತು ವಿನ್ಯಾಸವನ್ನೇ ಗಮನಿಸುವವರಾದರೆ ಖಂಡಿತ ಈ ಫೋನ್ ಕೊಳ್ಳಬಹುದು.ಇದರ ಕೆಲಸದ ವೇಗ ಚೆನ್ನಾಗಿದೆ. ಕಡಿಮೆ ಬೆಲೆಯ ಫೋನ್ ಎಂದು ಅನ್ನಿಸುವುದಿಲ್ಲ.

ಎಂಟು ಹೃದಯಗಳ ಪ್ರೊಸೆಸರ್ ಮತ್ತು ಜೊತೆಗೆ ಗ್ರಾಫಿಕ್ಸ್ ಪ್ರೊಸೆಸರ್ ಇರುವುದು ಇದಕ್ಕೆ ಕಾರಣ. ಆಟಗಳನ್ನು ಆಡುವ ಅನುಭವ ಚೆನ್ನಾಗಿದೆ ಎನ್ನಬಹುದು. ಎಲ್ಲ ನಮೂನೆಯ ಆಟಗಳನ್ನೂ ತೃಪ್ತಿದಾಯಕವಾಗಿ ಆಡಬಹುದು. ಜೊತೆಗೆ ಎಲ್ಲ ಕೆಲಸಗಳನ್ನೂ ತೃಪ್ತಿದಾಯಕವಾಗಿ ಮಾಡಬಹುದು.

ಪರದೆಯ ವಿಷಯದಲ್ಲಿ ಇದು ಬಹುಮಟ್ಟಿಗೆ ಲ 1 ಎಸ್ ಮಾದರಿಯಲ್ಲೇ ಇದೆ. ವಿಡಿಯೊ ಪ್ಲೇ ಚೆನ್ನಾಗಿ ಆಗುತ್ತದೆ. ಎಲ್ಲ ನಮೂನೆಯ ವಿಡಿಯೊಗಳನ್ನು ತೃಪ್ತಿದಾಯಕವಾಗಿ ಪ್ಲೇ ಮಾಡಬಹುದು. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊಗಳೂ ಪ್ಲೇ ಆಗುತ್ತವೆ. ಪರದೆಯ ಗುಣಮಟ್ಟ ಚೆನ್ನಾಗಿದೆ. ಅಂದರೆ ಸಿನಿಮಾ ವೀಕ್ಷಿಸುವ ಅನುಭವ ಚೆನ್ನಾಗಿದೆ ಎನ್ನಬಹುದು.

ಅದರೂ ಇದರ ಪರದೆ ಅಮೋಲೆಡ್ ಅಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಇದರಲ್ಲಿರುವುದು 16 ಮೆಗಾಪಿಕ್ಸೆಲ್ ಕ್ಯಾಮೆರಾ. ಉತ್ತಮ ಬೆಳಕಿನಲ್ಲಿ ಫೋಟೊ ತೃಪ್ತಿದಾಯಕವಾಗಿ ಮೂಡಿಬರುತ್ತದೆ. ಅತಿ ಕಡಿಮೆ ಬೆಳಕಿನಲ್ಲಿ ಫೋಟೊ ಚೆನ್ನಾಗಿ ಮೂಡಿಬರುವುದಿಲ್ಲ. ಈ ಸಮಸ್ಯೆ ಬಹುತೇಕ ಎಲ್ಲ ಫೋನ್‌ಗಳ ಕ್ಯಾಮೆರಾಗಳಲ್ಲೂ ಇದೆ.

ಕ್ಯಾಮೆರಾದಲ್ಲಿ ಮ್ಯಾನ್ಯುವಲ್ ವಿಧಾನ ನೀಡಿಲ್ಲ. ಒಟ್ಟಿನಲ್ಲಿ ಕ್ಯಾಮೆರಾಕ್ಕೆ ಪಾಸು ಮಾರ್ಕು ನೀಡಬಹುದು. ಫೋನಿನ ಆಡಿಯೊ ಇಂಜಿನ್ ಚೆನ್ನಾಗಿದೆ. ಆಟ ಆಡುವಾಗ, ಸಂಗೀತ ಆಲಿಸುವಾಗ, ವಿಡಿಯೊ ನೋಡುವಾಗ, ಇತ್ಯಾದಿ ಕೆಲಸಗಳಲ್ಲಿ ಆಡಿಯೊ ತೃಪ್ತಿದಾಯಕವಾಗಿದೆ. ಈ ಫೋನಿನಲ್ಲಿ ಮಾಮೂಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇಲ್ಲ.

ಅದರ ಬದಲಿಗೆ ಯುಎಸ್‌ಬಿ-ಸಿ ಕಿಂಡಿಗೇ ಜೋಡಿಸಬಹುದಾದ ಸಿಡಿಎಲ್‌ಎ ಇಯರ್‌ಫೋನ್ ಇದೆ. ಈ ಸಿಡಿಎಲ್‌ಎ (CDLA - Continual Digital Lossless Audio) ಎಂಬುದು ಲ ಇಕೋ ಕಂಪೆನಿಯ ಆವಿಷ್ಕಾರ. ಇದು ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ಆಡಿಯೊವನ್ನು ಇಯರ್‌ಫೋನ್‌ಗಳಿಗೆ ತಲುಪಿಸುವ ವಿಧಾನ. ಹಾಗೆ ಮಾಡುವುದರಿಂದ ಧ್ವನಿಯ ಗುಣಮಟ್ಟ ಕೇಬಲ್ ಮೂಲಕ ಹೋಗುವಾಗ ಕುಸಿಯುವುದಿಲ್ಲ, ಈ ವಿಧಾನವನ್ನು ಬಳಸುವ ಇಯರ್‌ಫೋನ್‌ಗಳು ತುಂಬ ಇಲ್ಲ.

ಕಂಪೆನಿಯವರು ಫೋನ್ ಜೊತೆ ಒಂದು ಅಂತಹ ಇಯರ್‌ಫೋನ್ ನೀಡಿದ್ದಾರೆ. ಅದರ ಗುಣಮಟ್ಟ ತೃಪ್ತಿಕರವಾಗಿದೆ. ಮಾಮೂಲಿ 3.5 ಮಿ.ಮೀ. ಇಯರ್‌ಫೋನ್ ಬಳಸುವವರಿಗಾಗಿ ಅಡಾಪ್ಟರ್ ಕೊಟ್ಟಿದ್ದಾರೆ. ಆದರೆ ಅದರ ಮೂಲಕ ಜೋಡಿಸಿ ಆಲಿಸಿದರೆ ಧ್ವನಿಯ ಗುಣಮಟ್ಟ ಏನೇನೂ ಚೆನ್ನಾಗಿಲ್ಲ.

ಈ ಫೋನಿನಲ್ಲಿ ಕನ್ನಡದ ಸಂಪೂರ್ಣ ಬೆಂಬಲ ಇದೆ. ಅಂದರೆ ಕನ್ನಡದಲ್ಲೇ ಮೆನು, ಆದೇಶಗಳು (ಯೂಸರ್ ಇಂಟರ್‌ಫೇಸ್) ಇದೆ. ಒಟ್ಟಿನಲ್ಲಿ ನೀಡುವ ಹಣಕ್ಕೆ ಉತ್ತಮ ಫೋನ್ ಎನ್ನಬಹುದು. 

***
ವಾರದ ಆ್ಯಪ್
ರೈಲು ಬಿಡಿ!

ನಿಜವಾದ ಘಟನೆಗಳನ್ನು ಅನುಕರಿಸುವ ಹಲವು ಆಟಗಳು ಗಣಕ ಹಾಗೂ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಿವೆ. ಇಂತಹವುಗಳಿಗೆ simulation ಎಂಬ ಹೆಸರಿದೆ. ಭಾರತೀಯ ರೈಲುಗಳನ್ನು ಅನುಕರಿಸುವ ಆಟವೂ ಲಭ್ಯವಿದೆ. ಇದು ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Indian Train Simulator ಎಂದು ಹುಡುಕಬೇಕು. ಈ ಕಿರುತಂತ್ರಾಂಶ (ಆ್ಯಪ್) ತಯಾರಿಸಿದವರು ಈ ಮೊದಲು ಇಂತಹುದೇ ಕಿರುತಂತ್ರಾಂಶವನ್ನು ಯುರೋಪಿನ ರೈಲುಗಳನ್ನು ಅನುಕರಿಸಲು ತಯಾರಿಸಿದ್ದರು. ನಿಮಗೆ ರೈಲು ಪ್ರಯಾಣ ಇಷ್ಟವಿದ್ದಲ್ಲಿ, ರೈಲು ಬಿಡುವುದು(!) ಇಷ್ಟವಿದ್ದಲ್ಲಿ ಈ ಆಟ ನಿಮಗೆ ಇಷ್ಟವಾಗಬಹುದು. ಇದರ ಗ್ರಾಫಿಕ್ಸ್ ಚೆನ್ನಾಗಿದೆ.

***
ಗ್ಯಾಜೆಟ್‌ ಸುದ್ದಿ
ಧರಿಸಬಲ್ಲ ಸಬ್‌ವೂಫರ್

ಆಡಿಯೊ ಸಿಸ್ಟಮ್‌ಗಳಿಗೆ ಜೋಡಿಸುವ ಸ್ಪೀಕರುಗಳಲ್ಲಿ ಅತಿ ಕಡಿಮೆ ಕಂಪನಾಂಕದ ಧ್ವನಿಯನ್ನು (bass) ಪುನರುತ್ಪತ್ತಿ ಮಾಡುವ ಸ್ಪೀಕರಿಗೆ ಸಬ್‌ವೂಫರ್ ಎಂಬ ಹೆಸರಿದೆ.

ಇದು ಧಬ್ ಧಬ್ ಧ್ವನಿಯನ್ನು ಹೊರಡಿಸುತ್ತದೆ. ಸಾಮಾನ್ಯವಾಗಿ ಇದು ದೊಡ್ಡ ಪೆಟ್ಟಿಗೆಯಾಗಿದ್ದು ಒಂದು ಮೂಲೆಯಲ್ಲಿ ಇಡಲ್ಪಟ್ಟಿರುತ್ತದೆ. ಯಾಕೆಂದರೆ ಅದರಿಂದ ಹೊರಡುವ ಧ್ವನಿ ಯಾವ ದಿಕ್ಕಿನಿಂದ ಬರುತ್ತದೆ ಎಂದು ನಮ್ಮ ಕಿವಿ ಗುರುತಿಸುವುದಿಲ್ಲ.

ಕಿವಿ ಅದನ್ನು ಆಲಿಸುತ್ತದೆ. ಆದರೆ ಅದನ್ನು ನಮ್ಮ ದೇಹ ಅನುಭವಿಸುತ್ತದೆ. ಹೆಡ್‌ಫೋನ್ ಮೂಲಕ ಸಂಗೀತವನ್ನು ಆಲಿಸುವಾಗ ಈ ಸಬ್‌ ವೂಫರ್‌ನ ಪೂರ್ತಿ ಪರಿಣಾಮ ಉಂಟಾಗುವುದಿಲ್ಲ. ಅದರಲ್ಲೂ ಮುಖ್ಯವಾಗಿ ಧ್ವನಿಯನ್ನು ನಮ್ಮ ದೇಹ ಅನುಭವಿಸುವುದಿಲ್ಲ. ಈಗ ಈ ಸಮಸ್ಯೆಗೆ ಪರಿಹಾರ ರೂಪವಾಗಿ ವಾಚಿನ ಮಾದರಿಯಲ್ಲಿ ಕೈಗೆ ಕಟ್ಟಿಕೊಳ್ಳಬಲ್ಲ ಸಬ್‌ವೂಫರ್ ಬಂದಿದೆ. ಅದಕ್ಕೆ ಬೇಸ್‌ಲೆಟ್ ಎಂದು ಹೆಸರಿಡಲಾಗಿದೆ. ಅದನ್ನು ನಿಮ್ಮ ಫೋನಿಗೆ ಜೋಡಿಸಿ ಹೆಡ್‌ಫೋನ್ ಜೊತೆ ಬಳಸಿದರೆ ಈ ಬೇಸ್‌ಲೆಟ್‌ ಕಂಪಿಸಿ ದೇಹದ ಮೂಲಕ ಸಬ್‌ವೂಫರ್‌ ಬಳಸಿದಾಗ ಆಗುವಂತೆ ದೇಹವೂ ಧ್ವನಿಯನ್ನು ಅನುಭವಿಸುತ್ತದೆ.

***
ಗ್ಯಾಜೆಟ್‌ ಸಲಹೆ
ರುದ್ರೇಶ ಬಿಲ್ಲ ಅವರ ಪ್ರಶ್ನೆ:
ಒಪ್ಪೊ ಎಫ್ 1 ಪ್ಲಸ್, ಒನ್‌ಪ್ಲಸ್ 3 ಮತ್ತು ಲ2 –ಇವುಗಳಲ್ಲಿ ಯಾವುದರ ಕ್ಯಾಮೆರಾ ಉತ್ತಮ?
ಉ:  ಒಪ್ಪೊ ಎಫ್ 1 ಪ್ಲಸ್ ನಾನು ನೋಡಿಲ್ಲ. ಒನ್‌ಪ್ಲಸ್ 3 ಮತ್ತು ಲ 2 –ಇವುಗಳ ಕ್ಯಾಮೆರಾಗಳನ್ನು ಹೋಲಿಸಿದರೆ  ಒನ್‌ಪ್ಲಸ್ 3 ಕ್ಯಾಮೆರಾ ಉತ್ತಮ.

***
ಗ್ಯಾಜೆಟ್‌ ತರ್ಲೆ

ಹೆಲ್ಮೆಟ್ ಕಳ್ಳತನ, ಛತ್ರಿ ಕಳ್ಳತನ, ಪಾಕೆಟ್ ಕಳ್ಳತನ, ಕೃತಿಚೌರ್ಯ ಎಲ್ಲ ಗೊತ್ತಿರಬಹುದು. ಇತ್ತೀಚಿಗೆ ಸುದ್ದಿಯಲ್ಲಿರುವುದು ಫೇಸ್‌ಬುಕ್ ಸ್ಟೇಟಸ್ ಕದಿಯುವುದು. ಒಬ್ಬರು ಹಾಕಿದ ಸ್ಟೇಟಸ್ ಅನ್ನು ನಕಲಿಸಿ ಅದು ತನ್ನದೇ ಎಂಬಂತೆ ತನ್ನ ಗೋಡೆಗೆ ಅಂಟಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT