ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತ್ಯ ಮತ್ತು ಜಾತಿ ವಿರೋಧ

Last Updated 14 ಮಾರ್ಚ್ 2013, 19:59 IST
ಅಕ್ಷರ ಗಾತ್ರ

 ಇತ್ತೀಚೆಗೆ ಸಂಶೋಧಕ ವಿದ್ವಾಂಸರಾದ ಡಂಕಿನ್ ಝಳಕಿಯವರು ನನಗೆ ಎರಡು ಬರಹಗಳನ್ನು ಇಮೇಲ್ ಮೂಲಕ ಕಳಿಸಿದರು. ಮೊದಲನೆಯದು ಬಾಲಗಂಗಾಧರರ ಜೊತೆಗೆ ಅವರು ಬರೆದ `ವಚನಕಾರರು ಮತ್ತು ಜಾತಿ' ಕುರಿತ ಲೇಖನ. ಈ ವಿಷಯದಲ್ಲಿ  ತಾವು ಒಂದು ಮಹಾಪ್ರಬಂಧವನ್ನು ಬರೆದಿರುವುದಾಗಿಯೂ ನನಗೆ ತಿಳಿಸಿದ್ದರು.

ಅವರು ಕಳುಹಿಸಿದ ಮೊದಲ ಲೇಖನ ನನ್ನ ಆಸಕ್ತಿಯನ್ನು ಕೆರಳಿಸಿದ ಕಾರಣ ಅವರ ಮಹಾಪ್ರಬಂಧವನ್ನೂ ನನಗೆ ಕಳಿಸಬೇಕೆಂದು ಅವರಲ್ಲಿ ಮನವಿ ಮಾಡಿಕೊಂಡೆ. ಆ ಪ್ರಕಾರವಾಗಿ ಅವರು ನನಗದನ್ನು ಕಳಿಸಿ ಉಪಕಾರ ಮಾಡಿದ್ದಾರೆ. ಯಾಕೆಂದರೆ ಈ ಎರಡು ಬರಹಗಳು ನನ್ನನ್ನು ವಚನಕಾರರ ಬಗೆಗಿನ ತಿಳಿವಳಿಕೆಯ ಬಗ್ಗೆ ಮರುಚಿಂತನೆಗೆ ಪ್ರೇರೇಪಿಸಿವೆ.

ನಿಂತ ನೀರಾಗಿರುವ ಕನ್ನಡದ ವಿದ್ವತ್ ಪ್ರಪಂಚದಲ್ಲಿ ಪರ, ವಿರೋಧಿ ಹೇಳಿಕೆಗಳು, ಹುನ್ನಾರಗಳು ತಾಂಡವವಾಡುತ್ತಿದ್ದು ಅಸಹನೆಯ ಸಂಸ್ಕೃತಿ ಹರಡುತ್ತಿರುವ ಸನ್ನಿವೇಶದಲ್ಲಿ ಸಂಘರ್ಷಾತ್ಮಕತೆಯನ್ನು ಸಂವಾದಾತ್ಮಕ ಸಂಸ್ಕೃತಿಯನ್ನಾಗಿ ಮಾರ್ಪಡಿಸುವ ಜವಾಬುದಾರಿ ನಮ್ಮೆಲ್ಲರ ಮೇಲಿರುವುದರಿಂದ ವಚನಕಾರರ ಬಗ್ಗೆ ಡಂಕಿನ್‌ರಂಥ ವಿದ್ವಾಂಸರು ನೀಡಿರುವ ಸಿದ್ಧ ಸಂಪ್ರದಾಯ ವಿರೋಧಿ ನಿಲುವುಗಳನ್ನು, ವಿಚಾರಗಳನ್ನು ಮರುಚಿಂತನೆಯ ಪ್ರೇರಣೆಯಾಗಿ ನೋಡಬೇಕಾದ ಅಗತ್ಯವಿದೆ.

ಈ ಹಿಂದೆ ವಚನಪರಂಪರೆಯ ಬಗ್ಗೆ ಒಪ್ಪಿತವಾದ ವಿಚಾರಗಳಿಗೆ ಭಿನ್ನವಾದ ಸೃಜನಶೀಲ ಅಥವಾ ವೈಚಾರಿಕ ಅಭಿವ್ಯಕ್ತಿಗಳು ಬಂದಾಗ ತಮ್ಮ ಸ್ವೀಕೃತ ವಿಶ್ವಾಸಗಳನ್ನು ಅಲ್ಲಾಡಿಸಿದ ಕಾರಣದಿಂದ ಅಸಹನೆಯಿಂದ ಪ್ರತಿಕ್ರಿಯಿಸಿದ ಉದಾಹರಣೆಗಳು ನಮ್ಮ ಮುಂದಿವೆ. ನನ್ನ  `ಮಹಾಚೈತ್ರ' ದ ಬಗ್ಗೆ ನಾಡಿನಾದ್ಯಂತ ಬಿರುಗಾಳಿಯಂತೆ ಎರಡು ವರ್ಷಕಾಲ ಹಬ್ಬಿದ ವಿವಾದ ಇದಕ್ಕೊಂದು ಉದಾಹರಣೆ. ಇದೇ ರೀತಿ ಪಿ. ವಿ. ನಾರಾಯಣರ `ಧರ್ಮಕಾರಣ' ದ ಬಗ್ಗೆ, ಕಲ್ಬುರ್ಗಿಯವರ `ಮಾರ್ಗ'ದ ಬಗ್ಗೆ, ಬಂಜಗೆರೆ ಜಯಪ್ರಕಾಶರ `ಆನು ಹೊರಗಿನವನು' ಬಗ್ಗೆ ವಿವಾದಗಳೆದ್ದು ಕೆಲವು ಸಲ ಅಂಥಾ ಪುಸ್ತಕಗಳನ್ನು ಬ್ಯಾನ್ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ನನ್ನ ಪ್ರಕಾರ ಅಸಹನೆಯ ಪ್ರತಿಕ್ರಿಯೆಗಳು ನಮ್ಮ ವೈಚಾರಿಕ ದೌರ್ಬಲ್ಯ ಮೂಲವಾದವು.

ಪ್ರಜಾಸತ್ತಾತ್ಮಕ ಸಂದರ್ಭದಲ್ಲಿ ನಮಗೊಪ್ಪಿತವಾಗದ ವಿಚಾರಗಳ ಬಗ್ಗೆ ಆರೋಗ್ಯಪೂರ್ಣ ಸಂವಾದ ನಡೆಯುವುದು ನಮ್ಮೆಲ್ಲರ ವೈಚಾರಿಕ ಬೆಳವಣಿಗೆಗೆ ಅಗತ್ಯ. ಅಂದ ಮಾತ್ರಕ್ಕೆ ಮೇಲೆ ಹೇಳಿದ ಕೃತಿಗಳ ತೀರ್ಮಾನಗಳನ್ನು ನಾವು ಒಪ್ಪಬೇಕೆಂದೂ ಅಲ್ಲ. ಪರಸ್ಪರ ಭಿನ್ನವಾದ ವಿಚಾರಗಳ ಕೂಡುಬಾಳು ವಿಚಾರಗಳ ವಿಕಾಸಕ್ಕೆ ಅಗತ್ಯ. ಸಂವಾದಗಳ ಸಂಸ್ಕೃತಿ ವಿಚಾರವಂತಿಕೆಯನ್ನು ಜಾಗೃತವಾಗಿರಿಸುತ್ತದೆ. ವಚನಗಳ ಬಗ್ಗೆ ನಮ್ಮ ಅಭಿಪ್ರಾಯಗಳೇನೇ ಇದ್ದರೂ ವಚನಗಳ ತಾಖತ್ತಿರುವುದು ಅವುಗಳ ಸಂವಾದಾತ್ಮಕತೆಯಲ್ಲೇ. ಆದ್ದರಿಂದಲೇ ಅವು ಇಂದಿಗೂ ಸಂವಾದಗಳನ್ನು ಹೊಸಹೊಸತಾಗಿ ಹುಟ್ಟುಹಾಕುತ್ತಿರುವುದು.

ವಿದ್ವತ್ಪೂರ್ಣವಾದ  ಗ್ರಂಥಋಣ, ವಿಪುಲವಾದ ಅಡಿಟಿಪ್ಪಣಿಗಳಿಂದ ತುಂಬಿರುವ ಝಳಕಿಯವರ ಅನುಮಾನ, ತೀರ್ಮಾನಗಳ ಜೊತೆಗೆ ಸಂವಾದಕ್ಕಿಳಿಯಬೇಕಾದವರು ನಾಡಿನ ಹಿರಿಯ ವಚನತಜ್ಞರಾದ ಚಿದಾನಂದಮೂರ್ತಿ, ಎಂ ಎಂ ಕಲ್ಬುರ್ಗಿ, ವಿದ್ಯಾಶಂಕರ್, ಮನಜ, ಕೆ ಜಿ ನಾಗರಾಜಪ್ಪ ಮುಂತಾದವರು.

ಝಳಕಿಯವರ ಮಹಾಪ್ರಬಂಧ ಎತ್ತಿರುವ ಪ್ರಶ್ನೆಗಳನ್ನು ಈ ಹಿಂದೆಯೇ ಪ್ರಸಿದ್ಧ ವಿದ್ವಾಂಸರಾದ ಬಾಲಗಂಗಾಧರ ಅವರು ಹಲವು ವೇದಿಕೆಗಳಲ್ಲಿ ಎತ್ತಿದ್ದಾರೆ. ಈ ಬಗ್ಗೆ ಅಸಮಾಧಾನವನ್ನು ಪಿಸುಮಾತುಗಳಲ್ಲಿ, ಬೈಗುಳಗಳಲ್ಲಿ ಹಲವು ಹಿರಿಯ ಕಿರಿಯ ವಿದ್ವಾಂಸರು ನನ್ನ ಮುಂದೆ ವ್ಯಕ್ತಪಡಿಸಿದ್ದಾರೆಯೇ ಹೊರತು ವಿದ್ವತ್ಪೂರ್ಣ ಚರ್ಚೆಗೆ ಇಳಿದಿಲ್ಲವೆನ್ನುವುದು ನಮ್ಮ ವಿದ್ವತ್ತಿನ ಕೊರತೆಯನ್ನು ಸಾರಿಹೇಳುತ್ತದೆ. ವಚನತಜ್ಞನಲ್ಲದೆ ಕೇವಲ ವಚನಕುತೂಹಲಿಯಾಗಿರುವ ನನ್ನಂಥವರು ಯಾಕೆ ಚರ್ಚೆಗಿಳಿಯಬೇಕು? ಪಂಡಿತರು ಮೌನವಾದಾಗ ನನ್ನಂಥ ಪಾಮರರು ಬಾಯಿದೆರೆಯಬೇಕಾಗುತ್ತದೆ.

ಇಡೀ ಇತಿಹಾಸದ ಮರುಚಿಂತನೆಯ ಭಾಗವಾಗಿರುವ ಬಾಲಗಂಗಾಧರ ಮತ್ತು ಝಳಕಿಯವರ ವಚನ ಕುರಿತ ವಿಮರ್ಶೆಯನ್ನು ಹೀಗೆ ಸಂಗ್ರಹಿಸಬಹುದೆಂದು ನನಗೆ ತೋರುತ್ತದೆ:

ವಚನಗಳು ಜಾತಿಪದ್ಧತಿ, ಬ್ರಾಹ್ಮಣವಿರೋಧಿ ಚಳವಳಿಯ ಅಭಿವ್ಯಕ್ತಿಗಳೆಂದು ಹೇಳಲು ವಚನಗಳಲ್ಲಿಯೇ ಆಧಾರವಿಲ್ಲ. ಯಾಕೆಂದರೆ ವೈದಿಕ ವಿರೋಧಿ, ಕೆಳಜಾತಿ ಪರ, ಸ್ತ್ರೀಪರ ಪುರೋಗಾಮಿ ಭಕ್ತಿ ಚಳವಳಿಗಳ ಅಂಗವಾಗಿ ಹನ್ನೆರಡನೆ ಶತಮಾನದಲ್ಲಿ ವಚನಚಳವಳಿಯೊಂದು ನಡೆಯಿತೆಂಬ ಗ್ರಹಿಕೆಯೇ ವಸಾಹತುಶಾಹಿ ಸಂದರ್ಭದಲ್ಲಿ ಆಧುನಿಕ ವೀರಶೈವ ಸಮುದಾಯದವರು ತಮ್ಮ ಮೇಲುಚಲನೆಗಾಗಿ ಕಲ್ಪಿಸಿಕೊಂಡ ಒಂದು ಮಿಥ್ಯ ಕಲ್ಪನೆ.

ವಚನಗಳಲ್ಲಿ ಎಲ್ಲವನ್ನೂ ಕಾಣುವ, ನಮ್ಮ ಯುಗದ ದಂದುಗಗಳಲ್ಲಿ ವಚನಗಳಲ್ಲಿ ಅಂತಿಮವಾದ ಪರಿಹಾರಗಳನ್ನರಸುವ ಪ್ರವೃತ್ತಿ ಹಲವು ವಚನಪಂಡಿತರಲ್ಲಿ ವ್ಯಾಪಕವಾಗಿದೆ. ಬಸವಣ್ಣನಲ್ಲಿ ಕಾರ್ಲ್‌ಮಾರ್ಕ್ಸ್‌ನನ್ನೂ, ಅಲ್ಲಮನಲ್ಲಿ ಡೆರಿಡಾದಿಗಳನ್ನೂ, ಅಕ್ಕನಲ್ಲಿ ಸ್ತ್ರೀವಾದವನ್ನೂ, ದಲಿತ ವಚನಕಾರರಲ್ಲಿ ಅಂಬೇಡ್ಕರರನ್ನೂ ಗುರುತಿಸುವ ಅಪ್ರಬುದ್ಧ ವಿದ್ವತ್ತಿಗೆ; ಹಲದನಿಗಳ ಸಂವಾದಾತ್ಮಕ ವಚನವಾಙ್ಮಯದಲ್ಲಿ ಆಖೈರಾದ ಸಿದ್ಧಾಂತ, ಸಂಹಿತೆ, ಸಂವಿಧಾನಗಳನ್ನಾರೋಪಿಸುವ ಆತುರದ ನಿರರ್ಥಕ ಪಾಂಡಿತ್ಯಕ್ಕೂ ಸವಾಲೆಸೆದಿರುವುದರಿಂದ ಬಾಲಗಂಗಾಧರ ಪ್ರೇರಿತ ಚಿಂತಕರು ನಿಜಕ್ಕೂ ಅಭಿನಂದನಾರ್ಹರು. ವಸಾಹತುಶಾಹಿ ಒತ್ತಡಗಳು ನಮ್ಮ ಸ್ವಂತ ಇತಿಹಾಸಗ್ರಹಣಕ್ರಮವನ್ನು ಸಂಕೀರ್ಣ ಬಗೆಗಳಲ್ಲಿ ಪ್ರಭಾವಿಸಿತೆನ್ನುವ ವಾದವನ್ನೂ ತಳ್ಳಿಹಾಕಲಾಗದು. ಈ ಬಗೆಗೆ ವಿಸ್ತಾರ ಚಚೆಗೆ ತೊಡಗದೆ ವಚನಕಾರರ ಕುರಿತ ಝಳಕಿಯವರ ತೀರ್ಮಾನಗಳನ್ನು ಕುರಿತ ನನ್ನ ನಮ್ರ ಪ್ರತಿಕ್ರಿಯೆಗಳನ್ನು ಮಾತ್ರ ಇಲ್ಲಿ ದಾಖಲಿಸುತ್ತೇನೆ.

ವಚನಕಾರರಿಗೆ ಜಾತಿನಿರ್ಮೂಲನದ ಕಾರ್ಯಪ್ರಣಾಳಿ ಮುಖ್ಯವಾಗಿತ್ತೆಂದು ನಾನೂ ವಾದಿಸುತ್ತಿಲ್ಲ. ಹಾಗೆ ಹೇಳಲು ಹಲವರು ಆಶ್ರಯಿಸಿರುವ ಹರಳಯ್ಯ-ಮಧುವಯ್ಯಗಳ ಮನೆತನಗಳ ಪ್ರತಿಲೋಮ ವಿವಾಹ ಪ್ರಸಂಗಕ್ಕೆ ಇತಿಹಾಸದಲ್ಲಾಗಲಿ, ವಚನಗಳಲ್ಲಾಗಲಿ ದಾಖಲೆಗಳಿಲ್ಲ. ವಚನಕಾರರ ಕುರಿತ ಶಿಷ್ಟ ಹಾಗೂ ಜನಪದ ಕಾವ್ಯಗಳಲ್ಲಿ ಈ ಘಟನೆಗೆ ಒತ್ತು ದೊರಕಿದ್ದು. ಆದರೆ ಮುಖ್ಯವಾದದ್ದು ವಚನಕಾರರು ಜಾತಿಯ ಪರ ಅಥವಾ ವಿರೋಧವಾಗಿದ್ದರೆ ಎಂಬ ಪ್ರಶ್ನೆ. ವಿರೋಧವಾಗಿರಲಿಲ್ಲ ಎಂಬುದಕ್ಕೆ ಝಳಕಿಯವರು ಒದಗಿಸಿರುವ ಮುಖ್ಯ ಆಧಾರ ವಚನಗಳಲ್ಲಿರುವ ಜಾತಿಸಂಬಂಧಿತ ವಚನಗಳ ಕುರಿತ ಅಂಕಿ-ಅಂಶ.


ಕಲ್ಬುರ್ಗಿಯವರ ಸಂಪಾದನೆಯ `ಸಮಗ್ರ ವಚನಸಂಪುಟ'ದಲ್ಲಿ ಸೇರ್ಪಡೆಯಾಗಿರುವ 20000ಕ್ಕೂ ಹೆಚ್ಚು ವಚನಗಳಲ್ಲಿ ಶೇಕಡಾ ಸುಮಾರು ಮೂರು ವಚನಗಳು ಜಾತಿವಿಷಯಕವಾಗಿಯೂ ಶೇಕಡಾ ಒಂದೂವರೆಯಷ್ಟು ವಚನಗಳು ಬ್ರಾಹ್ಮಣವಿಷಯಕವಾಗಿಯೂ ಇರುವುದರಿಂದ ಜಾತಿ ಮತ್ತು ಬ್ರಾಹ್ಮಣ ವಿರೋಧ ವಚನಕಾರರ ಮೂಲೋದ್ದೇಶವಾಗಿರಲು ಸಾಧ್ಯವಿಲ್ಲ ಎಂದು ಅವರು ವಾದಿಸುತ್ತಾರೆ. ಜೊತೆಗೆ ಜಾತಿ ಮತ್ತು ಬ್ರಾಹ್ಮಣರ ಪ್ರಸ್ತಾಪವಿರುವ ವಚನಗಳ ಇಂಗಿತ ಜಾತಿ ಶೋಷಣೆಯ ಅಥವಾ ಬಾಹ್ಮಣರ ಬಗೆಗಿನ ಟೀಕೆಯೆಂದು ಬಗೆಯಲಾರದೆಂದೂ ತರ್ಕಿಸಿದ್ದಾರೆ.

ಜಾತಿ ವಿರೋಧ ವಚನಕಾರರ ಏಕಮೇವ ಮಹದೋದ್ದೇಶವೆಂದು ಹೇಳಲಾಗದಿದ್ದರೂ ವಚನಕಾರರು ಜಾತಿಯ ಬಗ್ಗೆ ತಮ್ಮ ಸಿಟ್ಟು, ಅಸಮಾಧಾನ ಮತ್ತು ಕೊರಗುಗಳನ್ನು ಹೇಳಿದ್ದಾರೆಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ವಚನಗಳಲ್ಲಿ ತೋರಿಸಬಹುದು. ಅವುಗಳ ಸಂಖ್ಯೆ ವಿರಳವೆಂಬುದು ಅವುಗಳ ಪ್ರಾಮುಖ್ಯವನ್ನು ಕುಂದಿಸುವುದಿಲ್ಲ. ಅಥವಾ ವಚನಕಾರರು ಅಧಿಕ ಸಂಖ್ಯೆಯ ವಚನಗಳಲ್ಲಿ ಜಾತಿಜಗಳಕ್ಕೆ ತೊಡಗಿಲ್ಲವೆಂದ ಮಾತ್ರಕ್ಕೇ ಅವರಿಗೆ ಆ ಬಗ್ಗೆ ಕಾಳಜಿಯೇ ಇರಲಿಲ್ಲವೆನ್ನುವುದೂ ಸರಿಯಲ್ಲ.

ಈ ತೆರನ ವಾದವನ್ನು ಮುಂದುವರಿಸಿದರೆ ಹೀಗೆ ಹೇಳಿಬಿಡಬಹುದು:  ಅಡಿಗರ ಕಾವ್ಯದ್ಲ್ಲಲಿ ಕನ್ನಡವೆಂಬ ಪದ ಬಹಳ ಕಡಿಮೆ ಬರುವುದರಿಂದ ಅಡಿಗರು ಕನ್ನಡದ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ; ಅಥವಾ ಝಳಕಿಯವರ ಲೇಖನದಲ್ಲಿ ಸತ್ಯವೆಂಬ ಪದ ಬಂದಿರದ ಕಾರಣ ಅವರು ಸತ್ಯದ ಬಗ್ಗೆ ಯೋಚಿಸಿಯೇ ಇಲ್ಲ.  ಅಥವಾ ವಿತಂಡವಾದಕ್ಕಿಳಿಯಬೇಕೆಂದರೆ ಹೀಗೂ ಹೇಳಿಬಿಡಬಹುದು - ವಚನಕಾರರು ಜಾತಿ ಪರವಾಗಿಲ್ಲದ ಕಾರಣ ಜಾತಿಯ ಬಗ್ಗೆ ಹೆಚ್ಚು ಮಾತಾಡಿಲ್ಲ.

ಆದ್ದರಿಂದ ಜಾತಿ ಸಂಬಂಧಿತವಾದ ವಚನಗಳ ಸಂಖ್ಯೆಯ ಕೊರತೆ ವಚನಕಾರರು ಜಾತಿಯ ಬಗ್ಗೆ ಕಾಳಜಿ ವಹಿಸಲಿಲ್ಲವೆಂಬ ತೀರ್ಮಾನಕ್ಕೆ ಅಂತಿಮ ಪುರಾವೆಯೆಂಬ ಮಾತನ್ನು ಬದಿಗೊತ್ತಿ ವಚನಕಾರರು ಜಾತಿಯ ಬಗ್ಗೆ ತಳೆದ ನಿಲುವೇನೆಂಬುದರ ಕಡೆಗೆ ಗಮನ ಹರಿಸಿದಾಗ ನನಗೆ ಮೊದಲ ವಚನಕಾರ ಮಾದಾರ ಚನ್ನಯ್ಯನ ಈ ವಚನ ನೆನಪಾಗುತ್ತಿದೆ:

ನಡೆ - ನುಡಿ ಸಿದ್ಧಾಂತವಾದಲ್ಲಿ ಕುಲಹೊಲ ಸೂತಕವಿಲ್ಲ
ನುಡಿ ಲೇಸು ನಡೆ ಅಧಮವಾದಲ್ಲಿ ಅದೆ ಬಿಡುಗಡೆಯಿಲ್ಲದ ಹೊಲೆ
ಕಳಪಾರದ್ವಾರಂಗಳಲ್ಲಿ ಹೊಲಬನರಿಯದೆ
ಕೆಟ್ಟುನಡೆವುತ್ತ ಮತ್ತೆ ಕುಲಜರೆಂಬ ಒಡಲವರುಂಟೆ?
ಆಚಾರವೆ ಕುಲ, ಅನಾಚಾರವೆ ಹೊಲೆ
ಇಂತೀ ಉಭಯವ ತಿಳಿದರಿಯಬೇಕು
ಕೈ ಉಳಿಕತ್ತಿ ಅಡಿಗುಂಟೆಗಡಿಯಾಗ ಬೇಡ, ಅರಿ ನಿಜಾತ್ಮರಾಮರಾಮನಾ


ಕೆಲವು  ವೃತ್ತಿಗಳು ಮೇಲೆಂದೂ ಕೆಲವು ಕೀಳೆಂದೂ ನಂಬಿರುವ ಸಮಾಜದಲ್ಲಿ ಮೇಲುಕೀಳುಗಳನ್ನು ಹುಟ್ಟಿನಿಂದ ವೃತ್ತಿಯಿಂದ ಬೇರ್ಪಡಿಸಿ ಆಚಾರದವರೇ ಕುಲದಲ್ಲಿ ಶ್ರೇಷ್ಠರಾದವರಿಗಿಂತ ಮೇಲೆಂದು ಹೇಳುವುದಲ್ಲದೆ, ತನ್ನ ಕಸುಬಿನ ಸಂಕೇತಗಳಾದ ಕೈ ಉಳಿಗತ್ತಿ ಇತ್ಯಾದಿಗಳಿಗೆ ಅಡಿಯಾಳಾಗದೆ ಬಾಳಬೇಕೆಂದು ಚನ್ನಯ್ಯ ಹೇಳುತ್ತಿದ್ದಾನೆ. ಬಹುತೇಕ ಭಕ್ತಿ ಪಂಥಗಳವರಂತೆ ಶರಣರೂ ತಮ್ಮ ಪಂಥದಲ್ಲಿ ದೀಕ್ಷಿತರಾದವರನ್ನು ಸಮಾನರೆಂದು ಭಾವಿಸಿದ್ದಕ್ಕೆ ಇದೊಂದು ಉದಾಹರಣೆ. ಮೇಲು ಕೀಳಿನ ಸಮಾಜದಲ್ಲಿ ದೀಕ್ಷೆ ಮತ್ತು ಪಂಥದ ಆಚಾರಗಳ ಮೂಲಕ ಎಲ್ಲರೂ ಸಮಾನರೆಂದು ಹೇಳಿದ್ದು ಇಪ್ಪತ್ತನೇ ಶತಮಾನದ ಜಾತಿವಿನಾಶಕ ಪ್ರಣಾಳಿಕೆಯ ಹಿಂದುವರಿಕೆಯಲ್ಲ, ನಿಜ. ಆದರೆ ಒಪ್ಪಿತವಾದ ಶ್ರೇಣಿ ಕಲ್ಪನೆಗೆ ಇದು ವಿರುದ್ಧವಾಗಿದೆ. ಆದ್ದರಿಂದ ವಚನಕಾರರು ಜಾತಿಯ ಬಗ್ಗೆ ಏನೂ ಹೇಳಲಿಲ್ಲವೆಂದಾಗಲಿ ಅದನ್ನು ಒಪ್ಪಿದ್ದರೆಂದಾಗಲಿ ಹೇಳಲು ಬರುವುದಿಲ್ಲ. ಕೆಲವು ವಚನಗಳಲ್ಲಿ ವಚನಕಾರರು ಜಾತಿಸೂಚಕ ಪದಗಳನ್ನು ಬೈಗುಳವಾಗಿ ಬಳಸಿರುವುದು ನಿಜವಾದರೂ ಇದು ಅವರು ಬಳಸಿರುವ ಭಾಷೆಯಲ್ಲಡಗಿರುವ ದೋಷವೇ ಹೊರತು ಚಿಂತನೆಯ ಅಂಶವೆಂದು ಹೇಳಬರುವುದಿಲ್ಲ.

ಇಲ್ಲಿ  ಒಂದು ಆಕ್ಷೇಪಣೆ ಎತ್ತಬಹುದು. ಜಾತಿಗೆ ಬದಲಾಗಿ ಇ್ಲ್ಲಲಿ ಕುಲ ಪದ ಬಳಕೆಯಾಗಿದೆ, ಜಾತಿ ಬೇರೆ ಕುಲ ಬೇರೆ ಎಂದು. ಆದರೆ ಕನ್ನಡ ಭಾಷೆಯಲ್ಲಿ ಮತ್ತು ಸಾಹಿತ್ಯದಲ್ಲಿ ಕುಲ, ಜಾತಿ, ಮತ ಎಂಬ ಪದಗಳು ಬಹುತೇಕ ಸಮಾನಾರ್ಥಕವಾಗಿ ಬಳೆಕೆಯಾಗುತ್ತಾ ಬಂದಿವೆ. ಆದ್ದರಿಂದ 'ಕುಲವೇನೋ ಅವಂದಿರ ಕುಲವೇನೋ?' ಎಂದು ಬಸವಣ್ಣ ಕೇಳಿದಾಗ 'ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ?'ಎಂದು ಸರ್ವಜ್ಞ ನುಡಿದಾಗ 'ಕುಲಕುಲವುಲವೆಂದು ಹೊಡೆದಾಡದಿರೆ'ಂದು ಕನಕದಾಸ ಅರುಹಿದಾಗ ಅವರೆಲ್ಲರೂ ಸಾಮಾಜಿಕ ಅಸಮಾನತೆಯನ್ನೇ ನಿರ್ದೇಶಿಸಿದರೆಂಬುದು ಸ್ಪಷ್ಟ.

ಇನ್ನು ಝಳಕಿಯವರ ಇನ್ನೊಂದು ಮುಖ್ಯ ವಾದವನ್ನು ಸಂಕ್ಷಿಪ್ತವಾಗಿ ಚರ್ಚಿಸಬಹುದು. ವಚನಗಳು ಜಾತಿವಿರೋಧಿಯಾಗಿದ್ದವೆಂಬ ತೀರ್ಮಾನ ವಸಾಹತುಶಾಹಿ ಒತ್ತಡಗಳ ಸಂದರ್ಭದಲ್ಲಿ ಆಧುನಿಕ ವೀರಶೈವರು ತಮ್ಮ ಜಾತಿಯ ಮೇಲುಚಲನೆಗಾಗಿ ಹುಟ್ಟುಹಾಕಿದರೆಂಬ ವಾದ ಪೂರ್ಣ ಸತ್ಯವಲ್ಲ. ಅಥವಾ ಅದಕ್ಕೆ ಪೂರ್ವದಲ್ಲಿ ಜಾತಿಶೋಷಣೆಯ ಬಗೆಗಿನ ಅಸಮಾಧಾನ ಬಂದಿರಲಿಲ್ಲವೆಂದಾಗಲಿ `ವಚನವಾಙ್ಮಯ'ದ ಬಗೆಗೆ ಅರಿವಳಿಕೆಯಿತ್ತೆಂದಾಗಲಿ ಹೇಳಲಾಗುವುದಿಲ್ಲ. ಹನ್ನೆರಡನೆ ಶತಮಾನದ ನಂತರ ವಸಾಹತುಶಾಹಿಯ ಆಗಮನದವರೆಗಿನ ನಾಲ್ಕು `ಶೂನ್ಯ ಸಂಪಾದನೆ'ಗಳು, 'ಲಿಂಗಲೀಲಾ ವಿಲಾಸ'ದಂಥ ವಚನ ಸಂಗ್ರಹಗಳು, ಸಿಂಗಳದ ಸಿದ್ಧಬಸವಾದಿ ಪಂಡಿತರ ಟೀಕುಗಳೂ ವಚನದ ಬಗೆಗಿನ ಚಿಂತನೆ ಕಾಳಜಿಗಳ ನಿರಂತರತೆಗೆ ದ್ಯೋತಕವಾಗಿವೆ. ಅಂದರೆ ವಚನಗಳನ್ನು ಕನ್ನಡ ಭಾಷಿಕರು ಧುತ್ತೆಂದು ವಸಾಹತುಶಾಹಿ ಇಂಜೆಕ್ಷನ್ ಚುಚ್ಚಿದಾಗ ನೆನಪಿಸಿಕೊಳ್ಳಲಿಲ್ಲ.

ಜಾತಿಯ ಬಗೆಗಿನ ಟೀಕೆ ವಚನಕಾರರ ಪೂರ್ವದಲ್ಲೇ ಕನ್ನಡ ಸಾಹಿತ್ಯದಲ್ಲಿ ಶುರುವಾಗಿ ಆ ನಂತರದಲ್ಲೂ ಮುಂದುವರಿಯಿತು. ಹಾಗೆಯೇ ಬ್ರಾಹ್ಮಣರ ಡಾಂಭಿಕತೆಯ ವಿಡಂಬನೆ, `ಪಂಪಭಾರತ'ದ ಕರ್ಣನ ಕುರಿತ ಪ್ರಸಂಗಗಳಲ್ಲಿ, ಇತರ ಜೈನ ಕಾವ್ಯಗಳಲ್ಲಿ, ಹರಿಹರ-ರಾಘವಾಂಕಾದಿಗಳಲ್ಲಿ, ಸರ್ವಜ್ಞನಲ್ಲಿ, ಹರಿದಾಸ-ತತ್ವಪದಕಾರರಲ್ಲಿ, ಜನಪದದಲ್ಲಿ ಜಾತಿತಾರತಮ್ಯದ ಪ್ರಸ್ತಾಪ ಮತ್ತು ಟೀಕೆಗಳು ಬಂದಿವೆ. ಇತರ ಭಾಷೆಗಳ ಭಕ್ತಿ ಸಾಹಿತ್ಯದಲ್ಲೂ ಉದಾಹರಣೆಗಳಿವೆ.

ವಚನ ವಾಙ್ಮಯ ಕುರಿತ ಬಹುತೇಕ ಇತಿಹಾಸಗಳೂ ಚಿಂತನೆಗಳು ಅದರ ಸಂದರ್ಭವನ್ನಾಗಿ ವೀರಶೈವ ಮತವೊಂದನ್ನೇ ಇಟ್ಟುಕೊಂಡು ನೋಡುತ್ತವೆ. ಈ ನಿಟ್ಟಿನಿಂದ ನೋಡಿದಾಗ ವಚನಕಾಲದ ನಂತರದ ಸಂಗ್ರಹಗಳು, ವಚನಕಾರರ ಕುರಿತ ಕಾವ್ಯ-ಪುರಾಣಗಳು ಮಾತ್ರ ವಚನಕಾರರು ಕೊಟ್ಟ ಚಾಲನೆಯ ಮುಂಬರಿಕೆಗಳಾಗಿ ಕಾಣುತ್ತವೆ. ಆದರೆ ಅದು ಹಾಗಲ್ಲ. ವಚನಕಾರರು ನೀಡಿದ ಚಾಲನೆಯ ಮುಂಬರಿಕೆಯನ್ನು ಅವರ ಆಚಾರ-ವಿಚಾರಗಳನ್ನು ವಿಸ್ತರಿಸುತ್ತಾ ಹೋದ ಕೊಡೇಕಲ್ ಬಸವೇಶ್ವರ ಮತ್ತವರ ಅನುಯಾಯಿಗಳ ಬರಹ-ಬದುಕುಗಳಲ್ಲಿ, ನಿಮ್ನಜಾತಿಗಳ ಸಂತರ ಕುರಿತಾದ ಮಂಟೇಸ್ವಾಮಿ, ಮಲೆ ಮಾದೇಶ್ವರ ಕಾವ್ಯಗಳಲ್ಲಿ, ದೇವಾಂಗ ಜನಾಂಗದ ರುದ್ರಮುನಿ ಕುರಿತ ಮತ್ತು ಕುರುಬ ಜನಾಂಗದ ಸಂತ ರೇವಣಸಿದ್ಧನನ್ನು ಕುರಿತ ಮೌಖಿಕ ಕಾವ್ಯಗಳಲ್ಲಿ, ಅರೂಢ ಮತ್ತು ತತ್ವಪದಕಾರರಲ್ಲಿ ಕಾಣಬಹುದು.

ಹಿಂದೊಮ್ಮೆ ನಾನು ಮಲೆ ಮಾದೇಶ್ವರ ಮಂಟೇಸ್ವಾಮಿ ಕಾವ್ಯಗಳನ್ನು ಐದು ಮತ್ತು ಆರನೆಯ ಶೂನ್ಯಸಂಪಾದನೆಗಳೆಂದು ಕರೆದಿದ್ದೆ. ಕೆಳಜಾತಿಯ ಸಂತರ ಕುರಿತ ಕಾವ್ಯಗಳಲ್ಲಿ ಒಂದು ಘಟನೆ ಪುನರಭಿನೀತವಾಗುತ್ತದೆ. ಈ ಸಂತರು ಕಲ್ಯಾಣ ಪ್ರವೇಶ ಮಾಡಲು ಹೊರಟಾಗ ಲಿಂಗವಂತರಾದ ಜಂಗಮರು ತಡೆಯುತ್ತಾರೆ. ಆದರೆ ಸಂತರು ತಮ್ಮ ಪವಾಡವೊಂದನ್ನು ಮೆರೆದು ಲಿಂಗವಂತರಿಗಿಂತ ತಾವು ಶಕ್ತಿವಂತರೆಂಬುದನ್ನು ಮನವರಿಕೆ ಮಾಡಿಕೊಟ್ಟು ವಿಜಯಿಗಳಾಗಿ ಕಲ್ಯಾಣಪ್ರವೇಶ ಮಾಡುತ್ತಾರೆ. ಶರಣರ ತತ್ವವನ್ನೊಪ್ಪಿಯೂ ಇಷ್ಟಲಿಂಗವನ್ನು ತ್ಯಜಿಸಿದ ಕೊಡೇಕಲ್ಲಿನವರಂತೆ ಮಂಟೇಸ್ವಾಮಿಯಾದಿ ಪಂಥಗಳವರೂ ಶರಣ ಪರಂಪರೆಯನ್ನು ವಿಮರ್ಶಾತ್ಮಕವಾಗಿ ಸ್ವೀಕರಿಸಿದರೆಂಬುದಕ್ಕೆ ಇವು ನಿದರ್ಶನಗಳಾಗಿವೆ. ಅಲ್ಲದೆ ವಚನಕಾರರ ಪ್ರಭಾವ ಕನ್ನಡಸೀಮೆಯ ಗಡಿದಾಟಿ ಮಹಾರಾಷ್ಟ್ರದ ಸಂತರನ್ನು, ತಮಿಳುನಾಡಿನ ಸಿದ್ಧರನ್ನು ಪ್ರಭಾವಿಸಿದ್ದಕ್ಕೆ ಉದಾಹರಣೆಗಳಿವೆ. ಆಂಧ್ರದ ಮಹಾಕವಿ ಪಾಲ್ಕುರಿಕೆ ಸೋಮನಾಥ, ನಂತರ ವೇಮನರೂ ಶರಣ ಚಿಂತನೆಯಿಂದ ಪ್ರಭಾವಿತರಾದವರೇ ಆಗಿದ್ದಾರೆ.

ವಚನಗಳು ಇಪ್ಪತ್ತನೆ ಶತಮಾನದಲ್ಲಿ  ಅಚ್ಚಿನರೂಪದಲ್ಲಿ ಸಂಗ್ರಹಿಸಲ್ಪಟ್ಟದ್ದು ನಿಜವಾದರೂ ಆ ಮೊದಲಿಗೂ ತಾಳೆಯೋಲೆ ಮತ್ತು ಮೌಖಿಕ ಪರಂಪರೆಗಳಲ್ಲಿ ಪ್ರಚಾರದಲ್ಲಿದ್ದವು.  ವಚನಗಳ ರೂಪಾಂತರಗಳಂತಿರುವ ಜನಪದ ಗೀತೆಗಳನ್ನು ಉತ್ತರಕರ್ನಾಟಕದ ಹಲಭಾಗಗಳಲ್ಲಿ  ಹಲವು ಸಲ ಕೇಳಿದ್ದೇನೆ.

ಒಂದು ಜಾತಿಯವರು ವಚನಗಳನ್ನು ತಮ್ಮ ಅಧಿಕೃತ ಧರ್ಮಗ್ರಂಥವಾಗಿ ನೋಡಿರಬಹುದು. ಆದರೆ ಇಂದು ಇತರ ಜಾತಿಗಳವರೂ ತಮ್ಮ ಪೂರ್ವಜರನ್ನು ವಚನ ಪರಂಪರೆಯಲ್ಲಿ ಗುರುತಿಸಿಕೊಳ್ಳತೊಡಗಿದ್ದಾರೆ. ಅಂದರೆ ಎಲ್ಲ ಸಮುದಾಯಗಳವರೂ ತಮಗೆ ಬೇಕಾದ್ದನ್ನು ವಚನಗಳಿಂದ ಪಡೆದುಕೊಳ್ಳುತ್ತಿದ್ದಾರೆ. ಯಾಕೆಂದರೆ ವಚನವಾಙ್ಮಯ ಅಂತ್ಯಜ ಮೊದಲಾಗಿ ಬ್ರಾಹ್ಮಣ ಕಡೆಯಾಗಿ ಎಲ್ಲ ಜಾತಿಮೂಲದ ಸಂತರ ಅಭಿವ್ಯಕ್ತಿಯ ಸಮುಚ್ಚಯ.

ಇವರೆಲ್ಲರೂ ತಮಗೆ ಬೇಕಾದ ಕತೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆಂದು ಝಳಕಿಯವರು ತಿರುಗುಬಾಣ ಬಿಡಬಹುದು. ಆದರೆ ಅವರಾದರೂ ಮಾಡುತ್ತಿರುವುದೇನು? ಆಧುನಿಕಪೂರ್ವ ಭಾರತದಲ್ಲಿ  ಜಾತಿಯ ವೈಷಮ್ಯವಾಗಲಿ ಬ್ರಾಹ್ಮಣರ ಟೀಕೆಯಾಗಲಿ ಇಲ್ಲವೆಂದು ಸಾಬೀತು  ಪಡಿಸಲು ವಚನಗಳನ್ನು ನೆಪ ಮಾಡಿಕೊಳ್ಳುತ್ತಿದ್ದಾರೆ. ಬ್ರಾಹ್ಮಣರ ಧಾಂಬಿಕತನವನ್ನು ಸ್ವತಃ ಬ್ರಾಹ್ಮಣರಾದ ಏಕನಾಥ ಮಹಾರಾಜರಂಥವರು ಮಾಡಿರುವುದನ್ನೂ ಮರೆತಿದ್ದಾರೆ? ಈ ಮೂಲಕ ಅವರು ಯಾರ ಹಿತವನ್ನು ರಕ್ಷಿಸಲು ಹೊರಟಿದ್ದಾರೆ? ನನ್ನ ನಮ್ರ ಪ್ರತಿಕ್ರಿಯೆಯಲ್ಲಿ ಮಂಡಿಸಿರುವ ವಿಚಾರಗಳನ್ನು ಇನ್ನಾದರೂ ಎಲ್ಲ ಸಮುದಾಯದ ವಚನ ತಜ್ಞರು ಮುಂದೆ ತೆಗೆದುಕೊಂಡುಹೋಗುತ್ತಾರೆಂದು ನನ್ನ ಹಾರೈಕೆ.

ವಚನಗಳ ಬಗ್ಗೆ ಹೊಸ ಚಿಂತನೆ ಮತ್ತು ಚರ್ಚೆಗಳಿಗೆ ಅನುವು ಮಾಡಿಕೊಡುತ್ತಿರುವ ಬಾಲಗಂಗಾಧರ ಮತ್ತು ಡಂಕಿನ್ ಝಳಕಿಯವರಿಗೆ ನಾನು ಮತ್ತೆ ನನ್ನ ಧನ್ಯವಾದಗಳನ್ನರ್ಪಿಸುತ್ತಿದ್ದೇನೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT