ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಯೋಮಿ ಎಂಐ ಬ್ಯಾಂಡ್2 ಸುಧಾರಿತ ಆರೋಗ್ಯ ಪಟ್ಟಿ

Last Updated 17 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಧರಿಸಬಹುದಾದ ಗ್ಯಾಜೆಟ್‌ಗಳಲ್ಲಿ ಆರೋಗ್ಯಪಟ್ಟಿ ಪ್ರಮುಖವಾದವು. ಇವು ಸೋಮಾರಿಗಳಾದವರನ್ನು ಎಚ್ಚರಿಸಿ ಅವರಿಂದ ಕೆಲಸಗಳನ್ನು ಮಾಡಿಸಿ, ಅವರಿಗೆ ನಡೆಯಲು ಎಚ್ಚರಿಸಿ, ಎಷ್ಟು ನಡೆದಿದ್ದೀರಿ, ಎಷ್ಟು ಓಡಿದ್ದೀರಿ, ಎಷ್ಟು ನಿದ್ರಿಸಿದ್ದೀರಿ ಎಂದೆಲ್ಲ ಮಾಹಿತಿ ನೀಡುತ್ತದೆ.

ಸಾಮಾನ್ಯವಾಗಿ ಕೈಗೆ ಕಟ್ಟಿಕೊಳ್ಳಲಾಗುವ ಈ ಪಟ್ಟಿಗಳು ಎಲ್ಲ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ ಸೂಕ್ತ ಕಿರುತಂತ್ರಾಂಶದ ಮೂಲಕ ಸ್ಮಾರ್ಟ್‌ಫೋನಿಗೆ ವರ್ಗಾಯಿಸುತ್ತವೆ.

ಈ ಪಟ್ಟಿಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿರುವಂತಹ ಎಕ್ಸೆಲೆರೋಮೀಟರ್ ಮತ್ತು ಇನ್ನು ಕೆಲವು ಪಟ್ಟಿಗಳಲ್ಲಿ ಹೃದಯ ಬಡಿತವನ್ನು ದಾಖಲಿಸುವ ಸಂವೇದಕವೂ ಇರುತ್ತವೆ. ಈ ಸಂವೇದಕವು ಪಟ್ಟಿಯು ಸ್ಥಿರವಾಗಿದೆಯೇ, ಚಲಿಸುತ್ತಿದೆಯೇ, ಯಾವ ದಿಕ್ಕಿಗೆ ಎಷ್ಟು ವೇಗದಿಂದ ಚಲಿಸುತ್ತಿದೆ, ಭೂಮಿ ಯಾವ ಕಡೆಗೆ ಇದೆ, ಎಂದೆಲ್ಲ ಗ್ರಹಿಸಿ ಸಂಗ್ರಹಿಸಿದ ಮಾಹಿತಿಗಳನ್ನು ವಿಶ್ಲೇಷಿಸಿ ಸಾಧನವನ್ನು ಧರಿಸಿದವನು ನಿದ್ರಿಸುತ್ತಿದ್ದಾನೆಯೇ, ನಡೆಯುತ್ತಿದ್ದಾನೆಯೇ, ಓಡುತ್ತಿದ್ದಾನೆಯೇ ಎಂದು ಲೆಕ್ಕ ಹಾಕುತ್ತದೆ. ಜೊತೆಗೆ ಎಷ್ಟು ಹೆಜ್ಜೆ ನಡೆದಿದ್ದಾನೆ ಅಥವಾ ಓಡಿದ್ದಾನೆ ಎಂದೂ ಲೆಕ್ಕಹಾಕುತ್ತದೆ. ಇಂತಹ ಪಟ್ಟಿಗಳು ಮಾರುಕಟ್ಟೆಯಲ್ಲಿ ಹಲವಾರಿವೆ.

ಶಿಯೋಮಿಯವರ ಆರೋಗ್ಯಪಟ್ಟಿ ಎಂಐ ಬ್ಯಾಂಡ್ ಬಗ್ಗೆ ಲೇಖನ ಬರೆದಾಗ ಬರೆದ ಸಾಲುಗಳನ್ನು ಇಲ್ಲಿ ಮತ್ತೊಮ್ಮೆ ನೆನಪಿಸಿಕೊಂಡರೆ ಉತ್ತಮ. ಈ ಆರೋಗ್ಯಪಟ್ಟಿಗಳು ಧರಿಸಿದಾತ ನಡೆದ ಮತ್ತು ಓಡಿದ ಬಗ್ಗೆ ನೀಡುವ ಮಾಹಿತಿಗಳು ಬಹುಮಟ್ಟಿಗೆ ನಿಖರವಾಗಿರುತ್ತವೆ. ಆದರೆ ನಿದ್ರೆಯ ಮಟ್ಟಿಗಿನ ಮಾಹಿತಿಗಳು ಎಷ್ಟು ನಿಖರ ಎಂಬ ಬಗ್ಗೆ ಹಲವು ಚರ್ಚೆಗಳು ನಡೆದಿವೆ. ಧರಿಸಿದಾತ ಎಷ್ಟು ಗಂಟೆಗೆ ಮಲಗಿದ, ಎಷ್ಟು ಗಂಟೆಗೆ ಆತನಿಗೆ ನಿದ್ರೆ ಬಂತು, ಎಷ್ಟು ಗಂಟೆ ಆಳವಾಗಿ ನಿದ್ರಿಸಿದ ಎಂದೆಲ್ಲ ಅದು ಮಾಹಿತಿ ನೀಡುತ್ತದೆ.

ಈ ಮಾಹಿತಿ ನೀಡುವುದು ಅದು ಧರಿಸಿದಾತನ ಕೈ ಭೂಮಿಗೆ ಸಮಾಂತರವಾಗಿ ಅಲುಗಾಡದೆ ಎಷ್ಟು ಕಾಲ ಇತ್ತು ಎಂಬುದನ್ನು ಆಧರಿಸಿ ಆಗಿರುತ್ತದೆ. ನೀವು ಕುಳಿತೇ ನಿದ್ರಿಸಿದ್ದರೆ? ಈ ಬಗ್ಗೆ ಇನ್ನೂ ಸರಿಯಾಗಿ ತೀರ್ಮಾನಕ್ಕೆ ಯಾರೂ ಬಂದಿಲ್ಲ. ಶಿಯೋಮಿ ಕಂಪೆನಿಯ ಆರೋಗ್ಯಪಟ್ಟಿ ಶಿಯೋಮಿ  ಎಂಐ ಬ್ಯಾಂಡ್ ಬಗ್ಗೆ ಈ ಹಿಂದೆಯೇ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ಈ ಸಲ ನಮ್ಮ ವಾರದ ಗ್ಯಾಜೆಟ್ ಅದರ ಸುಧಾರಿತ ಆವೃತ್ತಿ ಎಂಐ ಬ್ಯಾಂಡ್ 2 (Xiaomi Mi Band 2).

ಗುಣವೈಶಿಷ್ಟ್ಯಗಳು
ಧರಿಸಬಲ್ಲ ಆರೋಗ್ಯಪಟ್ಟಿ. ಪಟ್ಟಿಯ ಮಧ್ಯದಲ್ಲಿ ಸಂವೇದಕ (sensor) ಇದೆ. ಸಂವೇದಕದ ಗಾತ್ರ 39x14x9 ಮಿ.ಮೀ., ಸಂವೇದಕದ ಒಂದು ಭಾಗದಲ್ಲಿ ಚಾರ್ಜರ್‌ಗೆ ಸಂಪರ್ಕಿಸಲು ಅಗತ್ಯ ಕನೆಕ್ಟರ್‌ ಇದೆ, ಮೇಲ್ಭಾಗದಲ್ಲಿ ಓಎಲ್‌ಇಡಿ ಪರದೆ ಇದೆ, ಪಟ್ಟಿಯ ಒಟ್ಟು ಉದ್ದ 225 ಮಿ.ಮೀ., 157 ರಿಂದ 205 ಮಿ.ಮೀ. ತನಕ ಹೊಂದಾಣಿಕೆ ಮಾಡಬಹುದು, ಆರು ಬಣ್ಣಗಳಲ್ಲಿ ಲಭ್ಯ, ಬ್ಲೂಟೂತ್ 4.0 ಸಂಪರ್ಕ, ಯುಎಸ್‌ಬಿ ಚಾರ್ಜರ್‌ಗೆ ಜೋಡಿಸಲು ವಿಶೇಷ ಕೇಬಲ್, ಇತ್ಯಾದಿ. ಇದು ಇನ್ನೂ ಭಾರತಕ್ಕೆ ಶಿಯೋಮಿ ಮೂಲಕ ಲಭ್ಯವಿಲ್ಲ. ಅಮೆಝಾನ್, ಫ್ಲಿಪ್‌ಕಾರ್ಟ್‌ ಜಾಲಮಳಿಗೆಗಳಲ್ಲಿ ₹3,500 ರಿಂದ ₹4,000 ತನಕ ಬೆಲೆ ಇದೆ.  

ಎಂಐ ಬ್ಯಾಂಡ್‌ನ ಪ್ರಥಮ ಆವೃತ್ತಿಗೂ ಇದಕ್ಕೂ ಇರುವ ಪ್ರಮುಖ ವ್ಯತ್ಯಾಸಗಳು –ಓಎಲ್‌ಇಡಿ ಪರದೆ ಮತ್ತು ಹೃದಯ ಬಡಿತ ಪತ್ತೆಹಚ್ಚುವಿಕೆ. ಎಂಐ ಬ್ಯಾಂಡ್-1 ಬಂದಾಗ ಬಹುಶಃ ಮಾರುಕಟ್ಟೆಯಲ್ಲಿ ದೊರೆಯುವ ಆರೋಗ್ಯಪಟ್ಟಿಗಳಲ್ಲೇ ಇದು ಅತಿ ಕಡಿಮೆ ಬೆಲೆಯದ್ದು ಎಂದು ಬರೆದಿದ್ದೆ. ಆದರೆ ಇದಕ್ಕೆ ಹಾಗೆ ಹೇಳುವಂತಿಲ್ಲ. ಮೊದಲ ಆವೃತ್ತಿಯಂತೆ ಇದರ ಸಂವೇದಕದ ರಚನೆ ಮತ್ತು ವಿನ್ಯಾಸಗಳೂ ಚೆನ್ನಾಗಿವೆ.

ಮೊದಲ ಆವೃತ್ತಿಯ ಪಟ್ಟಿಗಿಂತ ಈ ಪಟ್ಟಿ ಸ್ವಲ್ಪ ಅಗಲವಾಗಿದೆ. ಈ ಪಟ್ಟಿಯಲ್ಲಿ ಸಂವೇದಕವನ್ನು ಕುಳ್ಳಿರಿಸಲು ಜಾಗವಿದೆ. ಪಟ್ಟಿಯನ್ನು ಕೈಗೆ ಕಟ್ಟಲು ಕೈಗಡಿಯಾರಗಳಲ್ಲಿರುವ ಮಾದರಿಯಲ್ಲೇ ವ್ಯವಸ್ಥೆ ಇದೆ. ಪಟ್ಟಿಯನ್ನು ತಯಾರಿಸಿದ ವಸ್ತುವಿನ ಗುಣಮಟ್ಟವೂ ಉತ್ತಮವಾಗಿರುವಂತಿದೆ. ರಬ್ಬರ್ ಮಾದರಿಯ ಪಟ್ಟಿಯನ್ನು ತಯಾರಿಸಿದ ವಸ್ತುವಿನ ಗುಣಮಟ್ಟ ಆರೋಗ್ಯ ದೃಷ್ಟಿಯಿಂದ ಚೆನ್ನಾಗಿದೆ ಎನ್ನಬಹುದು.

24 ಗಂಟೆಗಳ ಕಾಲ ಧರಿಸಿದರೂ, ಸ್ನಾನ ಮಾಡುವಾಗ ಧರಿಸಿದರೂ, ಚರ್ಮಕ್ಕೆ ಯಾವ ರೀತಿಯಲ್ಲೂ ಕಿರಿಕಿರಿ ಮಾಡುತ್ತಿಲ್ಲ. ಬೇರೆ ಬೇರೆ ಬಣ್ಣಗಳಲ್ಲಿ ಈ ಪಟ್ಟಿ ಲಭ್ಯವಿದೆ. ಫ್ಯಾಶನ್ ಪ್ರಿಯರು ಬ್ರೇಸ್‌ಲೆಟ್ ಮಾದರಿಯಲ್ಲೂ ಧರಿಸಬಹುದು!

ಸಂವೇದಕದ ಮೇಲ್ಭಾಗದಲ್ಲಿ ಓಎಲ್‌ಇಡಿ ಪರದೆ ಇದೆ. ಸಂವೇದಕದ ದೇಹದ ಬಣ್ಣ ಕಪ್ಪು. ಆದುದರಿಂದ ಈ ಡಿಸ್‌ಪ್ಲೇ ಇದೆ ಎಂದು ಗೊತ್ತಾಗುವುದಿಲ್ಲ. ಸಂವೇದಕದ ಮೇಲ್ಭಾಗದ ಒಂದು ಬದಿಯಲ್ಲಿ ವೃತ್ತಾಕಾರದ ಬಟನ್ ಇದೆ. ಅದರ ಮೇಲೆ ತಟ್ಟಿದರೆ ಬೇರೆ ಬೇರೆ ಕೆಲಸಗಳನ್ನು ಅದು ಮಾಡುತ್ತದೆ. ಉದಾಹರಣೆಗೆ ಒಂದು ಸಲ ತಟ್ಟಿದರೆ ಗಂಟೆ, ಎರಡು ಸಲ ತಟ್ಟಿದರೆ ಎಷ್ಟು ಹೆಜ್ಜೆ ನಡೆದಿದ್ದೀರಿ ಎಂಬ ಮಾಹಿತಿ, ಮೂರು ಸಲ ತಟ್ಟಿದರೆ ಎಷ್ಟು ದೂರ ನಡೆದಿದ್ದೀರಿ ಎಂಬ ಮಾಹಿತಿ, ನಾಲ್ಕು ಸಲ ತಟ್ಟಿದರೆ ಹೃದಯ ಬಡಿತ ಹೀಗೆ ಹಲವು ಮಾಹಿತಿಗಳನ್ನು ತೋರಿಸುತ್ತದೆ. ಈ ಎಲ್ಲ ಮಾಹಿತಿಗಳು ಓಎಲ್‌ಇಡಿ ಪರದೆಯಲ್ಲಿ ಬಿಳಿ-ನೀಲಿ ಅಕ್ಷರಗಳಲ್ಲಿ ಕಾಣಿಸುತ್ತವೆ. ಉಳಿದ ಸಮಯದಲ್ಲಿ ಅಲ್ಲೊಂದು ಪರದೆ/ಡಿಸ್‌ಪ್ಲೇ ಇರುವುದು ಗೊತ್ತೇ ಆಗುವುದಿಲ್ಲ.

ಈ ಸಂವೇದಕದಲ್ಲಿ ರಿಚಾರ್ಜೆಬಲ್ ಬ್ಯಾಟರಿ ಇದೆ. ಅದನ್ನು ಚಾರ್ಜ್ ಮಾಡಬೇಕಾದರೆ ಸಂವೇದಕವನ್ನು ಪಟ್ಟಿಯಿಂದ ತೆಗೆದು ಚಾರ್ಜ್ ಮಾಡಲೆಂದೇ ಪ್ರತ್ಯೇಕವಾಗಿ ನೀಡಿರುವ ಕೇಬಲ್‌ಗೆ ಜೋಡಿಸಿ ಅದನ್ನು ಯಾವುದೇ ಯುಎಸ್‌ಬಿ ಚಾರ್ಜರ್‌ಗೆ ಜೋಡಿಸಿ ಸಂವೇದಕವನ್ನು ಚಾರ್ಜ್ ಮಾಡಬಹುದು. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು ಮೂವತ್ತು ದಿನಗಳ ಕಾಲ ಕೆಲಸ ಮಾಡುತ್ತದೆ ಎಂದು ಕಂಪೆನಿಯವರು ಹೇಳಿಕೊಂಡಿದ್ದಾರೆ. ನಮ್ಮ ಬಳಕೆಯಿಂದ ಕಂಡು ಬಂದುದೇನೆಂದರೆ ಸುಮಾರು ಮೂರರಿಂದ ನಾಲ್ಕು ವಾರಗಳ ಕಾಲ ಬಾಳಿಕೆ ಬರುತ್ತದೆ. ಸಂವೇದಕವು ಸಂಪೂರ್ಣವಾಗಿ ನೀರುನಿರೋಧಕವಾಗಿದೆ. ಪಟ್ಟಿಯನ್ನು ಧರಿಸಿಯೇ ಸ್ನಾನ ಮಾಡಬಹುದು.

ಸಂವೇದಕದ ಅಡಿಯ ಭಾಗದಲ್ಲಿ ಹೃದಯ ಬಡಿತವನ್ನು ದಾಖಲಿಸುವ ವಿಶೇಷ ಸಂವೇದಕ ಇದೆ. ಇದು ಮೊದಲ ಆವೃತ್ತಿಯಲ್ಲಿ ಇರಲಿಲ್ಲ. ಇದು ನಿಮ್ಮ ಹೃದಯ ಬಡಿತ ಪ್ರತಿ ನಿಮಿಷಕ್ಕೆ ಎಷ್ಟಿದೆ ಎಂದು ದಾಖಲಿಸುತ್ತದೆ. ಇದು ನಿಜಕ್ಕೂ ಉಪಯುಕ್ತ ಸವಲತ್ತು.

ಈ ಬ್ಯಾಂಡ್‌ನ ಸಂಪೂರ್ಣ ಪ್ರಯೋಜನ ಪಡೆಯಲು ಇದಕ್ಕೆಂದೇ ಇರುವ ಕಿರುತಂತ್ರಾಂಶವನ್ನು (ಆ್ಯಪ್) ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಹಾಕಿಕೊಳ್ಳಬೇಕು. ಫೋನ್ ಕರೆ ಬಂದಾಗ, ಎಸ್‌ಎಂಎಸ್, ಫೇಸ್‌ಬುಕ್, ವಾಟ್ಸ್‌ಆಪ್ ಇತ್ಯಾದಿ ಸಂದೇಶ ಬಂದಾಗ ಅದು ಎಚ್ಚರಿಸುತ್ತದೆ. ಎಷ್ಟು ಹೊತ್ತು ನಿದ್ದೆ ಮಾಡಿದ್ದೀರಿ ಎಂದು ತೋರಿಸುತ್ತದೆ. ಎಲ್ಲ ಓಕೆ, ಆದರೆ ಬೆಲೆ ಮಾತ್ರ ಸ್ವಲ್ಪ ಜಾಸ್ತಿ. ಬಹುಶಃ ಭಾರತದಲ್ಲೇ ಮಾರಾಟ ಪ್ರಾರಂಭವಾದಾಗ ಬೆಲೆ ಕಡಿಮೆಯಾಗಬಹುದು. ಈಗ ಆಮದು ಸಂಕ ಕೊಟ್ಟು ಕೊಳ್ಳಬೇಕಾಗಿರುವುದರಿಂದ ಬೆಲೆ ಜಾಸ್ತಿ ಎಂದು ನನ್ನ ಭಾವನೆ.   

***
ವಾರದ ಆ್ಯಪ್
ಕಲಿಯಲು ‘ಕೇಳು’

ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಕೆಲವು ಅಗತ್ಯ ಪದ, ವಾಕ್ಯಗಳನ್ನು ಕಲಿಯಬೇಕೇ? ಇಂತಹ ಅಗತ್ಯ ನಿಮಗೆ ಬೇರೆ ಊರಿಗೆ ಪ್ರವಾಸ ಹೋದಾಗ ಖಂಡಿತ ಬಂದಿರುತ್ತದೆ. ಪ್ರವಾಸಿಗರಿಗಾಗಿ ಹಲವು ಕಿರುತಂತ್ರಾಂಶಗಳಿವೆ. ಅಂತಹ ಒಂದು ಕಿರುತಂತ್ರಾಂಶ ‘ಕೇಳು’. ಇದು ಆಂಡ್ರಾಯ್ಡ್ ಫೋನ್‌ಗಳಲ್ಲಿ ಕೆಲಸ ಮಾಡುತ್ತದೆ.

ಇದು ಬೇಕಿದ್ದರೆ ನೀವು ಗೂಗಲ್ ಪ್ಲೇ ಸ್ಟೋರಿನಲ್ಲಿ Learn & Speak Indian languages ಎಂದು ಹುಡುಕಬೇಕು ಅಥವಾ http://bit.ly/gadgetloka240 ಜಾಲತಾಣದ ಮೂಲಕವೂ ಪಡೆಯಬಹುದು. ಕನ್ನಡ, ಹವ್ಯಕ, ತಮಿಳು, ಬೆಂಗಾಳಿ, ಮರಾಠಿ, ಮಲಯಾಳಂ, ಇತ್ಯಾದಿ ಭಾಷೆಗಳಲ್ಲಿ ದಿನನಿತ್ಯ ಬಳಕೆಯಾಗುವ ಸಾಮಾನ್ಯ ವಾಕ್ಯಗಳು ಇದರಲ್ಲಿವೆ. ಕೆಲವು ವಾಕ್ಯಗಳ ಉಚ್ಚಾರಣೆಯೂ ಇವೆ. ಉತ್ತಮ ಯೋಜನೆ. ಇದಕ್ಕೆ ನೀವೂ ಸಹಯೋಗಿಗಳಾಗಬಹುದು.

***
ಗ್ಯಾಜೆಟ್‌ ಸುದ್ದಿ
ಮಿಥ್ಯಾವಾಸ್ತವ ತಂತ್ರಜ್ಞಾನದ ಮೂಲಕ ಭಾಷಣ ಕಲೆ ಕಲಿಯಿರಿ

ಇತ್ತೀಚೆಗೆ ತುಂಬ ಸುದ್ದಿಯಲ್ಲಿರುವುದು ಮಿಥ್ಯಾ ವಾಸ್ತವ ಅಥವಾ ವಾಸ್ತವೋಪಮ (virtual reality) ತಂತ್ರಜ್ಞಾನ. ಕಣ್ಣಿಗೆ ಕಟ್ಟುವ ವಿಶೇಷ ಕನ್ನಡಕದ ಮಾದರಿಯ ಸಾಧನದಲ್ಲಿ ಸ್ಮಾರ್ಟ್‌ಫೋನ್ ಇಟ್ಟು ಅದರಲ್ಲಿರುವ ಕಿರುತಂತ್ರಾಂಶದ ಮೂಲಕ ಮಿಥ್ಯಾವಾಸ್ತವ ಪ್ರಪಂಚದಲ್ಲಿ ವಿಹರಿಸಬಹುದು.

ಈ ತಂತ್ರಜ್ಞಾನವನ್ನು ಇನ್ನೂ ತಯಾರಿಯಲ್ಲಿರುವ ಕಟ್ಟಡ, ವಾಹನಗಳ ಪ್ರತಿಕೃತಿಯನ್ನು ತೋರಿಸಲು, ಮೂರು ಆಯಾಮಗಳಲ್ಲಿ ಪ್ರತ್ಯನುಕರಣೆ (simulation) ಮೂಲಕ ಹಲವು ವಿಷಯಗಳನ್ನು ಕಲಿಯಲು ಇತ್ಯಾದಿ ಕೆಲಸಗಳಿಗೆ ಬಳಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆಯಾಗುತ್ತಿರುವುದು ಆಟಗಳಿಗೆ.

ಇತ್ತೀಚೆಗೆ ಒಂದು ಕಂಪೆನಿ ಭಾಷಣ ಕಲಿಯಲೂ ಈ ತಂತ್ರಜ್ಞಾನವನ್ನು ಬಳಕೆ ಮಾಡಬಹುದು ಎಂದು ತೋರಿಸಿಕೊಟ್ಟಿದೆ. ಮಿಥ್ಯಾವಾಸ್ತವ ಸಾಧನವನ್ನು ಕಣ್ಣಿಗೆ ಹಾಕಿಕೊಂಡು ಅದರಲ್ಲಿ ಕಾಣಿಸುವ ಕಾಲ್ಪನಿಕ ವ್ಯಕ್ತಿಗಳನ್ನು ನೋಡಿಕೊಂಡು ಭಾಷಣ ಮಾಡಿ ಆ ಕಲೆಯನ್ನು ಕಲಿಯಬಹುದು!

***
ಗ್ಯಾಜೆಟ್‌ ಸಲಹೆ
ಶ್ರೀನಿಧಿ ಕೆ.ಎಸ್. ಅವರ ಪ್ರಶ್ನೆ:  ಫೋನಿನ ಆಂತರಿಕ ಸಂಗ್ರಹ ಅಥವಾ ಮೈಕ್ರೊಎಸ್‌ಡಿ ಕಾರ್ಡಿನಿಂದ ಯುಎಸ್‌ಬಿ ಡ್ರೈವ್‌ಗೆ ಓಟಿಜಿ ಮೂಲಕ ಫೈಲುಗಳನ್ನು ಪ್ರತಿ ಮಾಡಿಕೊಳ್ಳುವುದು ಹೇಗೆ?
ಉ:
X-plore File Manager ಎಂಬ ಕಿರುತಂತ್ರಾಂಶವನ್ನು ಹಾಕಿಕೊಳ್ಳಿ. ಅದರ ಮೂಲಕ ಈ ಕೆಲಸ ಮಾಡಬಹುದು.

***
ಗ್ಯಾಜೆಟ್‌ ತರ್ಲೆ
ಪ್ರ: ಸದಾ ಫೇಸ್‌ಬುಕ್‌ನಲ್ಲಿ Online ನಲ್ಲಿರುವ ಗೃಹಿಣಿಯ ಹಿಂದೆ ಯಾರಿರುತ್ತಾರೆ?

ಉ: ಹಿಂದೆ ಯಾರೂ ಇರುವುದಿಲ್ಲ. ಆದರೆ ಆಕೆಯ ಕೈಯಲ್ಲಿ ಸ್ಮಾರ್ಟ್‌ಫೋನ್ ಇರುತ್ತದೆ ಮತ್ತು ಅದರಲ್ಲಿ foodpanda, swiggy, zomato ಆ್ಯಪ್‌ಗಳಿರುತ್ತವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT