ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತಕ್ಕೆ ಉತ್ತಮ ಇಯರ್‌ಬಡ್ – ಸೆನ್‌ಹೈಸರ್ ಸಿಎಕ್ಸ್ 180

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಸಂಗೀತ ಅಥವಾ ಯಾವುದೇ ಮಾದರಿಯ ಧ್ವನಿಯ ಆಕರ ಅದು ಮೊಬೈಲ್ ಫೋನ್, ಎಂಪಿ3 ಪ್ಲೇಯರ್, ಐಪಾಡ್, ಟ್ಯಾಬ್ಲೆಟ್ –ಏನೇ ಇರಲಿ, ಅದನ್ನು ಕೊನೆಗೆ ಕಿವಿಗೆ ತಲುಪಿಸುವುದು ಹೆಡ್‌ಫೋನ್, ಇಯರ್‌ಫೋನ್ ಅಥವಾ ಇಯರ್‌ಬಡ್. ಈ ಮೂರರ ನಡುವಿನ ವ್ಯತ್ಯಾಸವನ್ನು ಇದೇ ಅಂಕಣದಲ್ಲಿ ತುಂಬ ಹಿಂದೆಯೇ ವಿವರಿಸಲಾಗಿತ್ತು. ಇವುಗಳಲ್ಲಿ ಕಿವಿ ಕಾಲುವೆಯೊಳಗೆ ಕುಳಿತುಕೊಳ್ಳುವಂತಹ ಇಯರ್‌ಬಡ್ ಕಡೆಗೆ ಸ್ವಲ್ಪ ಗಮನ ನೀಡೋಣ. ಇವುಗಳ ಜೊತೆ ದೊರೆಯುವ ಹಲವು ಗಾತ್ರದ ಕುಶನ್‌ಗಳಲ್ಲಿ ನಿಮ್ಮ ಕಿವಿಯ ಗಾತ್ರಕ್ಕೆ ಸರಿಹೊಂದುವ ಕುಶನ್ ಬಳಸುವುದು ಅತಿ ಮುಖ್ಯವಾಗುತ್ತದೆ. ಇದು ಕಿವಿಯ ಕಾಲುವೆಯನ್ನು ಪೂರ್ತಿಯಾಗಿ ಮುಚ್ಚಿ ಕುಳಿತಾಗ ಮಾತ್ರ ಸಂಗೀತದ, ಅದರಲ್ಲೂ ಕಡಿಮೆ ಕಂಪನಾಂಕದ ಧ್ವನಿಯ (bass) ಪುನರುತ್ಪತ್ತಿ ಸರಿಯಾಗಿ ಆಗುತ್ತದೆ. ಈ ಸಲ ಅಂತಹ ಒಂದು ಪರವಾಗಿಲ್ಲ ಎನ್ನಬಹುದಾದ ಒಂದು ಇಯರ್‌ಬಡ್ ಕಡೆ ನಮ್ಮ ವಿಮರ್ಶಾದೃಷ್ಟಿ ಬೀರೋಣ.
ಅದುವೇ ಸೆನ್‌ಹೈಸರ್ ಸಿಎಕ್ಸ್ 180 (Sennheiser CX 180).

ಗುಣವೈಶಿಷ್ಟ್ಯಗಳು
ಕಿವಿಕಾಲುವೆಯೊಳಗೆ ಕುಳಿತುಕೊಳ್ಳುವಂತಹ ಇಯರ್‌ಬಡ್ ಮಾದರಿಯದು. ಧ್ವನಿ ಕಂಪನಾಂಕದ ವ್ಯಾಪ್ತಿ-20 Hz- 20 kHz, 16 ಓಂ (ohm) ಇಂಪೆಡೆನ್ಸ್, 110 ಡೆಸಿಬೆಲ್, 1.2 ಮೀ. ಉದ್ದದ ಕೇಬಲ್, 3.5 ಮಿ.ಮೀ. ಚಿನ್ನ ಲೇಪಿತ ಇ.ಪಿ. ಕನೆಕ್ಟರ್, 3 ಜೊತೆ ಕುಶನ್‌ಗಳು, ಇತ್ಯಾದಿ.  ನಿಗದಿತ ಬೆಲೆ ₹ 990. ಮಾರುಕಟ್ಟೆ ಬೆಲೆ ಸುಮಾರು ₹ 750 ರಿಂದ 850.

ರಚನೆ ಮತ್ತು ವಿನ್ಯಾಸ ಪರವಾಗಿಲ್ಲ. ಕೇಬಲ್ ವೃತ್ತಾಕಾರದಲ್ಲಿದ್ದು ತೆಳ್ಳಗಿದೆ. ಪಟ್ಟಿಯಾಕಾರದಲ್ಲಿಲ್ಲ. ಆದುದರಿಂದ ಬೇಗನೆ ಸುಕ್ಕುಹಾಕಿ ಕೊಳ್ಳುತ್ತದೆ. ಕಿವಿಗೆ ಜೋಡಿಸಲು ಕೇಬಲ್ ಎರಡಾಗಿ ವಿಭಜನೆಯಾದ ನಂತರ ಬಹಳ ತೆಳ್ಳಗಾಯಿತು ಎಂದು ಅನ್ನಿಸುತ್ತದೆ. ಇದನ್ನು ಸಂಗೀತ ಆಲಿಸಲು ಮಾತ್ರ ಬಳಸಬಹುದಷ್ಟೆ. ಯಾಕೆಂದರೆ ಇದರಲ್ಲಿ ಮಾತನಾಡಲು ಮೈಕ್ರೋಫೋನ್ ಇಲ್ಲ. ತುಂಬಾ ಜನಪ್ರಿಯವಾಗಿರುವ ಕ್ರಿಯೇಟಿವ್ ಇಪಿ 630ರಲ್ಲಿ ಕೂಡ ಮೈಕ್ರೋಫೋನ್ ಇಲ್ಲ. ನಿಮಗೆ ಮಾತನಾಡುವ ಸೌಲಭ್ಯ ಅಂದರೆ ಮೈಕ್ರೋಫೋನ್ ಬೇಕೇ ಬೇಕು ಎಂದಾದರೆ ಕೋವೋನ್ ಇಎಂ1 ಬಳಸಬಹುದು.

ಎಲ್ಲ ಕಂಪನಾಂಕಗಳ ಧ್ವನಿಯ ಪುನರುತ್ಪತ್ತಿ ಚೆನ್ನಾಗಿದೆ. ಕಡಿಮೆ ಕಂಪನಾಂಕದ ಧ್ವನಿಯ (bass) ಪುನರುತ್ಪತ್ತಿಯಲ್ಲಿ ಇನ್ನೂ ಸ್ವಲ್ಪ ಉತ್ತಮವಾಗಿದ್ದರೆ ಒಳ್ಳೆಯದಿತ್ತು ಎಂದು ಅನ್ನಿಸುತ್ತದೆ. ಇಯರ್‌ಬಡ್‌ಗಳಲ್ಲಿ ಉತ್ತಮ ಬಾಸ್ ಪಡೆಯುವುದು ಕೆಲವೇ ಕೆಲವು ಇಯರ್‌ಬಡ್‌ಗಳಲ್ಲಿ ಸಾಧ್ಯ (ಉದಾ- ಕ್ರಿಯೇಟಿವ್ EP630). ಧ್ವನಿಯಲ್ಲಿ ಸ್ಪಷ್ಟತೆ ಇದೆ. ಅತ್ಯುತ್ತಮ ಬಾಸ್ ಬೇಕು ಎನ್ನುವವರಿಗೆ ಇದು ಅಷ್ಟು ತೃಪ್ತಿ ನೀಡಲಾರದು. ಮಾನವ ಧ್ವನಿಯ ಪುನರುತ್ಪತ್ತಿ ನಿಖರವಾಗಿದ್ದು ಉತ್ತಮವಾಗಿದೆ. ಸಂಗೀತ ಆಲಿಸುವಾಗ ಎಲ್ಲೂ ಕಿರಿಕಿರಿ ಎನ್ನಿಸುವುದಿಲ್ಲ. ಗಂಟೆಗಟ್ಟಲೆ ಬಳಸಿದರೆ ಕಿವಿಗೆ ಶ್ರಮವಾಗುವುದೂ ಇಲ್ಲ. ನಿಮ್ಮ ಕಿವಿಯ ಗಾತ್ರಕ್ಕೆ ಸರಿಯಾದ ಕುಶನ್ ಬಳಸುವುದು ಈ ಇಯರ್‌ಬಡ್‌ನಲ್ಲೂ ಅತಿ ಮುಖ್ಯವಾಗುತ್ತದೆ.

ಈ ಇಯರ್‌ಬಡ್‌ ಬಳಕೆಯ ಪ್ರಾರಂಭದಲ್ಲಿ ಧ್ವನಿಯ ಪುನರುತ್ಪತ್ತಿಯಲ್ಲಿ ಉತ್ತಮ ಗುಣಮಟ್ಟ ಕಂಡುಬರಲಿಲ್ಲ. ಹಲವು ಗಂಟೆಗಳ ಕಾಲ ಬಳಸಿದ ನಂತರ ಕಾರ್ಯಕ್ಷಮತೆಯಲ್ಲಿ ಗಣನೀಯ ಸುಧಾರಣೆ ಕಂಡುಬಂತು. ಇದನ್ನು ತಾಂತ್ರಿಕ ಭಾಷೆಯಲ್ಲಿ burn-in ಎನ್ನುತ್ತಾರೆ. ಕೆಲವು ಇಯರ್‌ಬಡ್‌ಗಳಲ್ಲಿ ಈ ರೀತಿ ಹಲವು ಗಂಟೆಗಳ ಕಾಲ ಬಳಸಿದ ನಂತರ ಮಾತ್ರವೇ ಉತ್ತಮ ಕಾರ್ಯಕ್ಷಮತೆ ಕಂಡುಬರುತ್ತದೆ.
ಈ ಇಯರ್‌ಬಡ್ ಅದೇ ಜಾತಿಗೆ ಸೇರಿದೆ. ಆದುದರಿಂದ ಕೊಂಡುಕೊಂಡ ತಕ್ಷಣ ಉತ್ತಮ ಧ್ವನಿ ಬರಲಿಲ್ಲ, ಅದರಲ್ಲೂ ಕಡಿಮೆ ಕಂಪನಾಂಕದ ಧ್ವನಿಯ (ಬಾಸ್) ಪುನರುತ್ಪತ್ತಿಯಲ್ಲಿ ಎಂದುಕೊಳ್ಳಬೇಡಿ. ಹಲವು ಗಂಟೆಗಳ (ದಿನಗಳು) ಕಾಲ ಬಳಸಿ ನೋಡಿ. ನಂತರ ನಿಮಗೆ ತೃಪ್ತಿ ನೀಡುವಂತಹ ಗುಣಮಟ್ಟದ ಧ್ವನಿ ಕೇಳಿಬರುತ್ತದೆ. 

ಪ್ರಯಾಣ ಕಾಲದಲ್ಲಿ ಇದನ್ನು ಇಟ್ಟುಕೊಳ್ಳಲು ಒಂದು ಚಿಕ್ಕ ಚೀಲವನ್ನೂ ನೀಡಿದ್ದರೆ ಚೆನ್ನಾಗಿತ್ತು. ಈ ಇಯರ್‌ಬಡ್ ಅನ್ನು ಕೆಲವು ಕಾರಣಗಳಿಗೆ ಕೊಂಡುಕೊಳ್ಳಬಹುದು. ಇದನ್ನು ತಯಾರಿಸಿದ್ದು ಜಗದ್ವಿಖ್ಯಾತ ಸೆನ್‌ಹೈಸರ್ ಕಂಪೆನಿ. ರಚನೆಯ ಗುಣಮಟ್ಟ ಉತ್ತಮವಾಗಿದೆ. ನೀವು ಹೆಚ್ಚು ಸಮಯ ಗಾಯನವನ್ನು (vocal) ಆಲಿಸುವವರಾದರೆ ಇದು ನಿಮಗೆ ಹೇಳಿ ಮಾಡಿಸಿದ್ದು. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಮೋಸವಿಲ್ಲ ಎನ್ನಬಹುದು.

ವಾರದ ಆಪ್ (app)– ಡಬ್ಲ್ಯು3ಸ್ಕೂಲ್ 

ವಿಶ್ವವ್ಯಾಪಿ ಜಾಲ (worldwide web) ಯಾರಿಗೆ ಗೊತ್ತಿಲ್ಲ? ಅದರಲ್ಲಿರುವ ಕೋಟಿಗಟ್ಟಲೆ ಜಾಲತಾಣಗಳಲ್ಲಿ ಕೆಲವು ಸಾವಿರಗಳನ್ನು ನೀವು ಬಳಸಿಯೇ ಇರುತ್ತೀರ. ಈ ಜಾಲತಾಣ ನಿರ್ಮಾಣ ಕಲಿಯಬೇಕೇ? ಅದಕ್ಕಾಗಿ ಬಳಸುವ ಎಚ್‌ಟಿಎಂಎಲ್ ಮತ್ತು ಇತರೆ ಭಾಷೆಗಳನ್ನು ಕಲಿಯಬೇಕೇ? ಅದಕ್ಕಾಗಿ www.w3schools.com ಎಂಬ ಜನಪ್ರಿಯ ಜಾಲತಾಣವಿದೆ. ಆಂಡ್ರಾಯಿಡ್ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ಗಳನ್ನು ಬಳಸುವವರಿಗಾಗಿ ಕಿರುತಂತ್ರಾಂಶ (ಆಪ್) ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿ w3school Offline and Online ಎಂಬ ಹೆಸರಿನಲ್ಲಿ ಲಭ್ಯವಿದೆ. ಇದನ್ನು ನಿಮ್ಮ ಆಂಡ್ರಾಯಿಡ್ ಫೋನಿನಲ್ಲಿ ಹಾಕಿಕೊಂಡು ಜಾಲತಾಣ ನಿರ್ಮಾಣ ಮತ್ತು ವಿನ್ಯಾಸ ಕಲಿಯಬಹುದು. ಸರಳವಾದ ಎಚ್‌ಟಿಎಂಎಲ್, ಸಿಎಸ್ಎಸ್, ಜಾಲತಾಣದ ಹಿನ್ನೆಲೆಯ ಬಣ್ಣ, ಪಠ್ಯದ ಬಣ್ಣ, ಆಡಿಯೊ ಮತ್ತು ವಿಡಿಯೊ ಸೇರಿಸುವುದು ಇತ್ಯಾದಿ ಜಾಲತಾಣ ನಿರ್ಮಾಣದ ಹಲವು ವಿಷಯಗಳನ್ನು ನಿಮ್ಮ ಅಂಗೈಯಲ್ಲೇ ಕಲಿಯಬಹುದು.

ಗ್ಯಾಜೆಟ್ ಸುದ್ದಿ– ಮೈಕ್ರೋಸಾಫ್ಟ್ ಹೋಲೋಲೆನ್ಸ್

ಕೆಲವು ಹಾಲಿವುಡ್ ಸಿನಿಮಾಗಳಲ್ಲಿ ನಟರು ಗಾಳಿಯಲ್ಲಿ ಮೂಡಿಬರುವ ಮೂರು ಆಯಾಮದ ವಸ್ತುಗಳ ಜೊತೆ ವ್ಯವಹರಿ ಸುವುದನ್ನು ನೋಡಿರುತ್ತೀರ. ಈಗ ಮೈಕ್ರೋಸಾಫ್ಟ್ ಅಂತಹುದನ್ನು ನಿಜ ಮಾಡಲು ಹೊರಟಿದೆ. ಮೈಕ್ರೋಸಾಫ್ಟ್‌ ಹೋಲೋಲೆನ್ಸ್ ಎಂಬುದು ಮೂರು ಆಯಾಮದ ಪ್ರತಿಕೃತಿಗಳನ್ನು ಕೃತಕವಾಗಿ ಗಾಳಿಯಲ್ಲಿ ಮೂಡಿಬಂದಂತೆ ಕಾಣಿಸುವ ಒಂದು ಕನ್ನಡಕ. ಇದನ್ನು ಹಾಕಿಕೊಂಡರೆ ಅದು ಧರಿಸಿದವನ ಕಣ್ಣ ಮುಂದೆ ಗಾಳಿಯಲ್ಲಿ ವಸ್ತುಗಳು ಕೃತ್ರಿಮವಾಗಿ ಇರುವ ಭಾವನೆ ಬರುವಂತೆ ಮಾಡುತ್ತದೆ. ಆದರೆ ಇದು ಅಷ್ಟಕ್ಕೇ ನಿಲ್ಲುವುದಿಲ್ಲ. ಈ ವಸ್ತುಗಳ ಜೊತೆ ಧರಿಸಿದಾತ ವ್ಯವಹರಿಸಬಹುದು. ಉದಾಹರಣೆಗೆ ಒಂದು ನಲ್ಲಿಯ ಕೃತಕ ಪ್ರತಿಕೃತಿಯನ್ನು ಮೂಡಿಸಿ ಅದನ್ನು ತಿರುಗಿಸಿದ ಅನುಭವವನ್ನು ಹೊಂದಬಹುದು. ಇದು ವಿನ್ಯಾಸ ಗಾರರಿಗೆ, ವಿಜ್ಞಾನಿಗಳಿಗೆ, ತಂತ್ರಜ್ಞರಿಗೆ ಎಲ್ಲ ರೀತಿಯಿಂದ ಉಪಯುಕ್ತ.

ಗ್ಯಾಜೆಟ್ ತರ್ಲೆ
ಮಹಾಭಾರತದ ಕಾಲದಲ್ಲಿ ಮೊಬೈಲ್ ಫೋನ್ ಇದ್ದಿದ್ದರೆ ಏನಾಗುತ್ತಿತ್ತು? ಧರ್ಮರಾಯನ ತಮ್ಮಂದಿರು ಯಕ್ಷನ ಸರೋವರದ ನೀರು ಕುಡಿಯುವ ಮೊದಲು ಅಣ್ಣನ ಅನುಮತಿಯನ್ನು ಫೋನ್ ಮಾಡಿ ಕೇಳುತ್ತಿದ್ದರು. ಯಕ್ಷ ನೀರು ಕುಡಿಯಬೇಡ, ನನ್ನ ಪ್ರಶ್ನೆಗೆ ಮೊದಲು ಉತ್ತರಿಸು ಎಂದಾಗ, ಅಣ್ಣನಿಗೆ ಅದನ್ನೇ ವರದಿ ಮಾಡಿ ಅಣ್ಣನಿಂದ ಉತ್ತರ ಪಡೆದು ಯಕ್ಷನಿಗೆ ಒಪ್ಪಿಸುತ್ತಿದ್ದರು.
 

ಗ್ಯಾಜೆಟ್ ಸಲಹೆ
ಕೃ.ಪ. ಗಣೇಶರ ಪ್ರಶ್ನೆ: ನಾನು ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೇನೆ. ಕಾಲೇಜಿನಲ್ಲಿ ಆಗಾಗ್ಗೆ ಸಣ್ಣಪುಟ್ಟ ಸಮಾರಂಭಗಳು, ಹೊರಾಂಗಣದಲ್ಲಿ ನಡೆಯುವ ಕಾರ್ಯಕ್ರಮಗಳು, ಇತ್ಯಾದಿಗಳಿಗೆ ವೃತ್ತಿಪರ ಛಾಯಾಗ್ರಾಹಕರನ್ನು ಕರೆಸಲು ಸಾಧ್ಯವಾಗುವುದಿಲ್ಲ. ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಫೋಟೊ ಹೊಡೆದು ದಾಖಲೆ ಮಾಡಿ ವಾರ್ಷಿಕ ವರದಿಯನ್ನು ಸಚಿತ್ರ ಸಮೇತ ಇಲಾಖೆಗೆ ನೀಡಬೇಕು. ಪತ್ರಿಕೆಗಳಿಗೆ ಫೋಟೊ ಮತ್ತು ಸುದ್ದಿಯನ್ನು ಇಮೈಲ್ ಮಾಡಬೇಕು. ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸವನ್ನು ವಾಯ್ಸ್ ರೆಕಾರ್ಡ್ ಮಾಡಬೇಕು. ನನಗೆ ತುಸು ಬೆಲೆ ಹೆಚ್ಚಾದರೂ ಪರವಾಗಿಲ್ಲ ಒಳಾಂಗಣ ಮತ್ತು ಹೊರಾಂಗಣದಲ್ಲಿ ಫೋಟೊ ತೆಗೆಯಲು ಅತ್ಯುತ್ತಮ ದರ್ಜೆಯ HD ಇರುವ ಒಳ್ಳೆಯ ಕ್ಯಾಮೆರಾ ಮತ್ತು ಅತ್ಯುತ್ತಮ ವಾಯ್ಸ್ ರೆಕಾರ್ಡರ್ (ಗಂಟೆಗಟ್ಟಲೆ ರೆಕಾರ್ಡ್ ಮಾಡಲು) ಎರಡೂ ಸೌಲಭ್ಯ ಇರುವ ಒಂದು ಒಳ್ಳೆಯ ಮೊಬೈಲ್ ಅನ್ನು ದಯವಿಟ್ಟು ತಿಳಿಸಿ.
ಉ: ಲುಮಿಯಾ 930 ಅಥವಾ 830.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT