ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಥ ನಾಯಕನ ಗುಣ

Last Updated 7 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ದೇಶ ಕಟ್ಟುವ ಕೆಲಸ ಯಾರೊಬ್ಬರದೂ ಅಲ್ಲ, ಅದು ಎಲ್ಲರದ್ದೂ ಹೌದು. ಸಾಮಾನ್ಯವಾಗಿ ದೊಡ್ಡ ದೊಡ್ಡ ನಾಯಕರು ದೇಶ  ಕಟ್ಟಿದರೆಂದು ಇತಿಹಾಸ ಹೇಳುತ್ತದೆ. ಇತಿಹಾಸ ದಾಖಲಿಸುವುದೂ ಅಂತಹ ಜನರ ಜೀವನವನ್ನೇ. ಜನಸಾಮಾನ್ಯರ ಅಸಾಮಾನ್ಯ ಸಾಧನೆಗಳು ಪುಸ್ತಕದ ಹಾಳೆಗಳಲ್ಲಿ ದಾಖಲಾಗದೆ ಹೋಗುತ್ತವೆ. ಅವರ ಪರಿಶ್ರಮ ಕಟ್ಟಡದ ಅಡಿಪಾಯವಿದ್ದಂತೆ. ಅದು ನೆಲದ ಮೇಲೆ ಕಾಣದಿರಬಹುದು ಆದರೆ, ಇಡೀ ಕಟ್ಟಡದ ಭಾರ ನಿಂತಿರುವುದು ಮಾತ್ರ ಅದರ ಮೇಲೆಯೇ. ಕೆಲವು ನಾಯಕರು ಮಾತ್ರ ಈ ಸಾಮಾನ್ಯ ಜನರ ಕಾಣಿಕೆ ಗ್ರಹಿಸಿ ಮೆಚ್ಚುಗೆ ತೋರುತ್ತಾರೆ.

ಎರಡನೇ ಮಹಾಯುದ್ಧ ನಡೆಯುತ್ತಿತ್ತು. ಘನಘೋರ ಸಂಗ್ರಾಮದಲ್ಲಿ ದಿನನಿತ್ಯ ಅನೇಕ ಜೀವಗಳ ಆಹುತಿಯಾಗುತ್ತಿತ್ತು. ಆಗ ಇಂಗ್ಲೆಂಡ್‌ನ ಪ್ರಧಾನಿಯಾಗಿದ್ದ ವಿನ್‌ಸ್ಟನ್ ಚರ್ಚಿಲ್ ಒಂದು ಕ್ಷಣವನ್ನೂ ವ್ಯರ್ಥಮಾಡದೆ ದೇಶದ ಮೂಲೆ ಮೂಲೆಗಳನ್ನು ಸುತ್ತಿ ಜನರಿಗೆ ಉತ್ತೇಜನ ನೀಡುತ್ತಿದ್ದರು, ಪ್ರಾಣ ಕಳೆದುಕೊಂಡ ಸೈನಿಕರ ಮನೆಗಳಿಗೆ ಹೋಗಿ ಅವರಿಗೆ ಸಾಂತ್ವನ ಹೇಳುತ್ತಿದ್ದರು. ಚರ್ಚಿಲ್‌ರ ಬಗ್ಗೆ ಜನರಿಗೆ ಅತ್ಯಂತ ಪ್ರೀತಿ ಮತ್ತು ಗೌರವ. ಲಂಡನ್ ನಗರದ ಮೇಲೆ ಮೇಲಿಂದ ಮೇಲೆ ಬಾಂಬ್ ದಾಳಿಗಳಾಗುತ್ತಿದ್ದವು. ಸುಮಾರು ಮೂವತ್ತೈದು ಸಾವಿರ ಜನ ಸಾವನ್ನಪ್ಪಿದ್ದರು. ಆಗಲಂತೂ ಚರ್ಚಿಲ್ ಜನರ ಕುಸಿಯುವ ಮನೋಬಲ ಬೆಳೆಸಲು ಅವಿರತ ಪ್ರಯತ್ನ ಮಾಡುತ್ತಿದ್ದರು. ಸೇನೆಯ ಪ್ರಮುಖರನ್ನು, ಕಾರ್ಖಾನೆಗಳ ಮಾಲೀಕರನ್ನು, ಸಮಾಜ ಸುಧಾರಕರನ್ನು ಭೆಟ್ಟಿಯಾಗಿ ಜಯ ಕೊನೆಗೆ ನಮ್ಮದೇ ಎಂದು ನಂಬಿಸಲು ಶ್ರಮಿಸುತ್ತಿದ್ದರು.

ಆಗೊಮ್ಮೆ ಚರ್ಚಿಲ್‌ರ ಬುದ್ಧಿಗೆ ವಿಚಾರವೊಂದು ಹೊಳೆಯಿತು. ತಾನು ಬರೀ ದೊಡ್ಡವರನ್ನು ಮಾತ್ರ ಭೆಟ್ಟಿಯಾಗಿ ಮಾತನಾಡುತ್ತಿದ್ದೇನೆ. ತೀರ ಸಾಮಾನ್ಯರಾದವರೂ ಬಲಿದಾನ ಮಾಡುತ್ತಿಲ್ಲವೇ. ಅವರೂ ದೇಶಕ್ಕಾಗಿ ದುಡಿಯುತ್ತಿಲ್ಲವೇ. ಅವರನ್ನೂ ಮಾತನಾಡಿಸಬೇಕೆಂದು ತೀರ್ಮಾನಿಸಿದರು. ಮನೆ ಮನೆಗಳಿಗೆ ಹೋಗಿ ಜನರನ್ನು ಕಂಡರು. ಹೀಗೊಂದು ಬಾರಿ ಪ್ರವಾಸಮಾಡುವಾಗ ಗಣಿಗಳಲ್ಲಿ ಕಲ್ಲಿದದಲು ಅಗೆಯುವ ಕಾರ್ಮಿಕರನ್ನು ನೋಡಿ ಮಾತನಾಡಿಸಲು ಹವಣಿಸಿದರು. ಆಗ ಅವರೊಂದಿಗಿದ್ದವರು,  ಅವರನ್ನೇನು ಮಾತನಾಡಿಸುವುದು. ಕೂಲಿಗಾಗಿ ದುಡಿಯುವ ಈ ಕೂಲಿಗಳಿಗೆ ಯುದ್ಧ ನಡೆದದ್ದು ಕೂಡ ತಿಳಿದಿರಲಿಕ್ಕಿಲ್ಲ. ಅವರಿಂದ ಏನಾದೀತು  ಎಂದು ಅನುಮಾನ ಸೂಚಿಸಿದರು. ಆದರೆ ಚರ್ಚಿಲ್ ಹಟದಿಂದ   ಗಣಿ ಕಾರ್ಮಿಕರ ಬಳಿಗೆ ಹೋದರು.

ತಮ್ಮ ದೇಶದ ಮಹಾನ್ ನಾಯಕ, ಪ್ರಧಾನಿ ಚರ್ಚಿಲ್ ತಮ್ಮನ್ನು ಕಾಣಲು ಬಂದಿದ್ದಾರೆ ಎಂದಾಗ ಕಾರ್ಮಿಕರೆಲ್ಲ ಸಂತೋಷದಿಂದ ಬಂದು ಸೇರಿದರು.

ಚರ್ಚಿಲ್ ಆ ಕೂಲಿಕಾರರ ಮಸಿಮೆತ್ತಿದ ಮುಖಗಳನ್ನು ನೋಡಿದರು, ಆ ಮ್ಲೋನವದನಗಳ ಹಿಂದಿದ್ದ ಜೀವನೋತ್ಸಾಹದ ಬುಗ್ಗೆ ಕಂಡರು. ಅವರು ಹೇಳಿದರು,  `ಸಹೋದರರೇ ನಿಮ್ಮಲ್ಲಿ ಯಾವ ಸಂದೇಹವೂ ಬೇಡ, ಜಯ ನಮ್ಮದೇ. ನಮ್ಮ ಸ್ವಾತಂತ್ರ್ಯವನ್ನು ನಾವು ರಕ್ಷಿಸಿಕೊಂಡೇ ತೀರುತ್ತೇವೆ. ಇನ್ನು ಸ್ವಲ್ಪೇ ದಿನಗಳಲ್ಲಿ ಶಾಂತಿ ನೆಲೆಸುತ್ತದೆ. ನಿಮ್ಮ ಮಕ್ಕಳು, ಅವರ ಮಕ್ಕಳು ಮತ್ತು ಅವರ ಮಕ್ಕಳ ಮಕ್ಕಳು ಸದಾಕಾಲ ಶಾಂತಿ ಸಮೃದ್ಧಿಯಿಂದ ಇರುವ ಭರವಸೆಯನ್ನು ನಾನು ನೀಡುತ್ತೇನೆ. ನಿಮ್ಮ ಮೊಮ್ಮಕ್ಕಳು ಬಂದು ನಿಮ್ಮನ್ನು ಕೇಳುತ್ತಾರೆ,  ತಾತ, ನೀವು ನಮ್ಮ ದೇಶಕ್ಕಾಗಿ ಏನು ಮಾಡಿದಿರಿ. ಯುದ್ಧದಲ್ಲಿ ಜಯಗಳಿಸಲು ನಿಮ್ಮ ಕಾಣಿಕೆ ಏನು ಅಂತ. ಆಗ ನಮ್ಮ ದೇಶದ ಕೆಲವರು- `ನಾನು ಯುದ್ಧದಲ್ಲಿ ಶೌರ್ಯದಿಂದ ಹೋರಾಡಿದೆ, ಮತ್ತೆ ಕೆಲವರು,  ನಾನು ಹಡಗುಗಳನ್ನು ನಡೆಸಿದೆ  ಎನ್ನಬಹುದು. ಇನ್ನೂ ಕೆಲವರು ಅಭಿಮಾನದಿಂದ  ನಾನು ಯುದ್ಧ ಸಾಮಗ್ರಿಗಳನ್ನು ತಯಾರಿಸಿದೆ, ನಾನು ವೈದ್ಯನಾಗಿ ಸೈನಿಕರ ಶುಶ್ರೂಷೆ ಮಾಡಿದೆ, ನಾನು ಕಾರ್ಖಾನೆ ನಡೆಸಿದೆ  ಎಂದೂ ಹೇಳಬಹುದು. ಕ್ಷಣಕಾಲ ನಿಂತು ಚರ್ಚಿಲ್ ಕೈ, ಮುಖ ಕೊಳಕಾದ ಈ ಜನರನ್ನು ನೋಡಿ ಮತ್ತೆ ಹೇಳಿದರು,  ಆಗ ನೀವು ಇನ್ನೂ ಹೆಚ್ಚಿದ ಅಭಿಮಾನದಿಂದ ಹೇಳುತ್ತೀರಿ, `ಯಾವ ಹಡಗು ಮುನ್ನುಗ್ಗಿತೋ, ಯಾವ ಸೈನ್ಯ ಮುನ್ನುಗ್ಗಿತೋ ಅವರಿಗೆ ಶಕ್ತಿ ದೊರಕಿಸಿದ ಕಲ್ಲಿದ್ದಲನ್ನು ನೆಲದಿಂದ ಕಿತ್ತು ಕಿತ್ತು ಕೊಟ್ಟು ದೇಶಸೇವೆ ಮಾಡಿದ್ದೇವೆಯೆಂದು  ಹೇಳಬೇಕು'  ಎಂದಾಗ ಕಾರ್ಮಿಕರು ಹರ್ಷೋದ್ಗಾರ ಮಾಡಿದರು. ತಾವು ಹೊಟ್ಟೆಪಾಡಿಗೆ ಮಾಡುತ್ತಿದ್ದ ಕೆಲಸ ಎಷ್ಟು ದೊಡ್ಡದು ಎಂಬ ಅರಿವಾಯಿತು. ಅವರ ಕಣ್ಣುಗಳು ಹನಿಗೂಡಿದವು.

ಇದು ಅಸಾಮಾನ್ಯ ನಾಯಕರು ಮಾಡುವ, ಮಾಡಬೇಕಾದ ಕೆಲಸ. ಪ್ರತಿಯೊಬ್ಬರಲ್ಲೂ ದೇಶಪ್ರೇಮ ಬಡಿದೆಬ್ಬಿಸುವ, ಅವರ ಕೆಲಸ ಕೀಳಲ್ಲ ಎಂಬ ಭರವಸೆ ನೀಡುವ ನಾಯಕರ ಅವಶ್ಯಕತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT