ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸಂಸ್ಥೆಗಳ ಸಂಶೋಧನೆಯ ಮಾಲೀಕರು ಯಾರು?

Last Updated 16 ಜೂನ್ 2018, 9:24 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಕ್ರ­ವನ್ನು ಮತ್ತೆ ಕಂಡುಹಿಡಿಯುವ ಕೆಲಸ­ವನ್ನು ಕೈಬಿಟ್ಟಿದೆ. ಸ್ವತಂತ್ರ ಮತ್ತು ಮುಕ್ತ ತಂತ್ರಾಂಶದ ಆಂದೋಲನದಲ್ಲಿ ಸಕ್ರಿಯ­ವಾಗಿರುವ ಬಳಗದ ಪ್ರಯತ್ನ ಸರ್ಕಾ­ರದ ಕಣ್ಣು ತೆರೆಸಿದೆ. ಫೆಬ್ರುವರಿ 7ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಗಳು ಇಲ್ಲಿಯ ತನಕ ಕನ್ನಡ ಓಸಿಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ಅಥವಾ ಮುದ್ರಿತ ಅಕ್ಷರ­ಗಳನ್ನು ಕಂಪ್ಯೂಟರ್ ಅರ್ಥ ಮಾಡಿ­ಕೊಳ್ಳಬಲ್ಲ, ಕಂಪ್ಯೂಟರಿನಲ್ಲಿ ಸಂಪಾ­ದಿಸಲು ಸಾಧ್ಯವಿರುವ ಪಠ್ಯವಾಗಿ ಪರಿ­ವರ್ತಿಸುವ ಕ್ರಿಯೆ)  ಅಭಿವೃದ್ಧಿ­ಯಲ್ಲಿ ತೊಡಗಿಸಿ­ಕೊಂಡಿರುವ ಎಲ್ಲರನ್ನೂ ಕರೆದು ಪ್ರತಿಯೊಂದು ತಂತ್ರಾಂಶ­ವನ್ನೂ ತಂತ್ರಜ್ಞರು, ಭಾಷಾ ತಜ್ಞರ ಸಮ್ಮುಖದಲ್ಲಿ ಮುಕ್ತ ಪರಿಶೀಲನೆ ನಡೆಸಿತು. ಅದರ ಜೊತೆಗೆ, ಈ ಹಿಂದೆ ಓಸಿಆರ್ ಹಾಗೂ ಇತರ ತಂತ್ರಾಂಶ­ಗಳಿಗಾಗಿ ಕರೆದಿದ್ದ ಟೆಂಡರ್ ಅನ್ನು ಹಿಂದೆಗೆದು­ಕೊಂಡಿರುವುದಾಗಿಯೂ ಪ್ರಕಟಿಸಿತು.

ಸಾಮಾನ್ಯವಾಗಿ ಸರ್ಕಾರಿ ಕೆಂಪು ಪಟ್ಟಿಯೊಳಗೆ ಪ್ರತಿಭಟನೆಗಳು ಹೂತು ಹೋಗುವುದೇ ಹೆಚ್ಚು. ಆದರೆ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ತಂತ್ರಾಂಶ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಭಿನ್ನಮತ­ವನ್ನು ರಚನಾತ್ಮಕವಾಗಿ ಸ್ವೀಕರಿಸಿದ್ದ­ರಿಂದ ಕನ್ನಡ ಓಸಿಆರ್ ಅಭಿವೃದ್ಧಿಗೆ ಸಂಬಂ­ಧಿಸಿದಂತೆ ಈ ತನಕ ನಡೆದಿರುವ ಪ್ರಯತ್ನ­ಗಳ ಚಿತ್ರಣವೊಂದು ಲಭಿಸಿತು. ಸರ್ಕಾರಿ ಸಂಪನ್ಮೂಲ ಬಳಸಿ ನಡೆದಿ­ರುವ ಸಂಶೋಧನೆಗಳು, ಸಮು­ದಾಯದ ಪಾಲ್ಗೊಳ್ಳುವಿಕೆ­ಯೊಂದಿಗೆ ನಡೆ­ದಿರುವ ಪ್ರಯತ್ನ ಹಾಗೂ ಖಾಸಗಿ ಪ್ರಯತ್ನಗಳೆಲ್ಲವೂ ಈ ಸಭೆಯಲ್ಲಿ ಅನಾ­ವರಣಗೊಂಡವು. ಅತ್ಯುತ್ತಮ ಎನ್ನ­ಬಹುದಾದ ಖಾಸಗಿ ಪ್ರಯತ್ನಗಳ ಜೊತೆ­ಯಲ್ಲೇ ತೃಪ್ತಿಕರ ಮಟ್ಟ­ದಲ್ಲಿರುವ ಸಾಮುದಾಯಿಕ ಪಾಲ್ಗೊ­ಳ್ಳುವಿಕೆಯ ಅಭಿವೃದ್ಧಿಯ ಪ್ರಯತ್ನವೂ ಇದೆ ಎಂಬುದು ಎಲ್ಲರಿಗೂ ತಿಳಿಯಿತು. ಅಷ್ಟೇ ಅಲ್ಲ ಕೇಂದ್ರ ಸರ್ಕಾರದ ಟಿಡಿ­ಐಎಲ್ ಯೋಜನೆಯ (ಭಾರತೀಯ ಭಾಷೆಗಳಿಗಾಗಿ ತಂತ್ರಜ್ಞಾನ ಅಭಿವೃದ್ಧಿ) ನೆರವು ಪಡೆದು ಬೆಂಗಳೂರಿನ ಇಂಡಿ­ಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಅಭಿವೃದ್ಧಿ ಪಡಿಸಿರುವ ಓಸಿಆರ್ ಹೇಗಿದೆ ಎಂಬುದು ಬಹುಶಃ ಇದೇ ಮೊದಲ ಬಾರಿಗೆ ಕ್ಷೇತ್ರದ ಆಸಕ್ತ­ರಿಗೆ ತಿಳಿಯಿತು. ಆದರೆ, ಈ ತಂತ್ರಾಂ­ಶದ ಆಕರ ಸಂಕೇತಗಳನ್ನು ಮುಕ್ತ­ವಾಗಿ ಬಿಡುಗಡೆ ಮಾಡಲು ಐಐಎಸ್‌ಸಿಯ ಪ್ರತಿನಿಧಿಗಳು ನಿರಾ­ಕರಿಸಿ­ದರು ಎಂಬು­ದನ್ನು ಈ ಸಭೆಯನ್ನು ಸಂಘಟಿಸು­ವಲ್ಲಿ ಪ್ರಮುಖ ಪಾತ್ರವಹಿಸಿದ ‘ಮಿತ್ರ­ಮಾಧ್ಯಮ’ದ (http://­goo.gl/nYrT22) ಬೇಳೂರು ಸುದರ್ಶನ ತಮ್ಮ ಜಾಲತಾಣದಲ್ಲಿ ದಾಖಲಿಸಿದ್ದಾರೆ.

ಐಐಎಸ್‌ಸಿಯ ನಿಲುವು ಸರ್ಕಾರದ ಸಂಪೂರ್ಣ ನೆರವಿನೊಂದಿಗೆ ಕಾರ್ಯ­ನಿರ್ವ­ಹಿಸುತ್ತಿರುವ ಐಐಎಸ್‌ಸಿಯಂಥ ಸಂಸ್ಥೆಯ ಸಂಶೋಧನೆಗಳ ಫಲ ಯಾರಿಗೆ ದೊರೆಯಬೇಕು ಎಂಬ ಪ್ರಶ್ನೆಗೆ ಕಾರಣವಾಗುತ್ತದೆ. ಭಾರ­ತೀಯ ಭಾಷೆಗಳಿಗೆ ತಂತ್ರಜ್ಞಾನ ಅಭಿ­ವೃದ್ಧಿ ಪಡಿಸುವ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಒದಗಿಸಿದ ಸಂಪನ್ಮೂಲದಿಂದ ಓಸಿಆರ್ ಸಿದ್ಧವಾಗಿದೆ. ಅಂದರೆ ಇದು ಜನ ಬಳಕೆಗೆ ಮುಕ್ತವಾಗಿ ಲಭ್ಯವಾಗ­ಬೇಕು ಎಂಬುದು ಸಾಮಾನ್ಯ ತರ್ಕಕ್ಕೆ ಸಿಗುವ ವಾದ. ಆದರೆ ಐಐಎಸ್‌ಸಿಯ ವಿದ್ವಾಂ­ಸರು ಹೇಳುವಂತೆ ಇದನ್ನು ಮುಕ್ತ­ವಾಗಿರಿಸಿದರೆ ದೊಡ್ಡ ಸಂಸ್ಥೆಗಳು ಇದನ್ನು ದುರುಪಯೋಗ­ಪಡಿಸಿ­ಕೊಳ್ಳ­ಬಹು­ದಂತೆ. ಅದಕ್ಕಾಗಿ ಈ ತಂತ್ರಾಂಶ­ವನ್ನು ಖಾಸಗಿಯವರ ಮೂಲಕ ಜನರ ಬಳಕೆಗೆ ಬಿಡುಗಡೆ ಮಾಡುತ್ತಾರಂತೆ. ತರ್ಕಕ್ಕೆ ಈ ವಾದವನ್ನು ಒಪ್ಪಿ­ಕೊಂಡರೂ ಮತ್ತೊಂದು ಸಮಸ್ಯೆ ಉದ್ಭವಿಸುತ್ತದೆ. ಮುಕ್ತವಾಗಿರಿಸಿದರೆ ದೊಡ್ಡ ಸಂಸ್ಥೆಗಳು ದುರುಪಯೋಗ­ಪಡಿಸಿ­ಕೊಳ್ಳುತ್ತವೆ. ಖಾಸಗಿ ಸಂಸ್ಥೆ­ಯೊಂದರ ಮೂಲಕ ಬಿಡುಗಡೆ ಮಾಡಿ­ದರೆ ಆ ಸಂಸ್ಥೆ ಇದನ್ನು ದುರು­ಪ­ಯೋಗ ಪಡಿಸಿಕೊಳ್ಳುವುದಿಲ್ಲ ಎನ್ನು­ವುದಕ್ಕೆ ಏನು ಖಾತರಿ? ಇಷ್ಟಕ್ಕೂ ಈ ಉತ್ಪನ್ನಕ್ಕೆ ಭಾರೀ ವಾಣಿಜ್ಯ ಬೇಡಿಕೆ ಇದೆ ಎಂದಾದರೆ ಅದನ್ನಾದರೂ ರಚ­ನಾ­ತ್ಮಕವಾಗಿ ಬಳಸಿಕೊಳ್ಳುವ ಪ್ರಯತ್ನ­ವನ್ನು ಐಐಎಸ್‌ಸಿ ಯಾಕೆ ಮಾಡ­ಲಿಲ್ಲ ಎಂಬ ಪ್ರಶ್ನೆಯೂ ಇಲ್ಲಿ ಪ್ರಸ್ತುತ­ವಾಗು­ತ್ತದೆ. ಇಷ್ಟಕ್ಕೂ ಈ ತಂತ್ರಾಂಶ ಸಿದ್ಧ­ಗೊಂಡು ಹಲವಾರು ವರ್ಷಗಳೇ ಉರು­ಳಿ­ದವು. ಇಲ್ಲಿಯ ತನಕವೂ ಇದು ಬೆಳಕು ಕಾಣದೇ ಇರುವ ಸ್ಥಿತಿ­ಯನ್ನು ಹೇಗೆಂದು ಅರ್ಥೈಸುವುದು?

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳ ದೊಡ್ಡ ಕೆಲಸಗಳನ್ನು ಮಾಡುತ್ತಿರುವ  ಐಐಟಿ, ಐಐಎಸ್‌ಸಿ­ಯಂಥ ಸಂಸ್ಥೆಗಳು ಭಾರತೀಯ ಭಾಷೆ­ಗಳ ತಂತ್ರಜ್ಞಾನದಂಥ ವಿಚಾರಕ್ಕೆ ಬಂದಾಗ ಯಾವ ರೀತಿಯ ನಿಲುವು ತಳೆ­ಯುತ್ತವೆ ಎಂಬುದನ್ನು ಸೂಕ್ಷ್ಮ­ವಾಗಿ ಪರಿಶೀಲಿಸುವ ಅಗತ್ಯವಿದೆ. ಕಂಪ್ಯೂ­ಟರ್ ಮತ್ತು ಭಾರತೀಯ ಭಾಷೆ­ಗಳಿಗೆ ಸಂಬಂಧಿಸಿದಂತೆ ಈ ಸಂಸ್ಥೆ­ಗಳಲ್ಲಿ ನಡೆಯುತ್ತಿರುವ ಸಂಶೋಧನೆ­ಗಳ ಪ್ರಮಾಣವೇನೂ ಸಣ್ಣದಲ್ಲ. ಹಾಗೆಯೇ ಭಾರತೀಯವಾದ ಕಂಪ್ಯೂ­ಟಿಂಗ್‌­­ಗಾಗಿಯೇ ಸ್ಥಾಪಿತವಾಗಿರುವ ಸಿ-ಡಾಕ್ (CDAC) ಕೂಡಾ ಭಾರ­ತೀಯ ಭಾಷೆಗಳ ಕಂಪ್ಯೂಟಿಂಗ್ ಕ್ಷೇತ್ರ­ದಲ್ಲಿ ಅನೇಕ ಕೆಲಸಗಳನ್ನು ಮಾಡಿದೆ ಎಂಬುದು ಅದರ ವಾರ್ಷಿಕ ವರದಿ­ಗಳಲ್ಲಿ ಕಾಣಸಿಗುತ್ತದೆ. ಈ ಸಂಸ್ಥೆ ಕೂಡಾ ‘ಚಿತ್ರಾಂಕಣ’ ಎಂದು ಓಸಿಆರ್ ಅಭಿವೃದ್ಧಿ ಪಡಿಸಿತ್ತು ಎಂಬ ಮಾಹಿತಿ­ಯನ್ನು ಬೇಳೂರು ಸುದರ್ಶನ ಪಾತಾಳ ಗರಡಿ ಹಾಕಿ ಹೊರತೆಗೆದಿ­ದ್ದಾರೆ. ಭಾರತೀಯ ಭಾಷೆಗಳಿಗೆ ಸಮಗ್ರವಾದ ಒಂದು ಓಸಿಆರ್ ಅಭಿವೃದ್ಧಿ ಪಡಿಸುವುದಕ್ಕೆ ವಿವಿಧ ಸಂಸ್ಥೆ­ಗಳ ಮತ್ತು ತಜ್ಞರ ಕೂಟವೊಂದನ್ನು ರೂಪಿಸಿ­ರುವುದು ಮತ್ತು ಅದು ಮಾಡಿದ ‘ಅತ್ಯುತ್ತಮ’ ಕೆಲಸದಿಂದ ಸಂತೋಷಗೊಂಡು ಅದರ ಎರಡನೇ ಹಂತದ ಕೆಲಸಕ್ಕೆ ಹಣಕಾಸನ್ನು ಮಂಜೂರು ಮಾಡಿರುವ ಸಂಗತಿ ಕೂಡಾ ಸಿ-ಡಾಕ್‌ನ 2010-11ರ ವಾರ್ಷಿಕ ವರದಿ ಹೇಳುತ್ತದೆ.

2000ನೇ ಇಸವಿಯಿಂದಲೇ ದಕ್ಷಿಣ ಭಾರತದ ಭಾಷೆಗಳ ಓಸಿಆರ್‌ಗಾಗಿ ಕೆಲಸ ನಡೆಯುತ್ತಿರುವುದನ್ನು ಐಐ­ಎಸ್‌ಸಿಯ ಮೆಡಿಕಲ್ ಇಂಟೆಲಿಜೆನ್ಸ್ ಮತ್ತು ಲಾಂಗ್ವೇಜ್ ಎಂಜಿನಿಯರಿಂಗ್ ಲ್ಯಾಬೊ­ರೇಟರಿಯ ಜಾಲತಾಣ­ದಲ್ಲಿ­ರುವ ವಿವರಗಳು ಸೂಚಿಸುತ್ತಿವೆ. ಈ ಮಧ್ಯೆ ತಮಿಳು ಮತ್ತು ಕನ್ನಡದ ಮುದ್ರಿತ ಅಕ್ಷರಗಳನ್ನು ಪಠ್ಯವಾಗಿ ಪರಿವರ್ತಿ­ಸುವ ಯೋಜನೆ, ಕೈಬರಹ­ವನ್ನು ಕಂಪ್ಯೂಟರ್ ಗುರುತಿಸುವಂತೆ ಮಾಡುವ ಯೋಜನೆಗಳ ವಿವರಗಳೆಲ್ಲಾ ಇಲ್ಲಿವೆ. ಇವುಗಳ ಮುಖ್ಯ ಸಂಶೋಧಕ, ಸಹ ಸಂಶೋಧಕನಾಗಿ ಕೆಲಸ ಮಾಡಿದ್ದವರ ಹೆಸರುಗಳ ಅಡಿಯಲ್ಲಿ ಈ ವಿವರಗಳು ಲಭ್ಯವಿವೆ. ಆದರೆ ಈ ಸಂಶೋಧನೆ­ಗಳ ಫಲಿತಾಂಶವೇನು? ಇದರಿಂದ ಕನ್ನಡ ಬಿಡಿ; ಯಾವುದಾದರೂ ಒಂದು ಭಾರ­ತೀಯ ಭಾಷೆ­ಗಾದರೂ ಏನಾದರೂ ಅನು­ಕೂಲ­ವಾಗಿ­ದೆಯೇ? ಯಾವು­ದಾ­ದರೂ ಜನಬಳಕೆಗೆ ಸಾಧ್ಯವಿರುವ ಉತ್ಪನ್ನ ಹೊರಬಂದಿದೆಯೇ? ಎಂಬ ಪ್ರಶ್ನೆ­ಗಳನ್ನು ಮುಂದಿಟ್ಟುಕೊಂಡರೆ ಸಿಗುವ ಉತ್ತರ ಬಹುತೇಕ ಶೂನ್ಯ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ­ದಲ್ಲಿ ನಡೆಯುವ ಎಲ್ಲಾ ಸಂಶೋ­ಧನೆಗಳೂ ಏನಾದ­ರೊಂದು ಉತ್ಪನ್ನ­ವಾ­ಗಿಯೇ ಜನರೆದುರು ಬರ­ಬೇಕೆಂ­ದಿಲ್ಲ. ಅದು ವಿಜ್ಞಾನ ಮತ್ತು ತಂತ್ರ­ಜ್ಞಾನದ ಕ್ಷೇತ್ರದ ಒಟ್ಟು ಬೆಳವಣಿಗೆ­ಯಲ್ಲಿ ತನ್ನದೇ ಆದ ರೀತಿಯ ಕಾಣಿಕೆಯನ್ನು ನೀಡ­ಬಹುದು. ಆದರೆ ನಿರ್ದಿಷ್ಟ ಉದ್ದೇಶಕ್ಕಾಗಿಯೇ ಒಂದು ಸಂಶೋಧನೆ­ಯನ್ನು ಕೈಗೆತ್ತಿಕೊಂಡು ಜನಸಾಮಾನ್ಯನ ತೆರಿಗೆಯ ಹಣವನ್ನು ವ್ಯಯಿಸಿ­ದಾಗ ಅದರ ಫಲಿತಾಂಶವೇನು ಎಂಬು­ದನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಈ ಸಂಸ್ಥೆಗಳ ಜವಾಬ್ದಾರಿಯಲ್ಲವೇ?

ಕನ್ನಡವೂ ಸೇರಿದಂತೆ ಅನೇಕ ಭಾರ­ತೀಯ ಭಾಷೆಗಳು ಅಂತಾ­ರಾಷ್ಟ್ರೀಯ ಶಿಷ್ಟತೆಯಾದ ಯೂನಿಕೋಡ್‌ನ ಪರಿಧಿ­ಯೊಳಗೆ ಬಂದು ಎರಡೂವರೆ ದಶಕ­ಗಳೇ ದಾಟಿ ಹೋದವು. ತೊಂಬ­ತ್ತರ ದಶಕದ ಆರಂಭ­ದಲ್ಲಿಯೇ ಯೂನಿಕೋಡ್ ಶಿಷ್ಟತೆಯ ಮೊದಲ ಆವೃತ್ತಿ ಪ್ರಕಟವಾಗಿತ್ತು. ಅದರಲ್ಲಿ ಕನ್ನಡವೂ ಒಳಗೊಂಡಿತ್ತು. ಆದರೆ, ಇದು ಕನ್ನಡವನ್ನು ಕಂಪ್ಯೂಟರಿ­ನಲ್ಲಿ ಬಳಸುತ್ತಿರುವ ಸ್ವತಂತ್ರ ತಜ್ಞರಿಗೆ ತಿಳಿ­ಯುವುದಕ್ಕೇ ಹತ್ತು ವರ್ಷ ಬೇಕಾ­ಯಿತು. ಅದಕ್ಕೂ ಮೊದಲು ಈ ವಿವರ ಖಂಡಿತವಾಗಿಯೂ ಸಿ-ಡಾಕ್, ಐಐ­ಎಸ್‌ಸಿ, ಐಐಟಿಗಳಿಗಂತೂ ಮೊದಲೇ ತಿಳಿ­­ದಿರುವ ಸಾಧ್ಯತೆ ಇತ್ತು. ಆದರೆ, ಇಲ್ಲಿರುವ ವಿದ್ವಾಂಸರು ತಮ್ಮ ವಿದ್ವತ್ ಪ್ರಕಟಣೆಗಳಿಗಾಗಿ ಭಾರತೀಯ ಭಾಷೆ­ಗಳ ಮೇಲಿನ ಸಂಶೋಧನೆ­ಯನ್ನು ಬಳಸಿ­ಕೊಂಡರೇ ಹೊರತು ಈ ಭಾಷೆಗಳನ್ನು ತಂತ್ರ­ಜ್ಞಾನದ ಕ್ಷೇತ್ರದಲ್ಲಿ ಪ್ರಸ್ತುತವಾಗಿಸು­ವುದಕ್ಕೆ ಬೇಕಿರುವ ಗಂಭೀರ ಪ್ರಯತ್ನಗಳನ್ನು ಮಾಡಲಿಲ್ಲ ಎಂದು ಭಾವಿಸಬೇಕಾಗುತ್ತದೆ. ಬಹುಶಃ ಈ ಬಗೆಯ ಸಂಸ್ಥೆಗಳಿಂದ ಸರ್ಕಾರಕ್ಕೆ ಸರಿಯಾದ ಮಾಹಿತಿ ತಲುಪಿ­ದ್ದರೆ ಭಾರತೀಯ ಭಾಷೆಗಳ ಕಂಪ್ಯೂ­­ಟಿಂಗ್ ಈಗಿರುವುದಕ್ಕಿಂತ ಎಷ್ಟೋ ಮುಂದಕ್ಕೆ ಸಾಗುವ ಎಲ್ಲಾ ಸಾಧ್ಯತೆಗಳೂ ಇದ್ದವು.

ಇನ್ನು ಪೇಟೆಂಟ್ ಮತ್ತು ಹಕ್ಕು ಸ್ವಾಮ್ಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಸ್ವಾಮ್ಯದ ಸಂಶೋಧನಾ ಸಂಸ್ಥೆಗಳಿಗೆ ಸ್ಪಷ್ಟವಾದ ಮತ್ತು ಜನಪರವಾದ ನೀತಿಯೊಂದು ಇರಬೇಕಾದುದು ಅಗತ್ಯ. ಚಕ್ರವನ್ನು ಕಂಡುಹಿಡಿದಾತ ಅದಕ್ಕೆ ಶಾಶ್ವತವಾದ ಪೇಟೆಂಟ್ ಪಡೆ­ದಿದ್ದರೆ ಏನಾಗಬಹುದಿತ್ತು ಎಂದು ಯೋಚಿಸಿದರೆ ಇದು ಅರ್ಥವಾಗು­ತ್ತದೆ. ಹಾಗೆಂದು ಸಂಶೋಧಕನಿಗೆ ಯಾವುದೇ ರೀತಿಯ ಲಾಭ ಇರ­ಬಾರದು ಎಂದುಕೊಳ್ಳಬೇಕಾಗಿಲ್ಲ. ತಂತ್ರಾಂಶ ಕ್ಷೇತ್ರದಲ್ಲಿ ಉತ್ಪನ್ನದಿಂದ ದೊರೆಯುವ ಪ್ರತಿಫಲಕ್ಕಿಂತ ಅದರ ನಿರ್ವಹಣೆ ಮತ್ತು ಸೇವೆಗಳಲ್ಲಿ ಹೆಚ್ಚಿನ ಪ್ರತಿ­ಫಲ­ವಿದೆ. ಗೂಗಲ್‌ನಂಥ ಸಂಸ್ಥೆ ಆಂಡ್ರಾಯ್ಡ್ ತಂತ್ರಾಂಶವನ್ನು ನಿರ್ವಹಿ­ಸುತ್ತಿ­ರುವುದರ ಹಿಂದಿನ ವಾಣಿಜ್ಯ ತರ್ಕ ಇದುವೇ. ಸರ್ಕಾರಿ ಸಂಶೋಧನಾ ಸಂಸ್ಥೆಗಳೂ ಇಂಥ­ದ್ದೊಂದು ಮಧ್ಯಮ ಮಾರ್ಗವನ್ನು ಆರಿಸಿಕೊಳ್ಳಬೇಕಾಗಿದೆ. ತಮ್ಮ ಸಂಶೋಧನೆ­ಗಳನ್ನು ಮುಕ್ತ­ವಾಗಿ­ಟ್ಟುಕೊಂಡೇ ಅವು ವಾಣಿಜ್ಯಿಕ­ವಾ­ಗಿಯೂ ಲಾಭ ತರುವಂತೆ ನೋಡಿ­ಕೊಳ್ಳ­ಬಹುದು. ಇದಕ್ಕೆ ಬೇಕಿರುವುದು ಮುಕ್ತ ಮತ್ತು ಸೃಜನಶೀಲ ಮನಸ್ಸು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT