ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲ್ಫೀ ಪ್ರಿಯರಿಗೆ...

Last Updated 29 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಗ್ಯಾಜೆಟ್‌ಲೋಕದ ಅಂಕಣದಲ್ಲಿ ನಾವು ವಿಮರ್ಶೆ ಮಾಡುತ್ತ ಬಂದಿರುವ ಗ್ಯಾಜೆಟ್‌ಗಳನ್ನು ಗಮನಿಸಿದಾಗ ಒಂದು ವಿಷಯ ವೇದ್ಯವಾಗುವುದೇನೆಂದರೆ ಬಹುತೇಕ ಗ್ಯಾಜೆಟ್‌ಗಳು ಸ್ಮಾರ್ಟ್‌ಫೋನ್‌ಗಳು. ಈ ಸಲವೂ ನಾವು ವಿಮರ್ಶೆ ಮಾಡುತ್ತಿರುವುದು ಒಂದು ಸ್ಮಾರ್ಟ್‌ಫೋನನ್ನು. ನೀಡುವ ಬೆಲೆಗೆ ಉತ್ತಮ ಎನ್ನಬಹುದಾದ ಉತ್ಪನ್ನಗಳನ್ನು ನಿರಂತರವಾಗಿ ನೀಡುತ್ತ ಬಂದಿರುವ ಒಂದು ಕಂಪನಿ ಶಿಯೋಮಿ. ಶಿಯೋಮಿ ಕಂಪನಿಯ ಹಲವು ಉತ್ಪನ್ನಗಳನ್ನು ಈ ಅಂಕಣದಲ್ಲಿ ವಿಮರ್ಶೆ ಮಾಡಲಾಗಿದೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ರೆಡ್‌ಮಿ ವೈ1 (Xiaomi Redmi Y1) ಫೋನನ್ನು.

ಇದರ ಗುಣವೈಶಿಷ್ಟ್ಯಗಳು ಬಹುಮಟ್ಟಿಗೆ ಶಿಯೋಮಿವರದೇ ಆದ ರೆಡ್‌ಮಿ 4 ಅನ್ನು ಹೋಲುತ್ತದೆ. ಪ್ರಮುಖ ವ್ಯತ್ಯಾಸವೆಂದರೆ ಮೆಮೊರಿ ಮತ್ತು ಸ್ವಂತೀ ಕ್ಯಾಮೆರಾ. ಇತ್ತೀಚೆಗೆ ಬಹುತೇಕ ಕಂಪನಿಗಳು ಸ್ವಂತೀಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಹಲವು ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಈ ಫೋನ್ ಕೂಡ ಸ್ವಲ್ಪ ಮಟ್ಟಿಗೆ ಸ್ವಂತೀಪ್ರಿಯರಿಗಾಗಿ ತಯಾರಿಸಿದಂತಿದೆ. ಪ್ರಮುಖ ಕ್ಯಾಮೆರಾಕ್ಕಿಂತ ಸ್ವಂತೀ ಕ್ಯಾಮೆರಾದ ರೆಸೊಲ್ಯೂಶನ್ ಜಾಸ್ತಿ ಇದೆ. ಸ್ವಂತೀ ತೆಗೆಯುವಾಗ ಒಂದು ಎಲ್‌ಇಡಿ ಪ್ರಖರವಾಗಿ ಬೆಳಗಿ ಫ್ಲಾಶ್‌ನಂತೆ ಕೆಲಸ ಮಾಡುತ್ತದೆ.

ಹಿಂದುಗಡೆಯ ಕವಚ ತೆಗೆಯಲು ಸಾಧ್ಯವಿಲ್ಲ. ಈ ಕವಚ ನಯವಾಗಿಲ್ಲ, ಸ್ವಲ್ಪ ದೊರಗಾಗಿದೆ. ಬದಿಗಳು ವಕ್ರವಾಗಿವೆ. ಆದರೂ ಕೈಯಿಂದ ಜಾರಿ ಬೀಳಬಹುದೆಂಬ ಭಯವಿಲ್ಲ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಗಡೆ 3.5 ಮಿ.ಮೀ ಇಯರ್‌ಫೋನ್ ಕಿಂಡಿ ಹಾಗೂ ಅದರ ಪಕ್ಕದಲ್ಲಿ ಅವಕೆಂಪು (infrared) ದೂರನಿಯಂತ್ರಕದ ಕಿಟಕಿ ಇದೆ. ಇದನ್ನು ಬಳಸಿ ನಿಮ್ಮ ಮನೆಯ ಟಿ.ವಿ., ಆಂಪ್ಲಿಫೈಯರ್, ಇತ್ಯಾದಿ ಹಲವು ಉಪಕರಣಗಳನ್ನು ನಿಯಂತ್ರಿಸಬಹುದು. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿ ಇದೆ. ಎಡಭಾಗದಲ್ಲಿ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಲು ಚಿಕ್ಕ ಟ್ರೇ ಇದೆ. ‌ಇದರಲ್ಲಿ ಎರಡು ನ್ಯಾನೊ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಹಿಂದುಗಡೆ ಬಲಮೂಲೆಯಲ್ಲಿ ಪ್ರಾಥಮಿಕ ಕ್ಯಾಮೆರಾ. ಹಿಂಬದಿಯಲ್ಲಿ ಮೇಲ್ಗಡೆ ಮಧ್ಯಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಈ ಫೋನಿನ ಒಂದು ವಿಶೇಷತೆಯೆಂದರೆ ಇದರಲ್ಲಿ 2.5D ಗಾಜಿನ ಪರದೆಯಿದೆ. ಅಂದರೆ ಪರದೆಯ ಬದಿಗಳು ಸ್ವಲ್ಪ ವಕ್ರವಾಗಿದ್ದು ಸುಂದರವಾಗಿದೆ. ಕಡಿಮೆ ಬೆಲೆಯ ಫೋನ್ ಎಂದು ಅನ್ನಿಸುವುದಿಲ್ಲ.

ಇದರಲ್ಲಿರುವುದು ವೇಗದ ಪ್ರೊಸೆಸರ್ ಅಲ್ಲ. ಇದರ ಅಂಟುಟು ಬೆಂಚ್‌ಮಾರ್ಕ್ 45416 ಇದೆ. ಇದು ಕಡಿಮೆ ಎನ್ನಬಹುದು. ಆದರೆ ಸಾಮಾನ್ಯ ಕೆಲಸಗಳಲ್ಲಿ ಇದು ಕಡಿಮೆ ವೇಗದ ಫೋನ್ ಎಂದು ಅನ್ನಿಸುವುದಿಲ್ಲ. ಬಹುತೇಕ ಆಟಗಳನ್ನು ಆಡುವ ಅನುಭವ ಪರವಾಗಿಲ್ಲ. ಅತಿ ಶಕ್ತಿಯನ್ನು ಬೇಡುವ ಮೂರು ಆಯಾಮದ ಮೇಲ್ದರ್ಜೆಯ ಆಟಗಳನ್ನು ಮಾತ್ರ ಆಡುವ ಅನುಭವ ಅಷ್ಟೇನು ಅದ್ಭುತ ಅನ್ನಿಸುವುದಿಲ್ಲ. ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು. ಆದರೆ ಅಲ್ಟ್ರಾಹೈಡೆಫಿನಿಶನ್ (4k) ವಿಡಿಯೊ ಪ್ಲೇ ಆಗುವುದಿಲ್ಲ.

13 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಪ್ರಾಥಮಿಕ ಮತ್ತು 16 ಮೆಗಾಪಿಕ್ಸೆಲ್‌ನ ಎದುರುಗಡೆಯ ಸ್ವಂತೀ ಕ್ಯಾಮೆರಾ ಎರಡೂ ಚೆನ್ನಾಗಿವೆ. ಬಹುತೇಕ ಫೋಟೊಗಳು ಮತ್ತು ಸ್ವಂತೀ ಫೋಟೊಗಳು ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಮೂಡಿಬರುತ್ತವೆ. ಶಿಯೋಮಿಯವರ ಎಲ್ಲ ಫೋನ್‌ಗಳಲ್ಲಿರುವ ಕ್ಯಾಮೆರಾ ಕಿರುತಂತ್ರಾಂಶವೇ (ಆ್ಯಪ್) ಇದರಲ್ಲೂ ಇದೆ, ಹಾಗೂ ಅದು ಅಷ್ಟೇನೂ ಚೆನ್ನಾಗಿಲ್ಲ. ಮ್ಯಾನ್ಯುವಲ್ ಮೋಡ್‌ನಲ್ಲಿ ಆಯ್ಕೆಗಳು ಸಾಲದು. ವಿಡಿಯೊ ಚಿತ್ರೀಕರಣವೂ ಚೆನ್ನಾಗಿದೆ. ಇದರ ಆಡಿಯೊ ಇಂಜಿನ್ ಚೆನ್ನಾಗಿದೆ. ಇಯರ್‌ಫೋನ್ ನೀಡಿಲ್ಲ. ಉತ್ತಮ ಇಯರ್‌ಫೋನ್ ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು.

ಎರಡು ನ್ಯಾನೊ ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಜೊತೆಗೆ ಯುಎಸ್‌ಬಿ ಆನ್‌-ದ-ಗೋ ಕೂಡ ಇದೆ. ಇದರಲ್ಲಿ 4ಜಿ ಮತ್ತು 4G VoLTE ಕೂಡ ಇದೆ. ಅಂದರೆ ರಿಲಯನ್ಸ್ ಜಿಯೋ ಸಿಮ್ ಹಾಕಿ ಕೆಲಸ ಮಾಡಬಹುದು.

ಇದರಲ್ಲಿರುವುದು 3080mAh ಶಕ್ತಿಶಾಲಿಯಾದ ಬ್ಯಾಟರಿ. ಎರಡು ದಿನ ಬಾಳಿಕೆ ಬರುತ್ತದೆ. ಕನ್ನಡದ ತೋರುವಿಕೆ ಮತ್ತು ಯೂಸರ್ ಇಂಟರ್‌ಫೇಸ್ ಸರಿಯಾಗಿವೆ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಬೆಲೆಗೆ ಇದು ಉತ್ತಮ ಫೋನ್ ಎಂದು ಹೇಳಬಹುದು.

ಆಸಿಲೋಸ್ಕೋಪ್
ವಿಜ್ಞಾನಿಗಳಿಗೆ, ವಿಜ್ಞಾನದ ಪ್ರಾಧ್ಯಾಪಕರುಗಳಿಗೆ, ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡುವವರಿಗೆ ಆಸಿಲೋಸ್ಕೋಪ್ ಚಿರಪರಿಚಿತ. ಧ್ವನಿ ತರಂಗಗಳನ್ನು ಅಥವಾ ವಿದ್ಯುತ್ ತರಂಗಗಳನ್ನು ಆಸಿಲೋಸ್ಕೋಪ್ ಮೂಲಕ ವಿಶ್ಲೇಷಿಸಬಹುದು. ಉದಾಹರಣೆಗೆ, ಒಂದು ಸಂಗೀತದ ಸಾಧನದಿಂದ ಹೊರಹೊಮ್ಮುವ ಧ್ವನಿ ತರಂಗಗಳ ಕಂಪನಾಂಕ ಎಷ್ಟು ಎಂಬುದನ್ನು ಆಸಿಲೋಸ್ಕೋಪ್ ಬಳಸಿ ಪತ್ತೆ ಹಚ್ಚಬಹುದು.

ನಿಮ್ಮ ಧ್ವನಿ ಎಷ್ಟು ಶುದ್ಧವಾಗಿದೆ ಎಂದೂ ವಿಶ್ಲೇಷಿಸಬಹುದು! ನಿಮ್ಮ ಆ್ಯಂಡ್ರಾಯ್ಡ್ ಫೋನನ್ನು ಒಂದು ಸರಳ ಆಸಿಲೋಸ್ಕೋಪ್ ಆಗಿ ಬದಲಾಯಿಸಬಹುದು. ಅದಕ್ಕೊಂದು ಕಿರುತಂತ್ರಾಂಶವಿದೆ (ಆ್ಯಪ್). ಅದು ಬೇಕಿದ್ದಲ್ಲಿ ನೀವು ಗೂಗಲ್ ಪ್ಲೇ ಸ್ಟೋರಿನಲ್ಲಿ SmartScope Oscilloscope ಎಂದು ಹುಡುಕಬೇಕು ಅಥವಾ http://bit.ly/gadgetloka305 ಜಾಲತಾಣಕ್ಕೆ ಭೇಟಿ ನೀಡಬಹುದು. ಇದನ್ನು ಬಳಸಬಲ್ಲವರಿಗೆ ಇದು ಉಪಯುಕ್ತ ಕಿರುತಂತ್ರಾಂಶ.

ಬಾಕ್ಸ್‌ಲಾಕ್
ನೀವು ಜಾಲಮಳಿಗೆಯೊಂದರಿಂದ ಯಾವುದೋ ಉತ್ಪನ್ನವನ್ನು ಕೊಂಡಿದ್ದೀರಿ. ಅದನ್ನು ನಿಮ್ಮ ಮನೆಗೆ ತಂದು ನೀಡಲಾಗುತ್ತದೆ. ಆದರೆ ನೀವು ಮನೆಯಲ್ಲಿರುವುದಿಲ್ಲ. ಪಾರ್ಸೆಲ್ ಅನ್ನು ಮನೆ ಮುಂದೆ ಇಟ್ಟು ಹೋಗಲಾಗುವುದಿಲ್ಲ. ಈ ಸಮಸ್ಯೆಗೆ ಪರಿಹಾರರೂಪವಾಗಿ ಬಾಕ್ಸ್‌ಲಾಕ್ ಬರಲಿದೆ.

ಇದೊಂದು ಬೀಗ ಹಾಕಲ್ಪಟ್ಟ ಪೆಟ್ಟಿಗೆ. ಈ ಬೀಗ ಸಾಮಾನ್ಯ ಬೀಗವಲ್ಲ. ಅದು ಅಂತರಜಾಲಕ್ಕೆ ಸಂಪರ್ಕ ಹೊಂದಿರುತ್ತದೆ. ಅದರಲ್ಲಿ ಬಾರ್‌ಕೋಡ್ ರೀಡರ್ ಇದೆ. ನಿಮಗೆ ಬರಲಿರುವ ಪಾರ್ಸೆಲ್ ಬಗ್ಗೆ ನೀವು ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ಬಾಕ್ಸ್‌ಲಾಕ್‌ಗೆ ತಿಳಿಸಿರುತ್ತೀರಿ. ಪಾರ್ಸೆಲ್ ತಂದ ವ್ಯಕ್ತಿ ಅದರಲ್ಲಿರುವ ಬಾರ್‌ಕೋಡನ್ನು ಬಾಕ್ಸ್‌ಲಾಕ್ ಮುಂದೆ ಹಿಡಿಯುತ್ತಾನೆ. ಅವು ಹೊಂದಾಣಿಕೆಯಾದಾಗ ಬೀಗ ತೆರೆಯಲ್ಪಡುತ್ತದೆ.

ನಿಮ್ಮ ಸ್ನೇಹಿತ ನಿಮಗೆ ಯಾವುದಾದರೂ ಪಾರ್ಸೆಲ್ ಕಳುಹಿಸಿದರೂ ನೀವು ಇದೇ ವಿಧಾನ ಮೂಲಕ ಪೆಟ್ಟಿಗೆ ತೆರೆಯುವಂತೆ ಮಾಡಬಹುದು. ಬಾಕ್ಸ್‌ಲಾಕ್ 2018ರಲ್ಲಿ ಮಾರುಕಟ್ಟೆಗೆ ಬರಲಿದೆ.

ಅಮೆಜಾನ್ ಅಲೆಕ್ಸಾಗೆ ಆಜ್ಞೆ ನೀಡಿದ ಗಿಣಿ
ಅಮೆಜಾನ್ ಇಕೋ ಎಂಬ ಸಾಧನವು ಧ್ವನಿಯ ಮೂಲಕ ಆಜ್ಞೆಗಳನ್ನು ಸ್ವೀಕರಿಸುತ್ತದೆ. ಇಕೊ ಅಲೆಕ್ಸ ಎಂಬ ಸೇವೆಯ ಮೂಲಕ ಕೆಲಸ ಮಾಡುತ್ತದೆ. ಒಂದು ಮನೆಯಲ್ಲಿ ಮಾನವರ ಧ್ವನಿಯನ್ನು ಅನುಕರಿಸುವ ಗಿಣಿ ಇತ್ತು. ಅದರ ಮುಂದೆ ಮನೆಯಾತ ಇಕೋವನ್ನು ಇಟ್ಟ. ಅದು ಎಂದಿನಂತೆ ತನ್ನಲ್ಲಿರುವ ಆಯ್ಕೆಗಳನ್ನು ಉಚ್ಛರಿಸುತ್ತಾ ಹೋಯಿತು. ಗಿಣಿ ಅದರಲ್ಲಿ ಕೆಲವನ್ನು ಪುನರುಚ್ಛರಿಸಿತು. ಅವುಗಳನ್ನು ಇಕೋ ಅಮೆಜಾನ್ ಜಾಲಮಳಿಗೆಯಿಂದ ತರಿಸಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT