ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಆಲ್ಫಾ: ಚೆಂದದ ವಿನ್ಯಾಸ, ಆದರೆ ದುಬಾರಿ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಐಫೋನಿನ ನಿರ್ಬಂಧಗಳೇನೇ ಇರಲಿ ಒಂದು ವಿಷಯದಲ್ಲಿ ಅದನ್ನು ಮೆಚ್ಚಬೇಕು. ಅದುವೇ ಅದರ ವಿನ್ಯಾಸ, ದೇಹರಚನೆ ಮತ್ತು ಕೈಯಲ್ಲಿ ಹಿಡಿದಾಗ ಆಗುವ ಅನುಭವ. ಸ್ಯಾಮ್‌ಸಂಗ್‌ನ ಬಹುತೇಕ ಫೊನ್‌ಗಳು ಅವು ಎಷ್ಟೇ ದುಬಾರಿಯಾಗಿದ್ದರೂ ಅವುಗಳ ರಚನೆ ಮತ್ತು ವಿನ್ಯಾಸ ಐಫೋನ್‌ಗೆ ಸರಿಗಟ್ಟುವಂತಿರಲಿಲ್ಲ. ಆದರೆ ಈಗ ಅದಕ್ಕೆ ಅಪವಾದವಾಗಿ ಸ್ಯಾಮ್‌ಸಂಗ್‌್ ಗ್ಯಾಲಕ್ಸಿ ಆಲ್ಫಾ (Samsung Galaxy Alpha) ಫೋನ್ ಬಂದಿದೆ. ಈ ಫೋನ್ ನಮ್ಮ ಈ ವಾರದ ಅತಿಥಿ.

ಗುಣವೈಶಿಷ್ಟ್ಯಗಳು
1.8 ಗಿಗಾಹರ್ಟ್ಸ್ ವೇಗದ ಒಂದು ಮತ್ತು 1.3 ಗಿಗಾಹರ್ಟ್ಸ್ ವೇಗದ ಇನ್ನೊಂದು ನಾಲ್ಕು ಹೃದಯಗಳ, ಒಟ್ಟು ಎರಡು ಪ್ರೊಸೆಸರ್‌ಗಳಿವೆ (Quad-core 1.8 GHz Cortex-A15 & quad-core 1.3 GHz Cortex-A7), 2 + 32  ಗಿಗಾಬೈಟ್ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ ಇಲ್ಲ, 4.7 ಇಂಚು ಗಾತ್ರದ 720 x 1280 ಪಿಕ್ಸೆಲ್ ರೆಸೊಲೂಶನ್‌ನ ಸೂಪರ್ ಅಮೋಲೆಡ್ ಪರದೆ, 3ಜಿ ಮತ್ತು 4ಜಿ, ನಾನೋ ಸಿಮ್, 12 ಮೆಗಾ ಪಿಕ್ಸೆಲ್ ಆಟೋಫೋಕಸ್ ಕ್ಯಾಮೆರಾ, ಎಲ್ಇಡಿ ಫ್ಲಾಶ್, 2.1 ಮೆಗಾಪಿಕ್ಸೆಲ್‌ನ ಇನ್ನೊಂದು ಕ್ಯಾಮೆರಾ, ರೇಡಿಯೊ ಇಲ್ಲ, ವೈಫೈ, ಎನ್ಎಫ್‌ಸಿ, ಜಿಪಿಎಸ್, 132.4 x 65.5 x 6.7 ಮಿ.ಮೀ. ಗಾತ್ರ, 115 ಗ್ರಾಂ ತೂಕ, ಬೆರಳಚ್ಚು ಸಂವೇದಕ, 1860 mAH ಬ್ಯಾಟರಿ, ಆಂಡ್ರಾಯಿಡ್ 4.4.4, ಇತ್ಯಾದಿ. ಮಾರುಕಟ್ಟೆ ಬೆಲೆ ಸುಮಾರು ₹38,000. 
 
ಲೇಖನದ ಪ್ರಾರಂಭದಲ್ಲೇ ತಿಳಿಸಿದಂತೆ ಇದರ ರಚನೆ ಮತ್ತು ವಿನ್ಯಾಸ ತುಂಬ ಚೆನ್ನಾಗಿದೆ. ಸ್ಯಾಮ್‌ಸಂಗ್‌ನ ಎಲ್ಲ ಫೋನ್‌ಗಳು ಪ್ಲಾಸ್ಟಿಕ್ ದೇಹದವು. ಇದು ಮಾತ್ರ ಲೋಹದ್ದಾಗಿದೆ. ಎಲ್ಲ ಬದಿಗಳಲ್ಲೂ ಲೋಹದ ಪಟ್ಟಿ ಮಾದರಿಯಲ್ಲಿದೆ. ಹಿಂದುಗಡೆಯ ಕವಚ ಮಾತ್ರ ರಬ್ಬರ್ ಮಾದರಿಯ ಬಳುಕುವ ಪ್ಲಾಸ್ಟಿಕ್‌ನದ್ದಾಗಿದೆ. ಆದರೂ ಅದರ ಬಣ್ಣ ಮತ್ತು ಮತ್ತು ರಚನೆ ನೋಡಲು ಲೋಹದಂತೆಯೇ ಕಾಣುತ್ತದೆ. ಫೋನ್ ಕೇವಲ 6.7 ಮಿ.ಮೀ. ದಪ್ಪನಾಗಿದ್ದು ತುಂಬ ತೆಳ್ಳಗಿದೆ. ಗಾತ್ರವೂ ದುಬಾರಿ ಫೋನ್‌ಗಳಂತೆ 5 ಇಂಚಿಗಿಂತ ದೊಡ್ಡದಾಗಿಲ್ಲ. ಫೋನಿನ ಬಲಭಾಗದಲ್ಲಿ ಆನ್/ಆಫ್ ಸ್ವಿಚ್ ಇದೆ. ಎಡಭಾಗದಲ್ಲಿ ವಾಲ್ಯೂಮ್ ಸ್ವಿಚ್ ಇದೆ. ಒಂದು ಕೈಯಲ್ಲಿ ಹಿಡಿದು ಬಳಸಬಹುದು. ಕೆಳಭಾಗದಲ್ಲಿ ಸ್ಪೀಕರ್ ಇದೆ. ಅದಕ್ಕೆ ಗ್ರಿಲ್ ಇದೆ. ಕೈಯಲ್ಲಿ ಹಿಡಿಯುವ ಅನುಭವ ತುಂಬ ಚೆನ್ನಾಗಿದೆ. ಈ ವಿಷಯದಲ್ಲಿ ಇದು ಐಫೋನ್‌ಗೆ ಪೈಪೋಟಿ ನೀಡಬಲ್ಲುದು. 

ಇದು ಬಳಸುವುದು ಸ್ಯಾಮ್‌ಸಂಗ್‌ನವರು ವಿಶೇಷವಾಗಿ ತಯಾರಿಸಿರುವ ಯೂಸರ್ ಇಂಟರ್‌ಫೇಸ್. ಇದರಲ್ಲಿ ಕೆಲವು ವಿಶೇಷ ಸವಲತ್ತುಗಳಿವೆ. ಕ್ಯಾಲೆಂಡರ್, ಫೋಟೊ ಆಲ್ಬಂ ಇತ್ಯಾದಿ. ಸ್ಯಾಮ್‌ಸಂಗ್‌ನವರ ಆಪ್‌ಗಳ ಮೇಲೆ ಗಾಳಿಯಲ್ಲಿ ಬೆರಳು ಆಡಿಸಿದರೆ ವಿಶೇಷ ಪ್ರತಿಕ್ರಿಯೆ ನೀಡುತ್ತದೆ. ಈ ಸವಲತ್ತು ಇತರೆ ಆಪ್‌ಗಳಿಗಿಲ್ಲ. ಈ ಫೋನಿನ ಪರದೆಯ ರೆಸೊಲೂಶನ್ ಮಾತ್ರ ಅರ್ಧ ಹೈಡೆಫಿನಿಶನ್ (720p). ಈ ಬೆಲೆಯ ದುಬಾರಿ ಫೋನ್‌ಗಳಲ್ಲಿ ಸಾಮಾನ್ಯವಾಗಿ ಪೂರ್ತಿ ಹೈಡೆಫಿನಿಶನ್ ಪರದೆ ಇರುತ್ತದೆ. ಆದರೂ ಪರದೆಯ ಗಾತ್ರ 4.7 ಇಂಚು ಆಗಿರುವುದುರಿಂದ ಅರ್ಧ ಹೈಡೆಫಿನಿಶನ್ ಎಂದು ಅನಿಸುವುದಿಲ್ಲ. ಪರದೆ ಸೂಪರ್ ಅಮೋಲೆಡ್ ಆಗಿರುವುದರಿಂದ ಬಳಕೆಯ ಅನುಭವ ಚೆನ್ನಾಗಿದೆ. ಪರದೆಯ ಬ್ಯಾಟರಿ ಬಳಕೆ ಕಡಿಮೆ ಆಗಿರುತ್ತದೆ.

ಇದರ ಪ್ರೊಸೆಸರ್ ಹೆಸರಿಗೆ ಎಂಟು ಹೃದಯದ್ದು. ನಿಜವಾಗಿ ನೋಡಿದರೆ ನಾಲ್ಕು ಹೃದಯಗಳ ಎರಡು ಪ್ರೊಸೆಸರ್‌ಗಳಿವೆ. ಆದರೂ ಎಲ್ಲ ಎಂಟು ಹೃದಯಗಳನ್ನು ಏಕಕಾಲಕ್ಕೆ ಬಳಸುವುದಿಲ್ಲ. ಅಗತ್ಯಕ್ಕೆ ತಕ್ಕಂತೆ 1.3 ಗಿಗಾಹರ್ಟ್ಸ್ ವೇಗದ್ದು ಅಥವಾ 1.8 ಗಿಗಾಹರ್ಟ್ಸ್ ವೇಗದ ಪ್ರೊಸೆಸರ್ ಅನ್ನು ಬಳಸುತ್ತದೆ. ಕಡಿಮೆ ಶಕ್ತಿಯ ಬ್ಯಾಟರಿ ಆಗಿರುವುದರಿಂದ ಈ ರೀತಿ ಕೆಲಸ ಮಾಡುವಂತೆ ವಿನ್ಯಾಸ ಮಾಡಿದ್ದಾರೆ. ಬಳಕೆಯ ವೇಗ ಚೆನ್ನಾಗಿದೆ. ಎಲ್ಲ ನಮೂನೆಯ ಆಟಗಳನ್ನು ಅಡೆ ತಡೆಯಿಲ್ಲದೆ ಆಡಬಹುದು. ವಿಡಿಯೊ ವೀಕ್ಷಣೆ, ಸಂಗೀತ ಆಲಿಸುವ ಅನುಭವ ಎಲ್ಲ ಚೆನ್ನಾಗಿದೆ. ಇಷ್ಟು ದುಬಾರಿ ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ.  

ಈ ಫೋನಿನಲ್ಲಿ ಅಧಿಕ ಸುರಕ್ಷೆಗೆ ಬೆರಳಚ್ಚು ಸ್ಕ್ಯಾನರ್ ಇದೆ. ಬೆರಳನ್ನು ಎಂಟು ಸಲ ಸ್ಕ್ಯಾನ್ ಮಾಡಿ ಅದನ್ನು ಪಾಸ್‌ವರ್ಡ್ ಬದಲಿಗೆ ಆಯ್ಕೆ ಮಾಡಿಕೊಂಡು ಬಳಸಬಹುದು. ಕೆಲವರು ಅದರ ಬಗ್ಗೆ ದೂರು ನೀಡಿದ್ದಾರೆ. ನಾನು ಅದನ್ನು ಪ್ರಾಥಮಿಕ ಸುರಕ್ಷೆಯಾಗಿ ಬಳಸಿ ನೋಡಿಲ್ಲ. ಬೆರಳನ್ನು ಇಟ್ಟು ಸ್ಕ್ಯಾನ್ ಮಾಡಲು ನೀಡಿರುವ ಸ್ಥಳ ಚಿಕ್ಕದಾಯಿತು ಎಂದು ಅನ್ನಿಸಿತು. ಹೃದಯ ಬಡಿತವನ್ನು ಪರಿಶೀಲಿಸುವ ಸವಲತ್ತೂ ಇದೆ. ಅದೇನೂ ದೊಡ್ಡ ಸೌಲಭ್ಯ ಎಂದು ನನಗೆ ಅನ್ನಿಸಲಿಲ್ಲ. ಹೃದಯಬಡಿತ ಅಳೆಯುವ ಆಪ್ ಆಂಡ್ರಾಯಿಡ್‌ಗೆ ಲಭ್ಯವಿದೆ. ಅದನ್ನು ಯಾವ ಫೋನಿನಲ್ಲಿ ಬೇಕಾದರೂ ಬಳಸಬಹುದು.

ಕ್ಯಾಮೆರಾ ಚೆನ್ನಾಗಿದೆ. ಫಲಿತಾಂಶ ತುಂಬ ತೃಪ್ತಿದಾಯಕ ವಾಗಿದೆ. ಕ್ಯಾಮೆರಾಕ್ಕೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸರ್ ಇದೆ. ಆದ್ದರಿಂದ ಫೋಟೊ ಚೆನ್ನಾಗಿ ಮೂಡಿಬರುತ್ತದೆ. ವಿಡಿಯೊ ಚಿತ್ರೀಕರಣವೂ ಚೆನ್ನಾಗಿದೆ. ಹೈಡೆಫಿನಿಶನ್ ಮಾತ್ರವಲ್ಲ ಅತ್ಯಂತ ಹೆಚ್ಚಿನ ರೆಸೊಲೂಶನ್ನ 4k ವಿಡಿಯೊ ಕೂಡ ಚಿತ್ರೀಕರಣ ಮಾಡಬಹುದು. ಆದರೆ ಇದರ ಪರದೆಯ ರೆಸೊಲ್ಯೂಶನ್ ಆ ಮಟ್ಟದಲ್ಲಿಲ್ಲ. ನಿಮ್ಮ ಮನೆಯಲ್ಲಿ 4k ರೆಸೊಲೂಶನ್‌ನ ಟಿ.ವಿ ಇದ್ದಲ್ಲಿ ಅಂತಹ ಚಿತ್ರೀಕರಣದ ಆನಂದವನ್ನು ಪೂರ್ತಿಯಾಗಿ ಅನುಭವಿಸಬಹುದು.

ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಎಲ್ಲ ಸ್ಯಾಮ್‌ಸಂಗ್‌್ ಫೋನ್‌ಗಳಂತೆ ಇದರಲ್ಲೂ ಕನ್ನಡದ ಸಂಪೂರ್ಣ ಬೆಂಬಲ ಇದೆ. ಅಂದರೆ ಕನ್ನಡದಲ್ಲೇ ಯೂಸರ್ ಇಂಟರ್‌ಫೇಸ್‌್, ಮೆನು, ಕೀಲಿಮಣೆ ಎಲ್ಲ ಇವೆ. ಇದರ ಪ್ರಮುಖ ಕೊರತೆಗಳು– ನಾನೋ ಸಿಮ್, ಹೆಚ್ಚಿಗೆ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳಲು ಆಗುವುದಿಲ್ಲ, ಕಡಿಮೆ ಶಕ್ತಿಯ ಬ್ಯಾಟರಿ ಮತ್ತು ಪೂರ್ತಿ ಹೈಡೆಫಿನಿಶನ್ ಪರದೆ ಇಲ್ಲ ಎಂಬುದು. ಒಟ್ಟಿನಲ್ಲಿ ಇದು ನೀಡುವ ಸವಲತ್ತುಗಳಿಗೆ ಹೋಲಿಸಿದರೆ ಈ ಫೋನ್ ಸ್ವಲ್ಪ ದುಬಾರಿ ಎಂದೇ ಹೇಳಬಹುದು. ಆದರೆ ನೀವು ಐಫೋನ್ ಕೊಳ್ಳುವ ಆಲೋಚನೆಯಲ್ಲಿರುವವರಾದರೆ ಅದರ ಬೆಲೆಗಿಂತ ತುಂಬ ಕಡಿಮೆ ಬೆಲೆಯ ಇದನ್ನು ಕೊಳ್ಳಬಹುದು.

ವಾರದ ಆಪ್ (app)
ಆ್ಯಂಗ್ರಿ ಬರ್ಡ್ಸ್ ಟ್ರಾನ್ಸ್‌ಫಾರ್ಮರ್‍್ಸ್
 
ಆಂಡ್ರಾಯಿಡ್‌ನಲ್ಲಿ ಆಡಬಹುದಾದ ಆಟ ಇದು. Angry Birds Transformers ಆಟವನ್ನು ಡೌನ್‌ಲೋಡ್ ಮಾಡಿಕೊಂಡು ಆಡಬೇಕಾದರೆ ಇವು ನೀವಾದರೆ ಒಳ್ಳೆಯದು –ಟ್ರಾನ್ಸ್‌ಫಾರ್ಮರ್‍್ಸ್ ಸಿನಿಮಾ ನೋಡಿದ್ದು ನೀವು ಅದರ ಭಕ್ತರಾಗಿರಬೇಕು ಮತ್ತು ಈವಾಗಲೇ ಆ್ಯಂಗ್ರಿ ಬರ್ಡ್ಸ್ ಮಾಲಿಕೆಯ ಇತರೆ ಆಟಗಳನ್ನು ಆಡಿರಬೇಕು. ಇವು ನೀವಾಗಿಲ್ಲದಿದ್ದರೂ ಈ ಆಟವನ್ನು ನೀವು ಆಡಬಹುದು. ಆ್ಯಂಗ್ರಿ ಬರ್ಡ್ಸ್ ಮಾಲಿಕೆಯ ಇತರೆ ಆಟಗಳಿಗೆ ಹೋಲಿಸಿದರೆ ಇದು ತುಂಬ ಪೇಲವ ಅನ್ನಿಸುತ್ತದೆ. ಅದರಲ್ಲೂ ನನಗೆ ತುಂಬ ಇಷ್ಟವಾದುದು ಆ್ಯಂಗ್ರಿ ಬರ್ಡ್ಸ್ ಸ್ಪೇಸ್. ನನಗೆ ಖಗೋಳಶಾಸ್ತ್ರದಲ್ಲಿರುವ ಆಸಕ್ತಿಯೂ ಇದಕ್ಕೆ ಕಾರಣವಿರಬಹುದು.

ಗ್ಯಾಜೆಟ್ ಸುದ್ದಿ
ಇಯರ್‌ಫೋನ್ ಸುರಕ್ಷೆಗೆ

ನಿಮ್ಮ ಇಯರ್‌ಫೋನ್‌ ಕಿಸೆಯಲ್ಲಿಟ್ಟುಕೊಂಡಾಗ, ಬ್ಯಾಗಿನೊಳಗಡೆ ಇಟ್ಟುಕೊಂಡಾಗ ಅದು ಸುಕ್ಕುಸುಕ್ಕಾಗುವುದು ಗೊತ್ತು ತಾನೆ? ಅಂದರೆ ಅದರ ವಯರ್‌ಗಳು ತಮಗೆ ತಾವೇ ಸುತ್ತಿಕೊಂಡು ಬಿಡಿಸಲು ಹಲವು ನಿಮಿಷ ಒದ್ದಾಡುತ್ತೀರಿ ತಾನೆ? ಈ ಸಮಸ್ಯೆಗೆ ಈಗ ಪರಿಹಾರ ನಮ್ಮ ಬೆಂಗಳೂರಿನಿಂದ ಬಂದಿದೆ. ವಿಟ್‌ವರ್ಕ್ಸ್ ಎಂಬ ಕಂಪೆನಿ ಇಯರ್‌ ಫೋನ್‌ ಇಟ್ಟುಕೊಳ್ಳಲು ಒಂದು ಸಾಧನ ತಯಾರಿ ಸಿದೆ. ಇದು ಚಿಕ್ಕದಾಗಿದ್ದು, ಇಯರ್‌ಫೋನಿನ ಎಡ ಮತ್ತು ಬಲ ಕಿವಿಗೆ ಹೋಗುವ ವಯರ್‌ಗಳನ್ನು ಇದರೊಳಗೆ ತೂರಿಸಿ ನಂತರ ಇಯರ್‌ಫೋನಿನ ಪ್ರಮುಖ ವಯರ್ ಅನ್ನು ಇದಕ್ಕೆ ಸುತ್ತಿ ಇಟ್ಟುಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ www.witworks.in ಜಾಲತಾಣಕ್ಕೆ ಭೇಟಿ ನೀಡಿ.

ಗ್ಯಾಜೆಟ್ ತರ್ಲೆ
ಸಾಫ್ಟ್‌ವೇರ್ ತಂತ್ರಜ್ಞನೊಬ್ಬನಿಗೆ ರಜಾ ಹಾಕಿ ದೇಶ ಸುತ್ತಬೇಕು ಎಂಬ ಆಸೆ ಇತ್ತು. ಎಷ್ಟು ಸಲ ಕೇಳಿದರೂ, ತನ್ನ ಖಾತೆಯಲ್ಲಿ ಬೇಕಾದಷ್ಟು ರಜ ಇದ್ದರೂ ಆತನ ಬಾಸ್ ಆತನಿಗೆ ರಜ ಮಂಜೂರು ಮಾಡಲಿಲ್ಲ. ಈತನಿಗೆ ತುಂಬ ಬೇಸರವಾಗಿ ಆತ ಏನು ಮಾಡಿದ ಗೊತ್ತೆ? ತಾನು ಹೋಗಬೇಕು ಎಂದುಕೊಂಡಿದ್ದ ಜಾಗಗಳಿಗೆಲ್ಲ ಗೂಗ್ಲ್ ಮ್ಯಾಪ್‌ನಲ್ಲಿ ಪ್ರವಾಸ ಹೋದ!

ಗ್ಯಾಜೆಟ್ ಸಲಹೆ
ಪಾರ್ಶ್ವನಾಥರ ಪ್ರಶ್ನೆ: ನೀವು ನೋಶನ್ ಇಂಕ್ 2-ಇನ್-1 ಬಗ್ಗೆ ಬರೆದುದು ಓದಿದೆ. ಅದನ್ನು ಕೊಳ್ಳೋಣ ಅಂದುಕೊಂಡಿದ್ದೇನೆ. ಆದರೆ ನನಗೆ ಎರಡು ಅನುಮಾನಗಳಿವೆ –ಅದರಲ್ಲಿ ನುಡಿ ತಂತ್ರಾಂಶ ಕೆಲಸ ಮಾಡುತ್ತದೆಯೇ? ಅದಕ್ಕೆ ಮುದ್ರಕ ಜೋಡಿಸಬಹುದೇ?
ಉ: ನಿಮ್ಮ ಎರಡು ಪ್ರಶ್ನೆಗಳಿಗೂ ಹೌದು ಎನ್ನುವುದೇ ಉತ್ತರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT