ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಭೂರಮೆಯ ಸಾಧಕರು

Last Updated 16 ಜೂನ್ 2018, 9:16 IST
ಅಕ್ಷರ ಗಾತ್ರ

ಸುಮಾರು 20 ವರ್ಷಗಳ ಹಿಂದೆ ನನ್ನ ಹೆಂಡತಿ, ನಾನು ಆಕ್ಸ್‌ಫರ್ಡ್‌ನಲ್ಲಿ ಇದ್ದ ನೀರದ್‌ ಚೌಧರಿ ಅವರ ಮನೆಗೆ ಹೋಗಿದ್ದೆವು. ಕುಳ್ಳಗಿನ ಆ ದೊಡ್ಡ ಲೇಖಕ ನಮ್ಮನ್ನು ನೋಡಿ ಖುಷಿಪಟ್ಟಿದ್ದರಾದರೂ, ನನ್ನ ಹೆಂಡತಿಯ ಉಡುಗೆ ಅವರಿಗೆ ಇಷ್ಟವಾಗಿರಲಿಲ್ಲ. ‘ಅದು (ಚೂಡಿದಾರ್‌ ಕುರ್ತಾ) ಇಸ್ಲಾಮಿಕ್‌ ಉಡುಗೆ’ ಎಂದು ಒರಟಾದ ದನಿಯಲ್ಲಿ ಹೇಳಿದ್ದೇ ಅಲ್ಲದೆ, ‘ಬಂಗಾಳದಲ್ಲಿ ನಾವು (ಹಿಂದೂ ಪುರುಷರು) ಹೆಣ್ಣು ಮಕ್ಕಳಿಗೆ ಅದನ್ನು ತೊಡಲು ಖಂಡಿತ ಬಿಡುವುದಿಲ್ಲ’ ಎಂದೂ ಖಾರವಾಗಿ ನುಡಿದಿದ್ದರು.

ಈ ತಿಂಗಳ ಪ್ರಾರಂಭದಲ್ಲಿ ಬಾಂಗ್ಲಾದೇಶಕ್ಕೆ ಹೋಗಿದ್ದೆ. ಆಗ ನೀರದ್‌ ಆಡಿದ ಆ ಮಾತು ನೆನಪಾಯಿತು. ನಾನು ನೋಡಿದ, ಮಾತನಾಡಿಸಿದ ಮುಸ್ಲಿಂ ಮಹಿಳೆಯರು– ಢಾಕಾದ ಲೇಖಕಿಯರಾಗಿರಬಹುದು, ಸಂಶೋಧಕಿಯರಾಗಿರಬಹುದು– ಸೀರೆಗಳನ್ನೇ ಉಟ್ಟಿದ್ದರು. ಹೊಲದಲ್ಲಿ ಕೆಲಸ ಮಾಡುವ ಕೃಷಿಕ ಮಹಿಳೆಯರು ಉಟ್ಟಿದ್ದೂ ಸೀರೆಗಳನ್ನೇ. ಶಾಲೆ ಕಾಲೇಜಿಗೆ ಹೋಗುವ ಹುಡುಗಿಯರು ಸಲ್ವಾರ್‌ ಕಮೀಜ್‌ ತೊಟ್ಟಿದ್ದೇನೋ ನಿಜ. ಯೌವನ ದಾಟಿದ ಕೆಲವು ಮಹಿಳೆಯರು ಬುರ್ಖಾಧಾರಿಗಳಾಗಿದ್ದರು.

ಬಾಂಗ್ಲಾದೇಶದಲ್ಲಿ ಮುಸ್ಲಿಮರ ಸಂಖ್ಯೆ ದೊಡ್ಡದಿದೆ. ಅಲ್ಲಿನ ಸಂವಿಧಾನವು ದೇಶವನ್ನು ‘ಇಸ್ಲಾಮಿಕ್‌ ರಿಪಬ್ಲಿಕ್‌’ ಎಂದೇ ಕರೆದಿದೆ. ಹಾಗಿದ್ದೂ ದೇಶದ ಅನನ್ಯತೆಗೆ ಧರ್ಮಕ್ಕಿಂತ ಹೆಚ್ಚು ಮುಖ್ಯವಾಗುವುದು ಭಾಷೆ ಹಾಗೂ ಸಂಸ್ಕೃತಿ. ಇಬ್ಬರು ಸಾಹಿತಿ ಪ್ರೊಫೆಸರ್‌ಗಳ ಜೊತೆ ನಾನು ಸುದೀರ್ಘಾವಧಿ ಸಂಜೆಗಳನ್ನು ‘ಪಾನ’ಗೋಷ್ಠಿಯ ಸಹಿತ ಕಳೆದೆ. ಅವರಲ್ಲಿ ಒಬ್ಬರು ಫಕ್ರುಲ್‌ ಆಲಮ್‌– ರವೀಂದ್ರನಾಥ ಟ್ಯಾಗೋರ್‌ ಹಾಗೂ ಜೀವನಾನಂದ ದಾಸ್‌ ಕಾವ್ಯಗಳನ್ನು ಅನುವಾದಿಸಿದವರು.

ಇನ್ನೊಬ್ಬರು ಕೈಸರ್‌ ಹಕ್‌– ಗ್ರಾಮೀಣ ಬಂಗಾಳದ ಸರ್ಪದೇವತೆ ಆರಾಧನೆಯ ಕುರಿತು ಇತ್ತೀಚೆಗಷ್ಟೇ ಒಂದು ಪುಸ್ತಕ ಬರೆದು ಮುಗಿಸಿದವರು. ಅವರು ಈ ಕೃತಿಗಳ ಕುರಿತೇ ಕೆಲಸ ಮಾಡಬೇಕು ಎಂದು ಪ್ರಜ್ಞಾಪೂರ್ವಕವಾಗಿ ಹೊರಟವರಲ್ಲ, ಅದು ಸಹಜವಾಗಿಯೇ ಆದದ್ದು. ‘ಹಿಂದೂ’ ವಿಷಯಗಳಲ್ಲಿ ಆಸಕ್ತಿ ಇರುವ ‘ಮುಸ್ಲಿಂ’ ವಿದ್ವಜ್ಜನ ಎಂದು ಇವರನ್ನು ಕರೆಯಲಾಗದು. ತಮ್ಮ ತಾಯ್ನೆಲದ ಸಾಹಿತ್ಯಕ ಹಾಗೂ ಜನಪದ ಪರಂಪರೆಯನ್ನು ದೊಡ್ಡ ಮಟ್ಟದ ಓದುಗರ ಮುಂದೆ ಇಡಬೇಕೆಂಬ ಉಮೇದು ಇರುವ ಬಂಗಾಳಿಗಳು ಇವರು.

ಬಾಂಗ್ಲಾವು ಪಾಕಿಸ್ತಾನದಷ್ಟು ‘ಇಸ್ಲಾಮೀಕೃತ ದೇಶ’ವಾಗಿಲ್ಲ. ಪಾಕಿಸ್ತಾನದ ಸ್ಥಾಪಕನ ಸಹೋದರಿ ಫಾತಿಮಾ ಜಿನ್ನಾ ಸದಾ ಸೀರೆ ಉಡುತ್ತಿದ್ದರು. ಆ ಕಾಲದ ಬಹುತೇಕ ಮಧ್ಯಮವರ್ಗದ ಮಹಿಳೆಯರೂ ಸೀರೆಗಳನ್ನೇ ಉಡುತ್ತಿದ್ದುದು. ಆದರೆ, ದಶಕಗಳ ನಂತರ ಸೀರೆ ಹಿಂದೂ ಸಂಪ್ರದಾಯದ ವಸ್ತ್ರ ಎನಿಸಿಕೊಂಡಿತು. ಗ್ರಾಮೀಣ ಸಿಂಧ್‌ ಭಾಗ ಮಾತ್ರ ಇದಕ್ಕೆ ಅಪವಾದ. ಜನರ ಕಣ್ಣಿಗೆ ಕಾಣದಷ್ಟು ಅದು ಮಾಯವಾಯಿತೆನ್ನಬೇಕು. ಈ ಬೆಳವಣಿಗೆಯ ನಡುವೆ ಬುರ್ಖಾ ಹೆಚ್ಚು ವ್ಯಾಪಕವಾಯಿತು. ಮಹಿಳೆಯರಷ್ಟೇ ಅಲ್ಲ, ಪುರುಷರ ವೇಷಭೂಷಣ ಗಮನಿಸಿದರೂ ಪಾಕಿಸ್ತಾನದಷ್ಟು ಬಾಂಗ್ಲಾ ಇಸ್ಲಾಮೀಕೃತವಾಗಿಲ್ಲದಿರುವುದು ಸ್ಪಷ್ಟವಾಗುತ್ತದೆ. ದಾಡಿ ಹಾಗೂ ಸ್ಕಲ್‌ ಕ್ಯಾಪ್‌ಗಳು ಲಾಹೋರ್‌ನ ಬೀದಿಗಳಲ್ಲಿ ಕಾಣುವಷ್ಟು ಢಾಕಾದಲ್ಲಿ ಕಾಣುವುದಿಲ್ಲ.

ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್‌ ಮೂಲಭೂತವಾದಕ್ಕೆ ಕಾರಣಗಳೇ ಇರಲಿಲ್ಲ. ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸಕ್ಕೆಂದು ಹೋದ ಬಾಂಗ್ಲಾದೇಶಿಗರು, ಅಲ್ಲಿಂದ ಮರಳಿದಾಗ ನೇಮನಿಷ್ಠೆಯನ್ನು ಕಟ್ಟಿಕೊಂಡು ಬಂದರು. ‘ವಹಾಬಿ ಸಿದ್ಧಾಂತ’ದ ಕಟ್ಟರ್ ವಾದವನ್ನು ಹಳ್ಳಿಹಳ್ಳಿಗಳಲ್ಲಿ ಬೋಧಿಸಿದರು. ಪಟ್ಟಣಗಳಲ್ಲಿ ಮುಕ್ತ ಚಿಂತನೆಯ ನಾಸ್ತಿಕ ಬರಹಗಾರರನ್ನು ಕೊಲ್ಲಲಾಯಿತು ಅಥವಾ ತಸ್ಲೀಮಾ ನಸ್ರೀನ್‌ ಅವರಿಗೆ ಆದಂತೆ ಗಡಿಪಾರು ಮಾಡುವ ಶಿಕ್ಷೆ ನೀಡಲಾಯಿತು.

ಬಾಂಗ್ಲಾದಲ್ಲೂ ಮತಾಂಧತೆ ಭೀತಿ ಒಡ್ಡಿದೆಯಾದರೂ ಅದರ ತೀವ್ರತೆ ಪಾಕಿಸ್ತಾನದಲ್ಲಿ ಇರುವಷ್ಟು ಇಲ್ಲ.  ಕಾಶ್ಮೀರ ಹಾಗೂ ಆಫ್ಘಾನಿಸ್ತಾನದಲ್ಲಿ ತಮ್ಮ ಹಿತಾಸಕ್ತಿಗಳ ಉನ್ನತೀಕರಣಕ್ಕೆ ಜಿಹಾದಿಗಳು ನೆರವು ನೀಡಬಲ್ಲರು ಎಂದು ಪಾಕಿಸ್ತಾನದಲ್ಲಿ ಬಹುಕಾಲದಿಂದ ಸರ್ಕಾರ, ಸೇನಾ ವ್ಯವಸ್ಥೆಗಳು ನಂಬಿಕೊಂಡು ಬಂದಿವೆ.  ಅದೇ ಕಾರಣಕ್ಕೆ ಜಿಹಾದಿಗಳನ್ನು ಬೆಂಬಲಿಸಿವೆ. ಇದೊಂದು ದುರಂತದ ಲೆಕ್ಕಾಚಾರವೇ ಸರಿ. ಯಾಕೆಂದರೆ, ಶಿಯಾಗಳು ಹಾಗೂ ಪಾಕಿಸ್ತಾನವನ್ನು ನಂಬದವರ ಮೇಲೆ ಜಿಹಾದಿಗಳು ದಾಳಿ ನಡೆಸಲಾರಂಭಿಸಿದರು. ಮೂಲಭೂತವಾದದ ಪ್ರಭಾವವು ದೈನಿಕ ಬದುಕಿನ ಮೇಲೆ, ಅದರಲ್ಲೂ ವಿಶೇಷವಾಗಿ ಶಿಕ್ಷಣ ಕ್ಷೇತ್ರದ ಮೇಲೆ ಗಣನೀಯವಾಗಿ ಹೆಚ್ಚಾಗತೊಡಗಿತು. ಇವನ್ನೆಲ್ಲಾ ಗಮನಿಸಿದರೆ ಬಹುಶಃ, ಪಾಕಿಸ್ತಾನವನ್ನು ‘ಇಸ್ಲಾಮಿಕ್‌ ಸರ್ಕಾರ’ ಹಾಗೂ ‘ಇಸ್ಲಾಮಿಕ್‌ ಸಮಾಜ’ ಎಂದು ಹೆಸರಿಸಬಹುದು.

ಮೂರು ಬಾರಿ ನಾನು ಪಾಕಿಸ್ತಾನಕ್ಕೆ ಹೋಗಿದ್ದು, ಅಲ್ಲಿನ ಅಲ್ಪಸಂಖ್ಯಾತರು ಹಿಂಸೆಯ ಆತಂಕದಲ್ಲಿ ಇರುವುದನ್ನು ಗಮನಿಸಿದ್ದೇನೆ. ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಇಷ್ಟು ಕೆಟ್ಟದಾಗಿ ಇಲ್ಲ. ಢಾಕಾದಲ್ಲಿ ಯುವ ವೈದ್ಯರೊಬ್ಬರನ್ನು ನಾನು ಭೇಟಿ ಮಾಡಿದೆ. ಅವರು ಆದಷ್ಟು ಬೇಗ ವಿದೇಶಕ್ಕೆ ಹೋಗುವ ಇಂಗಿತ ವ್ಯಕ್ತಪಡಿಸಿದರು (ನಾಥೂರಾಮ್‌ ಗೋಡ್ಸೆಯ ಕೊನೆಯ ಭಾಷಣ ಓದಿಕೊಂಡಿದ್ದ ಅವರು, ಹಿಂದೂಗಳೇ ಪ್ರಧಾನವಾಗಿರುವ ಅಖಂಡ ಭಾರತದ ಪರವಾಗಿ ಆ ಭಾಷಣದಲ್ಲಿ ಇದ್ದ ಭಾವುಕ ನುಡಿಗಳತ್ತ ಗಮನ ಸೆಳೆದರು. ಅವರಿಗೂ ಅಂಥದ್ದೇ ಭಾರತದ ಜೊತೆ ಗುರುತಿಸಿಕೊಳ್ಳುವುದು ಬೇಕಿತ್ತು). ಉಳಿದಂತೆ ಬಾಂಗ್ಲಾದಲ್ಲಿ ಏಕತೆ ಇದೆ. ಢಾಕಾದಲ್ಲಿ ಇರುವಷ್ಟು ಹಿಂದೂ ಬರಹಗಾರರು ಹಾಗೂ ವೃತ್ತಿಪರರನ್ನು ಲಾಹೋರ್‌, ಕರಾಚಿ ಅಥವಾ ಇಸ್ಲಾಮಾಬಾದ್‌ನಲ್ಲಿ ಎಂದೂ ಕಾಣಲಾಗದು.

ನಾಲ್ಕು ದಿನ ತೀವ್ರವಾದ ಸಂವಾದ ನಡೆಸಿದ ನಂತರ ಢಾಕಾದಿಂದ ನಾನು ಹೊರಡಲು ನಿರ್ಧರಿಸಿದೆ. ನನ್ನ ಸ್ನೇಹಿತರೊಬ್ಬರು ಕಾರು, ಚಾಲಕ ಹಾಗೂ ಒಬ್ಬ ಗೈಡ್‌ ಅನ್ನು ಒದಗಿಸಿದರು. ನನ್ನ ಜೊತೆಗಿದ್ದುದು ಪ್ರಾಚ್ಯವಸ್ತುಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದಿದ್ದ ಮಾರ್ಗದರ್ಶಕ. ಭತ್ತದ ಗದ್ದೆಗಳು, ಬಿದಿರು ಮೆಳೆಗಳು ಬೆಳೆದ, ಪಕ್ಷಿಸಂಕುಲ ಕಣ್ಣಿಗೆ ತಂಪೆರೆಯುತ್ತಿದ್ದ ವಾತಾವರಣದಲ್ಲಿ ನಾವಿದ್ದ ಕಾರು ಹಾದುಹೋಯಿತು.  ಅಲ್ಲಿನ ಪಾರಿಸರಿಕ ಸೌಂದರ್ಯವು ಜನಪ್ರಿಯ ಕಲೆಯ ಮೇಲೂ ಪರಿಣಾಮ ಬೀರಿತ್ತು. ನಮ್ಮ ಕಾರಿನ ಎದುರು ಹೋಗುತ್ತಿದ್ದ ಲಾರಿಯ ಹಿಂಬದಿಯಲ್ಲಿ ಎರಡು ಮಡಿವಾಳ ಹಕ್ಕಿಗಳ ಚೆಂದದ ಚಿತ್ರ ಬಿಡಿಸಿದ್ದುದು ಇದಕ್ಕೆ ಉದಾಹರಣೆಯಂತೆ ಕಂಡಿತು. ನಾವು ಪದ್ಮಾ ನದಿ ತಲುಪಿದೆವು. ಒಂದು ದಂಡೆ ಮೇಲೆ ನಿಂತರೆ ಇನ್ನೊಂದು ದಂಡೆ ಕಾಣುವುದೇ ಕಷ್ಟವೆನ್ನುವಷ್ಟು ವಿಶಾಲವಾದ ನದಿ ಅದು. ಅಲ್ಲಿಂದ ದೋಣಿವಿಹಾರಕ್ಕೆ ಹೊರಟೆವು.

ವಾಪಸ್ಸಾಗುವಾಗ ನನ್ನ ಗೈಡ್‌ ಜೋರು ಗಾಳಿ ಬೀಸುತ್ತಿದ್ದ ಹಳ್ಳಿಗಾಡಿನ ರಸ್ತೆಯಲ್ಲಿ ಕರೆದುಕೊಂಡು ಹೋದರು.  ತಂಗೇಲ್‌ ಜಿಲ್ಲೆಯ ಜಮೀನ್ದಾರರೊಬ್ಬರ ಮೂರು ಅಂತಸ್ತಿನ ಭವ್ಯವಾದ ಮನೆ ನೋಡಲು ಹೋದೆವು. ಅಲ್ಲಿ ಹುಲ್ಲು ಬೆಳೆದಿತ್ತು. ಬಾಗಿಲಿನ ಮೇಲೆ ಎಂದೋ ಕೆತ್ತಿದ್ದ ಆನೆಯ ದಂತ ಮುರಿದುಹೋಗಿತ್ತು. ಮನೆಯ ಕತ್ತಲ ಕೋಣೆಗಳಲ್ಲಿ ಈಗ ಸಹಕಾರಿ ಬ್ಯಾಂಕ್‌ ಇತ್ತು. ಅಂಗಳದಲ್ಲಿದ್ದ ದುರ್ಗಾ ದೇವಸ್ಥಾನ ಪೂಜೆ ಇಲ್ಲದ ಸ್ಥಿತಿಯಲ್ಲಿ ಇತ್ತು. ಅಲ್ಲಿಂದ ನಮ್ಮ ಪಯಣ ಸಾಗಿದ್ದು ಮಾಣಿಕ್‌ಗಂಜ್‌ ಜಿಲ್ಲೆಯತ್ತ. ಅಲ್ಲಿ ಇನ್ನೂ ಬೃಹತ್ತಾದ ಜಮೀನ್ದಾರಿ ಅರಮನೆ ಇತ್ತು. ಅದೇ ‘ಬಾಲಿಯಾಟಿ ಅರಮನೆ’. ಈಗ ಅದನ್ನು ಪುನರುಜ್ಜೀವನಗೊಳಿಸಲಾಗಿದ್ದು, ಬಾಂಗ್ಲಾದೇಶದ ಪ್ರಾಚ್ಯವಸ್ತು ಇಲಾಖೆಯ ರಕ್ಷಣೆಯಲ್ಲಿದೆ. ದುರದೃಷ್ಟವಶಾತ್‌ ನಾನು ಅಲ್ಲಿಗೆ ಹೋದ ದಿನ ಇಲಾಖೆಯ ವಾರದ ರಜೆಯಾಗಿತ್ತು. ಗೇಟಿನಿಂದ ಆ ಕಟ್ಟಡವು ಮನಮೋಹಕವಾಗಿ ಕಂಡಿತು.

ಅಲ್ಲಿ ಎಂದೋ ವಾಸವಿದ್ದ ಹಿಂದೂ ಜಮೀನ್ದಾರರ ಕುಟುಂಬಗಳು ಬಹಳ ಹಿಂದೆಯೇ ಭಾರತಕ್ಕೆ ಹೋಗಿದ್ದವು. ಆದರೆ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆ ಕುಟುಂಬದ ಬಡ ಧರ್ಮನಿಷ್ಠರು ಈಗಲೂ ಇದ್ದಾರೆ. ನಾವು ಒಂದು ಶಾಮಿಯಾನಾ ಹಾದುಹೋದೆವು. ಅಲ್ಲಿಂದ ಸಂಗೀತ ಹೊಮ್ಮುತ್ತಿತ್ತು. ಒಳಗೆ ಹೋದೆವು. ಸೇವಂತಿಗೆ ಪುಷ್ಪಮಾಲೆ ತೊಟ್ಟ ತಾಜಾ ಮುಖದ ತರುಣನೊಬ್ಬ ಕೃಷ್ಣ ಕಥಾನಕಗಳನ್ನು ಹಾಡುತ್ತಿದ್ದ. ಹಾರ್ಮೋನಿಯಂ ಮತ್ತಿತರ ಪಕ್ಕವಾದ್ಯಗಳು ಸಾಥ್‌ ನೀಡುತ್ತಿದ್ದವು. ವೈಷ್ಣವ ಪಂಥದ ಭಕ್ತರು ಕೆಳಹಾಸಿನ ಮೇಲೆ ಕುಳಿತು ಪರವಶರಾಗಿ ಚಪ್ಪಾಳೆ ತಟ್ಟುತ್ತಾ, ಸ್ತೋತ್ರಗಳಿಗೆ ದನಿಗೂಡಿಸುತ್ತಿದ್ದರು. ಕೆಲವು ಹಿರಿಯ ಪುರುಷ–ಮಹಿಳೆಯರು ಪ್ಲಾಸ್ಟಿಕ್‌ ಕುರ್ಚಿಗಳ ಮೇಲೆ ಕುಳಿತಿದ್ದರು. ಪಕ್ಕದಲ್ಲಿ ಒಬ್ಬ ಮುಸ್ಲಿಂ ನಿಂತಿದ್ದರು. ನಮ್ಮಂತೆ ಅವರೂ ದೂರದಿಂದ ಬಂದು, ಅಲ್ಲಿನ ಸಂಭ್ರಮ ಕಣ್ತುಂಬಿಕೊಳ್ಳುತ್ತಿದ್ದರು.

ಒಳಹೋಗುವ ಹಾಗೂ ಹೊರಬರುವ ಸ್ಥಳಗಳಲ್ಲಿ ಕೃಷ್ಣ–ರಾಧೆಯ ಪಟಗಳು, ಕಡಲೆ ಬೀಜ ಹಾಗೂ ಅರಳನ್ನು ಮಾರುವ ವ್ಯಾಪಾರಿಗಳಿದ್ದರು. ಮೈಕ್ರೋಫೋನ್‌ ಹಾಗೂ ಧ್ವನಿವರ್ಧಕಗಳನ್ನು ಬಿಟ್ಟರೆ ಇಡೀ ದೃಶ್ಯ 19ನೇ ಶತಮಾನದಲ್ಲಿ ನಡೆದಂತೆ ಕಾಣುತ್ತಿತ್ತು. ಪಶ್ಚಿಮ ಬಂಗಾಳದ ಹಳ್ಳಿಗಾಡಿನಲ್ಲಿ ಅನೇಕ ಸಲ ನಾನು ಆಗಾಗ ಕಾರಿನಲ್ಲಿ, ಬಹುತೇಕ ರೈಲಿನಲ್ಲಿ ಪ್ರವಾಸ ಮಾಡಿದ್ದೇನೆ. ಅಲ್ಲಿನ 24 ‘ಪರಗಣ’ಗಳು (ಪ್ರಾಂತಗಳು) ಹಾಗೂ ವೀರಭೂಮಿ ಹಸಿರಾಗಿವೆ. ತಂಗೇಲ್‌ ಹಾಗೂ ಮಾಣಿಕ್‌ಗಂಜ್‌ ಬಂಗಾಳದ ಹಳ್ಳಿಗಾಡಿಗಿಂತ ಹೆಚ್ಚು ಹಸಿರಾಗಿದ್ದವು.

ಪಶ್ಚಿಮ ಬಂಗಾಳದಲ್ಲಿ ಅನೇಕ ಕೊಳಗಳಿವೆ. ಪೂರ್ವದಲ್ಲಿ ದೊಡ್ಡ ನದಿಗಳೂ ಉಂಟು. ವ್ಯತ್ಯಾಸ ಏನೆಂದರೆ, ಭಾರತಕ್ಕೆ ಸೇರಿದ ಬಂಗಾಳದ ಹಳ್ಳಿಗಾಡಿನಲ್ಲಿ ಆಧುನಿಕ ಕೈಗಾರಿಕೆಗಳು ಎದ್ದಿವೆ. ಜವಳಿ ಮಿಲ್‌ಗಳು, ಔಷಧ ಕಂಪೆನಿಗಳು ಅಲ್ಲಲ್ಲಿ ಎದ್ದುಕಾಣುತ್ತವೆ. ಅವುಗಳಲ್ಲಿ ಕೆಲಸ ಮಾಡುವವರೆಲ್ಲಾ ಹತ್ತಿರದ ಹಳ್ಳಿಯವರೇ. ಕೋಲ್ಕತ್ತ ಒಂದು ಕಾಲದಲ್ಲಿ ಕೈಗಾರಿಕಾ ಹೊಳಪನ್ನು ಕಂಡಿತ್ತು. ಢಾಕಾ ಜವಳಿ ಉತ್ಪಾದನೆ, ರಫ್ತಿಗೆ ಹೆಸರುವಾಸಿಯಾಗಿತ್ತು. ಕೋಲ್ಕತ್ತದ ಹಿಂದೂ ಮಧ್ಯಮವರ್ಗದವರು ಸಾಂಪ್ರದಾಯಿಕವಾಗಿ ಪೂರ್ವ ಬಂಗಾಳದ ಮುಸ್ಲಿಂ ಕೃಷಿಕರನ್ನು ಕೀಳಾಗಿ ಕಾಣುತ್ತಿದ್ದರು. ಅವರೆಲ್ಲ ಸಂಸ್ಕಾರಹೀನ, ಜೋಬದ್ರ, ಅನಾಗರಿಕರು ಎಂದೇ ಭಾವಿಸಿದ್ದರು.

ಹಾಗೆ ನೋಡಿದರೆ, ತುಳಿತಕ್ಕೆ ಒಳಗಾದ ಬಂಗಾಳಿಗಳೇ 21ನೇ ಶತಮಾನದ ಸಂಕೀರ್ಣ ಸವಾಲುಗಳನ್ನು ನಿಭಾಯಿಸುವಷ್ಟು ಶಕ್ತರಾಗಿರುವುದು. ಪುಸ್ತಕ ಪ್ರೀತಿಯ ಈ ‘ಭದ್ರಲೋಕ’ವು ಅಮೆರಿಕದ ಅಕಾಡೆಮಿಗಳಿಗೆ ಸಂಶೋಧಕರು, ವಿದ್ವಜ್ಜನರನ್ನು ಕೊಡುಗೆಯಾಗಿ ನೀಡಿದೆ. ಈಗಿನ ಬಾಂಗ್ಲಾದೇಶದ ಕೃಷಿಕರು ಕಾರ್ಮಿಕರು ಹಾಗೂ ಕೈಗಾರಿಕೋದ್ಯಮಿಗಳಾಗಿದ್ದು, ತಮ್ಮ ದೇಶದ ಆರ್ಥಿಕತೆಗೆ ದೊಡ್ಡ ಕಾಣಿಕೆ ಸಲ್ಲಿಸುತ್ತಿದ್ದಾರೆ. ಬ್ಯಾಂಕ್‌ಗಳು, ಸಹಕಾರಿ ಸಂಸ್ಥೆಗಳು, ಟೆಲಿಕಾಂ ಕಂಪೆನಿಗಳು ಹಾಗೂ ವಿಶ್ವವಿದ್ಯಾಲಯಗಳನ್ನು ನಡೆಸುವ ‘ಗ್ರಾಮೀಣ್‌’, ‘ಬಿಆರ್‌ಎಸಿ’ಯಂಥ ಪ್ರಮುಖ ಸಾಮಾಜಿಕ ಸಂಸ್ಥೆಗಳ ವಿಸ್ತರಣೆಯಲ್ಲೂ ಇಲ್ಲಿನವರ ಸಾಮರ್ಥ್ಯ, ಚೈತನ್ಯ ವಿನಿಯೋಗವಾಗುತ್ತಿದೆ. ಭಾರತದ ಗಡಿಯಲ್ಲಿ ಇವಕ್ಕೆ ಸಾಟಿಯಾಗಬಲ್ಲ ಯಾವುದೇ ಸಾಮಾಜಿಕ ಸಂಸ್ಥೆ ಇಲ್ಲ.

ಭಾರತ ಹಾಗೂ ಪಾಕಿಸ್ತಾನ ಅಸ್ತಿತ್ವಕ್ಕೆ ಬಂದ ಕಾಲು ಶತಮಾನದ ನಂತರ ಬಾಂಗ್ಲಾದೇಶ ರೂಪುತಳೆದದ್ದು. ಇನ್ನೂ ಅದು ‘ಕಾರ್ಯಪ್ರವೃತ್ತವಾಗಿರುವ’, ‘ಕಟ್ಟಲಾಗುತ್ತಿರುವ’ ದೇಶ. ಅಲ್ಲಿನ ಪ್ರಜಾತಾಂತ್ರಿಕ ಸಂಸ್ಥೆಗಳು ಸೂಕ್ಷ್ಮವಾಗಿವೆ. ನ್ಯಾಯಾಲಯಗಳು ಹಾಗೂ ಮುದ್ರಣ ಮಾಧ್ಯಮ ಸಂಪೂರ್ಣ ಸ್ವತಂತ್ರವಾಗಿಲ್ಲ. ಧರ್ಮ ಹಾಗೂ ಭಾಷಿಕ ಪ್ರಾಬಲ್ಯ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದ್ದು, ಮುಸ್ಲಿಮರು ಹಾಗೂ ಹಿಂದೂಗಳ ನಡುವೆ, ಬಂಗಾಳಿ ಭಾಷಿಕರು ಹಾಗೂ ಆದಿವಾಸಿ ಭಾಷೆಗಳನ್ನು ಆಡುವವರ ನಡುವೆ ಆತಂಕ ಸೃಷ್ಟಿಸಿದೆ. ಈಗ ಅಲ್ಲಿ ಪೌರ ಸರ್ಕಾರ ವ್ಯವಸ್ಥೆ ಇದ್ದರೂ ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳ ಮೇಲೆ ಸೇನಾ ಪರಿಣಾಮ ಇದ್ದೇ ಇದೆ. ಅನೇಕ ಪ್ರದೇಶಗಳಲ್ಲಿ ಕಡು ಬಡತನ ಇದೆ. ಹವಾಮಾನ ಬದಲಾವಣೆಯ ದೃಷ್ಟಿಯಲ್ಲಿ ಬಾಂಗ್ಲಾ ಅತಿ ಹೆಚ್ಚು ಆತಂಕದಲ್ಲಿರುವ ದೇಶಗಳಲ್ಲಿ ಒಂದು.

ಈಗ ಆತಂಕದ ಛಾಯೆ ಇದ್ದರೂ ಸಮಸ್ಯೆ ಧುತ್ತನೆ ಅಪ್ಪಳಿಸುವ ವಾತಾವರಣವಿಲ್ಲ. ಭವಿಷ್ಯ ಮಾತ್ರ ಅನಿಶ್ಚಿತ. ಇಷ್ಟೆಲ್ಲ ಕಂಡ ನಾನು ಒಬ್ಬ ಭಾರತೀಯನಾಗಿ ಬಾಂಗ್ಲಾದೇಶವನ್ನು ಬಾಯಿತುಂಬಾ ಹೊಗಳುತ್ತೇನೆ. ಒಂದು ಕಾಲದಲ್ಲಿ ಪಾಕಿಸ್ತಾನದ ಭಾಗವಾಗಿದ್ದ ಆ ದೇಶದವರು ವಿಭಜನೆಯ ನಂತರ ಇಸ್ಲಾಮಿಕ್‌ ಮೂಲಭೂತವಾದವನ್ನು ಮಟ್ಟಹಾಕಿ, ಒಂದು ರೀತಿಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಒಂದು ಕಾಲದಲ್ಲಿ ಅವಿಭಜಿತ ಬಂಗಾಳದ ಭಾಗವಾಗಿದ್ದ ಅವರು ವಿಭಜನೆಯ ನಂತರ ತೋರಿರುವ ಉದ್ಯಮಶೀಲತೆ ಹಾಗೂ ರಚನಾತ್ಮಕ ಸಾಮಾಜಿಕ ಕ್ರಿಯಾಶೀಲತೆ ಶ್ಲಾಘನೀಯ. ಗಡಿಭಾಗದ ಪಶ್ಚಿಮ ಪ್ರದೇಶದವರು ಈ ಸಾಧನೆಗೆ ಸಾಟಿಯಾಗಲಾರರು ಎಂದೇ ನನ್ನ ಭಾವನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT