ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿಷನ್‌–44’ ತಂತ್ರ ಫಲಿಸುವುದೇ?

Last Updated 16 ಜೂನ್ 2018, 9:12 IST
ಅಕ್ಷರ ಗಾತ್ರ

ಜಮ್ಮು–ಕಾಶ್ಮೀರದ ಜನ ಸಂಕಷ್ಟದಲ್ಲಿರುವ ಹೊತ್ತಿನಲ್ಲೇ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆ ಅನಿರೀಕ್ಷಿತ­ವೇ­ನಲ್ಲ. ವಿಧಾನಸಭೆಯ ಆರು ವರ್ಷಗಳ ಅವಧಿ ಮುಗಿದಿರುವುದರಿಂದ ಮತದಾನ ಅನಿವಾರ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ಚುನಾವಣೆಗಳು ಕಾಲಕಾಲಕ್ಕೆ ಆಗಬೇಕು ಎನ್ನುವುದು ನಿರ್ವಿ­ವಾದ. ಆದರೆ, ಕಣಿವೆ ಜನರ ಬದುಕು ಪ್ರವಾಹ­ದಲ್ಲಿ ಕೊಚ್ಚಿ ಹೋಗಿರುವ ಸಮಯದಲ್ಲಿ ಚುನಾವಣೆ ನಡೆಯುತ್ತಿರುವುದು ಸರಿಯೇ ಎನ್ನುವುದಷ್ಟೇ ಪ್ರಶ್ನೆ.

ಪ್ರವಾಹಕ್ಕೆ ಹೆದರಿ ರಾಜ್ಯ ಬಿಟ್ಟಿರುವ ಶ್ರೀಮಂತರು ಇನ್ನೂ ಹಿಂತಿರುಗಿಲ್ಲ. ಬೀದಿಗೆ ಬಿದ್ದಿ­ರುವ ಬಡವರು ಕೊರೆವ ಚಳಿಯಲ್ಲಿ ಅತಂತ್ರ­ವಾ­ಗಿ­ರುವ ಬದುಕು ಕಟ್ಟಿಕೊಳ್ಳಲು ಪರದಾಡು­ತ್ತಿ­ದ್ದಾರೆ. ಪುನರ್ವಸತಿ ಕಾರ್ಯಾಚರಣೆ ಹೊಣೆ ಹೊರ­ಬೇಕಿದ್ದ ಒಮರ್‌ ಅಬ್ದುಲ್ಲಾ ‘ರಣ ಹೇಡಿ’­ಯಂತೆ ವರ್ತಿಸಿದ್ದಾರೆ. ಅವರು ಸವಾಲು ಸ್ವೀಕರಿ­ಸಿ­ದ್ದರೆ ಹೀರೊ ಆಗುತ್ತಿದ್ದರು. ಜನರನ್ನು ನಡು ನೀರಿ­ನಲ್ಲಿ ಬಿಟ್ಟು ಝೀರೊ ಆಗಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸಗಳನ್ನು ಸ್ವಯಂ ಸೇವಾ ಸಂಸ್ಥೆಗಳು ಮಾಡುತ್ತಿವೆ. ಮನೆ, ಮಠ ಕಳೆದು­ಕೊಂಡು ಅಸಹಾಯಕರಾದವರಿಗೆ ಬಟ್ಟೆ, ಹೊದಿಕೆ, ಔಷಧಿ ಮತ್ತಿತರ ಅಗತ್ಯ ವಸ್ತುಗಳನ್ನು ಪೂರೈಸುತ್ತಿವೆ.

ಬೆಂಗಳೂರು ಮೂಲದ ‘ಸ್ವಾಭಿಮಾನ್‌’ ಸ್ವಯಂ ಸೇವಾ ಸಂಸ್ಥೆಯ ಏಳು ಜನರ ತಂಡ ಸುಮಾರು ಒಂದು ತಿಂಗಳಿಂದ ಶ್ರೀನಗರದಲ್ಲಿ ಪರಿಹಾರ ಕೆಲಸದಲ್ಲಿ ತೊಡಗಿದೆ. ಈ ತಂಡದಲ್ಲಿ­ರುವ ಬೆಂಗಳೂರಿನ ಎಂ.ವಿ. ಜಗದೀಶ್‌ ಮತ್ತು ಶಿವಾನಂದ ವಾಲಿ ಅವರು ಕಣಿವೆ ಜನ ಅನುಭವಿಸುತ್ತಿರುವ ಕಷ್ಟಗಳನ್ನು ಪ್ರತಿನಿತ್ಯ ನೋಡು­ತ್ತಿದ್ದಾರೆ. ಅವರು ಹೇಳುವ ಮಾತು ಕಣಿವೆ ಜನರ ಕಣ್ಣೀರಿಗೆ ಕನ್ನಡಿ ಹಿಡಿಯುತ್ತದೆ.
‘ಕಾಶ್ಮೀರ ಜನರ ಪುನರ್ವಸತಿ ಸದ್ಯಕ್ಕೆ ಮುಗಿ­ಯು­ವುದಿಲ್ಲ. ಬಹಳ ಸಮಯ ಹಿಡಿಯಲಿದೆ. ನೀರಿನಿಂದ ತುಂಬಿಹೋಗಿದ್ದ ಮನೆಗಳು ಇನ್ನೂ ಬೀಳುತ್ತಿವೆ.  ತೊಂದರೆಗೊಳಗಾದವರಲ್ಲಿ  ಬಹುತೇಕರು ಬಡವರು. ಶ್ರೀಮಂತರು ಊರು ಬಿಟ್ಟಿದ್ದಾರೆ.

ಹೊರ ರಾಜ್ಯಗಳಲ್ಲಿರುವ ನೆಂಟರಿ­ಸ್ಟರ ಮನೆಗಳಿಗೆ ಹೋಗಿದ್ದಾರೆ’ ಎಂದು ಅವರು ಕಂಡಿರುವ ಸತ್ಯಗಳನ್ನು ತೆರೆದಿಡುತ್ತಾರೆ. ಪ್ರವಾಹ­ದಿಂದ ತೊಂದರೆಗೆ ಒಳಗಾಗಿರುವ ಜನರಿಗೆ ಈಗ ಚುನಾವಣೆ ಬೇಕಿರಲಿಲ್ಲ ಎನ್ನುವ ಮಾತನ್ನೇ ಅವರೂ ಪ್ರತಿಪಾದಿಸುತ್ತಾರೆ.
ಹೇಳುವುದಕ್ಕಿದು ‘ರಾಷ್ಟ್ರೀಯ ದುರಂತ’. ಆದರೆ, ಕೇಂದ್ರದಿಂದ ಬಿಡುಗಡೆಯಾದ  ಹಣ ಬರೀ ₨1750 ಕೋಟಿ. ‘ಚೇಂಬರ್‌ ಆಫ್‌ ಕಾಮರ್ಸ್‌’ ಮತ್ತಿತರ ಸಂಸ್ಥೆಗಳು ಅಂದಾಜು ಮಾಡಿರುವಂತೆ, ಕಾಶ್ಮೀರ ಪುನರ್‌ ನಿರ್ಮಾಣಕ್ಕೆ ₨ 45 ಸಾವಿರ ಕೋಟಿ ಬೇಕು. ಚುನಾವಣೆ ಮುಗಿಯುವವರೆಗೂ ಕೇಂದ್ರದಿಂದ ಹೆಚ್ಚು ನೆರವು ಸಿಗುವ ಸಾಧ್ಯತೆಗಳಿಲ್ಲ.

ಪ್ರವಾಹಪೀಡಿತ ರಾಜ್ಯಕ್ಕೆ ನೆರವು ಕೊಡಲು ಚುನಾವಣೆ ಅಡ್ಡಿಯಾಗಬಾರದಿತ್ತು. ಕಣಿವೆ­ಯಲ್ಲಿ ನಡೆದಿರುವುದು ಸಣ್ಣ ದುರಂತವಲ್ಲ, ಭಾರೀ ದುರಂತ. ಉದಾರವಾಗಿ ಸಹಾಯ ಮಾಡುವ ಔದಾರ್ಯ, ಆಡಳಿತ ನಡೆಸುವವರಿಗೆ ಇರಬೇಕು. ಚುನಾವಣೆ ನೆಪ ಮುಂದಿಟ್ಟು­ಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬಾರದು. ಜನರ ಬದುಕಿನ ಪ್ರಶ್ನೆ ಬಂದಾಗ ಯಾವುದೂ ಅಡ್ಡಿ ಆಗಬಾರದು. ಬಹುಶಃ ಈ ಕಾರಣಕ್ಕೇ  ಚುನಾವಣೆ ಮುಂದೂ­ಡುವಂತೆ ಆಯೋಗಕ್ಕೆ ಮುಖ್ಯಮಂತ್ರಿ ಮನವಿ ಮಾಡಿದ್ದರು ಅಂತ ಅನ್ನಿಸುತ್ತದೆ.

ಅವರ ಮಾತಿಗೆ ಮಿಕ್ಕ ಪಕ್ಷಗಳ ಬೆಂಬಲವಿರಲಿಲ್ಲ. ರಾಜಕೀಯ ಲಾಭಕ್ಕಾಗಿ ಒತ್ತಾಯ ಮಾಡಿದ್ದಾ­ರೆಂದು ಉಳಿದವರು ಭಾವಿಸಿದರು. ಅವರ ಬೇಡಿಕೆ­ಯನ್ನು ಆಯೋಗ ಗಂಭೀರವಾಗಿ ಪರಿಗಣಿಸಲಿಲ್ಲ. ಜಮ್ಮು–ಕಾಶ್ಮೀರ ಮೊದಲೇ ಹಿಂದುಳಿದ ರಾಜ್ಯ­ವೆಂಬ ಹಣೆಪಟ್ಟಿ ಅಂಟಿಸಿಕೊಂಡಿದೆ. ಉರಿ­ಯುವ ಗಾಯದ ಮೇಲೆ ಉಪ್ಪು ಸುರಿದಂತೆ ಪ್ರವಾ­ಹವೂ ಅಪ್ಪಳಿಸಿದರೆ, ಆ ರಾಜ್ಯದ ಗತಿ ಏನಾ­ಗ­ಬೇಕು. ಚೇತರಿಸಿಕೊಳ್ಳುವುದಾದರೂ ಹೇಗೆ?

ಯಾವುದೇ ಒಂದು ದೇಶ ಅಥವಾ ರಾಜ್ಯದ ಅಭಿವೃದ್ಧಿ ಅಳೆಯುವುದು ಆರ್ಥಿಕ ಪ್ರಗತಿ ದರ, ತಲಾ ಆದಾಯದ ಆಧಾರದಲ್ಲಿ. ದೇಶದ ಒಟ್ಟಾರೆ ಆರ್ಥಿಕ ಪ್ರಗತಿ ದರ ಮತ್ತು ತಲಾ ಆದಾಯಕ್ಕೆ ಹೋಲಿಸಿದರೆ ಜಮ್ಮು– ಕಾಶ್ಮೀರದ ಆರ್ಥಿಕ ವೃದ್ಧಿ ದರ, ತಲಾ ಆದಾಯ ಕಡಿಮೆ ಇದೆ. ಪ್ರತ್ಯೇಕ ಕಾಶ್ಮೀರದ ಬೇಡಿಕೆಯಿಂದಾಗಿ ಹೊಸ ಉದ್ಯಮಗಳು ಬರುತ್ತಿಲ್ಲ. ಬಂಡವಾಳ ಹೂಡಲು ಉದ್ಯಮಿಗಳು ಆಸಕ್ತಿ ತೋರುತ್ತಿಲ್ಲ. ಮೂಲ ಸೌಲಭ್ಯದ ವಿಷಯದಲ್ಲಿ ಹೇಳುವುದೇ ಬೇಕಿಲ್ಲ. ರಾಜಾ ಹರಿಸಿಂಗ್‌ ಕಾಲದಲ್ಲಿ ನಿರ್ಮಾ­ಣ­ವಾದ ರಸ್ತೆಗಳನ್ನು ಬಿಟ್ಟರೆ ಮತ್ತೊಂದು ಹೊಸ ರಸ್ತೆ ಆಗಿಲ್ಲವಂತೆ.

ಕಾಶ್ಮೀರ ಬದುಕಿರುವುದು ಬಹುತೇಕ ತೋಟ­ಗಾರಿಕೆ, ಕರಕುಶಲ, ಪ್ರವಾಸೋದ್ಯಮ ಕ್ಷೇತ್ರಗ­ಳಿಂದ. ದೇಶಕ್ಕೆ ಪೂರೈಕೆಯಾಗುವ ಸೇಬಿನಲ್ಲಿ ಶೇಕಡ 95ರಷ್ಟು ಬರುವುದು ಇಲ್ಲಿಂದಲೇ. ಶೇ 57ರಷ್ಟು ಅಕ್ರೂಟ್ (ವಾಲ್‌ನಟ್) ಕಾಶ್ಮೀರದ್ದು. ಕರಕುಶಲ ಉದ್ಯಮಕ್ಕೂ ಈ ರಾಜ್ಯ ಹೆಸರುವಾಸಿ. ಇಲ್ಲಿ ತಯಾರಿಸುವ ಕರಕುಶಲ ವಸ್ತುಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಉಂಟು. 2010– 11ರಲ್ಲಿ ₨1650 ಕೋಟಿ, 2012– 13ರಲ್ಲಿ ₨ 1725 ಕೋಟಿ ಮೌಲ್ಯದ ಕರಕುಶಲ ವಸ್ತುಗಳು ಹೊರ ದೇಶಗಳಿಗೆ ರಫ್ತಾಗಿವೆ.

‘ಭೂಮಿ ಮೇಲಿನ ಸ್ವರ್ಗ’ ಎಂದು ಬಣ್ಣಿಸಲಾಗುವ ಕಾಶ್ಮೀರ ಪ್ರವಾಸಿಗ­ರಿಗೂ ನೆಚ್ಚಿನ ತಾಣ. ಕಳೆದ ವರ್ಷ 1.10 ಕೋಟಿ ಪ್ರವಾಸಿ­ಗರು ಅಲ್ಲಿಗೆ ಭೇಟಿ ನೀಡಿದ್ದಾರೆ. ಹೋಟೆಲ್‌, ಲಾಡ್ಜ್‌, ಟ್ಯಾಕ್ಸಿ ಮೊದಲಾದ ಪೂರಕ ಉದ್ಯಮ­ಗಳು ಲಕ್ಷಾಂತರ ಕೈಗಳಿಗೆ ಉದ್ಯೋಗ ಕೊಟ್ಟಿವೆ.
ಜಮ್ಮು– ಕಾಶ್ಮೀರದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಕಲ್ಲು ಮುಳ್ಳಿನ ಹಾದಿಯಲ್ಲಿ ಹೋಗ­ಬೇಕು. ನಿರಾಶ್ರಿತರ ಪುನರ್ವಸತಿ ಮತ್ತು ದಕ್ಷಿಣ ಕಾಶ್ಮೀರ ಮರು ನಿರ್ಮಾಣ ಸವಾಲಿನ ಕೆಲಸ.

ಕೇಂದ್ರದ ನೆರವು ದೊಡ್ಡ ಪ್ರಮಾಣದಲ್ಲಿ ಸಿಗದಿ­ದ್ದರೆ ಚೇತರಿಕೆ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ವಿಧಾನ­ಸಭೆ ಚುನಾವಣೆ ನಡೆಯುತ್ತಿದೆ. ಕೇಂದ್ರ­ದಲ್ಲಿ ಪ್ರಬಲ ಶಕ್ತಿಯಾಗಿರುವ ಬಿಜೆಪಿ ಒಂದೊಂದೇ ರಾಜ್ಯವನ್ನು ಕಬಳಿಸುತ್ತಾ ಹೊರ­ಟಿದೆ. ಕಾಶ್ಮೀರಕ್ಕೂ ನರೇಂದ್ರ ಮೋದಿ, ಅಮಿತ್‌ ಷಾ ಜೋಡಿ ‘ಸಖತ್‌ ತಂತ್ರ’ ರೂಪಿಸಿದೆ. ಜಮ್ಮು ವಿಭಾಗದಲ್ಲಿ ಹಿಂದೂ ಮತಗಳನ್ನು ಧ್ರುವೀಕರಣ ಮಾಡಲು ಮುಂದಾಗಿದೆ. ಹಿಂದೂ­ಗಳಿಗಿಂತ ಹೆಚ್ಚು ಮುಸ್ಲಿಮರು ಇರುವ ಕಡೆಗಳಲ್ಲಿ ಅವರ ಮತಗಳನ್ನು ಒಡೆಯುವ ಯೋಜನೆ ರೂಪಿಸಿದೆ. ಬಿಜೆಪಿ ತಂತ್ರ ಫಲಿಸಿದರೆ, ಜಮ್ಮು ವಿಭಾಗದಲ್ಲೂ ದೊಡ್ಡ ಶಕ್ತಿಯಾಗಬಹುದು.

ಚುನಾವಣೆ ಸೋತು ಸೊರಗಿರುವ ಕಾಂಗ್ರೆಸ್‌ ಪರಿಸ್ಥಿತಿ ಜಮ್ಮು– ಕಾಶ್ಮೀರದಲ್ಲೇನೂ ಭಿನ್ನ­ವಾಗಿಲ್ಲ. ಒಮರ್‌ ಅಬ್ದುಲ್ಲಾ ಅವರ ಜತೆ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದ ಕಾಂಗ್ರೆಸ್‌ ಆಡಳಿತ ವಿರೋಧಿ ಅಲೆ ಎದುರಿಸಬೇಕಾದ ಸಂದಿಗ್ಧತೆಗೆ ಸಿಕ್ಕಿದೆ. ಕೇಂದ್ರದ ಮಾಜಿ ಸಚಿವ ಫಾರೂಕ್‌  ಅಬ್ದುಲ್ಲಾ ಅನಾರೋಗ್ಯದಿಂದ ಚುನಾವಣೆ ಪ್ರಚಾರ­ದಿಂದ ದೂರ ಉಳಿದಿದ್ದಾರೆ. ನ್ಯಾಷನಲ್‌ ಕಾನ್ಫರೆನ್ಸ್‌ ಭವಿಷ್ಯದ ಮೇಲೆ ಇದೂ ಪರಿಣಾಮ ಉಂಟುಮಾಡಲಿದೆ. ತಂದೆಯ ಗೈರು ಹಾಜರಿ­ಯಲ್ಲಿ ಒಮರ್‌ ಅಧಿಕಾರ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.

ಒಮರ್‌ ಆರು ವರ್ಷದಲ್ಲಿ ಕಾಶ್ಮೀರಕ್ಕೆ ಏನೂ ಕೆಲಸ ಮಾಡಿಲ್ಲ. ಪ್ರತಿ ವರ್ಷ ನಡೆದ ಒಂದಿ­ಲ್ಲೊಂದು ಘಟನೆ ಅವರ ಕೈಕಟ್ಟಿದೆ. ಕಾನೂನು– ಸುವ್ಯವಸ್ಥೆ ಪಾಲನೆ ಅವರಿಗೆ ದೊಡ್ಡ ಸಮಸ್ಯೆ­ಯಾಗಿದೆ. ಅಭಿವೃದ್ಧಿ ಕಡೆ ಗಮನ ಕೊಡಲಾಗಿಲ್ಲ. ಕಳೆದ ಚುನಾವಣೆಯಲ್ಲಿ ಮತದಾರರಿಗೆ ನೀಡಿದ್ದ ಒಂದೂ ಭರವಸೆ ಈಡೇರಿಸಲು ಅವರಿಗೆ ಆಗಿಲ್ಲ. ಬದಲಿಗೆ ಭ್ರಷ್ಟಾಚಾರದ ಆರೋಪಗಳು ಸುತ್ತಿ­ಕೊಂಡಿವೆ. ಮಂತ್ರಿಗಳು, ಅವರದೇ ಪಕ್ಷದ ಶಾಸಕರು ಹಾಗೂ ಅಧಿಕಾರಿಗಳೂ ಬೇರೆ ಬೇರೆ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಇವೆಲ್ಲವೂ ನ್ಯಾಷನಲ್‌ ಕಾನ್ಫರೆನ್ಸ್ ಹಾದಿಗೆ ಮುಳ್ಳಾಗಿವೆ. ಈ ಅಂಶಗಳೇ ಕಾಶ್ಮೀರದಲ್ಲಿ ಪ್ರಬಲವಾಗಿರುವ ಪಿಡಿಪಿಗೆ ಲಾಭ ತಂದುಕೊಡಲಿವೆ ಎಂಬುದು ರಾಜ­ಕೀಯ ವಿಶ್ಲೇಷಕರ ಲೆಕ್ಕಾಚಾರ. ಕಾಶ್ಮೀರದಲ್ಲೂ ಕಾಂಗ್ರೆಸ್‌ ಒಡೆದ ಮನೆ. ಅನೇಕ ನಾಯಕರು ಈ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಪಕ್ಷ ಬಿಡದ ಹಲವರು ತೆರೆಮರೆ­ಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿ­ದ್ದಾರೆ. ಕಾಂಗ್ರೆಸ್‌ ಹೆಸರಿಗೆ ಜಾತ್ಯತೀತ ಪಕ್ಷವಾ­ದರೂ, ನೆಲೆ ಇರುವುದು ಜಮ್ಮು ವಿಭಾಗದಲ್ಲಿ ಮಾತ್ರ. ಕಾಂಗ್ರೆಸ್‌ ನೆಲೆಯನ್ನು ಆಕ್ರಮಿಸಿ­ಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ.

ಜಮ್ಮು ವಿಭಾಗದಲ್ಲಿರುವ ಒಟ್ಟು ವಿಧಾನ­ಸಭೆ ಕ್ಷೇತ್ರಗಳ ಸಂಖ್ಯೆ 37. ಸುಮಾರು 25 ಕ್ಷೇತ್ರಗಳಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ­ದ್ದಾರೆ. 11 ಕ್ಷೇತ್ರಗಳಲ್ಲಿ 40:60 ಅನುಪಾತ­ದಲ್ಲಿ ಹಿಂದೂ ಮತ್ತು ಮುಸ್ಲಿಮರಿದ್ದಾರೆ. ಶ್ರೀನಗರದ ಒಂದು ಕ್ಷೇತ್ರದಲ್ಲಿ ಕಾಶ್ಮೀರಿ ಪಂಡಿ­ತರು 16 ಸಾವಿರಕ್ಕಿಂತ ಅಧಿಕವಾಗಿದ್ದಾರೆ. ಇವೆಲ್ಲ ಲೆಕ್ಕಾಚಾರದಿಂದ ಬಿಜೆಪಿ ‘ಮಿಷನ್‌– 44’ ತಂತ್ರ ರೂಪಿಸಿರುವುದು.
ವಿಧಾನಸಭೆ ಚುನಾವಣೆ ಲಾಭ– ನಷ್ಟದ ಅಂದಾಜಿನೊಂದಿಗೇ ಪ್ರಧಾನಿ ಮೋದಿ   ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದು. ಅವರ ಭೇಟಿ ಗಡಿ ರಾಜ್ಯದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ ಎಂದು ಬಿಜೆಪಿ ನಾಯಕರು ನಂಬಿದ್ದಾರೆ. ಅದು ಸ್ವಲ್ಪಮಟ್ಟಿಗೆ ನಿಜವೂ ಹೌದು.

ಈವರೆಗೆ ಕಣಿ­ವೆಯ ಜನ ಬರೀ ಭರವಸೆಗಳನ್ನು ನಂಬಿ ಬದುಕಿ­ದ್ದಾರೆ. ತಮ್ಮದು ವಿಭಿನ್ನ ಸರ್ಕಾರವೆಂದು ಮೋದಿ ಹೇಳಿಕೊಳ್ಳುತ್ತಿದ್ದಾರೆ. ಅವರು ಏನಾ­ದರೂ ಮಾಡಬಹುದು ಎನ್ನುವ ನಿರೀಕ್ಷೆ ಕೆಲವರಿ­ಗಿದೆ. ಚುನಾವಣೆಯಲ್ಲಿ ಇದು ಮತಗಳಾಗಿ ಪರಿವರ್ತನೆ ಆಗುವುದೇ ಎಂದು ಈಗಲೇ ಹೇಳುವುದು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಓದಿರುವ ಶ್ರೀನಗರದ ಮೀರ್‌ ಏಜಾಜ್‌ ಅಹಮದ್‌, ಮೋದಿ ಅವರ ಕಾಶ್ಮೀರ ಭೇಟಿಯನ್ನು ಸೂಕ್ಷ್ಮವಾಗಿ ಗಮನಿಸಿ­ದ್ದಾರೆ. ದೀಪಾವಳಿ ಬದಲಿಗೆ ಹತ್ತು ದಿನ ಮೊದಲು ನಡೆದ ಈದ್‌ ಸಮಯದಲ್ಲಿ ಪ್ರಧಾನಿ ಬಂದಿದ್ದರೆ ಬಿಜೆಪಿಗೆ ಹೆಚ್ಚು ಲಾಭವಾಗುತ್ತಿತ್ತು ಎಂದು ಅವರು ವ್ಯಾಖ್ಯಾನಿಸುತ್ತಾರೆ. 

‘ಕಾಶ್ಮೀರದ ಭಾರತ ವಿರೋಧಿ ಬಣಗಳು ಹೋಳಾ­ಗಿವೆ. ಪ್ರಬಲ ನಾಯಕತ್ವ ಇಲ್ಲ. ಈ ಗುಂಪು­ಗಳು ಭಾವನಾತ್ಮಕವಾಗಿ ಕಾಶ್ಮೀರಿಗಳ ಜತೆ ಆಟವಾಡುತ್ತಿವೆ ಅಷ್ಟೆ. ರಾಜಕೀಯವಾಗಿ ದುರ್ಬಲವಾಗಿವೆ. ಪ್ರತ್ಯೇಕತಾವಾದಿಗಳಿಗೆ ಸರಿ­ಯಾದ ಕಾರ್ಯಸೂಚಿ ಇಲ್ಲ. ಮುಂದಿನ ದಾರಿ ಯಾವುದು ಎನ್ನುವ ಕುರಿತು ಸ್ಪಷ್ಟತೆ ಇಲ್ಲ. ಜನ ಕುರುಡಾಗಿ ಅವರನ್ನು ಹಿಂಬಾಲಿಸುತ್ತಾರೆಂದು ದೆಹಲಿಯಲ್ಲಿ ಕೆಲಸ ಮಾಡುವ ಕಾಶ್ಮೀರಿ ಮೂಲದ ಹಿರಿಯ ಪತ್ರಕರ್ತರೊಬ್ಬರು ಹೇಳುತ್ತಾರೆ.

ಕಾಶ್ಮೀರದ ಚುನಾವಣೆ ದೇಶದ ಗಮನ ಸೆಳೆದಿದೆ.  ಚುನಾವಣೆ ಬಳಿಕ ಬಿಜೆಪಿ ಜತೆ ಕೈಜೋಡಿ­ಸುವುದಿಲ್ಲ ಎಂದು ಪಿಡಿಪಿ ಈಗಾಗಲೇ ಬಹಿರಂಗಪಡಿಸಿದೆ. ಬಿಜೆಪಿಗೆ ಮಿಷನ್‌–44 ಲೆಕ್ಕಾಚಾರ ಕೈಗೂಡಿದರೆ ಹಿಂದೂ ಸಮು­ದಾ­ಯದ ನಾಯಕ ಮುಖ್ಯಮಂತ್ರಿ ಆಗಿ ನೇಮಕ­ಗೊಳ್ಳಬಹುದು. ಯಾರಿಗೂ ಬಹುಮತ ಸಿಗದಿ­ದ್ದರೆ, ನ್ಯಾಷನಲ್‌ ಕಾನ್ಫರೆನ್ಸ್‌ ಯಾವ ಹಾದಿ ತುಳಿಯಲಿದೆ. ಬಿಜೆಪಿಯನ್ನು ಬೆಂಬಲಿಸಲಿ­ದೆಯೇ. ಹಾಗೇನಾದರೂ ಆದರೆ ಕಾಂಗ್ರೆಸ್‌ ನಡೆ ಯಾವ ಕಡೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಚರ್ಚೆಗಳು ಏನೇ ನಡೆಯಲಿ ಬಿಜೆಪಿ ಶಕ್ತಿ ಜಮ್ಮು– ಕಾಶ್ಮೀರದಲ್ಲಿ ಹೆಚ್ಚುವುದರ ಬಗ್ಗೆ ಅನುಮಾನ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT