ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಪ ಭಂಗ ರಾಜಕೀಯ ಮತ್ತು ಸಂಸದರ ಹೊಣೆಗಾರಿಕೆ

Last Updated 10 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸಂಸತ್ತಿನ ಉಭಯ ಸದನಗಳ ಮತ್ತೊಂದು ಅಧಿವೇಶನ ಯಾವುದೇ ವಿಧಿವತ್ತಾದ ಕಲಾಪ ನಡೆಯದೇ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಎನ್‍ಡಿಎ ನಾಯಕತ್ವವು, ಯಾವುದೇ ಕಲಾಪ ನಡೆಸಲು ಸಾಧ್ಯವಾಗದ ಈ 26 ದಿನಗಳ ವೇತನವನ್ನು ತಮ್ಮ ಸಂಸದರು ತೆಗೆದುಕೊಳ್ಳುವುದಿಲ್ಲ ಎಂದು ಪ್ರಕಟಿಸುವ ಮೂಲಕ ‘ನೈತಿಕ ಮೌಲ್ಯ’ವನ್ನು ಪ್ರದರ್ಶಿಸಿದೆ.

ಸಂಸತ್ತಿನ ಉಭಯ ಸದನಗಳಲ್ಲಿ ಸುಗಮ ಕಲಾಪ ನಡೆಸುವ ಸಂಬಂಧ ಒಮ್ಮತ ಮೂಡಿಸುವಲ್ಲಿ ವಿಫಲವಾಗಿದ್ದಕ್ಕೆ ಹೊಣೆ ಹೊತ್ತು ವೇತನ ತ್ಯಾಗ ಮಾಡಲು ಎನ್‍ಡಿಎ ಸಂಸದರಿಗೆ ಸೂಚಿಸಲಾಗಿದೆಯೇ? ಅಥವಾ, ತಮ್ಮನ್ನು ಪ್ರತಿನಿಧಿಯಾಗಿ ಚುನಾಯಿಸಿದ ಪ್ರಜೆಗಳಿಗೆ ಸದಸ್ಯರು ಮತ್ತು ಸಂಸತ್ತನ್ನು ಉತ್ತರದಾಯಿ ಆಗಿಸುವಲ್ಲಿ ಸಂಸದರು ಹೆಚ್ಚು ರಚನಾತ್ಮಕ ಧೋರಣೆ ಹೊಂದಿರಬೇಕೆಂಬ ಅಂಶವನ್ನು ಹಿನ್ನೆಲೆಗೆ ಸರಿಸಿ, ಮೂರು ವಾರಗಳ ವೇತನ ತ್ಯಾಗ ಮಾಡಿರುವುದನ್ನು ಕೇವಲ ‘ತೋರಿಕೆ’ ಎಂದು ಅರ್ಥೈಸಿಕೊಳ್ಳಬೇಕೇ? ಅದೇನೇ ಇರಲಿ, ಬಹು ದೀರ್ಘ ಕಾಲದಿಂದ ನಾವು, ಸಂಕಷ್ಟ ಉದ್ಭವಿಸುವ ಮುನ್ನ ಮುಂಜಾಗ್ರತೆ ವಹಿಸುವುದಕ್ಕಿಂತ ಹೆಚ್ಚಾಗಿ, ಘಟನಾ ನಂತರದ ‘ಜ್ಞಾನೋದಯ’ದೆಡೆಗೆ ಹೆಚ್ಚು ಗಮನ ಕೇಂದ್ರೀಕರಿಸುತ್ತಿದ್ದೇವೆ ಎಂಬುದಂತೂ ಸ್ಪಷ್ಟ.

ಕಳೆದ 20 ವರ್ಷಗಳ ಅವಧಿಯ ಲೋಕಸಭಾ ಮತ್ತು ರಾಜ್ಯಸಭಾ ಕಲಾಪಗಳ ಸ್ವರೂಪವನ್ನು ಅಧ್ಯಯನ ಮಾಡಿದರೆ ಒಂದಷ್ಟು ಅಂಶಗಳು ನಿಚ್ಚಳವಾಗುತ್ತವೆ. ಆಡಳಿತಾರೂಢ ಸರ್ಕಾರವು 4ನೇ ವರ್ಷದ ಅಧಿಕಾರವನ್ನು ಪೂರೈಸುವ ಸಂದರ್ಭಕ್ಕೆ ಬರುತ್ತಿದ್ದಂತೆಯೇ ಸದನದ ಕಲಾಪಕ್ಕೆ ಭಂಗ ಎದುರಾಗುವುದು ವಾಡಿಕೆಯಾಗಿಬಿಟ್ಟಿದೆ.

ಹೀಗಾಗುವುದರ ಹಿಂದೆ ಎಲ್ಲಾ ರಾಜಕೀಯ ಪಕ್ಷಗಳ ನಡುವೆ ಏನಾದರೂ ತೆರೆಮರೆಯ ಹೊಂದಾಣಿಕೆ ಇದೆಯೇ? ಚರ್ಚೆಯಲ್ಲಿ ಪಾಲ್ಗೊಳ್ಳದೆ ನುಣುಚಿಕೊಳ್ಳುವುದೇ ಅನುಕೂಲಕರ ಎಂದು ಆಡಳಿತ ಪಕ್ಷ ಹಾಗೂ ಸದನದಲ್ಲಿ ವಾಗ್ದಾಳಿ ನಡೆಸುವುದಕ್ಕಿಂತ ಕಲಾಪ ಭಂಗ ಮಾಡಿ ಸಾರ್ವಜನಿಕರ ಗಮನ ಸೆಳೆಯುವುದೇ ಹೆಚ್ಚು ‘ಲಾಭದಾಯಕ’ ಎಂದು ಪ್ರತಿಪಕ್ಷಗಳು ಭಾವಿಸಿವೆಯೇ? ಬಹುತೇಕ ಸಂದರ್ಭಗಳಲ್ಲಿ ರಾಜಕಾರಣದಲ್ಲಿ ಇರುವವರಿಗೆ ತಾವು ತಮ್ಮ ಜಾಗದಲ್ಲಿ ‘ಕುಳಿತು’ ನಿರ್ವಹಿಸಬೇಕಾದ ಸಕ್ರಿಯ ಪಾತ್ರಕ್ಕಿಂತ ತಾವು ಹೇಗೆ ಮತ್ತು ಎಲ್ಲಿ ನೆಲೆ ‘ನಿಂತಿದ್ದೇವೆ’ ಎಂಬುದೇ ಮುಖ್ಯವಾಗುತ್ತದೆ!

ಪದೇಪದೇ ಆಗುತ್ತಿರುವ ಕಲಾಪ ಭಂಗವನ್ನು ವಿಸ್ತೃತವಾದ ಸಂಸತ್ತಿನ ಗುಣಮಟ್ಟದ ‘ಕುಸಿತ’ ಹಾಗೂ ಸಂಸತ್ತಿನ ಕಾರ್ಯವೈಖರಿಯ ವಿರುದ್ಧದ ಪ್ರಬಲ ಜನಾಭಿಪ್ರಾಯವೆಂದು ನೋಡಬೇಕೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಸಂದರ್ಭದಲ್ಲಿ, ರಾಜಕಾರಣದ ಕಾರ್ಯಕ್ಷೇತ್ರವಾದ ವಿಶಾಲ ನೆಲೆಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂಬುದು ವ್ಯಾಖ್ಯಾನಕಾರರ ಗಮನಾರ್ಹ ಪ್ರತಿಪಾದನೆಯಾಗಿದೆ. ಹೀಗೆ ಸಂಸದರು ತಾವು ಪ್ರತಿನಿಧಿಸುವ ಸದನದ ಚರ್ಚೆಗಳಲ್ಲಿ ಭಾಗವಹಿಸಲು ಕಟ್ಟಕಡೆಯ ಆದ್ಯತೆ ನೀಡುವ ಮೂಲಕ, ತಾವು ನಿರ್ವಹಿಸಬೇಕಾದ ಪಾತ್ರದ ಮರುವ್ಯಾಖ್ಯಾನ ನಿರೀಕ್ಷಿಸುತ್ತಿದ್ದಾರೆಯೇ? ಹೀಗಲ್ಲದಿದ್ದರೆ,  ಸುಗಮ ಕಲಾಪ ನಡೆಸುವ ದಿಸೆಯಲ್ಲಿ ಸಾಂಘಿಕ ಪ್ರಯತ್ನ ನಡೆಸುವುದಾಗಿ ಸಮಾವೇಶಗಳಲ್ಲಿ ಒಮ್ಮತದ ನಿರ್ಧಾರಕ್ಕೆ ಬರುವ ಸ್ಪೀಕರ್, ಸಭಾಪತಿ, ಸದನಗಳ ನಾಯಕರು, ಪ್ರತಿಪಕ್ಷಗಳ ನಾಯಕರು ನಂತರ ತಮ್ಮ ಮಾತಿನಂತೆ ನಡೆದುಕೊಳ್ಳಲಾಗದೆ ಕೈಚೆಲ್ಲುವುದೇ ಪರಿಪಾಟವಾಗಿರುವುದನ್ನು ಹೇಗೆ ಅರ್ಥೈಸಿಕೊಳ್ಳಬೇಕು?

ಬಹುಶಃ ಈ ಕಲಾಪ ಭಂಗ ಪ್ರವೃತ್ತಿಯನ್ನು ಗ್ರಹಿಸುವಾಗ, ಸಂಸತ್ ಸದಸ್ಯರನ್ನು ಏಕಕಾಲಕ್ಕೆ ಪ್ರತ್ಯೇಕ ವ್ಯಕ್ತಿಗಳಂತೆಯೂ ಹಾಗೂ ರಾಜಕೀಯ ಪಕ್ಷಗಳಿಗೆ ಸೇರಿದ ಸಮೂಹ ಎಂದೂ ನೋಡಬೇಕಾಗುತ್ತದೆ. ಇದನ್ನು ಗಮನಿಸಿದಾಗ, ಚುನಾಯಿತ ಪ್ರತಿನಿಧಿಯಾಗಿ ತಮ್ಮ ಪಾತ್ರದ ಮರುವ್ಯಾಖ್ಯಾನವನ್ನು ಅವರು ನಿರೀಕ್ಷಿಸಿರುವುದು ನಿಚ್ಚಳವಾಗುತ್ತದೆ. ಈಗಿನ ಸ್ಪರ್ಧಾತ್ಮಕ ಪಕ್ಷ ಪ್ರಜಾಪ್ರಭುತ್ವ ಹಾಗೂ ನಮ್ಮ ಚುನಾವಣಾ ವ್ಯವಸ್ಥೆಯ ಸ್ವರೂಪವು ಈ ಮರುವ್ಯಾಖ್ಯಾನದ ನಿರೀಕ್ಷೆಗೆ ಕಾರಣವಾಗಿರಬಹುದು.

ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ಚುನಾಯಿತ ಸಂಸ್ಥೆಗಳ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದಾಗ, ಅವರು ಜನಪ್ರತಿನಿಧಿಯಾಗಿ ಹಾಗೂ ಚರ್ಚಾ ಸದನದ ಸದಸ್ಯರಾಗಿ ತಮ್ಮ ಪಾತ್ರದ ಪುನರ್‍ವ್ಯಾಖ್ಯಾನ ಬಯಸಿದ್ದಾರೆಂಬುದು ಸ್ಪಷ್ಟವಾಗುತ್ತದೆ. ಲೋಕಸಭೆಯ ಸದನದೊಳಗೆ ಪಾತ್ರವನ್ನು ನಿರ್ವಹಿಸುವುದು ತಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ಇರುವ ಒಂದು ವೇದಿಕೆ ಮಾತ್ರ; ಇದು ಅತ್ಯಂತ ಮಹತ್ವದ ವೇದಿಕೆಯೇನೂ ಅಲ್ಲ ಎಂಬ ಭಾವನೆಯೇ ಅವರಲ್ಲಿ ಮನೆ ಮಾಡಿದೆ. ಸದಸ್ಯರು ಸದನವನ್ನು ಚರ್ಚೆ, ಸಂವಾದ, ಸಮಾಲೋಚನೆಗಳ ತಾಣವೆಂದು ನೋಡುತ್ತಾರೆಯೇ? ಅಥವಾ ಅವರೆಲ್ಲಾ ಸದನದ ಹೊರಗೆ ತಾವು ನಿರ್ವಹಿಸಬೇಕಾದ ಪಾತ್ರವೇ ಅತ್ಯಂತ ಮಹತ್ವದ್ದಾಗಿದ್ದು, ಅನೌಪಚಾರಿಕ ಜಾಲಗಳೇ ತಮ್ಮ ಪಾತ್ರ ನಿರ್ವಹಣೆಯಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಭಾವಿಸಿದ್ದಾರೆಯೇ? ಇದರ ಜತೆಗೆ, ತಾವು ಮರು ಆಯ್ಕೆ ಬಯಸಿ ಜನರ ಮುಂದೆ ಹೋದಾಗ ಸದನದಲ್ಲಿನ ಕಲಾಪ ಭಂಗಗಳ ಬಗ್ಗೆ ಯಾರೂ ಆಕ್ಷೇಪ ಎತ್ತುವುದಿಲ್ಲ ಎಂಬ ಅಭಿಪ್ರಾಯವೂ ಅವರಿಂದ ವ್ಯಕ್ತವಾಗಿದೆ.

ಈಗಿನ 24/7 ಮಾಧ್ಯಮಗಳ ಕಾಲದಲ್ಲಿ ಇಂತಹ ಕಲಾಪ ಭಂಗಗಳಿಗೆ ಸಿಗುವ ಪ್ರಚಾರವು ಸರ್ಕಾರದ ವಿರುದ್ಧ ಧ್ವನಿ ಎತ್ತಲು ಹೀಗೆ ತೋರಿಕೆಯ ಹಾಗೂ ಅಬ್ಬರದ ಪ್ರತಿಭಟನೆ ನಡೆಸುವುದೇ ಸೂಕ್ತ ಎಂಬ ಭಾವನೆ ಮೂಡಿಸಿರಬಹುದು. ಪ್ರಸ್ತುತ ಸಂದರ್ಭದಲ್ಲಿ, ದೃಶ್ಯ ಮಾಧ್ಯಮಗಳ ಪ್ರೈಂ ಟೈಮ್‌ನ ಚರ್ಚೆಯಲ್ಲಿ ಆಡಳಿತಾರೂಢ ಮತ್ತು ವಿರೋಧ ಪಕ್ಷದ ಪ್ರತಿನಿಧಿಗಳಿಬ್ಬರೂ ಪಾಲ್ಗೊಳ್ಳುತ್ತಿರುವುದು ಇದಕ್ಕೆ ನಿದರ್ಶನವಾಗಿದ್ದು, ಆ ದಿನದ ಪ್ರಮುಖ ಮತ್ತು ವಿವಾದಾತ್ಮಕ ವಿಷಯಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ.

ಜನಪ್ರತಿನಿಧಿಗಳಿಗೆ ಸಂಸತ್ ಸದನವು ರಾಜಕಾರಣ ಹಾಗೂ ರಾಜಕೀಯ ಚರ್ಚೆಯ ನಿಜವಾದ ರಂಗಶಾಲೆಯಾಗದೆ, ಅವರು ಅದನ್ನು ಸಾರ್ವಜನಿಕ ವೇದಿಕೆಗಳು ಹಾಗೂ ಜನರ ನಡುವೆ ಅರಸುತ್ತಿರುವ ಪ್ರವೃತ್ತಿಗೆ ಪರಿಹಾರಕಂಡುಕೊಳ್ಳುವುದು ಇದೀಗ ಮುಖ್ಯ ಪ್ರಶ್ನೆಯಾಗಿದೆ. ‘ಅಪ್ಪಟ ರಾಜಕಾರಣ’ವು ಬೀದಿಗಳಲ್ಲಿ ಮತ್ತು ಜನಸಮುದಾಯದ ಇನ್ನಿತರ ವೇದಿಕೆಗಳಲ್ಲಿ ನಡೆಯುತ್ತಿದ್ದು, ಸಂಸತ್ತಿನ ಸದನ ಎಂಬುದು ಕೇವಲ ಪ್ರತಿಭಟನೆ ನಡೆಸುವ ಹಾಗೂ ವಿಧಿವಿಧಾನದ ಔಪಚಾರಿಕ ಅನುಮತಿ ತಾಣವಾಗಿ ಕಾಣುತ್ತಿದೆಯೇ? ಒಂದೊಮ್ಮೆ ಈ ಪ್ರಶ್ನೆಗಳಿಗೆ ‘ಹೌದು’ ಎಂಬುದೇ ಉತ್ತರವಾದರೆ, ಸಂಸತ್ ಕಲಾಪದ ಸಮಯ ವ್ಯರ್ಥವಾಗುತ್ತಿರುವ ಬಗ್ಗೆ ಯಾವುದೇ ರಾಜಕೀಯ ಪಕ್ಷ ಮತ್ತು ಚುನಾಯಿತ ಪ್ರತಿನಿಧಿಗಳು ನೈಜವಾದ ಧ್ವನಿ ಎತ್ತುತ್ತಿಲ್ಲ ಎಂಬುದಕ್ಕೆ ಕಾರಣವನ್ನು ಸುಲಭವಾಗಿ ವಿವರಿಸಬಹುದು.

‘ಕಲಾಪ ಭಂಗ ರಾಜಕೀಯ’ವು ಪ್ರತಿಪಕ್ಷಗಳಿಗೆ ಹೆಚ್ಚಿನ ಲಾಭ ತಂದುಕೊಡುತ್ತಿದ್ದರೆ ‘ಅರ್ಥಪೂರ್ಣ ಚರ್ಚೆಯ ಅನುಪಸ್ಥಿತಿಯು’ , ಸಂದಿಗ್ಧದ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಮುಜುಗರವನ್ನು ಆಡಳಿತ ಪಕ್ಷಗಳಿಗೆ ತಪ್ಪಿಸುತ್ತಿದೆ. ಹಾಗಾಗಿದ್ದೇ ಆದರೆ, ಸಂಸತ್ ಸದಸ್ಯರು ವೈಯಕ್ತಿಕವಾಗಿ ಹಾಗೂ ಸಾಂಘಿಕ ಸಂಸ್ಥೆಯ ಪ್ರತಿನಿಧಿಗಳಾಗಿ ತಮ್ಮ ಪಾತ್ರದ ಮರುವ್ಯಾಖ್ಯಾನ ಬಯಸುತ್ತಿದ್ದಾರೆಯೇ? ಸದನದ ಕಲಾಪಗಳಲ್ಲಿ ಭಾಗಿಯಾಗುವುದು ಅವರ ಕಟ್ಟಕಡೆಯ ಆದ್ಯತೆಯೇ ಎಂಬ ಪ್ರಶ್ನೆಗಳು ಮತ್ತೆ ಕಾಡಲು ಆರಂಭಿಸುತ್ತವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT