ಮಾಸ್ತಿ ವೆಂಕಟೇಶ ಐಯಂಗಾರ್ ಅವರನ್ನು ಬಹಳ ಜನ ನೆನಪಿಸಿಕೊಳ್ಳುವುದು ಕಥೆಗಾರರೆಂದು. ಮತ್ತೆ ಕೆಲವರು ಅವರನ್ನು ಕಾದಂಬರಿಕಾರರೆಂದು, ಕವಿಯೆಂದೂ ಗುರುತಿಸುತ್ತಾರೆ. ಅವರನ್ನು ಅಧಿಕಾರದಲ್ಲಿದ್ದಾಗ ಕಂಡ ಜನ ಮಾಸ್ತಿಯವರನ್ನು ಒಬ್ಬ ಸೂಕ್ಷ್ಮಜ್ಞನಾದ, ವ್ಯವಹಾರ ಕುಶಲನಾದ ಅಧಿಕಾರಿ ಎಂದು ಭಾವಿಸುತ್ತಾರೆ.

ಅವೆಲ್ಲವೂ ಸರಿ. ಆದರೆ, ನನಗೆ ಮಾಸ್ತಿಯವರು ಮಾನವ ಹೃದಯದ ಸರಸ, ಸುಂದರ, ನಯವಾದ ಸಂಸ್ಕೃತಿಯ ಪ್ರತೀಕವಾಗಿ ಕಾಣುತ್ತಾರೆ. ಅವರು ತಮ್ಮ ಮೃದುವಾದ, ಚೇತೋಹಾರಿಯಾದ ಮಾತುಗಳಿಂದ, ನಡೆಯಿಂದ ಅದೆಷ್ಟು ಜೀವಗಳಿಗೆ ಸಂತೃಪ್ತಿ ನೀಡಿದ್ದರೋ, ಪ್ರೋತ್ಸಾಹ ನೀಡಿದ್ದರೋ? ಇತ್ತೀಚಿಗೆ ಬೆಳಗೆರೆ ಕೃಷ್ಣಶಾಸ್ತ್ರಿಗಳ ಸಾಹಿತಿಗಳ ಸ್ಮೃತಿ ಪುಸ್ತಕ ಓದುತ್ತಿದ್ದಾಗ ಅದರಲ್ಲಿ ದಾಖಲಾದ ಘಟನೆಯೊಂದು ಮನಸ್ಸನ್ನು ಹಿಡಿಯಿತು. ಅವರನ್ನು ಹತ್ತಿರದಿಂದ ಕಂಡಿದ್ದ ನನಗೆ ಅವರ ನೆನಪು ಉಕ್ಕಿ ಕಣ್ಣು ಒದ್ದೆಯಾಯಿತು.

ಮಾಸ್ತಿ ತೀವ್ರ ಅನಾರೋಗ್ಯದಿಂದ ಮಲಗಿ ಹಾಸಿಗೆ ಹಿಡಿದ ಸುದ್ದಿ ತಿಳಿದೊಡನೆ ಕೃಷ್ಣಶಾಸ್ತ್ರಿಗಳು ತಮ್ಮ ವೈದ್ಯ ಮಿತ್ರರೊಬ್ಬರನ್ನು ಜೊತೆಗೆ ಕರೆದುಕೊಂಡು ಗವಿಪುರದಲ್ಲಿದ್ದ ಅವರ ಮನೆಗೆ ಹೋದರು. ಮಾಸ್ತಿ ಅವರ ಹಿರಿಯ ಅಳಿಯ ಶೇಷಾದ್ರಿ ಅವರು ಬಾಗಿಲು ತೆರೆದು ಒಳಗೆ ಕರೆದು ಮೆಲುದನಿಯಲ್ಲಿ ಹೇಳಿದರು, ‘ಅವರೀಗ ಮಲಗಿದ್ದಾರೆ. ಪರಿಚಯದವರನ್ನು ಕಂಡರೆ ಭಾವಾವೇಶಕ್ಕೆ ಒಳಗಾಗುತ್ತಾರೆ. ‘ಅವರನ್ನು ನಾವು ಮಾತನಾಡಿಸುವುದಿಲ್ಲ. ನೀವು ಒಪ್ಪಿದರೆ ಮಾತ್ರ ದೂರದಲ್ಲಿ ನಿಂತು ಅವರ ದರ್ಶನಪಡೆದು ನಮಸ್ಕಾರ ಮಾಡಿ ಹೋಗುತ್ತೇವೆ’ ಎಂದರು ಶಾಸ್ತ್ರಿಗಳು ಇನ್ನೂ ಮೆಲುವಾಗಿ.

ಆಗ ಶೇಷಾದ್ರಿಯವರು ಇವರನ್ನು ವೆರಾಂಡಾದಲ್ಲಿ ಕುಳ್ಳಿರಿಸಿ ಒಳಗೆ ಹೋದರು. ಮಾಸ್ತಿಯವರನ್ನು ನೋಡುವ ತವಕದಿಂದ ಇವರು ಎರಡು ಹೆಜ್ಜೆ ಒಳಗಿಟ್ಟು ನಡೆದರು. ಅಲ್ಲಿ ಮಾಸ್ತಿಯವರು ಮಲಗಿದ್ದುದು, ಪಕ್ಕದಲ್ಲಿ ಶೇಷಾದ್ರಿಯವರು ನಿಂತದ್ದು ಕಂಡಿತು. ಇವರು ಶೇಷಾದ್ರಿಯವರೆಡೆ ನೋಡಿದಾಗ ಅವರು ತಲೆಯಾಡಿಸಿ ಅನುಮತಿ ನೀಡಿದರು. ಇವರಿಬ್ಬರೂ ಮಾಸ್ತಿಯವರು ಮಲಗಿದ ಮಂಚದ ಹತ್ತಿರ ಹೋದರು. ಮಾಸ್ತಿ ಮಂಚದ ಮೇಲೆ ಅಂಗಾತವಾಗಿ ಎದೆಯ ಮೇಲೆ ಕೈ ಜೋಡಿಸಿಕೊಂಡು ಮಲಗಿದ್ದಾರೆ. ಮುಖ ಬಿಳಿಚಿದೆ. ಮುಖಕ್ಷೌರವಿಲ್ಲದ್ದರಿಂದ ಒಂದು ರೀತಿಯ ಆಧ್ಯಾತ್ಮಿಕ ಕಳೆ ಹೊಮ್ಮುತ್ತಿದೆ. ಅವರ ಕತ್ತಿನವರೆಗೂ ಒಂದು ಬಿಳಿಯ ಬಟ್ಟೆಯನ್ನು ಹೊದಿಸಿದ್ದಾರೆ.

ಶಾಸ್ತ್ರಿಗಳು ಬಾಗಿ ಕೈ ಜೋಡಿಸಿ ನಮಸ್ಕರಿಸಿದರು. ನಿಧಾನವಾಗಿ ಮಾಸ್ತಿ ಕಣ್ಣರಳಿಸಿ ನೋಡಿದರು. ಅದು ಅವರಿಗೆ ಕಷ್ಟವಾಗಿರಬೇಕು. ಒಂದೆರಡು ಕ್ಷಣಗಳಲ್ಲಿ ಹೊದಿಕೆಯ ಕೆಳಗೆ ಎದೆಯ ಮೇಲಿದ್ದ ಕೈಗಳು ನಿಧಾನವಾಗಿ ಚಲಿಸಿದವು. ಅದೂ ಅವರಿಗೆ ನೋವುಂಟು ಮಾಡಿರಬೇಕು. ಇವರು ಸಹಾಯ ಮಾಡಬೇಕೆನ್ನುವಷ್ಟರಲ್ಲಿ ಅವರ ಕೈಗಳು ಹೊದಿಕೆಯಿಂದ ಹೊರಬಂದವು. ಸಾವಕಾಶವಾಗಿ ಎರಡೂ ಕೈಗಳನ್ನು ಎತ್ತಿ ಜೋಡಿಸಿ ನಮಸ್ಕಾರ ಎಂದರು ಕ್ಷೀಣ ಧ್ವನಿಯಲ್ಲಿ ಮಾಸ್ತಿ! ಇದು ಶಾಸ್ತ್ರಿಗಳು ಮಾಡಿದ ನಮಸ್ಕಾರಕ್ಕೆ ಪ್ರತಿನಮಸ್ಕಾರ ಅವರದು!

ಈ ಸ್ಥಿತಿಯಲ್ಲಿ ಅವರು ನಮಸ್ಕಾರ ಮಾಡುವ ಅಗತ್ಯ ಇತ್ತೇ? ಬಾಯಿಂದ ನಮಸ್ಕಾರ ಎಂದರೂ ತುಂಬ ಹೆಚ್ಚಾಗಿತ್ತು. ಅಂಥದ್ದರಲ್ಲಿ ಎರಡೂ ಕೈಜೋಡಿಸಿ ನಮಸ್ಕಾರ ಎಂದು ಹೇಳಿದ ಅವರ ರೀತಿ ಅವರೇ ತಮ್ಮ ಜೀವಮಾನದುದ್ದಕ್ಕೂ ಬೆಳೆಸಿಕೊಂಡು ಬಂದ ಸಜ್ಜನಿಕೆ, ಸಭ್ಯತೆ, ಸಂಸ್ಕೃತಿಯ ಪ್ರತಿಬಿಂಬವಾಗಿತ್ತು. ಅವರೇ ರೂಢಿಸಿಕೊಂಡು ಬಂದ ಸಿದ್ಧಾಂತಗಳ ಒಟ್ಟು ಸಾರವಾಗಿತ್ತು. ಈ ಘಟನೆ ನಡೆದ ಮೂರನೇ ದಿನಕ್ಕೆ ಮಾಸ್ತಿ ಮರೆಯಾದರು. ತಮ್ಮ ಜೀವಿತದ ಕಟ್ಟ ಕೊನೆಯ ಘಟ್ಟದಲ್ಲಿ, ಆ ಸ್ಥಿತಿಯಲ್ಲಿ, ಆ ಸಜ್ಜನಿಕೆ ಅವರಲ್ಲಿ ಬಂದದ್ದು ಹೇಗೆ ಎಂದು ಚಿಂತಿಸಿದ್ದೇನೆ.

ಇದು ಅಕಸ್ಮಾತ್ತಾಗಿ ಆದದ್ದಲ್ಲ. ಜೀವನದ ಪಥದಲ್ಲಿ ನೂರು ಒಳ್ಳೆಯದು, ಸಾವಿರ ಕೆಟ್ಟದ್ದು ಕಂಡರೂ ಸವಿಯನ್ನೇ, ಸರಿಯಾದದ್ದನ್ನೇ ಅಪ್ಪಿಕೊಂಡು, ಕಹಿಯನ್ನೆಲ್ಲ ಹೊರಗೆ ಉಗುಳಿ ಕೇವಲ ಪ್ರೀತಿಯ, ಸ್ನೇಹದ ಅಮೃತವನ್ನೇ ಮೊಗೆ ಮೊಗೆದು ತುಂಬಿಕೊಂಡ ಕೃತಾರ್ಥ ಜೀವಕ್ಕೆ ಸಜ್ಜನಿಕೆ ಎನ್ನುವುದು ತೋರಿಕೆಯಾಗದೇ ಬದುಕಿನ ಅವಿಭಾಜ್ಯ ಅಂಗವಾಗಿ, ನೈಜ ಸ್ವಭಾವವಾಗುತ್ತದೆ. ಆಗ ಯಾವ ಸಂದರ್ಭದಲ್ಲೂ ಅವರಿಂದ ಬರುವ ನಡೆ, ಮಾತೆಲ್ಲ ಅಮೃತ. ಹಾಗೆ ಅಮೃತ ಪುರುಷರಾಗಿದ್ದವರು ಮಾಸ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.