ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ನೆಟ್‌ನಲ್ಲಿ ಸಾರ್ವಜನಿಕ ಸ್ಥಳವಿದೆಯೇ?

Last Updated 16 ಜೂನ್ 2018, 9:24 IST
ಅಕ್ಷರ ಗಾತ್ರ

ಹದಿಮೂರು ವರ್ಷಗಳ ಹಿಂದೆ ಅಮೆರಿಕದ ಕಾನೂನು ವಿದ್ವಾಂಸ ಕ್ಯಾಸ್ ಆರ್ ಸನ್‌ಸ್ಟೀನ್ ‘ಇಂಟರ್‌ನೆಟ್‌ನಲ್ಲಿ ಸಾರ್ವಜನಿಕ ಸ್ಥಳವೆಲ್ಲಿದೆ?’ ಎಂಬ ಪ್ರಶ್ನೆಯನ್ನೆತ್ತಿದ್ದರು. 2001ರಲ್ಲಿ ಪ್ರಕಟವಾದ ಅವರ ‘ರಿಪಬ್ಲಿಕ್ ಡಾಟ್ ಕಾಮ್’ ಎಂಬ ಪುಸ್ತಕ ಮಂಡಿಸಿದ್ದ ಈ ವಾದ ಈಗ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ. ಸನ್‌ಸ್ಟೀನ್ ತಮ್ಮ ಪುಸ್ತಕದ ಮೊದಲ ಆವೃತ್ತಿಯನ್ನು ಪ್ರಕಟಿಸಿದ ಹೊತ್ತಿನಲ್ಲಿ ವೆಬ್ 2.0 ತಂತ್ರಜ್ಞಾನ ಅಥವಾ ಬಳಕೆದಾರನಿಗೆ ಅತಿ ಹೆಚ್ಚು ಆಯ್ಕೆಯ ಸ್ವಾತಂತ್ರ್ಯವನ್ನು ನೀಡುವ ತಂತ್ರಜ್ಞಾನ ಇನ್ನೂ ಶೈಶವಾವಸ್ಥೆಯಲ್ಲಿತ್ತು. ಈಗ ನಾವು ಬಳಸುತ್ತಿರುವ ಅನೇಕ ಸಾಮಾಜಿಕ ಜಾಲತಾಣಗಳಿನ್ನೂ ಹುಟ್ಟಿಯೇ ಇರಲಿಲ್ಲ. ಆದರೂ ಅವರು ಎತ್ತಿದ ಪ್ರಶ್ನೆ ಇಂಟರ್‌ನೆಟ್‌ನ ವೇಗದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಎಲ್ಲರಲ್ಲಿಯೂ ಕುತೂಹಲ ಹುಟ್ಟಿಸಿತ್ತು.

ಸನ್‌ಸ್ಟೀನ್ ಅಂದು ಕಲ್ಪಿಸಿಕೊಂಡದ್ದು ‘ಡೈಲಿ ಮಿ’ ಎಂಬ ಸ್ಥಿತಿಯನ್ನು. ಅಂದರೆ ಇಂಟರ್‌ನೆಟ್‌ನಲ್ಲಿ ಹರಿದಾಡುವ ಅಗಾದ ಮಾಹಿತಿಯನ್ನು ಬಳಕೆದಾರರು ಶೋಧಿಸಿಕೊಳ್ಳಬಹುದಾದ ವಿಧಾನವೊಂದನ್ನು ಅವರು ಮಂಡಿಸಿದ್ದರು. ಅವರಿದನ್ನು ಮಂಡಿಸುವುದಕ್ಕೆ ಎರಡು ವರ್ಷಗಳ ಹಿಂದಷ್ಟೇ ರಿಯಲಿ ಸಿಂಪಲ್ ಸಿಂಡಿಕೇಶನ್ (ಆರ್‌ಎಸ್ಎಸ್) ಎಂಬ ಸವಲತ್ತನ್ನು ಆವಿಷ್ಕರಿಸಲಾಗಿತ್ತು. ನಿರ್ದಿಷ್ಟ ಜಾಲತಾಣದ, ನಿರ್ದಿಷ್ಟ ವಿಭಾಗಕ್ಕೆ ಹೊಸ ಪಠ್ಯವೊಂದು ಸೇರ್ಪಡೆಯಾದರೆ ಅದನ್ನು ಓದುಗನ ಬಳಿ ಇರುವ ಆರ್‌ಎಸ್ಎಸ್ ರೀಡರ್‌ನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈ ಸವಲತ್ತನ್ನು ಬಳಸಿಕೊಂಡು ಒಬ್ಬಾತ ತನಗೆ ಆಸಕ್ತಿ ಇರುವ ವಿಚಾರಗಳನ್ನಷ್ಟೇ ಓದುವ ವ್ಯವಸ್ಥೆ ಮಾಡಿಕೊಂಡರೆ ಹೇಗಿರಬಹುದು ಎಂಬುದನ್ನು ಸನ್‌ಸ್ಟೀನ್ ವಿವರಿಸಿದ್ದರು.

ಉದಾಹರಣೆಗೆ ಒಬ್ಬಾತ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಸುದ್ದಿ, ನಿರ್ದಿಷ್ಟ ಕ್ರೀಡೆಗೆ ಸಂಬಂಧಿಸಿದ ವಿಚಾರಗಳು, ನಿರ್ದಿಷ್ಟ ಸಾಹಿತ್ಯ ಪ್ರಕಾರ, ನಿರ್ದಿಷ್ಟ ಪ್ರಕಾರದ ಸಿನಿಮಾ ಸುದ್ದಿಗಳ ಆರ್‌ಎಸ್ಎಸ್ ಫೀಡ್‌ಗಳನ್ನಷ್ಟೇ ಪಡೆದು ತನ್ನ ದಿನಪತ್ರಿಕೆಯನ್ನು ಸೃಷ್ಟಿಸಿಕೊಳ್ಳುತ್ತಾನೆ. ಇದರಿಂದಾಗಿ ಅವನು ತನ್ನ ಇಷ್ಟದ ಮಾಹಿತಿಯನ್ನು ಪಡೆಯುತ್ತಾನೆ ಎಂಬುದೇನೋ ನಿಜ. ಆದರೆ ಅವನು ಅದರಾಚೆಗೆ ಏನು ನಡೆಯುತ್ತಿದೆ ಎಂಬುದನ್ನು ಕಾಣಲೂ ಸಾಧ್ಯವಿಲ್ಲದ ಬಾವಿಯೊಳಗಿನ ಕಪ್ಪೆಯೂ ಆಗಿಬಿಡುತ್ತಾನಲ್ಲವೇ? ಪ್ರತಿಯೊಬ್ಬರು ತಮಗೆ ಬೇಕಿರುವುದನ್ನಷ್ಟೇ ನೋಡುತ್ತಾ, ಓದುತ್ತಾ ಹೋಗುವ ಸ್ಥಿತಿಯಲ್ಲಿ ಸಾರ್ವಜನಿಕ ಸ್ಥಳವೆಲ್ಲಿದೆ?

ಹೀಗೆ ಸಾರ್ವಜನಿಕ ಸ್ಥಳವೊಂದು ಇಲ್ಲದೇ ಹೋದರೆ ಅದು ಸೃಷ್ಟಿಸುವ ಸಮಸ್ಯೆ ಸಣ್ಣದೇನೂ ಅಲ್ಲ. ಅದನ್ನು ಅರ್ಥ ಮಾಡಿಕೊಳ್ಳಲು ನಾವು ನಿಜ ಜಗತ್ತನ್ನು ಅರ್ಥಾತ್ ಆಫ್ ಲೈನ್ ಜಗತ್ತಿನ ಸಾರ್ವಜನಿಕ ಸ್ಥಳಗಳನ್ನೊಮ್ಮೆ ನೋಡಬೇಕು. ಪ್ರಜಾಪ್ರಭುತ್ವವೊಂದು ಪರಿಣಾಮಕಾರಿಯಾಗುವುದಕ್ಕೆ ಬಹಳ ಮುಖ್ಯವಾಗಿ ಬೇಕಿರುವುದು ಸಾರ್ವಜನಿಕ ಸ್ಥಳ. ಒಬ್ಬಾತ ತನಗಾಗಿರುವ ಅನ್ಯಾಯವನ್ನು ತನ್ನ ಸಹ ಪ್ರಜೆಗಳ ಗಮನಕ್ಕೆ ತರುವುದರಿಂದ ಆರಂಭಿಸಿ ಪ್ರಭುತ್ವವೊಂದರ ವಿರುದ್ಧ ಅದರ ಪ್ರಜೆಗಳು ಪ್ರತಿಭಟನೆ ನಡೆಸುವ ಕ್ರಿಯೆಯ ತನಕದ ಎಲ್ಲದಕ್ಕೂ ಸಾರ್ವಜನಿಕ ಸ್ಥಳವೊಂದರ ಅಗತ್ಯವಿದೆ. ಇದು ಕೇವಲ ಭೌತಿಕವಾದ ಸ್ಥಳವಷ್ಟೇ ಅಲ್ಲ. ಇಂಟರ್‌ನೆಟ್‌ ಹೊರತು ಪಡಿಸಿದ ಇನ್ನೆಲ್ಲಾ ಮಾಧ್ಯಮಗಳಲ್ಲಿಯೂ ಈ ಸ್ಥಳಕ್ಕೆ ಅವಕಾಶವಿದೆ ಎಂಬುದನ್ನೂ ನಾವು ಗಮನದಲ್ಲಿಟ್ಟುಕೊಳ್ಳಬೇಕು.

ಪತ್ರಿಕೆಯೊಂದನ್ನು ಬಿಡಿಸಿ ಓದುವುದೆಂದರೆ ಅಲ್ಲಿ ನಮಗೆ ಇಷ್ಟವಿರುವ ಅಥವಾ ನಮಗೆ ಬೇಕಿರುವ ಸುದ್ದಿ ಅಥವಾ ಲೇಖನಗಳಷ್ಟೇ ಇರುವುದಿಲ್ಲ. ನಮಗೆ ಈ ಮೊದಲು ಗೊತ್ತೇ ಇಲ್ಲದಿರುವ, ನಮಗೆ ಇಷ್ಟವೇ ಆಗದಿರುವ ಅನೇಕ ವಿಚಾರಗಳೂ ಅಲ್ಲಿ ಕಣ್ಣಿಗೆ ಬೀಳುತ್ತವೆ. ಕೆಲವು ವಿಚಾರಗಳು ನಮ್ಮ ಕಣ್ಣಿಗೆ ಬಿದ್ದ ಮೇಲೆ ಕುತೂಹಲ ಹುಟ್ಟಿಸಬಹುದು. ಅಥವಾ ಅವುಗಳನ್ನು ನಾವು ಇಷ್ಟಪಡಬಹುದು. ಟಿ.ವಿ. ಮತ್ತು ರೇಡಿಯೋದ ವಿಚಾರದಲ್ಲೂ ಇದು ಸಂಭವಿಸುತ್ತದೆ.

ಎಲ್ಲಾ ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಅವು ಒದಗಿಸುವ ವಸ್ತು–ವಿಚಾರದ ಮೇಲೆ ಬಳಕೆದಾರರಾದ ನಮ್ಮ ನಿಯಂತ್ರಣವಿರುವುದಿಲ್ಲ. ಈ ಸ್ಥಿತಿಯೇ ಅವುಗಳನ್ನು ಒಂದು ಸಾರ್ವಜನಿಕ ಸ್ಥಳವನ್ನಾಗಿ ಮಾರ್ಪಡಿಸುತ್ತವೆ. ಆದರೆ ಸನ್‌ಸ್ಟೀನ್ ಮುಂದಿಡುವ ‘ಡೈಲಿ ಮಿ’ (ನನ್ನ ನಿತ್ಯದ ಸುದ್ದಿಗಳು) ಪರಿಕಲ್ಪನೆಯಲ್ಲಿ ಸಾರ್ವಜನಿಕ ಸ್ಥಳಕ್ಕೆ ಅವಕಾಶವೇ ಇಲ್ಲ. ಏನನ್ನಾದರೂ ಕಂಡ ಮೇಲೆ ಆಸಕ್ತಿ ಮೂಡುವುದಕ್ಕೆ ಅಥವಾ ತಿರಸ್ಕಾರ ಹುಟ್ಟುವುದಕ್ಕೆ ಇಲ್ಲಿ ಅವಕಾಶವೇ ಇಲ್ಲ. ಇನ್ನೂ ಸರಳವಾಗಿ ಹೇಳುವುದಾದರೆ ‘ಡೈಲಿ ಮಿ’ಯಲ್ಲಿ ‘ವಾಚಕರವಾಣಿ’ ಇರುವುದಿಲ್ಲ.

ಸನ್‌ಸ್ಟೀನ್ ಅಂದು ಮುಂದಿಟ್ಟ ಸಮಸ್ಯೆ ಈಗ ಇನ್ನೂ ಹೆಚ್ಚು ಸಂಕೀರ್ಣವಾದ ರೂಪದಲ್ಲಿ ನಮ್ಮೆದುರು ಅನಾವರಣಗೊಳ್ಳುತ್ತಿದೆ. ಗೂಗಲ್‌ನಂಥ ಸರ್ಚ್ ಎಂಜಿನ್‌ಗಳು ನಮ್ಮ ‘ಹುಡುಕಾಟದ ಇತಿಹಾಸ’ವನ್ನು ವಿಶ್ಲೇಷಿಸಿ ನಮಗೆ ‘ಬೇಕಿರುವ ಫಲಿತಾಂಶ’ಗಳನ್ನು ಒದಗಿಸುತ್ತದೆ. ಪ್ರಭುತ್ವಗಳು ನಾವು ಇಂಟರ್‌ನೆಟ್‌ನಲ್ಲಿ ಏನೇನು ಮಾಡುತ್ತಿದ್ದೇವೆ ಎಂಬುದನ್ನು ಗಮನಿಸಿ ನಮ್ಮ ಕಣ್ಣಿಗೆ ಏನು ಬೀಳಬಾರದು ಎಂದು ನಿರ್ಧರಿಸುತ್ತಿವೆ. ಈ ಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ನಾವು ಮತ್ತಷ್ಟು ಆಫ್‌ಲೈನ್ ಉದಾಹರಣೆಗಳನ್ನು ನೋಡಬೇಕಾಗುತ್ತದೆ.

ನಗರವೊಂದರಲ್ಲಿ ಇರುವ ಸಾರ್ವಜನಿಕ ಸ್ಥಳಗಳು ಯಾವುವು?  ಪಾರ್ಕ್, ಬಸ್‌ನಿಲ್ದಾಣ, ರಸ್ತೆ ಇವುಗಳೆಲ್ಲಾ ‘ಸಾರ್ವಜನಿಕ’ ಎಂಬ ಪರಿಭಾಷೆಯ ಅಡಿಯಲ್ಲಿ ತರಬಹುದಾದ ಸ್ಥಳಗಳು. ಇಲ್ಲಿಗೆ ನಮಗೆ ಮುಕ್ತ ಪ್ರವೇಶವಿದೆ. ಹಾಗೆಯೇ ಸಾರ್ವಜನಿಕ ಸ್ಥಳ ಎಂಬ ಭಾವ ಮೂಡಿಸುವ ಇನ್ನೂ ಕೆಲವು ಸ್ಥಳಗಳಿವೆ. ಉದಾಹರಣೆಗೆ ಸಿನಿಮಾ ಮಂದಿರಗಳು, ಮಾಲ್‌ಗಳು. ಇಲ್ಲಿ ಸಾರ್ವಜನಿಕರು ನೆರೆಯುತ್ತಾರೆ ಎಂಬುದೇನೋ ನಿಜ. ಆದರೆ ಇಲ್ಲಿ ಸಾರ್ವಜನಿಕರು ಏನು ಮಾಡಬಹುದು ಎಂಬುದನ್ನು ನಿರ್ಧರಿಸುವುದು ಈ ಸ್ಥಳಗಳ ಮಾಲೀಕರು. ಸಾರ್ವಜನಿಕ ಪಾರ್ಕ್ ಒಂದರಲ್ಲಿ ನಾವೊಂದು ಪ್ರತಿಭಟನಾ ರ್‍ಯಾಲಿ ನಡೆಸಬಹುದು. ಆದರೆ ಮಾಲ್‌ನಲ್ಲಿ ಇದನ್ನು ನಡೆಸಲು ಸಾಧ್ಯವೇ?

ಇಂಟರ್‌ನೆಟ್‌ನಲ್ಲಿರುವ ಸಾರ್ವಜನಿಕ ಸ್ಥಳಗಳು ಎಂದು ನಾವು ಭಾವಿಸುವ ಸಾಮಾಜಿಕ ಜಾಲತಾಣಗಳು ನಮ್ಮ ಸಾರ್ವಜನಿಕ ಪಾರ್ಕ್ ಅಥವಾ ರಸ್ತೆಯಂಥ ಸ್ಥಳಗಳಲ್ಲ. ಇವು ಮಾಲ್, ಶಾಪಿಂಗ್ ಕಾಂಪ್ಲೆಕ್ಸ್‌ನಂಥ ಸಾರ್ವಜನಿಕ ಸ್ಥಳಗಳು. ಇಲ್ಲಿ ನಮಗೆ ಪ್ರತಿಭಟನೆಗೆ ಅವಕಾಶವಿದೆ. ಆದರೆ ಈ ಪ್ರತಿಭಟನೆ ಆಯಾ ತಾಣಗಳ ಮಾಲೀಕರಿಗೆ ಲಾಭ ತಂದುಕೊಂಡವಂಥದ್ದಾಗಿರಬೇಕು ಎಂಬ ಷರತ್ತು ಇಲ್ಲಿದೆ. ಅದಕ್ಕೆ ತೊಂದರೆಯಾಗುವ ಎಲ್ಲವನ್ನೂ ಶಾಪಿಂಗ್ ಕಾಂಪ್ಲೆಕ್ಸ್ ಅಥವಾ ಮಾಲ್‌ಗಳ ಮಾಲೀಕರು ತಡೆಯುವಂತೆಯೇ ಈ ಜಾಲತಾಣಗಳ ಮಾಲೀಕರೂ ತಡೆಯುತ್ತಾರೆ.

ಫೇಸ್‌ಬುಕ್‌ನಲ್ಲಿ ಕೆಲವು ಜಾಲತಾಣಗಳ ಲಿಂಕ್‌ಗಳನ್ನು ಹಂಚಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಸಾಮಾನ್ಯವಾಗಿ Spam ಎಂದು ಕರೆಯಲಾಗುವ ಜಾಹೀರಾತುಗಳಿಗಷ್ಟೇ ಈ ನಿರ್ಬಂಧ ಅನ್ವಯಿಸುತ್ತದೆ. ಆದರೆ ಕೆಲವೊಮ್ಮೆ ರಾಜಕೀಯವಾಗಿ ಸೂಕ್ಷ್ಮ ಎನಿಸುವಂಥ ಲಿಂಕ್‌ಗಳನ್ನೂ ಹೀಗೆಯೇ ತಡೆಯಲಾಗುತ್ತದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟನ್ ಪ್ರವಾಸದ ಸಂದರ್ಭದಲ್ಲಿ ‘ದ ವೈರ್’ ಎಂಬ ಜಾಲತಾಣ ಲೇಖನವೊಂದನ್ನು ಪ್ರಕಟಿಸಿತ್ತು (http://goo.gl/sqD7wk). 2003ರಲ್ಲಿ ನರೇಂದ್ರ ಮೋದಿಯವರು ಬ್ರಿಟನ್ ಪ್ರವಾಸದ ಅವಧಿಯ ಕೆಲವು ವಿಚಾರಗಳನ್ನು ಈ ಲೇಖನ ಪ್ರಸ್ತಾಪಿಸಿತ್ತು.

ಇದನ್ನು ಅನೇಕರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಕೆಲವೇ ಹೊತ್ತಿನಲ್ಲಿ ಅದನ್ನು ಮರುಹಂಚಿಕೊಳ್ಳದಂತೆ ಫೇಸ್‌ಬುಕ್ ನಿರ್ಬಂಧಿಸಲಾರಂಭಿಸಿತು. ಈ ವಿಚಾರವೇ ವಿವಿಧ ತಾಣಗಳಲ್ಲಿ ಚರ್ಚೆಯಾಗಲು ಆರಂಭಿಸಿದ್ದರ ಹಿಂದೆಯೇ ಫೇಸ್‌ಬುಕ್ ನಿರ್ಬಂಧವನ್ನು ಹಿಂತೆಗೆದುಕೊಂಡು ಕ್ಷಮೆಯಾಚಿಸಿತು. ಕಿರಿಕಿರಿಯುಂಟು ಮಾಡುವ ಜಾಹೀರಾತು ಲಿಂಕ್‌ಗಳ ನಿಯಂತ್ರಣಕ್ಕಾಗಿ ಮಾಡಿರುವ ತಾಂತ್ರಿಕ ವ್ಯವಸ್ಥೆ ತಪ್ಪಾಗಿ ಕಾರ್ಯನಿರ್ವಹಿಸಿದ್ದರಿಂದ ಈ ತೊಂದರೆ ಸಂಭವಿಸಿತು ಎಂದು ಫೇಸ್‌ಬುಕ್ ಹೇಳಿತು. ಇದು ನಿಜವೂ ಇರಬಹುದು. ಆದರೆ ಈ ಘಟನೆ ಫೇಸ್‌ಬುಕ್ ಒಂದು ನಿಜ ಅರ್ಥದ ಸಾರ್ವಜನಿಕ ಸ್ಥಳವಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿತು.

ಇಂಟರ್‌ನೆಟ್‌ನ ಸಾರ್ವಜನಿಕ ಸ್ವರೂಪವನ್ನು ಇಲ್ಲವಾಗಿಸುವ ನಿಯಂತ್ರಣಗಳು ಕೇವಲ ಸಾಮಾಜಿಕ ಜಾಲತಾಣಗಳಿಗೆ ಅಥವಾ ಸರ್ಚ್ ಎಂಜಿನ್ ಫಲಿತಾಂಶಗಳಿಗಷ್ಟೇ ಸೀಮಿತವಲ್ಲ ಎಂಬುದನ್ನು ನಾವು ಮರೆಯುವಂತಿಲ್ಲ. ಫೇಸ್‌ಬುಕ್ ಪ್ರವರ್ತಿಸುತ್ತಿರುವ ಇಂಟರ್‌ನೆಟ್‌ ಡಾಟ್ ಆರ್ಗ್ ತಾಣಕ್ಕೆ ಹೋಗುವುದಕ್ಕೆ ರಿಲಯನ್ಸ್‌ ಸಂಸ್ಥೆ ನೀಡುವ ಇಂಟರ್‌ನೆಟ್‌ ಸಂಪರ್ಕವೇ ಬೇಕು ಎಂಬ ಷರತ್ತಿದೆ. ಏರ್‌ಟೆಲ್ ತನ್ನ ಗ್ರಾಹಕರು ಇಂಟರ್‌ನೆಟ್‌ನಲ್ಲಿ ಏನನ್ನು ನೋಡುತ್ತಿದ್ದಾರೆ ಎಂಬುದನ್ನು ಅರಿಯುವುದಕ್ಕಾಗಿ ನಡೆಸಿದ ಗೂಢಚರ್ಯೆಯ ಕಥೆ ಎಲ್ಲರಿಗೂ ತಿಳಿದಿರುವಂಥದ್ದೇ. ಗೂಗಲ್‌ನ ಫಲಿತಾಂಶಗಳಂತೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದನ್ನು ಈಗ ನಾವು ಸಹಜ ಎಂದು ಸ್ವೀಕರಿಸುವ ಮಟ್ಟಕ್ಕೆ ತಲುಪಿದ್ದೇವೆ.

ಇವೆಲ್ಲದರ ಆಚೆಗೆ ಪ್ರಭುತ್ವ ಕೂಡಾ ಈಗ ಇಂಟರ್‌ನೆಟ್‌ನ ನಿಯಂತ್ರಣಕ್ಕೆ ಹೊರಟಿದೆ. ಪ್ರತಿ ವರ್ಷ ಸರ್ಕಾರ ನಿರ್ಬಂಧಿಸುವ ವೆಬ್‌ಸೈಟುಗಳ ಸಂಖ್ಯೆ ಏರುತ್ತಲೇ ಇದೆ. ಕಾಮಪ್ರಚೋದಕ. ಭದ್ರತೆ, ಸಮುದಾಯಗಳ ನಂಬಿಕೆಗೆ ಘಾಸಿ ಇತ್ಯಾದಿ ಕಾರಣಗಳನ್ನು ಇದಕ್ಕೆ ಸರ್ಕಾರಗಳು ನೀಡುತ್ತವೆ. ಆದರೆ ಈ ಕಾರಣಗಳನ್ನು ಕಾನೂನಿನ ಪರಿಭಾಷೆಯಲ್ಲಿ ವ್ಯಾಖ್ಯಾನಿಸುವುದಕ್ಕೆ ಯಾವ ಸರ್ಕಾರವೂ ಮುಂದಾಗುವುದಿಲ್ಲ. ಪರಿಕಲ್ಪನಾತ್ಮಕವಾಗಿ ಇಂಟರ್‌ನೆಟ್‌ ಅತ್ಯಂತ ಪರಿಣಾಮಕಾರಿಯಾದ ಸಾರ್ವಜನಿಕ ಸ್ಥಳವಾಗಬಹುದು. ಆದರೆ ವಾಣಿಜ್ಯದ ಅಗತ್ಯದಿಂದ ಆರಂಭಿಸಿ ರಾಷ್ಟ್ರೀಯ ಭದ್ರತೆಯ ತನಕದ ‘ಸಕಾರಣ’ಗಳೇ ಅದನ್ನು ಸಾರ್ವಜನಿಕ ಸ್ಥಳವಾಗದಂತೆ ತಡೆದಿದೆ ಎಂಬುದು ಕಹಿಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT