ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ತಾರತಮ್ಯ ಸ್ಥಿರೀಕರಿಸುವ ಪಠ್ಯ ಪುಸ್ತಕ

Last Updated 16 ಜೂನ್ 2018, 9:22 IST
ಅಕ್ಷರ ಗಾತ್ರ

ಅರ್ಧ ಶತಮಾನದ ಹಿಂದೆ ಪ್ರಾಥಮಿಕ ಶಾಲೆಯಲ್ಲಿ ನಾವೆಲ್ಲಾ ಓದಿದ್ದು ಕಮಲ, ಬಸವನ ಪಾಠ. ಅಡುಗೆಮನೆಯಲ್ಲಿ ತಾಯಿಗೆ ಕಮಲ ಸಹಾಯ ಮಾಡುತ್ತಾಳೆ. ಹೊಲದಲ್ಲಿ ತಂದೆಗೆ ಬಸವ  ನೆರವಾಗುತ್ತಾನೆ ಎಂಬಂಥ ನೀತಿ ಹೇಳುವ ಪಾಠ. ಮನೆಗೆಲಸವೇ ಹೆಣ್ಣಿನ ಮುಖ್ಯ ಕೆಲಸ  ಎಂಬಂಥ ಮೌಲ್ಯವನ್ನು ಬಿತ್ತುವ, ಬೆಳೆಸುವ ಪಾಠ  ಅದು.

ಕಾಲ ಎಂದಿಗೂ ನಿಂತ ನೀರಲ್ಲ. ಹರಿಯುತ್ತಲೇ ಇರುತ್ತದೆ.  ಹರಿಯುತ್ತಲೇ ಸಾಗುವ ಬದುಕಿನ ಗತಿಶೀಲತೆಯಲ್ಲೂ ಬದಲಾವಣೆಗಳಾಗುತ್ತಿರುತ್ತವೆ. ಈ ಪ್ರಕ್ರಿಯೆಯಲ್ಲಿ  ಸಾಮಾಜಿಕ ಬದುಕಿನಲ್ಲಿ ಪಲ್ಲಟಗಳಾಗಿವೆ. ಆದರೆ ಈಗಲೂ ಹೆಣ್ಣಿಗೆ ಮನೆಗೆಲಸ ಅಥವಾ ಕುಟುಂಬವೇ ಕಾರ್ಯಕ್ಷೇತ್ರ  ಎಂಬಂಥ  ಪಾಠಗಳನ್ನು ಎಳೆಯ ಮಕ್ಕಳ ತಲೆತುಂಬುವ ಪ್ರವೃತ್ತಿ ಮಾತ್ರ ನಿಂತಿಲ್ಲ ಎಂಬುದು ವಿಪರ್ಯಾಸ.

ಶಿಕ್ಷಣ  ಇಲಾಖೆಯ ವಿವಿಧ ಮಜಲುಗಳಲ್ಲಿ ಲಿಂಗ ವ್ಯವಸ್ಥೆಯ  ನ್ಯಾಯ ಕುರಿತು ಜಾಗೃತಿ ಮೂಡಿಸುವ ಪ್ರಯತ್ನಗಳು ಆರಂಭವಾಗಿ ಈಗಾಗಲೇ ಎಷ್ಟೋ ಕಾಲವಾಗಿದೆ. ಸಮಾಜದಲ್ಲಿ ಲಿಂಗ ವ್ಯವಸ್ಥೆಯ ನ್ಯಾಯವ್ಯವಸ್ಥೆಯನ್ನು ರೂಢಿಸಲು ಮೊದಲಿಗೆ ಶಿಕ್ಷಣ ಕ್ಷೇತ್ರದಲ್ಲೇ ಮೂಡಬೇಕಾದ ಜಾಗೃತಿ ಬಹಳ ಮುಖ್ಯವಾದದ್ದು. ಹೀಗಿದ್ದೂ ನಮ್ಮ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಪಠ್ಯಗಳು ಲಿಂಗ ಅಸಮಾನತೆಯನ್ನು ಬೋಧಿಸುತ್ತಿವೆ. ಈ ಕುರಿತಂತೆ ಹೆಣ್ಣುಮಕ್ಕಳ ಮೇಲಿನ ಹಿಂಸೆಯ ವಿರುದ್ಧ  ರಾಜ್ಯದ ಏಳು ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ  ‘ಸ್ವರಾಜ್ ಸಂಘಟನೆ’ ಹಾಗೂ ‘ಆಕ್ಷನ್  ಏಡ್’ ಸಂಸ್ಥೆ  ಇತ್ತೀಚೆಗೆ ಬಿಡುಗಡೆ ಮಾಡಿರುವ ಅಧ್ಯಯನ ವರದಿ ಬೆಳಕು ಚೆಲ್ಲಿದೆ.

1ನೇ ತರಗತಿಯಿಂದ 5ನೇ ತರಗತಿವರೆಗಿನ  ಇಂಗ್ಲಿಷ್, ಕನ್ನಡ, ಪರಿಸರ ಪಠ್ಯಗಳು ಹಾಗೂ 5ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಗಳಲ್ಲಿನ  ಚಿತ್ರ, ಸಂಭಾಷಣೆ, ಭಾಷಾ ಬಳಕೆ ಹಾಗೂ ಈ ಪಠ್ಯಗಳು ನೀಡುತ್ತಿರುವ ಸಂದೇಶಗಳನ್ನು  ಲಿಂಗತ್ವ ದೃಷ್ಟಿಕೋನದಿಂದ  ಪರಿಶೀಲಿಸುವ ಪ್ರಯತ್ನ ಇಲ್ಲಿದೆ. ಈ ಪಠ್ಯಗಳಲ್ಲಿ ಒಟ್ಟು 644 ಚಿತ್ರಗಳಲ್ಲಿ 508 ಚಿತ್ರಗಳು ಲಿಂಗ  ಅಸಮಾನತೆಯನ್ನು ವೈಭವೀಕರಿಸುತ್ತಿವೆ ಎಂಬುದು ಆತಂಕಕಾರಿ. ಕೇವಲ 136 ಚಿತ್ರಗಳು ಲಿಂಗತ್ವ ಸಮಾನತೆಯನ್ನು ಪ್ರತಿನಿಧಿಸುತ್ತವೆ. ಎಂದರೆ ಶೇ 79 ಚಿತ್ರಗಳು ಲಿಂಗತಾರತಮ್ಯವನ್ನು ಎತ್ತಿ ಹಿಡಿಯುತ್ತವೆ.

ಬೆಚ್ಚನೆಯ ಮನೆ ಪರಿಸರದಿಂದ ಸಾಮಾಜಿಕ ಬದುಕಿಗೆ ಶಾಲೆಯ ಮುಖಾಂತರ ಮೊದಲ ಬಾರಿಗೆ  ಮಗು ಮುಖಾ­ಮುಖಿಯಾಗುತ್ತದೆ. ಹೀಗಾಗಿ, ಭವಿಷ್ಯದ ಬದುಕಿನ ಬುನಾ ದಿಯಾಗುವ ಪ್ರಾಥಮಿಕ ಶಿಕ್ಷಣ, ಪುಟಾಣಿಗಳ ವ್ಯಕ್ತಿತ್ವ ವಿಕಸ ನದ ನೆಲೆಯೂ ಹೌದು.  ಆದರೆ ರಾಜ್ಯದ  ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳನ್ನು ಗಮನಿಸಿದಲ್ಲಿ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆಗೆ ಲಿಂಗ ತಾರತಮ್ಯದ ಬೇಲಿ ಹಾಕಿರುವುದು ಗೋಚರವಾಗುತ್ತದೆ. ಮೊಳಕೆಯಲ್ಲೇ ಲಿಂಗಾಧಾರಿತ ಪೂರ್ವಗ್ರಹಗಳ ದೃಷ್ಟಿಗಳೊಂದಿಗೆ ಬೆಳೆಯುವ ‘ಸಿರಿ’ ಇದು.

ಈ ಪಠ್ಯಗಳಲ್ಲಿ ಹೆಣ್ಣುಮಕ್ಕಳ ಚಿತ್ರಗಳಿರುವುದೂ ವಿರಳ. ಕೊಟ್ಟಿರುವ ಚಿತ್ರಗಳೂ ಅವರ ಅಂದಚೆಂದವನ್ನು, ಅವರು ಮನೆಕೆಲಸದಲ್ಲಿ ತಲ್ಲೀನರಾಗಿರುವುದನ್ನು ಎತ್ತಿ ಹಿಡಿಯುತ್ತಿವೆ. ಸಮಾಜದಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ  ಮಹಿಳೆಯರಿದ್ದಾರೆ. ಆದರೆ ನಮ್ಮ ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳಿಗೆ ಮಾತ್ರ  ಅವರು ಕಾಣಿಸುತ್ತಿಲ್ಲ. ಸೇವೆ ಮತ್ತು ಆರೈಕೆ ಕ್ಷೇತ್ರಗಳಿಗಷ್ಟೇ  ಮಹಿಳೆಯರನ್ನು ಸೀಮಿತಗೊಳಿಸಲಾಗಿದೆ. ಆದರೆ ಕೃಷಿ, ವೈದ್ಯಕೀಯ,  ಅಂಚೆ, ಪೊಲೀಸ್, ಸೈನ್ಯ, ಸಾರಿಗೆ ಮತ್ತು ಸಂಪರ್ಕ ವಲಯಗಳ ವಾರಸುದಾರರೆಂಬಂತೆ ಪುರುಷರನ್ನು ಬಿಂಬಿಸಲಾಗಿದೆ.

ಕೃಷಿ ಕುರಿತ ಪಾಠಗಳಲ್ಲಿ ಪುರುಷರು ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವಂತೆ ತೋರಿಸುವುದು ವಾಸ್ತವಕ್ಕೆ ಬೆನ್ನು ತಿರುಗಿಸಿದಂತೆ. ಏಕೆಂದರೆ, ಒಟ್ಟು ಕೃಷಿ ಕೆಲಸಕ್ಕೆ ಮುಕ್ಕಾಲು ಭಾಗ ಮಹಿಳೆಯರದೇ ಕೊಡುಗೆ ಇರುತ್ತದೆ ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಸಾರ್ವಜನಿಕ ಸ್ಥಳಗಳಲ್ಲಿ ಪುರುಷರು ಹಾಗೂ ಮನೆಯಂತಹ ಖಾಸಗಿ ಸ್ಥಳಗಳಲ್ಲಿ ಮಹಿಳೆಯರು ಪ್ರಧಾನವಾಗಿ ಇರುತ್ತಾರೆಂಬ ಸ್ವೀಕೃತ ಪ್ರತಿಮೆಗಳನ್ನೇ ಈ ಪಠ್ಯಪುಸ್ತಕಗಳೂ ಸ್ಥಿರೀಕರಿಸುತ್ತವೆ.

ಹೊರಗಿನ ಸಂಚಾರ, ಸಾರ್ವಜನಿಕ ಸಮಾರಂಭ, ಮನೋರಂಜನೆಯ ಕ್ಷೇತ್ರ ಪುರುಷರದೆಂಬಂತೆ ಈ ಪಠ್ಯಗಳಲ್ಲಿ ಚಿತ್ರಣಗೊಳ್ಳುವುದು ಮುಂದುವರಿದಿದೆ.  ಹೆಣ್ಣುಮಕ್ಕಳನ್ನು  ಅಲಂಕಾರ ಪ್ರಿಯರನ್ನಾಗಿ, ಸೊಬಗಿನ, ಚೆಲುವಿನ ಪ್ರತಿಮೆಗಳಾಗಿ ರೂಪಿಸುತ್ತಾ ಅವರನ್ನೊಂದು ಯಥಾಪ್ರಕಾರ ಚೆಲುವಿನ ಬೊಂಬೆ ಮಟ್ಟಕ್ಕೆ ಇಳಿಸುವುದು  ಮುಂದುವರಿದಿದೆ.

ಹೆಣ್ಣಿನ ಸಂಭ್ರಮ, ಸಂತೋಷವನ್ನು ಕೇವಲ ಮದುವೆಯ ಸಮಾರಂಭಕ್ಕೆ ಮೀಸಲಿರಿಸಿ  ‘ಹೆಣ್ಣು’ ಎಂದರೆ ‘ಮದುವೆ’ ಎಂಬಂತೆ  ಸಮೀಕರಣ ಮಾಡಲಾಗಿದೆ. ‘ನಾನು ಹುಟ್ಟಿದ ಮನೆ ನನ್ನದಲ್ಲ. ಹೊರ ಹೋಗಬೇಕಾದವಳು’ ಎಂಬಂಥ ಸಂದೇಶವನ್ನು ಹೆಣ್ಣುಮಕ್ಕಳಿಗೆ ‘ವಂಶವೃಕ್ಷ’ದ ಚಿತ್ರಗಳ ಮೂಲಕ  ಈ ಪಠ್ಯಗಳಲ್ಲಿ ನೀಡಲಾಗಿರುವುದು ವಿಪರ್ಯಾಸ. ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ  ಇರುವ  ಇಂಗ್ಲಿಷ್  ಪಠ್ಯದಲ್ಲಿ  ‘ಕುಟುಂಬ’ ಪಾಠ  ಇದೆ. ಕುಟುಂಬದ ಶ್ರೇಣಿಯನ್ನು ಪುರುಷರಿಂದ ಗುರುತಿಸಲಾಗಿದೆ. ಹಾಗೆಯೇ ಕುಟುಂಬಕ್ಕೆ ಸಂಬಂಧಿಸಿದ ಚಿತ್ರದಲ್ಲಿ  ಕಂಪ್ಯೂಟರ್ ಮುಂದೆ ಕುಳಿತಿರುವ ತಂದೆ, ವೃತ್ತಪತ್ರಿಕೆ ಓದುತ್ತಿರುವ ತಾತ ಹಾಗೂ ಅಡುಗೆ ಮಾಡುವ ತಾಯಿಯ ಚಿತ್ರಗಳಿವೆ. 

ತಂದೆಯ ಪಕ್ಕ ಕುಳಿತಿರುವ ಮಗ ಟೆಲಿವಿಷನ್ ನೋಡುತ್ತಿದ್ದಾನೆ. ಅವನ ಹಿಂದೆ ಅಜ್ಜಿ ಸೋಫಾದಲ್ಲಿ ಕುಳಿತು ಟೆಲಿವಿಷನ್‌ನತ್ತ ಮುಖ ಮಾಡಿದ್ದಾಳೆ.  ಅಜ್ಜಿ ಪಕ್ಕ ನೆಲದ ಮೇಲೆ ಕುಳಿತಿರುವ ಮಗಳು ನಾಯಿಯೊಡನೆ ಆಡುತ್ತಿದ್ದಾಳೆ. ಎರಡನೇ ತರಗತಿಯ ಇಂಗ್ಲಿಷ್ ಪಠ್ಯ ಪುಸ್ತಕದಲ್ಲಿ ‘ಪ್ರೊಫೆಷನ್’ ಎಂಬ ಪಾಠದಲ್ಲಿ ಹುದ್ದೆಗಳಿಗೆ ಸಂಬಂಧಿಸಿದಂತೆ, ವ್ಯಕ್ತಿಗಳ ಜತೆ ಸರಿಯಾದ ಚಿತ್ರಗಳನ್ನು ಹೊಂದಿಸಿ ಬಣ್ಣ ತುಂಬಬೇಕಾದ ಪಾಠವಿದೆ. ಪುರುಷ ವೈದ್ಯನಿಗೆ ಸ್ಟೆಥಾಸ್ಕೋಪ್,  ಪುರುಷ ಸೈನಿಕನಿಗೆ ಬಂದೂಕು ಹಾಗೂ  ಮಹಿಳೆಗೆ ಸೌಟು ಹೊಂದಿಸಿರುವಂತಹ ಈ ಪಾಠಕ್ಕೆ ಏನೆನ್ನ ಬೇಕು?

‘ಪ್ರಜಾಪ್ರಭುತ್ವ’ ಕುರಿತ ಪಾಠದಲ್ಲಿ ಚುನಾವಣೆ ವೇಳೆ ಪುರುಷರು ಮಾತ್ರ ಮತ ಹಾಕುತ್ತಿರುವಂತೆ ಚಿತ್ರಿಸಲಾಗಿದೆ. ಆಡಳಿತದಲ್ಲಿ ಮಹಿಳೆಯರಿಗೆ ಏನೂ ಪಾತ್ರವಿರುವಂತೆ ತೋರಿಸಲಾಗಿಲ್ಲ. 5ನೇ ತರಗತಿಯ ಪಠ್ಯದಲ್ಲಿ ‘ನಮ್ಮ ಸುತ್ತ ಮುತ್ತ’  ಹೆಸರಿನ ಪಾಠದಲ್ಲಿ 23 ಸಾಧಕರನ್ನು ಪಟ್ಟಿ ಮಾಡಲಾಗಿದೆ. ಇದರಲ್ಲಿ ಕೇವಲ ಮೂವರು  ಮಾತ್ರ ಮಹಿಳೆ ಯರು.  ಹೆಣ್ಣುಮಕ್ಕಳಿಗೂ ಮರ ಹತ್ತುವ, ಪಟಾಕಿ ಸಿಡಿಸುವ ಸಾಮರ್ಥ್ಯ  ಇರುವುದನ್ನು ಪಠ್ಯ ರಚನಾ ತಂಡ ಗುರುತಿಸು ವಲ್ಲಿ ವಿಫಲವಾಗಿರುವುದು ಈ ಪಾಠಗಳಲ್ಲಿ ಸ್ಪಷ್ಟ. ಪ್ರಾಥ ಮಿಕ ಶಿಕ್ಷಣದಲ್ಲಿ  ಹೆಚ್ಚು ಬೋಧಕರು ಮಹಿಳೆಯರೇ ಆಗಿ ದ್ದರೂ ಶಿಕ್ಷಕರಾಗಿ ಪುರುಷರನ್ನೇ ತೋರಿಸುವ ಅಗತ್ಯವಾ ದರೂ ಏನು? ಎಂಬಂಥ ಪ್ರಶ್ನೆ ಇಲ್ಲಿ ಮೂಡುವುದು ಸಹಜ.

‘ಬದಲಾದ  ಕುಟುಂಬ’ ಎಂಬಂಥ ಚಿತ್ರದಲ್ಲೂ ಸಮಾ ನತೆಯನ್ನು ಸೂಚಿಸುವ, ಹೆಣ್ಣುಮಕ್ಕಳ  ಅಸ್ತಿತ್ವವನ್ನು ಸ್ವತಂತ್ರ ವಾಗಿ ಗುರುತಿಸುವಂತಹ ಕುಟುಂಬದ ಚಿತ್ರಣವನ್ನು ಕಟ್ಟಿ ಕೊಡಲು ಪಠ್ಯರಚನಾ ತಂಡಕ್ಕೆ ಸಾಧ್ಯವಾಗಿಲ್ಲ. ‘ಬದಲಾದ ಕುಟುಂಬ’ದ ಚಿತ್ರದಲ್ಲಾದರೂ ಕನಿಷ್ಠ  ಪುರುಷ ಪ್ರಾಧಾನ್ಯ ಪ್ರತಿಫಲಿಸದೆ ಮಹಿಳೆ ಹಾಗೂ ಪುರುಷರಿಬ್ಬರೂ ಸಮಾನ ರಾಗಿರುವ ಚಿತ್ರಗಳನ್ನು ತೋರಿಸುವ ಮೂಲಕ ಮಕ್ಕಳಿಗೆ ಸಮಾನತೆಯ ಪರಿಕಲ್ಪನೆಯ ಬಾಗಿಲು ತೆರೆಯಬಹು ದಿತ್ತಲ್ಲವೆ? ಎಂಬಂಥ ಪ್ರಶ್ನೆಯನ್ನು ಅಧ್ಯಯನ ತಂಡ ಎತ್ತಿ ರುವುದು ಸರಿಯಾಗಿದೆ.

2013ರಿಂದ ಆಂಗ್ಲ ಭಾಷೆಯನ್ನು ಒಂದನೇ ತರಗತಿಯಿಂದಲೇ  ಶಾಲಾ ಪಠ್ಯಕ್ರಮಕ್ಕೆ  ಕರ್ನಾಟಕ ಸರ್ಕಾರ ಅಳವಡಿಸಿದೆ. ಆದರೆ ಈ ಆಂಗ್ಲ ಪಠ್ಯಕ್ರಮದಲ್ಲೂ ಲಿಂಗ ತಾರತಮ್ಯ ಧ್ವನಿಸುವ ಪಡಿಯಚ್ಚುಗಳೇ ಮುಂದುವರಿದಿವೆ. ಪಠ್ಯಪುಸ್ತಕದ ವಿಷಯಗಳು ಪುರುಷ ಕೇಂದ್ರಿತವಾಗಿರುವುದಷ್ಟೇ ಅಲ್ಲ, ನಿರೂಪಣೆಗಳೂ ಪುರುಷವಾಚಕದಲ್ಲಿಯೇ ಇವೆ. ಅಂದರೆ ಲಿಂಗತ್ವ ತಟಸ್ಥ , ಸ್ತ್ರೀಲಿಂಗ ಶಬ್ದಗಳ ಬಡತನ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಿದೆಯೇ ಎಂಬಷ್ಟರ ಮಟ್ಟಿಗೆ ಪುರುಷವಾಚಕ ಭಾಷೆಯ ಬಳಕೆಯಾಗಿದೆ.

ಶಾಲೆಗಳಲ್ಲಿ ವಿವಿಧ ಕೆಲಸಗಳನ್ನು ಮಕ್ಕಳಿಗೆ ಹಂಚುವಾಗಲೂ ಈ ಪೂರ್ವಗ್ರಹಗಳು ಕೆಲಸ ಮಾಡುತ್ತಿರುತ್ತವೆ ಎಂಬುದು ಎಲ್ಲರ ಅನುಭವಕ್ಕೆ ಬಂದಿರುವಂತಹದ್ದೇ.  ಶಾಲೆಯಲ್ಲಿ ಸಮಾರಂಭ ಇದ್ದಾಗ ಅಲಂಕರಿಸುವುದು,  ರಂಗೋಲಿ ಬಿಡುವುದು ಇತ್ಯಾದಿ ಕೆಲಸಗಳನ್ನು ಹೆಣ್ಣುಮಕ್ಕಳಿಗೆ ನೀಡಲಾಗುತ್ತದೆ. ಆದರೆ ಹೊರಗೆ ಓಡಾಡುವ ಕೆಲಸ ಅಥವಾ ಕ್ಲಿಷ್ಟಕರ ಕೆಲಸಗಳನ್ನು ಹುಡುಗರಿಗೆ ನೀಡಲಾಗುತ್ತದೆ. ಇಲ್ಲಿ ಕೆಲಸ ಮಾಡುವುದು ಪೂರ್ವಗ್ರಹಗಳೇ. ಹುಡುಗರು ಹಾಗೂ ಹುಡುಗಿಯರ ಮಧ್ಯೆ ವ್ಯತ್ಯಾಸವಿದೆ ಎಂಬಂಥ ಪಾಠ ಇಂತಹ ಸಣ್ಣ ಪುಟ್ಟ ಸಂಗತಿಗಳಿಂದೇ ಆರಂಭವಾಗುತ್ತದೆ. ಇದನ್ನು ಸರಿಪಡಿಸುವುದು ಹೇಗೆ?

ಪಠ್ಯ ಪುಸ್ತಕಗಳು ಲಿಂಗ ಪೂರ್ವಗ್ರಹಗಳನ್ನು ಬಿಂಬಿಸದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ  ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ವಹಿಸುತ್ತದೆ ಎಂಬ ಆಶ್ವಾಸನೆಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ   ನೀಡಿದ್ದರು. ಇಡೀ ವರ್ಷವನ್ನೇ ಇದಕ್ಕಾಗಿ ಮೀಸಲಿಡುವ ಮಾತುಗಳನ್ನೂ ಆಡಿದ್ದರು.  ಅದೇ ಸಮಾರಂಭದಲ್ಲಿ ಹಾಜರಿದ್ದ ಕೇಂದ್ರ ಮಹಿಳಾ ಮತ್ತು ಮಕ್ಕಳ  ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರೂ ಲಿಂಗ ಸಂವೇದನಾಶೀಲತೆಯನ್ನು ಪಠ್ಯಕ್ರಮಗಳು ಹೊಂದಿರಬೇಕಾದ  ಅನಿವಾರ್ಯತೆಯನ್ನು ಪ್ರತಿಪಾದಿಸಿದ್ದರು. ಸಮಾನತೆ ಸಾಧನೆಗೆ ಪಠ್ಯ ಪುಸ್ತಕಗಳನ್ನು ಪ್ರಾಥಮಿಕ ಸಾಧನವಾಗಿ ಬಳಸಬೇಕು. ಈ ಅಗತ್ಯವನ್ನು ರಾಷ್ಟ್ರೀಯ ಪಠ್ಯ ಚೌಕಟ್ಟು  ದಾಖಲೆಯೂ ಗುರುತಿಸಿದೆ ಎಂಬುದು ಗಮನಾರ್ಹ.

ಲಿಂಗ ಪೂರ್ವಗ್ರಹ  ಎರಡು ಅಲುಗಿನ ಕತ್ತಿ.  ಇದಕ್ಕೆ ಹುಡುಗರು ಹಾಗೂ ಹುಡುಗಿಯರು ಇಬ್ಬರೂ ಬೆಲೆ ತೆರುತ್ತಾರೆ.  ಅತ್ಯಾಚಾರ ಕಾನೂನು ತಿದ್ದುಪಡಿಗೆ ಶಿಫಾರಸುಗಳನ್ನು ನೀಡಿದ ನ್ಯಾಯಮೂರ್ತಿ ವರ್ಮಾ ಸಮಿತಿಯೂ, ಶಾಲಾ ಪಠ್ಯಗಳಲ್ಲಿ ಲಿಂಗ ಸಮಾನತೆಯ ಅಂಶಗಳನ್ನು ಅಳವಡಿಸಬೇಕಾದ  ಅಗತ್ಯ ಕುರಿತು ಹೇಳಿದ್ದರು. .

ಸಂವಿಧಾನದ ಮೂಲ ಆಶಯವಾದ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸ್ವಾತಂತ್ರ್ಯವನ್ನು ಸಾಕಾರಗೊಳಿಸಲು ಶಾಲಾ ಪಠ್ಯಕ್ರಮ ಪೂರಕವಾಗಿರಬೇಕು ಎಂಬುದು ನಿಜ. ಆದರೆ ವಿವಿಧ ಜಿಲ್ಲೆಗಳ ಸಂಪನ್ಮೂಲ ವ್ಯಕ್ತಿಗಳು ರಚಿಸಿರುವ ಪಠ್ಯಪುಸ್ತಕಗಳೇ  ಮಕ್ಕಳಿಗೆ  ಪುರುಷ ಪ್ರಧಾನ ಮೌಲ್ಯಗಳನ್ನು  ಸವಿಸ್ತಾರವಾಗಿ ಈ ರೀತಿಯಲ್ಲಿ  ಕಟ್ಟಿಕೊಡುತ್ತಿವೆ. ಹೀಗಿದ್ದಾಗ  ಸಾಮಾನ್ಯ ಶಿಕ್ಷಕ ವೃಂದ, ಈ ಪಾಠಗಳ ಮೂಲಕ ಮಕ್ಕಳ ಮನಸ್ಸುಗಳಲ್ಲಿ ಸಮ – ಸಮಾಜದ ಕನಸುಗಳನ್ನು ಹೇಗೆ ಬಿತ್ತುತ್ತಾರೆ ಎಂಬುದು ಯಕ್ಷ ಪ್ರಶ್ನೆ

ಮನುಷ್ಯ ಸಹಜ ಗುಣಗಳಾದ ಸಾಹಸ, ಧೈರ್ಯ, ಶೌರ್ಯ, ಶಕ್ತಿ, ಸಾಮರ್ಥ್ಯ, ದಕ್ಷತೆ, ಬುದ್ಧಿವಂತಿಕೆ, ಔದಾರ್ಯ, ಜಾಣ್ಮೆ, ತ್ಯಾಗ, ಬಲಿದಾನ, ದೇಶಪ್ರೇಮ ಇವು ಪುರುಷರಿಗೆ ಆಜನ್ಮವರವಾಗಿ ಬಂದಿವೆ ಎಂದು ಈ ಪಠ್ಯಗಳು ಬಿಂಬಿಸುತ್ತಿವೆ. ಎಲ್ಲೂ ಕೂಡ ಈ ಗುಣಗಳನ್ನು ಹೆಣ್ಣಿಗೆ ಅನ್ವಯಿಸಿಲ್ಲ. ಬದಲಾಗಿ ಹೆಣ್ಣಿಗೆ ಭಕ್ತಿ, ದೈನ್ಯತೆ, ಅಸಹಾಯಕತೆ, ಅಧೀನತೆ, ಆರೈಕೆ ಇತ್ಯಾದಿ ಮೌಲ್ಯಗಳನ್ನಷ್ಟೇ ಅನ್ವಯಿಸಿ ಹೇಳಲಾಗಿದೆ.

ಲಿಂಗ ತಾರತಮ್ಯದ ನೀತಿಗಳನ್ನು ಬೋಧಿಸುವ ಇಂತಹ ಪಾಠಗಳ ಬಗ್ಗೆ ಹಿಂದಿನಿಂದಲೂ ಸಾಕಷ್ಟು ಚರ್ಚೆಗಳನ್ನು ನಡೆಸಿಕೊಂಡು ಬರಲಾಗುತ್ತಲೇ ಇದೆ. ದಶಕಗಳ ಹಿಂದೆಯೇ ಭಾರತದ ಶಿಕ್ಷಣ ತಜ್ಞರು ಗಂಡು– ಹೆಣ್ಣಿನ ಮಧ್ಯದ ಮೂಲಭೂತ ಸಮಾನತೆ ಗುರುತಿಸಿ ಪೋಷಿಸುವಂತಹ ಪಠ್ಯಕ್ರಮ ನೀಡುವುದಾಗಿ ಭರವಸೆ ನೀಡಿದ್ದರು (ಶಿಕ್ಷಣ ಆಯೋಗ, ಭಾರತ, 1965). ಸಮಾನತೆಯ ಯುಗಕ್ಕೆ ಸ್ಫೂರ್ತಿದಾಯಕವಾಗುವಂತೆ ಕಿರಿಯರನ್ನು ಸಿದ್ಧಪಡಿಸುವ ಸಲುವಾಗಿ ಸ್ವತಂತ್ರ ಭಾರತದ ಪಠ್ಯಗಳನ್ನು ಪುನರ್ ರಚಿಸಲು ಭಾರತೀಯ ಸರ್ಕಾರ ಒಪ ಕೊಂಡಿತ್ತು. ‘ಲಿಂಗಾಧಾರದ ಮೇಲೆ ಕೆಲವು ಕೆಲಸಗಳು ಹಾಗೂ ವಿಷಯಗಳನ್ನು ವಿಭಜಿಸುವುದು ಹಾಗೂ ಕೆಲವನ್ನು ‘ಪುರಷತ್ವದ್ದು’ ಮತ್ತೆ ಕೆಲವನ್ನು ‘ಸ್ತ್ರೀತ್ವದ್ದು’ ಎಂದು ಪರಿಗಣಿಸುವುದು ಅವೈಜ್ಞಾನಿಕ. ಇದೇ ರೀತಿ ಎರಡು ಲಿಂಗಗಳ ಮಧ್ಯದ ಮಾನಸಿಕ ವ್ಯತ್ಯಾಸಗಳೆಂದು ಏನು ಕರೆಯುತ್ತೇವೋ ಅದು ಲಿಂಗಾಧಾರಿತವಲ್ಲ. ಸಾಮಾಜಿಕ ಪ್ರಭಾವದಿಂದ ಸೃಷ್ಟಿಯಾದದ್ದು. ಇದು ಹೆಚ್ಚು ಪ್ರಚಾರಗೊಳ್ಳಬೇಕು. ‘ಪುರುಷತ್ವ’ ‘ಸ್ತ್ರೀತ್ವ’ ವ್ಯಕ್ತಿತ್ವಗಳ ಪಡಿಯಚ್ಚುಗಳು ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ಮಾಡುತ್ತವೆ ಎಂಬುದನ್ನು ಜನರಿಗೆ ಮನಗಾಣಿಸಬೇಕು’ ( ಶಿಕ್ಷಣ ಆಯೋಗ 1965).

ಆದರೆ ಸರ್ಕಾರದ ಈ ಭರವಸೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕಿಳಿಯಲಿಲ್ಲ. ಲಿಂಗಾಧಾರಿತ ಪೂರ್ವಗ್ರಹಗಳು ಪಠ್ಯಪುಸ್ತಕಗಳಲ್ಲಿ ಬಿಂಬಿತವಾಗುವುದು ಮುಂದುವರಿದೇ ಇದೆ. ಈಗ  ಈ ಅಧ್ಯಯನ ವರದಿಯನ್ನು  ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಪರಿಶೀಲನೆಗೆ ಸಲ್ಲಿಸಲಾಗಿದೆ. ಶಾಲಾ ಪಠ್ಯಗಳಲ್ಲಿ ಲಿಂಗ ನ್ಯಾಯವನ್ನು ಮಿಳಿತಗೊಳಿಸಿಕೊಳ್ಳುವುದು ಅಗತ್ಯ ಎಂಬುದು ಸರ್ಕಾರದ ನೀತಿಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT