ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಮಾನಿಕ ಸಮೀಕ್ಷೆಯ ಫೋಟೋಶಾಪ್ ಕಥನ

Last Updated 8 ಡಿಸೆಂಬರ್ 2015, 19:59 IST
ಅಕ್ಷರ ಗಾತ್ರ

ತಮಿಳುನಾಡಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆಯೊಂದನ್ನು ನಡೆಸಿದರು. ಸರ್ಕಾರ ಮತ್ತು ಮಾಧ್ಯಮಗಳ ನಡುವಣ ಸಂವಹನದ ಹೊಣೆ ಹೊತ್ತಿರುವ ಪ್ರೆಸ್ ಇನ್ಫರ್ಮೇಷನ್‌  ಬ್ಯೂರೋ (ಪಿಐಬಿ) ಪ್ರಧಾನಿಯವರು ನಡೆಸಿದ ವೈಮಾನಿಕ ಸಮೀಕ್ಷೆಯ ಛಾಯಾಚಿತ್ರಗಳನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿತು. ಇವುಗಳಲ್ಲಿ ವಿಮಾನದ ಕಿಟಕಿಯಿಂದ ಪ್ರವಾಹ ಪೀಡಿತ ದೃಶ್ಯಗಳನ್ನು ಪ್ರಧಾನಿ ವೀಕ್ಷಿಸುತ್ತಿರುವ ಚಿತ್ರವೊಂದಿತ್ತು. ಈ ಚಿತ್ರ ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ಟ್ವಿಟ್ಟರ್‌ನಲ್ಲಿ ಇದೊಂದು ‘ಫೋಟೋಶಾಪ್’ ಮಾಡಲಾದ ಚಿತ್ರ ಎಂಬ ಅಭಿಪ್ರಾಯಗಳು ಗಿಜಿಗುಡಲಾರಂಭಿಸಿದವು. ಸುಮಾರು ಒಂದು ಗಂಟೆ ನಂತರ ಪಿಐಬಿ ಈ ಚಿತ್ರವನ್ನು ಹಿಂದಕ್ಕೆ ತೆಗೆದುಕೊಂಡಿತು. ಅಷ್ಟೇ ಅಲ್ಲ ಇದು ‘ಎರಡು ಚಿತ್ರಗಳನ್ನು ಸೇರಿಸಿದ ಚಿತ್ರ’ ಎಂಬ ಅತೀವ ಅಸ್ಪಷ್ಟತೆಯುಳ್ಳ ಸ್ಪಷ್ಟನೆಯನ್ನೂ ನೀಡಿತು.

ಇಂಥದ್ದೊಂದು ಚಿತ್ರ ಸರ್ಕಾರದ ಅಧಿಕೃತ ಸಂಸ್ಥೆಯೊಂದರ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪ್ರಕಟವಾಗುವುದಕ್ಕೂ ಪ್ರಧಾನಿಗೂ ಯಾವುದೇ ಸಂಬಂಧವಿರಲಾರದು. ಇಂಥ ವಿಚಾರಗಳನ್ನು ಪ್ರಧಾನಿ ಹುದ್ದೆಯಲ್ಲಿರುವವರು ನಿರ್ವಹಿಸುವುದೂ ಇಲ್ಲ. ನಿತ್ಯ ನಡೆಯುವ ಅನೇಕ ಅಧಿಕೃತ ಕಾರ್ಯಕ್ರಮಗಳ ಛಾಯಾಚಿತ್ರಗಳು ಪ್ರಕಟವಾಗುವಂತೆಯೇ ಇದೂ ಪ್ರಕಟವಾಗಿರಬಹುದು. ಇಲ್ಲಿರುವ ಮುಖ್ಯ ಪ್ರಶ್ನೆ ಸರ್ಕಾರಿ ಸಂಸ್ಥೆಯೊಂದು ನೈತಿಕತೆಯನ್ನು ಮರೆತು ‘ಸಂಕಲಿತ ಚಿತ್ರ’ ವೊಂದನ್ನು ಪ್ರಕಟಿಸಿದ್ದೇಕೆ ಎಂಬುದು.

ಪಿಐಬಿ ಈ ಕೆಲಸವನ್ನು ಇದೇ ಮೊದಲ ಬಾರಿಗೆ ಮಾಡುತ್ತಿಲ್ಲ ಎಂಬ ವಿಚಾರ ಕೂಡಾ ಈಗ ಬಯಲಾಗಿದೆ. 2012ರ ಜುಲೈ 2ರಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಅಸ್ಸಾಂನ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದಾಗ ಪಿಐಬಿ ಬಿಡುಗಡೆ ಮಾಡಿದ ಚಿತ್ರವನ್ನೂ ಈ ರೀತಿ ಬದಲಾಯಿಸಲಾಗಿತ್ತು. ಈ ಕುರಿತಂತೆ ಗ್ಯಾಜೆಟ್ಸ್ 360 ಎಂಬ ಜಾಲತಾಣ ವರದಿಯೊಂದನ್ನು ಪ್ರಕಟಿಸಿದೆ (http://goo.gl/4raDsG). ಪಿಐಬಿಯ ಜಾಲತಾಣದಲ್ಲಿರುವ ಚಿತ್ರಗಳೂ ಈ ಬದಲಾವಣೆಗೆ ಸಾಕ್ಷಿಯಾಗುತ್ತಿವೆ. ‘ಪ್ರವಾಹ ಪರಿಸ್ಥಿತಿಯ ಗಂಭೀರತೆಯ ಚಿತ್ರಣ ದೊರೆಯಲಿ ಎಂಬ ಕಾರಣಕ್ಕೆ ಈ ರೀತಿ ಎರಡು ಚಿತ್ರಗಳನ್ನು ಸೇರಿಸಿದ್ದೇವೆ. ಇದನ್ನು ‘ಫೋಟೋಶಾಪ್ಡ್’ ಎಂದು ಕರೆಯುವುದು ತಪ್ಪು’ ಎಂದು ಪಿಐಬಿ ಅಧಿಕಾರಿಯೊಬ್ಬರು ಹೇಳಿದರೆಂಬ ಉಲ್ಲೇಖವೂ ಈ ವರದಿಯಲ್ಲಿದೆ.

ಯಾವುದೇ ಪ್ರದೇಶದ ಪ್ರವಾಹ ಪರಿಸ್ಥಿತಿಯ ಗಂಭೀರತೆ ಎಷ್ಟು ಎಂಬುದನ್ನು ಪ್ರಧಾನಿ ನಡೆಸುವ ವೈಮಾನಿಕ ಸಮೀಕ್ಷೆಗಿಂತ ಬಹಳ ಮೊದಲೇ ಮಾಧ್ಯಮಗಳು ಜನರಿಗೆ ತಿಳಿಸಿರುತ್ತವೆ. ಸಮಸ್ಯೆಗೆ ಸಿಲುಕಿರುವ ಅನೇಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿರುವ ಕ್ಯಾಮೆರಾಗಳ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಹೊರಜಗತ್ತಿಗೆ ತಿಳಿಸುವ ಕೆಲಸ ಮಾಡುತ್ತಿರುತ್ತಾರೆ ಎಂಬುದು ಇತ್ತೀಚಿನ ಅನೇಕ ಸಂದರ್ಭಗಳು ನಮಗೆ ತೋರಿಸಿಕೊಟ್ಟಿವೆ. ಇಷ್ಟಾಗಿಯೂ ಪ್ರಧಾನಿಯವರ ವೈಮಾನಿಕ ಸಮೀಕ್ಷೆಯ ಚಿತ್ರವನ್ನು ‘ಗಂಭೀರತೆಯನ್ನು ತೋರಿಸುವುದಕ್ಕಾಗಿ’ ಬದಲಾಯಿಸಬೇಕಾದ ಅನಿವಾರ್ಯತೆ ಪಿಐಬಿಗೆ ಏಕೆ ಬಂತು?

ನವೆಂಬರ್ ತಿಂಗಳಿನಲ್ಲಿ ನರೇಂದ್ರ ಮೋದಿ ಮಲೇಷ್ಯಾದಲ್ಲಿ ನಡೆದ ಆಸಿಯಾನ್ ಶೃಂಗದಲ್ಲಿ ಜಪಾನ್ ಪ್ರಧಾನಿಯನ್ನು ಭೇಟಿಯಾದ ಸಂದರ್ಭದ ಚಿತ್ರದ ಸುತ್ತಲೂ ಇಂಥದ್ದೊಂದು ವಿವಾದ ಸೃಷ್ಟಿಯಾಗಿತ್ತು. ಇಲ್ಲಿ ವಿವಾದಕ್ಕೆ ಕಾರಣವಾದದ್ದು ತಲೆಕೆಳಕಾಗಿದ್ದ ಭಾರತದ ಧ್ವಜ. ನರೇಂದ್ರ ಮೋದಿ ಮತ್ತು ಶಿಂಜೋ ಅಬೆ ಅವರು ಪರಸ್ಪರ ಕೈಕುಲುಕುತ್ತಿರುವಾಗ ಎಎನ್ಐ ವಾರ್ತಾ ಸಂಸ್ಥೆಯ ಛಾಯಾಗ್ರಹಕರು ತೆಗೆದ ಚಿತ್ರದಲ್ಲಿ ಭಾರತದ ಧ್ವಜ ತಲೆಕೆಳಗಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋಗಳಲ್ಲೂ ಭಾರತದ ಧ್ವಜ ತಲೆಕೆಳಗಿರುವುದು ಕಂಡುಬಂದಿತ್ತು. ಈ ವಿಚಾರವೂ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಯೇರಿದ ಚರ್ಚೆಗೆ ಗ್ರಾಸವಾಗಿತ್ತು. ಇದೇ ಸಮಾರಂಭದ ಚಿತ್ರವನ್ನು ಪಿಐಬಿ ಬಿಡುಗಡೆ ಮಾಡುವ ಹೊತ್ತಿಗೆ ಧ್ವಜ ಸರಿಯಾಗಿತ್ತು. ಇಲ್ಲಿಯೂ ಪಿಐಬಿ ‘ಫೋಟೋಶಾಪ್’ ತಂತ್ರವನ್ನು ಬಳಸಿದೆಯೇ ಎಂಬ ಪ್ರಶ್ನೆಯನ್ನು ಹಲವರು ಕೇಳಿದರು. ಇದಕ್ಕೆ ಅಧಿಕೃತ ಉತ್ತರವೊಂದು ಬರಲಿಲ್ಲವಾದರೂ ತಾರ್ಕಿಕ ಉತ್ತರವೊಂದನ್ನು ಯಾರು ಬೇಕಾದರೂ ಊಹಿಸಬಹುದು. ಎಎನ್ಐ ಛಾಯಾಗ್ರಾಹಕರು ಚಿತ್ರ ತೆಗೆಯುವ ಹೊತ್ತಿಗೆ ಆಗಿದ್ದ ತಪ್ಪನ್ನು ಮತ್ತೆ ಸರಿಪಡಿಸಿರುವ ಎಲ್ಲಾ ಸಾಧ್ಯತೆಗಳೂ ಇವೆ. ಈ ಕುರಿತಂತೆ ಪಿಐಬಿ ಒಂದು ಸ್ಪಷ್ಟನೆಯನ್ನು ನೀಡುವ ಅಗತ್ಯವಿತ್ತು. ಅದನ್ನೇಕೆ ಪಿಐಬಿ ಮಾಡಲಿಲ್ಲ ಎಂಬ ಪ್ರಶ್ನೆಗೆ ಮಾತ್ರ ಈ ತನಕ ಉತ್ತರ ದೊರೆತಿಲ್ಲ.

ಡಿಜಿಟಲ್ ತಂತ್ರಜ್ಞಾನ ಒಂದು ಕಾಲದಲ್ಲಿ ಅಸಾಧ್ಯ ಎಂದು ಭಾವಿಸಿದ್ದ ಅನೇಕ ಸಂಗತಿಗಳನ್ನು ಬಹಳ ಸುಲಭವಾಗಿ ಮಾಡುವ ಅವಕಾಶವನ್ನು ಒದಗಿಸಿಕೊಟ್ಟಿದೆ. ಚಲನಚಿತ್ರ ಲೋಕದಲ್ಲಂತೂ ಇದು ಅದ್ಭುತಗಳನ್ನು ಸೃಷ್ಟಿಸುತ್ತಿದೆ. ಛಾಯಾಗ್ರಹಣ ಎಂಬ ಮಾಧ್ಯಮವೀಗ ‘ಡಿಜಿಟಲ್ ಆರ್ಟ್’ ಎಂಬ ಹೊಸ ಕಲಾಪ್ರಕಾರವಾಗಿ ಬೆಳೆಯುವಂತೆ ಮಾಡಿದೆ. ಇವೆಲ್ಲವೂ ಸೃಜನಶೀಲತೆಗೆ ಸಂಬಂಧಿಸಿದ ವಿಚಾರಗಳು. ಆದರೆ ಈ ಸಾಧ್ಯತೆಯನ್ನು ಋಣಾತ್ಮಕವಾಗಿ ಬಳಸಿಕೊಂಡರೆ ಏನಾಗಬಹುದು ಎಂಬುದಕ್ಕೆ ಪಿಐಬಿಯ ‘ಎರಡು ಚಿತ್ರಗಳನ್ನು ಬೆಸೆಯುವ ತಂತ್ರ’ ಸಾಕ್ಷಿಯಾಗುತ್ತಿದೆ. ಪ್ರಧಾನಿಯವರ ವೈಮಾನಿಕ ಸಮೀಕ್ಷೆಯ ವೇಳೆ ಮೋಡ ಕವಿದಿದ್ದರಿಂದ ಏನೂ ಕಾಣಿಸಲಿಲ್ಲ ಎಂಬುದು ಸುದ್ದಿಯಾದರೆ ಪ್ರಧಾನಿಯವರ ಇಮೇಜ್‌ಗೆ ಧಕ್ಕೆ ಬರಬಹುದು ಎಂಬ ಪಿಐಬಿಯ ಯಾರೋ ಮೂರ್ಖ ಅಧಿಕಾರಿಯ ಚಿಂತನೆ ಇಂಥದ್ದೊಂದು ಅನಾಹುತಕ್ಕೆ ಕಾರಣವಾಗಿರಬಹುದು. ಡಿಜಿಟಲ್ ತಂತ್ರಜ್ಞಾನ ಎರಡು ಛಾಯಾಚಿತ್ರಗಳನ್ನು ಒಂದೇ ಆಗಿ ಕಾಣುವಂತೆ ಬೆಸೆಯುವ ಅವಕಾಶವನ್ನು ನೀಡಿರುವಂತೆಯೇ ಹೀಗೆ ಬೆಸೆದದ್ದನ್ನು ಪತ್ತೆ ಹಚ್ಚುವ ಸಾಧ್ಯತೆಯನ್ನೂ ಸೃಷ್ಟಿಸಿದೆ ಎಂಬುದನ್ನು ಇಂಥ ಅಧಿಕಾರಿಗಳು ಮರೆತಿರುತ್ತಾರೆ.


ಸರ್ವಾಧಿಕಾರಿ ಪ್ರಭುತ್ವಗಳ ‘ಸಂವಹನ ತಜ್ಞ’ರು ತಮ್ಮ ‘ನಾಯಕ’ರನ್ನು ಹೀಗೆಲ್ಲಾ ಕೃತಕ ತಂತ್ರಗಳನ್ನು ಬಳಸಿ ‘ದೊಡ್ಡವರನ್ನಾಗಿಸುವುದು’ ಇತಿಹಾಸದಲ್ಲಿ ಹೊಸತೇನೂ ಅಲ್ಲ. ಹಿಟ್ಲರ್‌ನ ಪ್ರಚಾರ ತಂತ್ರದ ರೂವಾರಿ ಗೋಬೆಲ್ಸ್ ಮಾಡುತ್ತಿದ್ದುದು ಇದನ್ನೇ. ಇತ್ತೀಚಿನ ವರ್ಷಗಳಲ್ಲಿ ಉತ್ತರ ಕೊರಿಯಾ ಇಂಥ ಚಿತ್ರಗಳನ್ನು ಪ್ರಕಟಿಸುವುದಕ್ಕೆ ಕುಖ್ಯಾತಿಗಳಿಸಿದೆ. ಚೀನಾ ಕೂಡಾ ಹೊರಜಗತ್ತಿನಲ್ಲಿ ತನ್ನ ಇಮೇಜ್ ವೃದ್ಧಿಸಿಕೊಳ್ಳಲು ಇದೇ ತಂತ್ರವನ್ನು ಬಳಸುತ್ತದೆ. ಭಾರತದಂಥ ಪ್ರಜಾಪ್ರಭುತ್ವವುಳ್ಳ ದೇಶದಲ್ಲಿ ಇದು ಸಂಭವಿಸುವುದು ಹೇಗೆ? ಈ ಪ್ರಶ್ನೆಗೆ ತಕ್ಷಣ ಹೊಳೆಯುವ ಉತ್ತರ ಒಂದೇ. ರಾಜಕಾರಣಿಗಳ ಹಿಂದಿರುವ ಭಟ್ಟಂಗಿಗಳು. ಈ ಭಟ್ಟಂಗಿತನ ಎಂಬುದು ಎಲ್ಲಾ ರಾಜಕೀಯ ಪಕ್ಷಗಳಿಗೆ ವ್ಯಾಪಿಸಿದೆ ಎಂಬುದು ಹಳೆಯ ಸಂಗತಿ. ಇದು ಸರ್ಕಾರಿ ಇಲಾಖೆಗಳ ಮಟ್ಟಕ್ಕೂ ವ್ಯಾಪಿಸಿರುವುದು ಇನ್ನೂ ದೊಡ್ಡ ದುರಂತ.

ಕಳೆದ ಲೋಕಸಭಾ ಚುನಾವಣೆಯ ಅವಧಿಯಲ್ಲಿ ಹೆಚ್ಚು ಕಡಿಮೆ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳೂ ತಮ್ಮ ಪ್ರಚಾರ ತಂತ್ರದ ಹೊಣೆಗಾರಿಕೆಯನ್ನು ‘ವೃತ್ತಿಪರ ಸಂವಹನ ತಜ್ಞ’ರಿಗೆ ಬಿಟ್ಟುಕೊಟ್ಟಿದ್ದವು. ಪರಿಣಾಮವಾಗಿ ಚುನಾವಣಾ ಪ್ರಚಾರದ ಮಾದರಿಯೇ ಬದಲಾಗಿಬಿಟ್ಟಿತು. ರಾಜಕೀಯ ಸಂವಹನಕ್ಕೆ ‘ಫೋಟೋಶಾಪ್’ ಅಧಿಕೃತ ಪ್ರವೇಶ ಪಡೆದದ್ದೇ ಈ ಸಂದರ್ಭದಲ್ಲಿ ಅನ್ನಿಸುತ್ತದೆ.

ರಾಜಕೀಯ ನಾಯಕರು ವಿರೋಧಿಗಳ ತಪ್ಪು ನಡೆಗಳನ್ನು ನೇರವಾಗಿ ಜನರೆದುರು ವಿಮರ್ಶಿಸುವ ಸಾಂಪ್ರದಾಯಿಕ ತಂತ್ರದ ಸ್ಥಾನದಲ್ಲಿ ಮುಖವಿಲ್ಲದ ಪಡೆಯೊಂದನ್ನು ಬಳಸಿ ವಿರೋಧಿಗಳನ್ನು ಕಟಕಿಯಾಡುವ, ಹಾಸ್ಯದ ವಸ್ತುವನ್ನಾಗಿಸುವ ತಂತ್ರವೊಂದು ನೆಲೆಗೊಂಡಿತು. ಇದು ಕೆಲವರಿಗೆ ತಕ್ಷಣದ ಲಾಭವನ್ನೇನೋ ತಂದುಕೊಟ್ಟಿತು. ಆದರೆ ರಾಜಕೀಯ ಸಂವಹನದ ಗಾಂಭೀರ್ಯ ಮಣ್ಣು ಪಾಲಾಯಿತು. ಇದರ ಪರಿಣಾಮವನ್ನು ನಾವೀಗ ಕಾಣುತ್ತಿದ್ದೇವೆ. ಜನಕ್ಕೆ ಮತ್ತಷ್ಟು ಕಟಕಿಗಳು, ನಗೆಹನಿಗಳು ಬೇಕಾಗಿವೆ. ಅದನ್ನು ಅವರೇ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಮನಮೋಹನ್ ಸಿಂಗ್ ಅವರಿಗೆ ಅನ್ವಯಿಸಲಾಗುತ್ತಿದ್ದ ಕಟಕಿಗಳ ಜಾಗಕ್ಕೆ ಈಗ ನರೇಂದ್ರ ಮೋದಿ ಬಂದಿದ್ದಾರೆ.

ಪಿಐಬಿ ಸರ್ಕಾರದ ಇಮೇಜ್ ವೃದ್ಧಿಸುವುದಕ್ಕಾಗಿ ಕೆಲಸ ಮಾಡುವ ಪ್ರಚಾರ ತಂತ್ರಜ್ಞರಿರುವ ಸಂಸ್ಥೆಯೇ ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರತಿಪಾದಿಸುವ ನೈತಿಕತೆಯ ಚೌಕಟ್ಟಿನೊಳಗೆ ಕೆಲಸ ಮಾಡುವ ಸರ್ಕಾರಿ ಸಂಸ್ಥೆಯೇ? ಸರ್ಕಾರ ಮತ್ತು ಮಾಧ್ಯಮಗಳ ನಡುವಣ ಸೇತುವೆಯಾಗಿ ವರ್ತಿಸಬೇಕಿದ್ದ ಸಂಸ್ಥೆಯೊಂದು ‘ಫೋಟೋಶಾಪ್ಡ್’ ಚಿತ್ರವನ್ನೇಕೆ ಟ್ವೀಟ್ ಮಾಡಿತು? ಪಿಐಬಿ ಕೇವಲ ಆಡಳಿತಾರೂಢರ ಪ್ರಚಾರ ಏಜೆನ್ಸಿ ಮಾತ್ರವೇ? ಅದನ್ನೊಂದು ಸ್ವತಂತ್ರ ಸರ್ಕಾರಿ ಸಂಸ್ಥೆಯನ್ನಾಗಿಯೇ ಉಳಿಸಿಕೊಳ್ಳಲು, ಅದು ಜನರಿಗೆ ಉತ್ತರದಾಯಿಯಾಗಿರುವಂತೆ ನೋಡಿಕೊಳ್ಳಲು ಏನು ಮಾಡಬೇಕು? ಎಂಬಂಥ ಪ್ರಶ್ನೆಗಳು ನಮಗೆ ಮುಖ್ಯವಾಗಬೇಕಿತ್ತು.

ಪಿಐಬಿ ಟ್ವೀಟ್ ಮಾಡಿದ ನರೇಂದ್ರ ಮೋದಿಯವರ ವೈಮಾನಿಕ ಸಮೀಕ್ಷೆಯ ಚಿತ್ರಗಳನ್ನು ಇನ್ನಷ್ಟು ಕೀಳು ಅಭಿರುಚಿಯಲ್ಲಿ ಫೋಟೋಶಾಪ್ ಮಾಡುವುದರಲ್ಲಿ ನಿರತವಾಗಿರುವ ಬಹುದೊಡ್ಡ ನೆಟಿಝನ್ ಸಮೂಹ, ಅದನ್ನು ರಣೋತ್ಸಾಹದಲ್ಲಿ ವಿರೋಧಿಸುವ ಭಕ್ತ ಗಡಣದ ಗದ್ದಲದಲ್ಲಿ ನಿಜಕ್ಕೂ ಮುಖ್ಯವಾಗಿರುವ ಪ್ರಶ್ನೆಗಳನ್ನು ಕೇಳುತ್ತಿರುವವರ ಧ್ವನಿ ಉಡುಗಿ ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT