ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಾಹಿಕ ಅತ್ಯಾಚಾರ ‘ಅಪರಾಧವಲ್ಲ’!

Last Updated 4 ಮೇ 2015, 19:30 IST
ಅಕ್ಷರ ಗಾತ್ರ

ಆಕೆ ಬೆಳಗಿನ ಹೊತ್ತು ಯಶಸ್ವಿ ಶಿಶುವೈದ್ಯೆ. ಆದರೆ ಗಂಡನಿಂದ ರಾತ್ರಿ ಹೊತ್ತು ಅತ್ಯಾಚಾರಕ್ಕೊಳಗಾಗುವ ಸಂತ್ರಸ್ತೆ. ವಿವಾಹ ಸಂಬಂಧದೊಳಗಿನ ಅತ್ಯಾಚಾರವನ್ನು ‘ಬಂಧ್  ಝರೋಕೆ’ (1997) ಹಿಂದಿ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಪ್ರಥಮ ನಿರ್ದೇಶಕಿ ಪ್ರೇಮಾ ಕಾರಂತ  ನಿರ್ವ ಹಿಸಿದ ರೀತಿ ಅತ್ಯಂತ ವಿಶಿಷ್ಟವಾಗಿತ್ತು.

ಈ ಚಿತ್ರಕಥೆಗೆ ಆಧಾರವಾದದ್ದು ಮತ್ತೊಬ್ಬರು ವಿಶ್ವಖ್ಯಾತಿಯ ಸಂವೇದನಾಶೀಲ ಇಂಗ್ಲಿಷ್ ಕಾದಂಬರಿಕಾರ್ತಿ ಶಶಿ ದೇಶಪಾಂಡೆ ಅವರ ಕಾದಂಬರಿ ‘ದಿ ಡಾರ್ಕ್ ಹೋಲ್ಸ್ಡ್ ನೋ ಟೆರರ್’’.  ಮನು ಜೊತೆಗೆ ಸರಿತಾದು ಪ್ರೇಮ ವಿವಾಹ. ಆದರೆ ವೃತ್ತಿಯಲ್ಲಿ ಯಶಸ್ಸು ಸಾಧಿಸಿದ ಪತ್ನಿಯ ಕುರಿತಾದ ಅಸೂಯೆ ಹಾಗೂ ಕಹಿಭಾವನೆಗಳನ್ನು ನಿರ್ವಹಿಸಿಕೊಳ್ಳಲಾಗದೆ ದೈಹಿಕವಾಗಿ ರಾತ್ರಿಯ ವೇಳೆ ಆಕೆಯನ್ನು ಮನು ಶೋಷಿಸತೊಡಗುತ್ತಾನೆ. ಪತ್ನಿಯನ್ನು ಸ್ವಾಧೀನಪಡಿಸಿಕೊಳ್ಳುವ, ನಿಗ್ರಹಿಸುವ ಅಸ್ತ್ರವಾಗಿ ‘ವೈವಾಹಿಕ ಅತ್ಯಾಚಾರ’ ಬಳಕೆಯಾಗುವುದನ್ನು ಈ ಚಿತ್ರ ಸೂಕ್ಷ್ಮವಾಗಿ ನಿರೂಪಿಸಿತ್ತು.

ಈ ಚಿತ್ರ ನೆನಪಾಗಲು ಕಾರಣ, ವೈವಾಹಿಕ ಅತ್ಯಾಚಾರ ಕುರಿತಂತೆ ಕಳೆದ ವಾರ ರಾಜ್ಯಸಭೆಯಲ್ಲಿ  ಕೇಂದ್ರ ಸರ್ಕಾರ ವ್ಯಕ್ತಪಡಿಸಿದ ನಿಲುವು. ‘ವೈವಾಹಿಕ ಅತ್ಯಾಚಾರವನ್ನು ಅಪರಾಧದ ವ್ಯಾಪ್ತಿಗೆ ತರಲಾಗುತ್ತದೆಯೇ’  ಎಂಬಂಥ ಪ್ರಶ್ನೆಯನ್ನು ಡಿಎಂಕೆ ಸಂಸತ್ ಸದಸ್ಯೆ ಕನಿಮೋಳಿ ಕೇಳಿದ್ದರು.  ಹಾಗೆಯೇ  ವಿವಾಹದೊಳಗಿನ ಅತ್ಯಾಚಾರವನ್ನು  ಕ್ರಿಮಿನಲ್ ಅಪರಾಧವೆಂದು ಭಾರತ ಪರಿಗಣಿಸಬೇಕು ಎಂದು ‘ಮಹಿಳೆ ಮೇಲಿನ ತಾರತಮ್ಯ ನಿವಾರಣೆ ವಿಶ್ವಸಂಸ್ಥೆ ಸಮಿತಿ’ ಶಿಫಾರಸು ಮಾಡಿರುವುದು ನಿಜವೇ ಎಂಬಂಥ ಪ್ರಶ್ನೆಯನ್ನು ಅವರು ಕೇಳಿದ್ದರು.

ಆದರೆ ಈ ಲಿಖಿತ ಪ್ರಶ್ನೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಎಚ್.ಪಿ. ಚೌಧರಿ ಅವರು ನೀಡಿದ ವಿವರಣೆ ಮಾತ್ರ ವಿವಾದಾತ್ಮಕವಾದದ್ದು. ಸಚಿವರು ಹೇಳಿದ ಮಾತುಗಳಿವು: ‘ಅಂತರರಾಷ್ಟ್ರೀಯವಾಗಿ ಗ್ರಹಿಸಲಾದ ವೈವಾಹಿಕ  ಅತ್ಯಾಚಾರ ಪರಿಕಲ್ಪನೆಯನ್ನು ಭಾರತೀಯ ಸಂದರ್ಭದಲ್ಲಿ ಸೂಕ್ತವಾಗಿ ಅನ್ವಯಿಸಲಾಗದು. ಇದಕ್ಕೆ ಹಲವು ಕಾರಣಗಳಿವೆ. ಶಿಕ್ಷಣದ ಮಟ್ಟ, ಅನಕ್ಷರತೆ,  ಬಡತನ, ಅಸಂಖ್ಯ ಸಾಮಾಜಿಕ ಕಟ್ಟುಪಾಡುಗಳು, ಮೌಲ್ಯಗಳು, ಧಾರ್ಮಿಕ ನಂಬಿಕೆಗಳು ಹಾಗೂ  ವಿವಾಹವನ್ನು ಪವಿತ್ರಬಂಧನವಾಗಿ ಪರಿಗಣಿಸುವ ಸಮಾಜದ ಮನೋಧರ್ಮ’ ಇತ್ಯಾದಿ. ‘ವಿವಾಹ  ಎಂಬುದು ಪವಿತ್ರ ಬಂಧನ’ ಎನ್ನುವ ಪರಿಕಲ್ಪನೆಗೆ  ಸರ್ಕಾರ ಹೆಚ್ಚು ಒತ್ತು ನೀಡಿದ್ದು ಸ್ಪಷ್ಟವಿತ್ತು.

ವಿವಾಹ ಬಂಧನ ‘ಪವಿತ್ರ’ ಸರಿ. ಆದರೆ ಅದರಿಂದ ವಿವಾಹ ಸಂಬಂಧದೊಳಗಿನ ಅಪರಾಧವೂ ‘ಪವಿತ್ರ’ವಾಗಿಬಿಡುತ್ತದೆಯೆ? ಮಹಿಳೆಯರನ್ನು ರಕ್ಷಿಸುವ ಕಾನೂನು ರಚಿಸದಿರಲು ಅನಕ್ಷರತೆ, ಬಡತನ ಹೇಗೆ ಆಧಾರಗ ಳಾಗು ತ್ತವೆ? ಎಂಬುದು ಪ್ರಶ್ನೆ. ಈ ಹಿಂದೆ ಮಹಿಳಾ ಹಕ್ಕುಗಳ ಹಿತರಕ್ಷಣೆಗಾಗಿ ಸತಿ ಹಾಗೂ ವರದಕ್ಷಿಣೆ ತಡೆ ಕಾನೂನುಗಳು ರಚನೆಯಾಗಿಲ್ಲವೆ? ಇವು  ಸಂಪ್ರದಾಯ ವೆಂಬ ಕಾರಣಕ್ಕೆ ಕಾನೂನು ಮಾಡದೇ ಬಿಟ್ಟಿಲ್ಲವಲ್ಲ? 

ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ರೀತಿಯಲ್ಲಿ  ಕೆಲವು ಉಗ್ರ ತುಂಡು ಸಂಘಟನೆಗಳಿಂದ ಇಂತಹ ಮಾತುಗಳು ಬಂದಿದ್ದರೆ  ಅದಕ್ಕೆ ಅವರಿಗಿರುವ ಪೂರ್ವಗ್ರಹಗಳು ಕಾರಣ ಎಂದು ಭಾವಿಸಿರಬಹುದಿತ್ತು, ಆದರೆ ಇಲ್ಲಿ ಇಂತಹ ಹೇಳಿಕೆ ನೀಡಿರುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರು ಎಂಬುದು ವಿಪರ್ಯಾಸ. ಸಚಿವರ ಈಗಿನ ಈ ದೃಷ್ಟಿಕೋನ ಹೊಸದೇನಲ್ಲ. ಈಗಾಗಲೇ ಅನೇಕ ಅತ್ಯಾಚಾರ ಪ್ರಕರಣಗಳಲ್ಲಿ ಇಂತಹ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಬರುತ್ತಿವೆ.

ಅತ್ಯಾಚಾರಿಗಳು ಸಾಮಾನ್ಯವಾಗಿ ತಮ್ಮ ಅಪರಾಧವನ್ನು ಸಮರ್ಥಿಸಿಕೊಳ್ಳುತ್ತಾರೆ. ಈಗ ಸರ್ಕಾರವೂ ಅದೇ ಚಿಂತನೆಯ ಧಾಟಿಯನ್ನು ಪ್ರದರ್ಶಿಸುತ್ತಿದೆ ಎಂದು ವ್ಯಾಖ್ಯಾನಿಸಬಹುದು. ಏಕೆಂದರೆ, ದೆಹಲಿ ವಿದ್ಯಾರ್ಥಿನಿಯ ಸಾಮೂಹಿಕ  ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ ಶಿಕ್ಷಗೊಳಗಾಗಿರುವ ಮುಕೇಶ್ ಸಿಂಗ್ ಸಹ ಅತ್ಯಾಚಾರವನ್ನು ಸಮರ್ಥಿಸಿಕೊಂಡಿದ್ದ. ತಿರುಗಾಡಲು ರಾತ್ರಿವೇಳೆ ಏಕೆ ಯುವತಿ ಮನೆಯಿಂದ ಹೊರಬಂದಿದ್ದಳು? ಅತ್ಯಾಚಾರಕ್ಕೆ ಆಕೆ  ಪ್ರತಿರೋಧ ತೋರದೆ ಸುಮ್ಮನಿರಬೇಕಿತ್ತು ಎಂದಾತ ಹೇಳಿದ್ದ.

ಈಗ, ವಿವಾಹ ಬಂಧನದ ಪಾವಿತ್ರ್ಯದ ನೆಪದಲ್ಲಿ ವೈವಾಹಿಕ ಅತ್ಯಾಚಾರವನ್ನು ಸಮರ್ಥಿಸುವ ಸಚಿವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೇವೆ. ಎಂದರೆ ಸರ್ಕಾರ  ಏನನ್ನು ಹೇಳಲು ಹೊರಟಿದೆ? ಪತ್ನಿಯ ಮೇಲೆ ಪತಿ  ಅತ್ಯಾಚಾರ ಎಸಗಿದಲ್ಲಿ ಅದು ತಪ್ಪಲ್ಲ  ಎಂದೇ? ಲೈಂಗಿಕ ಹಿಂಸೆಗಳಿಗೆ ವಿವಾಹ  ಎನ್ನುವುದು ಲೈಸೆನ್ಸ್ ಆಗುತ್ತದೆಯೆ?

ವಿವಾಹದೊಳಗಿನ ಅತ್ಯಾಚಾರ ಭಾರತದ ಸಂದರ್ಭದಲ್ಲಿ ಮುಖ್ಯವಾದದ್ದು. ಏಕೆಂದರೆ ಲಕ್ಷಾಂತರ ಬಾಲಕಿಯರು ಚಿಕ್ಕ ವಯಸ್ಸಿನಲ್ಲೇ  ಮದುವೆಯಾಗುತ್ತಾರೆ. ಈ ಹೆಣ್ಣುಮಕ್ಕ ಳಿಗೆ ಆರ್ಥಿಕ ಸ್ವಾತಂತ್ರ್ಯವಿರುವುದಿಲ್ಲ. ಗಂಡನಂತೆ ಸಮಾನ ಸ್ಥಾನಮಾನವೂ ಇರುವುದಿಲ್ಲ. ವೈವಾಹಿಕ ಸಂಬಂಧಗಳಲ್ಲಿ ಒಂದಲ್ಲ ಒಂದು ಹಂತದಲ್ಲಿ ಶೇ 75ರಷ್ಟು ಮಹಿಳೆಯರು ಅತ್ಯಾಚಾರಕ್ಕೆ ಗುರಿಯಾಗುವ ವರದಿಗಳಿವೆ.

ಇದನ್ನು  ಯುಎನ್ಎಫ್‌ಪಿಎ ಅಧ್ಯಯನ ದೃಢಪಡಿಸಿದೆ. ಹಾಗೆಯೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ದಾಖಲೆಗಳ ಪ್ರಕಾರ, ಭಾರತದ ಬಹುತೇಕ ಅತ್ಯಾಚಾರಿಗಳು ಪತಿಯಂದಿರೇ ಎಂಬ ಸಂಗತಿ ಗಾಬರಿ ಹುಟ್ಟಿಸುವಂತಹದ್ದು. 10 ಮಹಿಳೆಯರಲ್ಲಿ ಒಬ್ಬ ಮಹಿಳೆ ಕನಿಷ್ಠ ಒಂದು ಬಾರಿಯಾದರೂ ವೈವಾಹಿಕ ಅತ್ಯಾಚಾರಕ್ಕೊಳಪಟ್ಟಿದ್ದಾಳೆ ಎಂಬುದನ್ನು ಈ ವರದಿ ಹೇಳುತ್ತದೆ.

ಎಂದರೆ ನಾವು 21ನೇ ಶತಮಾನದಲ್ಲಿದ್ದೇವೆ. ಆದರೆ ಮಹಿಳೆ ಕುರಿತಂತೆ ಊಳಿಗಮಾನ್ಯ ದೃಷ್ಟಿಕೋನಗಳು ಬದಲಾಗಿಲ್ಲ ಎಂಬುದಕ್ಕೆ ಈ ಅಂಕಿಅಂಶಗಳು ಸಾಕ್ಷಿ. ಮತ್ತೊಬ್ಬರ ಮೇಲೆ ನಿಯಂತ್ರಣ ಸಾಧಿಸುವ ಅತ್ಯಂತ ಹೀನವಾದ ಕೃತ್ಯ ಅತ್ಯಾಚಾರ. ಆದರೆ ಅದಕ್ಕೆ ಸರ್ಕಾರವೇ ಮಂಜೂರಾತಿ ನೀಡುವುದು ನಾಗರಿಕತೆಯ ತತ್ವಗಳಿಗೆ ವಿರುದ್ಧವಾದದ್ದು.  ಅತ್ಯಾಚಾರ ಕಾನೂನುಗಳ ಪುನರ್ವಿಮರ್ಶೆ ಕುರಿತಂತೆ 2000 ದಲ್ಲಿ ಕಾನೂನು ಆಯೋಗ ಸಲ್ಲಿಸಿದ 172ನೇ ವರದಿಯು,  ಅತ್ಯಾಚಾರ ಆರೋಪಗಳಿಂದ ಪತಿಯನ್ನು ಹೊರಗಿಡಲು ಅವಕಾಶ ಇರುವ ರಿಯಾಯಿತಿಯನ್ನು ರದ್ದು ಮಾಡಬಾರದು ಎಂದು ಶಿಫಾರಸು ಮಾಡಿತ್ತು.

ಅದರಿಂದ ವೈವಾಹಿಕ ಸಂಬಂಧಗಳಲ್ಲಿ ಅತಿರೇಕದ ಹಸ್ತಕ್ಷೇಪವಾಗಬಹುದು ಎಂದು ವರದಿ ಅಭಿಪ್ರಾಯಪಟ್ಟಿತ್ತು. ಈಗ ಸರ್ಕಾರ ತನ್ನ ನಿಲುವು ಸಮರ್ಥಿಸಿಕೊಳ್ಳಲು  ಜಾಣತನದಿಂದ 15 ವರ್ಷಗಳ  ಹಿಂದಿನ ಈ  ವರದಿಯನ್ನು ಅವಲಂಬಿಸಿದೆ. ವೈವಾಹಿಕ ಅತ್ಯಾಚಾರವನ್ನು ಅಪರಾಧ ವ್ಯಾಪ್ತಿಗೆ ತರುವುದರಿಂದ ‘ವೈವಾಹಿಕ ಸಂಬಂಧದಲ್ಲಿ ಅತಿರೇಕದ ಹಸ್ತಕ್ಷೇಪವಾಗಿಬಿಡಬಹುದು’ ಎಂಬಂಥ ಸಂಕ್ಷಿಪ್ತ ಟಿಪ್ಪಣಿಯಷ್ಟೇ ಈ ವರದಿಯಲ್ಲಿದೆ.

ಆದರೆ ತೀರಾ ಇತ್ತೀಚಿನ (2013) ನ್ಯಾಯಮೂರ್ತಿ ಜೆ.ಎಸ್. ವರ್ಮಾ ಸಮಿತಿ ವರದಿಯನ್ನು ಸರ್ಕಾರ ಕಡೆಗಣಿಸಿರುವುದು, ಈ ಸಮಸ್ಯೆಗೆ ಮುಖಾಮುಖಿಯಾಗದೆ ನುಣುಚಿಕೊಳ್ಳುವ ಯತ್ನವಾಗಿದೆ. ನ್ಯಾಯಮೂರ್ತಿ ಜೆ.ಎಸ್.  ವರ್ಮಾ ಸಮಿತಿ ವರದಿ ವೈವಾಹಿಕ ಅತ್ಯಾಚಾರ ಚರ್ಚೆಗೆ ಆರು ಪುಟಗಳನ್ನು ಮೀಸಲಿಟ್ಟಿದೆ. ವಿವಾಹ ಸಂಬಂಧದೊಳಗಿನ ಅತ್ಯಾಚಾರವನ್ನು ಅಪರಾಧ ವ್ಯಾಪ್ತಿಗೆ ತರಬೇಕು ಎಂಬುದನ್ನು ವರ್ಮಾ ಸಮಿತಿ ಬೆಂಬಲಿಸುತ್ತದೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 375ರ ಪ್ರಕಾರ, 15 ವರ್ಷದ ಪತ್ನಿಯೊಂದಿಗೆ ಪತಿಯ ಲೈಂಗಿಕ ಸಂಪರ್ಕ ಅಪರಾಧವಲ್ಲ. ಇಲ್ಲಿರುವ ದೊಡ್ಡ ವೈರುಧ್ಯವನ್ನು ಗಮನಿಸಿ. ಕಾನೂನಿನ ಪ್ರಕಾರ ಹೆಣ್ಣುಮಕ್ಕಳಿಗೆ ಮದುವೆ ವಯಸ್ಸು 18. ಆದರೆ 15 ವರ್ಷದ ಚಿಕ್ಕ ವಯಸ್ಸಿನ ಬಾಲೆಯ ಜೊತೆ  ಸಮ್ಮತಿಯಿಲ್ಲದ ಲೈಂಗಿಕ ಕ್ರಿಯೆ, ಈ ಸೆಕ್ಷನ್ ಪ್ರಕಾರ ಪತಿಗೆ ಕಾನೂನುಬದ್ಧವಾಗುತ್ತದೆ. ವೈವಾಹಿಕ ಅತ್ಯಾಚಾರಕ್ಕೆ  ಬ್ರಿಟಿಷ್  ಆಡಳಿತ  ಶಿಕ್ಷೆಯಿಲ್ಲದಂತೆ ಮಾಡಿದ್ದಕ್ಕೆ ಕಾರಣವೇನು ಎಂಬುದನ್ನು ಗ್ರಹಿಸಲು ಕೇಂದ್ರ ಸಚಿವರು ಎಡವಿದ್ದಾರೆ.

ಇದಕ್ಕೆ ಕಾರಣ ಭಾರತೀಯರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದೇನೂ ಅಲ್ಲ. ಇಂಗ್ಲೆಂಡ್‌ನಲ್ಲಿನ ಆಗಿನ ಕಾನೂನುಗಳ ಪ್ರಕಾರವೂ,  ಪತಿ ಆಶ್ರಯದಲ್ಲಿರುವ ಪತ್ನಿ, ಪತಿ ಇಷ್ಟಾನುಸಾರ  ಲೈಂಗಿಕ ಕ್ರಿಯೆಗೆ ಸಮ್ಮತಿಸಿರುತ್ತಾಳೆ ಎಂಬುದು ಸಾಮಾನ್ಯ ಗ್ರಹಿಕೆಯಾಗಿತ್ತು. ಆದರೆ 1980 ಹಾಗೂ 1990ರ ದಶಕದಲ್ಲಿ ಈ ಸವಕಲು ಕಾನೂನಿನಲ್ಲಿ ಇರುವ ಲಿಂಗತ್ವ ಸಂವೇದನಾರಾಹಿತ್ಯವನ್ನು ಬ್ರಿಟನ್, ಅಮೆರಿಕ ಹಾಗೂ ಅನೇಕ ಕಾಮನ್ವೆಲ್ತ್ ರಾಷ್ಟ್ರಗಳು  ಮನಗಂಡು ವಿವಾಹ ಸಂಬಂಧದೊಳಗಿನ ಅತ್ಯಾಚಾರವನ್ನೂ ಅಪರಾಧವಾಗಿಸಿದವು. ಇದಕ್ಕೆ ತದ್ವಿರುದ್ಧವಾಗಿ ನಮ್ಮ ಕಾನೂನು ನಿರ್ಮಾಪಕರು,  ವೈವಾಹಿಕ ಅತ್ಯಾಚಾರ ಅಸ್ತಿತ್ವದಲ್ಲಿರುವ ವಾಸ್ತವವನ್ನೇ ಕಡೆಗಣಿಸುವುದನ್ನು ಮುಂದುವರಿಸಿದ್ದಾರೆ.

ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಎಲ್ಲಾ  ಸರ್ಕಾರಗಳೂ ವೈವಾಹಿಕ ಅತ್ಯಾಚಾರಕ್ಕೆ ಕುರುಡುಗಣ್ಣಾಗಿವೆ. ವಿವಾಹ ಸಂಬಂಧದೊಳಗಿನ ಅತ್ಯಾಚಾರವನ್ನು ಅಪರಾಧ ವ್ಯಾಪ್ತಿಗೆ ತರುವುದರಿಂದ ಅದು ವಿವಾಹ ಸಂಸ್ಥೆಯನ್ನು ನಾಶಗೊಳಿಸುವ ಸಾಧ್ಯತೆ ಇದೆ. ಇದರಿಂದ ಕುಟುಂಬ ವ್ಯವಸ್ಥೆಯ ಮೇಲೆ  ದುಷ್ಟಪರಿಣಾಮವಾಗುತ್ತದೆ ಎಂದು 2013ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಗೃಹ ವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ  ಸಮಿತಿ ವರದಿಯೂ ಹೇಳಿತ್ತು. ಸದ್ಯದ ಬಿಜೆಪಿ ಸರ್ಕಾರವೂ ಇದಕ್ಕೆ ಹೊರತಾಗಿಲ್ಲ.

1955ರ ಹಿಂದೂ ವಿವಾಹ ಕಾಯಿದೆ ಪ್ರಕಾರ, ಪತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವ ಕರ್ತವ್ಯ ವನ್ನು ಪತ್ನಿಗೆ ನೀಡಲಾಗಿದೆ. ಲೈಂಗಿಕ ಸಂಪರ್ಕ ತಿರಸ್ಕರಿಸುವ ಪತ್ನಿಯ ಪತಿಗೆ ‘ಮಾನಸಿಕ ಕ್ರೌರ್ಯ’ದ ಆಧಾರದ ಮೇಲೆ ವಿಚ್ಛೇದನ ತೆಗೆದುಕೊಳ್ಳುವ ಅವಕಾಶವಿದೆ.ಇದು ವಿಚಿತ್ರ ಸನ್ನಿವೇಶವನ್ನು ಸೃಷ್ಟಿಸಿದೆ. ಪತಿ ಜೊತೆ ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯಿಂದ ಪತಿಗೆ ಮಾನಸಿಕ ಕ್ರೌರ್ಯವಾಗುತ್ತದೆ. ಆದರೆ ಕುಡುಕ ಪತಿ ಗರ್ಭಿಣಿ ಪತ್ನಿಯ ಮೇಲೂ ಎಸಗಬಹುದಾದ ದೈಹಿಕ ದೌರ್ಜನ್ಯ ಭಾರತೀಯ ವಿವಾಹದ ಪವಿತ್ರ ಬಂಧನ ಎಂದು ಹೇಗೆ ಹೇಳುವುದು?

ಐಪಿಸಿ ಸೆಕ್ಷನ್ 376 ಬಿ ಪ್ರಕಾರ,  ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ಪ್ರತ್ಯೇಕವಾಗಿ ವಾಸಿಸುತ್ತಿರುವ ಪತ್ನಿಯ ಜೊತೆ ಆಕೆಯ ಸಮ್ಮತಿ ಇಲ್ಲದೆ ಲೈಂಗಿಕ ಸಂಬಂಧ ಹೊಂದಿದ ಪತಿಗೆ 2ರಿಂದ 7 ವರ್ಷಗಳ ಸೆರೆವಾಸ ಹಾಗೂ ದಂಡ ವಿಧಿಸಿ ಶಿಕ್ಷೆ ವಿಧಿಸಲಾಗುತ್ತದೆ. 1983ರಿಂದ ಜಾರಿಗೆ ಬಂದಿರುವ  ಈ  ಸೆಕ್ಷನ್ 376 ಬಿ, ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಮಹಿಳೆಯರ ಕಾಳಜಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.  ಆದರೆ ಶಾಸನಾತ್ಮಕವಾದ ವೈವಾಹಿಕ ಸಂಬಂಧಗಳಲ್ಲಿ ದಿನನಿತ್ಯ  ಘನತೆಗೆ ಕುಂದು ತರುವಂತಹ ಲೈಂಗಿಕ ಅವಮಾನವನ್ನು ಎದುರಿಸುವ ಮಹಿಳೆಯರಿಗೆ ಹೇಗೆ ಇದು ನೆರವಾಗಬಲ್ಲುದು?

ಈ ವಿಷಯದಲ್ಲಿ ನ್ಯಾಯಾಂಗವೂ ಪ್ರಗತಿಪರವಾಗಿಲ್ಲ. ಈ ವರ್ಷದ ಆರಂಭದಲ್ಲಿ ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ ಅಪರಾಧವಾಗಿ ಘೋಷಿಸಬೇಕೆಂಬ ಮಹಿಳೆಯೊಬ್ಬರ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಭಾರತೀಯ ನ್ಯಾಯಾಂಗವೂ, ಪವಿತ್ರ ಬಂಧನ ಎಂಬ ನೆಲೆಯಲ್ಲೇ ವಿವಾಹವನ್ನು  ಪರಿಭಾವಿಸುತ್ತದೆ.

2004ರಲ್ಲಿ ಸಾಕ್ಷಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ವಿದೇಶಿ ಕಾನೂನುಗಳನ್ನು ಅಳವಡಿಸಿಕೊಳ್ಳುವುದು ಹಾಗೂ  ‘ವೈವಾಹಿಕ ಅತ್ಯಾಚಾರ’ವನ್ನು, ಅಪರಾಧವಾಗಿ ಪರಿಗಣಿಸುವ ವಿಚಾರ ಭಾರತಕ್ಕೆ ಸೂಕ್ತವಾದುದಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿತ್ತು. 2005ರ ಕೌಟುಂಬಿಕ ಹಿಂಸಾಚಾರ ಕಾಯಿದೆ ಜಾರಿಯಾಗಿ 10 ವರ್ಷಗಳಾಗಿವೆ. ಮನೆಯೊಳಗಿನ ಲೈಂಗಿಕ ಹಿಂಸಾಚಾರದಿಂದ ರಕ್ಷಣೆ ಪಡೆಯಲು ಮಹಿಳೆಗೆ ಇದರಿಂದ ರಕ್ಷಣೆ ಇದೆ.  ಆದರೆ  ಈ ಅವಕಾಶಗಳು ಹೆಚ್ಚಾಗಿ ಬಳಕೆಯಾಗಿಲ್ಲ ಎಂಬುದು ವಾಸ್ತವ.

ಭಾರತೀಯ ಸಮಾಜ ತೀವ್ರಗತಿಯಲ್ಲಿ ಬದಲಾಗುತ್ತಿದೆ  ಹೆಣ್ಣಿನ ಕುರಿತಾದ ಲಿಂಗತ್ವದ ಪಡಿಯಚ್ಚಿನ ಪಾತ್ರಗಳು ಬದಲಾಗುತ್ತಿವೆ. ಹಿಂಸಾಚಾರವನ್ನು ಅಂತರ್ಗತವಾಗಿಸಿಕೊಳ್ಳು ವಂತಹ ವಿವಾಹ ಸಂಬಂಧ ಪವಿತ್ರವಾಗುವುದು ಸಾಧ್ಯವಿಲ್ಲ.  ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾದ ಅಮೆರಿಕ  ಸಲಿಂಗ ವಿವಾಹ ಕಾನೂನುಬದ್ಧಗೊಳಿಸುವ ವಿಚಾರವನ್ನು ಚರ್ಚಿಸು ತ್ತಿದೆ.

ಇಂತಹ ಸಂದರ್ಭದಲ್ಲಿ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ವೈವಾಹಿಕ ಅತ್ಯಾಚಾರ ವಿಚಾರದಲ್ಲಿ ಸಾಂಪ್ರದಾಯಿಕ ನಿಲುವಿಗೆ ಅಂಟಿಕೊಂಡಿರುವುದು ವಿಪ ರ್ಯಾಸ. ಸಂಪ್ರದಾಯವೇ ಮೇಲುಗೈ ಸಾಧಿಸಿದಲ್ಲಿ ದಲಿತರು ಈಗಲೂ  ಅಸ್ಪೃಶ್ಯರಾಗಿಯೇ ಉಳಿಯಬೇಕಾಗುತ್ತದೆ. ಪ್ರಗತಿಪರ ರಾಷ್ಟ್ರಗಳಲ್ಲಿ ವೈವಾಹಿಕ ಅತ್ಯಾಚಾರ ಕಾನೂನುಗಳು ಅಸ್ತಿತ್ವದಲ್ಲಿವೆ.

ಕೆಲವು ಮಹಿಳೆಯರು ಕಾನೂನು ದುರುಪಯೋಗ ಮಾಡಿಕೊಳ್ಳುತ್ತಾರೆಂದು ಕಾನೂನುಗಳನ್ನೇ ಮಾಡದಿರುವುದು ಎಷ್ಟು ಸರಿ? ಕನಿಷ್ಠ ವೈವಾಹಿಕ ಅತ್ಯಾಚಾರ ಎಂಬುದು ಸಮಾಜದೊಳಗೆ ಅಸ್ತಿತ್ವದಲ್ಲಿದೆ ಎಂಬುದನ್ನು ಸರ್ಕಾರ ಮೊದಲು ಗ್ರಹಿಸಬೇಕು. ವೈವಾಹಿಕ ಅತ್ಯಾಚಾರದ ಸುತ್ತ ಮೌನದ ಪದರಗಳಿವೆ. ಪರದೆಗಳಿವೆ. ಈ ಮೌನದ ಮೊಗ್ಗೊಡೆಯುವುದು  ಆಗಬೇಕಾಗಿರುವ ಕೆಲಸ.
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT