ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವ್ಯಾಪಂ’ ಕುರಿತು ಸಿಬಿಐ ತನಿಖೆ ಏಕಿಲ್ಲ?

Last Updated 16 ಜೂನ್ 2018, 9:12 IST
ಅಕ್ಷರ ಗಾತ್ರ

ಈ ಹಗರಣದಲ್ಲಿ ಬರೀ ಹಣದ ಪಾತ್ರವಿಲ್ಲ. ಅನೇಕರ ಜೀವಗಳೂ ಹೋಗಿವೆ. ಹಗರಣದಲ್ಲಿ ಭಾಗಿಯಾದ ಆರೋಪ ಹೊತ್ತವರು ಜೈಲಿನೊಳಗೆ ಹಾಗೂ ಹೊರಗೆ ನಿಗೂಢವಾಗಿ ಸಾಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದನ್ನು ತೀವ್ರವಾಗಿ ಪರಿಗಣಿಸದಿದ್ದರೆ ಸಾವಿನ ಸರಣಿ ಮುಂದುವರಿಯುವ ಅಪಾಯವಿದೆ. ₨ 2 ಸಾವಿರ ಕೋಟಿ ಮೊತ್ತದ ಹಗರಣ; 45ಕ್ಕೂ ಹೆಚ್ಚು ಜನರ ಪ್ರಾಣವನ್ನೂ ನುಂಗಿದೆ!

ನೈತಿಕತೆಗೆ ರಾಜಕಾರಣದಲ್ಲಿ ಬೆಲೆ ಇಲ್ಲ. ಅದಕ್ಕೇನಾದರೂ ಬೆಲೆ ಇದ್ದಿದ್ದರೆ ಬಹುತೇಕ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ರಾಜೀನಾಮೆ ಕೊಟ್ಟು ಮನೆಯಲ್ಲಿ ಕೂತಿರುತ್ತಿದ್ದರು. ರಾಜಕಾರಣ ಇಷ್ಟೊಂದು ಹದಗೆಡುತ್ತಿರಲಿಲ್ಲ. ಯುಪಿಎ ಸರ್ಕಾರದ ಹಗರಣಗಳಿಂದ ಹತಾಶೆಗೊಳಗಾಗಿದ್ದ ಜನರಿಗೆ ಕಳೆದ ವರ್ಷ ಬಿಜೆಪಿ ಮತ್ತು ಎಎಪಿ ಸ್ವಲ್ಪ ಭರವಸೆ ಹುಟ್ಟಿಸಿದ್ದವು. ಜನರೂ ಹೊಸ ಭರವಸೆಯಿಂದ ಅವುಗಳತ್ತ ನೋಡಿದ್ದರು. ಲೋಕಸಭೆಯಲ್ಲಿ ಬಿಜೆಪಿಗೆ, ದೆಹಲಿ ವಿಧಾನಸಭೆಯಲ್ಲಿ ಎಎಪಿಗೆ ಬೆಂಬಲ ಕೊಟ್ಟರು. ಈ ಪಕ್ಷಗಳ ನಾಯಕರೂ ಕೊಟ್ಟ ಮಾತು ತಪ್ಪಿದ್ದಾರೆ. ಪಾರದರ್ಶಕ, ಹಾಗೂ ಸ್ವಚ್ಛ ಆಡಳಿತದ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದು, ನಿರಾಸೆ ಮಾಡಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಮೂರು ವಾರಗಳಿಂದ ಲಲಿತ್‌ ಮೋದಿ ವಿವಾದ ಕಂಟಕವಾಗಿ ಕಾಡಿತ್ತು. ಈಗದು ತಣ್ಣಗಾಗಿದೆ. ಅದರ ಜಾಗವನ್ನು ಮತ್ತೊಂದು ವಿವಾದ ಆಕ್ರಮಿಸಿಕೊಂಡಿದೆ.  ಮಧ್ಯ ಪ್ರದೇಶದಲ್ಲಿ ಕಳೆದ ಏಳೆಂಟು ವರ್ಷಗಳಿಂದ ವೃತ್ತಿ ಶಿಕ್ಷಣ ಕೋರ್ಸ್‌ ಪ್ರವೇಶ, ಸರ್ಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರಗಳು ನಡೆದಿವೆ. ರಾಜ್ಯ ಸರ್ಕಾರದ ‘ವ್ಯವಸಾಯಿಕ್‌ ಪರೀಕ್ಷಾ ಮಂಡಲ್‌’ ಅಥವಾ ‘ವ್ಯಾಪಂ’ ಸಂಸ್ಥೆ ನಡೆಸಿರುವ ಅಕ್ರಮಗಳು ವ್ಯಾಪಕ ಪ್ರಚಾರ ಪಡೆಯುತ್ತಿವೆ. ಎರಡು ವರ್ಷದ ಹಿಂದೆ ಬಯಲಿಗೆ ಬಂದ ಹಗರಣ ಕುರಿತ ತನಿಖೆ ರಾಜ್ಯ ಹೈಕೋರ್ಟ್‌ ಮೇಲುಸ್ತುವಾರಿಯಲ್ಲಿ ನಡೆಯುತ್ತಿದೆ. ಅದಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ.

ಎರಡು ಸಾವಿರ ಜನರನ್ನು ಇದುವರೆಗೆ ಬಂಧಿಸಲಾಗಿದೆ. ಇನ್ನೂ ದೊಡ್ಡ ಸಂಖ್ಯೆಯಲ್ಲಿ ಆರೋಪಿಗಳಿದ್ದಾರೆ.  ಮಧ್ಯಪ್ರದೇಶದ ಪ್ರಭಾವಿ ಮಾಜಿ ಸಚಿವರು, ಅಧಿಕಾರಿಗಳು ಬಂಧಿತರಲ್ಲಿ ಸೇರಿದ್ದಾರೆ. ಅತ್ಯಂತ ಆತಂಕಕಾರಿ ವಿಷಯವೆಂದರೆ, ಹಗರಣ ಈವರೆಗೆ 45ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಈ ಹಗರಣದ ತನಿಖೆಗೆ ಹೋಗಿದ್ದ ಪ್ರಮುಖ ಹಿಂದಿ ಟೆಲಿವಿಷನ್‌ ಚಾನೆಲ್‌ವೊಂದರ ವಿಶೇಷ ಪ್ರತಿನಿಧಿ ಅಕ್ಷಯ್‌ ಸಿಂಗ್‌ ಶನಿವಾರ ಸತ್ತಿದ್ದಾರೆ. ಹಗರಣಕ್ಕೆ ಸಂಬಂಧಪಟ್ಟ ಮತ್ತಿಬ್ಬರು ಕಳೆದ ವಾರ ಮೃತಪಟ್ಟಿದ್ದಾರೆ. ಮಧ್ಯಪ್ರದೇಶ ರಾಜ್ಯಪಾಲ ರಾಂನರೇಶ್‌ ಯಾದವ್ ಅವರ ಪುತ್ರ ಶೈಲೇಶ್‌ ಯಾದವ್ ಅವರೂ ಸತ್ತವರಲ್ಲಿ ಸೇರಿದ್ದಾರೆ. ಇನ್ನೂ ಅನೇಕರಿಗೆ ಜೀವಭಯ ಕಾಡುತ್ತಿದೆ.

ಹಗರಣದ ‘ಶಿಳ್ಳೆ’ಗಾರರೂ ಸೇರಿದಂತೆ ಪ್ರಮುಖರಿಗೆ ಭದ್ರತೆ ಒದಗಿಸಲಾಗಿದೆ. ಅದೂ ತೋರುವುದಕ್ಕೆ ಮಾತ್ರ. ರಾಜ್ಯ ಸರ್ಕಾರ ಪ್ರತಿಯೊಬ್ಬರ ಸಾವಿಗೂ ಒಂದೊಂದು ಕಾರಣ ಹೇಳುತ್ತಿದೆ. ಎಲ್ಲ ಪ್ರಕರಣಗಳನ್ನು ‘ಸಹಜ ಸಾವು’ ಎಂದು ಪ್ರತಿಪಾದಿಸಲು ಅದು ಹೊರಟಿರುವುದು ತಮಾಷೆ ಆಗಿ ಕಾಣುತ್ತಿದೆ. ಪ್ರತಿಯೊಬ್ಬರ ಸಾವಿನ ಹಿಂದಿನ ನಿಗೂಢತೆಯನ್ನು ಭೇದಿಸಬೇಕಿದೆ.  ಈ ಕೆಲಸ ಮಾಡುವವರು ಯಾರು? ರಾಜ್ಯದ ಗೃಹ ಸಚಿವ ಬಾಬುಲಾಲ್ ಗೌರ್‌ ಈಗಾಗಲೇ ಸಾವಿನ ಪ್ರಕರಣಗಳಲ್ಲಿ ‘ಅಂತಿಮ ತೀರ್ಪು’ ನೀಡಿದ್ದಾರೆ. ಎಲ್ಲರದ್ದೂ ‘ಸ್ವಾಭಾವಿಕ ಸಾವು’ ಎಂದು ತೀರ್ಮಾನಿಸಿದ್ದಾರೆ.  ಜನರ ಜೀವದ ಜತೆ ಚೆಲ್ಲಾಟ ಆಡುತ್ತಿರುವ ಗೃಹ ಸಚಿವರ ನಿರ್ಧಾರದ ವಿರುದ್ಧ ಹೋಗುವ ಧೈರ್ಯ ತನಿಖಾ ತಂಡಕ್ಕೆ ಇದೆಯೇ? ಗೃಹ ಸಚಿವರ ಹೇಳಿಕೆ ಸರ್ಕಾರದ ಅಭಿಪ್ರಾಯವೇ ಆಗಿರುತ್ತದೆ. ಮುಖ್ಯಮಂತ್ರಿ ನಿಲುವನ್ನೇ ಅವರೂ ಪ್ರತಿಪಾದನೆ ಮಾಡಿರುತ್ತಾರೆ. ಅದೇ ಕಾರಣಕ್ಕೆ ಹಗರಣ ಕುರಿತು ಸ್ವತಂತ್ರ ತನಿಖೆ ನಡೆಯಬೇಕು. ಸುಪ್ರೀಂ ಕೋರ್ಟ್‌ ತನಿಖೆ ಮೇಲ್ವಿಚಾರಣೆ ಹೊರಬೇಕೆಂಬ ಒತ್ತಾಯ ಬಂದಿದೆ.

‘ವ್ಯಾಪಂ’, ಎರಡು ಸಾವಿರ ಕೋಟಿ ರೂಪಾಯಿ ಮೊತ್ತದ ಹಗರಣ. ದೊಡ್ಡ ಪ್ರಮಾಣದ ಲಂಚದಲ್ಲಿ  ಅನೇಕರು ಪಾಲು ಪಡೆದಿದ್ದಾರೆಂಬ ಆರೋಪಗಳಿವೆ. ಹಲವು ಪ್ರಭಾವಿಗಳೂ ಭಾಗಿಯಾಗಿದ್ದಾರೆ. ರಾಜ್ಯಪಾಲರ ಮೇಲೂ ಸಂಶಯವಿದೆ. ಅವರಿಗೆ ಸಂವಿಧಾನ ರಕ್ಷಣೆ ಇರುವುದರಿಂದ ಹೈಕೋರ್ಟ್‌ ಎಫ್‌ಐಆರ್‌ ರದ್ದುಪಡಿಸಿದೆ. ಯಾದವ್‌ ನಿವೃತ್ತಿ ಬಳಿಕ ವಿಚಾರಣೆ ನಡೆಸುವುದಾಗಿ ತನಿಖಾ ತಂಡದ ಮುಖ್ಯಸ್ಥರು ಹೇಳಿದ್ದಾರೆ.
ರಾಂನರೇಶ್ ಅವರನ್ನು ರಾಜ್ಯಪಾಲರಾಗಿ ನೇಮಿಸಿದ್ದು ಯುಪಿಎ ಸರ್ಕಾರ. ಹಿಂದಿನ ಸರ್ಕಾರ ನೇಮಿಸಿದ್ದ ಬಹಳಷ್ಟು ರಾಜ್ಯಪಾಲರನ್ನು ಎನ್‌ಡಿಎ ಬದಲಾಯಿಸಿದೆ. ಮಧ್ಯಪ್ರದೇಶ ರಾಜ್ಯಪಾಲರನ್ನು ಮಾತ್ರ ಮುಂದುವರಿಸಿದೆ. ಅವರನ್ನು ಯಾಕೆ ಮುಂದುವರಿಸಲಾಗಿದೆ ಎನ್ನುವುದು ಯಕ್ಷ ಪ್ರಶ್ನೆ. ಯಾದವ್‌, ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಮುಖ್ಯಮಂತ್ರಿ ಜತೆಗೂ ಸೌಹಾರ್ದ ಬಾಂಧವ್ಯ ಇಟ್ಟುಕೊಂಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗಿದೆ. ಮುಂದಿನ ವರ್ಷ ಜೂನ್‌ ತಿಂಗಳಲ್ಲಿ ರಾಜ್ಯಪಾಲರು ನಿವೃತ್ತಿ ಆಗಲಿದ್ದಾರೆ. ಅಲ್ಲಿವರೆಗೂ ತನಿಖಾಧಿಕಾರಿಗಳು ಕಾಯಬೇಕು. ಆ ನಂತರ ವಿಚಾರಣೆಗೆ ಒಳಪಡಿಸಬೇಕು.

ಇನ್ನೊಂದು ವರ್ಷ ಕಾಯುವುದೆಂದರೆ ತನಿಖೆ ಎಷ್ಟೊಂದು ವಿಳಂಬವಾಗಬಹುದು? ರಾಂನರೇಶ್‌ ‌ ತಮ್ಮ ಮೇಲೆ ಆರೋಪ ಬಂದ ತಕ್ಷಣ ರಾಜ್ಯಪಾಲರ ಹುದ್ದೆ ತ್ಯಜಿಸಬೇಕಿತ್ತು. ಹಾಗೆ ಮಾಡಿದ್ದರೆ ಸತ್ಸಂಪ್ರದಾಯ ಪಾಲನೆ ಮಾಡಿದಂತೆ ಆಗುತ್ತಿತ್ತು. ಸದ್ಯದ ಪರಿಸ್ಥಿತಿ ನೋಡಿದರೆ ಅವರು ರಾಜಭವನ ತ್ಯಜಿಸುವ ಲಕ್ಷಣವಿಲ್ಲ. ಹಿಂದೆ ‘ಕಾಮನ್ವೆಲ್ತ್ ಕ್ರೀಡಾ ಕೂಟ’ದ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂಬ ಸುಳಿವು ಸಿಕ್ಕ ಬಳಿಕ ಯುಪಿಎ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಿತು ಎನ್ನುವ ಟೀಕೆಗಳೂ ಇವೆ. ರಾಜಭವನ ಹೇಗೆ ಬಳಕೆಯಾಗುತ್ತದೆ ಎನ್ನುವುದಕ್ಕೆ ಈ ನಿದರ್ಶನಗಳು ಸಾಕು.  ವ್ಯಾಪಂ ಹಗರಣ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಕೊರಳಿಗೂ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌, ‘ಹಗರಣದಲ್ಲಿ ಚೌಹಾಣ್‌ ಕುಟುಂಬ ಸದಸ್ಯರ ಪಾತ್ರವಿದೆ’ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಅವರ ಪತ್ನಿ ಸಾಧನಾ ಸಿಂಗ್‌ ಅವರ ಮೊಬೈಲ್‌ನಿಂದ ಹೋಗಿರುವ ಎಸ್‌ಎಂಎಸ್‌ ಸಂದೇಶವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ದಿಗ್ವಿಜಯ್‌ ನಿಯೋಗದಲ್ಲಿ ಕಂಡು, ಮುಖ್ಯಮಂತ್ರಿ ವಿರುದ್ಧದ ದಾಖಲೆಗಳನ್ನು ನೀಡಿದ್ದಾರೆ.

ಇದು ದೇಶದ ಅತ್ಯಂತ ಗಂಭೀರವಾದ ಹಗರಣ. ಇದರಲ್ಲಿ ಬರೀ ಹಣದ ಪಾತ್ರವಿಲ್ಲ. ಅನೇಕರ ಜೀವಗಳೂ ಹೋಗಿವೆ. ಹಗರಣದಲ್ಲಿ ಭಾಗಿಯಾದ ಆರೋಪ ಹೊತ್ತವರು ಜೈಲಿನೊಳಗೆ ಹಾಗೂ ಹೊರಗೆ ನಿಗೂಢವಾಗಿ ಸಾಯುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸಾವಿನ ಸರಣಿ ಮುಂದುವರಿಯುವ ಅಪಾಯವಿದೆ. ವ್ಯಾಪಂ ತನಿಖೆ ನಡೆಸುತ್ತಿರುವ ತನಿಖಾ ತಂಡ ನೇರವಾಗಿ ಮುಖ್ಯಮಂತ್ರಿ ಅಧೀನಕ್ಕೊಳಪಡುವುದರಿಂದ ನಿಷ್ಪಕ್ಷಪಾತ ತನಿಖೆ ಕುರಿತು ಶಂಕೆ ವ್ಯಕ್ತವಾಗಿದೆ. ರಾಜಭವನ, ಹಿರಿಯ ಅಧಿಕಾರಿಗಳು, ಮಾಜಿ ಮಂತ್ರಿಗಳು ಹಗರಣದಲ್ಲಿ ಭಾಗಿಯಾಗಿರುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಯುವ ಕುರಿತು ಸಂಶಯ ತಲೆದೋರಿದೆ. ಈ ಹಗರಣ ಮಧ್ಯಪ್ರದೇಶದಲ್ಲಿ ಅಷ್ಟೇ ಅಲ್ಲ, ನೆರೆಹೊರೆಯ ರಾಜ್ಯಗಳಿಗೂ ಹರಡಿಕೊಂಡಿದೆ. ಕೆಲ ವಿದ್ಯಾರ್ಥಿಗಳ ಬದಲಿಗೆ ಪರೀಕ್ಷೆ ಬರೆಯಲು ಬಂದವರು ನೆರೆಹೊರೆಯ ರಾಜ್ಯಗಳವರು. ಇದರಿಂದಾಗಿ ಕೇಂದ್ರ ತನಿಖಾ ದಳ ಅಥವಾ ಸ್ವತಂತ್ರ ತನಿಖಾ ತಂಡದಿಂದ ತನಿಖೆ ನಡೆಯುವ ಅಗತ್ಯವಿದೆ.

ಸಿಬಿಐ, ಎರಡನೇ ತಲೆಮಾರಿನ ತರಂಗಾಂತರ, ಕಲ್ಲಿದ್ದಲು ಹಾಗೂ ಕಾಮನ್ವೆಲ್ತ್ ಕ್ರೀಡಾಕೂಟ ಒಳಗೊಂಡಂತೆ ಪ್ರಮುಖ ಹಗರಣಗಳ ತನಿಖೆ ನಡೆಸುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಹಸ್ತಾಂತರ ಆಗಿರುವ  ಪ್ರಕರಣಗಳ ಹೊರೆ ಬಿದ್ದಿರುವುದರಿಂದ ಅದರ ಮೇಲಿನ ಒತ್ತಡ ಹೆಚ್ಚಿದೆ. ಅಲ್ಲದೆ, ಬಹುತೇಕರಿಗೆ ಸಿಬಿಐ ವಿಶ್ವಾಸಾರ್ಹತೆ ಬಗ್ಗೆ ಅಪನಂಬಿಕೆ. ಅಕಸ್ಮಾತ್‌ ಈ ಹಗರಣವನ್ನು ಸಿಬಿಐಗೆ ಕೊಟ್ಟರೂ, ಸುಪ್ರೀಂ ಕೋರ್ಟ್‌ ಸಮಕ್ಷಮದಲ್ಲಿ ತನಿಖೆ ನಡೆಯಬೇಕೆಂದು ಒತ್ತಾಯ ಮಾಡುತ್ತಿರುವುದು ಅದೇ ಕಾರಣಕ್ಕೆ. ಸುಪ್ರೀಂ ಕೋರ್ಟ್‌ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯದಿದ್ದರೆ, ಸರ್ಕಾರ ತನಿಖಾ ದಳದ ಮೇಲೆ ಪ್ರಭಾವ ಬೀರಬಹುದು ಎಂಬ ಕಳವಳ ಕಾಂಗ್ರೆಸ್‌ ಪಕ್ಷಕ್ಕಿದೆ. ಆ ಪಕ್ಷ ಅಧಿಕಾರದಲ್ಲಿದ್ದಾಗಲೂ ಮಾಡಿದ್ದು ಅದನ್ನೇ.  ಸಿಬಿಐ ಅನ್ನು ತನಗೆ ಬೇಕಾದಂತೆ ಬಳಸಿಕೊಂಡಿದ್ದು ಸುಳ್ಳೇನಲ್ಲ. ಈ  ಪ್ರಕರಣವನ್ನು ಸಿಬಿಐಗಾದರೂ ಕೊಡಲಿ ಅಥವಾ ಸ್ವತಂತ್ರವಾದ ತನಿಖೆಯಾದರೂ ನಡೆಸಲಿ, ಮೊದಲು ಅದನ್ನು ರಾಜ್ಯದಿಂದ ವಾಪಸ್‌ ಪಡೆಯಬೇಕು. ಹೊರಗಿನ ತನಿಖೆ ನಡೆಯಬೇಕು ಎನ್ನುವುದು ನ್ಯಾಯಸಮ್ಮತ ಬೇಡಿಕೆ.

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ್‌ ಅವರ ರಾಜಕೀಯ ಅಜ್ಞಾತವಾಸಕ್ಕೆ ಕಾರಣವಾದ ಮೇವು ಹಗರಣ ಮತ್ತು ಹರಿಯಾಣ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್‌ ಚೌತಾಲಾ, ಅವರ ಪುತ್ರ ಅಜಯ್‌ ಚೌತಾಲ ಅವರ ಶಿಕ್ಷಕರ ನೇಮಕಾತಿ ಹಗರಣ ವ್ಯಾಪಂಗೆ ಹೋಲಿಸಿದರೆ  ದೊಡ್ಡದೇನೂ ಅಲ್ಲ. ಮೇವು ಹಗರಣ 950 ಕೋಟಿ ರೂಪಾಯಿ ವ್ಯವಹಾರ. ಈ ವ್ಯವಹಾರದಲ್ಲೂ ಸರ್ಕಾರದ ಹಿರಿಯ ಅಧಿಕಾರಿಗಳು, ಪಶು ಸಂಗೋಪನಾ ಇಲಾಖೆಗೆ ಮೇವು, ಔಷಧ ಪೂರೈಸಿರುವ ಗುತ್ತಿಗೆದಾರರು ಭಾಗಿಯಾಗಿದ್ದಾರೆ. ಆರೋಪಿಗಳನ್ನು ರಕ್ಷಣೆ ಮಾಡಿದ ಆರೋಪ ಲಾಲುಪ್ರಸಾದ್‌ ಅವರ ಮೇಲಿದೆ. ಮೇವು ಹಗರಣದ ತನಿಖೆ ನಡೆಸಿದ್ದು ಕೇಂದ್ರ ತನಿಖಾ ದಳ. ಸುಪ್ರೀಂ ಕೋರ್ಟ್‌ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಿತು. ಸಿಎಜಿ ವರದಿಯಿಂದ ಹಗರಣ ಬಯಲಿಗೆ ಬಂದಿತ್ತು. ಬಿಹಾರದ ಮಾಜಿ ಮುಖ್ಯಮಂತ್ರಿ ಅದರಿಂದ ಹೊರಬರಲು ಇನ್ನೂ ಒದ್ದಾಡುತ್ತಿದ್ದಾರೆ.

ಹರಿಯಾಣ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಚೌತಾಲಾ, ಅವರ ಪುತ್ರ ಅಜಯ್‌ ಚೌತಾಲಾ ಜೈಲು ಸೇರಿದ್ದಾರೆ. ನಕಲಿ  ದಾಖಲೆಗಳನ್ನು ಬಳಸಿಕೊಂಡು 3200ಕ್ಕೂ ಹೆಚ್ಚು ಶಿಕ್ಷಕರನ್ನು 1999 –2000ನೇ ಸಾಲಿನಲ್ಲಿ ನೇಮಿಸಿದ ಪ್ರಕರಣ ಇದು. ಅರ್ಹ ಶಿಕ್ಷಕರನ್ನು ಮೊದಲಿಗೆ ಆಯ್ಕೆ ಮಾಡಲಾಗಿತ್ತು. ಶಿಕ್ಷಣ ಸಚಿವರೂ ಆಗಿದ್ದ ಚೌತಾಲಾ, ಮತ್ತೊಂದು ಪಟ್ಟಿ ಕೊಟ್ಟು ಮೊದಲ ಪಟ್ಟಿ ಬದಲಾವಣೆ ಮಾಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿ.ಬಿ.ಐ. ಆರೋಪ ಪಟ್ಟಿ ಸಲ್ಲಿಸಿತ್ತು. ಚೌತಾಲಾ ಪ್ರತಿಯೊಬ್ಬರಿಂದ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಶಿಕ್ಷಕ ನೇಮಕಾತಿ ಹಗರಣದಲ್ಲಿ  52 ಮಂದಿ ಜೈಲು ಶಿಕ್ಷೆಗೊಳಗಾಗಿದ್ದಾರೆ. ಮಧ್ಯಪ್ರದೇಶ ಹಗರಣದಲ್ಲಿ ಕಾಂಗ್ರೆಸ್‌ ಪಕ್ಷದ ಅನೇಕ ನಾಯಕರೂ ಪಾಲು ಪಡೆದಿದ್ದಾರೆ ಎಂಬ ದೂರುಗಳಿವೆ. ಅವರೂ ಕೆಲವರು ಬಂಧನದಲ್ಲಿದ್ದಾರೆ.  ಈ ಸಂಗತಿಯನ್ನು ಪ್ರಸ್ತಾಪಿಸದಿದ್ದರೆ ಅಪಚಾರ ಆಗಬಹುದು. ಹಗರಣ ಕುರಿತು ದಿಗ್ವಿಜಯ್‌ ಸಿಂಗ್‌ ಮಾತ್ರ ದನಿ ಎತ್ತಿದ್ದಾರೆ. ಉಳಿದ ಬಹುತೇಕರು ಮೌನ ವಹಿಸಿದ್ದಾರೆ.

ಮೇವು ಹಗರಣ, ಹರಿಯಾಣ ಶಿಕ್ಷಕರ ನೇಮಕ ಸದ್ದು ಮಾಡಿದಷ್ಟು, ದೊಡ್ಡ ದೊಡ್ಡ ಕುಳಗಳು ಭಾಗಿಯಾಗಿರುವ ವ್ಯಾಪಂ ಹಗರಣ ಯಾಕೆ ಮಾಡಲಿಲ್ಲ  ಎಂಬ ಸಂಗತಿ ಅಚ್ಚರಿಹುಟ್ಟಿಸಿದೆ. ಲಾಲು, ಚೌತಾಲಾ ಅವರ ಹಗರಣಗಳನ್ನು ಸಿಬಿಐ ತನಿಖೆ ನಡೆಸಿದ ಬಳಿಕ, ಅತ್ಯಂತ ಗಂಭೀರವಾದ ವ್ಯಾಪಂ ಹಗರಣ ಕುರಿತು ಸಿಬಿಐ ಅಥವಾ ಸ್ವತಂತ್ರ  ತನಿಖೆ ಏಕಿಲ್ಲ. ಈ ಬಗ್ಗೆ ಮಧ್ಯಪ್ರದೇಶ ಮತ್ತು ನರೇಂದ್ರ ಮೋದಿ ಸರ್ಕಾರ ಚಿಂತನೆ ನಡೆಸಬೇಕು. ದೊಡ್ಡ ಮಟ್ಟದ ತನಿಖೆ ನಡೆಯದಿದ್ದರೆ ಹಗರಣ ಮುಚ್ಚಿ ಹೋಗಬಹುದು.
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT