ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ: ಪರ್ವತಿ ಗ್ರಾಮದಲ್ಲಿ ಬಿಗಡಾಯಿಸಿದ ಕೊಳಚೆ ಸಮಸ್ಯೆ

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆಯ ಊರಿನಲ್ಲಿ ಸಮಸ್ಯೆಗಳ ಸರಮಾಲೆ
Last Updated 10 ಸೆಪ್ಟೆಂಬರ್ 2020, 2:48 IST
ಅಕ್ಷರ ಗಾತ್ರ

ಗುಳೇದಗುಡ್ಡ: ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರೇಣುಕಾ ನಿಂಗಪ್ಪ ಗಾಜಿ ಅವರ ಊರಾದ ಪರ್ವತಿ ಗ್ರಾಮದಲ್ಲಿ ಕೊಳಚೆ ಸಮಸ್ಯೆ ಬಿಗಡಾಯಿಸಿದೆ.

ಗ್ರಾಮದ ಪ್ರಮುಖ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತದೆ. ರಸ್ತೆ ಮೇಲೆ ಕಸದ ರಾಶಿ ತುಂಬಿಕೊಂಡು ಗಬ್ಬು ವಾಸನೆ ಆವರಿಸಿದೆ. ಕೊಳಚೆ ನೀರಿನಿಂದಾಗಿ ರಸ್ತೆ ಪಕ್ಕದಲ್ಲಿ ವಾಸಿಸುವ ಕುಟುಂಬಗಳಿಗೆ ದುರ್ವಾಸನೆ, ಸೊಳ್ಳೆಗಳ ಕಾಟವೂ ಹೆಚ್ಚಾಗಿವೆ.

ಸೊಳ್ಳೆಗಳ ಕಡಿತದಿಂದ ಮಕ್ಕಳು, ವೃದ್ಧರು ಡೆಂಗಿ ಹಾಗೂ ಮಲೇರಿಯಾ ಜ್ವರದಿಂದ ಬಳಲುವಂತಾಗಿದೆ. ಕೊಳಚೆ ನೀರು ರಸ್ತೆ ಮೇಲೆ ನಿಲ್ಲದೆ, ಸರಾಗವಾಗಿ ಹರಿಯಲು ಗಟಾರ ವನ್ನು ನಿರ್ಮಾಣ ಮಾಡಿಲ್ಲ. ರಸ್ತೆ ಮೇಲೆ ಜನರು ಕಸಕಡ್ಡಿ ಹಾಕುತ್ತಾರೆ. ಅದರಲ್ಲಿನ ಪ್ಲಾಸ್ಟಿಕ್ ಚೀಲ, ಕಸಕಡ್ಡಿಯೆಲ್ಲ ಗಟಾರ ಸೇರುತ್ತಿವೆ.

‘ಗಟಾರದಲ್ಲಿ ನಾಯಿ, ಬೆಕ್ಕು ಪ್ರಾಣಿಗಳ ಮೃತದೇಹಗಳನ್ನು ಬಿಸಾಕುತ್ತಿದ್ದಾರೆ. ಎಲ್ಲೆಡೆ ದುರ್ನಾತ, ಸೊಳ್ಳೆಗಳ ಕಡಿತದಿಂದಾಗಿ ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಗ್ರಾಮದ ಹಿರಿಯ ಸಿದ್ದಲಿಂಗಯ್ಯ ಎಸ್.ಸರಗಣಾಚಾರಿ ದೂರುತ್ತಾರೆ.

ಮನೆ ಮನೆಗೂ ನಳ: ಗ್ರಾಮದ ಮನೆ ಮನೆಗೂ ನಳದ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ 100 ಮನೆಗಳಿಗೆ ವರ್ಷ ಗತಿಸಿದರೂ ನಳದ ನೀರು ಸಮರ್ಪಕವಾಗಿ ಬರುವುದಿಲ್ಲ. ಕೆಲವರು ತಮ್ಮ ಮನೆಗಳ ಮುಂದೆ ರಸ್ತೆಯಲ್ಲಿ ಗುಂಡಿಯನ್ನು ತೋಡಿ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ನಳದ ನೀರು ಸಿಗದವರು ಪಕ್ಕದ ಓಣಿಯ ನಳಗಳಲ್ಲಿ ನೀರು ಹಿಡಿಯಲು ಹೋದರೆ. ‘ನಮ್ಮ ಓಣಿಗೆ ಬರಬೇಡಿ, ನೀರು ನಮಗೇ ಸಾಕಾಗುವುದಿಲ್ಲ‘ ಎಂಬ ತಾಕೀತು ಮಾಡುತ್ತಾರೆ ಎಂದು ಮಹಿಳೆಯರು ದೂರುತ್ತಾರೆ.

ಗ್ರಾಮದ ಜನರಿಗೆ ಶುದ್ಧ ನೀರಿನ ಘಟಕದ ನಿರ್ಮಿಸಿ 4 ವರ್ಷ ಗತಿಸಿದೆ. ಗ್ರಾಮಸ್ಥರು ಶುದ್ಧ ನೀರಿನ ಘಟಕ ಬಳಕೆ ಮಾಡುತ್ತಿಲ್ಲ. ಇದಕ್ಕೆ ಸರಿಯಾಗಿ ನಳದ ಜೋಡಣೆ ಮಾಡಿಲ್ಲ. ಶುದ್ಧ ನೀರಿನ ಘಟಕ ಚಾಲು ಮಾಡಿದಾಗಿನಿಂದ ಜನರು ಶುದ್ಧ ನೀರು
ಕುಡಿಯುತ್ತಿಲ್ಲ ಎಂದು ಸಂಗಪ್ಪ ಆಸಂಗಿ ಹೇಳಿದರು.

ಇದೇ ರಸ್ತೆಯ ಪಕ್ಕದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ₹5ಲಕ್ಷ ವೆಚ್ಚದಲ್ಲಿ ಮಹಿಳೆಯರ ಶೌಚಾಲಯ ನಿರ್ಮಿಸಲಾಗಿದೆ. ಅದಕ್ಕೆ ನೀರಿನ ವ್ಯವಸ್ಥೆ ಇಲ್ಲ. ವಿದ್ಯುತ್ ದೀಪದ ವ್ಯವಸ್ಥೆ ಮಾಡಿಲ್ಲ. ಶೌಚಕ್ಕೆ ಹೋಗುವ ರಸ್ತೆಯಲ್ಲಿ ಜಾಲಿ ಗಿಡ ಬೆಳೆದಿವೆ.

‘ಗ್ರಾಮದ ರಸ್ತೆಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯಲು ಗಟಾರ, ಒಳಚರಂಡಿ ವ್ಯವಸ್ಥೆ ಮಾಡಿಲ್ಲ. ಮನೆಗೊಂದು ಶೌಚಾಲಯವನ್ನು ನಿರ್ಮಿಸಲಾಗಿದೆ. ಒಳಚರಂಡಿ ವ್ಯವಸ್ಥೆ ಕೊರತೆಯಿಂದ ಯಾರು ಶೌಚಾಲಯ ಬಳಸುವುದಿಲ್ಲ. ಗ್ರಾಮಸ್ಥರು ಬಯಲು ಪ್ರದೇಶವನ್ನೇ ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ’ ಎಂದು ಶಂಕ್ರಪ್ಪ ಪೂಜಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT