ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ: 10 ಗ್ರಾಮಗಳಲ್ಲಿ ಶೌಚಕ್ಕೆ ಬಯಲೇ ಗತಿ

ಅವ್ಯವಸ್ಥೆಯ ಆಗರ ಗುಳೇದಗುಡ್ಡ ಗ್ರಾಮೀಣ ಶೌಚಾಲಯಗಳು; ಗ್ರಾ.ಪಂ ನಿರ್ಲಕ್ಷ್ಯ ಆರೋಪ
ಎಚ್.ಎಸ್. ಘಂಟಿ
Published 9 ಜನವರಿ 2024, 4:58 IST
Last Updated 9 ಜನವರಿ 2024, 4:58 IST
ಅಕ್ಷರ ಗಾತ್ರ

ಗುಳೇದಗುಡ್ಡ: ಗುಳೇದಗುಡ್ಡ ತಾಲ್ಲೂಕು 38 ಹಳ್ಳಿಗಳನ್ನು ಹೊಂದಿದ್ದು, ಇಲ್ಲಿ 12 ಗ್ರಾಮ ಪಂಚಾಯಿತಿಗಳಿವೆ. ಬಹುತೇಕ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ.

ಕೆಲವು ಹಳ್ಳಿಗಳಲ್ಲಿ ಮೂತ್ರ ವಿಸರ್ಜನೆಗೆ ಮಾತ್ರ ಶೌಚಾಲಯ ಇವೆ. ಸಕಾಲಕ್ಕೆ ಅವುಗಳ ನಿರ್ವಹಣೆ ಇರದ ಕಾರಣ ಗಬ್ಬು ನಾರುತ್ತಿವೆ. ಗ್ರಾಮ ಪಂಚಾಯ್ತಿ ಇತ್ತ ಗಮನಹರಿಸದಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ನಾಗರಾಳ ಎಸ್.ಪಿ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಾಳ ಎಸ್.ಪಿ, ಸಬ್ಬಲಹುಣಸಿ, ಮಂಗಳಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಮ್ಮಲಗಿ ಕಾಟಾಪೂರ ಹಾಗೂ ಲಾಯದಗುಂದಿ ಗ್ರಾಮ ಪಂಚಾಯಿತಿ ಹಾಗೂ 10 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಾಲಯಗಳೇ ಇಲ್ಲದಿರುವುದು ಕಂಡು ಬಂದಿದೆ.

ತಾಲ್ಲೂಕಿನ ಮುರುಡಿ, ಕೊಟ್ನಳ್ಳಿ ಕಟಗೇರಿ, ಕೆಲವಡಿ ಗ್ರಾಮಗಳಲ್ಲಿ ಕೇವಲ ಮೂತ್ರ ವಿಸರ್ಜನೆಗೆ ಕಟ್ಟಿದ ಶೌಚಾಲಯಗಳು ನಿರ್ವಹಣೆ ಇಲ್ಲದೇ ಗಬ್ಬು ನಾರುತ್ತಿರುವುದರಿಂದ ಸಾರ್ವಜನಿಕರು ಅತ್ತ ಸುಳಿಯುತ್ತಿಲ್ಲ.

ಶೌಚಾಲಯ ಮುಕ್ತ ತಾಲ್ಲೂಕು, ಗ್ರಾಮಗಳು: ಗುಳೇದಗುಡ್ಡ ತಾಲ್ಲೂಕು ಬಯಲು ಶೌಚಾಲಯ ಮುಕ್ತ ತಾಲ್ಲೂಕು ಎಂದು ಘೋಷಿಸಲಾಗಿದೆ. ತಾಲ್ಲೂಕಿನ ಎಂಟು, ಹತ್ತು ಹಳ್ಳಿಗಳನ್ನು ಹೊರತುಪಡಿಸಿದರೆ ಬಹುತೇಕ ಹಳ್ಳಿಗಳಲ್ಲಿ ‘ಬಯಲು ಶೌಚಾಲಯ ಮುಕ್ತ ಗ್ರಾಮ’ ಎಂದು ಬೋರ್ಡ್‌ ಹಾಕಿದ್ದು ಬಿಟ್ಟರೆ, ಅಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದಿರುವುದು ಶೋಚನಿಯ ಸಂಗತಿಯಾಗಿದೆ.

ತಾಲ್ಲೂಕಿನ ಗ್ರಾಮಗಳಲ್ಲಿ ಪುರುಷ ಮತ್ತು ಸ್ತ್ರೀಯರೆಲ್ಲ ಕೈಯಲ್ಲಿ ಚೊಂಬು ಹಿಡಿದುಕೊಂಡು ಬಯಲು ಶೌಚಕ್ಕೆ ಹೋಗುವ ದೃಶ್ಯ ಪ್ರತಿ ದಿನ ಸಾಮಾನ್ಯವಾಗಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಶೌಚಕ್ಕೆ ಬಯಲೇ ಗತಿಯಾಗಿದೆ.

ತಾಲ್ಲೂಕಿನ ನಾಗರಾಳ, ಎಸ್.ಪಿ.ಸಬ್ಬಲಹುಣಸಿ, ಲಾಯದಗುಂದಿ, ಕೊಟ್ನಳ್ಳಿ, ಮುರುಡಿ, ಹಾನಾಪೂರ, ಹುಲ್ಲಿಕೇರಿ ಎಸ್.ಪಿ ಮುಂತಾದ ಗ್ರಾಮಗಳು ಗುಡ್ಡಕ್ಕೆ ಹೊಂದಿಕೊಂಡು ಇರುವುದರಿಂದ ಪುರುಷರೊಂದು ಕಡೆ ಸ್ತ್ರೀಯರೊಂದು ಕಡೆ ಶೌಚಕ್ಕೆ ಹೋಗುತ್ತಾರೆ ಎಂದು ಹಾನಾಪುರ ಗ್ರಾಮದ ಶ್ರೀನಿವಾಸ ನೆಲ್ಲೂರ ತಿಳಿಸಿದರು.

ಪ್ರಚಾರದ ಕೊರತೆ: ವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಕೊಂಡು ಅವುಗಳನ್ನು ಬಳಸಿದರೇ ಆಗುವ ಪ್ರಯೋಜನಗಳ ಕುರಿತು ಪ್ರಚಾರ ಮಡಿ ಪ್ರೇರಣೆ ನೀಡುವಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳು ಎಡವಿದ್ದು, ಕೆಲವು ಕಡೆ ವೈಯಕ್ತಿಕ ಶೌಚಾಲಯಗಳನ್ನು ಸರ್ಕಾರ ಅನುದಾನ ಪಡೆದು, ನಿಯಮಬಾಹಿರವಾಗಿ ಬೇಕಾಬಿಟ್ಟಿಯಾಗಿ ಕಟ್ಟಿಕೊಂಡು ಬಳಸದೇ ಇರುವ ಉದಾಹರಣೆಗಳೂ ಸಾಕಷ್ಟಿವೆ.

ಇದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ, ಕಾಮಗಾರಿಗಳ ಮೇಲ್ವಿಚಾರಣೆ ಮಾಡದೇ ಹಣ ನೀಡುವುದು ಮುಖ್ಯ ಕಾರಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

‘ಹಳ್ಳಿಗಳಲ್ಲಿ ಮಹಿಳೆಯರು ಸಾರ್ವಜನಿಕ ಶೌಚಾಲಯ ಮತ್ತು ವೈಯಕ್ತಿಕ ಶೌಚಾಲಯವಿಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಗ್ರಾಮ ಪಂಚಾಯ್ತಿಯಿಂದ ಸಾರ್ವಜನಿಕ ಶೌಚಾಲಯ ಕಟ್ಟಿಕೊಡಬೇಕು’ ಎಂದು ನಾಗರಾಳ ಗ್ರಾಮದ ಧರ್ಮಸ್ಥಳ ಸಂಘದ ಸದಸ್ಯರಾದ ಶಾಂತವ್ವ ತಳವಾರ, ಯಲ್ಲವ್ವ ವಡ್ಡರ, ಯಮನವ್ವ ಉಪನಾಳ, ಸುಮಂಗಲಾ ಹಿರೇಮಠ ಆಗ್ರಹಿಸಿದರು.

ಗುಳೇದಗುಡ್ಡ ತಾಲ್ಲೂಕಿನ ಆಸಂಗಿ ಗ್ರಾಮದಲ್ಲಿ ವೈಯಕ್ತಿಕ ಅನುದಾನ ಪಡೆದು ಕಟ್ಟಿಸಿರುವ ಶೌಚಾಲಯವನ್ನು ಬಳಸದೇ ಪಾಳು ಬಿದ್ದಿರುವುದು
ಗುಳೇದಗುಡ್ಡ ತಾಲ್ಲೂಕಿನ ಆಸಂಗಿ ಗ್ರಾಮದಲ್ಲಿ ವೈಯಕ್ತಿಕ ಅನುದಾನ ಪಡೆದು ಕಟ್ಟಿಸಿರುವ ಶೌಚಾಲಯವನ್ನು ಬಳಸದೇ ಪಾಳು ಬಿದ್ದಿರುವುದು
ರಾಷ್ಟ್ರೀಯ ಸ್ವಚ್ಚತಾ ಅಭಿಯಾನ ಅಡಿಯಲ್ಲಿ ಗ್ರಾಮ ಪಂಚಾಯ್ತಿಯಿಂದ ವೈಯಕ್ತಿಕ ಶೌಚಾಲಯಕ್ಕೆ ₹12 ಸಾವಿರ ನೀಡಲಾಗುತ್ತದೆ. ಅನುದಾನ ಬಳಸಿಕೊಂಡು ಸರಿಯಾಗಿ ಶೌಚಾಲಯ ಕಟ್ಟಿಸಿಕೊಂಡು ಬಳಸುವುದು ಸಾರ್ವಜನಿಕರ ಜವಾಬ್ದಾರಿ
ಲಕ್ಷ್ಮಣ ಶಾಂತಗೇರಿ ಪಿಡಿಒ ಹಂಗರಗಿ ಗ್ರಾಮ ಪಂಚಾಯ್ತಿ
ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಿಕೊಳ್ಳಲು ₹2.10 ಲಕ್ಷ ವರೆಗೆ ಹಾಗೂ 15ನೇ ಹಣಕಾಸು ಯೋಜನೆಯಲ್ಲಿ ಶೌಚಾಲಯ ಕಟ್ಟಿಕೊಳ್ಳಲು ಹಣ ನೀಡಲಾಗುವುದು. ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳುತ್ತೇವೆ
ಮಲ್ಲಿಕಾರ್ಜುನ ಬಡಿಗೇರ ಇಒ ತಾ.ಪಂ ಗುಳೇದಗುಡ್ಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT