ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೊಬೈಲ್‌ ಕ್ಯಾಂಟೀನ್’ಗಳ ಕಾರುಬಾರು

ನಗರ ಸಂಚಾರ
Last Updated 3 ಏಪ್ರಿಲ್ 2017, 5:16 IST
ಅಕ್ಷರ ಗಾತ್ರ

ಬಾಗಲಕೋಟೆ: ನಗರದ ಪ್ರಮುಖ ರಸ್ತೆಗಳಲ್ಲಿ ಎಲ್ಲಿ ಕಣ್ಣು ಮಿಟಿಕಿಸಿದರೂ ಸಿಗುವ ಅಂಗಡಿಗಳು ಎಂದರೆ ಈ ಮೊಬೈಲ್‌ ಕ್ಯಾಂಟೀನ್‌ಗಳು. ಇವರು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಅಂಗಡಿ ಆರಂಭಿಸಲ್ಲ. ಒಂದೇ ಸ್ಥಳದಲ್ಲಿ ಶಾಶ್ವತ ನೆಲೆ ಕಂಡುಕೊಳ್ಳಲ್ಲ. ಕಟ್ಟಡದ ಸ್ವರೂಪದಲ್ಲಿ ಏನನ್ನೂ ನಿರ್ಮಿಸಿಕೊಳ್ಳಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇರುವುದಿಲ್ಲ. ಆದರೆ ತಿಂಡಿ, ಊಟದ ವಿಷಯದಲ್ಲಿ ಅವರು ದೊಡ್ಡ–ದೊಡ್ಡ ಹೋಟೆಲ್‌ಗಳಿಗಿಂತ ರುಚಿಕರ ತಿಂಡಿ ನೀಡಿ ಗ್ರಾಹಕರನ್ನು ತನ್ನತ್ತ ಸೆಳೆಯುವರು.

ಪ್ರತಿಷ್ಠಿತ ಹೊಟೇಲ್‌ಗಳು ಗ್ರಾಹಕರ ಆಕರ್ಷಣೆಗಾಗಿ ಫ್ಯಾನ್‌, ಆಸನ ವ್ಯವಸ್ಥೆ ಮುಂತಾದ ಸೌಲಭ್ಯ ಒದಗಿಸಿ ಗ್ರಾಹಕರನ್ನು ಸೆಳೆಯುತ್ತಾರೆ. ಆದರೆ, ಇದ್ಯಾವುದೂ ಇವರ ಬಳಿ ಇಲ್ಲದಿದ್ದರೂ ಗ್ರಾಹಕರನ್ನು ತಮ್ಮ ಬಳಿ ಬರುವಂತೆ ಮಾಡುತ್ತಾರೆ. ಜನರಿಗೆ ಬೇಗನೆ ಸಿಗುವ ತಿಂಡಿಗಳು ಹಾಗೂ ಶುಚಿ ವಾತಾವರಣ ಇರದಿದ್ದರೂ ಪ್ಲಾಸ್ಟಿಕ್‌ ಕುರ್ಚಿ ಇಲ್ಲವೇ ನಿಂತು ಗ್ರಾಹಕರು ತಿಂಡಿ ಸವಿಯುತ್ತಾರೆ.

ಒಂದೇ ಸ್ಥಳದಲ್ಲಿರದ ಅಂಗಡಿ: ಅವರಿಗೆ ಒಂದು ತಳ್ಳುವ ಗಾಡಿ, ಅಲ್ಪ–ಸ್ವಲ್ಪ ಪಾತ್ರೆಗಳು, ಸ್ಟೌ ಮತ್ತು ಅಡುಗೆ ಅನಿಲ ಸಿಲಿಂಡರ್ ಇದ್ದರೇ ಸಾಕು. ಅವರಿದ್ದ ಸ್ಥಳದಲ್ಲೇ ಕಟ್ಟಡ ರಹಿತ ಹೋಟೆಲ್‌ ಕಾರ್ಯ ನಿರ್ವಹಿಸಲು ಅನಿಯಾಗುತ್ತಾರೆ. ಬಜಿ, ಚುರುಮರಿ ಸುಶಿಲ, ಇಡ್ಲಿ, ವಡಾ, ಪುರಿ, ದೋಸೆ, ಪಲಾವ್‌ ಸೇರಿದಂತೆ ಎಲ್ಲಾ ತಿಂಡಿ ತಿನಿಸು ಗ್ರಾಹಕರು ಕೇಳಿದ ತಕ್ಷಣವೇ ಅಂಗಡಿಕಾರರು ನೀಡುತ್ತಾರೆ. ಕೆಲವೊಮ್ಮ ಜನದಟ್ಟಣೆಗಳಿಂದ ಅವು ಕೂಡಿರುತ್ತವೆ.

ಪ್ರಮುಖ ರಸ್ತೆಗಳಲ್ಲಿ ಹೋಟೆಲ್‌: ಹಳೇ ಬಾಗಲಕೋಟೆಯ ಬಸ್‌ ನಿಲ್ದಾಣ, ಬಸವೇಶ್ವರ ವೃತ್ತ, ರೈಲ್ವೆ ನಿಲ್ದಾಣ, ನವನಗರ ಬಸ್‌ ನಿಲ್ದಾಣ, ಜಿಲ್ಲಾ ಆಡಳಿತ ಕಚೇರಿಯ ರಸ್ತೆ, ತಹಶೀಲ್ದಾರ್‌ ಕಚೇರಿ ರಸ್ತೆ, ಜಿಲ್ಲಾ ಆಸ್ಪತ್ರೆ, ವಿದ್ಯಾಗಿರಿ ಕಾಲೇಜು ವೃತ್ತ ಸೇರಿದಂತೆ ಮುಂತಾದ ಕಡೆ ಬೆಳಿಗ್ಗೆ ಅಥವಾ ಸಂಜೆ ವೇಳೆ ಒಂದು ರೌಂಡ್‌ ಸುತ್ತಾಡಿದರೆ ಸಾಕು ಇಂತಹ ಅಂಗಡಿಗಳು ನಿಮಗೆ ಸಿಗುತ್ತವೆ. ಈ ಮೊಬೈಲ್‌ ಹೋಟೆಲ್‌ಗಳು ಪ್ರತಿಷ್ಠಿತ ಹೋಟೆಲ್‌ಗಳಿಗೆ ಹೋಲಿಸಿದರೆ ಬಹಳ ಉತ್ತಮ. ಏಕೆಂದರೆ ಕಡಿಮೆ ದರದಲ್ಲಿ ತಿಂಡಿಯ ತಿನಿಸುಗಳು ಸುಲಭವಾಗಿ ಜನರಿಗೆ ಸಿಗುತ್ತವೆ.

ಕಡಿಮೆ ದರದಲ್ಲಿ ತಿಂಡಿ ಲಭ್ಯ: ಕೂಲಿ ಕಾರ್ಮಿಕರು, ಬಡವರು, ಅವರಸದಲ್ಲಿ ಮನೆ ಬಿಟ್ಟು ಬರುವವರು ಮತ್ತು ಕಾರಣಾಂತದಿಂದ ದೊಡ್ಡ ಹೋಟೆಲ್‌ಗಳಿಗೆ ಹೋಗಲಾಗದೇ ಇರುವವರು ಇಂತಹ ‘ಮೊಬೈಲ್‌ ಹೋಟೆಲ್‌’ ನವರೇ ಅನ್ನದಾತರು. ಬೇಗ ಬೇಗನೇ ತಮಗೆ ಇಷ್ಟದ ತಿಂಡಿ ಸವಿದು ತಮ್ಮ ತಮ್ಮ ಕೆಲಸಗಳಿಗೆ ಹೊರಟು ಬಿಡುತ್ತಾರೆ. ಅದು ಕೆಲವೇ ನಿಮಿಷದಲ್ಲಿ.

ಬೇರೆ ಊರಿನಿಂದ ಬಂದ ನಾನು ಆರಂಭದಲ್ಲಿ ದೊಡ್ಡ ಹೋಟೆಲ್‌ಗಳಿಗೆ ₹ 70 ಕೊಟ್ಟು ತಿನ್ನುತ್ತಿದ್ದೆ. ಒಮ್ಮೆ ಈ ತಳ್ಳುವ ಗಾಡಿಯಲ್ಲಿ ತಿಂದೆ. ಇಲ್ಲಿ ತಿಂದ ತಿಂಡಿ ಮತ್ತು ಚಹಾ ಎಲ್ಲವೂ ಸೇರಿ ಕೇವಲ ₹ 30 ಆಯಿತು. ಹೀಗಾಗಿ ಈಗ ಎಲ್ಲಿಗೆ ಹೋಗಲಿ ನಾನು ತಳ್ಳುವ ಗಾಡಿಯಲ್ಲಿರುವ ಪಲಾವ್‌ ತಿಂದು ಹೊಟ್ಟೆ ಹಸಿವು ನಿಗಿಸುತ್ತಿದ್ದೇನೆ ಎಂದು ಚಂದ್ರು ಕಾಳಗಿ ಹೇಳಿದರು.

ಅಂಗಡಿ ಶುಚಿತ್ವಕ್ಕೆ ಆದ್ಯತೆ ನೀಡಲಿ: ಅವರ ತಳ್ಳುಗಾಡಿ ಸುತ್ತಮುತ್ತ ಆವರಣ ಶುಚಿಯಾಗಿಡಬೇಕು. ಮೊದಲು ಅಂಗಡಿಕಾರರು ಇದರ ಬಗ್ಗೆ ಅವರು ಗಮನಹರಿಸಬೇಕು. ಇಲ್ಲಿ ತಿಂದು ಗ್ರಾಹಕರು ತಮ್ಮ ಆರೋಗ್ಯ ಹಾಳಾಗದಂತೆ ಎಚ್ಚರ ವಹಿಸುವ ಕೆಲಸ ಅವರದ್ದಾಗಿರುತ್ತದೆ. ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12ರ ವರೆಗೆ ಇಲ್ಲಿ ತಿಂಡಿ ಸಿಗುವದರಿಂದ ಜನರು ಅವರತ್ತ ಬರುತ್ತಾರೆ. ಆದ್ದರಿಂದ ಅಂಗಡಿಯವರು ಸ್ವಚ್ಛತೆಗೆ ಆದ್ಯತೆ ನೀಡಲಿ ಎಂದು ಗ್ರಾಹಕ ಸಿದ್ದಪ್ಪ ಕೊಣ್ಣೂರು ಅಭಿಪ್ರಾಯಪಟ್ಟರು.

ಅಡುಗೆ ಮಾಡುವುದು ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ಓದು ಬರಹ ಗೊತ್ತಿರದ ನಮಗೆ ಕೆಲಸವೂ ಸಿಗುವುದಿಲ್ಲ. ಅದಕ್ಕಾಗಿ ತಳ್ಳುಗಾಡಿ ವ್ಯವಸ್ಥೆ ಮಾಡಿಕೊಂಡು ಅಡುಗೆ ಸಿದ್ಧಪಡಿಸುತ್ತೇವೆ. ಜಿಲ್ಲಾ ಆಸ್ಪತ್ರೆಗೆ ಹೆಚ್ಚಾಗಿ ಬಡವರು ಬರುತ್ತಾರೆ. ಹೀಗಾಗಿ ಗ್ರಾಹಕರಿಗೆ ಬಿಸಿಬಿಸಿ ತಿಂಡಿ ಪೂರೈಸಲು ನಾವು ಮೊದಲು ಆದ್ಯತೆ ನೀಡುತ್ತೇವೆ ಎಂದು ಅಡುಗೆ ತಯಾರಕ ಸುಧಾಕರ ತಿಳಿಸಿದರು.

**

ತಳ್ಳುಗಾಡಿಯಲ್ಲಿ ಸಿಗುವ ತಿಂಡಿ ರುಚಿಕರವಾಗಿರುತ್ತದೆ. ಆದರೆ, ಶುಚಿತ್ವ ಸ್ವಲ್ಪ ಕಡಿಮೆ. ಗುಣಮಟ್ಟದ ಆಹಾರ ನೀಡುವ ಮೂಲಕ ಗ್ರಾಹಕರ ಆರೋಗ್ಯ ಕಾಪಾಡಲಿ
-ಅಪ್ಪಣ್ಣ ಗೌಡರ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT