ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ವಿಮೋಚನಾ ದಿನಕ್ಕಿಲ್ಲ ಸಂಭ್ರಮ! ಶಾಲಾ–ಕಾಲೇಜುಗಳಲ್ಲಿ ನಡೆಯದ ಧ್ವಜಾರೋಹಣ

Last Updated 17 ಸೆಪ್ಟೆಂಬರ್ 2018, 12:04 IST
ಅಕ್ಷರ ಗಾತ್ರ

ಹೊಸಪೇಟೆ: ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನದ ಸಂಭ್ರಮ ಸೋಮವಾರ ನಗರದಲ್ಲಿ ಕಾಣಿಸಲಿಲ್ಲ.

ಜಿಲ್ಲೆಯು ಹೈದರಾಬಾದ್‌ ಕರ್ನಾಟಕದ ಒಂದು ಭಾಗವಾಗಿದ್ದರೂ ನಗರ ಸೇರಿದಂತೆ ಹಲವೆಡೆ ಅದರ ದಿನದ ಸಡಗರ, ಸಂಭ್ರಮ ಕಂಡು ಬರಲಿಲ್ಲ. ಹೆಸರಿಗಷ್ಟೇ ತಾಲ್ಲೂಕು ಕೇಂದ್ರಗಳಲ್ಲಿ ತಹಶೀಲ್ದಾರ್‌ರು ಧ್ವಜಾರೋಹಣ ನೆರವೇರಿಸಿದರು. ಅದರ ಬಗ್ಗೆ ವಿಶೇಷ ಕಾರ್ಯಕ್ರಮಗಳಾಗಲಿ, ಉಪನ್ಯಾಸ, ಸಭೆ ಸಮಾರಂಭಗಳು ಜರುಗಲಿಲ್ಲ.

ಹೈದರಾಬಾದ್‌–ಕರ್ನಾಟಕದ ಇನ್ನುಳಿದ ಜಿಲ್ಲೆಗಳಲ್ಲಿ ಜಿಲ್ಲಾ ಆಡಳಿತದಿಂದ ಕಾರ್ಯಕ್ರಮವನ್ನು ಸಂಘಟಿಸಿ, ಅದ್ದೂರಿಯಾಗಿ ಆಚರಿಸಲಾಯಿತು. ಗಣರಾಜ್ಯ ಹಾಗೂ ಸ್ವಾತಂತ್ರ್ಯದ ದಿನದಂದು ಇರುವಷ್ಟೇ ಸಂಭ್ರಮ ಇತ್ತು. ಆದರೆ, ಜಿಲ್ಲೆಯಲ್ಲಿ ಕಳೆಗುಂದಿತ್ತು. ಜಿಲ್ಲಾ ಉಸ್ತುವಾರಿ ಸಚಿವರೇ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಶಾಸಕರು ಕೂಡ ದೂರ ಉಳಿದಿದ್ದರು. ಜಿಲ್ಲಾ ಹಾಗೂ ತಾಲ್ಲೂಕು ಕ್ರೀಡಾಂಗಣಗಳ ಬದಲು ಕಚೇರಿಯಲ್ಲಿ ಕಾರ್ಯಕ್ರಮ ಸಂಘಟಿಸಿ ಕೈ ತೊಳೆದುಕೊಳ್ಳಲಾಯಿತು.
ಬಹುತೇಕ ಶಾಲಾ–ಕಾಲೇಜುಗಳಲ್ಲಿಯೂ ಧ್ವಜಾರೋಹಣ ನಡೆಯಲಿಲ್ಲ. ಇನ್ನೂ ವಿಶೇಷವೆಂದರೆ, ಎಷ್ಟೋ ಜನರಿಗೆ ಅದರ ಬಗ್ಗೆ ಅರಿವೇ ಇರಲಿಲ್ಲ.

‘ವಿಮೋಚನಾ ದಿನ ನಿರ್ಲಕ್ಷ್ಯಕ್ಕೆ ಒಳಗಾಗಲು ನಮ್ಮ ಜನಪ್ರತಿನಿಧಿಗಳ ಜತೆಗೆ ಜನ ಕೂಡ ಕಾರಣ. ಯಾರೊಬ್ಬರೂ ಪ್ರಶ್ನಿಸದ ಕಾರಣ ಈ ರೀತಿ ನಡೆಯುತ್ತಿದೆ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಮರಡಿ ಜಂಬಯ್ಯ ನಾಯಕ.

‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಆರೋಗ್ಯ ಸರಿ ಇರದಿದ್ದರೂ ಕಲಬುರ್ಗಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಿಂದ ದೂರವೇ ಉಳಿದರು. ಅವರ ನಡವಳಿಕೆಯನ್ನು ಯಾರೊಬ್ಬರೂ ಪ್ರಶ್ನಿಸದ ಕಾರಣ ಈ ರೀತಿ ನಡೆಯುತ್ತಿದೆ. ಸಚಿವರೇ ಬರದಿದ್ದಾಗ ಅಧಿಕಾರಿಗಳು ಮನಬಂದಂತೆ ನಡೆದುಕೊಳ್ಳುತ್ತಾರೆ’ ಎಂದರು.

‘ಬಹುತೇಕ ಅಧಿಕಾರಿಗಳಿಗೆ ಬದ್ಧತೆ ಇಲ್ಲ. ಹೆಸರಿಗಷ್ಟೇ ಕಾರ್ಯಕ್ರಮ ಆಯೋಜಿಸಿ, ಅದರ ಛಾಯಾಚಿತ್ರಗಳನ್ನು ತೆಗೆದು ಸರ್ಕಾರಕ್ಕೆ ಕಳುಹಿಸಿಕೊಡುತ್ತಾರೆ. ಎಲ್ಲವೂ ಯಾಂತ್ರಿಕವಾಗಿ ಮಾಡುತ್ತಾರೆ. ವಿಮೋಚನಾ ದಿನ ಅತ್ಯಂತ ಮಹತ್ವದ್ದು. ನಿಜಾಮನ ಕಪಿಮುಷ್ಟಿಯಿಂದ ಬಿಡುಗಡೆಯಾಗಿ ಸ್ವಾತಂತ್ರ್ಯ ಪಡೆದ ದಿನ. ಅದನ್ನು ಅದ್ದೂರಿಯಾಗಿ ಆಚರಿಸಬೇಕು. ಅದರ ಇತಿಹಾಸ ಗೊತ್ತಿರುವವರಿಂದ ಉಪನ್ಯಾಸ ಕೊಡಿಸಿ, ಜನರಿಗೆ ತಿಳಿಸಬೇಕು. ಅದರಲ್ಲೂ ಶಾಲಾ–ಕಾಲೇಜುಗಳ ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು’ ಎಂದು ಹೇಳಿದರು.

‘ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜುಗಳಲ್ಲಿ ಕಡ್ಡಾಯವಾಗಿ ವಿಮೋಚನಾ ದಿನ ಆಚರಿಸಬೇಕೆಂದು ಸುತ್ತೋಲೆ ಹೊರಡಿಸಬೇಕು. ಈ ದಿನದ ಅಂಗವಾಗಿ ಜಿಲ್ಲಾ ಆಡಳಿತದಿಂದ ಪ್ರಬಂಧ, ರಸಪ್ರಶ್ನೆ, ಭಾಷಣ ಸ್ಪರ್ಧೆ ಹಮ್ಮಿಕೊಳ್ಳಬೇಕು. ಜತೆಗೆ ಜಿಲ್ಲಾ ಹಾಗೂ ತಾಲ್ಲೂಕು ಕ್ರೀಡಾಂಗಣಗಳಲ್ಲೇ ಕಾರ್ಯಕ್ರಮ ಸಂಘಟಿಸಬೇಕು. ಆಗ ಪ್ರತಿಯೊಬ್ಬರಿಗೂ ಅದರ ಬಗ್ಗೆ ಗೊತ್ತಾಗುತ್ತದೆ’ ಎನ್ನುತ್ತಾರೆ ವಕೀಲ ಯೂಸುಫ್‌ ಪಟೇಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT