ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಗೆ ಇಳಿಯುವ ಪದ್ಧತಿ ಜೀವಂತ: ಸಚಿವ ಬೇಸರ

368 ಪೌರ ಕಾರ್ಮಿಕರಿಗೆ ಕಾಯಮಾತಿ ಆದೇಶ ಪತ್ರ ವಿತರಿಸಿದ ಸಚಿವರು
Published 3 ಜನವರಿ 2024, 16:41 IST
Last Updated 3 ಜನವರಿ 2024, 16:41 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಬೆಳಗಾವಿ: ‘ಸ್ವಚ್ಛತೆ ವಿಚಾರದಲ್ಲಿ ಜಗತ್ತು ಈಗ ಸಾಕಷ್ಟು ಮುಂದುವರಿದಿದೆ. ಆದರೆ, ನಮ್ಮಲ್ಲಿ ಇನ್ನೂ ಗುಂಡಿಗೆ ಇಳಿದು ಸ್ವಚ್ಛ ಮಾಡುವಂಥ ಅನಿಷ್ಠ ಪದ್ಧತಿ ಅಲ್ಲಲ್ಲಿ ಕಾಣಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಬೇಸರ ವ್ಯಕ್ತ‍ಪಡಿಸಿದರು.

ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಜಿಲ್ಲಾಡಳಿತ ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರಿಗೆ ಕಾಯಮಾತಿ ಆದೇಶಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪೌರಕಾರ್ಮಿಕರಿಗೆ ತಾಂತ್ರಿಕ ಸಲಕರಣೆ ವಿತರಣೆ, ಸಮವಸ್ತ್ರ, ಆರೋಗ್ಯ ಕಾಳಜಿ ಸೇರಿದಂತೆ ಇನ್ನೂ ಹಲವು ಸೌಕರ್ಯಗಳನ್ನು ನೀಡಬೇಕಿದೆ. ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಪೌರಕಾರ್ಮಿಕರ ಸಶಕ್ತೀಕರಣಕ್ಕೆ ಕೆಲಸ ಮಾಡಲಿದೆ’ ಎಂದರು.

‘ಸದ್ಯ 368 ಮಂದಿಗೆ ಕಾಯಂ ಮಾಡಿ ಆದೇಶಪತ್ರ ನೀಡಲಾಗಿದೆ. ಇದಕ್ಕೆ ಹಿಂದಿನ ಸರ್ಕಾರ ಹಾಗೂ ಈಗಿನ ಸರ್ಕಾರಗಳೆರಡೂ ಕಾರಣ. ಇನ್ನೂ 400 ಜನರ ಕಾಯಮಾತಿ ಬಾಕಿ ಇದೆ. ಅದನ್ನು ಶೀಘ್ರ ಮಾಡಲಾಗುವುದು. ಪೌರಕಾರ್ಮಿಕರು ಸೇವಾಭಾವದಿಂದ ದುಡಿದ ಕಾರಣ ನಗರ ಇಂದು ಸ್ವಚ್ಛವಾಗಿ ಕಾಣಿಸುತ್ತಿದೆ’ ಎಂದರು.

ಪೌರಾಡಳಿತ ಹಾಗೂ ಹಜ್‌ ಸಚಿವ ರಹೀಂಖಾನ್‌ ಮಾತನಾಡಿ, ‘ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಪೌರಕಾರ್ಮಿಕರ ಕಾಯಮಾತಿ ಆದೇಶ ನೀಡಿದ್ದರು. ಈಗ ಅವರೇ ಅದನ್ನು ಜಾರಿಗೊಳಿಸಿದ್ದಾರೆ. ಪೌರಕಾರ್ಮಿಕರು ಬಡವರು. ಆದರೆ, ಅವರ ಹೃದಯ ಶ್ರೀಮಂತ’ ಎಂದರು.

‘ಸ್ಥಳೀಯ ಸಂಸ್ಥೆಗಳು ಸ್ವಾವಲಂಬನೆಯತ್ತ ಹೆಜ್ಜೆ ಇಡಬೇಕು. ತೆರಿಗೆ ಸಂಗ್ರಹ ಮತ್ತಿತರ ಸ್ಥಳೀಯ ಸಂಪನ್ಮೂಲ ಸಂಗ್ರಹಿಸಿ ಅಭಿವೃದ್ಧಿಯತ್ತ ನಡೆಯಬೇಕು. ಸರ್ಕಾರದ ಮೇಲೆ ಅವಲಂಬನೆ ಕಡಿಮೆಯಾಗಬೇಕು’ ಎಂದೂ ಸಲಹೆ ನೀಡಿದರು.

ಶಾಸಕ ಆಸೀಫ್‌ ಸೇಠ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೇಯರ್‌ ಶೋಭಾ ಸೋಮನಾಚೆ, ಉಪಮೇಯರ್‌ ರೇಷ್ಮಾ ಪಾಟೀಲ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಎಸ್ಪಿ ಡಾ.ಭೀಮಾಶಂಕರ ಗುಳೇದ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಾಣಿ ಜೋಶಿ, ರವಿ ಧೋತ್ರೆ, ಆಡಲಿತ ಪಕ್ಷದ ಮುಖಂಡ ರಾಜಶೇಖರ ಡೋಣಿ ಇದ್ದರು.

ಬೆಳಗಾವಿಯಲ್ಲಿ ಮಂಗಳವಾರ ನಡೆದ ಕಾಯಮಾತಿ ಆದೇಶಪತ್ರ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡ ಪೌರ ಕಾರ್ಮಿಕರು–ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಮಂಗಳವಾರ ನಡೆದ ಕಾಯಮಾತಿ ಆದೇಶಪತ್ರ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡ ಪೌರ ಕಾರ್ಮಿಕರು–ಪ್ರಜಾವಾಣಿ ಚಿತ್ರ
Quote - ಪೌರಕಾರ್ಮಿಕರಿಗೆ ಆಯಾ ತಿಂಗಳ 5ನೇ ದಿನಾಂಕದೊಳಗೆ ಸಂಬಳ ನೀಡಬೇಕು. ಇಲ್ಲದಿದ್ದರೆ ಅವರಲ್ಲಿ ಕೆಲಸ ಮಾಡುವ ಉತ್ಸಾಹ ಉಳಿಯುವುದಿಲ್ಲ.
ಪ್ರಕಾಶ ಹುಕ್ಕೇರಿ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT