ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಸಮಸ್ಯೆ; ಸುಸ್ಥಿರ ಪರಿಹಾರ ಒದಗಿಸಿ: ಹರೀಶ ಹಂದೆ

Published 7 ಮಾರ್ಚ್ 2024, 12:34 IST
Last Updated 7 ಮಾರ್ಚ್ 2024, 12:34 IST
ಅಕ್ಷರ ಗಾತ್ರ

ಬೆಳಗಾವಿ: ‘ಸಾಮಾಜಿಕ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರ ಒದಗಿಸುವ ದೃಷ್ಟಿಯಿಂದ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರರು ಮತ್ತು ಸಂಶೋಧಕರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು’ ಎಂದು ಸೆಲ್ಕೋ ಫೌಂಡೇಷನ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ ಹಂದೆ ಕರೆ ನೀಡಿದರು.

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 23ನೇ ವಾರ್ಷಿಕ ಘಟಿಕೋತ್ಸವ–2ರಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

‘ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರ ಒದಗಿಸುವಲ್ಲಿ ಮತ್ತು ಹೊಸ ಆವಿಷ್ಕಾರಗಳನ್ನು ಮಾಡುವಲ್ಲಿ ಭಾರತ ವಿಶ್ವದಲ್ಲೇ ಅಗ್ರಸ್ಥಾನಕ್ಕೆ ಏರಬೇಕು. ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಡೀ ವಿಶ್ವವೇ ಭಾರತದತ್ತ ನೋಡುವಂತಾಗಬೇಕು. ಸಂಶೋಧಕರು ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಬೇಕು. ಸಂಶೋಧನೆಗಳು ಬಡವರು ಮತ್ತು ಮಧ್ಯಮ ವರ್ಗದವರ ಅಭಿವೃದ್ಧಿಗೆ ಪೂರಕವಾಗಿರಬೇಕು’ ಎಂದರು.

‘ನೀವು ದೊಡ್ಡ ಕಂಪನಿಗಳ ವ್ಯವಹಾರ ಮಾದರಿಗಳನ್ನು ಅಧ್ಯಯನ ಮಾಡಬೇಡಿ. ಬದಲಿಗೆ, ಭಾರತದಲ್ಲಿ ರೈತರಿಂದ ತರಕಾರಿ ಮಾರುವವರ ಹಂತದವರೆಗಿನ ವ್ಯವಹಾರ ಮಾದರಿ ಅಭ್ಯಸಿಸಿ. ಮುಂದಿನ ಹತ್ತು ವರ್ಷ ಗಮನದಲ್ಲಿ ಇಟ್ಟುಕೊಂಡು ಯೋಜನೆ ಸಿದ್ಧಪಡಿಸಿ’ ಎಂದರು.

‘ವಿವಿಧ ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ಹೆಚ್ಚಿನ ಮಹಿಳೆಯರು ಸದಸ್ಯೆಯರು, ನವೋದ್ಯಮಿಗಳು ಮತ್ತು ಸಾಮಾಜಿಕ ಅಗತ್ಯಗಳಿಗೆ ಪರಿಹಾರ ಕಂಡುಕೊಳ್ಳಲು ನೀತಿ–ನಿರೂಪಕರಾಗಬೇಕಾದ ಅಗತ್ಯವಿದೆ. ಇಂದು ಮಹಿಳೆಯರಿಗೆ ಕೋಟಾ ವ್ಯವಸ್ಥೆ ಅಗತ್ಯವಿಲ್ಲ. ಬದಲಿಗೆ, ಸಮಾಜಕ್ಕೆ ತಮ್ಮದೇಯಾದ ಕೊಡುಗೆ ನೀಡಲು ಪಾಲಕರು ಅವರಿಗೆ ಮುಕ್ತವಾಗಿ ಅವಕಾಶ ನೀಡಬೇಕಿದೆ’ ಎಂದರು.

ಕುಲಪತಿ ಎಸ್‌.ವಿದ್ಯಾಶಂಕರ, ‘ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ 2024–25ನೇ ಸಾಲಿನಿಂದ ಹೊಸ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಕಾರ್ಯಾರಂಭ ಮಾಡಲಿದೆ. ಇದಕ್ಕೆ ಸಚಿವ ಸುಧಾಕರ್‌ 10 ಎಕರೆ ಜಾಗ ಒದಗಿಸಿದ್ದಾರೆ’ ಎಂದರು.

‘ಆಧುನಿಕತೆಗೆ ತಕ್ಕಂತೆ ವಿಟಿಯು ಶಿಕ್ಷಣ ಒದಗಿಸುತ್ತಿದೆ. ಲಿಖಿತ ಪರೀಕ್ಷೆ ಮುಗಿದ ಒಂದು ವಾರದೊಳಗೆ ಫಲಿತಾಂಶ ಪ್ರಕಟಿಸುತ್ತಿದೆ. ಆನ್‌ಲೈನ್‌ ಎಜುಕೇಷನ್‌ ಕೋರ್ಸ್‌ಗಳಿಗೆ ವಿಶ್ವದೆಲ್ಲೆಡೆ ಇರುವ ವಿದ್ಯಾರ್ಥಿಗಳಿಂದ ಸ್ಪಂದನೆ ವ್ಯಕ್ತವಾಗಿದೆ’ ಎಂದರು.

ಕುಲಸಚಿವ ಬಿ.ಈ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಟಿ.ಎನ್‌.ಶ್ರೀನಿವಾಸ ಇದ್ದರು.

ಕೌಶಲ ಅಭಿವೃದ್ಧಿಗೆ ಕ್ರಮ: ಸುಧಾಕರ್‌

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌, ‘ಎಂಜಿನಿಯರಿಂಗ್‌ ವಿದ್ಯಾರ್ಥಿಗಳಲ್ಲಿ ವೃತ್ತಿಕೌಶಲ ಬೆಳೆಸಲು, ಉದ್ಯಮದ ಅಗತ್ಯ ಪೂರೈಸಲು ಹಾಗೂ ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಉನ್ನತ ಶಿಕ್ಷಣ ಇಲಾಖೆಯು ಕೌಶಲ ಅಭಿವೃದ್ಧಿ ಇಲಾಖೆಯೊಂದಿಗೆ ಜಂಟಿ ಸಭೆಗಳನ್ನು ನಡೆಸುತ್ತಿದೆ’ ಎಂದರು.

‘ಅನೇಕ ಸಾಧನೆಗಳನ್ನು ಮೆರೆಯುತ್ತಿರುವ ವಿಟಿಯು ರಾಜ್ಯದಲ್ಲಿ ಆರಕ್ಕೂ ಅಧಿಕ ಕೌಶಲಗಳ ತರಬೇತಿ ನೀಡುತ್ತಿದೆ. ದೇಶದಲ್ಲಿ ಎನ್‌ಆರ್‌ಎಫ್‌ ಶ್ರೇಯಾಂಕದಲ್ಲಿ 63ನೇ ಸ್ಥಾನದಲ್ಲಿದೆ’ ಎಂದರು.

‘ತಂತ್ರಜ್ಞಾನ ಆಧಾರಿತ ವಲಯದಲ್ಲಿ ದುಡಿಯುವಾಗ ವೈಫಲ್ಯಗಳೂ ಸಂಭವಿಸುತ್ತವೆ. ಇತ್ತೀಚೆಗೆ ದೊಡ್ಡ ಸಾಫ್ಟ್‌ವೇರ್‌ ಕಂಪನಿಯೊಂದು ನಿರೀಕ್ಷೆಯಂತೆ ಕೆಲಸ ಮಾಡಲಾಗದೆ ವಿಫಲವಾಗಿದೆ. ಹಾಗಾಗಿ ತಂತ್ರಜ್ಞರು ವೈಫಲ್ಯಗಳಿಂದ ಹತಾಶರಾಗಬಾರದು. ಬದಲಿಗೆ, ಇದನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಮುನ್ನಡೆಯಬೇಕು’ ಎಂದರು.

ಸ್ವಾವಲಂಬಿ ರಾಷ್ಟ್ರಕ್ಕಾಗಿ ಜ್ಞಾನ ಬಳಸಿ’

ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರಚಂದ್ ಗೆಹಲೋತ್‌, ‘ಸಮಾಜದಿಂದ ಪಡೆದಿರುವುನ್ನು ಪದವೀಧರರು ಮತ್ತು ಸಂಶೋಧಕರು ಮರಳಿ ನೀಡುವ ಕೆಲಸವಾಗಬೇಕು. ಸ್ವಾವಲಂಬಿ ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಜ್ಞಾನ ಬಳಸಬೇಕು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸಲು ತಮ್ಮ ಕೊಡುಗೆಯನ್ನೂ ಕೊಡಬೇಕು’ ಎಂದರು.

‘ತಾಂತ್ರಿಕ ಶಿಕ್ಷಣವು ನುರಿತ ಮಾನವ ಸಂಪನ್ಮೂಲ ಸೃಷ್ಟಿಸುತ್ತದೆ. ಜನರ ಜೀವನಮಟ್ಟ ಸುಧಾರಣೆಗೆ ತಂತ್ರಜ್ಞಾನ ಬಳಸಿಕೊಳ್ಳಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿವೆ’ ಎಂದ ಅವರು, ‘‍ಪ್ರತಿಯೊಬ್ಬರೂ ತಮ್ಮ ಬದುಕಿನುದ್ದಕ್ಕೂ ‘ವಿದ್ಯಾರ್ಥಿ’ ಆಗಿರಬೇಕು. ಆಗ ಯಶಸ್ಸಿನ ಪಥವೇರಬಹುದು’ ಎಂದರು.

ಪದವಿ ಪ್ರದಾನ:

ಈ ಘಟಿಕೋತ್ಸವದಲ್ಲಿ 4,514 ಎಂಬಿಎ, 4,024 ಎಂಸಿಎ, 920 ಎಂ.ಟೆಕ್‌, 44 ಎಂ.ಆರ್ಚ್‌, 27 ಎಂ.ಪ್ಲ್ಯಾನ್‌ ಪದವಿ, 667 ಪಿಎಚ್‌.ಡಿ‌, 2 ಎಂ.ಎಸ್ಸಿ ಎಂಜಿನಿಯರಿಂಗ್‌ ಬೈ ರಿಸರ್ಚ್‌ ಹಾಗೂ 2 ಇಂಟಿಗ್ರೇಟೆಡ್‌ ಡ್ಯುಯೆಲ್‌ ಡಿಗ್ರಿ ಟು ರಿಸರ್ಚ್‌ ಸಂಶೋಧನಾ ಪದವಿಗಳನ್ನು ಪ್ರದಾನ ಮಾಡಲಾಯಿತು.

ಬೆಂಗಳೂರಿನ ಸಿಎಂಆರ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಎಂಬಿಎ ವಿಭಾಗದ ವಿದ್ಯಾರ್ಥಿನಿ ಜಿ.ತನು ನಾಲ್ಕು ಚಿನ್ನದ ಪದಕ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT