ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5,200 ಫ್ಲ್ಯಾಟ್‌ಗಳ ಹಂಚಿಕೆಗೆ ಬಿಡಿಎ ಸಿದ್ಧತೆ

ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಅಧಿಸೂಚನೆ
Last Updated 31 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹೊಸದಾಗಿ 5,200 ಫ್ಲ್ಯಾಟ್‌ಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸಿದ್ಧತೆ ನಡೆಸಿದೆ. ಒಂದು ಕೊಠಡಿಯ 3,300,  ಎರಡು  ಕೊಠಡಿಯ 1,400 ಮತ್ತು ಮೂರು ಕೊಠಡಿಯ 500 ಫ್ಲ್ಯಾಟ್‌ಗಳಿಗೆ ಅರ್ಜಿ  ಆಹ್ವಾನಿಸಲು ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.

‘ಆಗಸ್ಟ್‌ ಮೊದಲ ವಾರದಲ್ಲಿಯೇ ಫ್ಲ್ಯಾಟ್‌ಗಳಿಗೆ ಅರ್ಜಿ ಆಹ್ವಾನಿಸಲು ಉದ್ದೇಶಿಸಲಾಗಿತ್ತು. ಬಿಬಿಎಂಪಿ ಚುನಾವಣೆ ನೀತಿ ಸಂಹಿತೆ ಇದ್ದುದರಿಂದ ಸಾಧ್ಯವಾಗಲಿಲ್ಲ. ಈಗ ಚುನಾವಣೆ ಮುಗಿದಿದ್ದು, ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಫ್ಲ್ಯಾಟ್‌ ಹಂಚಿಕೆಗೆ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಬಿಡಿಎ ಎಂಜಿನಿಯರ್‌ ಪಿ.ಎನ್.ನಾಯಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆಲೂರು, ವಲಗೇರಹಳ್ಳಿ, ಹಲಗೆ ವಡೇರಹಳ್ಳಿ, ಮಾಳಗಾಲ, ದೊಡ್ಡಬನಹಳ್ಳಿ, ಕಣಮಿಣಿಕೆಯಲ್ಲಿ  ಒಂದು ಕೊಠಡಿಯ 3,300 ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಕೊಮ್ಮಘಟ್ಟ, ಮಾಳಗಾಲ ಎರಡನೇ ಹಂತ, ಆಲೂರು ಒಂದನೇ ಹಂತದಲ್ಲಿ ಎರಡು ಕೊಠಡಿಯ 1,400 ಮತ್ತು ವಲಗೇರಹಳ್ಳಿ, ಆಲೂರು ಎರಡನೇ ಹಂತ ದೊಡ್ಡಬನಹಳ್ಳಿಯಲ್ಲಿ ಮೂರು ಕೊಠಡಿಯ 500 ಫ್ಲ್ಯಾಟ್‌ಗಳು ನಿರ್ಮಾಣಗೊಂಡಿವೆ ಎಂದು ಅವರು ತಿಳಿಸಿದರು.

ಮಂಡಳಿ ಸಭೆಯಲ್ಲಿ ಫ್ಲ್ಯಾಟ್‌ಗಳ ಬೆಲೆ  ನಿಗದಿಪಡಿಸಲಾಗುವುದು. ಫ್ಲ್ಯಾಟ್‌ ನಿರ್ಮಾಣಗೊಳ್ಳುತ್ತಿರುವ  ಭೂಮಿಯ ಮೌಲ್ಯ, ನಿರ್ಮಾಣ ವೆಚ್ಚ ಆಧರಿಸಿ ಫ್ಲಾಟ್‌ಗಳ ಬೆಲೆ ನಿಗದಿಪಡಿಸಲಾಗುವುದು   ಎಂದು ಹೇಳಿದರು. ಈ ಹಿಂದೆ ಒಂದು ಕೊಠಡಿಯ ಫ್ಲ್ಯಾಟ್‌ಗಳನ್ನು ₹ 7.46 ಲಕ್ಷ (ಆರ್ಥಿಕವಾಗಿ ಹಿಂದುಳಿದವರು) ಮತ್ತು ₹11.5 ಲಕ್ಷ (ಸಾಮಾನ್ಯ ವರ್ಗ), ಎರಡು ಕೊಠಡಿಯ ಫ್ಲ್ಯಾಟ್‌ಗಳನ್ನು ₹ 22 ಲಕ್ಷದಿಂದ 24 ಲಕ್ಷ ಮತ್ತು ಮೂರು ಕೊಠಡಿಯ ಫ್ಲ್ಯಾಟ್‌ಗಳನ್ನು ₹ 30 ಲಕ್ಷದಿಂದ 35 ಲಕ್ಷಕ್ಕೆ ಹಂಚಿಕೆ ಮಾಡಲಾಗಿತ್ತು.   ಈ ಬಾರಿ ಫ್ಲ್ಯಾಟ್‌ಗಳ ಬೆಲೆಯಲ್ಲಿ ಕೊಂಚ ಏರಿಕೆಯಾಗುವ ಸಾಧ್ಯತೆ ಇದೆ ಎಂದು  ಮಾಹಿತಿ ನೀಡಿದರು.

ಒಂದು ಕೊಠಡಿಯ ಫ್ಲ್ಯಾಟ್‌ನಲ್ಲಿ ಮಲಗುವ ಕೊಠಡಿ, ಅಡುಗೆ ಕೋಣೆ, ಶೌಚಾಲಯ ಮತ್ತು ಬಚ್ಚಲು ಮನೆ ಇರಲಿದೆ.  ಎರಡು ಕೊಠಡಿಯ ಫ್ಲ್ಯಾಟ್‌ನಲ್ಲಿ ಒಂದು ಕೊಠಡಿ ಹೆಚ್ಚುವರಿಯಾಗಿ ಇರಲಿದೆ ಎಂದು ಅವರು ಮಾಹಿತಿ ನೀಡಿದರು. ಆಸ್ಟ್ರೇಲಿಯಾ ತಂತ್ರಜ್ಞಾನ ಬಳಕೆ: ಆಲೂರಿನಲ್ಲಿ 1,200 ಫ್ಲ್ಯಾಟ್‌ಗಳನ್ನು ಆಸ್ಟ್ರೇಲಿಯಾ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗಿದೆ. ಈ ಫ್ಲ್ಯಾಟ್‌ಗಳಿಗೆ ಎಂಜಿನಿಯರ್‌ಗಳಿಂದ ಸುರಕ್ಷತಾ ಪ್ರಮಾಣಪತ್ರ ಕೊಡಿಸಲಾಗುವುದು ಎಂದು ನಾಯಕ್‌ ತಿಳಿಸಿದರು.

*
ಸೆಪ್ಟೆಂಬರ್‌ 11ರಂದು ಮಂಡಳಿ ಸಭೆ ನಡೆಯಲಿದೆ. ಸಭೆಯಲ್ಲಿ ಅಧಿಸೂಚನೆ ದಿನಾಂಕ ಮತ್ತು ಫ್ಲ್ಯಾಟ್‌ಗಳ ಬೆಲೆ ನಿಗದಿ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು
-ಟಿ.ಶ್ಯಾಮ್‌ ಭಟ್‌,
ಬಿಡಿಎ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT